ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 3

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ರಮ್ಯ ಬೇಗ ಎದ್ದು ಡಿಕಾಕ್ಷನ್ ಹಾಕಿ ಹಾಲು, ನೀರು ಕಾಯಿಸಿದಳು. ಹಿಂದಿನ ದಿನವೇ ಹಾಲು ತಂದಿಟ್ಟಿದ್ದರಿಂದ ಗಂಡನನ್ನು ಎಬ್ಬಿಸಲಿಲ್ಲ. ಖಾರಾಭಾತ್ ಮಾಡಿ ಡಬ್ಬಿಗೆ ಪುಳಿಯೋಗರೆ, ಮೊಸರನ್ನ ಸಿದ್ಧ ಮಾಡಿದಳು. ಗಂಡ, ಮಕ್ಕಳ ಸ್ನಾನದ ನಂತರ ಬಟ್ಟೆಗಳನ್ನು ವಾಷಿಂಗ್‌ಮಿಷನ್‌ಗೆ ಹಾಕಿದಳು.

“ರಮ್ಯಾ ಕೆಲಸದವಳು ಬರಲ್ವಾ?”
“ನಾಳೆಯಿಂದ ಗಿರಿಜಾ ಅನ್ನುವ ಹೊಸ ಕೆಲಸದವಳು ಬಾಳೆ. ನೀವು ಸಾಯಂಕಾಲ ಬರುವಾಗ ಹಾಲು, ಮೊಸರು ತನ್ನಿ. ನಾನು ತರಕಾರಿ ತರ್ತೀನಿ.”
‘’ಓ.ಕೆ ಮೇಡಂ.”

“ಸಾನ್ವಿ ಇನ್ನು ಮೇಲೆ ನೀನು ತಿಂಡಿ ತಟ್ಟೆ, ಊಟದ ತಟ್ಟೆ ನಮ್ಮ ಡಬ್ಬಿಗಳನ್ನೆಲ್ಲಾ ಸಿಂಕ್‌ಗೆ ಹಾಕಿ, ಟೇಬಲ್ ಒರೆಸಬೇಕು.”
”ಅಮ್ಮಾ ನಾನು?”
“ನೀನೂ ಸಣ್ಣ ಪುಟ್ಟ ಕೆಲಸಮಾಡು. ನಾನು ಹೇಳ್ತಾ ಇದ್ದೀನಿ.”
“ಓ.ಕೆ. ಅಮ್ಮ”.

ಸಾಯಂಕಾಲ ಆಫೀಸ್‌ನಿಂದ ಬರುವಾಗ ಕೇಕ್, ಫಫ್ , ಪೊಟ್ಯಾಟೋ ಬನ್ ತಂದಳು.
ಮಕ್ಕಳು ಖುಷಿಯಿಂದ ತಿಂದರು.
ಮರುದಿನದಿಂದ ಗಿರಿಜಾ ಬರಲಾರಂಭಿಸಿದಳು.
ರಮ್ಯಾಳಿಗೆ ಸಮಾಧಾನವಾಯಿತು.
ಒಂದು ಶುಕ್ರವಾರ ರಾತ್ರಿ ಪಂಕಜಮ್ಮ ಫೋನ್ ಮಾಡಿದರು.
”ಏನಮ್ಮಾ ಸಮಾಚಾರ?”
‘ಪರಿಮಳ ನಿನಗೆ ಫೋನ್ ಮಾಡಿದ್ದಳಾ?”
“ಹೌದು, ದೊಡ್ಡಮ್ಮ ಫೋನ್ ಮಾಡಿದ್ದರು. ಪ್ರಭಾಕರನ ಮದುವೆಗೆ ಕರೆಯಕ್ಕೆ ಬರೀವಿ. ನಿಮತ್ತೆಗೆ ಹೇಳು ಅಂದ್ರು.”
“ನೀನು ನಿಮ್ಮತ್ತೆ-ಮಾವ ಬೇರೆ ಹೋಗಿರುವುದು ಹೇಳಿದೆಯಾ?”
”ಹುಂ, ಅದರಲ್ಲಿ ತಪ್ಪೇನು?”

“ಪರಿಮಳಾ ಇವತ್ತು ನಮ್ಮನೆಗೆ ಬಂದಿದ್ದಳು. ಅಷ್ಟು ಹೊತ್ತಿಗೆ ಮಕ್ಕಳು ಸ್ಕೂಲಿನಿಂದ ಬಂದ್ರು. ಅವಳ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಕೈ, ಕಾಲು ತೊಳೆದುಕೊಂಡು ಬಂದು ತಾವೇ ತಿಂಡಿ ತಂದುಕೊಟ್ಟರು. ತಾವೂ ತಿಂಡಿ ತಿಂದು ‘ತಾತನ ಮನೆಗೆ ಹೋಗಿ ಬರ್ತೀವಿ’ ಅಂತ ಹೊರಟರು.”
“ಸರಿ ಇದರಲ್ಲೇನು ವಿಶೇಷ?”

“ಪರಿಮಳಾ ನಿನ್ನ ಮಕ್ಕಳನ್ನು ತುಂಬಾ ಮೆಚ್ಚಿದಳು. ಎಷ್ಟು ಒಳ್ಳೆಯ ನಡವಳಿಕೇಂತ ಮೆಚ್ಚಿದಳು. ನಿಮ್ಮತ್ತೆಯನ್ನೂ ತುಂಬಾ ಹೊಗಳಿದಳು. ‘ದಾಕ್ಷಾಯಿಣಿ ಭೂಮಿ ತೂಕದ ಹೆಂಗಸು. ಅವರು ಗಂಡನ ಜೊತೆ ತಾವಾಗಿ ಮನೆ ಬಿಟ್ಟು ಹೋದರೂಂದ್ರೆ ನಂಬಕ್ಕಾಗ್ತಿಲ್ಲ’ ಅಂದಳು. ನನ್ನನ್ನು ನಿಮ್ಮತ್ತೆ ಮನೆಗೆ ಕರೆದುಕೊಂಡು ಹೋಗಿ ಅವರನ್ನೂ ಮದುವೆಗೆ ಕರೆದಳು.”

“ಸರಿ, ನಾನು ಏನು ಮಾಡಬೇಕು ಹೇಳು.”
”ನಿಮ್ಮಾವ ಮಕ್ಕಳಿಗೆ ಎಷ್ಟು ಚೆನ್ನಾಗಿ ಹೋಂವರ್ಕ್ ಮಾಡಿಸ್ತಿದ್ರು ಗೊತ್ತಾ? ಅವರೇ ಸಾಯಂಕಾಲ ಮಕ್ಕಳನ್ನು ನಿಮ್ಮ ಮನೆಗೆ ಬಿಟ್ಟು ಬರ್ತಾರಂತೆ.”
‘ಅಮ್ಮ, ನೀನು ಹೇಳೋದೆಲ್ಲಾ ಮುಗಿದಿದ್ರೆ ಫೋನ್ ಇಡು. ನೀನಿದೆಲ್ಲಾ ನನಗ್ಯಾಕೆ ಹೇಳ್ತಾ ಇದ್ದೀಯೋ ನನಗರ್ಥವಾಗಿಲ್ಲ” ಪಂಕಜಮ್ಮ ಕಾಲ್ ಕಟ್ ಮಾಡಿದರು.
***

ಅಂದೇ ರಾತ್ರಿ ಮನೆಗೆ ಬಂದ ಆದಿತ್ಯ ತುಂಬಾ ಖುಷಿಯಾಗಿದ್ದ.
“ಏನ್ರಿ ಇಷ್ಟು ಖುಷಿಯಾಗಿದ್ದೀರಾ?””ನಮ್ಮ ಫ್ರೆಂಡ್ಸ್ ಗ್ರೂಪ್ ವಿತ್ ಫ್ಯಾಮಿಲಿ ಗೋವಾಗೆ ಟೂರ್ ಹಾಕಿದ್ದಾರೆ. ನಾನೂ ಬರೀನೀಂತ ಹೇಳಿದ್ದೀನಿ.”
“ವೆರಿಗುಡ್. ಯಾವಾಗ ಹೋಗೋದು?”
”ಮುಂದಿನ ಶುಕ್ರವಾರ ರಾತ್ರಿ 11 ಗಂಟೆಗೆ ಫೈಟ್. ಬರುವಾಗ ಬಸ್‌ನಲ್ಲಿ ಬರೋದು.
‘’ಎಷ್ಟು ಜನ ಹೊರಟಿದ್ದೀರಾ?”
“ಹತ್ತು ಜನ ಮತ್ತು ಫ್ಯಾಮಿಲಿ. ಎಲ್ಲಾ ಸೇರಿ 35-40 ಜನ ಆಗಬಹುದು.”
“ನಾನು ರೆಡಿ……”

‘ನಮಗೆ ಮುಂದಿನ ಸೋಮವಾರದಿಂದ ಟೆಸ್ಟ್ ಶುರು, ನಾನು ಬರಲ್ಲ” ಸಾನ್ವಿ ಹೇಳಿದಳು.
”ಅಕ್ಕ ಬರದಿದ್ರೆ ನಾನೂ ಬರಲ್ಲ.”
”ಬರದಿದ್ದರೆ ಬಿಡಿ. ನೀವು ಅಮ್ಮಮ್ಮನ ಮನೆಯಲ್ಲಿರಿ. ನಾವು ಹೋಗಿ ಬರೀವಿ” ರಮ್ಯಾ ಹೇಳಿದಳು.
“ಸುಬ್ರಹ್ಮಣ್ಯ ಬರಲ್ಲಾಂತಿದ್ದಾನೆ. ಅವನು ಬಂದ್ರೆ ಚೆನ್ನಾಗಿರತ್ತೆ, ಅವನ ಹೆಂಡತಿ ನಿನಗೆ ಕಂಪನಿ ಕೊಡ್ತಾರೆ. ಉಳಿದವರು ಹೇಗಿದ್ದಾರೋ ನನಗೆ ಗೊತ್ತಿಲ್ಲ.”
“ಅವರು ಯಾಕೆ ಬರಲ್ವಂತೆ?”
“ಅಷ್ಟೆಲ್ಲಾ ಮಾತಾಡಲು ಬಿಡುವಾಗಲಿಲ್ಲ. ಸೋಮವಾರ ಸಿಗ್ತಾನಲ್ಲ ಕೇಳ್ತೀನಿ.”
“ಸುರಭಿ- ಸುಬ್ರಹ್ಮಣ್ಯ ಬಂದರೆ ನಾವು ಹೋಗೋಣ ಇಲ್ಲದಿದ್ದರೆ ಬೇಡ.”
”ನಾನೂ ಹಾಗೆ ಅಂದ್ಕೊಂಡೆ.”

”ನಾಳೆಯಿಂದ ಎರಡು ದಿನ ದೊಡ್ಡಮ್ಮನ ಮನೆ ಮದುವೆ. ನಾನು, ಅಮ್ಮ ನಾಳೆ ಹೋಗ್ತಿದ್ದೀವಿ. ನೀವು ಯಾವತ್ತು ಬರ್ತೀರಾ?”
‘ನಾಡಿದ್ದು ಬರೀನಿ. ನಾಳೆ ನಾನು ಮಕ್ಕಳನ್ನು ನೋಡಿಕೊಳ್ತೀನಿ. ನೀನು ಹೋಗಿ ಬಾ.”
“ನಾಳೆ ಪೂರ್ತಿ ಅಡಿಗೆ ಮನೆ ಜವಾಬ್ದಾರಿ ನಿಮ್ಮದು.
‘ಕಾಫಿ ಮಾಡ್ತಿಯೋ ಇಲ್ಲವೋ?”
“ಕಾಫಿ ಮಾಡ್ತೀನಿ. ತಿಂಡಿಗೆ ಆರ್ಡರ್ ಮಾಡಿಬಿಡಿ’.
‘’ಓ.ಕೆ. ಮಧ್ಯಾಹ್ನ ನಾನು ಮಕ್ಕಳ ಜೊತೆ ಹೊರಗಡೆ ಊಟಕ್ಕೆ ಹೋಗ್ತಿನಿ.”
“ರಾತ್ರಿ?”
“ರಾತ್ರಿಗೆ ನಾನೇ ಚಪಾತಿ, ಪಲ್ಯ ಮಾಡ್ತೀನಿ.”
“ಏನಾದ್ರೂ ಮಾಡಿಕೊಳ್ಳಿ’ ಎಂದಳು.

ಮರುದಿನ ಬೆಳಿಗ್ಗೆ ತಿಂಡಿ ತಿಂದು ರಮ್ಯ ಹೊರಟಳು. ಮಕ್ಕಳು ಶಾಲೆಗೆ ಹೋಗುವಾಗಲೆ ಹೇಳಿದರು. “ಪಪ್ಪ, ನೀನು ಅಮ್ಮಮ್ಮನ ಮನೆಗೆ ಬಾ. ನಾವು ರೆಡಿಯಾಗಿರ್ತೀವಿ’’.
“ಆಗಲಿ……….” ಎಂದ ಆದಿತ್ಯ.
ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಅವನು ಮಾವನ ಮನೆ ಪ್ರವೇಶಿಸಿದ.
“ಮಾವ, ನೀವು ಮದುವೆಗೆ ಹೋಗಲಿಲ್ವಾ?”
‘ನಾನು ಹೋಗಿ ಏನ್ಮಾಡಲಿ? ನಾಳೆ ಧಾರೆಗೆ ಹೋಗಿ ಬರೀನಿ.”
“ಹಾಗೇ ಮಾಡಿ.”
“ಬೇಗ ರೆಡಿಯಾಗಿ ಹೊರಗಡೆ ಊಟಕ್ಕೆ ಹೋಗೋಣ.”
“ಇವತ್ತು ನಿಮ್ಮ ತಂದೆ ಹುಟ್ಟಿದ ಹಬ್ಬ. ನಾವೆಲ್ಲಾ ಅಲ್ಲಿಗೆ ಹೊರಟಿದ್ದೇವೆ. ನೀವೂ ಬನ್ನಿ.”
”ಇವತ್ತು ಅಪ್ಪನ ಹುಟ್ಟಿದ ಹಬ್ಬಾನಾ?’
“ಹೌದು, ನೀವು ವಿಷ್ ಮಾಡ್ತೀರಾಂತ ನಿಮ್ಮ ತಂದೆ ಬೆಳಿಗ್ಗೆಯಿಂದ ಕಾಯ್ತಿದ್ರು, ಈಗಲಾದರೂ ನಮ್ಮ ಜೊತೆ ಬಂದು ವಿಷ್ ಮಾಡಿ.”
“ಬಾ ಪಪ್ಪ” ಮಕ್ಕಳು ಒತ್ತಾಯ ಮಾಡಿದರು.
ಆದಿತ್ಯ ಅವರೊಡನೆ ಹೊರಟ.
ಆನಂದರಾಯರು ದಾಕ್ಷಾಯಿಣಿ ಮಗನನ್ನು ನೋಡಿ ಸಂಭ್ರಮದಿಂದ ಸ್ವಾಗತಿಸಿದರು.
‘ಅಪ್ಪ ಹುಟ್ಟುಹಬ್ಬದ ಶುಭಾಷಯಗಳು.”
“ಥ್ಯಾಂಕ್ಸ್.”
“ಸಾರಿ ಅಪ್ಪ. ನನಗೆ ನಿಮ್ಮ ಹುಟ್ಟಿದ ಹಬ್ಬ ಎನ್ನುವುದು ಮರೆತು ಹೋಗಿತ್ತು. ಗಿಫ್ಟ್ ತರಕ್ಕಾಗಲಿಲ್ಲ.”

PC: Internet

“ನೀನು ಬಂದಿರೋದೇ ನನಗೆ ದೊಡ್ಡ ಗಿಫ್ಟ್ ಆದಿ. ಇನ್ನೇನು ಬೇಕು ನನಗೆ? ನಿನ್ನ ಮಕ್ಕಳು ತಾವೇ ತಯಾರಿಸಿದ ಗ್ರೀಟಿಂಗ್ ಕಾರ್ಡ್ ಕೊಟ್ಟಿದ್ದಾರೆ”.

ಮಕ್ಕಳು ಅಜ್ಜಿಗೆ ಮಾಡಿದ ಅಡಿಗೆ ಡೈನಿಂಗ್ ಟೇಬಲ್ ಮೇಲೆ ಇಡಲು ಸಹಾಯ ಮಾಡುತ್ತಿದ್ದರು. ಎಲ್ಲರನ್ನೂ ಕೂಡಿಸಿ ದಾಕ್ಷಾಯಿಣಿ ಉಪಚಾರ ಮಾಡಿ ಬಡಿಸಿದರು.
“ಅಮ್ಮ ಇದೇನು ಇಷ್ಟೊಂದು ಐಟಮ್ಸ್?”
“ಸಾನ್ವಿಗೆ ಹೋಳಿಗೆ ಇಷ್ಟ. ಸುಧೀಗೆ ಪಕೋಡ ಇಷ್ಟ. ನಿಮ್ಮ ತಂದೆಗೆ ಶಾವಿಗೆ ಪಾಯಸ ಇಷ್ಟ. ನಿನಗೆ ಬಾಸುಂದಿ ಇಷ್ಟ. ಅದಕ್ಕೆ ಎಲ್ಲಾ ಮಾಡ್ಡೆ.’’
“ಅಡಿಗೆ ತುಂಬಾ ಚೆನ್ನಾಗಿದೇಮ್ಮ, ನಿಜವಾಗಿ ಇಂತಹ ಊಟ ಮಾಡಿ ತುಂಬಾ ದಿನಗಳಾಗಿದ್ದವು’ ಜಗನ್ನಾಥ್ ಹೇಳಿದರು.
“ಹೌದಮ್ಮ, ನನಗೆ ಈಗಲೇ ಕಣ್ಣೆಳೆಯುತ್ತಿದೆ.”
“ರಮ್ಯಾ ಬರೋದು ರಾತ್ರಿ ತಾನೆ? ಒಂದು ಘಳಿಗೆ ಮಲಗಿ ರೆಸ್ಟ್ ತೆಗೆದುಕೋ.”
ಊಟದ ನಂತರ ಜಗನ್ನಾಥ್ ಮನೆಗೆ ಹೋದರು. ಮಕ್ಕಳು ಅಪ್ಪನ ಜೊತೆ ರೂಮು ಸೇರಿದರು. ಆನಂದರಾಯರು ಹೆಂಡತಿಗೆ ಬಡಿಸಿದರು.
***

ರಾತ್ರಿ ರಮ್ಯ ಬಂದಾಗ 10 ಗಂಟೆಯಾಗಿತ್ತು, ಆದಿತ್ಯ ಅವಳನ್ನು ರಿಸಪ್ಪನ್ ಬಗ್ಗೆ ವಿಚಾರಿಸಿದ.
“ಮಧ್ಯಾಹ್ನ ಎಲ್ಲಿ ಊಟ ಮಾಡಿದ್ರಿ?”
”ಇವತ್ತು ಅಪ್ಪನ ಹುಟ್ಟಿದ ಹಬ್ಬ. ಅವರು ನಿಮ್ಮ ತಂದೆ ಕೈಲಿ ಹೇಳಿ ಕಳುಹಿಸಿದ್ದು, ನಾವೆಲ್ಲಾ ಅಲ್ಲೇ ಊಟ ಮಾಡಿದೆವು.”
“ಅವರೇ ಫೋನ್ ಮಾಡಿ ಕರೆಯಬಹುದಿತ್ತಲ್ವಾ?”
“ಅವರು ನಾವು ವಿಷ್ ಮಾಡ್ತೀನೀಂತ ಕಾಯ್ತಿದ್ರಂತೆ. ನೀನೂ ಜ್ಞಾಪಿಸಲಿಲ್ಲ.”
ರಮ್ಯಳಿಗೆ ಜ್ಞಾಪಕವಿತ್ತು. ಆದರೂ ಹೇಳಿರಲಿಲ್ಲ.
”ಅಮ್ಮ ನಿನಗೇಂತ ಜಾಮೂನು, ಬಾಸುಂದಿ ಕಳಿಸಿದ್ದಾಳೆ.
“ಪಕೋಡಾ ಮಾಡಿದ್ರಾ?”
”ಹುಂ, ಅದನ್ನೂ ಕೊಟ್ಟಿದ್ರು, ಹುಡುಗರು ಉಳಿಸಿದ್ದಾರೋ ಇಲ್ಲವೋ ತಿಳಿಯದು.”
“ರಾತ್ರಿ ಊಟಕ್ಕೆ ನೀವೇ ಚಪಾತಿ ಮಾಡಿದ್ರಾ?”
“ಇಲ್ಲ. ಲಕ್ಷ್ಮಿ ಮೆಸ್‌ನಿಂದ ತಂದಿದ್ದೆ.”

“ನಾಳೆ ಬೆಳಿಗ್ಗೆ ತಿಂಡಿ ತಿಂದುಕೊಂಡು ಹೋಗ್ತೀನಿ. ತಿಂಡಿಗೆ ಆರ್ಡರ್ ಮಾಡೋಣ,ತಿಂಡಿ ಜೊತೆ ಜಾಮೂನು, ಬಾಸುಂದಿ ಖಾಲಿ ಮಾಡಿದರಾಯ್ತು.”
“ನೀನು ಅಮ್ಮನ ಜೊತೆ ಹೋಗಿರು. ನಾನು ನಿನ್ನಂದೆ ಜೊತೆ ನಿಧಾನವಾಗಿ ಬರ್ತೀನಿ.”
“ಮಕ್ಕಳು ತಾತನ ಮನೆಗೆ ಹೋಗ್ತಾರಲ್ವಾ?”
”ಹುಂ, ಅಲ್ಲಿ ಆರಾಮವಾಗಿರ್ತಾರೆ’.
“ಆಯ್ತು. ನಾನು ಮಲಗ್ತೀನಿ. ತುಂಬಾ ಸುಸ್ತಾಗಿದೆ’.
“ಕೆಲಸ ಮಾಡಿ ಸುಸ್ತೋ, ಹರಟೆ ಹೊಡೆದು ಸುಸ್ತೋ?”
“ಎರಡೂ” ಎಂದಳು ರಮ್ಯ.

ಮರುದಿನ ರಮ್ಯಾ 9 ಗಂಟೆಗೆ ಹೊರಟಳು. ಅವಳು, ಆದಿತ್ಯ ತಿಂಡಿ ತಿಂದಾಗಿತ್ತು.
ಮಕ್ಕಳಿನ್ನೂ ಮಲಗಿದ್ದರು.
“ಇವತ್ತು ಭಾನುವಾರ ನಿಧಾನವಾಗಿ ಏಳ್ತಾರೆ. ಅವರು ಎದ್ದ ಮೇಲೆ ಅವರಿಗೆ ಏನು ಬೇಕೋ ತರಿಸಿಕೊಡಿ.
“ಓ.ಕೆ……”
”ನೀವು 12 ಗಂಟೆ ಹೊತ್ತಿಗಾದರೂ ಬನ್ನಿ. ಊಟದ ಟೈಂಗೆ ಬಂದು ನನ್ನ ಕೈಲಿ ಸುಮ್ಮನೆ  ಮಾತು ಕೇಳಬೇಡಿ.”
‘ಮನೆಗೆ ಬಂದ ಮೇಲೆ ತಾನೆ ನೀನು ಬೈಯೋದು?”
“ಹಾಗಂತಾ ಲೇಟಾಗಿ ಬರ್ತೀರಾ?”
“ಲೇಟಾಗಿ ಬರಬಹುದಿತ್ತು. ಆದರೆ ನಿಮ್ತಂದೆ ನನ್ನ ಜೊತೆ ಬರುವುದರಿಂದ ಬೇಗ ಹೊರಡ್ತೀನಿ.”
“ವೆರಿಗುಡ್, ಮನೆ ಸರಿಯಾಗಿ ಲಾಕ್ ಮಾಡಿ.”
****

ಭಾನುವಾರ ಎಲ್ಲರೂ ಖುಷಿಯಾಗಿ ಕಳೆದರು. ಸೋಮವಾರ ರಾತ್ರಿ ಆದಿತ್ಯ ಹೇಳಿದ.
“ಸುಬ್ರಹ್ಮಣ್ಯನ ಫ್ಯಾಮಿಲಿ ಬರಿಲ್ಲ. ನಾವೇನು ಮಾಡೋಣ.”
“ಬೇಡಾರಿ. ನಾವೂ ಇನ್ಯಾವಾಗಲಾದರೂ ಮಕ್ಕಳ ಜೊತೆ ಹೋಗೋಣ. ನಿಮ್ಮ ಫ್ರೆಂಡ್  ಯಾಕೆ ಬರಲ್ಲಾಂದ್ರು?”
“ಅವನು ಬುಧವಾರ ಬರ್ತಾನಂತೆ. “ಏನು ಕಾರಣಾಂತ ನಾನು ನಿನ್ನ ಮುಂದೆ ಹೇಳಬೇಕು ಕಣೋ, ನಿನ್ನ ಹತ್ರ ಒಂದು ತಿಂಗಳಿಂದ ಹೇಳಬೇಕೂಂತ ಪ್ರಯತ್ನಪಟ್ಟೆ ಬಿಡುವಾಗಲಿಲ್ಲ. ಕೆಲಸದ ಹೊತ್ತಿನಲ್ಲಿ ಮಾತನಾಡುವುದು ಬೇಡಾಂತ ಸುಮ್ಮನಾದೆ” ಅಂತ ಹೇಳಿದ.
“ಯಾವ ವಿಷಯ ಇರಬಹುದು?”
“ಗೊತ್ತಿಲ್ಲ. ಬುಧವಾರ ಜನರಲ್ ಹಾಲಿಡೆಯಿದೆ ಅಲ್ವಾ? ಬೆಳಗ್ಗೆ ಬರಬಹುದು. ಅವನು ತುಂಬಾ ಅಪ್‌ಸೆಟ್ ಆಗಿದ್ದಾನೆ ಅನ್ನಿಸಿತು. ಏನು ಹೇಳ್ತಾನೋ ಏನೋ?”
‘ಮಕ್ಕಳು ಇದ್ದಾರಲ್ವಾ? ಏನ್ಮಾಡೋದು?”
“ಅವರನ್ನು ನಮ್ಮ ತಂದೆ ಮನೆಗೆ ಕಳಿಸೋಣ ಅಲ್ಲಾದರೆ ಅವರು ತುಂಬಾ ಖುಷಿಯಿಂದ ಇದ್ದಾರೆ.”
“ಹಾಗೆ ಮಾಡೋಣ. ನಾನು ಸಿಂಪಲ್ಲಾಗಿ ಮಾಮೂಲು ಅಡಿಗೆ ಮಾಡ್ತೀನಿ.”

“ಆಗಲಿ ಆಗಲಿ. ಅವನ ಮೂಡ್ ನೋಡಿಕೊಂಡು ಡಿಸೈಡ್ ಮಾಡು. ಅವನು ಎಂದಿನಂತೆ ಮಾತಾಡಲಿಲ್ಲ ರಮ್ಯ ಅವನ ವಾಟ್ಸ್ ಒಂದು ತರಹ ಇತ್ತು. ಅದೇ ನನಗೆ ಬೇಜಾರು.”
‘ಸಮಾಧಾನ ತಂದುಕೊಳ್ಳಿ. ಅವರು ಏನು ಹೇಳ್ತಾರೋ ಕೇಳೋಣ. ನೀವೇ ಇಷ್ಟು ಅಪ್‌ಸೆಟ್ ಆದರೆ ಹೇಗೆ?”
“ಯಾಕೋ ಮನಸ್ಸೇ ಸರಿಯಾಗಿಲ್ಲ…..
“ನೀವು ಹೀಗೇ ಹಾಡ್ತಾಯಿದ್ರೆ ನನ್ನ ಮೂಡ್ ಹಾಳಾಗಿಹೋಗತ್ತೆ ಸುಬ್ಬಣ್ಣ. ನಿಮಗೆ ಬೇಕಾದವರೂಂತ ನನಗೆ ಗೊತ್ತು. ಆದರೆ ನೀವೇ ಹೀಗೆ ಮೂಡ್  ಹಾಳುಮಾಡಿಕೊಂಡರೆ ಅವರಿಗೆ ಧೈರ್ಯ ಹೇಳೋರು ಯಾರು? ಅವರ ಕಷ್ಟ ಸುಖ ವಿಚಾರಿಸುವವರು ಯಾರು?”

 ಸುಬ್ಬಣ್ಣ ಬಂದ ತಕ್ಷಣ ಕೇಳಿದ,
“ಮಕ್ಕಳೆಲ್ಲೋ?”
“ಅಜ್ಜಿ-ತಾತನ ಮನೆಗೆ ಹೋಗಿದ್ದಾರೆ.”
”ನಿಮ್ತಂದೆ-ತಾಯಿ ಕೂಡ ಕಾಣಿಸ್ತಿಲ್ಲ. ಊರಿಗೆ ಹೋಗಿದ್ದಾರಾ?”
‘ಅದೊಂದು ದೊಡ್ಡ ಕಥೆ, ಇನ್ಯಾವಾಗಲಾದರೂ ಹೇಳೀನಿ ಬಿಡು.”
”ನಮ್ಮನೆ ಕಥೆಗಿಂತ ದೊಡ್ಡದಾಗಿರಲ್ಲ ಬಿಡು ಏನು ವಿಷಯ?”
“ಏನು ವಿಷಯಾಂತ ನಮಗೆ ಅರ್ಥವಾಗಿಲ್ಲ. ಜಗಳವಿಲ್ಲ. ಕದನವಿಲ್ಲ. ನಾವಿಬ್ಬರೂ ಹೊರಗೆ ಕೆಲಸ ಮಾಡಲು ಹೋಗುವುದರಿಂದ ಅವರಿಬ್ಬರಿಗೂ ಜವಾಬ್ದಾರಿ ಹೆಚ್ಚಾಗಿತ್ತು. ಅಮ್ಮನ ಸ್ವಭಾವ ಗೊತ್ತಿಲ್ಲ. ಅವಳು ಏನೂ ಹೇಳಲಿಲ್ಲ.”
“ನೀವು ಸುಮ್ಮನಿರಿ. ನಾನು ಹೇಳ್ತೀನಿ” ಎಂದ ರಮ್ಯ ಆ ದಿನದ ಘಟನೆ ಹೇಳಿದಳು.

“ನೋಡು ಆದಿ, ನಮ್ಮ ಹಿಂದಿನ ಜನರೇಷನ್‌ನವರಿಗೆ ಕೆಲಸ ಒಂದು ದೊಡ್ಡ ಸಮಸ್ಯೆಯೇ ಅಲ್ಲ. ಸೇರುಗಟ್ಟಲೆ ದೋಸೆಹಿಟ್ಟು, ಇಡ್ಲಿಹಿಟ್ಟು, ಒರಳಲ್ಲಿ ರುಬ್ಬಿದ್ದವರು. ಕೊಡಗಟ್ಟಲೆ ನೀರು ಸೇದಿದ್ದವರು. ಅಂತಹವರು ಕೆಲಸ ಹೆಚ್ಚು ಅಂತಾರಾ? ನೋ ನೋ ಅವರಿಗೆ ಬೇಕಾಗಿರೋದು ಕಾಳಜಿ ಕಣೋ.”

“ಏನೋ ಹಾಗಂದ್ರೆ?”
“ಪ್ರಾಮಾಣಿಕವಾಗಿ ಹೇಳು. ಆದಿನ ನಿಮ್ಮಮ್ಮ ತಲೆನೋವು ಅಂದ್ರು. ನಿಮ್ಮಿಬ್ಬರಲ್ಲಿ ಯಾರಾದ್ರೂ ಟ್ಯಾಬ್ಲೆಟ್ ಕೊಟ್ರಾ? ರೆಸ್ಟ್ ತೊಗೋಂತ ಉಪಚಾರ ಮಾಡಿದ್ರಾ? ನಿಮ್ತಂದೆ ತಾಯಿ ವಯಸ್ಸಾದವರು. ವರ್ಷಕ್ಕೊಂದು ಸಲ ಮೆಡಿಕಲ್ ಚೆಕಪ್ ಮಾಡಿಸಿದಾ? ನಿಮ್ಮ ತಂದೆ ನಿಮಗೆ ಹೇಳದೆ ಮೈಸೂರಿಗೆ ಹೋದರೂಂತ ನಿಂಗೆ ಸಿಟ್ಟು ಬಂತು ಅಲ್ವಾ?”

“ಬರದೇ ಇರುತ್ತದಾ?”
“ನೀವಿಬ್ಬರೂ ಹೊರಗೆ ಹೋಗುವಾಗಲೆಲ್ಲಾ ಇಂತಹ ಕಡೆಗೆ ಹೋಗ್ತೀವೀಂತ ಹೇಳಿ ಹೋಗ್ತೀರಾ?”
“ಅವರಿಗೆ ಅಂತಹದಲ್ಲಿ ಆಸಕ್ತಿ ಇಲ್ಲ……..”
“ತಪ್ಪು ಆದಿ. ನಾವು ಎಷ್ಟೇ ದೊಡ್ಡವರಾದರೂ ತಂದೆ-ತಾಯಿ ದೃಷ್ಟಿಯಲ್ಲಿ ನಾವು ಮಕ್ಕಳೇ…. ಅವರಿಗೆ ಇಳಿ ವಯಸ್ಸಿನಲ್ಲಿ ನಮ್ಮ ಪ್ರೀತಿ, ಕಾಳಜಿ, ಸಹಾಯಹಸ್ತ ಬೇಕು. ಆದರೆ ಅದನ್ನು ನಾವು ಕೊಡ್ತಿಲ್ಲ” ಅವನ ಕಣ್ಣುಗಳು ತುಂಬಿ ಬಂದವು.
“ಸುಬ್ಬು……..

ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=39743

(ಮುಂದುವರಿಯುವುದು)
ಸಿ.ಎನ್. ಮುಕ್ತಾ, ಮೈಸೂರು.

7 Responses

 1. ವಾಸ್ತವವಾಗಿ… ಮಕ್ಕಳು ಯೋಚಿಸಬೇಕಾದ ಸೂಕ್ಷ್ಮ ವಿಚಾರಗಳನ್ನು… ಪಾತ್ರ ಗಳ ಮೂಲಕ ತೆರೆದಿಡುತ್ತಾ ಸಾಗಿರುವ ಕಾದಂಬರಿ… ಕುತೂಹಲ ಹುಟ್ಟಿಸುತ್ತಾ ಸಾಗುತ್ತಿದೆ..
  ಅಪ್ತವಾಗಿದೆ…

 2. Padma Anand says:

  ಕಥೆ ಅತ್ಯಂತ ಕುತೂಹಲದಿಂದ ಮುಂದೆ ಸಾಗುತ್ತಿದೆ. ಕಂತುಗಳಿಗಾಗಿ ಕಾಯುವಂತೆ ಆಗಿದೆ.

 3. ಮುಕ್ತ c. N says:

  ನಾಗರತ್ನ ಹಾಗೆ ಪದ್ಮಾ ಆನಂದ್ ಇವರಿಗೆ ಧನ್ಯವಾದಗಳು

 4. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿ ಸಾಗುತ್ತಿದೆ ಕಥೆ

 5. ಶಂಕರಿ ಶರ್ಮ says:

  ನನ್ನ ಮೆಚ್ಚಿನ ಲೇಖಕಿ ಸಿ.ಎನ್ ಮುಕ್ತಾ ಅವರ ಕಾದಂಬರಿ ಓದುವುದೇ ಖುಷಿ. ಮುಂದಿನ ಕಂತಿಗೆ ಕಾಯುವಂತೆ ಮಾಡುತ್ತದೆ…ಧನ್ಯವಾದಗಳು ಮೇಡಂ.

 6. ತುಂಬಾ ಚೆನ್ನಾಗಿದೆ
  ವಾಸ್ತವ ಚಿತ್ರಣ ಇಲ್ಲಿದೆ

 7. ವಿದ್ಯಾ says:

  ಕಂತಿನ ಕೊನೆಯ ಭಾಗಗಳು ಇಷ್ಟ ವಾದವು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: