ರುಚಿ ರುಚಿ ದೋಸೆ….

Share Button


ಥೀಮ್ : 6 ದೋಸೆ ತಿನ್ನುವಾಸೆ

ರುಚಿ ರುಚಿ ದೋಸೆ….

ಎಲ್ಲರ ಮನೆ ದೋಸೆಯೂ ತೂತೇ… ಹೌದು, ಗಾದೆ ಮಾತಲ್ಲೂ ದೋಸೆ ತೂರಿಕೊಂಡಿರುವುದು ನೋಡಿದಾಗ ದೋಸೆ ಎಂಬ ತಿಂಡಿ ಎಲ್ಲರ ಮನೆಯಲ್ಲಿಯೂ ಇದೆ ಎಂಬುದು ಸಾಬೀತಾಯ್ತು  ತಾನೇ? ಹಾಗೆಯೇ, ಹಲವಾರು ರೂಪಗಳನ್ನು ಧರಿಸಿ ಹೊಟ್ಟೆ ಸೇರುವ ಈ ತಿಂಡಿಯು, ನಮ್ಮ ಅಡುಗೆ ಕೋಣೆಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿರುವುದು ಮಾತ್ರ ಸುಳ್ಳಲ್ಲ. ಸಾಮಾನ್ಯವಾಗಿ ಎಲ್ಲಾ ಉಪಹಾರ ಗೃಹಗಳಲ್ಲಿ ನಾನಾ ರೂಪಗಳಲ್ಲಿ ಇದು ವಿಜೃಂಭಿಸುತ್ತಿರುವುದು ಸುಳ್ಳಲ್ಲ.

ಉದ್ದು, ಮೆಂತೆ, ಅಕ್ಕಿ ಸೇರಿಸಿ  ರುಬ್ಬಿ ಹುಳಿ ಬರಿಸಿದ ದೋಸೆ ಹಿಟ್ಟಿಗೆ  ಬೇರೆ ಬೇರೆಯಾಗಿ ನೀರುಳ್ಳಿ, ಟೊಮೆಟೊ, ಬೇರೆ ಬೇರೆ ತರಕಾರಿಗಳು ಇತ್ಯಾದಿಗಳನ್ನು ಸೇರಿಸಿ ಮಾಡಿದ ದೋಸೆಗಳಿಗೆ ಆಕರ್ಷಕ ಹೆಸರುಗಳನ್ನಿರಿಸಿ, ಗ್ರಾಹಕರ ಬಾಯಿಯಲ್ಲಿ ನೀರೂರುವಂತೆ ಮಾಡಿ, ತಮ್ಮ ಜೇಬು ಭರ್ತಿ ಮಾಡಿಕೊಳ್ಳುವರು. ಮಾತ್ರವಲ್ಲದೆ, ದೋಸೆ ಕಾರ್ನರ್ ಎಂಬ ಥಳಥಳಿಸುವ ಅತ್ಯಾಕರ್ಷಕ ಫಲಕದ ಕೆಳಗೆ ನಡೆಯುವ ಜಬರ್ದಸ್ತ್ ದೋಸೆ ವ್ಯಾಪಾರವಂತೂ ಕೇಳುವುದೇ ಬೇಡ… ಜನ ಮುಗಿಬಿದ್ದು ತಿಂದು ತೇಗುವರು. ಇರಲಿ ಬಿಡಿ…ನಮಗೇನು ಅಲ್ವಾ?

ನೀರುದೋಸೆ

ಇನ್ನು ನಮ್ಮ ಮನೆಗೆ ಬರೋಣ… ನಮ್ಮ ಮನೆ ದೇವರೆಂದೇ ನಾಮಕರಣ ಹೊಂದಿದ ದೋಸೆ ಎಂದರೆ, ಅದೇ ನೀರು ದೋಸೆ! ಇದು ಬರೇ ನೀರನ್ನು ಹೊಯ್ದು ಮಾಡುವ ದೋಸೆ ಅಲ್ಲ ಮಾರಾಯ್ರೆ…ಅಕ್ಕಿ ಹಾಕಲೇಬೇಕು ನೋಡಿ! ಇದು ಬರಿ ಅಕ್ಕಿ ದೋಸೆ,  ತೆಳ್ಳವು ಎಂಬಿತ್ಯಾದಿ ನಾಮಧೇಯಗಳನ್ನು ಹೊಂದಿ, ನಮ್ಮ ಬೆಳಗ್ಗಿನ ತಿಂಡಿಯ ಲೀಡರ್ ಆಗಿಬಿಟ್ಟಿದೆ.  ಈ ದೋಸೆಯು ಪುಟ್ಟ ಮಗುವಿನಿಂದ ಹಿಡಿದು ಹಲ್ಲಿಲ್ಲದ ಬೊಚ್ಚುಬಾಯಿ(ಈಗ ಕೃತಕ ಹಲ್ಲುಗಳು ನೈಸರ್ಗಿಕ ಹಲ್ಲುಗಳಿಗೆ ಸಡ್ಡು ಹೊಡೆದು ನಿಂತಿವೆಯಲ್ಲಾ?!!)  ಹಿರಿಯರಿಗೂ ಅತಿ ಪ್ರಿಯವಾದ ತಿನಿಸು. ಮಾತ್ರವಲ್ಲದೆ, ಆರೋಗ್ಯಕರ ಕೂಡಾ ಹೌದು. ಮಾಡಲು ಅತಿ ಸುಲಭ… ಜೊತೆಗೆ, ಯಾವುದೇ ಸಿಹಿ, ಖಾರ ಅಥವಾ  ಹುಳಿಯಾದ ವ್ಯಂಜನದೊಡನೆ ತಿನ್ನಲು ಭೇಷಾಗಿ ಹೊಂದಿಕೊಳ್ಳುತ್ತದೆ. ಬೆಳ್ತಿಗೆ ಅಕ್ಕಿಗೆ  ಉಪ್ಪು ಸೇರಿಸಿ ಹದವಾದ ಹಿಟ್ಟನ್ನು ಕಾವಲಿಗೆ ಮೇಲೆ ಸ್ವಲ್ಪ ಎತ್ತರದಿಂದ ರಾಚಿದಂತೆ ಹೊಯ್ಯುವುದು ಕೂಡಾ ಒಂದು ಕಲೆ. ರುಬ್ಬಿದ ಹಿಟ್ಟಿಗೆ ಹಾಕುವ ನೀರು ಕಡಿಮೆಯಾದರೆ ದೋಸೆ ಗಟ್ಟಿಯಾಗುತ್ತದೆ.  ನೀರು ಸ್ವಲ್ಪ ಜಾಸ್ತಿ ಆಯ್ತೋ.. ದೋಸೆ ಹಲುವ ರೂಪ ಧರಿಸಿ ಹೆದರಿಸುವುದಂತು ಗ್ಯಾರಂಟಿ!! ವಾರದ ಹೆಚ್ಚಿನ ದಿನಗಳಲ್ಲಿ, ನಾಳೆ ಬೆಳಗ್ಗಿನ ತಿಂಡಿ ಏನು ಎಂಬ ಚಿಂತೆ ಕಾಡತೊಡಗಿದಾಗ, ಇದೆ ಮೊದಲು ಪ್ರತ್ಯಕ್ಷವಾಗುವುದು! ಇದರ ಬಗ್ಗೆ ಅಸಡ್ಡೆ ಎಂಬುದು ಎಂದಿಗೂ ಆಗದು. ಬರೇ ಐದು ನಿಮಿಷ ಬೆಳ್ತಿಗೆ ಅಕ್ಕಿಯನ್ನು ನೆನೆ ಹಾಕಿದರೆ ಸಾಕು ನೋಡಿ! ನೆಂಟರು ಬೆಳಗ್ಗಿನ ಹೊತ್ತು ತಿಂಡಿಗೆ ಬಂದರೆ, ದಿಢೀರ್ ಆಗಿ ತಯಾರಾಗಿ ಬಿಡುವ ಅತ್ಯಂತ ರುಚಿಕರ ದೋಸೆಯಿದು.

PC : Internet

ನಮ್ಮ ಮನೆಯ ತೆಳ್ಳವು ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ, ಪೇಪರಿನಟ್ಟು ತೆಳ್ಳಗೆ, ಹತ್ತಿಯಷ್ಟು ಬೆಳ್ಳಗಿನ ನೀರುದೋಸೆಯನ್ನು ತಿಂದ ಗೆಳತಿಯರಿಗೆ ಕುತೂಹಲ ತಾಳಲಾರದೆ, ಪ್ರಾತ್ಯಕ್ಷಿಕೆಗಾಗಿ ಮನೆಗೇ ಬಂದುಬಿಟ್ಟರು ನೋಡಿ. ಅವರೆದುರಿಗೇ ಹಿಟ್ಟು ರುಬ್ಬಿ, ದೋಸೆ ಹೊಯ್ದು, ಜೊತೆಗೆ ಪಾಯಸ ಸೇರಿಸಿ ಕೊಟ್ಟಾಗ ಚಪ್ಪರಿಸಿ ತಿಂದು ಸಂತಸದಿಂದ ಹೋದುದು ಇಂದಿಗೂ ಸವಿ ನೆನಪು. ಇದರಿಂದಾಗಿ ನನಗೆ ಎರಡು ಕೋಡು ಬಂದುದಂತೂ  ನಿಜ!

ಸೀಯಾಳ/ ಬೊಂಡ ದೋಸೆ/ಎಳನೀರಿನ ಗಂಜಿ ದೋಸೆ

ಇದರದೇ ಇನ್ನೊಂದು ರೂಪ ಸೀಯಾಳ ಅಥವಾ ಬೊಂಡ ಅಥವಾ ಎಳನೀರಿನ ಗಂಜಿಯ ದೋಸೆ. ಈ ಬೇಸಿಗೆಯಲ್ಲಿ ಶರೀರ ತಂಪಾಗಿಸಲು ಮನೆಗೆ ತರುವ ಸೀಯಾಳದ ನೀರು ಕುಡಿದು ಖಾಲಿಯಾದೊಡನೆ, ಒಳಗಿನ ತಿರುಳು ತೆಳುವಾಗಿದ್ದರೆ ಮನೆ ಮಹಿಳೆಯರು ಗೆದ್ದಂತೆ! ಆದರೆ, ತಿರುಳು ದಪ್ಪವಾಗಿದ್ದರೆ ಅದರಿಂದ ಯಾವುದೇ ಅಡುಗೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ಅದನ್ನು ಬಿಸಾಡಲೂ ಮನಸ್ಸು ಬಾರದು. ಬೆಳ್ತಿಗೆ ಅಕ್ಕಿಯೊಂದಿಗೆ ಸೀಯಾಳದ ತಿರುಳು ಸೇರಿಸಿ ಉಪ್ಪು ಹಾಕಿ ರುಬ್ಬಿ ಮಾಡಿದ ಈ ಸ್ಪೆಷಲ್ ದೋಸೆಯು ಮರುದಿನ ಬೆಳಗ್ಗಿನ ಉಪಹಾರಕ್ಕೆ ರೆಡಿಯಾಗಿ ಕೂತಿರುತ್ತದೆ. ಘಮಘಮಿಸುವ, ರುಚಿಕಟ್ಟಾದ ಈ ಬೊಂಡದೋಸೆಯು ನೀರುದೋಸೆಯ ಸಹೋದರ ಎನ್ನಬಹುದು.

ಬಾಳೆಹಣ್ಣು ದೋಸೆ

ಮನೆ ಹಿತ್ತಲಿನಲ್ಲಿರುವ ಬಾಳೆಗೊನೆಯು ವಾರದಲ್ಲಿ ಪೂರ್ತಿ ಹಣ್ಣಾಗಿ ಹೊನ್ನಬಣ್ಣ ಹೊತ್ತು ನಗುತ್ತಿದ್ದರೆ ಏನು ಮಾಡಲಿ ಹೇಳಿ? ಅಕ್ಕಪಕ್ಕ ಮನೆಗಳಿಗೆಲ್ಲಾ ಸಾಕಷ್ಟು ಹಂಚಿ, ನೆನಪಾಗಲೆಲ್ಲ ತಿಂದರೂ ಮುಗಿಯದಾಗ, ಒಂದೆರಡು ದಿನಗಳಲ್ಲಿ ಕೊಳೆತು ಹಾಳಾಗುವ ಭಯ ಕಾಡತೊಡಗಿದಾಗ, ಅದರ ದೋಸೆ ಮಾಡಲು ನೆನಪಾಗುತ್ತದೆ. ಬೆಳ್ತಿಗೆ ಅಕ್ಕಿಯನ್ನು, ಸಾಕಷ್ಟು ಹಣ್ಣುಗಳೊಡನೆ ರುಬ್ಬಿ ದೋಸೆ ಮಾಡಿದರೆ ಸಿಹಿಯಾದ ದೋಸೆ ರೆಡಿ. ಆದರೆ, ಇದು ಬಹಳ ಹಠಮಾರಿ ಸ್ವಭಾವದ್ದು. ಕಾವಲಿಗೆ ಬಿಟ್ಟು ಏಳಲು ಮನ ಮಾಡದು. ನಾನಂತೂ ನಾನ್ ಸ್ಟಿಕ್ ಉಪಯೋಗಿಸುವವಳಲ್ಲ. ಜಪ್ಪಯ್ಯ ಎಂದರೂ ಕಾವಲಿಗೆ ಬಿಟ್ಟು ಏಳೆನೆಂದು ಹಟ ಹಿಡಿದಾಗ, ಅದನ್ನು ಎಬ್ಬಿಸದೆ ಬಿಡೆ ಎಂಬ ಹಟ ನನ್ನದಾಗುತ್ತದೆ. ಆಗ ಮೊಳಗುವ ಕರಾ…ಕರಾ.. ಶಬ್ದವು ಆಚೆ ಬೀದಿಗೂ ಕೇಳಿಸಿದರೆ  ನನ್ನ ತಪ್ಪೇನಿಲ್ಲ ಬಿಡಿ! ಕೊನೆಗೆ ಹೆಚ್ಚಿನ ಎಲ್ಲಾ ದೋಸೆಗಳು ಹರಿದು ಚಿಂದಿ ಚಿಂದಿಯಾಗಿ ಅಳುತ್ತಾ ಮಲಗಿದ್ದಾಗ, ನನ್ನ ಬೆವರು ಧಾರಾಕಾರವಾಗಿ ಹರಿಯಲು ಆರಂಭಿಸುತ್ತದೆ! ಆದರೆ, ಬಾಳೆಕಾಯಿ ಹಾಕಿ ಮಾಡಿದ ದೋಸೆ ತುಂಬಾ ರುಚಿಯಾಗಿದ್ದು, ಯಾವುದೇ ತಕರಾರು ಮಾಡದೆ ಸಹಕರಿಸುತ್ತದೆ.

ಬೂದುಗುಂಬಳಕಾಯಿ ದೋಸೆ

ಮನೆ ಹಿತ್ತಿಲಲ್ಲಿ ಬೆಳೆದ ಹತ್ತಾರು ಬೂದುಗುಂಬಳಕಾಯಿಗಳನ್ನು ಖಾಲಿ ಮಾಡಲು ಅಡುಗೆಯ ಜೊತೆಗೆ, ದೋಸೆಯನ್ನೂ ತಯಾರಿಸಲು ಹೊರಟೆ. ಆದರೆ ಮನೆಯವರಿಗೆ ಅದರ ವಿಶೇಷ ಪರಿಮಳ ಅಷ್ಟೊಂದು ಇಷ್ಟವಾಗುವುದಿಲ್ಲ. ಇದಕ್ಕೇನು ಉಪಾಯವೆಂದು ಯೋಚಿಸಿ ಯೂಟ್ಯೂಬ್ ಗೆಳತಿಯ ಮೊರೆ ಹೋದಾಗ ದೊರೆತ ಮಾಹಿತಿಯು, ನನ್ನ ಸಮಸ್ಯೆಯನ್ನು ಪರಿಹರಿಸಿತು ಎನ್ನಬಹುದು. ಸ್ವಲ್ಪ ಮೆಂತೆ, ಬೇಕಾದಷ್ಟು ಬೆಳ್ತಿಗೆ ಅಕ್ಕಿಯನ್ನು ನೆನೆಹಾಕಿ ಅವುಗಳನ್ನು ತುರಿದ ಕುಂಬಳಕಾಯಿ ಜೊತೆ ಉಪ್ಪು ಹಾಕಿ ಹಿಂದಿನ ದಿನವೇ ರುಬ್ಬಬೇಕು. ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಇರಿಸಿ, ಕಾವಲಿ ಮೇಲೆ ದಪ್ಪಕ್ಕೆ ಹೊಯ್ಯಬೇಕು. ಎರಡೂ ಬದಿ ಬೇಯಿಸಿದಾಗ ರುಚಿಯಾದ, ಮೆದುವಾದ ದೋಸೆ ಸಿದ್ಧ. ಈಗ ನಮ್ಮವರಿಗೆ ಇದು ಪ್ರಿಯವಾದ ದೋಸೆ ಪಟ್ಟಿಯಲ್ಲಿ ಸೇರಿದೆ ಎಂಬ ಖುಷಿ ನನಗೆ.

 ಹೀಗೆ, ಹಲವಾರು ದೋಸೆಗಳ ಬಗ್ಗೆ ಬರೆಯುತ್ತಾ ಹೋದರೆ ದೊಡ್ಡ ಪುರಾಣವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ, ಸದ್ಯಕ್ಕೆ ಬರೆಯುವುದನ್ನು ನಿಲ್ಲಿಸಿ, ಇದೋ… ದೋಸೆ ಮಾಡಲು ಹೊರಟೆ.. ನೀವೂ ಬನ್ನಿ…. ರುಚಿಯಾದ ದೋಸೆ ಸವಿಯಲು….

-ಶಂಕರಿ ಶರ್ಮ, ಪುತ್ತೂರು.

8 Responses

 1. ನಾನು ಇದುವರೆಗೆ ನೀರು ದೋಸೆ ಬಿಟ್ಟು ಮಿಕ್ಕ ದೋಸೆ ಗಳನ್ನು ತಿಂದು ರುಚಿನೋಡಿಲ್ಲ…ಮಾಡಿಯೂ ಗೊತ್ತಿಲ್ಲ ಒಂದು ಹೊಸ ರೆಸಿಪಿ ಸಿಕ್ಕಿತು.. ಅದನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಾ ಶಂಕರಿ ಮೇಡಂ …

  • ಶಂಕರಿ ಶರ್ಮ says:

   ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು… ನಾಗರತ್ನ ಮೇಡಂ. ರುಚಿಯಾದ ದೋಸೆ ಮಾಡಿರಿಸಿ…ನಾನೂ ಬರುವೆ ಮುಗಿಸಲು.

 2. ಆಶಾ ನೂಜಿ says:

  ರುಚಿಕರವಾದ ದೋಸೆ ಬಾಯಲ್ಲಿ ನೀರೂರಿಸುವ ದೋಸೆ

 3. Padma Anand says:

  ಶಂಕರಿ ಮೇಡಂ ಬರೆದ ರುಚಿ ರುಚಿ ದೋಸೆ ಬಾಯಿ ಚಪ್ಪರಿಸುವಂತಾಯಿತು. ಇದೋ ಹೊರಟೆ, ದೋಸೆಗೆ ನೆನೆಸಿಡಲು.

  • ಶಂಕರಿ ಶರ್ಮ says:

   ಹಾಂ…ಪದ್ಮಾ ಮೇಡಂ.. ದೋಸೆ ಮಾಡಾಯ್ತಾ? ನಾನು ಬರ್ತೇನೆ ನಿಮ್ಮೊಂದಿಗೆ ಚಪ್ಪರಿಸಿ ತಿನ್ನಲು..

 4. ನಯನ ಬಜಕೂಡ್ಲು says:

  ಆಹಾ.. ಬಾಯಲ್ಲಿ ನೀರೂರಿಸುವ ವೆರೈಟಿ ದೋಸೆಗಳು. ನೀರು ದೋಸೆ ಮತ್ತು ಬೊಂಡ ದೋಸೆ ಹೊಟ್ಟೆಗೆ ಹಿತವಾದರೆ, ಬಾಳೆಹಣ್ಣಿನ ದೋಸೆ ನಾಲಗೆ ಗೆ ರುಚಿ, ಬೂದು ಕುಂಬಳಕಾಯಿ ದೋಸೆ ತಂಪು. ರುಚಿಯನ್ನು ನೆನಪಿಸುವ ಬರಹ.

  • ಶಂಕರಿ ಶರ್ಮ says:

   ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು, ನಯನಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: