ಕೃತಿ ಪರಿಚಯ : ‘ಕಾಣದ ಗ್ರಾಮಕ್ಕೆ ಕೈಮರ’, ಲೇಖಕರು: ಕೆ.ರಮೇಶ್

Share Button

ಕಾಣದ ಗ್ರಾಮಕ್ಕೆ ಕೈಮರ ಯಾರು? ಯಾವುದು?
ಊರಿಂಗೆ ದಾರಿಯನು ಆರು ತೋರಿದಡೇನು
ಸಾರಾಯದ ನಿಜವ ತೋರುವ ಗುರುವು ತಾನಾರಾದಡೇನು ಸರ್ವಜ್ಞ

ಸರ್ವಜ್ಞನ ಈ ತ್ರಿಪದಿಯು ನೆನಪಾಗಲು ಕಾರಣ ಆತ್ಮೀಯರಾದ ಕೆ.ರಮೇಶ್ ಅವರ ಕೃತಿ ಕಾಣದ ಗ್ರಾಮಕ್ಕೆ ಕೈಮರ‘. ಇದೊಂದು ವಿಶೇಷ ಕೃತಿ. 2018ರಲ್ಲಿ ಕೆ.ರಮೇಶ್ ಅವರು ಭಾರತದ 108 ವಿಶಿಷ್ಟ ಗ್ರಾಮಗಳನ್ನು ಪರಿಚಯಿಸಿ ಕನ್ನಡ ಸಾರಸ್ವತ ಲೋಕಕ್ಕೆ `ಗ್ರಾಮನಿಧಿ‘ ಕೃತಿಯನ್ನು ಕೊಡುಗೆಯಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸುತ್ತೇನೆ.

ಶ್ರೀ ಕೆ.ರಮೇಶ್ ಅವರು ನಮ್ಮ ನಡುವಿನ ಸಶಕ್ತ ಲೇಖಕರು. ವಿಭಿನ್ನ ವಿಷಯಗಳನ್ನು ವಸ್ತುವಾಗಿಸಿಕೊಂಡು ವಿಶೇಷ ಲೇಖನಗಳನ್ನು ಪ್ರಸ್ತುತಿ ಪಡಿಸುವ ಕಲೆ ಅವರಿಗೆ ಒಲಿದಿದೆ. ‘ದೇಶ ಸುತ್ತು ಕೋಶ ಓದು’ ಎಂಬುದನ್ನು ತಮ್ಮ ಹವ್ಯಾಸಗಳನ್ನಾಗಿ ಮಾಡಿಕೊಂಡಿರುವವರು ಕೆ.ರಮೇಶ್‌ ಹಾಗೂ ಡಾ.ಸುಧಾ ದಂಪತಿ. ಇಬ್ಬರೂ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ತಾವು ಕಂಡು ಕೇಳಿದ, ಓದಿ ತಿಳಿದ ಮಾಹಿತಿಗಳನ್ನಾಧರಿಸಿ ಭಾರತದ ವಿಶಿಷ್ಟ ಗ್ರಾಮಗಳನ್ನು ಪರಿಚಯಿಸಲು ಅಣಿಯಾದ ಕೆ.ರಮೇಶ್ ಅವರು ಈ ಮೊದಲು ಪ್ರಕಟಿಸಿದ ಗ್ರಾಮನಿಧಿ ಕೃತಿಯೊಳಗಿನ ಯಾವ ಗ್ರಾಮವೂ ಇಲ್ಲಿ ಪುನರಾವರ್ತಿತವಾಗದಂತೆ ಜಾಗ್ರತೆ ವಹಿಸಿದ್ದಾರೆ.

‘ಕಾಣದ ಊರಿಗೆ ಕೈಮರ’ ಎಂದು ನಾನು ಸೂಚಿಸಿದ ಹೆಸರನ್ನು ಸಹಮತದೊಂದಿಗೆ ಕಾಣದ ಗ್ರಾಮಕ್ಕೆ ಕೈಮರ ಎಂದು ಬದಲಾಯಿಸಿಕೊಳ್ಳಲಾಯಿತು. ‘ಕೈಮರ’ ಎಂದರೆ ಕೈಕಂಬ, ಇಂಗ್ಲೀಷಿನಲ್ಲಿ ಹ್ಯಾಂಡ್‌ ಪೋಸ್ಟ್, ಎರಡು ಮೂರು ರಸ್ತೆಗಳು ಕೂಡುವ ಸ್ಥಳವನ್ನು ‘ಕೂಡಿಗೆ’, ‘ಕೂಡುರಸ್ತೆ’ ಎಂದು ಕರೆಯುವ ವಾಡಿಕೆ ಇದೆ. ಬಿದ್ದು ಹೋದ ಕೈಮರವನ್ನು ನಿಲ್ಲಿಸಿ, ನಾವು ಹೋಗಬೇಕಾದ ಊರಿನ ಹಾದಿ ಹಿಡಿಯಲು ಸಾಧ್ಯ. ಹಾಗಾಗಿ ‘ಕೈಮರ’ ನಮಗೆ ಮಾರ್ಗಸೂಚಿ, ರಮೇಶ್ ಅವರ ಕೃತಿ ನಮಗೆ ಭಾರತದ ವಿಶಿಷ್ಟ ಗ್ರಾಮಗಳ ಕಡೆಗೆ ಕೈತೋರುತ್ತಿದೆ. ಹಾಗಾಗಿ ಈ ಕೃತಿ ‘ಕೈಮರ’ ನಿಜವಾದ ಅರ್ಥದಲ್ಲಿ ಕೃತಿಕಾರ ರಮೇಶ್‌ ಅವರೇ ನಮಗೆ ಕೃತಿಯಲ್ಲಿನ ಎಂಭತ್ನಾಲ್ಕು ಗ್ರಾಮಗಳಿಗೆ ಕೈಮರ! ಲೇಖಕರು ತಾವು ಪರಿಚಯಿಸಹೊರಟಿರುವ ಗ್ರಾಮಗಳು ಯಾವ ರಾಜ್ಯದಲ್ಲಿವೆ? ಯಾಕೆ ವಿಶಿಷ್ಟ? ಎನ್ನುವುದನ್ನು ಸ್ಪಷ್ಟವಾಗಿ ಹೇಳುವ ಪ್ರಯತ್ನಪಟ್ಟಿದ್ದಾರೆ, ಆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಸರ್ಕಾರದ ಗಣನೆಗೆ, ರೆವಿನ್ಯೂ ಇಲಾಖೆಗೆ ‘ಗ್ರಾಮ’ ಎನ್ನಿಸಿಕೊಳ್ಳಲು ಒಂದು ಊರಿನಲ್ಲಿ ಇಂತಿಷ್ಟು ಜನಸಂಖ್ಯೆ ಇರಬೇಕು. (ಸು 5000+). ಆ ಊರಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೆ ಪಕ್ಕದ ಊರು/ಊರುಗಳನ್ನು ಸೇರಿಸಿ ‘ಗ್ರಾಮ’ ಎಂದು ವಿಭಾಗಿಸುತ್ತಾರೆ. ಅದರ ಆಡಳಿತ ಅನುಕೂಲಕ್ಕಾಗಿ ‘ಗ್ರಾಮ ಪಂಚಾಯಿತಿ’ ನೇಮಕವಾಗುತ್ತದೆ – ಚುನಾವಣೆ ಮೂಲಕ. ಕೆ.ರಮೇಶ್ ಅವರ ಕೃತಿಯೊಳಗಿನ ಎಲ್ಲಾ ಊರುಗಳು ಈ ಅರ್ಥದ ಗ್ರಾಮಗಳ  ಊರಿಗೆ ಪುರ, ಪಟ್ಟಣ, ನಗರ ಎಂದೆಲ್ಲಾ ಹೆಸರಿರುತ್ತವೆಯಲ್ಲ ಹಾಗೆಯೇ ಇಲ್ಲಿನ ಎಲ್ಲಾ ಊರುಗಳು ‘ಗ್ರಾಮ’ಗಳೆಂದೇ  ಗುರುತಿಸಲ್ಪಟ್ಟಿವೆ. ‘ಗ್ರಾಮ’ ಅನ್ನುವ ಪದಕ್ಕೆ ಪರ್ಯಾಯವಾಗಿ ಹಳ್ಳಿ, ಪಳ್ಳಿ, ಊರು, ಗುಡಾ, ಗಾಂವ್, ಖೇಡಾ, ಕಸಬಾ ಎನ್ನುವ ಪದಗಳನ್ನು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಬಳಸುತ್ತಾರೆ. ಈ ಕೃತಿಯಲ್ಲಿ ಊರು/ ಗ್ರಾಮ ಎಂಬರ್ಥ ಸಾಕಲ್ಲವೆ.

ಹೆಚ್ಚು ಪರಿಚಿತವಲ್ಲದ ಗ್ರಾಮಗಳು ಯಾಕೆ ಆಕರ್ಷಕವಾಗುತ್ತವೆ ಎಂಬುದನ್ನು ನಿರೂಪಿಸುವ ಕೃತಿ ‘ಕಾಣದ ಗ್ರಾಮಕ್ಕೆ ಕೈಮರ’. ಕೃತಿ ಕೈ ಸೇರಿದಾಗ ಮೊದಲು ಗ್ರಾಮಗಳ ಹೆಸರುಗಳನ್ನು ಗಮನಿಸಿದೆ. ಶೀರ್ಷಿಕೆಯ ಪಕ್ಕದಲ್ಲಿ ಆವರಣ (ಕಂಸ) ದೊಳಗೆ ಆ ಗ್ರಾಮದ ವೈಶಿಷ್ಟ್ಯವೇನು ಎಂಬುದನ್ನು ಲೇಖಕರು ನಮೂದಿಸಿದ್ದಾರೆ. ಉದಾ: ತುಂಗಾ ತೋಗ್ರಾಮ್  (ತಾವರೆ ಸಿಲ್ಕ್ ಗ್ರಾಮ) ವಿವರ ನೀಡುವಾಗ ಯಾವ ರಾಜ್ಯದ ಗ್ರಾಮ ಎಂಬ ಮಾಹಿತಿ ಇದೆ.


ಭಾರತದ ಇಪ್ಪತ್ತೆಂಟು ರಾಜ್ಯಗಳ ಪೈಕಿ ಇಪ್ಪತ್ತೊಂದು ರಾಜ್ಯಗಳ ಎಂಬತ್ತನಾಲ್ಕು ಗ್ರಾಮಗಳ, ಅದರಲ್ಲೂ ವಿಶಿಷ್ಟ ಗ್ರಾಮಗಳ ಪರಿಚಯ ನೀಡುವ ಕೈಪಿಡಿ- ರಮೇಶ್ ಅವರ ಕೃತಿ. ಈ ಕೃತಿಯಲ್ಲಿ ಕರ್ನಾಟಕದ ಇಪ್ಪತ್ತಾರು ಗುಜರಾತಿನ ಹತ್ತು, ಕೇರಳದ ಏಳು, ರಾಜಸ್ಥಾನದ ಐದು, ತಮಿಳುನಾಡಿನ ನಾಲ್ಕು, ಮಹಾರಾಷ್ಟ್ರ, ಒರಿಸ್ಸಾ, ನಾಗಾಲ್ಯಾಂಡ್, ಮಣಿಪುರ ಮತ್ತು ಮಧ್ಯಪ್ರದೇಶ ರಾಜ್ಯಗಳ ತಲಾ ಮೂರು, ಉತ್ತರಾಖಂಡ, ತೆಲಂಗಾಣ, ಮೇಘಾಲಯ, ಅಸ್ಸಾಂ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ರಾಜ್ಯಗಳ ತಲಾ ಎರಡು, ಬಿಹಾರ, ಆಂಧ್ರಪ್ರದೇಶ, ಪಂಜಾಬ್, ಅರುಣಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ತಲಾ ಒಂದರಂತೆ ನಮ್ಮ ದೇಶದ ಎಂಬತ್ತನಾಲ್ಕು ಗ್ರಾಮಗಳ ಪರಿಚಯವನ್ನು ನೀಡಲಾಗಿದೆ. ತಮ್ಮ ಅಧ್ಯಯನ ಶೀಲ ಗುಣಕ್ಕೆ ಕೆ. ರಮೇಶ್ ಅವರು ಇಲ್ಲಿ ಸಾಕ್ಷಿಯಾಗಿ ನಿಲ್ಲುತ್ತಾರೆ.

ರಾಜ್ಯವಾರು ಪಟ್ಟಿ ಮಾಡಿದಂತೆ ಕೃತಿಯೊಳಗಿನ ಗ್ರಾಮಗಳನ್ನು ವೈಶಿಷ್ಟ್ಯತೆಗನುಗುಣವಾಗಿ ವಿಂಗಡಿಸುವುದು ಕಷ್ಟಸಾಧ್ಯ. ಕಲೆ, ವಾಸ್ತುಶಿಲ್ಪ, ಆಚರಣೆ- ಸಂಪ್ರದಾಯಗಳು, ಪ್ರವಾಸೀ ತಾಣಗಳು, ಸಂಸ್ಕೃತ ಗ್ರಾಮಗಳು, ವೀಣೆ ಗ್ರಾಮ, ಕೊಳಲು ಗ್ರಾಮ, ಹತ್ತಿ ಮತ್ತು ರೇಷ್ಮೆ ವಸ್ತ್ರ, ತಾವರೆ ಸಿಲ್ಕ್, ಧ್ವಜ ಗ್ರಾಮ, ಪುಸ್ತಕ ಗ್ರಾಮಗಳು, ಕೃಷಿ ಗ್ರಾಮ, ಕನ್ನಡಿಗ್ರಾಮ, ವಿಶೇಷ ರೈಲ್ವೆ ನಿಲ್ದಾಣಗಳ, ಪೆನ್ಸಿಲ್ ಗ್ರಾಮ, ಯೋಧ ಗ್ರಾಮ, ಶಿಕ್ಷಕರ ಗ್ರಾಮ, ಹಾಕಿ ಗ್ರಾಮ, ಅತ್ಯಂತ ಸಣ್ಣ ಹಾಗೂ ಅತ್ಯಂತ ವಿಸ್ತಾರ ಗ್ರಾಮ, ಶ್ರೀಮಂತ ಗ್ರಾಮ, ನಿರ್ಜನ ಗ್ರಾಮ, ಭಾರತದ ಕೊನೆಯ ಗ್ರಾಮ, ಓಹ್…..ಎಲ್ಲವೂ ವಿಶೇಷ ಗ್ರಾಮಗಳೇ! ‘ಗ್ರಾಮ’ ಎಂದರೆ ‘ಹಳ್ಳಿಗಾಡು’ ಅಂದುಕೊಳ್ಳಬೇಕಿಲ್ಲ. ಅಕ್ವಾಫೋನಿಕ್ಸ್, ಸೌರಶಕ್ತಿ, ಸುರಂಗಗಳ, ಸ್ವಚ್ಛತೆಯ, ತೇಲುವ ಗ್ರಾಮಗಳಲ್ಲದೆ ಹಸಿರು ಗ್ರಾಮಗಳ ಪರಿಚಯವೂ ಇಲ್ಲಿದೆ.

ಸ್ಥಳನಾಮ ಪುರಾಣದ ಕೃತಿಗಳಲ್ಲಿ ಊರಿಗೆ ಹೆಸರು ಹೇಗೆ ಬಂತು ಎಂಬ ಮಾಹಿತಿ ಇರುತ್ತದೆ. ಪ್ರವಾಸೀ ತಾಣಗಳ ಪರಿಚಯದ ಪುಸ್ತಕಗಳಲ್ಲಿ ನಿಗದಿತ ಸ್ಥಳ, ರೈಲ್ವೆ/ ಬಸ್ ನಿಲ್ದಾಣದಿಂದ ಎಷ್ಟು ದೂರದಲ್ಲಿದೆ, ಯಾವ ದಿಕ್ಕಿನಲ್ಲಿದೆ, ವಾಹನ ಸೌಕರ್ಯ, ವಸತಿ ಸೌಕರ್ಯ, ಇನ್ನಿತರ ವ್ಯವಸ್ಥೆಗಳ ವಿವರಗಳಿರುತ್ತವೆ. ರಮೇಶ್ ಅವರ ಕೃತಿಯಲ್ಲಿ ಸ್ಥಳನಾಮದ ಪರಿಚಯ ಕೆಲವು ಕಡೆ ಆಗಬಹುದು, ಮಿಕ್ಕ ವಿಚಾರಗಳಿಲ್ಲ. ಆಸಕ್ತರಿಗೆ ಯಾವ ವಿಶಿಷ್ಟ ಗ್ರಾಮ ಯಾವ ರಾಜ್ಯದಲ್ಲಿದೆ, ಅದರ ವೈಶಿಷ್ಟ್ಯವೇನು ಎಂದು ತಿಳಿಸುವ ರಮೇಶ್ ಅವರ ಕೃತಿ ಓದುಗರ ಕುತೂಹಲಕ್ಕೆ ಕಾರಣವಾಗುತ್ತದೆ. ಲೇಖಕರು ಆ ಬಗ್ಗೆ ಆಸಕ್ತಿ ಮೂಡಿಸುತ್ತಾರೆ. ತಿಳಿಯಬೇಕು ಎಂಬ ಮನಸ್ಸುಳ್ಳವರು ಆಯಾ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯ, ರೆವಿನ್ಯೂ ಇಲಾಖೆಯ, ಮುಜರಾಯಿ ಇಲಾಖೆಯ ಅಥವಾ ಸ್ಥಳೀಯ ಪ್ರವಾಸೀ ಏಜೆಂಟರ ಮೂಲಕ ತಿಳಿಯಬಹುದು. ಸ್ಥಳ ವೀಕ್ಷಣೆಗೆ ಅದು ನೆರವಾಗಬಲ್ಲದು.

ಆಧುನಿಕತೆಗೆ ಮರುಳಾಗದ ವಿನಿಮಯ ಪದ್ಧತಿಯನ್ನೇ (ಬಾರ್ಟರ್ ಸಿಸ್ಟಮ್) ಅನುಸರಿಸುತ್ತಿರುವ ಸ್ವಾವಲಂಬೀ ಗ್ರಾಮ, ಹಸಿವು ಎಂದರೇನು ಎಂಬುದನ್ನರಿಯದ ಸಾಮೂಹಿಕ ಅಡಿಗೆ ಮಾಡಿ ಊಟ ಮಾಡುವ ನೆಮ್ಮದಿಯ ಗ್ರಾಮ, ಊರಲ್ಲೆಲ್ಲೂ ಬೆಕ್ಕುಗಳೇ ಇಲ್ಲದ ಮೂಷಿಕ ಗ್ರಾಮ ಇವುಗಳಲ್ಲದೆ ಭಾರತದಲ್ಲಿ ಆಫ್ರಿಕನ್ ಗ್ರಾಮ, ಪೋರ್ಚುಗೀಸ್ ಗ್ರಾಮ… ಹೀಗೆಯೇ ಹೇಳುತ್ತಾ ಹೋದರೆ ಎಲ್ಲ ಗ್ರಾಮಗಳ ಬಗ್ಗೆಯೂ ಉಲ್ಲೇಖಿಸಬೇಕಾಗುತ್ತದೆ. ಇಲ್ಲಿ ಯಾವ ರಾಜ್ಯದ ಯಾವ ಗ್ರಾಮ ಎಂಬುದನ್ನು ನಾನು ಹೇಳಿಲ್ಲ… ಕಾರಣ ಓದುಗರಿಗೂ ಒಂದಿಷ್ಟು ಕುತೂಹಲ ಮೂಡಲಿ ಎಂದಷ್ಟೇ!

ವೈಯಕ್ತಿಕವಾಗಿ ನನಗೆ ಮೆಚ್ಚುಗೆಯಾದದ್ದು ಈ ‘ಕೈಮರ’, ಕೃತಿಯ ಓದುಗಳಾಗಿ ಎಂದಾದರೂ ಓದಿ ಮುಗಿಸುತ್ತಿದ್ದೆ. ‘ಮುನ್ನುಡಿ ಬರೆದುಕೊಡಿ’ ಎನ್ನುವ ರಮೇಶ್ ಅವರ ಪ್ರೀತಿ- ಅಭಿಮಾನಕ್ಕೆ ಕಟ್ಟುಬಿದ್ದು ‘ಸೋದರನಿಗೆ ಶ್ರೇಯಸ್ಸಾಗಲಿ’ ಎಂದು ಒಪ್ಪಿಕೊಂಡೆ. ಈ ಮುನ್ನುಡಿಯಿಂದ ಅವರಿಗೇನು ಲಾಭವೋ ಕಾಣೆ! ನನಗೆ ಭಾರತದ 21 ರಾಜ್ಯಗಳ 84 ಗ್ರಾಮಗಳ ಪ್ರಯಾಸವಿಲ್ಲದ ಪ್ರವಾಸ ಪೂರೈಸಿದ ಸಂತೋಷವಾಗಿದೆ. ತಾಯ್ನಾಡಿನ ಭೌಗೋಳಿಕ ಜ್ಞಾನ ಒಂದಷ್ಟು ಹೆಚ್ಚಿತು ಎಂದು ಹೇಳುತ್ತಾ ‘ಧನ್ಯಳಾದ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತ ಮಾತೆಯ ಮಡಿಲಲ್ಲಿ ಹುದುಗಿರುವ ಗ್ರಾಮ ಮುತ್ತುಗಳ ಪರಿಚಯ ಹೀಗೆಯೇ ನಮಗೆ ಲಭಿಸಲಿ. ಈ ನಿಟ್ಟಿನಲ್ಲಿ ರಮೇಶ್ ಅವರ ಲೇಖನಿ ವಿಶ್ರಮಿಸದಿರಲಿ.

‘ಕಾಣದ ಗ್ರಾಮಕ್ಕೆ ಕೈಮರ’ ಕನ್ನಡಬಲ್ಲ ಭಾರತೀಯರೆಲ್ಲರ ಕೊನೆಯ ಪಕ್ಷ ಕನ್ನಡಿಗರೆಲ್ಲರ ಮನೆಯಲ್ಲಿ ಇರಬೇಕಾದ ಕೃತಿ, ಗ್ರಾಮಗಳ ವೈಶಿಷ್ಟ್ಯದ ಪರಿಚಯದೊಂದಿಗೆ ಸಂಬಂಧಪಟ್ಟ ಚಿತ್ರಗಳನ್ನೂ ಒದಗಿಸಿರುವ ರಮೇಶ್ ಅವರನ್ನು ಅಭಿನಂದಿಸಲೇಬೇಕು. ನಿರಂತರ ಅಧ್ಯಯನ ಶೀಲರಾಗಿರುವ ರಮೇಶ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಅಮೂಲ್ಯ ಕೃತಿಗಳನ್ನು ಕನ್ನಡಮ್ಮನಿಗೆ ಅರ್ಪಿಸುವಂತಾಗಲಿ. ಸಾಧ್ಯವಾದಲ್ಲಿ ಪ್ರಸ್ತುತ ಕೃತಿಯು ಇಂಗ್ಲಿಷಿಗೂ, ಹಿಂದಿಗೂ ಅನುವಾದವಾದಲ್ಲಿ ರಾಷ್ಟ್ರಮಟ್ಟದ ಸಾಹಿತ್ಯಕೃತಿಯಾದೀತು. ಆ ನಿಟ್ಟಿನಲ್ಲಿ ರಮೇಶ್ ಅವರು ಯೋಚಿಸಲಿ ಎಂಬ ಆಶಯದೊಂದಿಗೆ ಅವರ ಸಾಹಿತ್ಯ ಸೇವೆಗೆ ಶುಭಕೋರುತ್ತಾ ವಿರಮಿಸುವೆ.

-ಕೆರೋಡಿ ಎಂ. ಲೋಲಾಕ್ಷಿ,  ಮೈಸೂರು

7 Responses

 1. ನಯನ ಬಜಕೂಡ್ಲು says:

  ಸೊಗಸಾಗಿದೆ ಕೃತಿ ಪರಿಚಯ. ಇಂತಹ ಪುಸ್ತಕದ ಕುರಿತಾದ ಪರಿಚಯ ಆ ಪುಸ್ತಕದೊಳಗೆ ಏನಿರಬಹುದು ಅನ್ನುವ ಒಂದು ಐಡಿಯಾ ವನ್ನು ಓದುಗರಿಗೆ ನೀಡುತ್ತದೆ.

 2. ವಾವ್…ಸೊಗಸಾಗಿ ಕೃತಿ ಪರಿಚಯ ಮಾಡಿರುವ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು ಲೋಲಾಕ್ಷಿ ಮೇಡಂ.. ಸೊಗಸಾದ ಬರೆಹ…ಈಗಾಗಲೇ ನಾನು ಕೃತಿಯನ್ನು ಓದಿರುವುದರಿಂದ ನಿಮ್ಮ ಬರೆಹ ಬಹಳ ಆಪ್ತವಾಗಿ ಮನಕ್ಕೆ ಮುದಗೊಂಡಿತು

 3. ಉತ್ತಮವಾದ ಕೃತಿ ಪರಿಚಯ.ಇಂದೆ ಆ ಪುಸ್ತಕವನ್ನು ಕೊಂಡು ಓದಬೇಕೆಂಬ ಹಂಬಲ ಮೂಡಿಸುವ ನಿಮ್ಮ ಲೇಖನ ಸೊಗಸಾಗಿದೆ

 4. Padmini Hegde says:

  ಕೃತಿ ಪರಿಚಯ ಚೆನ್ನಾಗಿದೆ!

 5. ಶಂಕರಿ ಶರ್ಮ says:

  ವಿಶಿಷ್ಟವಾದ ಶೀರ್ಷಿಕೆ ಹೊತ್ತ ಹೊತ್ತಗೆಯ ವಿಮರ್ಶಾತ್ಮಕ ಕಿರು ಪರಿಚಯವು ಬಹಳ ಸೊಗಸಾಗಿ ಮೂಡಿಬಂದಿದೆ.

 6. Padma Anand says:

  ಕೃತಿಯ ಆಮೂಲಾಗ್ರ ವೈಶಿಷ್ಟ್ಯವನ್ನು ತೆರೆದಿಡುವ ಚಂದದ ಪುಸ್ತಕಾವಲೋಕನ.

 7. ಕೆರೋಡಿ.ಎಂ.ಲೋಲಾಕ್ಷಿ says:

  ನನ್ನ ಬರಹವನ್ನು ಮೆಚ್ಚಿದ್ದಕ್ಕೆ, ಕೃತಿಯನ್ನು ಓದಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಕ್ಕೆ ಸಹೃದಯ ಸಾಹಿತಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು…
  ಪ್ರಕಟಿಸಿದ *ಸುರಹೊನ್ನೆ* ಯ ಗೆಳತಿ ಹೇಮಮಾಲಾ ಮತ್ತು ಅವರ ಬಳಗಕ್ಕೆ ಪ್ರೀತಿಯ ಕೃತಜ್ಞತೆಗಳು…..
  ಇದಕ್ಕೆ ಕಾರಣಕರ್ತರಾದ ಗೆಳತಿ ಬಿ.ಆರ್.ನಾಗರತ್ನ
  ಅವರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: