ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನಮ್ಮ ಮಕ್ಕಳು ನಮ್ಮ ಗರಡಿಯಲ್ಲಿ ತಯಾರಾಗ್ತಿದ್ದಾರೆ. ಅವರು ಮುಂದೆ ನಮ್ಮನ್ನು ನೋಡಿಕೊಳ್ತಾರಾ? ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಒಂದು ಅಲಿಖಿತ ಕಾನೂನು ಇತ್ತು ಗೊತ್ತಾ ನಿನಗೆ?”

“ಏನದು?”

“ಚಿಕ್ಕಂದಿನಲ್ಲಿ ಮಕ್ಕಳನ್ನು ಸಾಕುವುದು ನೆಲೆ ಮುಟ್ಟಿಸುವುದು ತಂದೆ-ತಾಯಿಯ ಹೊಣೆ. ವೃದ್ಧಾಪ್ಯದಲ್ಲಿ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆ. ಆಗ ಪೇರೆಂಟಿಂಗ್ ಕಷ್ಟವಿರಲಿಲ್ಲ. ಕೂಡು ಕುಟುಂಬ ವ್ಯವಸ್ಥೆಯಿತ್ತು. ಯಾರೋ ತಲೆ ಬಾಚೋರು, ಯಾರೋ ಊಟ ಹಾಕೋರು. ನಾವು ಅಣ್ಣ ತಮ್ಮಂದಿರು, ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಜೊತೆ ಬೆಳೆಯುತಾ ಹೊಂದಾಣಿಕೆ ಕಲಿಯುತ್ತಿದ್ವಿ. ಆದರೆ ಈಗ ಎಲ್ಲಾ ತಲೆಕೆಳಗು.”

“ಈಗ ಸಮಾಜದ ವ್ಯವಸ್ಥೆ ಬದಲಾಗಿದೆ. ಸ್ವಾರ್ಥ ಹೆಚ್ಚಾಗಿದೆ. ನಾನು-ನನ್ನದು ಅನ್ನುವ ಭಾವನೆ ಬೇರೂರಿದೆ. ಹೆಂಗಸರು, ಹೆಂಗಸರು, ಹೊರಗಡೆಗೆ ಹೋಗಿ ದುಡಿಯುತ್ತಿರುವುದರಿಂದ ‘ಮನೆ’ಯ ಕಲ್ಪನೆ ಬದಲಾಗಿದೆ. ಬದಲಾಗಿದೆ. ಒಂದೇ ಮನೆಯಲ್ಲಿದ್ದರೂ ಅಪರಿಚಿತರ ತರಹ ಬದುತ್ತಿದ್ದೇವೆ” ಆದಿತ್ಯ ಹೇಳಿದ.

“ಹೌದು ಆದಿ. ನಾವು ತುಂಬಾ ಸ್ವಾರ್ಥಿಗಳಾಗಿದ್ದೇವೆ. ನಮ್ಮ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೇವೆ. ನಮ್ಮ ಪ್ರಪಂಚ ತುಂಬಾ ಚಿಕ್ಕದಾಗಿಬಿಟ್ಟಿದೆ. ನಾನು, ನನ್ನ ಕುಟುಂಬ ಅಂತ ಬದುತ್ತಿದ್ದೇವೆ. ನಮ್ಮ ಮಕ್ಕಳನ್ನೂ ನಾವು ಸರಿಯಾಗಿ ಬೆಳೆಸ್ತಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ ಕಲಿಸ್ತಿಲ್ಲ. ನಾವು ಅಪ್ರಯೋಜಕರಾಗಿಬಿಟ್ಟಿದ್ದೇವೆ.”

“ಯಾಕೋ ಹಾಗಂತೀಯಾ? ನಾವು ಮಕ್ಕಳಿಗೆ ಒಳ್ಳೆಯ ಎಜುಕೇಷನ್ ಕೊಡಿಸ್ತಿಲ್ವಾ?”

“ಹೌದು, ನಮ್ಮ ಮಕ್ಕಳು ಒಳ್ಳೆಯ ಶಾಲೆಗೆ ಹೋಗ್ತಾರೆ. ಒಳ್ಳೆಯ ಅಂಕ ಗಳಿಸ್ತಾರೆ. ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗ್ತಾರೆ. ಇಷ್ಟೇನಾ ಎಜುಕೇಷನ್?”

ನಿನ್ನ ಮಾತು ನನಗೆ ಅರ್ಥವಾಗಿಲ್ಲ.

“ನನಗಿಬ್ಬರು ಹೆಣ್ಣು ಮಕ್ಕಳು. ದೊಡ್ಡವಳಿಗೆ 12 ವರ್ಷ. ಚಿಕ್ಕವಳಿಗೆ 7 ವರ್ಷ. ದೊಡ್ಡವಳು ಗೌರಿಗೆ ಸಂಗೀತ, ನೃತ್ಯ ಇಷ್ಟ, ಅಂಬುಜಾ ಅನ್ನುವವರ ಹತ್ತಿರ ಸಂಗೀತ ಕಲಿಯುತ್ತಿದ್ದಾಳೆ. ಅವಳಿಗೆ ಆ ಅಂಬುಜಾ ರಾಮಾಯಣ, ಮಹಾಭಾರತ, ಭಾಗವತದ ಕಥೆಗಳನ್ನು ಹೇಳಿದ್ದಾರೆ. ಅಂಬುಜಾ ಅವರ ತಂಗಿ ಡ್ಯಾನ್ಸ್ ಕಲಿಸುತ್ತಾರೆ. ಅವರು ಗೌರಿ ಶಾಲೆಯಲ್ಲಿ ರಾಧಾಕೃಷ್ಣ, ಶಿವತಾಂಡವ, ಮೋಹಿನಿ ಭಸ್ಮಾಸುರ ಹೀಗೆ ಅನೇಕ ಈ ರೂಪಕಗಳನ್ನು ಕಲಿಸಿದ್ದಾರೆ. ಚಿಕ್ಕವಳು ಗಾನವಿಗೆ ಆಟಗಳಲ್ಲಿ ಆಸಕ್ತಿ, ಆ ರೂಪಕಗಳಲ್ಲಿ ಕಥೆಗಿಥೆಗಳಲ್ಲಿ ಆಸಕ್ತಿ ಇಲ್ಲ..

“ಅದರಲ್ಲಿ ತಪ್ಪೇನು?”

“ಮೊನ್ನೆ ಟಿ.ವಿಯಲ್ಲಿ ರಾಧಾ-ಕೃಷ್ಣರ ನೃತ್ಯ ಬರ್ತಿತ್ತು. ಅಮ್ಮಾ ರಾಧಾ ಕೃಷ್ಣಂಗೆ  ಮಮ್ಮೀನಾಂತ ಕೇಳಿದಳು.”

“ಚೆನ್ನಾಗಿದೆ ತಮಾಷೆ” ರಮ್ಯ ನಗುತ್ತಾ ಹೇಳಿದಳು.

“ಆ ಕ್ಷಣದಲ್ಲಿ ನಮಗೂ ತಮಾಷೆ ಅನ್ನಿಸಿತು. ಆದರೆ ಅವಳಿಗೆ ನಾವು ರಾಧ-ಕೃಷ್ಣರ ಬಗ್ಗೆ ಯಾರೂ ಹೇಳದಿರುವಾಗ ಅವಳು ಆ ಪ್ರಶ್ನೆ ಕೇಳಿದ್ದರಲ್ಲಿ ತಪ್ಪೇನಿದೆ?” ಅನ್ನಿಸಿತು.

“ನನ್ನ ಮಕ್ಕಳು ಆ ವಿಚಾರದಲ್ಲಿ ತುಂಬಾ ಅದೃಷ್ಟವಂತರು. ನಮ್ಮ ತಂದೆ-ತಾಯಿ ಅವರಿಗೆ ಎಲ್ಲಾ ಕಥೆ ಹೇಳಿದ್ದಾರೆ.”

ಯಾರಾದರೂ ಬಂದರೆ

“ನನ್ನ ಮಕ್ಕಳಿಗೆ ಏನೂ ಗೊತ್ತಿಲ್ಲ. ದೊಡ್ಡವಳು ಯಾರ ಹತ್ತಿರವೂ ಮಾತಾಡಲ್ಲ. ನಮ್ಮ ಜೊತೆ ಮದುವೆ , ಮುಂಜಿ ಎಲ್ಲಿಗೂ ಬರಲ್ಲ. ಮನೆಗೆ ಬರಲ್ಲ. ಮನೆಗೆ ಯಾರಾದರೂ ಮಾತನಾಡಿಸದೆ ಒಳಗೆದ್ದು ಹೋಗ್ತಾಳೆ. ಚಿಕ್ಕವಳು ಮೊದಲು ನಾವು ಹೇಳಿದಂತೆ ಕೇಳ್ತಿದ್ದಳು. ಈಗ ಅಕ್ಕನ್ನೇ ಫಾಲೋ ಮಾಡ್ತಿದ್ದಾಳೆ. ಇಬ್ಬರೂ ಅಕ್ಕ ಪಕ್ಕದವರ ಜೊತೆ ಮಾತಾಡಲ್ಲ. ಅವರ ಫ್ರೆಂಡ್ಸ್ ಎಂದರೆ ಕ್ಲಾಸ್‌ಮೇಟ್ಸ್ ಮಾತ್ರ”

“ಈಗ ಎಲ್ಲಾ ಮಕ್ಕಳೂ ಹೀಗೇ ಬೆಳೆಯುತ್ತಿದ್ದಾರೆ.”

‘ನಾವು ಹಾಗೆ ಬೆಳೆಸ್ತಿದ್ದೀವಿ. ಊರಿನಲ್ಲಿದ್ರೂ ಕಾಡಿನಲ್ಲಿರುವವರ ತರಹ ಆಡ್ತಿದ್ದಾರೆ. ಅವರ ಅವಶ್ಯಕತೆ ಪೂರೈಸಲು ಅವರಿಗೆ ನಾವು ಬೇಕು. ನಮ್ಮ ನಡುವೆ ಮುಂದೆ ಮಧುರವಾದ ಬಾಂಧವ್ಯ ಇರುತ್ತದಾ ಆದಿ?’

“ನೀನು ಏನೇನೋ ಮಾತನಾಡಿ ನನ್ನ ತಲೆ ಕೆಡಿಸಬೇಡ. ನಿಮ್ಮ ಅಣ್ಣ –ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ರಜ ಬಂದಾಗ ಮಕ್ಕಳನ್ನು ಅಜ್ಜಿ-ತಾತನ ಹತ್ತಿರ ಕಳಿಸು. ನೀನೂ ಪ್ರತಿವಾರ ಅವರನ್ನು ನೋಡಲು ಹೋಗು. ನಿನ್ನ ತಪ್ಪು ತಿದ್ದಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ. ಆ ಅವಕಾಶ ಉಪಯೋಗಿಸಿಕೋ.”

“ಥ್ಯಾಂಕ್ಸ್ ಆದಿ. ನಿಮ್ಮ ಜೊತೆ ಮಾತಾಡಿದ ಮೇಲೆ ನನ್ನ ಮನಸ್ಸು ಹಗುರವಾಯ್ತು.ರಮ್ಯಾ ಕಾಫಿ ಕೊಡಿ. ಕುಡಿದು ಹೊರಡ್ತೀನಿ.”

ರಮ್ಯ ಕಾಫಿ ತಂದಳು.

***

ಅಂದು ರಾತ್ರಿ ರಮ್ಯ ಅಡಿಗೆ ಮನೆ ಕ್ಲೀನ್ ಮಾಡಿ ಹಾಲು ತೆಗೆದುಕೊಂಡು ರೂಂಗೆ ಬಂದಾಗ ಆದಿ ಕಾಣಿಸಲಿಲ್ಲ. ಅವನು ಬಾಲ್ಕನಿಯಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ. ಗಂಡ ತಲೆ ಗೊಂದಲದ ಗೂಡಾದಾಗ ಸಿಗರೇಟು ಸೇದುತ್ತಾನೆಂದು ಗೊತ್ತಿತ್ತು. ಅವಳು ಟೀಪಾಯ್ ಮೇಲೆ ಹಾಲಿನ ಲೋಟ ಇಟ್ಟು ಕೇಳಿದಳು.

‘’ಮಕ್ಕಳ ಬಗ್ಗೆ ಯೋಚನೆ ಮಾಡ್ತಿದ್ದೀರಾ?”

 “ಹಾಗೇನಿಲ್ಲ.”

“ಮಕ್ಕಳ ಬಗ್ಗೆ ನಾವು ಯೋಚಿಸುವಂತಹದ್ದು ಏನಿಲ್ಲಾರೆ. ನಮ್ಮ ಮಕ್ಕಳನ್ನು ಯಾರೂ ಆಕ್ಷೇಪಿಸುವ ಹಾಗಿಲ್ಲ. ಮನೆಗೆ ಯಾರು ಬಂದ್ರೂ ಮಾತಾಡಿಸ್ತಾರೆ. ಏನು ಕೆಲಸ ಹೇಳಿದ್ರೂ ಮಾಡ್ತಾರೆ. ದೊಡ್ಡವರು ಬಂದಾಗ ಕಾಲಿಗೆ ನಮಸ್ಕಾರ ಮಾಡ್ತಾರೆ.”

“ಅದು ನನಗೂ ಗೊತ್ತು. ಮೊನ್ನೆ ಪೇಪರ್ ಹಾಕ್ತಾರಲ್ಲಾ ಸುಬ್ಬಯ್ಯ ಬಂದಿದ್ರು, ನಮ್ಮ ಸಾನ್ವಿ ಬನ್ನಿ ಅಂಕಲ್ ಪಪ್ಪ ಅಡಿಗೆ ಮನೆಯಲ್ಲಿ ಟೀ ಮಾಡ್ತಿದ್ದಾರೆ. ಕಳಿಸ್ತೀನಿ” ಅಂತ  ಹೇಳಿದಳಂತೆ.

ನಮ್ಮ ಸುಧೀ “ಕೂಳ್ಕೊಳ್ಳಿ ಅಂಕಲ್, ಪಪ್ಪ ಟೀ ತಾರೆ” ಅಂತ ಉಪಚಾರ ಮಾಡಿದನಂತೆ. ಸುಬ್ಬಯ್ಯ ಮಕ್ಕಳಿಬ್ಬರನ್ನೂ ತುಂಬಾ ಹೊಗಳಿದ್ದು,

“ಅಷ್ಟೇ ಅಲ್ಲಾರಿ. ಅವರ ಸ್ಕೂಲಲ್ಲಿ ಗಣಪತಿ ಕೂಡಿಸುವುದು ನಿಮಗೆ ಗೊತ್ತಲ್ಲಾ? ಗಣಪತಿ ವಿಸರ್ಜನೆ ದಿನ ಸ್ಕೂಲಿನಲ್ಲಿ ಊಟ ಇಟ್ಟುಕೊಂಡಿದ್ದು, ಗಣಪತಿ ವಿಸರ್ಜನೆಯ ನಂತರ ಮಕ್ಕಳನ್ನು ಹಾಲ್‌ನಲ್ಲಿ ಕೂಡಿಸಿ ಹುಳಿಯನ್ನ, ಮೊಸರನ್ನ, ಬೊಂಬಾಯಿ ಬೋಂಡ, ಲಾಡು ಬಡಿಸಿ ಊಟ ಶುರು ಮಾಡಿ” ಅಂದರಂತೆ. ಅದಕ್ಕೆ ನಮ್ಮ ಸುಧಿ ಎದ್ದು ನಿಂತು ‘’ನಾನು ಶಾಂತಿ ಮಂತ್ರ ಹೇಳಿಕೊಡಲಾ?” ಅಂತ ಟೀಚರ್‌ನ ಕೇಳಿದನಂತೆ. ಅವರು ಒಪ್ಪಿದಮೇಲೆ ಜೋರಾಗಿ, ಕಂಚಿನ ಕಂಠದಲ್ಲಿ

ಸಹನಾವವತು ಸಹನೌಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು
ಮಾವಿ ಧ್ವಿಷಾವಹೈ
ಓಂ ಶಾಂತಿ ಶಾಂತಿ ಶಾಂತಿಃ

ಅಂತ ಹೇಳಿಕೊಟ್ಟನಂತೆ. ಅವರ ಟೀಚರ್ ಸುಧಾರೈ ಫೋನ್ ಮಾಡಿ ಹೇಳಿದ್ರು.

‘’ಅವನೆಲ್ಲಿಂದ ಕಲಿತ ಈ ಶಾಂತಿ ಮಂತ್ರ?”

“ಮಾವ ಅಭ್ಯಾಸ ಮಾಡಿಸಿದ್ದಾರೆ. ಸಾನ್ವಿನೂ ಕಲಿತಿದ್ದಾಳೆ. ದಿನ ಊಟಕ್ಕೆ ಮೊದಲು  ಮನಸ್ಸಿನಲ್ಲೇ ಹೇಳಿಕೊಳ್ತಾರಂತೆ.”

“ನಾನು ಮಕ್ಕಳ ಬಗ್ಗೆ ಯೋಚಿಸ್ತಿಲ್ಲ. ರಮ್ಯಾ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡ್ತಿದ್ದೀನಿ. ನಾವು ಅವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನಿಸ್ತಿದೆ.’’

ರಮ್ಯಾ ಮಾತಾಡಲಿಲ್ಲ.

“ಒಂದು ದಿನವೂ ನಾನವರನ್ನು ‘ನಿಮಗೇನು ಬೇಕು?’ ಅಂತ ಕೇಳಲಿಲ್ಲ. ಅವರ ಆರೋಗ್ಯ ವಿಚಾರಿಸಲಿಲ್ಲ. ವರ್ಷಕ್ಕೊಮ್ಮೆ ಅವರನ್ನು ಚೆಕಪ್ ಮಾಡಿಸಲಿಲ್ಲ. ಅವರ ಹತ್ತಿರ  ಕುಳಿತು ಮಾತಾಡಲಿಲ್ಲ. ಅವರು ಎಷ್ಟು ನೊಂದುಕೊಂಡಿದ್ದೋ ಏನೋ? ಅವರು ಬೇರೆ ಹೋಗ್ತೀನೀಂತ ಹೇಳಿದಾಗ ತಡೆಯಲೂ ಇಲ್ಲ.”

“ನಾವು ಅವರನ್ನು ಬೇರೆ ಮನೆಗೆ ಕಳಿಸಿದೆನಾ?”

“ನಾವು ಕಳಿಸಲಿಲ್ಲ ನಿಜ, ಅವರು ತಾವಾಗಿ ಹೋಗ್ತೀವಿ ಅಂದಾಗ ತಡೆಯಬಹುದಿತ್ತಲ್ವಾ?”

“ಹೌದು, ಅವರಿಬ್ಬರು ನಮ್ಮ ಜೊತೆ ಇದ್ದಾಗ ನೆಮ್ಮದಿಯಿಂದ ಕೆಲಸಕ್ಕೆ ಹೋಗ್ತಿದ್ದೆವು, ಮನೆಗೆ ಬೀಗ ಹಾಕುವ ತಂಟೆಯೇ ಇರಲಿಲ್ಲ. ಈಗ ಬೀಗ ಹಾಕೋದು, ತೆಗೆಯೋದು ಎಷ್ಟು ಕಷ್ಟದ ಕೆಲಸ ಅನ್ನಿಸ್ತಿದೆ.”

“ನಾವು ದುಡುಕಿಬಿಟ್ಟೆವು ರಮ್ಯಾ .ಅವರಿಬ್ಬರು ನಮ್ಮ ಜೊತೆ ಇದ್ದಾಗ ನಮಗೆ ಅವರ ಬೆಲೆ ಗೊತ್ತಾಗಲಿಲ್ಲ. ಅವರು ಬೇರೆ ಮನೆಗೆ ಹೋಗ್ತಿವಿ ಅಂದಾಗ ‘ನಿಮ್ಮಿಷ್ಟ’ ಅಂದುಬಿವಟ್ಟೆವು….ಛೆ…”

“ರೀ ಆಗಿರುವ ತಪ್ಪಿನ ಬಗ್ಗೆ ಯೋಚಿಸದೆ ಆಗಿರುವ ತಪ್ಪನ್ನು ಹೇಗೆ ಸರಿಮಾಡಬಹುದು ಎಂದು ಯೋಚಿಸುವುದು ಒಳ್ಳೆಯದಲ್ವಾ?”

”ನನಗೆ ಏನೂ ಹೊಳೆಯುತ್ತಿಲ್ಲ. ತಲೆ ಬ್ಲಾಂಕ್ ಆಗಿದೆ.”

“ಮಾವನಿಗೆ ಮನೆಬಿಟ್ಟು ಹೋಗಬೇಕೂಂತ ಅನ್ನಿಸಲು ಬೇರೆ ಯಾವುದೋ ಬಲವಾದ ಕಾರಣ ಇರಬೇಕು. ಅವರು ನಮ್ಮ ಹತ್ತಿರ ಏನೂ ಹೇಳಲಿಲ್ಲ. ಅವರಿಗೆ ತುಂಬಾ ಫ್ರೆಂಡ್ ಯಾರು?”

“ಮೂರ್ತಿರಾಯರು, ರಿಟೈರ್ ಪೋಸ್ಟ್ ಮಾಸ್ಟರ್, ಅವರೂ ನಮ್ಮ ತಂದೆ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರಂತೆ. ಅವರ ಹತ್ತಿರ ಅಪ್ಪ ಏನಾದ್ರೂ ಹೇಳಿರಬಹುದು.”

”ಅವರು ತುಂಬಾ ಒರಟಾಗಿ ಮಾತಾಡ್ತಾರಲ್ವಾ?’

“ಅವರ ಸ್ವಭಾವಾನೇ ಹಾಗೆ ಇದ್ದಿದ್ದನ್ನು ಇದ್ದಂತೆ ಹೇಳುವುದು. ನಾನೇ ಅವರನ್ನು ವಿಚಾರಿಸ್ತೀನಿ.”

‘’ಅವರೆಲ್ಲಿ ನಿಮಗೆ ಸಿಗ್ತಾರೆ?”

“ನಾನು ದಿನಾ ಅವರ ಮನೆ ಮುಂದೆ ಬರೋದು?”

“ಹಾಗಾದರೆ ಕೇಳಿ, ಸಾಧ್ಯವಾದರೆ ನಾವು ಅತ್ತೆ-ಮಾವನ್ನ ವಾಪಸ್ಸು ಕರೆದುಕೊಂಡು ಬರೋಣ.”

“ಆಗಲಿ ಈ ವಾರದಲ್ಲೇ ಮೀಟ್ ಮಾಡ್ತೀನಿ.

ನಾಲ್ಕು ದಿನಗಳ ನಂತರ ಅವನು ಮೂರ್ತಿರಾಯರನ್ನು ಅವರ ಮನೆಯಲ್ಲೇ ಭೇಟಿ ಮಾಡಿದ.

‘ಓ ಆದಿತ್ಯ, ಏನಪ್ಪ ಇಷ್ಟೊಂದು ಅಪರೂಪ ದರ್ಶನ?”

“ನೀವು ಕಾಣಿಸಿದ್ರಲ್ಲಾ- ಮಾತಾಡಿಸೋಣಾಂತ ಬಂದೆ.”

”ಬಾ ಕೂತ್ಕ. ಹೇಗಿದ್ದೀಯಾ?”

“ಚೆನ್ನಾಗಿದ್ದೀನಿ ಅಂಕಲ್.”

“ಸುಮ ಕಾಫಿ ತೊಗೊಂಡು ಬಾ” ಸೊಸೆಗೆ ಹೇಳಿ ರಾಯರು ಆದಿತ್ಯನ ಕಡೆ ತಿರುಗಿ ಕೇಳಿದರು. “ನೀನು ಕಾರಣವಿಲ್ಲದೆ ಬರುವವನಲ್ಲ. ಏನು ವಿಷಯ ಹೇಳು?”

“ನಮ್ತಂದೆ-ತಾಯಿ ಬೇರೆ ಇರೋದು ನಿಮಗೆ ಗೊತ್ತೇ ಇರತ್ತೆ. ನಮ್ಮಿಂದ ತಪ್ಪಾಗಿದೆ ನಿಜ. ಆದರೆ ಇಷ್ಟು ವರ್ಷ ನಮ್ಮ ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅಪ್ಪ ಈಗ ದಿಢೀರ್ ನಿರ್ಧಾರ ಕೈಗೊಳ್ಳಲು ಕಾರಣವೇನು?”

“ನಿಮ್ಮಪ್ಪ ಬೇರೆ ಮನೆ ಮಾಡಿಕೊಂಡು ಹೋಗಲು ನಾನೇ ಕಾರಣ.”

“ನೀವು ಕಾರಣಾನಾ?”

“ಹೌದು. ಅವನು ಆಗಾಗ್ಗೆ ನನ್ನ ಹತ್ತಿರ ಬೇಜಾರು ಮಾಡಿಕೊಳ್ತಿದ್ದ. ‘ನನ್ನ ಹೆಂಡ್ತಿ ಕೈಯಲ್ಲಿ ಮೊದಲಿನ ಹಾಗೆ ಕೆಲಸ ಆಗ್ತಿಲ್ಲ. ಅದನ್ನು ಮಗ-ಸೊಸೆ ಅರ್ಥಮಾಡಿಕೊಳ್ತಿಲ್ಲ.ಏನ್ಮಾಡೋದು?’ ಅಂತ ಕೇಳಿದ್ದ. ಒಂದಿನ ಅವನು ಮೈಸೂರಿಗೆ ನಿಮಗೆ ಹೇಳದೆ ಹೋಗಿದ್ದಕ್ಕೆ ನಿಮ್ಮಮ್ಮ ತಲೆನೋವೂಂತ ಹೇಳಿದ್ದಕ್ಕೆ ಗಲಾಟೆ ಆಯ್ತಂತಲ್ಲ……… ಅವತ್ತು ತುಂಬಾ ಬೇಜಾರು ಮಾಡಿಕೊಂಡ. ‘’ಮೂರ್ತಿ ನನ್ನ ಮಗ ಸೊಸೆ ಪ್ರತಿ ಭಾನುವಾರ ಹೊರಗೆ ಹೋಗ್ತಾರೆ. ಎಲ್ಲಿಗೇಂತ ನಾನೂ ಕೇಳಲ್ಲ. ಅವರೂ ಹೇಳಲ್ಲ. ನಾನು ಮೈಸೂರಿಗೆ ಹೇಳದೆ ಹೋಗಿದ್ದು ತಪ್ಪಾ? ನನ್ನ ಹೆಂಡತಿಗೆ ಹೇಳಿಹೋಗಿದ್ದೆ. ಅದು ತಪ್ಪಾಗೋಯ್ತು. ನನ್ನ ಹೆಂಡ್ತಿಗೆ ತಲೆನೋವು ಬಂದಿದ್ದೂ ತಪ್ಪಾಯ್ತು. ‘ಅಮ್ಮ ಮಾತ್ರೆ ತೆಗೆದುಕೊಂಡು ಮಲಗು, ರೆಸ್ಟ್ ತೊಗೋ’ ಅಂತ ಹೇಳಲಿಲ್ಲವಲ್ಲಾ ನನ್ನ ಮಗ, ಮುಂದೆ ನಮ್ಮ ಗತಿಯೇನೂಂತ” ಒದ್ದಾಡಿದ.

“ಅದಕ್ಕೆ ನೀವು ಬೇರೆ ಮನೆಗೆ ಹೋಗೂಂತ ಹೇಳಿಕೊಡೋದಾ? ಹಿರಿಯರಾಗಿ ಹೀಗೆ ಮನೆ ಒಡೆಯುವ ಕೆಲಸ ನೀವು ಮಾಡಬಹುದಾ ಅಂಕಲ್?”

“ನೋಡು ಆದಿ ನಾನು ನಿನ್ನನ್ನು ಈಗ ನೋಡ್ತಿಲ್ಲ. ನಿಮ್ಮಪ್ಪ ಅಮ್ಮ ನಿಮ್ಮ ಜೊತೆ ಇದ್ದಾರಲ್ಲಾ ಎಷ್ಟು ದಿನ ನೀನು ಅವರನ್ನು ಮದುವೆ, ಮುಂಜಿ, ದೇವಸ್ಥಾನಗಳಿಗೆ ಕಾರಲ್ಲಿ ಕರ್‍ಕೊಂಡು ಹೋಗಿದ್ದೀಯಾ? ನಿಮ್ಮಪ್ಪನ ಜೊತೆ ಪ್ರತಿ ತಿಂಗಳೂ ಕ್ಲಿನಿಕ್‌ ಗೆ ಹೋಗೋದು ನಾನು. ನಿಮ್ಮಮ್ಮನ್ನ ನಿಮ್ಮಪ್ಪ ಕರ್‍ಕೊಂಡು ಹೋಗ್ತಾನೆ. ಅವರಿಬ್ಬರೂ ನಿಮ್ಮನೆ ಜವಾಬ್ದಾರಿ ತೆಗೆದುಕೊಂಡು ಎಲ್ಲಾ ನಿರ್ವಹಿಸುತ್ತಿರುವಾಗ ನೀವು ಅವರ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡವಾ?”

“ಅವರು ಕೇಳಿದ್ದಿದ್ರೆ ಕರ್‍ಕೊಂಡು ಹೋಗ್ತಿರಲಿಲ್ವಾ ಅಂಕಲ್?”

‘ತಂದೆ ಮಗನ್ನ ಕೇಳಬೇಕೇನಯ್ಯಾ? ಅದಕ್ಕೆ ನಾನೇ ಹೇಳಿದೆ ನಿಮ್ಮ ಕೈ ಕಾಲು ಗಟ್ಟಿ ಇರೋದ್ರಿಂದ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ನೀವು ಹಾಸಿಗೆ ಹಿಡಿದರೆ ಯಾರು ನೋಡಿಕೊಳ್ತಾರೆ? ಬೇರೆ ಮನೆಗೆ ಹೋಗು, ಜವಾಬ್ದಾರಿ ಕಡಿಮೆಯಾಗತ್ತೆ, ಕೆಲಸದ ಟೆನ್ಸನ್   ಕಡಿಮೆಯಾಗತ್ತೆ. ಸ್ವಾತಂತ್ರ್ಯ ಸಿಗತ್ತೆ, ತೀರಾ ಕೈಲಾಗಲಿಲ್ಲ ಅಂದಾಗ ವೃದ್ಧಾಶ್ರಮ ಸೇರಿಕೊಳ್ಳೋಂತ.”

ಆದಿತ್ಯನಿಗೆ ಕಪಾಳಕ್ಕೆ ಹೊಡೆದಂತಾಯಿತು. ಅವನು ಮಾತಾಡಲಿಲ್ಲ.

“ನಾನು ಹೇಳಿದ್ದರಲ್ಲಿ ಏನು ತಪ್ಪಿದೆ ಹೇಳು, ನಿನ್ನ ಹೆಂಡ್ತಿ ಬೇರೆ ತನ್ನ ಫ್ರೆಂಡ್ಸ್ ಹತ್ತಿರ ‘ನಮ್ಮತ್ತೆ-ಮಾವ ತಾವು ಡೈರೆಕ್ಟಾಗಿ ದೂರಲ್ಲ. ಮಕ್ಕಳಿಗೆ ಹೇಳಿಕೊಟ್ಟು ಅವರಿಂದ ದೊಡ್ಡ  ಮಾತು ಆಡಿಸ್ತಾರೆ’ ಅಂತ ಹೇಳಿದ್ದಾಳೆ. ನಿಮ್ಮಪ್ಪ ಅಮ್ಮನಿಗೆ ಅಂತಹ ಸಣ್ಣ ಬುದ್ಧಿ ಇಲ್ಲ.”

“ನಿಮಗ್ಯಾರು ಹೇಳಿದ್ರು?”

ನಿನ್ನ ಹೆಂಡ್ತಿ ಕೊಲೀಗ್ ನಳಿನಿ ನನ್ನ ಅಕ್ಕನ ಸೊಸೆ ಕಣಯ್ಯ, ನನಗೆ ವಿಷಯ ತಿಳಿಯದೆ ಇರುತ್ತದಾ?”

”ನಮ್ಮಿಂದ ತಪ್ಪಾಗಿದೆ. ನೀವೇ ಹೇಗಾದರೂ ಅವರನ್ನು ಒಪ್ಪಿಸಿ ಅವರನ್ನು ವಾಪಸ್ಸು ಕಳಿಸಿ.”

“ಅವರು ತುಂಬಾ ಆರಾಮವಾಗಿದ್ದಾರೆ ಕಣಯ್ಯ ಇರಲಿ ಬಿಡು. ..”
ಆದಿತ್ಯ ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಹಿಂದಿರುಗಿದ.


ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=39877

(ಮುಂದುವರಿಯುವುದು)
ಸಿ.ಎನ್. ಮುಕ್ತಾ, ಮೈಸೂರು.

6 Responses

 1. ಕಾದಂಬರಿಯು…ಕುತೂಹಲ ಹರಿಸುತ್ತಾ ಓದಿಸಿಕೊಂಡು ಹೋಗುತ್ತಿದೆ…ಹಾಗೇ …ಚಿಂತನೆ ಗೂ ಹಚ್ಚುವಂತಿದೆ…ಮೇಡಂ

 2. ನಯನ ಬಜಕೂಡ್ಲು says:

  ಇಳಿ ವಯಸ್ಸಿನಲ್ಲಿ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಪ್ರತಿಯೊಂದರಲ್ಲೂ ತಪ್ಪು ಹುಡುಕುತ್ತಿರುತ್ತಾರೆ. ಒಂದು ಹಂತ ದಾಟಿದ ಮೇಲೆ ಹಿರಿಯರು ಪ್ರೀತಿ, ಕಾಳಜಿಯನ್ನು ನಿರೀಕ್ಷಿಸುವುದು ಸಹಜ. ಇದನ್ನು ಅರ್ಥ ಮಾಡಿಕೊಂಡು ವ್ಯವಹರಿಸಿದಾಗ ನೆಮ್ಮದಿ ಕಾಣಬಹುದು ಸಂಸಾರದಲ್ಲಿ.

 3. ಇಂದಿನ ಬದುಕಿನ ವಾಸ್ತವ ಚಿತ್ರಣ
  ಬಹಳಷ್ಟು ಜನರು ತಮ್ಮದೇ ಅನುಭವವೇನೋ ಎನ್ನುವಂತೆ ಮೂಡಿ ಬಂದಿದೆ

 4. Padma Anand says:

  ವಿಭಕ್ತ ಕುಟುಂಬಗಳ ಹಾವಳಿ ಹೆಚ್ಚಾಗಿರುವ ಈ ದಿನಗಳಲ್ಲಿ ಇರುವ ಬೆರಳೆಣಿಕೆಯಷ್ಟು ಅವಿಭಕ್ತ ಕುಟುಂಬಗಳಲ್ಲಿ ನಡೆಯುವ ವಾಸ್ತವ ಬದುಕಿನ ಚಿತ್ರಣ ಎಲ್ಲರೂ ಎಚ್ಚರ ವಹಿಸಬಹುದಾದಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿದೆ.

 5. ಶಂಕರಿ ಶರ್ಮ says:

  ಅವಿಭಕ್ತ ಕುಟುಂಬದಲ್ಲಿ ಹಿರಿಯರೊಡನೆ ಬೆಳೆದ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂಬುದನ್ನು ಸಮರ್ಥವಾಗಿ ನಿರೂಪಿಸುವ ಕಥೆಯ ಕಂತು ತುಂಬಾ ಇಷ್ಟವಾಯ್ತು. ಧನ್ಯವಾದಗಳು ..ನೆಚ್ಚಿನ ಮುಕ್ತಾ ಮೇಡಂ ಅವರಿಗೆ.

 6. ವಿದ್ಯಾ says:

  ಅರ್ಥ ಪೂರ್ಣವಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: