ಅವಿಸ್ಮರಣೀಯ ಅಮೆರಿಕ : ಎಳೆ 84

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕುದಿಯುವ ಗಂಧಕದ ಮುಂದೆ….

ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆದರೂ ನಾವು ಗಮ್ಯ ತಲಪದಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಪ್ರವಾಸಿಗರಲ್ಲಿ, ‘ಇನ್ನೆಷ್ಟು ದೂರ..??` ಎಂದು ಕೇಳಲು ಪ್ರಾರಂಭಿಸಿದೆವು. ‘ಇಲ್ಲೇ …ಸ್ವಲ್ಪ ದೂರ ಅಷ್ಟೇ ` ಎಂದಾಗ ಎಲ್ಲಿಲ್ಲದ ಉತ್ಸಾಹದಿಂದ ಮುಂದೆ ನಡೆದೆವು. ಆದರೆ, ಮತ್ತೂ ಅರ್ಧ ತಾಸು ನಡೆದರೂ  ಏನೂ ಸಿಗಲಿಲ್ಲ. ಅಂತೂ ಭರ್ತಿ ಎರಡೂವರೆ ತಾಸು ನಡಿಗೆ ಬಳಿಕ ನಾವು ಒಂದು ಬೆಟ್ಟದ ಶಿಖರದಲ್ಲಿದ್ದೆವು. ಅನತಿ ದೂರದಲ್ಲಿ, ಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ಕೆಳಗಡೆ ಸಮತಟ್ಟಾದ ಪ್ರದೇಶ ಕಾಣುತ್ತಿತ್ತು. ಅಲ್ಲಿಗೆ ಸ್ವಲ್ಪ ದೂರ ಇಳಿಜಾರು ಪ್ರದೇಶದಲ್ಲಿ ಜಾಗರೂಕತೆಯಿಂದ ನಡೆಯಬೇಕಿತ್ತು. ಅಲ್ಲಿಗೆ ನಮ್ಮ ದಂಡು ತಲಪಿದಾಗ, ಅಲ್ಲಿ ಬಿಸಿ ಗಂಧಕದ ವಾಸನೆ ಎಲ್ಲೆಡೆ ಹಬ್ಬಿತ್ತು. ವಿಶಾಲವಾದ ಬಯಲು ಪ್ರದೇಶದಲ್ಲಿ ನಡೆದಾಡಲು, ಮೂರಡಿ ಎತ್ತರಕ್ಕೆ ಮರದ ಸೇತುವೆಯನ್ನು ಉದ್ದಕ್ಕೂ ಹಾಕಲಾಗಿತ್ತು. ಅದರ ಮೇಲೆ ನಡೆದು ಹೋದಾಗ ಮುಂಭಾಗದಲ್ಲಿ ಹಲವಾರು ಕಡೆಗಳಲ್ಲಿ ಕುದಿಯುವ ಗಂಧಕವು ಹತ್ತಾರು ಮೀಟರ್ ಎತ್ತರಕ್ಕೆ ಚಿಮ್ಮಿ ನೆಗೆಯುವುದನ್ನು ನಿಬ್ಬೆರಗಾಗಿ ನೋಡಿದೆವು. ಆ ಪ್ರದೇಶದಲ್ಲಿ ಹರಡಿದ್ದ ಗಂಧಕದ ದಟ್ಟ ಹೊಗೆಯಿಂದಾಗಿ, ಆಗಾಗ ಕುದಿಯುವ ಗಂಧಕದ ಸೆಲೆಗಳು ಪೂರ್ತಿ ಮರೆಯಾಗಿಬಿಡುತ್ತಿದ್ದವು. ಭೂಗರ್ಭದಲ್ಲಿರುವ ಜ್ವಾಲಾಮುಖಿಯು ಮೇಲ್ಮುಖವಾಗಿ ಹಾಕಿದ ಒತ್ತಡದಿಂದಾಗಿ ಗಂಧಕದ ಸೆಲೆಗಳೂ ಕುದಿಯುತ್ತಾ ಚಿಮ್ಮುವ ಪ್ರಕ್ರಿಯೆಯು ಪ್ರಕೃತಿಯ ಇನ್ನೊಂದು ಭೀಕರ ಮುಖವನ್ನು ಅನಾವರಣಗೊಳಿಸಿತ್ತು! ನಾವು ನಿಂತಿದ್ದ ಸೇತುವೆಯ ಕೆಳಭಾಗದಿಂದ, ಗಂಧಕ ಮಿಶ್ರಿತ ಬಿಸಿಯಾದ ನೀರು ನಿಧಾನವಾಗಿ ಹರಿಯುತ್ತಿತ್ತು. ಒಂದರ್ಧ ತಾಸು ಅಲ್ಲಿದ್ದು, ಅಲ್ಲೇ ಪಕ್ಕದಲ್ಲಿದ್ದ ಎತ್ತರದ ಜಾಗದಲ್ಲಿ ನಿಂತು ಪ್ರಕೃತಿಯ ಈ ವಿಚಿತ್ರವನ್ನು ಪೂರ್ತಿ ವೀಕ್ಷಿಸಿ ಹಿಂತೆರಳಲು ಎಲ್ಲರಿಗೂ ಆತುರ.. ಸಮಯ ಮೀರಿದರೆ ಕತ್ತಲಾಗುವ ಭಯ ಬೇರೆ! ಈ ಆತಂಕದ ನಡುವೆಯೇ ನಾನು, ಹರಿಯುತ್ತಿರುವ ಗಂಧಕ ಮಿಶ್ರಿತ ನೀರನ್ನು ಧೈರ್ಯದಿಂದ ಬೆರಳ ತುದಿಯಿಂದ ಸ್ಪರ್ಶಿಸಿದೆ. ಬೆಚ್ಚಗಿನ ನೀರು.. ಚರ್ಮಕ್ಕೆ ಏನೂ ತೊಂದರೆಯಾಗಲಿಲ್ಲ. ಇದನ್ನು ನೋಡಿದ ಉಳಿದವರೂ ನೀರನಲ್ಲಿ ಬೆರಳದ್ದಿ ಖುಷಿಪಟ್ಟರು.  

ಬಿಟ್ಟು ಬರಲೂ ಮನಸ್ಸಾಗದೆ, ಹೆಚ್ಚು ಹೊತ್ತು ಇರಲೂ ಆಗದೆ ಹಿಂತಿರುಗಿದೆವು. ಇಳಿಯುವಾಗ ಯಾವಾಗಲೂ ಸುಲಭ ಎನ್ನಿಸುವುದು. ನಾವಂತೂ ತುರಾತುರಿಯಲ್ಲಿ ಇಳಿಯುತ್ತಿದ್ದೆವು. ನಮ್ಮದೇ ಕೊನೆಯ ತಂಡವಾಗಿತ್ತು. ಮೇಲಕ್ಕೆ ಬಂದ ಪ್ರವಾಸಿಗರೆಲ್ಲಾ ಕೆಳಗೆ ಹಿಂತಿರುಗಿದ್ದರಿಂದ ನಾವು ಇನ್ನಷ್ಟು ಜಾಗರೂಕರಾಗಬೇಕಿತ್ತು. ಸರಿಯಾದ ಸಮಯಕ್ಕೆ ವಾಹನದ ಬಳಿ ತಲಪಿದೆವು. ಬಂದಿದ್ದ  ಯಾತ್ರಿಕರೆಲ್ಲಾ ಹೊರಡುವ ತುರಾತುರಿಯಲ್ಲಿ ಇದ್ದುದರಿಂದ ವಾಹನ ದಟ್ಟಣೆಯಿಂದಾಗಿ ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿತು.

ಮುಂದಿನ ನಮ್ಮ ಪ್ರಯಾಣ, ಒರೆಗಾನ್ ನಲ್ಲಿರುವ  ವಿಶೇಷವಾದ ಪ್ರವಾಸಿ ತಾಣದತ್ತ. ರಾತ್ರಿಯೂಟ ಮುಗಿಸಿ ಮುಂದುವರಿಯುತ್ತಿದ್ದಂತೆ…ಅಮಾವಾಸ್ಯೆಯ ದಟ್ಟ ಕತ್ತಲು ಆವರಿಸಿತ್ತು. ಸೊಗಸಾದ ರಸ್ತೆಯಲ್ಲಿ ಪ್ರಯಾಣ ಆನಂದದಾಯಕವಾಗಿತ್ತು. ಪಟ್ಟಣದ ಸುಳಿವೇ ಇಲ್ಲದ ನಿರ್ಜನ ರಸ್ತೆಯಲ್ಲಿ ಸಾಗುತ್ತಿದ್ದಂತೆ, ಅಳಿಯ ಒಮ್ಮೆಲೇ ವಾಹನವನ್ನು ನಿಲ್ಲಿಸಿದ. ನಾವಿದ್ದ ಕಾರಿನಲ್ಲಿ ಮೇಲ್ಭಾಗ ತೆರೆಯುವ ಅನುಕೂಲವಿತ್ತು. ಅವನು ಅದನ್ನು ಪೂರ್ತಿ ತೆರೆದು, ಮೇಲ್ಗಡೆ ಆಕಾಶವನ್ನು ನೋಡಲು ಹೇಳಿದಾಗ….ಪರಮಾಶ್ಚರ್ಯ! ಆಗಸದಲ್ಲಿ ಅತ್ಯದ್ಭುತ ದೃಶ್ಯ! ಎಂದೂ ಕಾಣದಂತಹ ನಿರ್ಮಲ ಆಕಾಶದಲ್ಲಿ ಫಳಫಳನೆ ಹೊಳೆಯುವ ಅಸಂಖ್ಯಾತ ತಾರೆಗಳು ಹಿಂದೆಂದೂ ಕಾಣದಷ್ಟು ಚೆನ್ನಾಗಿ ಬೆಳಗುತ್ತಿದ್ದವು. ಆಕಾಶಗಂಗೆಯಿಂದ ಹಿಡಿದು ಅನೇಕ ನಕ್ಷತ್ರಪುಂಜಗಳು ಬರಿ ಕಣ್ಣಿಗೆ ಗೋಚರಿಸುತ್ತಿದ್ದವು! ಅವನಲ್ಲಿದ್ದ ಶಕ್ತಿಯುತವಾದ ದೂರದರ್ಶಕವು ಆಕಾಶ ವೀಕ್ಷಣೆಯನ್ನು ಇನ್ನಷ್ಟು ಚೇತೋಹಾರಿಯಾಗುವಂತೆ ಮಾಡಿತು! ಒಂದು ತಾಸು ಕಳೆದುದೇ ತಿಳಿಯಲಿಲ್ಲ. ಆಕಸ್ಮಿಕವಾಗಿ ಲಭಿಸಿದ ಈ ಅನುಭವವು, ಮರೆಯಲಾರದ ಸಿಹಿಕ್ಷಣಗಳಲ್ಲಿ  ಒಂದಾಗಿ ಸೇರಿಹೋಯಿತು. ಪ್ರಯಾಣವನ್ನು ಮುಂದುವರಿಸುತ್ತಾ, Alturas ಎಂಬಲ್ಲಿರುವ ವಸತಿಗೃಹದ 9ನೇ ನಂಬರಿನ ಕೋಣೆಯಲ್ಲಿ ವಿಶ್ರಾಂತಿ ಪಡೆಯುವಾಗ ಸರಿರಾತ್ರಿ 12ಗಂಟೆ…..

1.10.2019 ರ ಬೆಳಗ್ಗೆ…  ನಿಧಾನವಾಗಿಯೇ ದಿನವನ್ನು ಪ್ರಾರಂಭಿಸಿದೆವು. ಅಲ್ಲೇ ಸಮೀಪದಲ್ಲಿರುವ ವಿಶೇಷವಾದ ಪ್ರದೇಶದತ್ತ ನಮ್ಮ ವಾಹನವು ಓಡಿತು.

ಲಾವಾ ಹರಿದ ನಾಡಿನಲ್ಲಿ…

  ಸುಮಾರು 54,822 ಎಕರೆಗಳಷ್ಟು ಪ್ರದೇಶವನ್ನು ಆವರಿಸಿಕೊಂಡಿರುವ ಈ ರಕ್ಷಿತ ಪ್ರದೇಶವು 1990ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲ್ಪಟ್ಟಿತು.  ಮಿಲಿಯಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಯಿಂದ ಹರಿದ ಬೆಂಕಿಯುಗುಳುವ ಲಾವಾ ಹರಿದು ಉಂಟಾದ ವಿವಿಧ ರೂಪಗಳ ಗುಹೆಗಳು, ಕಂದಕಗಳು ಇತ್ಯಾದಿಗಳನ್ನು ಇಲ್ಲಿ ಕಾಣಬಹುದು. ಪೂರ್ತಿ ಲಾವಾದಿಂದಲೇ ಉಂಟಾದ ಅತ್ಯಂತ ದೊಡ್ಡ ಗಾತ್ರದ ಗುಹೆಯು ಸಾವಿರಾರು ವರ್ಷಗಳಿಂದ ಕುಸಿಯದೆ ಇನ್ನೂ ಸುಸ್ಥಿತಿಯಲ್ಲಿ ಇರುವುದನ್ನು ಇಲ್ಲಿ ಕಾಣಬಹುದು. ಕಗ್ಗತ್ತಲೆ ತುಂಬಿದ ಈ ಗವಿಯೊಳಗೆ ಬೆಳಕಿನ ವ್ಯವಸ್ಥೆ ಕಲ್ಪಿಸಿಲ್ಲ….ಟಾರ್ಚ್ ಹಿಡಿದೇ ಹೋಗಬೇಕು. ಈ ಪ್ರವಾಸಿ ತಾಣವು ಚಳಿಗಾಲದಲ್ಲಿ ಮುಚ್ಚಿರುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ. ಸಾಮಾನ್ಯ ದಿನಗಳಲ್ಲಿ ಗವಿಯೊಳಗೆ 6℃ ನಷ್ಟು ಮಾತ್ರ ಉಷ್ಣತೆ ಇರುತ್ತದೆ.

ನಾವು ಬೆಳಗ್ಗಿನ ಹತ್ತು ಗಂಟೆ ಹೊತ್ತಿಗೆ ಅಲ್ಲಿಯ ಮಾಹಿತಿ ಕೇಂದಕ್ಕೆ ತಲಪಿದೆವು. ಎಲ್ಲಾ ಪ್ರವಾಸೀ ತಾಣಗಳಲ್ಲಿ ಇರುವಂತೆ ಇಲ್ಲಿಯೂ ಸುವ್ಯವಸ್ಥಿತ ಮಾಹಿತಿ ಕೇಂದ್ರವಿದ್ದು; ಇಲ್ಲಿ ನಾವು ಮಾಹಿತಿಯ ಕೈಪಿಡಿಯನ್ನು ಪಡೆಯಬಹುದು. ಈ ಕೇಂದ್ರದ ಅಕ್ಕಪಕ್ಕಗಳಲ್ಲಿಯೇ ಹಲವಾರು ವಿಶೇಷವಾದ ಲಾವಾ ಗುಹೆಗಳು ಇರುವುದರಿಂದ ಪ್ರವಾಸಿಗರಿಗೆ ಬಹಳ ಅನುಕೂಲವೆನಿಸುವುದು ಸುಳ್ಳಲ್ಲ.  ಕಟ್ಟಡದ ಆವರಣದ ಬಳಿಯಲ್ಲಿರುವ ಲಾವಾ ಗುಹೆಯತ್ತ ನಡೆದೆವು. ನಮ್ಮೊಡನೆ ಇನ್ನಿತರ ಪ್ರವಾಸಿಗರೂ ಸೇರಿಕೊಂಡರು. 

ಗುಹೆಯ ದ್ವಾರವು ನೆಲದಲ್ಲಿ ವೃತ್ತಾಕಾರದ ದೊಡ್ಡ ಕಿಂಡಿಯಂತೆ ಕಾಣುತ್ತಿತ್ತು. ಅದರ ಸುತ್ತಲೂ ಸಾಕಷ್ಟು ಗಿಡಗಂಟಿಗಳು ಬೆಳೆದಿದ್ದವು.  ಒಮ್ಮೆಗೆ ಒಬ್ಬರಿಗೆ ಮಾತ್ರ ಇಳಿಯಲು ಅನುಕೂಲವಾಗುವಂತಿರುವ ಬಲವಾದ ಉಕ್ಕಿನ ಮೆಟ್ಟಲನ್ನು ಇರಿಸಲಾಗಿತ್ತು. ನೇರವಾಗಿ ಕೆಳಕ್ಕೆ ಇಳಿದೊಡನೆ ಅದರೊಳಗೆ ಮುಂಭಾಗದಲ್ಲಿ ವಿಶಾಲವಾದ ಹಜಾರದಂತಿರುವ ಜಾಗವು ಕಾಣಿಸಿತು. ಅಲ್ಲಿಗೆ ನಾವಿಳಿದ ಕಿಂಡಿಯಿಂದ ಬೆಳಕು ಚೆನ್ನಾಗಿ ಬೀಳುತ್ತಿತ್ತು. ಆದರೆ ಮುಂದಕ್ಕೆ ಚಲಿಸಿದಂತೆ ಕಗ್ಗತ್ತಲೆ ಆವರಿಸಿತು. ಅಳಿಯ ಮುಂಜಾಗರೂಕತಾ ಕ್ರಮವಾಗಿ ಪ್ರತಿಯೊಬ್ಬರಿಗೂ ತಲೆ ಮೇಲೆ ಕಟ್ಟಿಕೊಳ್ಳುವ ಟಾರ್ಚ್ ಗಳನ್ನು ನೀಡಿದ್ದರಿಂದ ಆರಾಮವಾಗಿ ಮುಂದಕ್ಕೆ ಹೋದೆವು. ಎಲ್ಲರ ಕೈಯಲ್ಲಿ ತರೆಹೇವಾರು ಟಾರ್ಚ್ ಗಳು ಉರಿಯುತ್ತಿದ್ದವು. ಸುಮಾರು ಮೂವತ್ತು ಜನರ ಗುಂಪು ನಮ್ಮದಾಗಿತ್ತು.

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=40027

ಶಂಕರಿ ಶರ್ಮ, ಪುತ್ತೂರು.   

7 Responses

  1. ಪ್ರವಾಸದ ಕಥನ ದಲ್ಲಿ ಅನುಭವದ ಅಭಿವ್ಯಕ್ತಿ.. ನಿರೂಪಣೆಯು ಚೆನ್ನಾಗಿ ಬಂದಿದೆ ಶಂಕರಿ ಮೇಡಂ..

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು, ನಾಗರತ್ನ ಮೇಡಂ.

  2. ಪದ್ಮಾ ಆನಂದ್ says:

    ರಮ್ಯ, ಸುಂದರ ಮತ್ತು ರುದ್ರ ಬೀಕರ ಎರಡೂ ಅನುಭವಗಳನ್ನು ರಸವತ್ತಾಗಿ ನಿರೂಪಿಸಿರುವ ಅಚ್ಚುಕಟ್ಟಾದ ಪ್ರವಾಸಿ ಕಥನದ ಕಂತು ಇದಾಗಿದೆ.

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು, ಪದ್ಮಾ ಮೇಡಂ.

  3. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  4. ಶಂಕರಿ ಶರ್ಮ says:

    ಧನ್ಯ ನಮನಗಳು ನಯನಾ ಮೇಡಂ.

  5. Super article. ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: