ಜೀವನದ ಸಾರ ತಿಳಿಸುವ ಯುಗಾದಿ

Share Button

‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’  ಎಂಬ ವರಕವಿ ದ ರಾ ಬೇಂದ್ರೆಯವರ ಈ ಪ್ರಸಿದ್ಧ ಸಾಲುಗಳನ್ನು ಯಾರು ತಾನೇ ಮರೆಯಲು ಸಾಧ್ಯ. ಸದಾ ಚಲನಶೀಲತೆಯನ್ನು ಹೊಂದಿರುವ ನಮ್ಮ‌ ಜೀವನದಲ್ಲಿ ಹೊಸ ಹೊಸ ಅವಕಾಶ ಹಾಗೂ ಭರವಸೆಗಳ ಸಂದೇಶವನ್ನು ಹೊತ್ತು ತರುವ ಹಬ್ಬವೇ “ಯುಗಾದಿ”.

ಬೇವು-ಬೆಲ್ಲ ಮಿಶ್ರಣದ ಸೇವನೆ ಏಕೆ?

ಯುಗಾದಿಯ ವಿಶೇಷ ‘ಬೇವು-ಬೆಲ್ಲ”.  ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ಸಾರ ಇರುತ್ತದೆ. ಯುಗಾದಿಯ ಈ ಬೇವು ಬೇಲ್ಲ ಜೀವನದ ಸಾರವನ್ನೇ ಹೊತ್ತು ತಂದಿದೆ.  ಆರೋಗ್ಯಯುತವಾಗಿ ಇರಲು ಕಾಲಕ್ಕೆ ತಕ್ಕಂತೆ ನಮ್ಮ ಆಹಾರ, ವಿಹಾರ ಚರ್ಯೆಗಳನ್ನು ಹೊಂದಿಸಿಕೊಳ್ಳಬೇಕೆಂಬುದನ್ನು ಆಯುರ್ವೇದ ಶಾಸ್ತ್ರವು ಹೇಳುತ್ತದೆ. ಯುಗಾದಿಯ ದಿನ ಸೇವಿಸುವ ಬೇವು-ಬೆಲ್ಲದಲ್ಲಿ ಹಾಗೂ ಭಕ್ಷ್ಯಾದಿಗಳಲ್ಲಿ ಇಂಥಹದ್ದೊಂದು ಆರೋಗ್ಯಕ್ಕಾಗಿ ಆಹಾರಸೂತ್ರವನ್ನು ಕಟ್ಟಿಕೊಡಲಾಗಿದೆ. ಯುಗಾದಿಯಂದು ಪ್ರಮುಖವಾಗಿ ಬೇವು ಬೆಲ್ಲಗಳ ಮಿಶ್ರಣವನ್ನು ಮನೆಯವರಿಗೆ, ಬಂಧು, ಹಿತೈಷಿಗಳಿಗೆ ಹಂಚುವುದು ಸರ್ವೇ ಸಾಮಾನ್ಯ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕಂ ದಲಭಕ್ಷಣಮ್ ||

ಇದರರ್ಥ ದೀರ್ಘಾಯಸ್ಸು, ವಜ್ರದಂತೆ ಗಟ್ಟಿಮುಟ್ಟಾದ ದೇಹ, ಸಕಲ ಸಂಪತ್ತು ಇವುಗಳ ಪ್ರಾಪ್ತಿ ಹಾಗೂ ನಾನಾ ಬಗೆಯ ರೋಗರುಜಿನಗಳ ನಿವಾರಣೆ ಇವೆಲ್ಲವೂ ಬೇವು ಭಕ್ಷಣೆಯಿಂದ ಸಾಧ್ಯವಿದೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ವಿಜ್ಞಾನದ ಪ್ರಕಾರ ನೋಡುವುದಾದರೆ ಬೇವಿನಲ್ಲಿ ಅತಿ ಹೆಚ್ಚು ಬ್ಯಾಕ್ಟಿರಿಯಾದಂಥಹ ವಿಷಜಂತುಗಳನ್ನು ನಾಶಪಡಿಸುವ ಶಕ್ತಿ ಇದೆ. ವಿಷಮ ಜ್ವರ, ಚರ್ಮ ಖಾಯಿಲೆ ಇತ್ಯಾದಿಗಳ ಚಿಕಿತ್ಸೆಯಲ್ಲಿ ಆಯುರ್ವೇದದಲ್ಲಿ ಬೇವಿನ ಮಹತ್ವವನ್ನು ಹೇಳಲಾಗಿದೆ. ಇನ್ನು ಬೆಲ್ಲವನ್ನು ‘ಗುಡ’ ಎನ್ನಲಾಗಿದ್ದು, ಇದರ ಸೇವನೆಯು ದೇಹವನ್ನು ತಂಪಾಗಿ ಇರಿಸುವುದಲ್ಲದೇ ನಮ್ಮ ಶ್ವಾಸಕೋಶವನ್ನು ಶುದ್ಧೀಕರಿಸುವ ಮತ್ತು ಪಚನ ಕ್ರಿಯೆಯನ್ನು ಸುಲಭಗೊಳಿಸುವ ಸಾಮರ್ಥ್ಯವನ್ನು ಬೆಲ್ಲ ಹೊಂದಿದೆ. ಹೀಗೆ ವರ್ಷದ ಆರಂಭದ ದಿನದಿಂದಲೇ ನಾವು ನಮ್ಮ ಆರೋಗ್ಯದ ಕಾಳಜಿಯನ್ನು ವಹಿಸುವುದನ್ನು ನಮಗೆ ಯುಗಾದಿಯ ಆಚರಣೆ ಕಲಿಸಿಕೊಡುತ್ತದೆ.

ಬೇವು ಜೀವನದ ಕಷ್ಟಗಳನ್ನು, ಬೆಲ್ಲ ಸುಖವನ್ನು ಸಂಕೇತಿಸುವುದಲ್ಲದೇ, ಬೇವುಬೆಲ್ಲದ ಮಿಶ್ರಣವು ಜೀವನದ ಸುಖ-ದುಃಖಗಳ ಸಮ ಸ್ವೀಕಾರವನ್ನು ಸಾರಿ ಹೇಳುತ್ತದೆ. ಸುಖವನ್ನೇ ಬಯಸುತ್ತೇವಾದರೂ ಜೀವನವೆಂದರೆ ಕೇವಲ ಸುಖಮಯವಾಗಿರಲು ಸಾಧ್ಯವಿಲ್ಲ. ಸುಖದ ಅನುಭವವಾಗಲಾದರೂ ದುಃಖ ಅನುಭವಿಸಲೇ ಬೇಕು ಎನ್ನುತ್ತಾರೆ ನಮ್ಮ ಹಿರಿಯರು. ಅಂತೆಯೇ ಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ಎಂಬುದಾಗಿ ಗೀತೆಯ ಶ್ರೀಕೃಷ್ಣನು ಹೇಳುವಂತೆ ಸುಃಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಭಾರತೀಯರ ಪಾಲಿಗೆ ಜೀವನ ಧರ್ಮ. ಇದನ್ನೇ ಸಾಂಕೇತಿಕವಾಗಿ ಇಲ್ಲಿ ಹೇಳಲಾಗಿದೆ. ಉಳಿದಂತೆ ಬೇಸಿಗೆಯಲ್ಲಿ ಶರೀರದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಪಾನಕ, ಕೋಸಂಬರಿ ಇತ್ಯಾದಿ ತಂಪು ಪದಾರ್ಥಗಳ ಸೇವನೆಯನ್ನು ಪಾನ-ಭೋಜನಾದಿಗಳಲ್ಲಿ ಹೇಳಲಾಗಿದೆ.

ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಅದ್ದೂರಿಯಾಗಿ ಆಚರಿಸುವ ಯುಗಾದಿಯು ಸರ್ವರ ಬದುಕಿನಲ್ಲೂ ಹೊಸ ಹರ್ಷ ಹಾಗೂ ನೆಮ್ಮದಿಯನ್ನು ತರಲೆಂದು ಹಾರೈಸೋಣ.

-ಸುರೇಂದ್ರ ಪೈ, ಭಟ್ಕಳ

7 Responses

  1. ನಯನ ಬಜಕೂಡ್ಲು says:

    ಹಬ್ಬದ ಮಹತ್ವ, ಹಿನ್ನಲೆಯನ್ನು ತಿಳಿಯಪಡಿಸಿವ ಲೇಖನ.

  2. ಪದ್ಮಾ ಆನಂದ್ says:

    ಸಂದರ್ಭೋಚಿತವಾಗಿ ಯುಗಾದಿ ಹಬ್ಬದಂದು ಸೇವಿಸುವ ಬೇವುಬೆಲ್ಲಗಳ ಕುರಿತಾದ ವಿವರಣಾತ್ಮಕ ಲೇಖನ.

  3. ಯುಗಾದಿ ಹಬ್ಬದ.. ವಿಶೇಷತೆ ತಿಳಿಸುವ ಲೇಖನ.. ಚೆನ್ನಾಗಿ ದೆ..

  4. ಶಂಕರಿ ಶರ್ಮ says:

    ಯುಗಾದಿ ಹಬ್ಬದ ಆಚರಣೆಯ ಮಹತ್ವದೊಂದಿಗೆ; ಈ ದಿನ ಸೇವಿಸುವ ಬೇವು ಬೆಲ್ಲದ ಮಿಶ್ರಣ ಹಾಗೂ ಇತರ ಆಹಾರಗಳ ಸೇವನೆಯ ಅಗತ್ಯತೆಯ ಮಾಹಿತಿ ಹೊತ್ತ ಅರ್ಥಪೂರ್ಣ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: