ರಾಮಾನುಜ ಲಕ್ಷ್ಮಣ.

Share Button

ಮಾನವನ ಕುಟುಂಬದ ಬಾಂಧವ್ಯ ಅವರೊಳಗಿನ ಸಾಮರಸ್ಯ, ಇರಬೇಕಾದ ವ್ಯವಸ್ಥಿತ ರೂಪ, ನ್ಯಾಯಬದ್ಧತೆ ಎಲ್ಲವೂ ನಮ್ಮ ಧರ್ಮ ಸಂಸ್ಕೃತಿಯಲ್ಲಿ ಹುದುಗಿದೆ. ಅದಕ್ಕಾಗಿಯೇ ಹಿಂದೂ ಸಂಸ್ಕೃತಿಯ ಹಿರಿಮೆ ಕೊಂಡಾಡುವಂತಾದ್ದು, ಲೋಕ ಮೆಚ್ಚುವಂತಾದ್ದಾಗಿದೆ. ನಮ್ಮ ಪುರಾಣಗಳಾದ ಮಹಾಭಾರತ,ರಾಮಾಯಣ ಮೊದಲಾದವುಗಳಲ್ಲಿ ಎಲ್ಲ ಬಾಂಧವ್ಯಗಳ ಅಡಿಪಾಯ, ಇರಬೇಕಾದ ರೀತಿ ನೀತಿಗಳನ್ನು ನೋಡುತ್ತೇವೆ. ಸುವ್ಯವಸ್ಥೆಯನ್ನು ಕಂಡು ಹೆಮ್ಮೆ ಪಡುತ್ತೇವೆ.

ಮನೆಯ ಯಜಮಾನ ಹೇಗಿರಬೇಕೆಂಬುದು ‘ಭೀಷ್ಮ’ನ ಕಥೆ ತಿಳಿಸಿದರೆ, ಆದರ್ಶ ಅಣ್ಣ ಹೇಗಿರಬೇಕೆಂದು ಧರ್ಮರಾಯನಿಂದ ಕಲಿಯಬಹುದು. ಸತಿ- ಪತಿಯರ ಆದರ್ಶವನ್ನು ಸೀತಾ-ರಾಮರು ಒದಗಿಸುತ್ತಾರೆ. ಒಬ್ಬ ಯೋಗ್ಯ ವಿದ್ಯೆ ಕಲಿಸುವ ಗುರುವು ಇರುವ ರೀತಿಯನ್ನು ದ್ರೋಣಾಚಾರ್ಯರು ತಿಳಿಸುತ್ತಾರೆ. ತಮ್ಮನ ಪ್ರೇಮದ ಪರಾಕಾಷ್ಠೆಯನ್ನು ಭರತನ ಭಾತೃ ಪ್ರೇಮದಿಂದ ತಿಳಿದಿದ್ದರೂ ಇನ್ನೋರ್ವ ಅನುಜನ ನಿಷ್ಠೆಯನ್ನು ರಾಮಾಯಣದ ಲಕ್ಷ್ಮಣನ ಕತೆ ಕಲಿಸುತ್ತದೆ. ಅವನ ಬಗ್ಗೆ ಒಂದಿಷ್ಟು ಅವಲೋಕಿಸೋಣ.

ಸೂರ್ಯ ವಂಶದ ಸುಮತ್ರನೇ ಲಕ್ಷ್ಮಣ. ಮಹಾವಿಷ್ಣುವಿನ ದಶಾವತಾರಗಳಲ್ಲಿ ಹಿರಿದಾದ ಅವತಾರವೇ ರಾಮಾವತಾರ. ಅಂತಹ ರಾಮಾನುಜನೇ ಲಕ್ಷ್ಮಣ, ಸೂರ್ಯವಂಶದ ಅಜರಾಜನ ಪುತ್ರನಾದ ದಶರಥ ಮಹಾರಾಜನಿಗೆ ಕೌಸಲ್ಯ, ಸುಮಿತ್ರ, ಕೈಕೆ ಎಂಬ ಮೂವರು ಪತ್ನಿಯರಿದ್ದೂ ಬಹುಕಾಲ ಮಕ್ಕಳಿರಲಿಲ್ಲ. ಸಂತಾನ ಪ್ರಾಪ್ತಿಗಾಗಿ ಕುಲಗುರು ವಸಿಷ್ಠರೆಲ್ಲ ಸೇರಿ ‘ಪುತ್ರಕಾಮೇಷ್ಠಿಯಾಗ’ ನಡೆಸುತ್ತಾರೆ. ಅದರ ಪರಿಣಾಮವಾಗಿ ಕೌಸಲ್ಯಗೆ ಶ್ರೀರಾಮನೂ ಸುಮಿತೆಗೆ ಲಕ್ಷ್ಮಣ, ಶತ್ರುಘ್ನರೂ ಕೈಕೆಗೆ ಭರತನೂ ಪುತ್ರರಾಗಿ ಜನಿಸುತ್ತಾರೆ ಎಂಬುದಾಗಿ ಸಂಕ್ಷಿಪ್ತ ನಮಗೆಲ್ಲ ತಿಳಿದೇ ಇದೆ. ಶ್ರೀರಾಮನು ವಿಷ್ಣು ಅಂಶದವನಾದರೆ, ಲಕ್ಷ್ಮಣನು ಮಹಾಶೇಷನ ಅಂಶದವನು ಎಂದು ನಂಬಲಾಗುತ್ತದೆ. ಶ್ರೀರಾಮನು ಪುನರ್ವಸು ನಕ್ಷತ್ರದಲ್ಲಿ ಜನಿಸಿದರೆ, ಭರತನು ಪುಷ್ಯ ನಕ್ಷತ್ರದಲ್ಲೂ ಲಕ್ಷ್ಮಣ-ಶತ್ರುಘ್ನರು ಅವಳಿಗಳಾಗಿ ಆಶ್ಲೇಷ ನಕ್ಷತ್ರದಲ್ಲಿ ಜನಿಸುತ್ತಾರೆ. ಲಕ್ಷ್ಮಣನು ರಾಮನು ಹುಟ್ಟಿದ ಮೂರನೇ ದಿನ ಆಶ್ಲೇಷಾ ನಕ್ಷತ್ರ ಕೊನೆಯ ಪಾದದಲ್ಲಿ ಕರ್ಕಾಟಕ ಲಗ್ನದಲ್ಲಿ ಜನಿಸಿದನು. ಶ್ರೀರಾಮನ ಅನುಜನಾಗಿ, ಅನುಯಾಯಿಯಾಗಿಯೇ ಲಕ್ಷ್ಮಣನು ಆದಿಯಿಂದ ಅಂತ್ಯದವರೆಗೂ ಇದ್ದನು. ಜನಕನ ಮಗಳಾದ ಸೀತಾದೇವಿಯುರಾಮನ ಪತ್ನಿಯಾದರೆ; ಜನಕನ ತಮ್ಮನಾದ ಸೀರಧ್ವಜನ ಮತ್ರಿ ‘ಊರ್ಮಿಳೆ’ಯು ಲಕ್ಷ್ಮಣನ ಪತ್ನಿ.

ತನ್ನ ಮಲತಾಯಿಯ ಸ್ವಾರ್ಥ ಹಾಗೂ ಹರದಿಂದಾಗಿ ಶ್ರೀರಾಮನಿಗೆ ಹದಿನಾಲ್ಕು ವರ್ಷ ವನವಾಸ ಪ್ರಾಪ್ತಿಯಾದಾಗ ಅಣ್ಣನನ್ನನುಸರಿಸಿ ಲಕ್ಷ್ಮಣನೂ ವನವಾಸಕ್ಕೆ ತೆರಳುತ್ತಾನೆ. ಅಣ್ಣನನ್ನು ಅಹರ್ನಿಶಿ ಕಾಯುತ್ತಾನೆ. ವನವಾಸ ಸಂದರ್ಭದಲ್ಲೇ ರಾವಣನಿಂದ ಸೀತಾಪಹರಣವಾದ ಮೇಲೆ ಕಿಷ್ಕಿಂಧೆಯಲ್ಲಿ ಹನುಮಂತನನ್ನು ಭೇಟಿಯಾಗುತ್ತಾನೆ. ಆಗ ರಾಮನ ಅಪ್ಪಣೆಯಂತೆ ತಮ್ಮ ವೃತ್ತಾಂತವನ್ನು ಹನುಮಂತನಿಗೆ ಹೇಳುತ್ತಾನೆ. ಅರಣ್ಯ ವಾಸದಲ್ಲಿದಾಗ ಶೂರ್ಪಣಕಿಯು ಬಂದು ರಾಮನನ್ನ ಮೋಹಿಸಲು ಅಣ್ಣನ ಅಪ್ಪಣೆಯಂತೆ ಲಕ್ಷ್ಮಣನು ಆಕೆಯ ಕಿವಿ ಮೂಗನ್ನು ಕತ್ತರಿಸಿ ಕಳುಹಿಸಿದನು. ಕಾಡಿನಲ್ಲಿ ಸೀತಾ ರಾಮರಿಗೆ ಅನುಕೂಲವಾಗಿ ಇದ್ದನು.

ಲಕ್ಷ್ಮಣರೇಖೆ:

ರಾವಣನ ಆಜ್ಞೆಯಂತೆ ಸೀತಾಪಹರಣಕ್ಕಾಗಿ ಮಾರೀಚನು ಸುವರ್ಣ ಜಿಂಕೆಯಾಗಿ ಸೀತಾದೇವಿಯ ಮುಂದೆ ಸುಳಿದಾಡುತ್ತಾನೆ. ಆ ಮಾಯಾಜಿಂಕೆಗೆ ಮೋಹಪಟ್ಟ, ಸೀತೆ ಅದನ್ನು ತನಗೆ ತಂದುಕೊಡಬೇಕೆಂದು ರಾಮನನ್ನು ಇನ್ನಿಲ್ಲದಂತೆ ಗೋಗರೆಯುತ್ತಾಳೆ. ರಾಮ ಎಷ್ಟು ಮನದಟ್ಟು ಮಾಡಿದರೂ ಆಕೆ ಒಪ್ಪದಿದ್ದಾಗ ಕೊನೆಗೆ ನಿರ್ವಾಹವಿಲ್ಲದೆ ಸುವರ್ಣ ಮೃಗವನ್ನು ಬೆನ್ನಟ್ಟಿ ಹೋಗಿ ಕೊಲ್ಲುತ್ತಾನೆ. ತಾನು ಸಾಯುವಾಗ ಹಾ…ಸೀತೆ ಎಂದು ರಾಮನ ಕಂಠದಂತೆ ಆರ್ತನಾದ ಮಾಡಿದಾಗ ಅದನ್ನು ಕೇಳಿಸಿಕೊಂಡ ಸೀತೆ ರಾಮನಿಗೇನೋ ಅಪಾಯ ಕಾದಿದೆ ಎಂದು ಲಕ್ಷ್ಮಣನನ್ನು ಅಲ್ಲಿಗೆ ಕಳುಹಿಸುತ್ತಾಳೆ. ಆದರೆ ಲಕ್ಷ್ಮಣನು ರಾಕ್ಷಸನ ಕುಟಿಲ ಉಪಾಯ ಅರಿತವನಾಗಿ ತೆರಳಲು ನಿರಾಕರಿಸಿದಾಗ “ಅಣ್ಣನ ನಂತರಕ್ಕೆ ನೀನು ನನ್ನೊಡನೆ ಇರಬಹುದೆಂದು ಎಣಿಸಿದೆಯಾ?’ ಎಂಬ ಮಾತಿನ ಚಾಟಿ ಏಟಿಗೆ ಅಳುಕಿದ ಲಕ್ಷ್ಮಣ ವೃತ್ತಾಕಾರದ ಗೆರೆಗಳನ್ನು ಹಾಕಿ ಏನೇ ಆದರೂ ಈ ಗೆರೆ ದಾಟಿ ಹೊರಗೆ ಬರಬಾರದೆಂದು ತಾಕೀತು ಮಾಡಿ ಅಣ್ಣನನ್ನರಸಿ ಬರಲು ಹೊರಡುತ್ತಾನೆ. ಇದುವೇ ಲಕ್ಷ್ಮಣರೇಖೆ.

ಈ ಸಮಯ ಸಾಧಿಸಿ ಸನ್ಯಾಸಿ ವೇಷದಲ್ಲಿ ರಾವಣ ಬಂದು ಭಿಕ್ಷೆ ಯಾಚಿಸಿ ಲಕ್ಷ್ಮಣ ರೇಖೆಯಿಂದ ಹೊರಗೆ ಬರುವಂತೆ ಮಾಡಿ ಸೀತೆಯನ್ನು ಅಪಹರಿಸಿ ಒಯ್ಯುವ ಕತೆ. ಹೀಗೆ ಒಂದು ನಿಶ್ಚಿತ ರೀತಿಯ ಕರಾರುವಾಕ್ ಆದ ಗೆರೆಗೆ ಲಕ್ಷ್ಮಣರೇಖೆ ಹೆಸರು ಜನಜನಿತವಾಯ್ತು. ಲಕ್ಷ್ಮಣರೇಖೆ ದಾಟಿ ಬಂದರೆ ಅದು ಅಪಾಯ ಎಂಬ ಅರ್ಥವಡಗಿದೆ. ಲಕ್ಷ್ಮಣನು ರಾಮನ ನೆರಳಿನಂತೆ ಇದ್ದು ಅಣ್ಣನಿಗೆ ತಕ್ಕ ತಮ್ಮನಂತೆ, ರಾಜನಿಗೆ ಮಂತ್ರಾಲೋಚನೆ ಹೇಳುವ ಮಂತ್ರಿಯಂತೆ, ಯೋಗ್ಯ ಗೆಳೆಯನಂತೆ ಸಮಯ ಸಂದರ್ಭಕ್ಕೆ ಹೊಂದಿಕೊಂಡು ಉಜ್ವಲ ಸೇವೆ,ತ್ಯಾಗಗಳು ಕತೆಯ ಉದ್ದಕ್ಕೂ ಕಾಣುತ್ತೇವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಊರ್ಮಿಳೆಯ ತ್ಯಾಗವೂ ಮಹತ್ತರವಾದುದು, ಇಲ್ಲಿ ಲಕ್ಷ್ಮಣ ಅಣ್ಣನಿಗೆ ತಕ್ಕ ಅನುಜನಾಗಿ ವರ್ತಿಸಿದನೇ ಹೊರತು ಸತಿಗೆ ತಕ್ಕ ಪತಿಯಾಗಲಿಲ್ಲ. ತಕ್ಕಡಿಯ ತಟ್ಟೆಯಲ್ಲಿ ಒಂದು ಬದಿ ತೂಕ ಹೆಚ್ಚಾದರೆ ಮತ್ತೊಂದು ಬದಿ ಹಗುರವಾಗಲೇ ಬೇಕಲ್ಲವೇ? ಬಹುಶಃ ವಾಲ್ಮೀಕಿ ಕವಿಯು ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ನ್ಯಾಯ, ಸತ್ಯತೆಯನ್ನು ಅದಕ್ಕದೇ ಪಾತ್ರವನ್ನು ಸೃಷ್ಟಿಸಿದ್ದಾನೆ. ಅಂತೂ ಎಲೆಮರೆಯ ಕಾಯಿಯಂತಿರುವ ಊರ್ಮಿಳೆಯ ತ್ಯಾಗ, ಸಂಯಮ, ಸಹನಗಳು ಕಡಿಮೆಯೇನಲ್ಲ. ‘ಒಬ್ಬ ಯಶಸ್ಸಿಪುರುಷನ ಹಿಂದೆ ಆತನ ಶ್ರೇಯಸ್ಸಿಗೆ ಕಾರಣೀಭೂತಳಾಗಿ ಆತನ ತಾಯಿಯೋ, ಮಡದಿಯೋ, ಸೋದರಿಯೋ ಯಾರಾದರೊಬ್ಬರು ಇದ್ದಾರೆ’ ಎಂಬುದು ಇಲ್ಲಿ ನೂರಕ್ಕೆನೂರು ನಿಜವಾದ ಮಾತು.

ರಾವಣನೊಡನೆ ಮಾಡಿದ ಯುದ್ಧದಲ್ಲಿ ಮೂರ್ಛಿತನಾದಾಗ ಸುಷೇಣನ ಚಿಕಿತ್ಸೆಯಿಂದ ಎಚ್ಚರಗೊಳ್ಳುತ್ತಾನೆ. ಮುಂದೆ ರಾವಣನನ್ನು ಶ್ರೀರಾಮ ಕೊಂದರೆ, ಆತನ ಮಗ ಇಂದ್ರಜಿತುವನ್ನು ಲಕ್ಷ್ಮಣ ಕೊಲ್ಲುತ್ತಾನೆ. ಮುಂದೆ ಅಯೋಧ್ಯೆಯಲ್ಲಿ ಶ್ರೀರಾಮ ರಾಜ್ಯವಾಳುತ್ತಿದ್ದಾಗ ಒಬ್ಬ ಅಗಸನ ನಿಂದೆಗೆ ಮನನೊಂದ ರಾಮನು ಸೀತಾದೇವಿಯನ್ನು ಅಡವಿಯಲ್ಲಿ ಬಿಟ್ಟು ಬರಲು ಲಕ್ಷ್ಮಣನಿಗೆ ಸೂಚಿಸುತ್ತಾನೆ. ಲಕ್ಷ್ಮಣನು ‘ಅತ್ತಿಗೆ ತುಂಬು ಗರ್ಭಿಣಿ. ಆಕೆಯನ್ನು ಅಡವಿಯಲ್ಲಿ ಬಿಡುವುದು ಉಚಿತವಲ್ಲ’ವೆಂದು ಎಷ್ಟು ಬೇಡಿಕೊಂಡರೂ ರಾಮ ತನ್ನ ನಿರ್ಧಾರ ಬದಲಿಸದಿರಲು ಲಕ್ಷ್ಮಣನು ಸೀತಾದೇವಿಯನ್ನು ವಾಲ್ಮೀಕಿಯ ಆಶ್ರಮದ ಬಳಿ ತಂದು ಬಿಡುತ್ತಾನೆ. ಮುಂದೆ ರಾಮನು ಅಶ್ವಮೇಧ ಯಾಗ ಕೈಗೊಂಡಾಗ ಕುದುರೆಯ ರಕ್ಷಕನಾಗಿ ಹೋಗುತ್ತಾನೆ. ಲಕ್ಷ್ಮಣ ಊರ್ಮಿಳೆಯರಿಗೆ ‘ಅಂಗದ ಮತ್ತು ಚಂದ್ರಕೇತು’ ಎಂಬ ಇಬ್ಬರು ಮತ್ತರು ಜನಿಸುತ್ತಾರೆ. ತಾರಾಪಥ ಮತ್ತು ಚಂದ್ರಕಾಂತಪುರಗಳಲ್ಲಿ ಅವರನ್ನೇ ಅರಸರನ್ನಾಗಿ ಮಾಡುವಂತೆ ಲಕ್ಷ್ಮಣ ಅಣ್ಣನಿಗೆ ಹೇಳುತ್ತಾನೆ.

ಲಕ್ಷಣ ನಿರ್ಯಾಣ

ಒಮ್ಮೆ ಯಮನು ಬ್ರಾಹ್ಮಣ ರೂಪದಿಂದ ಬಂದು ರಾಮನೊಂದಿಗೆ ಗುಟ್ಟಾಗಿ ಮಾತನಾಡುತ್ತಿದ್ದಾಗ ರಾಜದ್ವಾರದಲ್ಲಿ ಬಂದ ದೂರ್ವಾಸನ ಬರವನ್ನು ರಾಮನಿಗೆ ತಿಳಿಸಲು ಹೋಗಿ ಅವನಿಂದ ಮರಣ ದಂಡನೆಯ ಶಿಕ್ಷೆಗೆ ಗುರಿಯಾಗಿ ಸರಯೂ ನದಿ ತೀರದಲ್ಲಿ ಧ್ಯಾನ ಯೋಗದಲ್ಲಿದ್ದು ಅದೃಶ್ಯನಾಗಿ ವೈಕುಂಠಕ್ಕೆ ತೆರಳುತ್ತಾನೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

8 Responses

 1. ನಯನ ಬಜಕೂಡ್ಲು says:

  ಅಣ್ಣ ತಮ್ಮಂದಿರು ಹೇಗಿರಬೇಕು ಅನ್ನುವುದಕ್ಕೆ ಇವತ್ತಿಗೂ ಎಲ್ಲರು ರಾಮ ಲಕ್ಷ್ಮಣರನ್ನೇ ಉದಾಹರಿಸುವುದು.

 2. ನಯನ ಬಜಕೂಡ್ಲು says:

  ಸುಂದರ ಬರಹ

 3. ವಾವ್ ತುಂಬಾ ಆಪ್ತ ವಾದ ಬರಹ…ಸೋದರ ಸಂಬಂಧದ ಬಗ್ಗೆ.. ಸರ್ವಕಾಲಕ್ಕೂವಿದಿತವಾದದ್ದು..ವಿಜಿಯಾ ಮೇಡಂ

 4. Anonymous says:

  ಧನ್ಯವಾದಗಳು ಅಡ್ಹೇಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.

 5. Suma says:

  ಒಳ್ಳೆಯ ಜೀವನ ಪಾಠ…

 6. Hema Mala says:

  ಪೌರಾಣಿಕ ಕಥೆಗಳನ್ನು ಮೊದಲು ಓದಿದ್ದರೂ ಪುನ: ಓದಿಸುವ ಚೆಂದದ ಕಥನ ಶೈಲಿ ನಿಮ್ಮದು.

 7. ಶಂಕರಿ ಶರ್ಮ says:

  ಭಾತೃತ್ವದ ಬೆಸುಗೆಯನ್ನು ಇಂದಿಗೂ ರಾಮ ಲಕ್ಷ್ಮಣರ ಉದಾಹರಣೆಯಿಂದಲೇ ತಿಳಿಯಲಾಗುತ್ತದೆ. ಓದಿದ ಕಥೆಯಾದರೂ, ಬರಹದ ಸರಳ, ಸುಂದರ ಶೈಲಿಯು ಮಗದೊಮ್ಮೆ ಓದಲು ಪ್ರೇರೇಪಿಸುತ್ತದೆ…ಧನ್ಯವಾದಗಳು ವಿಜಯಕ್ಕ.

 8. ಪದ್ಮಾ ಆನಂದ್ says:

  ಸೋದರ ವಾತ್ಸಲ್ಯಕ್ಕೆ ಇನ್ನೊಂದು ಹೆಸರೇ ಲಕ್ಷಮಣ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸುವಂತಹ ಚಂದದ ನಿರೂಪಣೆಯ ಸುಂದರ ಕಥಾಭಾಗ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: