ಬಸವ ಬೆಳಗನ್ನು ಅರಸುತ್ತಾ..ಪುಟ 1

Share Button

‘ನಾ ದೇವನಲ್ಲದೆ ನೀ ದೇವನೇ / ನೀ ದೇವನಾದೊಡೆ ಎನ್ನನೇಕೆ ಸಲಹೆ / ಆರೈದು ಒಂದು ಕುಡಿಕೆ ಉದಕವನೆರೆವೆ / ಹಸಿದಾಗ ಒಂದು ತುತ್ತು ಓಗರವನಿಕ್ಕುವೆ / ನಾ ದೇವ ಕಾಣಾ ಗುಹೇಶ್ವರ’. ಅಲ್ಲಮರು ಆಧ್ಯಾತ್ಮಿಕವಾಗಿ ಮೇಲೇರಿದಂತೆಲ್ಲಾ, ಅವರು ದೇವರನ್ನು ಕಾಣುವ ಪರಿಯೇ ಒಂದು ಸೋಜಿಗ. ಇಲ್ಲಿ ಅಹಂಕಾರದ ಸುಳಿವಿಲ್ಲ, ಶರಣ ಹಾಗೂ ದೇವನ ನಡುವಿನ ಸಾಮರಸ್ಯದ ಪ್ರತೀಕವಾಗಿ ನಿಲ್ಲುವುದು ಈ ವಚನ. ನದಿಯು ಕಡಲನ್ನು ಸೇರಿ ಕಡಲಾದಂತೆ, ಶರಣನು ಲಿಂಗದಲ್ಲಿ ಐಕ್ಯನಾಗಿ ಪರಶಿವನೇ ಆಗುವನು.

ಬಸವನ ಹುಟ್ಟೂರನ್ನು ನೋಡಲು ವಿಜಯಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿಗೆ ಹೊರಟಿತ್ತು ನಮ್ಮ ಸವಾರಿ. ಹನ್ನೊಂದನೇ ಶತಮಾನದಲ್ಲಿ ಚಾಲುಕ್ಯರು ಬಸವನ ಬಾಗೇವಾಡಿಯಲ್ಲಿ ನಂದಿಕೇಶ್ವರ ದೇಗುಲವನ್ನು ನಿರ್ಮಿಸಿದರು. ಇಡೀ ದೇಗುಲ ಒಂದು ಸುಂದರವಾದ ಕಲಾಕೃತಿಯಂತೆ ಭಾಸವಾಗುತ್ತದೆ. ದೇಗುಲದೊಳಗೆ ಧ್ಯಾನಮಗ್ನನಾಗಿ ತನ್ನ ಇಷ್ಟ ದೈವದ ಮುಂದೆ ಕುಳಿತಿರುವ ನಂದಿಯ ವಿಗ್ರಹ, ಬಗೆ ಬಗೆಯ ಪುಷ್ಪ್ಪಗಳಿಂದ ಅಲಂಕೃತನಾಗಿದ್ದ ನಂದಿಯ ಮುಂದೆ ಧೂಪ ದೀಪಗಳು ಬೆಳಗುತ್ತಿದ್ದವು, ಗಂಟೆ ಜಾಗಟೆಗಳು ಮೊಳಗುತ್ತಿದ್ದವು. ಅಬ್ಬಾ ಅದೇನು ತೇಜಸ್ಸು, ಅದೇನು ಭಕ್ತಿಭಾವ ನಂದಿಯ ಮೊಗದಲ್ಲಿ, ಇಹಪರದ ಗೊಡವೆಯಿಲ್ಲದೆ ತಾಳ್ಮೆ ಸಹನೆಯ ಪ್ರತಿರೂಪದಂತೆ ಧ್ಯಾನಸ್ಥನಾಗಿ ಕುಳಿತಿದ್ದ ನಂದಿ ಶಿವಲಿಂಗಕ್ಕಿಂತ ಎತ್ತರವಾಗಿ ಬೆಳೆದಿದ್ದ. ನಂದಿಯ ಮುಖದ ಮೇಲೆ ಮಿಂಚಿ ಮರೆಯಾದ ಮಂದಹಾಸ ನೆನಪಿಸಿತ್ತು ಅಲ್ಲಮನ ವಚನವೊಂದನ್ನು. ನಾವು ಭಾವಪರವಶರಾಗಿ ನಂದಿಯ ಮುಂದೆ ತಲೆಬಾಗಿ ನಿಂತಿದ್ದೆವು. ನಂದಿಕೇಶ್ವರನ ಕೃಪಾಶೀರ್ವಾದದಿಂದ ಬಸವ ಹುಟ್ಟಿದ್ದು ವಿಜಯಪುರದಿಂದ 44 ದೂರದಲ್ಲಿರುವ ಬಾಗೇವಾಡಿಯಲ್ಲಿ. ವಿಶ್ವಗುರುವಾದ ಬಸವಣ್ಣನವರ ಜನ್ಮಸ್ಥಳವಾದ ಬಾಗೇವಾಡಿಯನ್ನು ಬಸವನ ಬಾಗೇವಾಡಿಯೆಂದು ಮರುನಾಮಕರಣ ಮಾಡಲಾಯಿತು.

ಬಾಗೇವಾಡಿಯಲ್ಲಿ. ತನ್ನ ಭಕ್ತರನ್ನು ಹರಸಲು ಕುಳಿತಿದ್ದ ನಂದಿಕೇಶ್ವರ. ಈ ದೇಗುಲದಲ್ಲಿ ನಂದಿಕೇಶ್ವರನಿಗೇ ಪ್ರಥಮ ಪ್ರಾಶಸ್ತ್ಯ. ನಂದಿಯ ಎದುರಿಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇತ್ತೀಚೆಗೆ ನವೀಕರಿಸಲ್ಪಟ್ಟಿರುವ ದೇವಾಲಯದಲ್ಲಿ ಅಮೃತಶಿಲೆಯಿಂದ ರಚಿಸಲ್ಪಟ್ಟಿರುವ ಬಸವಣ್ಣನವರ ಮೂರ್ತಿ, ಇಷ್ಟಲಿಂಗದ ಪೂಜೆಯಲ್ಲಿ ಮಗ್ನಳಾಗಿರುವ ಅಕ್ಕ ಮಹಾದೇವಿಯ ಮೂರ್ತಿ, ನಾಟ್ಯ ಭಂಗಿಯಲ್ಲಿರುವ ನಟರಾಜನ ವಿಗ್ರಹವಿದೆ. ಈ ದೇಗುಲದಲ್ಲಿ ಗರ್ಭಗೃಹ, ಅಂತರಾಳ, ನಾಟ್ಯ ಮಂಟಪ, ಸಭಾಮಂಟಪಗಳಲ್ಲಿ ಸುಂದರವಾದ ಶಿಲ್ಪಕಲೆ ನೋಡುಗರ ಮನಸೆಳೆಯುವಂತಿದ್ದು, ದೇವಾಲಯವನ್ನು ಮರಳುಗಲ್ಲಿನಿಂದ ಕಟ್ಟಲಾಗಿದೆ. ಈ ದೇಗುಲದ ಬಲಭಾಗದಲ್ಲಿ ಮಕ್ಕಳಿಗೊಂದು ಶಾಲೆಯಿದ್ದು, ಬಲಬದಿಯಲ್ಲಿ ಯಾತ್ರಿಗಳಿಗಾಗಿ ಒಂದು ಯಾತ್ರಿನಿವಾಸ ಹಾಗೂ ಪ್ರಸಾದ ನಿಲಯವಿದೆ. ಬಸವಣ್ಣನವರ ಮೂಲಮಂತ್ರಗಳಾದ ಕಾಯಕ ಮತ್ತು ದಾಸೋಹದ ಪ್ರತೀಕವಾಗಿ ಶಾಲೆ ಮತ್ತು ದಾಸೋಹ ಕೇಂದ್ರಗಳು ನಿಂತಿವೆ.

ಬಸವನ ಮನೆಯನ್ನು ದರ್ಶನ ಮಾಡಲು, ಅವನು ನಡೆದಾಡಿದ ಪವಿತ್ರವಾದ ನೆಲವನ್ನು ಸ್ಪರ್ಶಿಸಲು ಕಾತುರದಿಂದ ಹೊರಟಿದ್ದೆವು. ಅಗ್ರಹಾರ ಎಂದೇ ಹೆಸರಾಗಿದ್ದ ಆ ಬ್ರಾಹ್ಮಣರ ವಠಾರದಲ್ಲಿದ್ದ ವಾಸವಾಗಿದ್ದ ಮಾದರಸನ ಮನೆಯ ಮುಂದೆ ಇದ್ದ ಮಣ್ಣನ್ನು ಭಸ್ಮವೆಂಬಂತೆ ಹಣೆಗೆ ಧರಿಸಿದೆವು. ಹನ್ನೆರಡನೇ ಶತಮಾನದಲ್ಲಿದ್ದ ಮನೆ ಹೇಗಿರಬಹುದೆಂಬ ಕಲ್ಪನೆ ಮಾಡಿಕೊಳ್ಳುತ್ತಾ ಹೊರಟವರಿಗೆ ಸ್ವಲ್ಪ ಮಟ್ಟಿನ ನಿರಾಸೆ ಎದುರಾಗಿತ್ತು, ದೇಗುಲದ ಸಮೀಪದಲ್ಲಿಯೇ ಇದ್ದ ಮಾದರಸ ಮಾದಲಾಂಬಿಕೆಯರ ಮನೆ ಇಂದು ಭವ್ಯವಾದ ಬಸವ ಜನ್ಮಸ್ಥಳದ ಸ್ಮಾರಕವಾಗಿ ಮಾರ್ಪಾಡಾಗಿತ್ತು. ಮನೆಯ ಮುಂದೆ ಬಸವ ಜನ್ಮಭೂಮಿಗೆ ಸ್ವಾಗತ ಎಂದುಲಿಯುತ್ತಾ ದೀಪ ಹಿಡಿದು ನಮ್ಮನ್ನು ಸ್ವಾಗತಿಸುತ್ತಿರುವ ಇಬ್ಬರು ಶಿಲಾ ಬಾಲಿಕೆಯರು ನಿಂತಿದ್ದರು. ಈ ಸ್ಮಾರಕವನ್ನು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಎಡೆಯೂರಪ್ಪನವರು ಮೇ 16, 2010 ರಂದು ಉದ್ಘಾಟಿಸಿರುವರು. ಹತ್ತಾರು ಮೆಟ್ಟಿಲನ್ನು ಹತ್ತಿ, ಬಸವ ತನ್ನ ಬಾಲ್ಯವನ್ನು ಕಳೆದ ಮನೆಯೊಳಗೆ ಇಣುಕಿದೆವು. ಅಮ್ಮನ ಮುದ್ದಿನ ಮಗನಾದ ಪುಟ್ಟ ಬಸವನು ಅಂಬೆಗಾಲಿಟ್ಟ ಮನೆ, ನಡೆದಾಡಿದ ಮನೆ, ತೊದಲು ಮಾತನಾಡಿದ ಮನೆ, ಅಕ್ಕನೊಡನೆ ನಲಿದಾಡಿದ ಮನೆ ನೋಡಲು ಉತ್ಸುಕರಾಗಿದ್ದೆವು. ಮನೆಯೊಳಗಿದ್ದ ಭವ್ಯವಾದ ಹಜಾರದ ಮಧ್ಯೆ ಒಂದು ಎತ್ತರವಾದ ಕಟ್ಟೆ, ಕಟ್ಟೆಯ ಮೇಲೆ ಪುಟ್ಟ ಮಗುವನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಿರುವ ಮಮತಾಮಯಿ ಮಾದಲಾಂಬಿಕೆ, ಎದುರಿನಲ್ಲಿ ನಿಂತಿರುವ ದೊರೆ ಮಾದರಸ, ಮಗುವನ್ನು ಆಶೀರ್ವದಿಸಲು ಆಗಮಿಸಿರುವ ಜಾತವೇದಮುನಿಗಳ ಮೂರ್ತಿಗಳು ಇದ್ದು ಬಸವನ ಬಾಲ್ಯವನ್ನು ಕಟ್ಟಿಕೊಡುವ ಯತ್ನ ಮಾಡುತ್ತಿದ್ದವು. ಆ ಹಜಾರದ ಸುತ್ತಲೂ ಬಸವಣ್ಣನವರ ಜೀವನದ ಪ್ರಮುಖ ಘಟ್ಟಗಳನ್ನು ವಿವರಗಳೊಂದಿಗೆ ಚಿತ್ರಿಸಿದ್ದರು. ಹಜಾರದ ಮಧ್ಯೆಯಿದ್ದ ಫಲಕದಲ್ಲಿ ಬಸವನ ಜನ್ಮವೃತ್ತಾಂತದ ವಿವರ ಹೀಗಿತ್ತು – ಬಾಗೇವಾಡಿಯ ಅಧಿಪತಿಗಳಾದ ಮಾದರಸ ಮಾದಲಾಂಬಿಕೆಯರು ಪುತ್ರ ಸಂತಾನವನ್ನು ಪಡೆಯಲು ತಮ್ಮ ಆರಾಧ್ಯದೈವವಾದ ನಂದಿಕೇಶ್ವರನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದುದರ ಫಲಶೃತಿಯೇ ಬಸವರಾಜ. ಕಾರ್ತೀಕ ಶುದ್ಧ ಪೌರ್ಣಿಮೆಯ ಅಕ್ಷಯ ತೃತೀಯದ ಸೋಮವಾರ ನಡುರಾತ್ರಿ ಅಂದರೆ ಮೇ 3, 1131 ರಂದು ನಂದಿಕೇಶ್ವರನ ವರಪ್ರಸಾದವಾದ ಶಿಶುವಿನ ಜನನ. ಮಗು ಒಂಭತ್ತು ದಿನಗಳಾದರೂ ಕಣ್ಣು ತೆರೆಯಲಿಲ್ಲ, ಗಾಬರಿಯಿಂದ ಮಾದರಸನು ತಮ್ಮ ಕುಲಗುರುಗಳ ಮೊರೆ ಹೋಗುವನು. ಮುನಿಗಳು, ‘ನಂದಿಕೇಶ್ವರನ ವರಪ್ರಸಾದವಾದ ಶಿಶು ಶಿವಧ್ಯಾನದಲ್ಲಿ ನಿರತನಾಗಿರುವನು’ ಎನ್ನುತ್ತಾ, ಆ ಶಿಶುವಿನ ಹಣೆಗೆ ಭಸ್ಮವನ್ನು ಧರಿಸಿ, ಕಿವಿಯಲ್ಲಿ ಓಂ ನಮಃ ಶಿವಾಯ ಎಂದುಸುರುವರು. ಆಗ ಚಮತ್ಕಾರವೊಂದು ಜರುಗುವುದು. ಒಂಭತ್ತು ದಿನಗಳ ಕಾಲ ಅಲುಗಾಡದೆ ಮಲಗಿದ್ದ ಮಗು, ನಗು ನಗುತ್ತಾ ಕಣ್ಣು ತೆರೆಯುವುದು. ಈ ಶಿಶು ಮುಂದೆ ಇಡೀ ಜಗತ್ತನ್ನೇ ಬೆಳಗುವ ಜ್ಯೋತಿಯಾಗುವನೆಂದು ಭವಿಷ್ಯ ನುಡಿದು ಮುನಿಗಳು ಅಲ್ಲಿಂದ ತೆರಳುವರು.
ಕೆಲವರು ಮಾದಲಾಂಬಿಕೆಯ ತವರೂರಾದ ಇಂಗಳೇಶ್ವರ ಬಾಗೇವಾಡಿಯಲ್ಲಿ ಬಸವಣ್ಣನವರ ಜನನವಾಯಿತೆಂದೂ ಹೇಳಿದ್ದರಿಂದ, ನಾವು ಬಸವನ ಬಾಗೇವಾಡಿಯ ಸಮೀಪದಲ್ಲಿದ್ದ ಇಂಗಳೇಶ್ವರಕ್ಕೆ ಹೊರಟೆವು. ನವೀಕರಿಸಲ್ಪಟ್ಟ ಭವ್ಯವಾದ ಬಂಗಲೆ, ಮನೆಯ ಹಜಾರದಲ್ಲಿ ಕೂಸನ್ನು ಸೊಂಟಕ್ಕೇರಿಸಿ ಹೆಮ್ಮೆಯಿಂದ ನಿಂತಿರುವ ಮಾದಲಾಂಬಿಕೆ, ಪಕ್ಕದಲ್ಲಿ ಅಮ್ಮನ ಸೆರಗನ್ನು ಹಿಡಿದು ನಿಂತಿರುವ ಪುಟ್ಟ ಬಾಲೆ ನಾಗಮ್ಮ ಇವರ ಮೂರ್ತಿಗಳು ನಮ್ಮನ್ನು ಕೈ ಬೀಸಿ ಕರೆದಿದ್ದವು. ಜಗತ್ತಿಗೇ ಬೆಳಕನ್ನು ನೀಡಿ ಜಗಜ್ಯೋತಿಯಾದ ಪುಟ್ಟ ಶಿಶುವನ್ನು ಕಣ್ತುಂಬಿಕೊಂಡು ಅಲ್ಲಿಂದ ಹೊರಟೆವು.

ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಜನಿಸಿದ ಬಸವನಿಗೆ, ಎಂಟು ವರ್ಷಗಳಾದಾಗ ವೈದಿಕ ಪದ್ಧತಿಯಂತೆ ಉಪನಯನ ಮಾಡಲು ತಂದೆ ಮಾದರಸರು ಮುಂದಾದಾಗ ಬಸವಣ್ಣ ಒಪ್ಪುವುದಿಲ್ಲ. ತನ್ನ ಅಕ್ಕ ನಾಗಮ್ಮನಿಗೆ ಉಪನಯನ ಮಾಡಲಾಗದು ಎಂದರೆ, ಅಂತಹ ಸಂಸ್ಕಾರ ತನಗೂ ಬೇಡವೆನ್ನುತ್ತಾನೆ ಬಸವಣ್ಣ, ತೀಕ್ಷ್ಣಮತಿಯಾದ ಬಸವನು ಆ ಕಾಲದಲ್ಲಿ ಪ್ರಚಲಿತವಿದ್ದ ಯಜ್ಞ, ಯಾಗ, ಪ್ರಾಣಿಬಲಿಗಳಂತಹ ಆಚರಣೆಗಳನ್ನು ವಿರೋಧಿಸುತ್ತಾನೆ. ಜಾತಿಬೇಧ ಮತ್ತು ಲಿಂಗಬೇಧಗಳ ಸಂಕೇತವಾಗಿರುವ ಉಪನಯನವನ್ನು ತಿರಸ್ಕರಿಸುತ್ತಾನೆ.

ಬಾಲಕ ಬಸವನು ತನ್ನ ಕ್ರಾಂತಿಕಾರಿ ವಿಚಾರಧಾರೆಗಳಿಂದ ಸ್ಥಳೀಯರಿಂದ ಬಹಿಷ್ಕೃತನಾಗಿ ಅಗ್ರಹಾರವನ್ನು ತೊರೆದು, ಸ್ವ ಇಚ್ಛೆಯಿಂದ ತನ್ನ ಅಕ್ಕ ನಾಗಮ್ಮ ಹಾಗೂ ಅವಳ ಪತಿ ಶಿವದೇವನೊಂದಿಗೆ ಕೂಡಲಸಂಗಮಕ್ಕೆ ಹೊರಡುತ್ತಾನೆ. ಅಲ್ಲಿ ಜಾತವೇದಮುನಿಗಳ ಮಾರ್ಗದರ್ಶನದಲ್ಲಿ ವೇದ, ಉಪನಿಷತ್ತು, ಪುರಾಣ ಹಾಗೂ ಶಾಸ್ತ್ರಗಳಲ್ಲಿ ಪಾರಂಗತರಾಗುವರು. ತನ್ನ ಸುತ್ತಮುತ್ತಲೂ ಇದ್ದ ಜಾತಿಬೇಧ, ವರ್ಗಬೇಧ, ಲಿಂಗಬೇಧವನ್ನು ವಿರೋಧಿಸುತ್ತಲೇ ಬೆಳೆಯುತ್ತಾರೆ. ಮೂಢ ನಂಬಿಕೆ, ಕುರುಡು ಸಂಪ್ರದಾಯಗಳು, ಮೇಲು ಕೀಳೆಂಬ ತಾರತಮ್ಯ ಹಾಗೂ ಪುರೋಹಿತಶಾಹಿಯ ಕಪಿಮುಷ್ಠಿಗೆ ಸಿಲುಕಿದ್ದ ಸಂತ್ರಸ್ತರನ್ನು ಕಂಡು ಮರುಗುತ್ತಾರೆ. ಕೂಡಲ ಸಂಗಮದಲ್ಲಿ ಹನ್ನೆರೆಡು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ತಮ್ಮ ಸೋದರಮಾವನ ಮಗಳಾದ ಗಂಗಾಬಿಕೆಯನ್ನು ವರಿಸಿ, ಮಂಗಳವಾಡೆಗೆ ಹೋಗುವರು. ಬಸವಣ್ಣನವರು ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತಹ ಭಾಷೆಯಲ್ಲಿ ವಚನಗಳನ್ನು ರಚಿಸುತ್ತಾರೆ. ಸಮಾಜ ಸುಧಾರಕರಾದ ಬಸವಣ್ಣನವರು, ಜನರು ಮೌಲ್ಯಾಧಾರಿತ ಜೀವನ ನಡೆಸಲು ವಚನಗಳ ಮೂಲಕ ಕರೆ ಕೊಡುತ್ತಾರೆ.

ಶರಣ ಸತಿ, ಲಿಂಗ ಪತಿ ಎಂದು ಉದ್ಗಾರ ಮಾಡುತ್ತಾ ಕೂಡಲಸಂಗಯ್ಯನೊಂದಿಗೆ ಶರಣರಿಗಿರುವ ಆತ್ಮೀಯವಾದ ಅನುಬಂಧವನ್ನು ಸಾರುತ್ತಾರೆ. ಇವನಾರವ, ಇವನಾರವ, ಇವನಾರವ ಎಂದು ಪ್ರಶ್ನಿಸುತ್ತಲೇ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದಿನಿಸಯ್ಯ ಎಂದು ಜಾತಿ ಬೇಧ ಮಾಡದೆ ಎಲ್ಲರನ್ನೂ ಅಪ್ಪಿಕೊಳ್ಳುವ ಪರಿ ಅದ್ಭುತ. ದಾಸೋಹ ಮತ್ತು ಕಾಯಕಗಳೆಂಬ ಮೂಲಮಂತ್ರಗಳನ್ನು ಜಪಿಸಿದ ಸತ್ಪುರುಷ. ದಯೆಯೇ ಧರ್ಮದ ಮೂಲವಯ್ಯ ಎಂದು ಧರ್ಮದ ಸಾರವನ್ನು ಸರಳವಾಗಿ ಬೋಧಿಸಿದ ಶಿವಶರಣ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದುಸುರುತ್ತಾ ದೇಹವನ್ನೇ ದೇಗುಲವನ್ನಾಗಿ ಮಾಡಿಕೊಳ್ಳಲು ಕರೆ ನೀಡುತ್ತಾರೆ.

(ಮುಂದುವರೆಯುವುದು)

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

10 Responses

 1. ನಯನ ಬಜಕೂಡ್ಲು says:

  ನಮ್ಮ ಬದುಕಲ್ಲಿ ಬೆಳಕು ತುಂಬುವಂತಹ ಚಿಂತನೆಗಳು ಬಸವಣ್ಣ ನವರದ್ದು. ಅನುಕರಣೀಯ ವಚನಗಳು.

 2. Nirmala says:

  Where is basava kalyana, in the next. Episode

 3. ಬಸವ ಬೆಳಗಿನ ಲೇಖನ ವನ್ನು..
  ಮನಮುಟ್ಟುವಂತೆ.. ಅನಾವರಣ ಗೊಳಿಸಿರು ವ ಲೇಖನ ತುಂಬಾ ಮುದಕೊಟ್ಟಿತು… ಗಾಯತ್ರಿ ಮೇಡಂ

 4. Thank you dear friends for your motivating response

 5. Hema Mala says:

  ಚೆಂದದ ಬರಹ. ಚಾರಣ ಕಾರ್ಯಕ್ರಮವೊಂದರ ಭಾಗವಾಗಿ ದಾಂಡೇಲಿಯ ಸಮೀಪವಿರುವ ‘ಉಳವಿ’ ಹಾಗೂ ‘ಮಹಾಮನೆ’ಗೆ ಭೇಟಿ ಕೊಟ್ಟಿದ್ದಾಗ, ಅಲ್ಲಿಯ ಸ್ವಾಮೀಜಿಯವರು ಬಸವಣ್ಣನವರ ಬಗ್ಗೆ ಪ್ರವಚನ ಮಾಡಿ ನಮಗೆ ಆಶೀರ್ವಾದ ಮಾಡಿದ್ದುದು ನೆನಪಾಯಿತು.

 6. SHARANABASAVEHA K M says:

  ನಮಗೂ ಬಸವನ ಬಾಗೇವಾಡಿ ನೋಡುವ ಮನಸ್ಸಾಯಿತು….ಬಹು ವಿಸ್ತಾರವಾದ ಇತಿಹಾಸವನ್ನು ಸಂಕ್ಷಿಪ್ತವಾಗಿ ಆಸಕ್ತಿಭರಿತವಾಗಿ ಕಟ್ಟಿ ಕೊಟ್ಟ ನಿಮ್ಮ ಪ್ರತಿಭೆಗೆ ನಮ್ಮ ದೊಡ್ಡ ನಮಸ್ಕಾರ

 7. ಸುನೀತಾ says:

  ಪ್ರವಾಸ ಕಥನ ಮನಮುಟ್ಟುವಂತೆ ಮೇಡಂ

 8. ಸುನೀತಾ says:

  ಪ್ರವಾಸ ಕಥನ ಮನಮುಟ್ಟುವಂತಿದೆ ಮೇಡಂ

 9. ಶಂಕರಿ ಶರ್ಮ says:

  ಜೀವನ ಮೌಲ್ಯಗಳನ್ನು ಸರಳವಾಗಿ, ಮನಮುಟ್ಟುವಂತೆ ತಮ್ಮ ವಚನಗಳಲ್ಲಿ ಕಟ್ಟಿ ಕೊಟ್ಟ ಬಸವಣ್ಣನವರ ಸಂಕ್ಷಿಪ್ತ ಪೂರ್ವೇತಿಹಾಸ ನಿಜಕ್ಕೂ ಕುತೂಹಲಕಾರಿಯಾಗಿದೆ… ಧನ್ಯವಾದಗಳು ಮೇಡಂ.

 10. ಪದ್ಮಾ ಆನಂದ್ says:

  ಬಸವಣ್ಣನವರ ಪೂರ್ವೇತಿಹಾಸದ ಸೊಗಸಾದ ಚಿತ್ರಣದೊಂದಿಗೆ ಲೇಖನ ಮಾಲಿಕೆಯ ಶುಭಾರಂಭವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: