ಚಂದದ ಗುಣದ ಚಂದ್ರಹಾಸ

Share Button

ಪುರಾತನ ಕೇರಳ ರಾಜ್ಯದಲ್ಲಿ ‘ಮೇಧಾವಿ’ ಎಂದೊಬ್ಬ ರಾಜನಿದ್ದನು. ಈತನು ಪ್ರಜೆಗಳನ್ನು ಬಹಳ ಪ್ರೀತಿ ವಾತ್ಯಲ್ಯಗಳಿಂದ ಕಾಣುತ್ತಿದ್ದು ಪ್ರಜಾನುರಾಗಿಯಾದ್ದ ರಾಜನಾಗಿದ್ದ, ರಾಜನಿಗೆ ವಿವಾಹವಾಯ್ತು. ರಾಣಿ ಚಿತ್ರಭಾನು, ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ದೇವರೊಲುಮೆಯಂತೆ ಕಾಲಕ್ರಮದಲ್ಲಿ ಅವರಿಗೊಬ್ಬ ಮಗ ಹುಟ್ಟಿದ. ಪುತ್ರೋತ್ಸವವಾದ ಸಂತೋಷ ಒಂದೆಡೆಯಾದರೆ ಇನ್ನೊಂದೆಡೆ ದುಃಖವೂ ಆಯ್ತು. ಮಗುವು ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದು ತಂದೆಗೆ ಅರಿಷ್ಠ ಎಂದು ಅರಮನೆಯ ಜೋಯಿಸರು ಹೇಳಿದರು. ರಾಜಪುತ್ರನು ಬಹಳ ಸ್ಪುರದ್ರೂಪಿಯಾಗಿದ್ದನಲ್ಲದೆ ಎಡಗಾಲಿನಲ್ಲಿ ಆರು ಬೆರಳಿತ್ತು. ಹುಣ್ಣಿಮೆಯ ಚೆಲುವನ್ನು ನಾಚಿಸುವಂತೆ ಅವನು ಸುಂದರಾಂಗನಾಗಿದ್ದಕ್ಕೆ ಅವನಿಗೆ ಚಂದ್ರಹಾಸ ಎಂದು ನಾಮಕರಣ ಮಾಡಿದರು. ರಾಜಕುಮಾರನ ಜನ್ಮದೋಷವೋ ಎಂಬಂತೆ ಕೆಲವು ದಿನಗಳಲ್ಲಿ ರಾಜ್ಯಕ್ಕೆ ಶತ್ರುಗಳು ಮುತ್ತಿದರು. ಭಯಂಕರ ಯುದ್ಧವಾಗಿ ಮೇಧಾವಿ ಸತ್ತು ಹೋದ, ರಾಣಿಯು ತನ್ನಿಚ್ಛೆಯಂತೆ ಪತಿಯ ಚಿತೆಗೆ ಹಾರಿ ಸಹಗಮನ ಮಾಡಿದಳು. ಇದರಿಂದಾಗಿ ಬಾಲಕ ಚಂದ್ರಹಾಸನು ತಬ್ಬಲಿಯಾದನು.

ಹಿಂದೆ ರಾಜರ ಆಳ್ವಿಕೆಯಲ್ಲಿ ರಾಜ ಒಳ್ಳೆಯವನಾದರೆ, ಪ್ರಜಾ ಹಿಂತಚಿಂತಕನಾದರೆ, ಅರಸು ಕುಲವನ್ನು ಕಾಪಾಡುವುದಕ್ಕಾಗಿ ಸೇವಕರಾಗಲೀ ಪ್ರಜಾಜನರಾಗಲೀ ತಮ್ಮ ತನು-ಮನವನ್ನು ಧಾರೆಯೆರೆಯುತ್ತಿದ್ದರು. ಅವರಲ್ಲಿ ಎಷ್ಟು ತ್ಯಾಗಿಗಳು ಇರುತ್ತಿದ್ದರೆಂದರೆ; ತಮ್ಮ ಬಲಿದಾನ ಮಾಡಿಯಾದರೂ ಅರಸು ಸಂತಾನವನ್ನು ರಕ್ಷಿಸುತ್ತಿದ್ದರು. ಇಲ್ಲಿಯೂ ಹಾಗೆಯೇ ಆಯ್ತು. ಮೇಧಾವಿ ಮತ್ತು ಚಿತ್ರಭಾನು ತೀರಿಕೊಂಡ ಮೇಲೆ ತಬ್ಬಲಿಯಾದ ಅವರ ಒಂದೇ ಒಂದು ಕುಡಿಯನ್ನು ಶತ್ರು ಪಾಲಾಗಲು ಬಿಡದೆ ಆ ಮಗುವನ್ನು ಕಾಪಾಡಲು ಮುದುಕಿ ದಾದಿಯು ಮನಸ್ಸು ಮಾಡಿದಳು. ಬಾಲಕನ ಸಮೇತ ಒಬ್ಬ ರಾತ್ರೋರಾತ್ರಿ ಆ ರಾಜ್ಯಬಿಟ್ಟು ಕುಂತಳ ದೇಶಕ್ಕೆ ಪ್ರಯಾಣ ಬೆಳೆಸಿದಳು. ಮುದುಕಿ ಅಲ್ಲಿ ಒಂದು ಮುರುಕು ಮಂಟಪದಲ್ಲಿದ್ದು ತಿರುಪೆ ಬೇಡಿ ಬಾಲಕನನ್ನು ಪೋಷಿಸತೊಡಗಿದಳು. ದೈವಚಿತ್ತ ಏನೆಂದು ಹೇಳಬೇಕು! ರಾಜಕುಮಾರ ಸುಖದ ಸುಪ್ಪತ್ತಿಗೆಯಲ್ಲಿರಬೇಕಾದವ ಹರಕಲು ಬಟ್ಟೆ, ತಿರುಪೆಯ ಅನ್ನದಿಂದ ಜೀವಿಸುವ ಹಾಗಾಯ್ತು. ಹೀಗೆ ಕೆಲ ಕಾಲ ಕಳೆಯಲು ಮತ್ತೂ ದುರ್ದೈವ ಬೆನ್ನು ಬಿಡಲಿಲ್ಲ. ಯಾವುದೋ ಕಾಯಿಲೆಯಿಂದ ಚಂದ್ರಹಾಸನ ಸಾಕು ತಾಯಿಯೂ ಸ್ವರ್ಗಸ್ಥಳಾದಳು. ಈಗ ಹುಡುಗನಿಗೆ ದಿಕ್ಕೇ ಇಲ್ಲದಂತಾಯ್ತು. ಈ ಬಾಲಕನನ್ನು ಊರವರು ಪೋಷಿಸತೊಡಗಿದರು. ಊರ ಮಕ್ಕಳೊಂದಿಗೆ ತಾನೂ ಆಟಕ್ಕೆ ಸೇರಿಕೊಳ್ಳುತ್ತಿದ್ದ.

ಆದರೆ ಬೇರೆ ಹುಡುಗರೆಲ್ಲ ಚಿನ್ನಿದಾಂಡು, ಗೋಲಿ, ಬುಗರಿ ತಂದು ಆಡುವಾಗ ತನಗೂ ಬೇಕೆನಿಸುತ್ತಿತ್ತು. ಆದರೆ ಯಾರು ಕೊಡುತ್ತಾರೆ? ತನಗೆ ತಾನೇ ದುಃಖ ಪಡುತ್ತಿದ್ದಾಗ ಆ ಬಾಲಕನಿಗೆ ಒಂದು ಪುಟ್ಟದಾದ ಸಾಲಿಗ್ರಾಮ ಬಿದ್ದು ಸಿಕ್ಕಿತು. ಅದನ್ನು ರಕ್ಷಣೆ ಮಾಡುವುದಕ್ಕಾಗಿ ಚಂದ್ರಹಾಸ ತನ್ನ ಬಾಯೊಳಗೇ ಆ ಸಾಲಿಗ್ರಾಮವನ್ನು ಬಚ್ಚಿಟ್ಟುಕೊಳ್ಳುತ್ತಿದ್ದ. ಇದರ ಮಹಿಮೆಯಿಂದ ಅವನಿಗೇ ಜಯ ದೊರೆಯುತ್ತಿತ್ತು.

ಆ ಕುಂತಳ ದೇಶದ ರಾಜನಿಗೆ ಒಬ್ಬ ಮಂತ್ರಿಯಿದ್ದ. ಆತನ ಹೆಸರು ದುಷ್ಟಬುದ್ಧಿ, ಅವನು ಹೆಸರಿಗೆ ತಕ್ಕ ಹಾಗೆಯೇ ಇದ್ದ. ಅವನಿಗೆ ಇಬ್ಬರು ಮಕ್ಕಳು. ಮಗನ ಹೆಸರು ಮದನ ಮಗಳು ವಿಷಯೆ. ಆ ರಾಜ್ಯದ ಅರಸನಿಗೆ ಗಂಡು ಸಂತಾನವಿಲ್ಲದುದರಿಂದ ತನ್ನ ಮಗನಿಗೇ ರಾಜ್ಯಾಡಳಿತ ಸಿಗಬೇಕೆಂದು ದುಷ್ಟಬುದ್ಧಿ ಹೊಂಚು ಹಾಕುತ್ತಿದ್ದ. ಒಂದು ದಿನ ಅವನ ಮನೆಯಲ್ಲಿ ಯಾವುದೋ ವಿಶೇಷ ಔತಣಕ್ಕೆ ಅನೇಕ ಬ್ರಾಹ್ಮಣರೂ ಬಂದಿದ್ದರು. ಬೇರೆ ಮಕ್ಕಳೊಂದಿಗೆ ಆಡುತ್ತಿದ್ದ ಒಬ್ಬ ಹರುಕು-ಮುರುಕು ಬಟ್ಟೆ ಧರಿಸಿದ ಬಾಲಕನಾದರೂ ಒಂದು ವಿಶೇಷ ಕಳೆ ಮುಖದಲ್ಲಿ ಎದ್ದು ಕಾಣುತ್ತಿದ್ದ ಚಂದ್ರಹಾಸನನ್ನು ಜ್ಯೋತಿಷ ಬಲ್ಲ ಬ್ರಾಹ್ಮಣ ನೋಡಿದ. ಸಾಧಾರಣ ನಾಲೈದು ವರ್ಷದ ಆ ಬಾಲಕನನ್ನು ಬ್ರಾಹ್ಮಣ ತನ್ನ ಬಳಿಗೆ ಕರೆದು ಅಪಾದ ಮಸ್ತಕ ನೋಡಿದ. ಬಾಯರಳಿಸಿ ವೀಕ್ಷಿಸಿದ. ಇದನ್ನು ಕಂಡ ದುಷ್ಟಬುದ್ಧಿ ಏನೆಂದು ವಿಚಾರಿಸಿದಾಗ ‘ಮಂತ್ರಿವರ್ಯರೇ ಈ ಬಾಲಕನಾರು? ಇವನಿಗೆ ಚಕ್ರವರ್ತಿಯಾಗುವ ಯೋಗವಿದೆ. ಮುಂದೆ ಇದೇ ರಾಜ್ಯದ ರಾಜನಾದರೂ ಆಶ್ಚರ್ಯವಿಲ್ಲ’ ಎಂದು ನುಡಿದ. ಈ ಮಾತನ್ನು ಕೇಳಿದ ದುಷ್ಟಬುದ್ಧಿಗೆ ಒಳಗೊಳಗೇ ಮತ್ಸರ ಉಂಟಾಯ್ತು. ಬಂದಿದ್ದವರೆಲ್ಲ ನಿರ್ಗಮಿಸಿದಾಗ ದುಷ್ಟಬುದ್ಧಿಗೆ ತನ್ನ ದುರ್ಗುಣ ಹೆಡೆ ಎತ್ತಿತ್ತು. ಗೋಪ್ಯವಾಗಿ ಚಾಂಡಾಲರನ್ನು ಕರೆದು ಆ ಮಗುವನ್ನು ಕಾಡಿಗೊಯ್ದು ಈಗಲೇ ಮುಗಿಸಿ ಬರಬೇಕೆಂದು ಆಜ್ಞಾಪಿಸಿದ. ಮಂತ್ರಿಯ ಆದೇಶದಂತೆ ಮಗುವನ್ನು ಕಾನನಕ್ಕೊಯ್ದ ಕಟುಕರಿಗೆ ಕರುಣೆ ಉಂಟಾಯ್ತು. ಬಹುಶಃ ಅವನ ಬಾಯೊಳಗಿದ್ದ ಸಾಲಿಗ್ರಾಮದ ಫಲವೋ ಎಂಬಂತೆ ಚಾಂಡಾಲರು ಬಾಲಕನ  ಎಡಗಾಲಿನಲ್ಲಿದ್ದ ಹೆಚ್ಚುವರಿ ಬೆರಳನ್ನು ಕತ್ತರಿಸಿ ರಾಜನಿಗೆ ಕುರುಹು ತೋರಿಸುವುದಕ್ಕಾಗಿ ಅರಮನೆಗೆ ನಿರ್ಗಮಿಸಿದರು. ಇತ್ತ ಬಾಲಕ ಅಳುತ್ತ ದಿಕ್ಕು ಕಾಣದೆ ನಿಂತಿದ್ದ. ಆಗ ದೈವ ಸಹಾಯ ಬಂದೊದಗಿತು.

ಸ್ವಲ್ಪ ಹೊತ್ತಾದ ಮೇಲೆ ಕಾಡಿಗೆ ಬೇಟೆಗಾಗಿ ಬೇಡರ ಗುಂಪೊಂದು ಬಂತು. ಬೇಡರ ರಾಜ ಕುದುರೆಯೇರಿ ಬಂದವನು ಅಳುತ್ತ ನಿಂತಿದ್ದ ಬಾಲಕನನ್ನು ಕಂಡ. ಮಗುವಿನ ಹತ್ತಿರಕ್ಕೆ ಬಂದು ಮಾತನಾಡಿಸಿದಾಗ ಅಳುತ್ತ ಹೇಳಿದ ಬಾಲಕನಿಂದ ಅಷ್ಟಿಷ್ಟು ವಿಷಯ ತಿಳಿಯಿತು. ಆ ರಾಜನ ಹೆಸರು ಕುಳಿಂದಕ. ಕುಂತಳ ನಗರದ ಚಕ್ರವರ್ತಿಯ ಕೈಕೆಳಗಿದ್ದ ಸಾಮಂತ. ಆತನಿಗೆ ಮಕ್ಕಳಿರಲಿಲ್ಲ. ದೇವರೇ ಈ ಮಗುವನ್ನು ಅನುಗ್ರಹಿಸಿದ ಎಂಬ ಸಂತೋಷದಿಂದ ಅವನನ್ನು ಕರೆದುಕೊಂಡು ಅರಮನೆಗೆ ಹೋದ, ಆತನ ಹೆಂಡತಿಯೂ ಸಂತೋಷದಿಂದ ಮಗುವನ್ನು ಸ್ವೀಕರಿಸಿ ಆರೈಕೆ ಮಾಡಿದಳು. ಕತ್ತಲೆಯ ಮನೆಗೆ ಬೆಳ್ಳಿ ಮೂಡಿದಂತೆ ಬಂದ ಚಂದ್ರಹಾಸ, ರಾಜ ಯೋಗ್ಯವಾದ ವಿದ್ಯಾಭ್ಯಾಸಕ್ಕೂ ಏರ್ಪಾಡಾಯಿತು.

ಕಾಲಕ್ರಮೇಣ ಚಂದ್ರಹಾಸ ದೊಡ್ಡವನಾದ. ಕುಳಿಂದಕ ಮುದುಕನಾಗುತ್ತ ಬಂದ. ಕುಳಿಂದಕನು ಒಂದು ದಿನ ಮಗನನ್ನು ಹತ್ತಿರ ಕುಳ್ಳಿರಿಸಿಕೊಂಡು ‘ಮಗೂ, ನನಗೆ ವಯಸ್ಸಾಯ್ತು. ಈ ಚಂದನಾವತಿಯ ರಾಜ್ಯ ವ್ಯವಹಾರಗಳನ್ನೆಲ್ಲ ನೀನು ಚೆನ್ನಾಗಿ ನೋಡಿಕೊಳ್ಳಬೇಕು. ಕುಂತಳ ನಗರದ ಚಕ್ರವರ್ತಿಗೆ ನಾವು ಅಧೀನರಾಗಿದ್ದೇವೆ. ಪ್ರತಿ ವರ್ಷವೂ ನಾವು ಅವರಿಗೆ ಕಪ್ಪಕಾಣಿಕೆಗಳನ್ನು ಕಳುಹಿಸಬೇಕಾಗಿದೆ. ಅಧಿಕಾರಿಗಳ ಮುಖಾಂತರ ಈ ಹಣವನ್ನು ಅಲ್ಲಿಗೆ ಕಳುಹಿಸಿಕೊಡು’ ಎಂದು ತಿಳಿಸಿದ. ಚಂದ್ರಹಾಸನು ಅಪ್ಪನ ಮಾತಿನಂತೆ ಕಳುಹಿಸಿಕೊಟ್ಟ, ಕಾಣಿಕೆಗಳನ್ನು ಒಯ್ದು ಸೇವಕರು ನೇರವಾಗಿ ದುಷ್ಟಬುದ್ಧಿಗೆ ಒಪ್ಪಿಸಿ ‘ರಾಜಕುಮಾರ ಚಂದ್ರಹಾಸ ಕಳುಹಿಸಿಕೊಟ್ಟಿದ್ದು’ ಎಂದರು. ಇವನಾರು? ರಾಜಕುಮಾರ! ಎಂದು ವಿಚಾರಿಸಿದಾಗ ನಮ್ಮ ರಾಜರಿಗೆ ಕಾಡಿನಲ್ಲಿ ಸಿಕ್ಕಿದ ಮಗ! ದುಷ್ಟಬುದ್ದಿ ಕೂಲಂಕುಷ ಯೋಚಿಸಿದಾಗ ಈ ಚಂದ್ರಹಾಸನೆಂದರೆ ತಾನು ಕಟುಕರಿಗೆ ತಲೆ ಕಡಿಯಲು ಒಪ್ಪಿಸಿದ ಮಗ ಎಂಬುದು ಅನುಮಾನವುಂಟಾಗಿ ಯೋಚನೆ ಬಲವಾಯಿತು.

ಕೆಲವು ದಿನಗಳ ಬಳಿಕ ಈ ರಾಜಕುಮಾರನನ್ನು ನೋಡುವ ನೆಪದಲ್ಲಿ ದುಷ್ಟಬುದ್ಧಿ ಚಂದನಾವತಿಗೆ ಹೊರಟ. ಅಪ್ಪನ ದಿಢೀರನೆ ಹೊರಟ ಪ್ರಯಾಣವನ್ನು ಮಗ ಮದನ ವಿಚಾರಿಸಿದಾಗ ಮಗಳಿಗೆ ಗಂಡು ನೋಡುವ ನೆಪ ಹೇಳಿ ಜಾರಿಕೊಂಡ.

ದುಷ್ಟಬುದ್ಧಿ ಚಂದನಾವತಿಗೆ ಬಂದ. ಕುಳಂದಕನು ಆತನನ್ನು ಸತ್ಕರಿಸಿದ, ತನ್ನ ಮಗನಾದ ಚಂದ್ರಹಾಸನನ್ನು ಪರಿಚಯಿಸಿದ. ಆತನನ್ನು ಸೂಕ್ಷ್ಮವಾಗಿ ಆತನ ಎಡಗಾಲನ್ನು ಗಮನಿಸಿದ. ಅವನ ಸಂಶಯ ಈಗ ಗಟ್ಟಿಯಾಯ್ತು. ಇರಲಿ, ಇವನಿಗೆ ಬೇರೊಂದು ಉಪಾಯ ಮಾಡಬೇಕೆಂದು ತೀರ್ಮಾನಕ್ಕೆ ಬಂದ.

ಚಂದ್ರಹಾಸನ ಮುಖಾಂತರ ಮಗನಾದ ಮದನನಿಗೆ ಒಂದು ಕಾಗದ ಬರೆದು ಕಳಿಸಿದ. ಕಾಗದದಲ್ಲಿ ಈ ಕಾಗದ ತರುವಾತನಿಗೆ ವಿಷ ಕೊಟ್ಟು ಬಿಡು. ಯಾರು? ಏಕೆ? ಎಂದು ಏನೂ ವಿಚಾರಿಸುವ ಪ್ರಯತ್ನ ಮಾಡಬೇಡ’ ಎಂದು ಬರೆದಿದ್ದ. ಚಂದ್ರಹಾಸನು ಚಂದನಾವತಿಯಿಂದ ಕುಂತಳ ನಗರಕ್ಕೆ ಕುದುರೆ ಏರಿ ಹೊರಟ. ಬಹುದೂರ ಪ್ರಯಾಣ ಮಾಡಿದ ಆಯಾಸ ಪರಿಹಾರಕ್ಕಾಗಿ ಊರ ಮುಂದಿನ ಉದ್ಯಾನವನದಲ್ಲಿ ಕುದುರೆಯನ್ನು ಮೇಯಲು ಬಿಟ್ಟು ತಾನು ಒಂದು ಮರದ ಕೆಳಗೆ ಮಲಗಿದ. ಕೂಡಲೇ ಅವನಿಗೆ ನಿದ್ದೆ ಬಂತು. ಸ್ವಲ್ಪ ಹೊತ್ತಿನಲ್ಲಿ ರಾಜಕುಮಾರಿ ಚಂಪಕಮಾಲಿನಿಯೊಂದಿಗೆ ಆಕೆಯ ಸ್ನೇಹಿತೆಯಾದ ವಿಷಯೆ ಕೂಡಾ ಇದ್ದಳು. ಅಲ್ಲಲ್ಲಿ ತಿರುಗುತ್ತಾ ಬಂದು ದುಷ್ಟಬುದ್ಧಿಯ ಮಗಳು ‘ವಿಷಯೆ’ ಮರದ ಕೆಳಗೆ ಮಲಗಿದ ರಾಜಕುಮಾರನನ್ನು ನೋಡಿದಳು! ಅವನ ಅಂದಚೆಂದಕ್ಕೆ ಸೋತಳು. ದೈವೇಚ್ಛೆ ಕೂಡಿದರೆ ತಾನು ಈತನನ್ನೇ ಮದುವೆಯಾಗಬೇಕೆಂದು ಕೊಂಡಳು. ಸೂಕ್ಷ್ಮವಾಗಿ ನೋಡಿದಾಗ ಆತನ ವಸ್ತ್ರದ ಮಡಿಕೆಯಲ್ಲಿ ಒಂದು ಲಕೋಟೆ ನೋಡಿದಳು. ‘ಮದನ ಕುಮಾರನಿಗೆ ಎಂದಿತ್ತು. ಕುತೂಹಲಕ್ಕೆ ತೆಗೆದು ಓದಿದಳು. ‘ಕಾಗದ ತರುವವನಿಗೆ ತಡ ಮಾಡದೆ ವಿಷವನ್ನು ಕೊಡು’ ಎಂದಿತ್ತು. ಈತನಿಗೆ ಯಾಕೆ ವಿಷ ಕೊಡಬೇಕು! ತಪ್ಪಿ ಹೋಗಿ ಹಾಗೆ ಆಗಿರಬೇಕು. ‘ವಿಷಯೆ’ಯನ್ನು ಕೊಡು ಎಂದು ತನ್ನ ಕಣ್ಣಿನ ಕಾಡಿಗೆಯಿಂದ ಸರಿ ಮಾಡಿ ಬರೆದು ವಾಪಾಸು ಹಾಗೆಯೇ ಇಟ್ಟು ಮನೆಗೆ ಹಿಂತಿರುಗಿದಳು.

ಸ್ವಲ್ಪ ಹೊತ್ತಲ್ಲಿ ಎಚ್ಚರಗೊಂಡ ಚಂದ್ರಹಾಸ ಕುಂತಳ ನಗರಕ್ಕೆ ಪ್ರವೇಶಿಸಿ ಮದನನಿಗೆ ಕಾಗದವನ್ನು ನೀಡಿದ. ಕಾಗದವನ್ನು ಓದಿದ ಮದನ ಸಂತೋಷಗೊಂಡು ತಂಗಿಯ ಮದುವೆಗೆ ಏರ್ಪಾಡು ಮಾಡಿದ. ಒಂದು ಶುಭ ಮುಹೂರ್ತದಲ್ಲಿ ವಿಷಯೆ ಮತ್ತು ಚಂದ್ರಹಾಸರ ಮದುವೆ ನಡೆದೇ ಹೋಯಿತು.

ಮಹಾಮಂತ್ರಿಯಾದ ದುಷ್ಟಬುದ್ಧಿ ಕುಂತಳ ನಗರಕ್ಕೆ ಪ್ರವೇಶಿಸಿದಾಗ ಆತನಿಗೆ ಆಶ್ಚರ್ಯವೂ ದುಃಖವೂ ಕಾದಿತ್ತು. ಯಾರನ್ನು ತಾನು ಕೊಲ್ಲಬೇಕೆಂದು ಸಂಚು ಹೂಡಿದ್ದೆನೋ ಆತ ತನ್ನ ಅಳಿಯನಾಗಿ ಬಿಟ್ಟಿದ್ದಾನೆ. ಎರಡನೇ ಬಾರಿಯೂ ದುಷ್ಟಬುದ್ಧಿಯ ಸಂಚು ಫಲಿಸಲಿಲ್ಲ. ಇನ್ನೊಂದು ಉಪಾಯ ಹೂಡಿದ. ಮದುವೆಯಾದ ಮದುಮಗ ನಡುರಾತ್ರಿ ಕಾಳಿಕಾ ದೇವಿಯ ಆಲಯಕ್ಕೆ ಹೋಗಿ ಪೂಜೆ ಮಾಡಿಬರುವುದು ಸಂಪ್ರದಾಯವೆಂದು ಚಂದ್ರಹಾಸನನ್ನು ಕಳುಹಿಸಲು ಸಂಚು ಹೂಡಿ ಅಲ್ಲಿ ಕಟುಕರಿಂದ ಕೊಲೆ ಮಾಡಿಸುವ ಕುಕೃತ್ಯ.

ಅತ್ತ ವಯಸ್ಸಾದ ಕುಂತಳದ ಮಹಾರಾಜ ತನ್ನ ಮಗಳನ್ನು ವಿವಾಹವಾದವನಿಗೆ ರಾಜ್ಯಾಭಿಷೇಕ ಮಾಡುವುದೆಂದು ಯೋಚಿಸಿದಾಗ ಅವನ ಪುರೋಹಿತ ಗಾಲವಮುನಿ ಚಂದ್ರಹಾಸನನ್ನು ಸೂಚಿಸಿ ಈಗಲೇ ಕರೆ ತರುವಂತೆ ಮದನನಿಗೆ ಒಪ್ಪಿಸಿದ. ಕಾಳಿಕಾಗುಡಿಗೆ ಪೂಜೆಗೆ ಹೊರಟ ಭಾವನನ್ನು ತಡೆದ ಮದನ ತಾನೇ ಗುಡಿಯ ಪೂಜೆಗೆ ಹೋದ. ಪೂಜೆಗೆಂದು ಹೋದ ದುಷ್ಟಬುದ್ಧಿಯ ಮಗನನ್ನು ಕಟುಕರು ಹಿಂದಿನಿಂದ ಬಂದು ತಲೆ ಕತ್ತರಿಸಿ ಹೊರಟು ಹೋದರು. ಅತ್ತ ಚಂದ್ರಹಾಸನಿಗೆ ಚಂಪಕಮಾಲಿನಿಯನ್ನು ಒಪ್ಪಿಸಿದ ಕುಂತಳ ರಾಜ. ಆನೆಯ ಮೇಲೆ ಮೆರವಣಿಗೆ ಬರುವ ಚಂದ್ರಹಾಸ – ಚಂಪಕಮಾಲಿನಿಯರನ್ನು ಕಂಡ ದುಷ್ಟಬುದ್ಧಿ ‘ಅಯ್ಯೋ ಕೆಟ್ಟೆ’ ಎಂದು ಬೊಬ್ಬಿಡುತ್ತಾ ಕಾಳಿಕಾ ಗುಡಿಗೆ ಹೋಗಿ ನೋಡಿದಾಗ ತನ್ನ ಪುತ್ರ ಮದನ ಕತ್ತರಿಸಿ ಶವವಾಗಿ ಬಿದ್ದಿದ್ದಾನೆ. ಆತನನ್ನು ನೋಡಿ ತಾನೂ ಕಂಬಕ್ಕೆ ತಲೆಯೊಡೆದು ಸತ್ತ. ದುಷ್ಟಬುದ್ಧಿಗೆ ಅವನ ಸಂಚೇ ತಿರುಗು ಬಾಣವಾಯ್ತು.

ಸುದ್ದಿ ತಿಳಿದ ಚಂದ್ರಹಾಸನಿಗೆ ದಿಕ್ಕು ತೋಚದಾಯ್ತು. ಎಲ್ಲರೂ ಗೋಳಾಡುತ್ತಿದ್ದರು. ಲೋಕ ಮಾತೆಯ ಮುಂದೆ ಒಂದೇ ಮನಸ್ಸಿನಿಂದ ಪ್ರಾರ್ಥಿಸಿದ. ದೇವಿ ಪ್ರತ್ಯಕ್ಷಳಾದಳು. ‘ಏನು ಬೇಕು’ ಎಂದಳು. ‘ಮಾವ ಹಾಗೂ ಮದನನನ್ನು ಬದುಕಿಸಿಕೊಡು. ಇಲ್ಲದಿದ್ದರೆ ನನ್ನ ಪ್ರಾಣವನ್ನೂ ತೆಗೆದುಕೋ’ ಎಂದ. ತನಗೆ ಕೇಡು ಮಾಡಿದವರ ವಿಷಯದಲ್ಲಿ ಚಂದ್ರಹಾಸ ತೋರಿದ ಕರುಣೆಯಿಂದ ದೇವಿಗೆ ಸಂತೋಷವಾಗಿ ಸತ್ತಿದ್ದವರನ್ನು ಬದುಕಿಸಿದಳು. ದೇವಿಯ ಅನುಗ್ರಹಕ್ಕೆ ಪಾತ್ರನಾದ ಚಂದ್ರಹಾಸ, ಚಂದ್ರಹಾಸನ ಒಳ್ಳೆಯತನದಿಂದ ದುಷ್ಟಬುದ್ಧಿಯೂ ಒಳ್ಳೆಯ ಗುಣದವನಾದ. ತನ್ನ ಪಾಪಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟ.

ಚಂದ್ರಹಾಸ ಬಹಳ ವರ್ಷಗಳ ಕಾಲ ಧರ್ಮದಿಂದ ರಾಜ್ಯವಾಳಿದ. ಅವನಿಗೆ ಶ್ರೀಕೃಷ್ಣನಲ್ಲಿ ಬಹಳ ಭಕ್ತಿಯಿತ್ತು. ಚಂದ್ರಹಾಸನಿಗೆ ಮಕರ ಧ್ವಜ ಮತ್ತು ಕಮಲಾಕ್ಷ ಎಂಬ ಇಬ್ಬರು ಮಕ್ಕಳಾದರು.

ಧರ್ಮರಾಯನ ಅಶ್ವಮೇಧ ಯಾಗದ ಕುದುರೆಯು ಕುಂತಳ ನಗರಕ್ಕೆ ಬಂದಾಗ ಮಕರಧ್ವಜ, ಕಮಲಾಕ್ಷರು ಕಟ್ಟಿ ಹಾಕಿದರು. ಆದರೆ ಚಂದ್ರಹಾಸನು ಇವರನ್ನು ತಡೆದು ‘ನೀವೇ ಕುದುರೆಯನ್ನು ರಕ್ಷಿಸಿ ಒಪ್ಪಿಸಿ’ ಎಂದ. ಅರ್ಜುನನು ಬಂದನು. ಅವನೊಡನೆ  ಶ್ರೀಕೃಷ್ಣನನ್ನೂ ಕಂಡ ಚಂದ್ರಹಾಸ ಕೃಷ್ಣನ ಪಾದಗಳಿಗೆ ಎರಗಿದ. ಚಂದ್ರಹಾಸನು ಮಗನಾದ ಮಕರಧ್ವಜನಲ್ಲಿ ‘ನನಗೆ ವಯಸ್ಸಾಯ್ತು. ರಾಜ್ಯವನ್ನು ನಿನಗೊಪ್ಪಿಸಿದ್ದೇನೆ. ಧರ್ಮರಾಯನ ಯಾಗಕ್ಕೆ ಹೋಗುತ್ತೇನೆ. ಅನಂತರ ಅಲ್ಲಿಂದ ಕಾಡಿಗೆ ತಪಸ್ಸಿಗೆ ಹೋಗುತ್ತೇನೆ’ ಎಂದು ಅರ್ಜುನ, ಶ್ರೀಕೃಷ್ಣರೊಡನೆ ಹೊರಟು ಹೋದ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

 1. Anonymous says:

  ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.

 2. ಪೌರಾಣಿಕ ಕಥೆ…ಕೊಡುತ್ತಾ..ಮರತದನ್ನು ನೆನಪಿಗೆ ಬರುವಂತೆ ಮಾಡುವ ನಿಮಗೆ ಧನ್ಯವಾದಗಳು ವಿಜಯಾ ಮೇಡಂ.

 3. ನಯನ ಬಜಕೂಡ್ಲು says:

  ಅಪರೂಪದ ಕಥೆ. ಚೆನ್ನಾಗಿದೆ.

 4. ಮುಕ್ತ c. N says:

  ಬಾಲ್ಯದಲ್ಲಿ ಓದಿದ ಕಥೆ ನೆನಪಾಯಿತು. ಹಾಗೆಯೇ ಬಾಲ್ಯದ ದಿನಗಳನ್ನೂ ಮೆಲಕುಹಾಕುವಂತಾಯಿತು
  ಧನ್ಯವಾದಗಳು.

 5. ಶಂಕರಿ ಶರ್ಮ says:

  ಚಿಕ್ಕಂದಿನಲ್ಲಿ ಚಂದ್ರಹಾಸನ ನಾಟಕ, ಯಕ್ಷಗಾನಗಳನ್ನು ನೋಡಿದ್ದ ನೆನಪು ಮರುಕಳಿಸಿತು. ಸರಳ, ಸುಂದರ ಕಥಾ ನಿರೂಪಣೆ ಮನಮುಟ್ಟುವಂತಿದೆ.

 6. Padma Anand says:

  ನನ್ನಜ್ಜಿ ಚಿಕ್ಕಂದಿನಲ್ಲಿ ಬಿಡಿಬಿಡಿಯಾಗಿ ಹೇಳುತ್ತಿದ್ದ ಪ್ರಸಂಗಗಳೆಲ್ಲದರ ಒಟ್ಟರೆ ರೂಪದ ಚಂದ್ರಹಾಸನ ಕಥೆ ಮನತಟ್ಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: