ಗೋಪುರಗಳ ನಾಡಿನಲ್ಲಿ…ಹೆಜ್ಜೆ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಧನುಷ್ಕೋಟಿ ಅಥವಾ ಧನುಷ್ಕೋಡಿ

05/10/2023 ರಂದು ರಾಮೇಶ್ವರಂನಲ್ಲಿ ಸಮುದ್ರ ಸ್ನಾನ, ತೀಥಸ್ನಾನ ಮುಗಿಸಿ, ಬೆಳಗಿನ ಉಪಾಹಾರ ಸೇವಿಸಿ, ಅಲ್ಲಿಂದ ಆಟೋಗಳಲ್ಲಿ ಮೂಕು ಕಿಮೀ ದೂರದಲ್ಲಿದ್ದ ನಮ್ಮ ಬಸ್ಸಿನ ಬಳಿಗೆ ಬಂದೆವು. ಬಸ್ಸು ನಮ್ಮನ್ನು ಅಲ್ಲಿಂದ ಧನುಷ್ಕೋಟಿಗೆ ತಲಪಿಸಿತು.

ರಾಮೇಶ್ವರಂ ದ್ವೀಪದ ತುತ್ತ ತುದಿಯಲ್ಲಿ ಧನುಷ್ಕೋಟಿಯಿದೆ. ಇಲ್ಲಿಂದ ಶ್ರೀಲಂಕಾ ದೇಶಕ್ಕೆ ಕೇವಲ 15 ಕಿ.ಮೀ ದೂರವಿದೆ. ಪೌರಾಣಿಕ ಕತೆ ಪ್ರಕಾರ, ಲಂಕೆಯಲ್ಲಿದ್ದ ಸೀತೆಯನ್ನು ಕರೆತರಲು, ಶ್ರೀರಾಮನ ಒಪ್ಪಿಗೆಯ ಮೇರೆಗೆ ವಾನರ ಸೈನ್ಯವು ‘ರಾಮ ಸೇತುವೆ’ ನಿರ್ಮಾಣವಾದ ಸ್ಥಳವಿದು. ‘ನಳ’ ಎಂಬ ವಾನರವೀರನು ‘ಶ್ರೀರಾಮ’ನನ್ನು ಜಪಿಸಿ ಸಮುದ್ರಕ್ಕೆ ಎಸೆದ ಕಲ್ಲುಗಳು ಮುಳುಗದಂತೆ ವರವನ್ನು ಪಡೆದಿದ್ದ. ಹಾಗಾಗಿ ಅವನ ನೇತೃತ್ವದಲ್ಲಿ ಭಾರತದಿಂದ ಶ್ರೀಲಂಕೆಗೆ ರಾಮಸೇತುವೆ ನಿರ್ಮಾಣವಾಯಿತು ಎಂಬ ನಂಬಿಕೆಯಿದೆ. ಹಾಗಾದರೆ, ಪುಟಾಣಿ ಅಳಿಲು ಕೂಡ ಸೇತುವೆ ಕಟ್ಟಲು ಶ್ರೀರಾಮನಿಗೆ ಸಹಾಯಮಾಡಿದುದು ಇಲ್ಲಿಯೇ ಆಗಿರಬಹುದು! ರಾಮನು ರಾವಣನನ್ನು ವಧಿಸಿ, ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿದ ನಂತರ, ಈ ಸೇತುವೆಯನ್ನು ನಾಶ ಮಾಡಬೇಕೆಂದು ರಾಮನಲ್ಲಿ ಕೇಳಿಕೊಂಡನಂತೆ. ರಾಮನು ತನ್ನ ಬಿಲ್ಲಿನ (ಧನು) ಒಂದು ತುದಿ(ಕೋಡಿ)ಯಿಂದ ಸೇತುವೆಯನ್ನು ನಾಶ ಮಾಡಿದ ಕಾರಣ ಈ ಸ್ಥಳಕ್ಕೆ ‘ಧನುಷ್ಕೋಡಿ’ ಎಂಬ ಹೆಸರು ಪಡೆಯಿತು.

ವೈಜ್ಞಾನಿಕ ಅಧ್ಯಯನದ ಪ್ರಕಾರ, ಇಲ್ಲಿರುವ ಕಲ್ಲುಗಳ ಪದರವು ಒಂದು ವಿಧದ ಸುಣ್ಣದ ಕಲ್ಲು ಹಾಗೂ ಹವಳ ಕಲ್ಲುಗಳ ರಚನೆಯಾಗಿದ್ದು ಭೌಗೋಳಿಕ ವಿದ್ಯಮಾನಗಳಿಂದಾಗಿ 7000 ದಿಂದ 18000 ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಿರಬಹುದು.


ಇಲ್ಲಿ ರಾಮಸೇತುವಿನ ಒಂದು ಭಾಗದಲ್ಲಿ ಅಬ್ಬರದ ಅಲೆಗಳುಳ್ಳ ಹಿಂದೂ ಮಹಾಸಾಗರವಿದೆ. ಇನ್ನೊಂದು ಭಾಗದಲ್ಲಿ ಶಾಂತವಾದ ಬಂಗಾಳಕೊಲ್ಲಿಯಿದೆಈ ಪ್ರಾಕೃತಿಕ ವಿಶೇಷಕ್ಕೆ ‘ರಾಮನ ಶಾಪ’ದ ಕತೆಯೂ ಥಳಕು ಹಾಕಿಕೊಂಡಿದೆ. 1964 ರಲ್ಲಿ ಇಲ್ಲಿ ಸಂಭವಿಸಿದ ಭೀಕರವಾದ ಚಂಡಮಾರುತದ ಸಮಯದಲ್ಲಿ ಇಲ್ಲಿ 1800 ಕ್ಕೂ ಹೆಚ್ಚು ಜನರು ಮೃತರಾದರು ಹಾಗೂ ಪಂಬನ್ ಸೇತುವೆಯ ಪಕ್ಕ ಹೋಗುತ್ತಿದ್ದ ರೈಲಿಗೆ ಚಂಡಮಾರುತ ಅಪ್ಪಳಿಸಿ ರೈಲು ಕೊಚ್ಚಿ ಹೋಯಿತು ಹಾಗೂ ಅದರಲ್ಲಿದ್ದ ಜನರು ಮೃತರಾದರು. ಈ ದುರಂತದ ನಂತರ ಧನುಷ್ಕೋಟಿಯು ಬಹುತೇಕ ನಿರ್ಜನವಾಯಿತು. ಅವ್ಯಕ್ತ ಭೀತಿ ಜನರನ್ನು ಕಾಡತೊಡಗಿತು, ಹಾಗಾಗಿ ಇಲ್ಲಿಗೆ ‘ದೆವ್ವದ ನಗರ’ ಎಂಬ ಹೆಸರಾಯಿತಂತೆ.

ಪ್ರಸ್ತುತ ಧನುಷ್ಕೋಟಿಯು ಬಹುತೇಕ ನಿರ್ಜನವಾಗಿದೆ. ಧನುಷ್ಖೋಟಿಯ ತುದಿಗೆ ಹಗಲಿನ ಸಮಯದಲ್ಲಿ ಪ್ರವಾಸಿಗರು ಮತ್ತು ಕೆಲವು ಸ್ಥಳೀಯ ವ್ಯಾಪಾರಿಗಳು ಬಂದು ಕತ್ತಲಾಗುವುದರ ಮೊದಲು ಹೊರಡುತ್ತಾರೆ. ‘ರಾಮಸೇತುವೆ’ಯ ಅವಶೇಷಗಳು ಎಂದು ಗುರುತಿಸಬಹುದಾದ ಸ್ಥಳವನ್ನು ನಾನು ನೋಡಲು ಸಾಧ್ಯವಾಗುತ್ತದೆ. ನಿಧಾನವಾಗಿ, ಈ ಪ್ರದೇಶದಲ್ಲಿ ಪ್ರವಾಸೋದ್ಯಮವು ವೃದ್ಧಿಯಾಗುತ್ತಿದೆ.

ಕೋದಂಡರಾಮ ದೇವಾಲಯ ಧನುಷ್ಕೋಟಿ:
ವಿಭೀಷಣನ ಪಟ್ಟಾಭಿಷೇಕ

‘ರಾಮಸೇತುವೆ’ಯನ್ನು ನೋಡಿದ ಹಿಂತಿರುಗುವಾಗ ದಾರಿಯಲ್ಲಿ ‘ಕೋದಂಡರಾಮ’ನ ದೇವಾಲಯಕ್ಕೆ ಭೇಟಿ ಕೊಟ್ಟೆವು, ಈ ದೇವಾಲಯದಲ್ಲಿ ರಾಮ,ಲಕ್ಷ್ಮಣ, ಸೀತೆ, ಹನುಮಂತರ ವಿಗ್ರಹಗಳಿವೆ. ವಿಶೇಷವಾಗಿ, ವಿಭೀಷಣನ ಮೂರ್ತಿಯೂ ಇದೆ. ರಾಮ-ರಾವಣರ ಯುದ್ಧದ ನಂತರ, ರಾಮನು ಶ್ರೀಲಂಕೆಯ ಅಧಿಪತಿಯಾಗಿ ವಿಭೀಷಣನಿಗೆ ಇಲ್ಲಿ ಪಟ್ಟಾಭಿಷೇಕ ಮಾಡಿದನೆಂಬ ನಂಬಿಕೆಯಿದೆ. ಸಮುದ್ರದ ಸುಂದರ ಪರಿಸರದಲ್ಲಿರುವ ಈ ದೇವಾಲಯವು, 1964 ರ ಚಂಡಮಾರುತಕ್ಕೆ ಘಾಸಿಗೊಳ್ಳದೇ ಇರುವುದು ಅಂದಿನ ವಾಸ್ತು ಕೌಶಲದ ಪ್ರತೀಕವಾಗಿದೆ ಹಾಗೂ ಜನರು ಇದನ್ನು ಅಧ್ಯಯನ ಮಾಡಲು ಬರುತ್ತಾರಂತೆ.

ಸ್ವಾಮಿ ವಿವೇಕಾನಂದರು, ಚಿಕಾಗೋದಲ್ಲಿ ತಮ್ಮ ಐತಿಹಾಸಿಕ ಭಾಷಣ ಮಾಡಿ ಮರಳುವಾಗ, ಶ್ರೀಲಂಕೆಯಿಂದ ಇದೇ ದಾರಿಯಲ್ಲಿ ಫೆರ್ರಿಯಲ್ಲಿ ಬಂದು, ತಲಪಿದ ಭಾರತದ ಮೊದಲ ಸ್ಥಳ ಧನುಷ್ಕೋಟಿ ಆಗಿದೆ . ಅವರು ‘ಕೋದಂಡರಾಮ’ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರಂತೆ.

ಈ ದೇವಾಲಯದಲ್ಲಿ ರಾಮಸೇತುವೆಯಲ್ಲಿ ಇರುವ ‘ತೇಲುವ ಕಲ್ಲನ್ನು’ ಸಂಗ್ರಹಿಸಿ ಇಟ್ಟಿದ್ದಾರೆ. ವೈಜ್ಞಾನಿಕವಾಗಿ, ಇವುಗಳನ್ನು ಜ್ವಾಲಾಮುಖಿಯಿಂದ ಉದ್ಭವವಾದ ಹಗುರವಾದ, ತೂತುಗಳುಳ್ಳ ಪ್ಯೂಮಿಕ್ (Pumice ) ಎಂದು ಗುರುತಿಸುತ್ತಾರೆ.


ತೇಲುವ ಕಲ್ಲು

ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸ್ಮಾರಕ ಮ್ಯೂಸಿಯಂ
ಭಾರತ ಕಂಡ ಅಪ್ರತಿಮ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ (1931 – 2015). ರಾಮೇಶ್ವರಂ ಅವರ ಹುಟ್ಟೂರು . ಹಾಗಾಗಿ ಅಲ್ಲಿ ಅವರ ಸಮಾಧಿಯನ್ನು ನಿರ್ಮಿಸಿದ್ದಾರೆ. ಅಲ್ಲಿಯೇ ಮ್ಯೂಸಿಯಂ ಕೂಡ ಇದೆ. ಮ್ಯೂಸಿಯಂನಲ್ಲಿ ಅವರ ಜೀವನದ ಯಶೋಗಾಥೆ, ವೈಜ್ಞಾನಿಕ ಸಾಧನೆಗಳು, ಹವ್ಯಾಸಗಳು, ಸ್ವದೇಶಿ-ವಿದೇಶಿ ಗಣ್ಯರೊಡನೆ ಒಡನಾಟಗಳು ಇವನ್ನೆಲ್ಲ ಬಿಂಬಿಸುವ ಫೊಟೊ, ಪ್ರತಿಮೆಗಳನ್ನು ಅಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ. ಎಲ್ಲೂ ಫೊಟೊ ತೆಗೆಯಲು ಅವಕಾಶವಿಲ್ಲ.

ದೈತ್ಯ ಪ್ರತಿಭೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ನಮಿಸಿ ನಮ್ಮ ಪ್ರಯಾಣ ತಂಜಾವೂರಿನತ್ತ ಮುಂದುವರಿಯಿತು.

ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: https://www.surahonne.com/?p=39666

(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು

5 Responses

 1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು…ಪೂರಕ ಚಿತ್ರಗಳು.. ದಂತಕಥೆಗಳು ಮನಸ್ಸಿಗೆ ಮುದ ತಂದಿತು ಗೆಳತಿ ಹೇಮಾ…

 2. ನಯನ ಬಜಕೂಡ್ಲು says:

  ಸುಂದರವಾದ ಲೇಖನ

 3. ಚಂದದ ಪ್ರವಾಸಿ ಕಥನ

 4. ಶಂಕರಿ ಶರ್ಮ says:

  ಧನುಷ್ಕೋಟಿ ಕುರಿತ ಪ್ರವಾಸ ಲೇಖನವು ಚಂದದ ಪೂರಕ ಚಿತ್ರಗಳೊಂದಿಗೆ ಎಂದಿನಂತೆ ಸೊಗಸಾಗಿ ಮಾಹಿತಿಪೂರ್ಣವಾಗಿದೆ.

 5. ಪದ್ಮಾ ಆನಂದ್ says:

  ಸುಂದರವಾದ ಬರೆಹ. ಧನುಷ್ಕೋಟಿಯ ವರ್ಣನೆ ರುದ್ರ ರಮಣೀಯವಾಗಿ ಮೂಡಿ ಬಂದಿದೆ. ಡಾ.ಕಲಾಂ ಅವರ ಸ್ಮಾರಕದ ಕುರಿತಾದ ಮಾಹಿತಿಯೂ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: