ಕೃತಿ ಪರಿಚಯ:’ನೆನಪಿನ ಹೆಜ್ಜೆಗಳು’, ಡಾ.ಎಸ್.ಸುಧಾ ರಮೇಶ್‌

Share Button


ಡಾ.ಎಸ್.ಸುಧಾರಮೇಶ್‌ ಅವರ‌ ಆತ್ಮಕಥನ “ನೆನಪಿನ ಹೆಜ್ಜೆಗಳು” ಕೃತಿ ಪರಿಚಯ:

ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ।
ಅಕ್ಕರದ ಬರಹಕ್ಕೆ ಮೊದಲಿಗನದಾರು? ॥
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ।
ದಕ್ಕುವುದೆ ನಿನಗೆ ಜಸ? – ಮಂಕುತಿಮ್ಮ

ಎಂಬ ಆಚಾರ್‍ಯ ಡಿವಿಜಿಯವರ ಕಗ್ಗದ ಸಾಲುಗಳನ್ನು ಸ್ಮರಿಸುತ್ತ,

ವಾಗಾರ್ಥವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತಿ ಪರಮೇಶ್ವರೌ


ವಾಕ್ ಮತ್ತ ಅರ್ಥಗಳ ಸಮ್ಮಿಲನವೂ, ಜಗತ್ತಿನ ತಂದೆತಾಯಿಗಳೂ ಆಗಿರುವ ಪಾರ್ವತಿ ಪರಮೇಶ್ವರರಿಗೆ ನಮಿಸುತ್ತ, ಆತ್ಮೀಯರೂ, ಹಿರಿಯ ಲೇಖಕಿಯೂ, ಆಗಿರುವ ಡಾ.ಎಸ್.ಸುಧಾ‌ ಅವರ‌ ಆತ್ಮಕಥೆ ನೆನಪಿನ ಹೆಜ್ಜೆಗಳು ಕೃತಿ ಕುರಿತಂತೆ ನಾಲ್ಕಾರು ನುಡಿಗಳನ್ನು ಆಡಬಯಸುತ್ತೇನೆ.

ಪುರುಷ ಸರಸ್ವತಿ ಸ್ವರೂಪರಾದ ಜ್ಞಾನವೃದ್ಧರೂ, ವಯೋವೃದ್ಧರೂ‌ ಆಗಿರುವ ನಾಡೋಜ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಗಳವರ ಸಮ್ಮುಖದಲ್ಲಿ ಮಾತನಾಡುವ ಸೌಭಾಗ್ಯ ನನಗೆ ದೊರಕಿರುವುದು ಕೇವಲ ಯೋಗವೇ ಹೊರತು ಯೋಗ್ಯತೆಯಲ್ಲ‌ ಎಂದು ಭಾವಿಸುತ್ತೇನೆ. ವಾಸ್ತವಕ್ಕೆ ಈ ಕೃತಿ ಕುರಿತು ಹಿರಿಯ ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ‌ ಅವರು ಮಾತನಾಡಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ್ದರಿಂದ‌ ಅನಿರೀಕ್ಷಿತವಾಗಿ ಈ ಅವಕಾಶ ನನ್ನದಾಗಿದೆ.

ಈಗಾಗಲೇ 8 ವಿಜ್ಞಾನ ಕೃತಿಗಳು, 6 ಸಾಹಿತ್ಯ ಕೃತಿಗಳು,2 ಮಕ್ಕಳ ಸಾಹಿತ್ಯ ಕೃತಿಗಳು, 2 ಸಂಶೋಧನಾ ಸಾಹಿತ್ಯಕೃತಿ ಸೇರಿದಂತೆ‌ ಒಟ್ಟು 18 ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಡಾ.ಎಸ್.ಸುಧಾ ಇದೀಗ ತಮ್ಮ ನೆನಪಿನ ಹೆಜ್ಜೆಗಳು ಆತ್ಮಕಥೆಯ ಮೂಲಕ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ಕೃತಿ‌ಒಟ್ಟು 300 ಪುಟಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, 21 ಅಧ್ಯಾಯಗಳಲ್ಲಿ ಬಿಚ್ಚಿಕೊಂಡಿದೆ.

ಡಾ.ಸುಧಾ ಮೂಲತ: ವಿಜ್ಞಾನ ಚಿಂತಕರಾದರೂ ಅವರೊಳಗೊಂದು ಭಾವುಕ ಮನಸ್ಸಿದೆ. ಬೇರೆಯವರ ದು:ಖ ದುಮ್ಮಾನಕ್ಕೆ ಸ್ಪಂದಿಸುವ ಅಂತ:ಕರಣವಿದೆ. ಹಾಗಾಗಿ ಅವರ ನೆನಪಿನ ಹೆಜ್ಜೆಗಳಿಗೊಂದು ಮಾನವೀಯ ಸ್ಪರ್ಶವಿದೆ. ತಾವು ಹೇಳಬೇಕಾದ್ದನ್ನು ಸರಳವಾಗಿ, ನೇರವಾಗಿ, ಶಬ್ಧಾರ್ಥಗಳ ಭಾರವಿಲ್ಲದೆ ಮನಸ್ಸಿಗೆ ಮುಟ್ಟುವಂತೆ ತಿಳಿಯಾಗಿ ಹೇಳಿದ್ದಾರೆ. ಎಷ್ಟೋ ಆತ್ಮಕಥೆಗಳಲ್ಲಿ ತಮ್ಮನ್ನು ವೈಭವೀಕರಿಸಿಕೊಳ್ಳುವ, ತಮಗೆ ಇಷ್ಟವಾಗದ್ದನ್ನು ಬಿಟ್ಟುಬಿಡುವ ಸಂದರ್ಭಗಳನ್ನು ಕಾಣಬಹುದಾಗಿದ್ದರೂ, ನೆನಪಿನ ಹೆಜ್ಜೆಗಳಲ್ಲಿ ಈ ಪರಿಸ್ಥಿತಿ ಕಂಡು ಬರದಿರುವುದು‌ ಒಂದು ವಿಶಿಷ್ಟತೆ‌ ಎನ್ನಬಹುದು. ಲೇಖಕಿ ಡಾ‌ಎಸ್.ಸುಧಾ‌ ಅವರೂ ಸಹ ಇದನ್ನೇ ಸ್ಪಷ್ಟವಾಗಿ ಹೆಜ್ಜೆ‌ ಎಣಿಸುವ ಮುನ್ನ‌ ಅಧ್ಯಾಯದಲ್ಲಿ ನಾನು ಬರೆದಿರುವುದೆಲ್ಲ ಸತ್ಯವೆಂದು ಹೇಳಲು ಬಯಸುತ್ತೇನೆ’ ಎಂಬ ಮಾತುಗಳಲ್ಲಿ ಪ್ರಮಾಣೀಕರಿಸಿದ್ದಾರೆ.

ಎಲ್ಲ ಆತ್ಮಕಥೆಗಳಂತೆ ತಮ್ಮ ಬಾಲ್ಯದ ನೆನಪುಗಳಿಂದ ಆರಂಭವಾಗುವ ಡಾ.ಸುಧಾ‌ ಅವರ ನೆನಪಿನ ಹೆಜ್ಜೆಗಳು ಬಾಲ್ಯದ ಸೊಬಗು, ಸೊಗಡನ್ನು ಚಿತ್ರಿಸುತ್ತಲೇ‌ ಇಂದು ಕಾಣೆಯೇ‌ ಆಗಿರುವ ಸ್ಲೇಟು, ಬಳಪಗಳನ್ನು‌ ಉಲ್ಲೇಖಿಸುತ್ತ, ಬಳಪವನ್ನು ಕಿವಿಯಲ್ಲಿ ಹಾಕಿಕೊಂಡ ಪ್ರಸಂಗವನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಹಳೆಯ ತಲೆಮಾರಿನ ವ್ಯಕ್ತಿಗಳು ಬಾಲ್ಯದಲ್ಲಿ ಅನುಭವಿಸಿದ ಪುಸ್ತಕದಲ್ಲಿಟ್ಟ ನವಿಲುಗರಿ ಮರಿ ಹಾಕುವುದು, ರಬ್ಬರ್‌ ಜೊತೆಗಿದ್ದ ಪೆನ್ಸಿಲ್, ನವಿಲುಗರಿ ಮರಿ ಹಾಕುವುದು, ಇಂಕಿನ ಪೆನ್, ಜಡೆಯಲ್ಲಿ ಬೆರಳು ತೂರಿಸಿ ಪಾಸು ಫೇಲು ಲೆಕ್ಕಾಚಾರ, ಕೈ ತುತ್ತಿನ ರುಚಿ, ಕೆಂಜಕ ಕುಟುಕಿದ್ದು‌ ಎಲ್ಲವನ್ನೂ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಪೆನ್ಸಿಲ್ ಮೂಲಕ ಜೀವನ ಸಂದೇಶವೊಂದನ್ನು ಕೊಡುವ ಲೇಖಕಿ ಕೈ ಇಲ್ಲದೆ ಕೇವಲ ಪೆನ್ಸಿಲ್ ನಿಂದ ಬರೆಯಲು ಸಾಧ್ಯವಿಲ್ಲ. ಪೆನ್ಸಿಲ್‌ ಜೀವನವಾದರೆ‌ ಅದನ್ನು ಕೈ ಹಿಡಿದು ಬರೆಸುವ ಕೈ ಭಗವಂತ‌ ಎನ್ನುತ್ತಾರೆ. ಪೆನ್ಸಿಲ್‌ಗಿಂತ ಅದರೊಳಗಿನ ಸೀಸ ಮುಖ್ಯ‌ಎನ್ನುತ್ತಲೇ ಬಾಹ್ಯದ ಹೊದಿಕೆಗಿಂತ ನಮ್ಮ‌ ಅಂತರಂಗ ಮುಖ್ಯ‌ ಎನ್ನುವ ಡಾ.ಸುಧಾ ಬಣ್ಣದ ಚಿಟ್ಟೆ ಹಿಡಿಯುವ, ಇಂದು ಮರೆತೇ ಹೋಗಿರುವ ಚೌಕಾಬಾರಾ, ಕುಂಟೆಬಿಲ್ಲೆ, ಮರಕೋತಿ ಆಟಗಳನ್ನು ಸ್ಮರಿಸುತ್ತಾರೆ. ‘ನಮ್ಮೂರು‌‘ ಅಧ್ಯಾಯದಲ್ಲಿ ತಮ್ಮ ಶಾಲಾಜೀವನ, ಶಿಕ್ಷಕರು, ಅಧ್ಯಾಯ ಮೂರರಲ್ಲಿ ಶಾರದಾ ವಿಲಾಸ ಕಾಲೇಜು, ಹೆಜ್ಜೆ ನಾಲ್ಕರಲ್ಲಿ ಮಾನಸಗಂಗೋತ್ರಿಯ ಮರೆಯಲಾಗದ ಅನುಭವಗಳು, ಹೆಜ್ಜೆ 5 ರಲ್ಲಿ ವೃತ್ತಿಜೀವನ ಕುರಿತಂತೆ ತಿಳಿಸುವ ಡಾ.ಸುಧಾ‌ ಅವರು ಕಾಲೇಜಿಗೆ ಕೆಲಸಕ್ಕೆ ಸೇರಿದಾಗ ಮಿಕ್ಕವರು‌ ಆಕೆಯನ್ನೂ‌ ಒಬ್ಬ ವಿದ್ಯಾರ್ಥಿನಿ ಎಂದು ಭಾವಿಸಿದ್ದನ್ನು, ಪ್ರಿನ್ಸಿಪಾಲ್ ಕೊಠಡಿ ಮುಂದೆ‌ ಓಡಾಡುವಾಗ‌ ಇಲ್ಲೆಲ್ಲ‌ ಓಡಾಡಬಾರದು‌ ಅಂತ ದಫೆದಾರ್‌ ಈರಯ್ಯ ಗದರಿದ್ದನ್ನ ಸ್ಮರಿಸಿಕೊಳ್ಳುತ್ತಾರೆ. ಗೌರ್‍ನಮೆಂಟ್‌ ಆರ್ಟ್ಸ ಮತ್ತು ಸೈನ್ಸ್‌ ಕಾಲೇಜನ್ನು ಗ್ಯಾಸ್‌ ಕಾಲೇಜು‌ ಎಂದು ಕರೆಯುತ್ತಿದ್ದುದನ್ನೂ ದಾಖಲಿಸಿರುವ ಡಾ.ಸುಧಾ ತಮ್ಮ ವೃತ್ತಿಜೀವನದ ಹಲವು ಅನುಭವಗಳನ್ನು ಮನಸ್ಪರ್ಶಿಯಾಗಿ ವಿವರಿಸಿದ್ದಾರೆ. ‘ಮುಗಿಯದ ಕಣ್ಣೀರು‌‘ ಅಧ್ಯಾಯದಲ್ಲಿ ತನ್ನ ನೆಚ್ಚಿನ ಮಗಳು ಚೈತ್ರಳನ್ನು ಕಳೆದುಕೊಂಡ ನೋವು, ಅಣ್ಣನ ದಿಢೀರ್ ಸಾವು ಅವರನ್ನು ಕಂಗಾಲಾಗಿಸುತ್ತದೆ. ಆಗೆಲ್ಲ‌ ಅವರ ಕೈ ಹಿಡಿದದ್ದು ಸಂಗೀತ, ಮತ್ತು ಸಂಶೋಧನೆ. ಅಧ್ಯಾಯ 5 ರಲ್ಲಿ ತಮ್ಮ ಸಂಶೋಧನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಂತರ ಮತ್ತೆ ಮಹಾರಾಣಿ ಕಾಲೇಜು, ಶ್ರೀರಂಗಪಟ್ಟಣ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ.

ಹೆಜ್ಜೆ 12 ರಲ್ಲಿ ನಿವೃತ್ತರಾದ ನಂತರ‌ ಉನ್ನತ ಶಿಕ್ಷಣ ಪರಿಷತ್ ನ ಸದಸ್ಯರಾಗಿ, ವಿಜ್ಞಾನಲೋಕ, ಸುರಹೊನ್ನೆಯ ಲೇಖಕರಾಗಿ, ಅಜೀಮ್ ಪ್ರೇಂಜೀ ವಿವಿಯ ಐ ವಂಡರ್ ವಿಜ್ಞಾನ ಸಂಚಿಕೆಯ‌ ಅನುವಾದ ತಂಡದ ಸದಸ್ಯರಾಗಿ, ಮೈಸೂರು ಸಾಹಿತ್ಯ ದಾಸೋಹದ ಮೂಲಕ ಪ್ರತಿ ತಿಂಗಳು ಒಂದು ಹೊಸ ಲೇಖನ ಕಟ್ಟಿಕೊಡುವ ಲೇಖಕಿಯಾಗಿ, ‘ನಿನ್ನ‌ ಅಮೃತಾ’ ನಾಟಕದ ಮೂಲಕ ಕಲಾವಿದೆಯಾಗಿ ಹಲವು ಮುಖಗಳನ್ನು ಹಂಚಿಕೊಂಡಿದ್ದಾರೆ.

ಡಾ.ಸುಧಾ‌ ಅವರಿಗೆ ಪ್ರವಾಸ‌ ಎಂದರೆ ಪಂಚಪ್ರಾಣ. ಬಹುಪಾಲು ದೇಶ ವಿದೇಶಗಳನ್ನು ಸುತ್ತಿರುವ ಡಾ.ಸುಧಾ ರಮೇಶ್‌ ದಂಪತಿ, ಮಲೇಷಿಯ, ಸಿಂಗಪುರ, ಅಮೆರಿಕ, ಯುನೈಟೆಡ್ ಅರಬ್‌ದೇಶಗಳು, ಯೂರೋಪ್, ಕಾಂಬೋಡಿಯಾ, ಶ್ರೀಲಂಕಾ, ಥಾಯ್ಲ್ಯಾಂಡ್, ಚೀನಾ, ಜಪಾನ್, ಆಸ್ಟ್ರೇಲಿಯ, ನೇಪಾಳ, ಬಾಲಿ,ದೇಶಗಳ ಪ್ರವಾಸಾನುಭವಗಳನ್ನೂ ವಿವರಿಸಿದ್ದಾರೆ. ದೇಶದೆಲ್ಲೆಡೆಯೂ ಸಂಚಾರ ಮಾಡಿರುವ ಡಾ.ಸುಧಾ ರಮೇಶ್‌ ದಂಪತಿ ಭಾರತದಲ್ಲಿನ ಪ್ರವಾಸಾನುಭವಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ಅಂಚೆ ಚೀಟಿ ಸಂಗ್ರಹ, ಪುಸ್ತಕದ‌ ಓದು,ಸಂಗೀತ, ಆನೆ ಸಂಗ್ರಹ, ಸಾಹಿತ್ಯ ರಚನೆಯ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಡಾ.ಸುಧಾ ರಮೇಶ್‌ ದಂಪತಿ 10 ವರ್ಷಗಳ ಹಿಂದೆ ತಾವು ಸ್ಥಾಪಿಸಿದ ‘ಚೈತ್ರ ಫೌಂಡೇಷನ್’ ಮೂಲಕ ನೂರಾರು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ನೆರವು, ವಿಭಿನ್ನಕ್ಷೇತ್ರದ ಸಾಧಕರಿಗೆ ನಗದಿನೊಂದಿಗೆ ಗೌರವ ಪುರಸ್ಕಾರ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುವ ವಿವರಗಳಿವೆ. ನನ್ನ ಬೇರುಗಳು ಅಧ್ಯಾಯದಲ್ಲಿ ಡಾ.ಎಸ್.ಸುಧಾ‌ ಅವರ ತವರು ಮನೆಯ ವಿವರಗಳಿವೆ. ಅಧ್ಯಾಯ 19 ರಲ್ಲಿ ಪತಿ ಕೆ.ರಮೇಶ್‌ ಅವರ ಕುಟುಂಬ ಸದಸ್ಯರ ವಿವರಗಳು, ಅವರ ಕೌಟುಂಬಿಕ ಜೀವನದ ಕುರಿತಂತೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ರಮೇಶ್‌ ಅವರ ಅಕ್ಕ ಶಾಂತಕ್ಕ ಮತ್ತು ಭಾವ ಡಾ.ವಿ.ಎಸ್.ಆಚಾರ್ಯರ ಪ್ರಭಾವ ತಮ್ಮ ಮೇಲಾದುದನ್ನು‌ ಅಧ್ಯಾಯದಲ್ಲಿ‌ ಉಲ್ಲೇಖಿಸುತ್ತಾರೆ. ಮತ್ತು ಮಗಳು ಚೈತ್ರಳ ಬಗ್ಗೆ ಬರೆಯುವಾಗ ಡಾ.ಸುಧಾ ತುಂಬ ತುಂಬ ಭಾವುಕರಾಗುತ್ತಾರೆ. ಅಧ್ಯಾಯದ ಕೊನೆಯಲ್ಲಿ ಡಾ.ಸು‌ಧಾ ಅವರ ತಂದೆಯವರ ಕೈಬರಹದ ಸಾಲುಗಳು ಮನಸ್ಸನ್ನು ತೀವ್ರ‌ ಆರ್ಧ್ರವಾಗಿಸುತ್ತವೆ. ಸ್ನೇಹದ ಕಡಲಲ್ಲಿ ಅಧ್ಯಾಯದಲ್ಲಿ ತಮ್ಮ ಗೆಳತಿಯರ ಬಗೆಗಿನ ನೆನಪುಗಳನ್ನು ಹಂಚಿಕೊಳ್ಳುವ ಸುಧಾ 21 ನೇ ಅಧ್ಯಾಯದಲ್ಲಿ ಮನೆಗೆಲಸದ ಮಾದಮ್ಮ, ಚಂದ್ರಮ್ಮ, ಚಾಮರಾಜು, ಅಶ್ವತ್ಥ, ವಿದ್ಯಾರ್ಥಿಗಳಾದ ಲೋಕೇಶ, ದಿವಾಕರ, ಸಪ್ನ, ಕಾರಿನ ಸಾರಥಿ ಪುಟ್ಟಸ್ವಾಮಿ, ಸಸ್ಯಪಾಲಕ ಮಂಟೇಸ್ವಾಮಿ ಮಾಸಿಲಾಮಣಿ ಅವರೆಲ್ಲರನ್ನು ನನ್ನ ಪ್ರೀತಿ ಪಾತ್ರರು‌ಎಂದು ಭಾವಿಸುವ ಮನೋಜ್ಞಚಿತ್ರಣವಿದೆ.

ಕೃತಿಯ ಕೊನೆಯ ಭಾಗ‌ ಉಪಸಂಹಾರದಲ್ಲಿ ಹೇಳಿರುವ ‘ಜೀವನದಲ್ಲಿ ಸಾಕಷ್ಟುದೂರ ಬಂದಿದ್ದೇನೆ..ಹಿಂತಿರುಗಿ ನೋಡಿದಾಗ ನಡೆದ ಹೆಜ್ಜೆಗಳ ಹಾದಿ ಕಾಣಿಸುತ್ತದೆ, ಹೆಜ್ಜೆಗಳು ಮುಂದೆಲ್ಲಿಗೆ ಪಯಣ ಬೆಳೆಸುತ್ತವೋ ಗೊತ್ತಿಲ್ಲ.. ಬದುಕು‌ ಒಂದು ದೀರ್ಘ ಪಯಣ, ಪಯಣ‌ ಒಂದು ದಿನ ಮುಗಿಯಲೇ ಬೇಕಲ್ಲ‌ ‘ ಎನ್ನುತ್ತಾರೆ. ಬದುಕು ನನಗೆ ಅನೇಕ ಪಾಠಗಳನ್ನು ಕಲಿಸಿದೆ. ಕಷ್ಟಗಳನ್ನು, ನೋವುಗಳನ್ನು ಜೊತೆಗೆ ಸಂತೋಷವನ್ನೂ ಅನುಭವಿಸಿದ್ದೇನೆ. ಚೈತ್ರಳ ನೆನಪು, ಕೋವಿಡ್ ಕಾಲವನ್ನು ಮರೆಯುವ ಹಾಗೆಯೇ‌ಇಲ್ಲ‌ ಎನ್ನುತ್ತ‌ ಆಚಾರ್‍ ಯಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಉಲ್ಲೇಖಿಸುತ್ತಾರೆ.

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀ ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಕಡೆಗೋಡು ನಡೆಯೆಂದ ಪದಕುಸಿಯೇ ನೆಲವಿಹುದು ಮಂಕುತಿಮ್ಮ… ಎಪ್ಪತ್ತಾದ ಮೇಲೆ ಪ್ರತಿದಿನವೂ ಬೋನಸ್, ಪ್ರತಿ ಗಂಟೆಯೂ ಬೋನಸ್‌ ಎಂದು ನುಡಿಯುವ ಡಾ.ಸುಧಾ, ಚೈತ್ರ‌ ಇಲ್ಲದೆ ಮೂವತ್ತು ಮೂರು ವಸಂತಗಳನ್ನು ಕಳೆದಿದ್ದೇನೆ.. ಮತ್ತೆ ನನ್ನ ಬಾಳಿನಲ್ಲಿ ಚೈತ್ರ ಬರಬಹುದೇ? ಗೊತ್ತಿಲ್ಲ..ಎನ್ನುವ ಮಾರ್ಮಿಕ ಸಾಲುಗಳೊಂದಿಗೆ ಆತ್ಮಕತೆಗೆ ಮಂಗಳ ಹಾಡುತ್ತಾರೆ.
ಕೊನೆಯ ಸಾಲುಗಳ ಅಂತರ್ಭಾವ ಯಾಕೋ ಗೊತ್ತಿಲ್ಲದೆ‌ ಓದುಗನ ಕಣ್ಣಂಚನ್ನು, ಹೃದಯವನ್ನು‌ಆರ್ದ್ರವಾಗಿಸುತ್ತದೆ.
ಕೃತಿಯ ಕೊನೆಯಲ್ಲಿ ಡಾ.ಸುಧಾ‌ ಅವರ ಪ್ರಕಟಿತ ಕೃತಿಗಳ ವಿವರಗಳು ಮತ್ತು 48 ಪುಟಗಳಲ್ಲಿ 294 ವರ್ಣರಂಜಿತ ಚಿತ್ರಗಳು ಮುದ್ರಣಗೊಂಡಿದ್ದು ಡಾ.ಸುಧಾ‌ ಅವರ ಬದುಕಿನ ವಿವಿಧ ಮಜಲುಗಳನ್ನು ಚಿತ್ರರೂಪದಲ್ಲಿ ಕಣ್ಣಮುಂದೆ ತರುತ್ತವೆ.

ಕೃತಿಯನ್ನು ತಮ್ಮ‌ ಅರ್ಧಾಂಗ ಶ್ರೀ ಕೆ.ರಮೇಶ್‌ ಅವರಿಗೆ ಅರ್ಪಿಸಿರುವುದು ಅತ್ಯಂತ‌ ಔಚಿತ್ಯಪೂರ್ಣವಾಗಿದೆ. ನನ್ನ ಕಷ್ಟಸುಖಗಳಲ್ಲಿ, ನೋವು ನಲಿವುಗಳಲ್ಲಿ ಜೊತೆಯಾಗಿ ಹೆಜ್ಜೆಯಿಡುತ್ತಿರುವ ಬಾಳಸಂಗಾತಿ ಮತ್ತು‌ ಆತ್ಮಸಖ ಶ್ರೀ ರಮೇಶ್‌ಅವರಿಗೆ ಎಂಬ ಸಾಲುಗಳು ಪತಿ ದೇವರ ಮೇಲಿನ ಡಾ.ಸುಧಾ‌ ಅವರ ಹಸಿರು ಪ್ರೀತಿಗೆ ಸಾಕ್ಷಿಯಾಗಿವೆ. ಒಟ್ಟಾರೆಯಾಗಿ‌ ಆತ್ಮವಿದ್ದವರು ಮಾತ್ರ‌ ಆತ್ಮಕಥೆ ಬರೆಯಬಹುದಾದರೆ ಡಾ.ಸುಧಾ ಅವರೊಳಗೊಂದು ನಿರ್ವಿಕಾರ, ನಿರಹಂಕಾರಿ ಸಾತ್ವಿಕ‌ ಆತ್ಮವಿದೆ. ಅಂತಹ‌ ಆತ್ಮಕ್ಕೆ ನಮಿಸುತ್ತ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ. ನಮಸ್ಕಾರ..


(03/03/2024 ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ, ಡಾ.ಸುಧಾ ರಮೇಶ್ ಅವರ ‘ನೆನಪಿನ ಹೆಜ್ಜೆಗಳು’ ಕೃತಿಯ ಲೋಕಾರ್ಪಣೆ ಸಂದರ್ಭದಲ್ಲಿ ಮಾಡಿದ ಕೃತಿ ಪರಿಚಯ ಭಾಷಣ)

-ರಂಗನಾಥ್, ಮೈಸೂರು

8 Responses

  1. ಡಾ.ಸುಧಾರಮೇಶ್ ಅವರ ನೆನಪಿನ ಹೆಜ್ಜೆಗಳು.. ಆತ್ಮ ಕಥನ ದ ಪರಚಯಾತ್ಮಕ ಲೇಖನ ಆ ಕೃತಿಯನ್ನು ತೆಗೆ್ಉಕೊಂಡು ಓದಲೇಬೇಕೆಂದು ಪ್ರಚೋದಿಸುವಂತಿದೆ.. ಉತ್ತಮ ವಾದ ಕೃತಿ ಪರಚಯ ಮಾಡಿಕೊಟ್ಟ ರಂಗನಾಥ ಮೈಸೂರು ಅವರಿಗೆ ಧನ್ಯವಾದಗಳು…

  2. ನಯನ ಬಜಕೂಡ್ಲು says:

    ಪುಸ್ತಕವನ್ನು ಓದುವ ಹಂಬಲ ಹುಟ್ಟಿಸುವಂತಿದೆ ಕೃತಿ ಪರಿಚಯ.

  3. Padma Anand says:

    ಡಾ.ಸುಧಾ ಅವರ ಆತ್ಮಕಥನ “ನೆನಪಿನ ಹೆಜ್ಜೆಗಳು” ಪುಸ್ತಕ ಪರಿಚಯ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಪುಸ್ತಕವನ್ನು ಓದುವ ಕುತೂಹಲ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ.

  4. ವಿದ್ಯಾ says:

    ಪರಿಚಯ ಹಿತಮಿತವಾಗಿ ಸ್ವಾರಸ್ಯ ವಾಗಿದೆ

  5. Padmini Hegde says:

    ಪುಸ್ತಕ ಪರಿಚಯ ಸ್ವಾರಸ್ಯವಾಗಿದೆ.

  6. Anonymous says:

    ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು….

  7. ಶಂಕರಿ ಶರ್ಮ says:

    “ನೆನಪಿನ ಹೆಜ್ಜೆಗಳು” ಕೃತಿಯ ವಿಮರ್ಶಾತ್ಮಕ ಪರಿಚಯವು ಸೊಗಸಾಗಿ ಮೂಡಿಬಂದಿದೆ…ಧನ್ಯವಾದಗಳು.

  8. S.sudha says:

    Thanks ರಂಗಣ್ಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: