ಸೃಜನಶೀಲತೆಯನ್ನು ಕಸಿದುಕೊಳ್ಳುತ್ತಿರುವ ಚಾಟ್ ಬಾಟ್

Share Button


ನಿಮಗೆಲ್ಲಾ ನೆನಪಿರಬಹುದು ಸರಿಯಾಗಿ ಒಂದೂವರೆ ವರ್ಷದ ಹಿಂದೆ ಅಂದರೆ 2022 ರ ನವೆಂಬರ್ ನಲ್ಲಿ  ಯಾಂತ್ರಿಕ ಬುದ್ಧಿಮತ್ತೆ ಸಹಾಯದಿಂದ OpenAI ಅವರು ChatGPT ಚಾಟ್ ಬಾಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಇದು ವಿಶೇಷವಾಗಿ ಶಿಕ್ಷಣದ ಕ್ಷೇತ್ರದ ಗೇಮ್-ಚೇಂಜರ್ ಎಂಬಂತೆ ಬಿಂಬಿಸಲಾಗಿತ್ತು.  ಈ AI ತಂತ್ರಜ್ಞಾನವು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆಯ ಅನುಭವಗಳು, ಭಾಷಾ ಕಲಿಕೆಯ ಬೆಂಬಲ, ಪರೀಕ್ಷೆಯ ತಯಾರಿ ನೆರವು ಮತ್ತು ಬರವಣಿಗೆ ಬೆಂಬಲವನ್ನು ಒದಗಿಸುವ ಮೂಲಕ ಸ್ವಲ್ಪ ಮಟ್ಟಿಗೆ ಧನಾತ್ಮಕ ಪರಿಣಾಮ ಬೀರಿದ್ದು ಸುಳ್ಳಲ್ಲ. ಆದರೆ ಇದರ ಬಳಕೆ ಹೆಚ್ಚುತ್ತಾ ಹೆಚ್ಚುತ್ತಾ ಹೋದಂತೆ ಇದರ ಅಸಲಿಯತ್ತು ತಿಳಿದಿದೆ. ಇಂದು ನಮ್ಮ ಶಿಕ್ಷಣ‌‌‌‌‌ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು  ಶಿಕ್ಷಣತಜ್ಞರಲ್ಲಿ ಹಲವಾರು ಪ್ರಶ್ನೆಗಳನ್ನು ಮತ್ತು ಗೊಂದಲವನ್ನು ಹುಟ್ಟುಹಾಕಿದೆ.

ಇಂದು ನಮ್ಮ‌ ಮಕ್ಕಳಷ್ಟೇ ಅಲ್ಲ ,ಪ್ರಪಂಚದ ಬಹುಪಾಲು ಜನರು ಇದರ ಜಾಲದಲ್ಲಿ  ತಮಗೆ ಅರಿವಿಲ್ಲದಂತೆ ಸಿಲುಕಿಕೊಂಡಿದ್ದಾರೆ. ಇದು ವ್ಯಕ್ತಿಯ ಚಿಂತನಾತ್ಮಕ‌ ಶಕ್ತಿಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. Chat GPT ಯ ಪ್ರಮುಖ ವೈಶಿಷ್ಟ್ಯವೆಂದರೆ ವಿವಿಧ ವಿಷಯಗಳ ಕುರಿತು ಸಂಭಾಷಣೆಗಳನ್ನು ರಚಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ತ್ವರಿತ ಉತ್ತರಗಳು ಮತ್ತು ಮಾರ್ಗದರ್ಶನದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಇದು ಅಮೂಲ್ಯವಾದ ಸಾಧನವಾಗಿದೆ. ಎಷ್ಟೇ ಕಷ್ಟಕರವಾದ ಪ್ರಶ್ನೆ ಇರಲಿ, ಪರಿಕಲ್ಪನೆ ಇರಲಿ ಅಥವಾ ಸವಾಲುಗಳಿರಲಿ ಒಮ್ಮೆ ಅದರಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳನ್ನು ಟೈಪ್ ಮಾಡಿದರೆ ಸಾಕು, ಕ್ಷಣಾರ್ಧದಲ್ಲಿ ಒಂದೇ ಪ್ರಶ್ನೆಗೆ ಭಿನ್ನ ಭಿನ್ನ ರೂಪದಲ್ಲಿ  ನಿರ್ದಿಷ್ಟ ವಿಷಯದ ಕುರಿತು ಸ್ಪಷ್ಟೀಕರಣವನ್ನು, ಉತ್ತರವನ್ನು ನೀಡುತ್ತದೆ.


ಈಗ ಹೇಳಿ ಕುಳಿತಲ್ಲಿಯೇ ಈ ChatGPT ಮಕ್ಕಳಿಗೆ ಇಷ್ಟೆಲ್ಲಾ ಸಹಾಯ ಮಾಡುತ್ತಿರುವಾಗ , ಮಕ್ಕಳು ಸಹಜವಾಗಿ ಅದರ ಮೇಲೆ ಹೆಚ್ಚು ಅವಲಂಬಿತರಾಗುವುದು ವಿಶೇಷವೇನಲ್ಲ. ಆದರೆ ಇದರ ಅತಿಯಾದ ಬಳಕೆಯಿಂದ ನಮ್ಮ ಮಕ್ಕಳು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಂದು ಪಾಲಕರು, ಶಿಕ್ಷಕರು, ಶಿಕ್ಷಣ ಇಲಾಖೆ, ಪರೀಕ್ಷಾ ಮಂಡಳಿ ಎಚ್ಚೆತ್ತು ಕೊಂಡಂತಿದೆ. ಏಕೆಂದರೆ  Chat GPT ಯ ಬಗ್ಗೆ ಕೆಲವು ಪರೀಕ್ಷಾ ಮಂಡಳಿಗಳು ಪರೀಕ್ಷಾ ಸಮಯದಲ್ಲಿ ಜರಗುವ ಅಕ್ರಮದ ಬಗ್ಗೆ ಕಟ್ಟು ನಿಟ್ಟಾದ ಸುತ್ತೋಲೆಗಳನ್ನು ಹೊರಡಿಸಿರುವುದು ತಿಳಿದಿರಬಹುದು.

ChatGPTಶಿಕ್ಷಣಮತ್ತುವಿಮರ್ಶಾತ್ಮಕಚಿಂತನೆಯಅವನತಿಗೆಕಾರಣವಾಗುತ್ತಿದೆ. ಇದಕ್ಕೆ ಮಾನವ ಸಂವಹನದ ಅಗತ್ಯವಿಲ್ಲದ ಕಾರಣ, ಇದು ಕೃತಿಚೌರ್ಯ, ಮೋಸ ತಂತ್ರಗಳು ಮತ್ತು ವಿದ್ಯಾರ್ಥಿಗಳನ್ನು ತಮ್ಮ ಅಗತ್ಯಗಳಿಗಾಗಿ ಚಾಟ್‌ಬಾಟ್‌ಗಳನ್ನು ಬಳಸಲು ಪ್ರಚೋದಿಸಿ ತಪ್ಪುದಾರಿಗೆ ಎಳೆಯುತ್ತಿದೆ. ಇದರ ಬಳಕೆಯಿಂದ ಇಂದಿನ ವಿದ್ಯಾರ್ಥಿಗಳಲ್ಲಿ  ಸೃಜನಶೀಲತೆಯ ಕೊರತೆ, ತಪ್ಪಾದ ಪ್ರತಿಕ್ರಿಯೆ, ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆ, ಶೈಕ್ಷಣಿಕ ಅಪ್ರಾಮಾಣಿಕತೆಗೆ ಕಾರಣವಾಗುತ್ತಿದೆ. ಉದಾಹರಣೆಗೆ, ಒಬ್ಬವಿದ್ಯಾರ್ಥಿಯುಚಾಟ್‌ಜಿಪಿಟಿಯನ್ನು ಸಂಶೋಧನಾ ಪ್ರಬಂಧವನ್ನು ಬರೆಯಲು ಬಳಸಿ ಅದು ತಮ್ಮದೇ ಎಂದು ಸಲ್ಲಿಸಬಹುದು. ಒಬ್ನ ವಿದ್ಯಾರ್ಥಿ ತನಗೆ ಸಂಪೂರ್ಣವಾಗಿ ಅರ್ಥವಾಗದ ವಿಷಯದ ಮೇಲೆ ಪಠ್ಯವನ್ನು ರಚಿಸಲು ಇದನ್ನು ಬಳಸಿದಾಗ ಇದು ವಿಷಯದ ಜ್ಞಾನ ಮತ್ತು ಗ್ರಹಿಕೆಯ ಕೊರತೆಗೆ ಕಾರಣವಾಗುತ್ತದೆ. ಉದಾಹರಣೆಗೆ, ಕ್ವಾಂಟಮ್ ಭೌತಶಾಸ್ತ್ರದ ಮೇಲೆ ಪ್ರಬಂಧವನ್ನು ಬರೆಯಲು ವಿದ್ಯಾರ್ಥಿಯು ಇದರ ಸಹಾಯ ಪಡೆದರೆ ಪ್ರಬಂಧದಲ್ಲಿ ಚರ್ಚಿಸಲಾದ ಪರಿಕಲ್ಪನೆಗಳು ಮತ್ತು ತತ್ವಗಳನ್ನುಆತ ಎಂದಿಗೂ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಕ್ರಮೇಣ ತಮ್ಮ ಆಲೋಚನಾ ಸಾಮರ್ಥ್ಯ ಕಳೆದುಕೊಂಡು ಸರಿ ತಪ್ಪುಗಳ ನಡುವಿನ ವಿವೇಚನಾಶೀಲ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಜೊತೆಗೆ ಇಂತಹ ಸಾಧನಗಳಿಂದ ಪಡೆದ ಉತ್ತರ ಸರಿಯಾಗಿದೆ ಎಂಬುದಕ್ಕೆ ಯಾವ ಸಾಕ್ಷಿಯು ಇಲ್ಲ. ಇಂತಹ ಸಾಧನಗಳು ಮಕ್ಕಳಲ್ಲಿ ಸಂಶೋಧನಾ ಸಾಮರ್ಥ್ಯವನ್ನು ಹಾಳು ಮಾಡುತ್ತಿವೆ.‌

ಇಂತಹ ಆಧುನಿಕ ಸಾಧನಗಳ ಅಗತ್ಯ ನಿಜವಾಗಿಯೂ ನಮಗೆ ಬೇಕಿತ್ತೇ ಎಂದು ನಮಗೆ ನಾವು ಪ್ರಶ್ನಿಸಿಕೊಳ್ಳಬೇಕಿದೆ. ಒಬ್ಬ ವೈದ್ಯಕೀಯ ವಿದ್ಯಾರ್ಥಿ ರೋಗಿಯನ್ನು ಸರಿಯಾಗಿ ಪರೀಕ್ಷೆ ಮಾಡದೆ, ಕೇವಲ ರೋಗದ ಲಕ್ಷಣ ಕೇಳಿ, ಔಷಧಿಗಳನ್ನು ChatGPT ಬಳಸಿ ನೀಡುವುದಾದರೆಎಲ್ಲರೂ ವೈದ್ಯರಾಗಬಹುದಲ್ಲವೇ? ಆಗ ರೋಗಿಗಳ ಪರಿಸ್ಥಿತಿ ಏನಾಗಬೇಕು , ಸಾಮಾಜಿಕ, ಸಾಂಸ್ಕೃತಿಕ ಸಮತೋಲನದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತಿಸುವ ಸಮಯ ಇದು.ನಮ್ಮ ಮಕ್ಕಳು ಜ್ಞಾನಾರ್ಜನೆ ಮಾಡಲು ಪುಸ್ತಕಗಳನ್ನು, ಪ್ರಾಯೋಗಿಕ ಸಂಶೋಧನೆಗೆ  ಹೆಚ್ಚಾಗಿ ಒತ್ತು ನೀಡಬೇಕೇ ವಿನಃ , ತಕ್ಷಣದಲ್ಲಿ ಉತ್ತರ ಪಡೆಯಲು ಇಂತಹ ಸಾಧನಗಳ ಬಳಕೆಯಿಂದ ವಾಸ್ತವದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಸತ್ಯ ಅರಿಯಬೇಕು.

ಇಂದು ಶಾಲಾ ಮಟ್ಟದಲ್ಲೇ ಹೆಚ್ಚು ವಿದ್ಯಾರ್ಥಿಗಳು ChatGPT ಮೇಲೆ ಅವಲಂಬಿತವಾಗಿರುವ ಕಾರಣ ಪರೀಕ್ಷಾ ಸಮಯದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿ ಪರೀಕ್ಷಾ ಭೀತಿಯನ್ನು ಹೊಂದಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದನ್ನು ಬಳಸುವ ಮುನ್ನ ನಾಳೆ ಪರೀಕ್ಷಾ ಕೊಠಡಿಯಲ್ಲಿ ChatGPT ಇಲ್ಲದೇ ಉತ್ತರಿಸಲು ಸಾಧ್ಯವೇ ಎಂಬುದನ್ನು ಒಮ್ಮೆ ವಿಮರ್ಶೆ ಮಾಡಿಕೊಳ್ಳಬೇಕು.

ನಮಗೆ ಮಕ್ಕಳಲ್ಲಿ  ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆಯಂತಹ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಾಧನಗಳು ಬೇಕೇ ವಿನಃ, ನಮ್ಮ ದೇಶದ ಆಸ್ತಿಯಾಗಿರುವ ಯುವ ಪೀಳಿಗೆಯ ಅಲೋಚನಾ ಸಾಮರ್ಥ್ಯ ಕಸಿದುಕೊಳ್ಳುವ ತಂತ್ರಜ್ಞಾನವಲ್ಲ ಅಲ್ಲವೇ?

-ಸುರೇಂದ್ರ ಪೈ,‌ ಭಟ್ಕಳ

17 Responses

  1. Manjuraj H N says:

    ತಂತ್ರಜ್ಞಾನ ಮತ್ತು ತಂತ್ರವಿಜ್ಞಾನಗಳೆರಡೂ ದಿನೇ ದಿನೇ ಹೊಸ ದಿಕ್ಕಿನೆಡೆಗೆ ಧಾವಿಸುತ್ತಿವೆ.

    ಇವುಗಳ ಆನ್ವಯಿಕತೆ ಸಹ ಕ್ಷಿಪ್ರಗತಿಯಲ್ಲಿ ನಡೆಯುತ್ತಿವೆ. ಚಾಟ್‌ ಜಿಪಿಟಿ ಕುರಿತ ಸಕಾಲಿಕ ಬರೆಹ.

    ಸೃಜನಶೀಲತೆಗೂ ಮಾನವನ ಬುದ್ಧಿಮತ್ತೆಗೂ ಸಂಬಂಧವಿದ್ದು, ಮಾನವೇತರ ಸೃಜನವು ಎಂದಿಗೂ
    ಸಂದೇಹಾಸ್ಪದ ಮತ್ತು ತಾತ್ಕಾಲಿಕ. ಯಂತ್ರೋಪಕರಣಗಳನ್ನು ಬಳಸಿಕೊಂಡು ನಾವು ಸೃಷ್ಟಿಶೀಲರಾಗಬೇಕೇ ವಿನಾ
    ಯಂತ್ರಗಳೇ ಸೃಷ್ಟಿಶೀಲವಾಗಬಾರದು. ಆದರೆ ಇಂದಿನ ವಿಪರ್ಯಯವೆಂದರೆ ಕೃತಕ ಬುದ್ಧಿಮತ್ತೆ.

    ಇದು ಎಲ್ಲಿ ಹೋಗಿ ಮುಟ್ಟತ್ತದೆಂಬುದಕೆ ಉತ್ತರವಿಲ್ಲ; ಆತಂಕವೇ ಎಲ್ಲ. ತಜ್ಞರೂ ಕೈ ಚೆಲ್ಲಿ ಕೂತಿದ್ದಾರೆ.

    ವಿದ್ಯಾರ್ಥಿಗಳ ಕಲಿಕೆಯ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕಲಿಯುವುದರ ಬದಲು ಕಳವು ಆಗುತ್ತಿದೆ.

    ಇನ್ನೂ ಮುಂದುವರೆದು ಹೇಳುವುದಾದರೆ, ಇಂಥ ಎಐ ಮೂಲಕ ಸೃಷ್ಟಿಯಾದವುಗಳಿಗೆ
    ಪೇಟೆಂಟ್‌ ಯಾರಿಗೆ ಕೊಡಬೇಕು? ಎಂಬುದು ಯಕ್ಷಪ್ರಶ್ನೆಯಾಗಿದೆ. ಇನ್ನು ಮೇಲೆ ಇವೆಲ್ಲ ಬಹು ದೊಡ್ಡ ತೊಡಕಾಗುವುದು.

    ಸಾಹಿತ್ಯದಂಥ ಸೃಜನಾತ್ಮಕವೂ ಈಗ ಇದರ ಹೊಡೆತಕ್ಕೆ ಪಕ್ಕಾಗಿದೆ. ಖರೀದಿಸಿದ ಸುಧಾರಿತ ಆವೃತ್ತಿಗಳನ್ನು ಇಟ್ಟುಕೊಂಡು,
    ಪಾಯಿಂಟುಗಳನ್ನು ಕೊಟ್ಟು, ಮಹಾಕಾವ್ಯ ಬರೆಸಲೂ ಬಹುದು! ಮಾನವರು ಯಂತ್ರಗಳಾದಾಗ, ಯಂತ್ರಗಳು ಮಾನವರಾಗಿವೆ.

    ಈ ಬಗ್ಗೆ ಬೆಳಕು ಚೆಲ್ಲಿದ ನಿಮಗೆ ಧನ್ಯವಾದಗಳು ಮತ್ತು ಪ್ರಕಟಿಸಿದ ಸುರಹೊನ್ನೆಗೆ ಅಭಿನಂದನೆಗಳು.

  2. ಬಿ.ಆರ್.ನಾಗರತ್ನ says:

    ಉತ್ತಮ ಮಾಹಿತಿಯನ್ನು ಒಳಗೊಂಡ ಹಾಗು ಚಿಂತನೆ ಗೆ ಹಚ್ಚು ವ ಬರೆಹ..

  3. ನಯನ ಬಜಕೂಡ್ಲು says:

    ವಾಸ್ತವವನ್ನು ಬಿಂಬಿಸುವ ಬರಹ.

  4. ಆಧುನಿಕ ತಂತ್ರಜ್ಞಾನದ ಎರಡು ಮುಖಗಳನ್ನು ಪರಿಚಯಿಸಿರುವ ತಮಗೆ ವಂದನೆಗಳು

  5. ಮುಕ್ತ c. N says:

    ವಾಸ್ತವಾಂಶಗಳು ಬಗ್ಗೆ ಬೆಳಕು ಚೆಲ್ಲುವ ಲೇಖನ.

  6. Padmini Hegde says:

    ಚಾಟ್‌ ಜಿಪಿಟಿ ಕುರಿತ ಸಕಾಲಿಕ ಬರೆಹ!

  7. ವಿದ್ಯಾ says:

    ನಾವು ಎತ್ತ ಸಾಗುತ್ತಿದ್ದೇವೆ,,, ಎಂಬುದು
    ಎಲ್ಲರಿಗೂ ಅರಿವಾದರೆ,,,
    ಬದಲಾವಣೆ ಸಾದ್ಯ,,, ಇಲ್ಲವಾದರೆ,,,,,

  8. ಶಂಕರಿ ಶರ್ಮ says:

    ಆಧುನಿಕ ತಂತ್ರಜ್ಞಾನದ ಬಳಕೆಯ ಮಿತಿಯ ಅರಿವು ಸಕಾಲದಲ್ಲಿ ಆಗಬೇಕಾದ ಅವಶ್ಯಕತೆಯ ಜೊತೆಗೆ ಅದರ ಅತಿಯಾದ ಅವಲಂಬನೆಯ ಬಗ್ಗೆ ಎಚ್ಚರಿಕೆಯನ್ನಿತ್ತ ಸಕಾಲಿಕ ಲೇಖನ.

  9. Padma Anand says:

    ತಂತ್ರಜ್ಞಾನಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಸಾಲಿಗೆ ಮತ್ತೊಂದು ಪ್ರಭಾವೀ ಮಾಧ್ಯಮದ ಕುರಿತಾದ ಚಿಂತನೆಗೆ ಹಚ್ಚುವ ಲೇಖನ.

  10. Hema Mala says:

    ಶೈಕ್ಷಣಿಕ ಕ್ಷೇತ್ರದಲ್ಲಿ ಋಣಾತ್ಮಕ ಪ್ರಭಾವ ಬೀರುತ್ತಿರುವ ಹೊಸ ವಿಚಾರದ ಬಗ್ಗೆ ಬೆಳಕು ಚೆಲ್ಲುವ ಬರಹ ಇಷ್ಟವಾಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: