ಅವಿಸ್ಮರಣೀಯ ಅಮೆರಿಕ : ಎಳೆ 81

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಆಂಕರೇಜ್ (Anchorage) ಪ್ರಾಣಿ ಸಂಗ್ರಹಾಲಯ

8.7.2019ನೇ ಸೋಮವಾರ…ನಮ್ಮ ಪ್ರವಾಸದ ಕೊನೆಯ ಘಟ್ಟ ತಲಪಿದ್ದೆವು. ಅಲಾಸ್ಕಾ ರಾಜ್ಯದ  ಅತೀ ದೊಡ್ಡ ನಗರವಾದ ಈ ಆಂಕರೇಜ್ ನಗರವು ತನ್ನೊಡಲಲ್ಲಿ, ರಾಜ್ಯದ  ಅತ್ಯಂತ ಹಳೆಯ ಸಂಸ್ಕೃತಿ, ಕಲೆ, ಪರಂಪರೆಗಳನ್ನು ಸುಂದರವಾಗಿ ಹಿಡಿದಿಟ್ಟುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಜೊತೆಗೆ, ಒಂದು ಅತಿ ವಿಶೇಷವೆನಿಸುವ ಶ್ಲಾಘನೀಯ ಕಾರ್ಯವನ್ನೂ ತನ್ನೊಡಲಲ್ಲಿ ಇರಿಸಿಕೊಂಡಿದೆ. ಅದುವೇ ಪ್ರಾಣಿ ಸಂಗ್ರಹಾಲಯ. ಸುಮಾರು 25ಎಕರೆಗಳಷ್ಟು ವಿಶಾಲವಾದ ಈ ಪ್ರಾಣಿ ಸಂಗ್ರಹಾಲಯವು ಯಾವುದೇ ಲಾಭವಿಲ್ಲದೆ ನಡೆಸಲ್ಪಡುತ್ತದೆ ಹಾಗೂ ವರ್ಷವೊಂದರಲ್ಲಿ ಸುಮಾರು ಎರಡು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವರು. 1966ರಲ್ಲಿ ಅಲಾಸ್ಕಾ ವಾಸಿಯೊಬ್ಬರಿಗೆ ಸ್ಪರ್ಧೆಯೊಂದರಲ್ಲಿ ಬಹುಮಾನವಾಗಿ, 3000 ಡಾಲರ್ ಹಣ ಅಥವಾ ಒಂದು ಆನೆಮರಿ, ಎರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಲು ಸ್ಪರ್ಧೆಯ ಆಯೋಜಕರು ಸೂಚಿಸಿದರು. ಅವರು ಆನೆ ಮರಿಯನ್ನು ಪಡೆದು ಅದನ್ನು ಸಾಕಲಾರಂಭಿಸಿದರು. ಮುಂದಕ್ಕೆ, 1968ರಲ್ಲಿ ಸಾರ್ವಜನಿಕರು ಕೊಡುಗೆಯಾಗಿ ನೀಡಿದ ಹಲವು ಪ್ರಾಣಿಗಳನ್ನು ಒಗ್ಗೂಡಿಸಿ, ಮಕ್ಕಳಿಗಾಗಿ ಈ ಪ್ರಾಣಿ ಸಂಗ್ರಹಾಲಯವನ್ನು ಪ್ರಾರಂಭಿಸಿದರು. 

 ಆಂಕರೇಜ್ ನ ಪ್ರಾಣಿ ಸಂಗ್ರಹಾಲಯವು ಮಕ್ಕಳಿಗೆ ಮಾತ್ರವಲ್ಲದೆ, ಎಲ್ಲಾ ವಯೋಮಾನದವರಿಗೂ ಮುದ ನೀಡುವಂತಿದೆ. ಪೋಲಾರ್ ಬಿಳಿಕರಡಿ , ಕಾಡುನರಿ, ಹುಲಿ ಮಾತ್ರವಲ್ಲದೆ, ಅಲ್ಪಕಾ ಒಂಟೆ , Great Owl ಮತ್ತು Bald Eagle ಮುಂತಾದುವುಗಳನ್ನೆಲ್ಲ ಇಲ್ಲಿ ಕಾಣಬಹುದು. ಸ್ಥಳೀಯವಾಗಿ ಹಾಗೂ ಬೇರೆ ಕಡೆಯಿಂದ ತರಲ್ಪಟ್ಟ 50ಕ್ಕಿಂತಲೂ ಹೆಚ್ಚು ವಿವಿಧ ಪ್ರಾಣಿಗಳು, ನೂರಕ್ಕೂ ಮಿಕ್ಕಿ ಪಕ್ಷಿಗಳ ಸಂಗ್ರಹವು ಇಲ್ಲಿದ್ದರೂ, ಹೆಚ್ಚಿನವು ಅನಾಥ ಸ್ಥಿತಿಯಲ್ಲಿ ಸಿಕ್ಕಿದವುಗಳಾಗಿವೆ . ಅವುಗಳಿಗೆ ಅಗತ್ಯವಾದ ಶುಶ್ರೂಷೆ ನಡೆಸಿ ಚೆನ್ನಾಗಿ ಸಾಕುವರು. ನೀರಿನ ತೊಟ್ಟಿಯಲ್ಲಿ ಆಟವಾಡುವ ಸಮುದ್ರಸಿಂಹಗಳ(Sea Lion) ಮರಿಗಳ ತುಂಟಾಟವನ್ನು ಗಾಜಿನ ಮೂಲಕ ಹಾಗೂ ತೊಟ್ಟಿಯ ಪಕ್ಕದ ರಂಧ್ರದ ಮೂಲಕ ವೀಕ್ಷಿಸಿದೆವು. ದಟ್ಟ ಮರಗಳಿರುವ ಪುಟ್ಟ ಕಾಡಿನೊಳಗೆ ಅಡ್ಡಾಡುತ್ತಿರುವ ಒಂಟಿ ಹುಲಿಯನ್ನು, ಅಲ್ಲಿದ್ದ ಸೇತುವೆ ಮೇಲೆ ಒಂದರ್ಧ ತಾಸು ಕಾದುಕುಳಿತು ನೋಡಿ ಖುಷಿಪಟ್ಟೆವು. ಅಚ್ಚ ಬಿಳಿಬಣ್ಣದ ಹಿಮಕರಡಿಯು ಅಲ್ಲಿರುವ ಕೃತಕ ಗುಹೆಯಲ್ಲಿ ಆರಾಮವಾಗಿ ನಿದ್ದೆ ಹೊಡೆಯುತ್ತಿದ್ದುದರಿಂದ ಎಷ್ಟು ಕಾದು ಕುಳಿತರೂ ನನ್ನ ಕಣ್ಣಿಗೆ ಬೀಳಲೇ ಇಲ್ಲ ನೋಡಿ. ಆದರೆ ನನ್ನ ಹಿಂದಿದ್ದ  ಮಗಳಿಗೆ ಅರ್ಧತಾಸು ಬಿಟ್ಟು ಅದು ಕಾಣಸಿಕ್ಕಿದ್ದರಿಂದ, ಅವಳು ತನ್ನ ಚರವಾಣಿಯಲ್ಲಿ ತೆಗೆದ ಚಿತ್ರವನ್ನು  ಮಾತ್ರ ನೋಡುವ ಭಾಗ್ಯ ನನ್ನದಾಯಿತು. ಪೂರ್ತಿ ಪ್ರಾಣಿಸಂಗ್ರಹಾಲಯವು ಬಹಳ ಕಾಳಜಿಯಿಂದ ನಡೆಸಲ್ಪಟ್ಟಿದ್ದರೂ, ನಿರೀಕ್ಷಿತ ಮಟ್ಟದ ಅಚ್ಚುಕಟ್ಟು, ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯವಾಗಿ, ಇಲ್ಲಿರುವ ಪ್ರಾಣಿಗಳು ಪೂರ್ಣ ಆರೋಗ್ಯದಲ್ಲಿ ಇಲ್ಲದೆ, ಆರೈಕೆಯಲ್ಲಿರುವುದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ಕೊನೆಯ ಹಂತದಲ್ಲಿ ಅತೀ ಅನಾರೋಗ್ಯದಿಂದ ಬಳಲುತ್ತಿದ್ದ ಒಂದೆರಡು ಒಂಟೆಗಳು ಚಿಕಿತ್ಸೆ ಪಡೆಯುತ್ತಿದ್ದುದು ಗಮನಕ್ಕೆ ಬಂದಿತು. ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದರೂ, ಕಡಿಮೆಯಿತ್ತು. ಸಾಧ್ಯವಿದ್ದವರು ದೇಣಿಗೆ ನೀಡಲು ಅವಕಾಶವಿತ್ತು. ಸ್ವಾಗತ ಕಛೇರಿಯ ಮುಖ್ಯದ್ವಾರದ ಬಳಿ ನಾಣ್ಯವೊಂದನ್ನು ಹಾಕಿದರೆ, ಶಬ್ದ ಮಾಡುತ್ತಾ ಸುರುಳಿ ಸುರುಳಿಯಾಗಿ ಡಬ್ಬದೊಳಗೆ ಬೀಳುವಂತಹ ವ್ಯವಸ್ಥೆಯ ಯಂತ್ರವು ಮಕ್ಕಳಿಗೊಂಡು ಮೋಜಿನ ಆಟವಾಗಿ ತೋರುತ್ತಿತ್ತು. ಇದರಿಂದಾಗಿ, ಮೊಮ್ಮಗಳ ಕೈಯಿಂದ ಹಲವು ಸೆಂಟ್ಸ್ ನಾಣ್ಯಗಳು ಡಬ್ಬದ ಹೊಟ್ಟೆ ಸೇರಿದವು!


 ಈ ಪ್ರಾಣಿ ಸಂಗ್ರಹಾಲಯದಿಂದ ಹೊರ ಬಂದಾಗ, ಅಸಹಾಯಕ, ರೋಗಿಷ್ಟ ಪ್ರಾಣಿ ಪಕ್ಷಿಗಳ ಆರೈಕೆಯಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಬಗ್ಗೆ ಬಹಳ ಅಭಿಮಾನವೆನಿಸಿತು. ಜೊತೆಗೇ, ಅವುಗಳ ದಯನೀಯ ಸ್ಥಿತಿಯು ಮನಸ್ಸನ್ನು ನೋಯುವಂತೆ ಮಾಡಿದ್ದಂತೂ ನಿಜ.

ಕಾಡಿನೊಳಗೆ ನಡೆದು….

9.7.2019ನೇ ಮಂಗಳವಾರ…ಅಲಾಸ್ಕಾ ಎಂಬ ಅದ್ಭುತ ಪ್ರದೇಶದಲ್ಲಿ ನಮ್ಮ ಕೊನೆಯ ದಿನ. ಕಾಡಿನೊಳಗೆ ಕೇಬಲ್ ಕಾರು ಇದೆ ಎಂದರೇನೇ ಕುತೂಹಲ. ಆದರೆ ಇದು ಯಾಂತ್ರಿಕವಾಗಿ ಚಲಿಸಿದೆ, ಪ್ರವಾಸಿಗರೇ ತಮ್ಮ ಕೈಯಾರೆ ಚಲಿಸುವಂತಹ ವಿಶೇಷವಾದ ಕೇಬಲ್ ಕಾರು ಎಂದಾಗ; ಬಹಳ ಆಸಕ್ತಿಯಿಂದಲೇ ಅದನ್ನು ನೋಡಲು ನಮ್ಮ ತಂಡ ಹೊರಟಿತು. ಮಾರ್ಗಮಧ್ಯದಲ್ಲಿ ಅಲ್ಲಿಯ ಪ್ರಸಿದ್ಧ ಪ್ರಾಣಿಯಾದ ಮೂಸ್ ನ  ದೊಡ್ಡದಾದ ಕೊಂಬುಗಳನ್ನು ರಸ್ತೆ ಪಕ್ಕದಲ್ಲಿ ಅಚ್ಚುಕಟ್ಟಾಗಿ ಇರಿಸಿರುವುದು ಗಮನಸೆಳೆಯಿತು. ಮಕ್ಕಳೆಲ್ಲ ಅವುಗಳ ಬಳಿ ಹೋಗಿ ಮುಟ್ಟಿ, ತಟ್ಟಿ, ಅದರೊಡನೆ ನಿಂತು ಫೊಟೋ ತೆಗೆಸಿ ಸಂತಸಗೊಂಡರು. ನಮ್ಮ ವಾಹನವು ನಗರದ ಸರಹದ್ದನ್ನು ದಾಟಿ, ಹೊರಭಾಗದ ರಸ್ತೆಯಲ್ಲಿ ಸುಮಾರು ಐದು ಮೈಲು ಚಲಿಸಿದಾಗ , ರಸ್ತೆಯ ಇಕ್ಕೆಲಗಳಲ್ಲಿಯೂ ದಟ್ಟವಾದ ಕಾಡು ಗೋಚರಿಸಿತು. ಒಂದು ದೊಡ್ಡ ತಿರುವಿನಲ್ಲಿ ವಾಹನವನ್ನು ನಿಲ್ಲಿಸಿದಾಗ; ಅಲ್ಲಿಂದ ಒಂದು ಕಿ. ಮೀ. ಕಾಡಿನೊಳಗೆ ನಡೆದು ಹೋಗಬೇಕೆಂದು ತಿಳಿದುಬಂತು. ವಾಹನ ನಿಲ್ಲಿಸಿದ ಜಾಗದಲ್ಲಿ ರಸ್ತೆ ಪಕ್ಕದಲ್ಲಿ ಒಂದು ವಿಶೇಷವನ್ನು ಗಮನಿಸಿದೆ….ಅದುವೇ ಶೂವನ್ನು ಸ್ವಚ್ಛಗೊಳಿಸುವ ಬ್ರಶ್ ಇರುವ ಯಂತ್ರ. ಕಾಡಿನೊಳಗೆ ನಡೆದು ಬಂದಾಗ ಅದಕ್ಕೆ ತಗಲಿದ ಕೆಸರು; ಆ ಬಳಿಕ ಅವರು ಕುಳಿತುಕೊಳ್ಳುವ ವಾಹನವನ್ನು ಗಲೀಜು ಮಾಡುವ ಸಾಧ್ಯತೆ ಇರುವುದರಿಂದ, ಅದನ್ನು ಸ್ವಚ್ಛಗೊಳಿಸಲು ಇದನ್ನು ಬಳಸಲಾಗುವುದು.  ನಿಜಕ್ಕೂ ಇದು ಒಂದು ಒಳ್ಳೆಯ ವ್ಯವಸ್ಥೆ ಎನಿಸಿತು. ಈ ಕಾಡಿನ ನಡುವೆಯೂ ಸ್ವಚ್ಛತೆಗೆ ಪ್ರಾಶಸ್ತ್ಯ ನೀಡಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯವಾಗಿದೆ ಅನ್ನಿಸುವುದಿಲ್ಲವೇ?.

(ಮುಂದುವರಿಯುವುದು….)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:   https://www.surahonne.com/?p=39683

-ಶಂಕರಿ ಶರ್ಮ, ಪುತ್ತೂರು

8 Responses

 1. ಎಂದಿನಂತೆ ಪ್ರವಾಸಕಥನ ಓದಿಸಿಕೊಂಡು ಹೋಯಿತು… ನಿರೂಪಣೆ ಸೊಗಸಾಗಿ ಮೂಡಿಬಂದಿದೆ..ಚಿತ್ರವೊಂದು ಪೂರಕವಾಗಿದೆ…ಕಾಡಿನಲ್ಲಿಯೂ ಸ್ವಚ್ಛತೆಯ ವ್ಯವಸ್ಥೆ… ಸೋಜಿಗ ತಂದಿತು ಶಂಕರಿ ಮೇಡಂ

  • ಶಂಕರಿ ಶರ್ಮ says:

   ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು… ನಾಗರತ್ನ ಮೇಡಂ

 2. ನಯನ ಬಜಕೂಡ್ಲು says:

  Nice

 3. Padmini Hegde says:

  ಒಟ್ಟಾರೆ ಪರಿಸರದ ಎರಡು ಮುಖ ಜೀವಿಗಳ ಸಂರಕ್ಷಣೆ. ಕಾಡಿನ ರಕ್ಷಣೆ. ಇವುಗಳ ವರ್ಣನೆ ಚೆನ್ನಾಗಿದೆ

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗಳಿಗೆ ನಮಿಸಿದೆ, ಪದ್ಮಿನಿ ಮೇಡಂ.

 4. ಪದ್ಮಾ ಆನಂದ್ says:

  ಅಸಹಾಯಕ ಪ್ರಾಣಿಗಳನ್ನು ರಕ್ಷಿಸಿ ಕಾಪಿಡುವ ಪರಿ ನಿಜಕ್ಕೂ ಅನುಕರಣೀಯ. ಎಂದಿನಂತೆ ಅಮೆರಿಕೆಯ ವಿಶೇಷತೆಗಳನದನು ಕಣ್ಣ ಮುಂದೆ ತರುವ ಪ್ರವಾಸೀ ಕಥನ ಸರಾಗವಾಗಿ ಓದಿಸಿಕೊಂಡಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: