ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 7

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
‘ಯಾಕೋ ಹಾಗಂತೀಯ ನಾವು ಮದುವೆಯಾದಮೇಲೂ ಗೌರಿ-ಗಣೇಶನ ಹಬ್ಬಕ್ಕೆ ಬರ್‍ತಿರಲಿಲ್ವಾ? ಈಗ ಆ ಅಭ್ಯಾಸ ತಪ್ಪಿದೆ ಅಷ್ಟೆ ಮಕ್ಕಳು ದೊಡ್ಡವರಾದ್ರು, ಜವಾಬ್ದಾರಿಯೂ ಹೆಚ್ಚಿತು, ವಯಸ್ಸಾದ ಅತ್ತೆ-ಮಾವನ್ನ ಬಿಟ್ಟು ಬರೋದು ಕಷ್ಟ……”

ಅಕ್ಕ ಆ ದಿನಗಳು ಚೆನ್ನಾಗಿದ್ದವು. ನಾನು ಏನು ಕೀಟಲೆ ಮಾಡಿದರೂ ನೀನು, ವಾರುಣಿ ನನ್ನನ್ನು ವಹಿಸಿಕೊಂಡು ಬರ್‍ತಿದ್ರಿ, ಈಗ ಅದೆಲ್ಲಾ ಒಂದು ನೆನಪಷ್ಟೆ”

‘ಜೀವನದಲ್ಲಿ ಅಂತಹ ಮಧುರ ನೆನಪುಗಳೇ ನಮ್ಮನ್ನು ಜೀವಂತವಾಗಿಡೋದು ಆದಿ,ವಯಸ್ಸಾದ ಮೇಲಂತೂ ನೆನಪಿನ ಬುತ್ತಿಯೇ ನಮ್ಮ ಆಹಾರ ಆಗಿ ಬಿಡತ್ತೆ, ವಯಸ್ಸಾದವರ ಜೊತೆ ಬಳಿತು ಒಂದು ಸಲ ಆರಾಮವಾಗಿ ಮಾತಾಡು, ಅವರ ನೆನಪಿನಲ್ಲಿರುವ ವಿಷಯಗಳೆಲ್ಲಾ ಕಥಾರೂಪದಲ್ಲಿ ಹೊರಗೆ ಬರುತ್ತದೆ.’

‘ನಿನ್ನ ಟ್ಯುಟೋರಿಯಲ್ ನಿಮ್ಮನೆಗೆ ಹತ್ತಿರವಾಗಿದೆಯಾ?”

”ತುಂಬಾ ಹತ್ತಿರ. ನಮ್ಮ ಹಳೆಯ ಮನೆ ಮಾರಿ ಬೇರೆ ದೊಡ್ಡ ಮನೆ ಕೊಂಡುಕೊಂಡಿದ್ದೇವೆ. ಕೆಳಗಡೆ ನಮ್ಮ ಮನೆಯಿದೆ.  ಮೇಲುಗಡೆ ಒಂದು ಹಾಲ್ ಇದೆ. ಅಲ್ಲಿ ನಾಲ್ಕು ಕ್ಲಾಸ್ ಮಾಡುವಷ್ಟು ಜಾಗವಿದೆ. ಕೆಳಗಡೇನೆ ಆಫೀಸ್ ಇಟ್ಟುಕೊಂಡಿದ್ದೇವೆ. ಅಪ್ಪಹಣದ ಸಹಾಯ ಮಾಡಿದ್ದರಿಂದ ನಾವು ಟ್ಯುಟೋರಿಯಲ್ಸ್ ಶುರುಮಾಡಲು, ವಾರಿಣಿ ಕೇಟರಿಂಗ್ ಬಿಸಿನಸ್‌ ಆರಂಭಿಸಲು ಸಾಧ್ಯವಾಯಿತು.”

ಅದಿತ್ಯ- ರಮ್ಯಾ ಏನೂ ಮಾತಾಡಲಿಲ್ಲ. ತಂದೆ ಅಕ್ಕಂದಿರಿಗೆ ಹಣಕೊಟ್ಟ ವಿಚಾರ ತನಗೆ ಹೇಳಲೇ ಇಲ್ಲವಲ್ಲಾ ಎಂದುಕೊಂಡ. ಮಧ್ಯಾಹ್ನ ಊಟ ಮಾಡಿಕೊಂಡು ರಮ್ಯಾ ಅದಿತ್ಯ ಬೆಂಗಳೂರಿಗೆ ಹೊರಟರು.

ಮರುದಿನ ಆಫೀಸ್ ನಿಂದ ಅವಳು ಸೀದಾ ತಾಯಿ ಮನೆಗೆ ಹೋದಳು.
‘ಚೆನ್ನಾಗಾಯ್ತಾ ಫಂಕ್ಷನ್ ?”
‘ತುಂಬಾ ಚೆನ್ನಾಗಾಯ್ತು, ಮನೆ ತುಂಬಾ ಚೆನ್ನಾಗಿದೆ. ಸುಬ್ಬಣ್ಣನ ತಂದೆ-ತಾಯಿಗೂ ಖುಷಿಯಾಯ್ತು, ಅವರ ಬಂಧು-ಬಳಗ, ಹಳೆಯ ಸ್ನೇಹಿತರು ಎಲ್ಲರೂ ಸೇರಿದ್ರು”
”ಬಹಳ ಜನ ಸಮಾರಂಭಗಳಿಗೆ ಜನ ಬರೋದು ಹಬ್ಬದ ಊಟ ಮಾಡಕ್ಕೆ  ಅಂದ್ಕೋತಾರೆ, ಆದರೆ ಸಮಾರಂಭಗಳು ಸ್ನೇಹಿತರು, ಬಂಧು-ಬಳಗ ಒಬ್ಬರನ್ನೊಬ್ಬರು  ಭೇಟಿ ಮಾಡಲು ಅವಕಾಶ ಒದಗಿಸುತ್ತವೆ ಎಂದು ಅರ್ಥಮಾಡಿಕೊಳ್ಳುವುದೇ ಇಲ್ಲ.”
‘ತುಂಬಾ ಜನ ಸೇರಿದ್ದರಮ್ಮ, ಆದಿ, ಅಕ್ಕ-ಭಾವನದೇ ಓಡಾಟ.”
“ಅವರು ಹೇಗೆ ಪರಿಚಯ?”
‘ವಸುಮತಿ-ಅವರ ಗಂಡ ಸುಬ್ಬಣ್ಣನ ಮನೆಯಲ್ಲಿದ್ದುಕೊಂಡೇ ಓದಿದ್ದರಂತೆ, ಸುಬ್ಬಣ್ಣನ ತಂದೆ-ತಾಯಿಗೆ ಭಾರೀ ಉಡುಗೂರ ಕೊಟ್ಟರು.”

‘ವಸುಮತಿ ಕೆಲಸ ಮಾಡ್ತಿದ್ದಾರಾ?”
“ಟ್ಯುಟೋರಿಯಲ್ಸ್ ನಡೆಸ್ತಿದ್ದಾರೆ. ಆದಿ ಇನ್ನೊಬ್ಬ ಅಕ್ಕ ವಾರುಣಿ ಕೇಟರಿಂಗ್ ಶುರು ಮಾಡಿದ್ದಾರಂತೆ. ಇಬ್ಬರಿಗೂ ಮಾವ ಹಣದ ಸಹಾಯ ಮಾಡಿದ್ದಾರಂತೆ.”
“ಮಾಡಲಿ ಬಿಡು. ಅದರಲ್ಲಿ ಏನು ತಪ್ಪಿದೆ?”
“ಏನಮ್ಮಾ ನೀನು ಹೀಗಂತೀಯಾ? ಅವರಿಬ್ಬರೂ ಬಂದು ನಮ್ಮತ್ತೆ-ಮಾವನ್ನ ಇಷ್ಟು ದಿನ ನೋಡಿಕೊಂಡಿದ್ರಾ? ಅವರಿಗ್ಯಾಕೆ ಹಣದ ಸಹಾಯ ಮಾಡಬೇಕು?’

“ನಿಮ್ಮ ಜೊತೆ ನಿಮ್ಮ ಅತ್ತೆ-ಮಾವ ಇದ್ರು ನಿಜ. ನೀವೇನು ಅವರನ್ನು ನೋಡಿಕೊಂಡ್ರಾ? ಅವರಿಗೆ ಹುಷಾರಿಲ್ಲದಿದ್ದಾಗಲೂ ಮನುಷ್ಯತ್ವ ಇಲ್ಲದವರ ಹಾಗೆ ಬಿಹೇವ್ ಮಾಡಿದ್ರಿ, ಕತ್ತೇಚಾಕರಿ ಮಾಡಿದರೂ ನಿಮ್ಮ ಅತ್ತೆ ಮಾವಂಗೆ ಬೆಲೆ ಕೊಡಲಿಲ್ಲ. ಅವರ ಮನೆಯಲ್ಲಿ ನೀವಿದ್ದೀರ. ಸ್ವಂತ ಮನೆಯನ್ನು ಬಿಟ್ಟುಕೊಟ್ಟು, ಬಾಡಿಗೆ ಮನೆಯಲ್ಲಿ ಅವರಿದ್ದಾರೆ. ಯಾರಿಗೆ ಗೊತ್ತು ಕಡೆಗಾಲದಲ್ಲಿ ಅವರು ಹೆಣ್ಣು ಮಕ್ಕಳ ಹತ್ತಿರ ಹೋಗಬಹುದು” ರಮ್ಯಾಳ ತಂದೆ ಹೇಳಿದರು.

 ”ನೀವಿಬ್ಬರೂ ಯಾವಾಗಲೂ ಅವರನ್ನೇ ವಹಿಸಿಕೊಂಡು ಬರ್‍ತೀರ. ಆದಿಗೆ ಹೇಳಿ ನಾವೇ ಬೇರೆ ಮನೆ ಹುಡುಕಿಕೊಂಡು ಹೋಗ್ತೀವಿ ಬಿಡಿ. ನಿಮಗೆ ಆಗ ಸಮಾಧಾನವಾಗಬಹುದು.” ರಮ್ಯ ಸಿಡುಕಿದಳು.

“ಬಾಯ್ಮುಚ್ಚೆ. ಆದಿ ಹತ್ತಿರ ಹೇಳಿ ನೀನು ರಾಮಾಯಣ ಮಾಡಿದರೆ ನಮ್ಮನೆ ಬಾಗಿಲು ನಿನಗೆ ಪರ್‍ಮನೆಂಟಾಗಿ ಮುಚ್ಚಿಹೋಗತ್ತೆ ನೆನಪಿರಲಿ” ಪಂಕಜಮ್ಮ ಹೇಳಿದರು.

“ಹಾಗಾದ್ರೆ ನಾನೇನಮ್ಮ ಮಾಡಲಿ? ಈಗ ನಾವಿರುವ ಮನೆಯಲ್ಲೂ ಹೆಣ್ಣು ಮಕ್ಕಳಿಗೆ ಪಾಲಿದೆಯಲ್ವಾ? ನಮಗೂ ಮಕ್ಕಳು ಮರಿ ಇಲ್ವಾ? ಜವಾಬ್ದಾರಿ ಇಲ್ವಾ?”

“ನಿಮ್ಮಾವ-ಅತ್ತೆ ಮಗನಲ್ಲಿ ಪ್ರಾಣ ಇಟ್ಟುಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಹಣದ ಸಹಾಯ ಮಾಡಿರುವಾಗ, ಮಗನಿಗೆ ಸಹಾಯ ಮಾಡದೆ ಇದ್ದಾರಾ? ನೀನು ತಾಳ್ಮೆ ತಂದುಕೋ ಬೇಕು ಅಷ್ಟೆ……”

“ಹಾಗಲ್ಲಮ್ಮ.”
“ರಮ್ಯಾ ನೀವಿಬ್ಬರೂ ಇಂಜಿನಿಯರ್, ಕೈ ತುಂಬಾ ಸಂಬಳ ತೆಗೆದುಕೊಳ್ತಿದ್ದೀರ. ಮನೆ ಬಾಡಿಗೆಯೂ ಇಲ್ಲ. ಮಕ್ಕಳಿಗೋಸ್ಕರ ನೀವೇನೂ ಉಳಿಸಿಲ್ವಾ? ಒಂದು ವೇಳೆ ನಿಮ್ಮ ಮಾವ ಮನೆ ಮಾರಿ ಮೂರು ಜನಕ್ಕೂ ಹಣ ಕೊಡ್ತಾರೇಂತ ಇಟ್ಕೋ, ಆ ಹಣಕ್ಕೆ ಕೊಂಚ ಹಣ ಸೇರಿಸಿ ಬೇರೆ ಮನೆ ಕೊಂಡುಕೊಳ್ಳುವ ಯೋಗ್ಯತೆ ನಿಮಗಿಲ್ಲವಾ?” ತಂದೆ ಕೇಳಿದರು.

“ನೋಡಿ ನೀವು ಏನೇನೋ ಪ್ರಶ್ನೆ ಕೇಳಿ ಅವಳ ತಲೆ ಕೆಡಿಸಬೇಡಿ. ರಮ್ಯಾ ನಿಮ್ಮತ್ತೆ- ಮಾವ ತುಂಬಾ ಒಳ್ಳೆಯವರು. ಅವರೀಗ ಆರಾಮವಾಗಿದ್ದಾರೆ. ಒಂದು ದಿನವಾದರೂ ಯಾರ ಮುಂದೂ ನಿಮ್ಮನ್ನು ದೂರಿಲ್ಲ. ನೀನೇ ಹಠ ಮಾಡಿಕೊಂಡು ಅವರ ಮನೆಗೆ ಹೋಗದೇ ಇರುವುದು. ನೀನು-ಆದಿ ಇಬ್ಬರೂ ಮೊದಲು ಅವರ ವಿಶ್ವಾಸ ಗಳಿಸಿಕೊಳ್ಳಿ. ಆಮೇಲೆ ಖಂಡಿತಾ ಅವರು ನಿಮ್ಮ ಜೊತೆ ಬಂದಿರ್‍ತಾರೆ” ಪಂಕಜಮ್ಮ ಹೇಳಿದರು.

ರಮ್ಯಾಳಿಗೆ ತಾಯಿಯ ಮಾತಿನಲ್ಲಿ ಹುರುಳಿದೆ ಎನ್ನಿಸಿದರೂ ಮಾವ ತಮಗೆ ಹೇಳದೆ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದರಲ್ಲಾ ಎನ್ನುವ ಅಸಮಾಧಾನವೂ ಕಾಡಿತು.

ಶುಕ್ರವಾರ ರಾತ್ರಿ ರಮ್ಯ ತಾನಾಗಿ ಅತ್ತೆಗೆ ಫೋನ್ ಮಾಡಿದಳು. “ಹಲೋ ಅತ್ತೆ ನಾನು ರಮ್ಯ……”
”ಚೆನ್ನಾಗಿದ್ದೀಯಾಮ್ಮ?”
“ಚೆನ್ನಾಗಿದ್ದೀನಿ ಅತ್ತೆ. ನಾಳೆ ನಿಮ್ಮನೆಗೆ ಬರಬೇಕು. ಸುಬ್ಬಣ್ಣನ ತಾಯಿ ನಿಮಗೆ ಎಲೆ ಅಡಿಕೆ ಕಳಿಸಿದ್ದಾರೆ. ನೀವು ಯಾವಾಗ ಬಿಡುವಾಗಿರ್‍ತೀರಾ? 11 ಗಂಟೆಗೆ ಬರಲಾ?”
‘ಟೈಮ್ ಕೇಳಿಕೊಂಡು ಬರುವುದಕ್ಕೆ ನೀನೇನು ನೆರೆಮನೆಯವಳಾ  ರಮ್ಯಾ ? ಯಾವಾಗಲಾದರೂ ಬಾಮ್ಮ, ಹುಡುಗರಿಗೂ ಇಲ್ಲಿಗೇ ಬರಕ್ಕೆ ಹೇಳು. ನಾಳೆ ಮಧ್ಯಾಹ್ನ ನಮ್ಮನೆಯಲ್ಲಿ ಸ್ಪೆಷಲ್ ರೊಟ್ಟಿ ಮಾಡಿಸ್ತಿದ್ದೀನಿ.”
“ಸ್ಪೆಷಲ್ ರೊಟ್ಟೀನಾ?”
“ಹುಂ. ಅಕ್ಕಿ ಹಿಟ್ಟು ಉಕ್ಕರಿಸಿ ರೊಟ್ಟಿ, ಬದನೆಕಾಯಿ ಪಲ್ಯ ತಿನ್ನಬೇಕಂತೆ ನಿಮ್ಮಾವ. ಅದಕ್ಕೆ ನಾಗವೇಣಿ ಅನ್ನುವವರಿಗೆ ಹೇಳಿದ್ದೀನಿ. ಅವರು ಬಂದು ಮಾಡ್ತಾರೆ.”

ರಮ್ಯ ಮರುದಿನ 11 ಗಂಟೆಗೆ ಸರಿಯಾಗಿ ಅತ್ತೆ ಮನೆಯಲ್ಲಿದ್ದಳು. ಮಾವ ಅಸಮಾಧಾನ ತೋರದೆ ಮಾತನಾಡಿಸಿದಾಗ ಅವಳಿಗೆ ಖುಷಿಯಾಯಿತು. ಸುಬ್ರಹ್ಮಣ್ಯನ ತಾಯಿ ಸೀರೆ, ಪಂಚೆ ತಾಂಬೂಲ ಕಳಿಸಿದ್ದರು. ದಾಕ್ಷಾಯಿಣಿ ಸಮಾರಂಭದ ಬಗ್ಗೆ ವಿವರವಾಗಿ ತಿಳಿದು ಸಂತೋಷಪಟ್ಟರು. ಸುಬ್ಬಣ್ಣ ತಾಯಿ-ತಂದೆಯರನ್ನು ತುಂಬಾ ಹೊಗಳಿದರು.

ನಾಗವೇಣಿ 12-30ಗೆ ಬಂದವರು ದೊಡ್ಡ ಬಾಣಲೆ ಇಟ್ಟು ಅಕ್ಕಿಹಿಟ್ಟು ಉಕ್ಕರಿಸಿದರು. ದಾಕ್ಷಾಯಿಣಿ ಪಲ್ಯ, ಸಾರು, ಅನ್ನ ಮಾಡಿದ್ದರು. ಆ ವೇಳೆಗೆ ಮಕ್ಕಳೂ ಬಂದರು. ನಾಗವೇಣಿ ಸ್ಟೋರ್‌ರೂಂನಿಂದ ಎರಡು ಹೆಂಚು ತೆಗೆದು ಸ್ವವ್ ಮೇಲೆ ಕಾಯಿಲಿಟ್ಟರು. ಚಪಾತಿ ಮಣೆ ತೆಗೆದುಕೊಂಡು ಸರ,ಸರ ರೊಟ್ಟಿ ಲಟ್ಟಿಸಿದರು. ರಮ್ಯಾ ಎಲ್ಲರ ಜೊತೆ ಕುಳಿತು ರೊಟ್ಟಿ ತಿಂದಳು. ನಾಗವೇಣಿ ಒತ್ತಾಯ ಮಾಡಿ ದಾಕ್ಷಾಯಿಣಿಯನ್ನೂ ಊಟಕ್ಕೆ ಕೂಡಿಸಿದರು.

ರೊಟ್ಟಿ ತಿನ್ನುತ್ತಾ ರಮ್ಯ ಅತ್ತೆಯನ್ನು ಅವಲೋಕಿಸಿದಳು. ದಾಕ್ಷಾಯಿಣಿ ಮೊದಲಿಗಿಂತ ಮೈ ಕೈ ತುಂಬಿಕೊಂಡು ಚೆನ್ನಾಗಾಗಿದ್ದರು. ಮುಖದಲ್ಲಿ ಆಯಾಸದ ಲಕ್ಷಣವಿರಲಿಲ್ಲ. ಮಾತಿನಲ್ಲಿ ಲವಲವಿಕೆಯಿತ್ತು.

”ಆದಿ ಎಲ್ಲಿಗೆ ಹೋಗಿದ್ದಾನಮ್ಮ?” ಮಾವ ಕೇಳಿದರು.
‘ಅವರು ಯಾವುದೋ ಫಂಕ್ಷನ್ ಹೋಗಿದ್ದಾರೆ ಮಾವ. ನಿಮ್ಮ ಮಗ ವಸುಮತಿ ಅತ್ತಿಗೆ- ಅವರ ಯಜಮಾನರು ಫಂಕ್ಷನ್‌ಗೆ ಬಂದಿದ್ದ ವಿಚಾರ ಹೇಳಿದ್ರಾ?”
“ಅವರು ಫಂಕ್ಷನ್‌ಗೆ ಬರ್‍ತಾರೇಂತ ನಮಗೆ ಮೊದಲೇ ಗೊತ್ತಿತ್ತಮ್ಮ, ಸುಬ್ಬು ತಂದೆ-ತಾಯಿ ಅವರಿಬ್ಬರಿಗೂ ತುಂಬಾ ಸಹಾಯ ಮಾಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಬರಲೇಬೇಕಲ್ಲವಾ?”

“ಮುರುಳಿಯವರು ನಿಮ್ಮನ್ನು ತುಂಬಾ ಹೊಗಳಿದ್ರು ಮಾವ. ಅವರಿಗೆ, ವಾರಿಣಿ ಅತ್ತಿಗೆಗೆ ನೀವು ಹಣದ ಸಹಾಯ ಮಾಡಿದ್ದರಿಂದಲೇ ಅವರು ಸುಖವಾಗಿರೋದೂಂತ ಹೇಳಿದ್ರು.”
“ನಾನೇನು ಹೆಚ್ಚು ಸಹಾಯ ಮಾಡಿಲ್ಲ. ನ್ಯಾಯವಾಗಿ ಅವರಿಗೆ ಕೊಡಬೇಕಾಗಿರುವುದು ಕೊಟ್ಟಿದ್ದೇನಷ್ಟೆ. ತಂದೆಯಾಗಿ ನನಗೂ ಕೆಲವು ಜವಾಬ್ದಾರಿಗಳು ಇರುತ್ತದಲ್ವಾ?”

ರಮ್ಯಾಗೆ ಮತ್ತೇನು ಪ್ರಶ್ನಿಸಲಾಗಲಿಲ್ಲ. “ಎಷ್ಟು ಹಣ ಕೊಟ್ಟೆನೆಂದು ಹೇಳಲಿಲ್ಲ. ಯಾವ ಹಣ ಎಂದು ಹೇಳಲಿಲ್ಲ. ಎಲ್ಲಾ ಒಗಟಿನಲ್ಲಿ ಮಾತಾಡ್ತಾರೆ. ಪ್ರಶ್ನಿಸುವ ಹಾಗೂ ಇಲ್ಲ. ಹೆಚ್ಚು ಪ್ರಶ್ನಿಸಿದರೆ ಆದಿಗೆ ಕೋಪ”

ರಮ್ಯಾಳಿಗೆ ಯಾರಿಗಾದರೂ ಗುದ್ದಬೇಕೆನ್ನಿಸಿತು.

ಸಾಯಂಕಾಲ ಕಾಫಿ ಕುಡಿದು ಅವಳು ಹೊರಟಾಗ ಅತ್ತೆ “ಪಲ್ಯ, ಮೊಸರನ್ನ ತೆಗೆದುಕೊಂಡು ಹೋಗು. ರಾತ್ರಿಗೆ ಚಪಾತಿ ಮಾಡಿಕೊಂಡರೆ ಸಾಕು” ಎಂದರು. ಅವಳು ಬೇಡವೆನ್ನಲಿಲ್ಲ.

ಅವಳು ಮನೆ ತಲುಪಿದಾಗ ಆದಿ ಕಾಫಿ ಕುಡಿದು ಟಿ.ವಿ ನೋಡುತ್ತಾ ಕುಳಿತಿದ್ದ.
“ಯಾವಾಗ ಬಂದ್ರಿ?”
‘ಬಂದು ಅರ್ಧಗಂಟೆಯಾಯ್ತು. ಚಂದ್ರು ಮನೆ ಫಂಕ್ಷನ್‌ನಲ್ಲಿ ಹಳೆಯ ಸ್ನೇಹಿತರು ಮೂವರು ಸಿಕ್ಕಿದರು. ಹರಟುತ್ತಾ ಕುಳಿತಾಗ ಟೈಂ ಹೋಗಿದ್ದೇ ಗೊತ್ತಾಗಲಿಲ್ಲ.”
“ರೀ ನೀವು ನಿಮ್ಮ ತಂದೆಗೆ ಸ್ವಂತ ಮಗಾನೋ ದತ್ತು ಪುತ್ರಾನೋ?”
“ಏನು ಪ್ರಶ್ನೆನೇ ಇದು?”

“ನನ್ನ ಹತ್ತಿರ ತುಂಬಾ ಪ್ರಶ್ನೆಗಳಿವೆ. ನೀವು ಉತ್ತರ ಹೇಳದಿದ್ದರೆ ನನ್ನ ತಲೆ ಕೆಟ್ಟು ಹೋಗತ್ತಷ್ಟೆ.”
“ಮಕ್ಕಳೆದುರಿಗೆ ನಮ್ಮ ಮಾತು ಕಥೆ ಬೇಡ.”
‘ಅವರಿಬ್ಬರೂ ಪಕ್ಕದ್ಮನೆ ಪ್ರಿಯಾ ಹುಟ್ಟಿದ ಹಬ್ಬಕ್ಕೆ ಹೊರಟಿದ್ದಾರೆ.”
“ಅವರು ಹೋದಮೇಲೆ ಪ್ರಶ್ನೆ ಕೇಳು.”
ಅಷ್ಟರಲ್ಲಿ ಅಕ್ಕ ತಮ್ಮ ರೆಡಿಯಾಗಿ ಬಂದರು.
“ಅಮ್ಮಾ ಗಿಫ್ಟ್……’’
“ಈ ಕವರ್ ಕೊಡು. ಈ ದುಡ್ಡಿನಲ್ಲಿ ಪ್ರಿಯಾ ಅವಳಿಗೆ ಇಷ್ಟವಾದುದನ್ನು ತೆಗೆದುಕೊಳ್ಳಲಿ.”
“ಥ್ಯಾಂಕ್ಸ್ ಅಮ್ಮ.”

ಬೈ. ಮಕ್ಕಳಾ ಹುಷಾರಾಗಿ ಹೋಗಿ ಬನ್ನಿ.’

ಮಕ್ಕಳನ್ನು ಕಳಿಸಿ, ಬಾಗಿಲು ಹಾಕಿ ರಮ್ಯಾ ಆದಿತ್ಯನ ಎದುರಿಗೆ ಕುಳಿತಳು.

“ಯಾಕೆ ಹೀಗೆ ತಲೆಕೆಟ್ಟವಳ ತರಹ ಪ್ರಶ್ನೆ ಕೇಳಿದೆ?”
”ಈ ಮನೆ ನಿಮ್ಮ ತಂದೆಯದು ತಾನೆ?”
”ಹೌದು, ಇದು ಪಿತ್ರಾರ್ಜಿತ ಆಸ್ತಿ.”
“ಅದರಲ್ಲಿ ಮೂರು ಜನ ಮಕ್ಕಳಿಗೂ ಪಾಲಿದೆಯಲ್ವಾ?”
“ಇದೆ. ಈಗ್ಯಾಕೆ ಆ ವಿಚಾರ?’
“ನನಗೇನೋ ಈ ಮನೆ ಮಾರಿಬಿಟ್ಟಿದ್ದಾರೆ ಅನ್ನಿಸ್ತಿದೆ.”
”ಅವರು ಮನೆ ಮಾರಿದ್ದಿದ್ರೆ ನಾವು ಈ ಮನೆಯಲ್ಲಿ ಇರುವುದಕ್ಕೆ ಆಗ್ತಿತ್ತಾ?”

“ಇದೇ ಊರಿನವರಿಗಾದರೆ ಮನೆ ಬೇಕಾಗಿತ್ತು. ಮನೆ ತೆಗೆದುಕೊಂಡಿರುವವರು ನೀವೇ ಇರೀಂತ ಹೇಳಿರಬಹುದಲ್ವಾ?”
“ಹೇಗೆ ಹೇಳ್ತಿಯಾ?”

“ನಾನು ಇವತ್ತು ಮಾವನಿಗೆ “ವಸುಮತಿ ಮತ್ತು ವಾರುಣಿ ಅತ್ತಿಗೆಯರಿಗೆ ನೀವು ಹಣ ಕೊಟ್ಟಿದ್ದನ್ನು ಮುರುಳಿಯವರು ಹೇಳಿದ್ರು, ನಿಮ್ಮನ್ನು ತುಂಬಾ ಹೊಗಳಿದ್ರು” ಅಂತ ಹೇಳಿದೆ.

ಅದಕ್ಕೆ ಅವರು ಏನಂದ್ರು ಗೊತ್ತಾ?”
“ಏನಂದ್ರು?”
“ನಾನೇನು ಸಹಾಯ ಮಾಡಿಲ್ಲಮ್ಮ. ಅವರಿಗೆ ಸೇರಬೇಕಾಗಿದ್ದ ಹಣ ಅವರಿಗೆ ಕೊಟ್ಟೆ. ನನ್ನ ಕರ್ತವ್ಯ ಮಾಡಿದ್ದೀನಷ್ಟೆ” ಅಂದರು.
”ಅವರ ಮಾತಿನಲ್ಲಿ ತಪ್ಪೇನಿದೆ?”


“ಏನ್ರಿ ಹೀಗಂತೀರಾ? ಅವರು ಯಾವ ವಿಚಾರವನ್ನೂ ನಮ್ಮ ಹತ್ತಿರ ಹೇಳಿಲ್ಲ. ಈಗಲೂ ಹಾರಿಕೆ ಉತ್ತರ ಕೊಡ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಹಣ ಕೊಟ್ಟ ಹಾಗೆ ನಿಮಗೂ ಹಣ ಕೊಡಬೇಕಾಗಿತ್ತಲ್ವಾ?”

“ಅಕ್ಕಂದಿರಿಬ್ಬರೂ ಟ್ಯುಟೋರಿಯಲ್ಸ್ ಶುರುಮಾಡಕ್ಕೆ ಕೇಟರಿಂಗ್ ಬಿಸಿನೆಸ್ ಶುರುಮಾಡಕ್ಕೆ ಹಣ ಕೇಳಿರಬಹುದು. ಅದಕ್ಕೆ ಕೊಟ್ಟಿದ್ದಾರೆ. ನಾವು ಯಾವುದಕ್ಕೂ ಹಣ ಕೇಳಿಲ್ಲವಲ್ಲಾ?”

“ನಾವು ಹಣ ಕೇಳುವ ಪರಿಸ್ಥಿತಿ ಬಂದಿಲ್ಲ. ಆದರೆ ನೀವು ಮನೆಮಗ ನಿಮ್ಮ ಅಕ್ಕಂದಿರಿಗೆ ಹಣ ಕೊಡುವಾಗ ನಿಮಗೆ ಹೇಳಬೇಕಾಗಿತ್ತಲ್ವಾ?”

“ಅವರ ಹಣ ಅವರು ಕೊಡಕ್ಕೆ ನನ್ನ ಪರ್‍ಮಿಶನ್ ಯಾಕೇ ಬೇಕು?”
‘ಹಾಗಲ್ಲಾರಿ….’
“ನೋಡು ರಮ್ಯಾ ನೀನು ಏನೇನೋ ಹೇಳಿ ನನ್ನ ತಲೆ ಕೆಡಿಸಬೇಡ, ಅಪ್ಪ ಯಾರಿಗೂ ಮೋಸ ಮಾಡಿಲ್ಲ. ಅವರು ಖಂಡಿತಾ ನಮಗೆ ಮೋಸ ಮಾಡಲ್ಲ.”
“ನಿಮಗೆ ಅಷ್ಟು ನಂಬಿಕೆಯಿದ್ರೆ ಒಂದು ಕೆಲಸ ಮಾಡಿ.”
“ಏನದು?”

“ನಾವು ಮನೆಕೊಂಡುಕೊಳ್ಳಬೇಕೂಂತಿದ್ದೇವೆ. ಅದಕ್ಕೆ ಹಣ ಕೊಡಿ. ಲೋನ್ ತೆಗೆದುಕೊಳ್ತೇವೆ. ಆದರೆ ಕೊಂಚ ಹಣ ಶಾರ್ಟ್ ಬಂದಿದೇಂತ ಹೇಳಿ.”
“ಯಾವ ಏರಿಯಾದಲ್ಲಿ ಮನೆ ತೊಗೋತಿದ್ದೀರಾ? ಮನೆ ಬೆಲೆ ಏನು? ಲೋನ್ ಎಷ್ಟು ಸಿಗತ್ತೆ? ಅಂತ ಪ್ರಶ್ನಿಸಿದ್ರೆ ಏನು ಹೇಳ್ತಿಯಾ?”
“ಹಾಗೆಲ್ಲಾ ಕೇಳ್ತಾರಾ?”
“ಹುಂ. ಮೊದಲು ಅಪ್ಪ ಕೇಳುವ ಪ್ರಶ್ನೆಗಳಿಗೆ ಉತ್ತರ ರೆಡಿ ಮಾಡಿಕೋ. ಆಮೇಲೆ ಅಪ್ಪನ್ನ ಹಣ ಕೇಳೋಣ.”
ರಮ್ಯಾಗೆ ಕೊಂಚ ಸಮಾಧಾನವಾಯಿತು.
“ರಮ್ಯಾ ನಿನಗೆ ನಳಿನಿ ಅನ್ನುವ ಫ್ರೆಂಡ್ ಇದ್ದಾರಾ?”
“ಅವಳು ನನ್ನ ಬೆಸ್ಟ್ ಫ್ರೆಂಡ್. ಅವಳ ಹೆಸರು ನಿಮಗೆ ಹೇಗೆ ಗೊತ್ತು?””ಅವರು ಮೂರ್ತಿ ಅಂಕಲ್ ಅಕ್ಕನ ಸೊಸೆ, ನೀನು ಅವರ ಮುಂದೆ ನಮ್ಮ ಮನೆ ವಿಚಾರ ಏನೇ ಹೇಳಿದರೂ ಅವರು ಮೂರ್ತಿ ಅಂಕಲ್ ಹತ್ತಿರ ಹೇಳ್ತಾರೆ. ನೀನು ಈಗ ಮಾತನಾಡಿದ ವಿಚಾರ ಅವರ ಹತ್ತಿರ ಹೇಳಬೇಡ.”

“ಖಂಡಿತಾ ಇಲ್ಲಾರಿ”.
ಒಂದು ತಿಂಗಳು ಕಳೆಯಿತು. ಇತ್ತೀಚೆಗೆ ರಮ್ಯಾ ತುಂಬಾ ಅತ್ತೆಯ ಮನೆಗೆ ಭೇಟಿ ನೀಡುವುದು ಪಂಕಜಮ್ಮನ ಗಮನಕ್ಕೂ ಬಂದಿತ್ತು.
ಒಂದು ಶುಕ್ರವಾರ ಆನಂದರಾಯರು ಗಿಡಗಳಿಗೆ ನೀರು ಹಾಕುತ್ತಿದ್ದಾಗ ವಸುಮತಿಯ ಫೋನ್ ಬಂತು. “ಹಲೋ ಅಪ್ಪ-ನಾನು ವಸು…..”

“ಹೇಗಿದ್ದೀಯ ಮಗು?”
“ನಾನು ಹುಷಾರಾಗಿದ್ದೇನೆ. ಭಾನುವಾರ ಒಂದು ಮದುವೆಗೆ ಬಾ ಇದ್ದೀವಿ. ಮಧ್ಯಾಹ್ನ ಮನೆಗೆ ಬರ್‍ತೀನಿ. ನೀವು ಇರ್‍ತೀರ  ತಾನೆ?”
“ನಾವೆಲ್ಲಿಗೆ ಹೋಗ್ತಿವಿ? ಮುರುಳಿ ಬರ್‍ತಿದ್ದಾರಾ?”
“ಅವರೇ ಈ ಮದುವೆ ಕುದರಿಸಿರೋದು…….”
“ಯಾರದಮ್ಮ ಮದುವೆ?”

“ನಮ್ಮ ಟ್ಯೂಟೋರಿಯಲ್ಸ್‌ನಲ್ಲಿ ಜ್ಯೋತಿ ಅನ್ನುವ ಹುಡುಗಿ ಕೆಲಸ ಮಾಡ್ತಾಳೆ. ಅವಳು ಅಕೌಂಟ್ಸ್ ನೋಡಿಕೊಳ್ತಾಳೆ, ಸುಂದರಮೂರ್ತಿ ಅನ್ನುವವರು ಮ್ಯಾಥ್ಸ್  ಪಾಠ ಮಾಡಕ್ಕೆ ನಮ್ಮ ಟ್ಯುಟೋರಿಯಲ್ಸ್‌ ಗೆ ಬರ್‍ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡ್ತಿದ್ರು, ಮುಂದುವರೆಯುವ ಧೈರ್ಯವಿರಲಿಲ್ಲ.”

“ಯಾಕೆ?”
‘ಜ್ಯೋತಿ ತಂದೆಗೆ ಮಗಳನ್ನು ಇನ್ನೂ ಒಳ್ಳೆಯ ಕಡೆಗೆ ಕೊಡಬೇಕು ಅನ್ನುವ ಮನಸ್ಸಿತ್ತು……”
“ಮುರುಳಿ ಅವರನ್ನು ಒಪ್ಪಿಸಿದ್ರಾ?”
‘ಹುಂ. ನಮ್ಮ ಸ್ಪೂಡೆಂಟ್ಸ್ ಬಸ್ ಮಾಡಿದ್ದಾರೆ. ಪೇರೆಂಟ್ಸ್ ಕೆಲವರು ಬರ್‍ತಿದ್ದಾರೆ. ರಾತ್ರಿ ರಿಸೆಪ್ಪನ್‌ ಮುಗಿಸಿಕೊಂಡು ವಾಪಸ್ಸಾಗ್ತಾರೆ. ನಾವು ಧಾರೆ ಮುಗಿಸಿಕೊಂಡು ಬರ್‍ತೀವಿ.”

“ಸರಿ ಬನ್ನಿ.”
“ಆದಿಗೂ ಬರಕ್ಕೆ ಹೇಳೀಪ್ಪ.”
”ಅವನ ಫ್ಯಾಮಿಲಿ, ಸುಬ್ಬು ಫ್ಯಾಮಿಲಿ ಊಟಿಗೆ ಹೊರಟಿದ್ದಾರಮ್ಮ.”
“ಸರಿ, ನಾನು ಮುರುಳಿ 3 ಗಂಟೆ ಹೊತ್ತಿಗೆ ಬರ್‍ತೀವಿ.”
“ಆಗಲಮ್ಮ, ನಿಮ್ಮಮ್ಮಂಗೆ ಹೇಳ್ತೀನಿ” ಎಂದರು ರಾಯರು.

***

ಭಾನುವಾರ ಮುರುಳಿ, ವಸುಮತಿ ಬಂದಾಗ ಗಂಟೆ ಮೂರುವರೆ ದಾಟಿತ್ತು.
“ಹೇಗಿದ್ದೀರಾ ಮಾವ?”
“ಗುಂಡುಕಲ್ಲಿನ ತರಹ ಇದ್ದೀವಿ.”
“ಅಮ್ಮ-ಅಪ್ಪ ನಾನು ಹಿಂದಿನಸಲ ನೋಡಿದ್ದಕ್ಕಿಂತ ಈಗ ಹೆಲ್ತಿಯಾಗಿ ಕಾಣಿಸ್ತೀರ.”
‘ಜವಾಬ್ದಾರಿ ಕಡಿಮೆಯಾಯ್ತಲ್ಲಾ ಆರಾಮವಾಗಿದ್ದೇವೆ”.

“ಅಪ್ಪ ನಮ್ಮಿಂದ ಒಂದು ತಪ್ಪಾಗಿದೆ”
“ಏನು ತಪ್ಪಮ್ಮ?”
“ರಮ್ಯ ಎದುರಿಗೆ ನೀವು ಟ್ಯುಟೋರಿಯಲ್ಸ್ ಶುರು ಮಾಡಲು ಹಣ ಕೊಟ್ಟ ವಿಚಾರ ಹೇಳಿಬಿಟ್ಟೆವು. ಎಷ್ಟು ಹಣಾಂತ ಹೇಳಿಲ್ಲ.”
“ಇದರಲ್ಲಿ ತಪ್ಪೇನಿದೆ?” ನಿಮಗೆ ಸೇರಬೇಕಾಗಿದ್ದ ಹಣ ನಿಮಗೆ ಕೊಟ್ಟಿದ್ದೇನಷ್ಟೆ.”
“ಈ ವಿಚಾರ ನೀವು ಯಾಕೆ ಆದಿಗೆ ಹೇಳಲಿಲ್ಲ?”
“ಹೇಳುವ ಅವಶ್ಯಕತೆ ಕಾಣಲಿಲ್ಲ. ಅವನಿಗೆ ಮೋಸ ಮಾಡಿ ನಾನು ನಿಮಗೆ ಹಣ ಕೊಟ್ಟಿಲ್ಲವಲ್ಲಾ?”

“ಅಪ್ಪ – ರಮ್ಯಾ ಆದಿ ಇಬ್ಬರಿಗೂ ನೀವು ಮನೆ ಬಿಟ್ಟು ಬಂದಿರುವುದಕ್ಕೆ ಬೇಸರವಿದೆ. “ನಮ್ಮಿಂದ ತಪ್ಪಾಯ್ತು,  ಅಪ್ಪ ಒಪ್ಪುವುದಾದರೆ, ನಾವು ಮೇಲುಗಡೆ ಮನೆಕಟ್ಟಿಕೊಂಡು ಹೋಗ್ತೀವಿ. ಅವರು ಕೆಳಗಡೆ ಮನೆಯಲ್ಲಿರಲಿ, ನಾವು ಮೇಲಿರ್‍ತೀವಿ, ಅಡಿಗೆಯವರನ್ನು,  ಕೆಲಸದವರನ್ನು ಗೊತ್ತು ಮಾಡಿಕೊಡ್ತೀವಿ” ಅಂದ ಆದಿ.

“ಅವರು ಮನೆ ಕಟ್ಟಿ, ನಾವು ಆ ಮನೆಗೆ ಹೋಗುವ ಹೊತ್ತಿಗೆ ನಮಗೆ ಇನ್ನೂ ವಯಸ್ಸಾಗಿರತ್ತೆ. ನಮ್ಮ ಜವಾಬ್ದಾರೀನ್ನ ತೆಗೆದುಕೊಳ್ಳಲು ರಮ್ಯ ಒಪ್ತಾಳಾ? ಆದ್ದರಿಂದ ನಾವು ಕೈಲಾಗುವವರೆಗೂ ಈ ಮನೆಯಲ್ಲಿರ್‍ತೀವಿ, ಆಮೇಲೆ ಯಾವುದಾದರೊಂದು ವೃದ್ಧಾಶ್ರಮಕ್ಕೆ ಸೇರಿಕೊಳ್ತೇವೆ.”

 “ನಾವೆಲ್ಲಾ ಇರುವಾಗ ನೀವು ಹೀಗೆ ಮಾತಾಡಬಾರದು. ನಾವು ನಿಮ್ಮನ್ನು ನೋಡಿಕೊಳ್ತೇವೆ. ನೀವು ತುಮಕೂರಿಗೆ ಬಂದು ಬಿಡಿ.”
“ಖಂಡಿತಾ ಬರ್‍ತೀನಿ. ನೀವೇ ಒಂದು ವೃದ್ಧಾಶ್ರಮ ಶುರು ಮಾಡಿಬಿಡಿ.”
ನಂತರ ಅವರ ಮಾತುಕತೆ ರಾಜಕೀಯದತ್ತ ಹೊರಳಿತು. ವಸುಮತಿ ತಾಯಿಯನ್ನು ಹುಡುಕಿಕೊಂಡು ಹೊರಟಳು.

“ಹೇಗಿದ್ದೀಯಮ್ಮಾ?”
“ಚೆನ್ನಾಗಿದ್ದೀನಿ. ರಾತ್ರಿ ಊಟ ಮುಗಿಸಿಕೊಂಡು ಹೋಗ್ತೀಯ ತಾನೆ?”
“ಇಲ್ಲಮ್ಮ. ಬರೀ ಕಾಫಿ ಕೊಡು, ನಾವು ಆರು ಗಂಟೆಗೆ ಇಲ್ಲಿಂದ ಹೊರಡ್ತೇವೆ.”
“ಅಳಿಯಂದಿರಿಗೆ ಒಂದು ಘಳಿಗೆ ಮಲಗಕ್ಕೆ ಹೇಳು.”
“ಅವರಿಗೆ ಉಪಚಾರ ಮಾಡುವುದು ಬೇಡಮ್ಮ. ನಿದ್ರೆ ಬಂದರೆ ದಿವಾನ್ ಮೇಲೆ ಮಲಗ್ತಾರೆ.”

“ಬಾ ನಮ್ಮ ರೂಂಗೆ ಹೋಗೋಣ.”
“ಅಪ್ಪ ಮಲಗಲು ಬಂದರೆ ನಾವು ಹೊರಗೆ ಬರಬೇಕಾಗತ್ತೆ. ಬೇರೆ ಎಲ್ಲಾದರೂ ಕುಳಿತುಕೊಳ್ಳೋಣ.”
“ಬಾ ಹಾಗಾದರೆ ಬೇರೆ ರೂಂಗೆ ಹೋಗೋಣ’.
ದಾಕ್ಷಾಯಿಣಿ ಅವಳನ್ನು ವೆರಾಂಡ ಪಕ್ಕದಲ್ಲಿದ್ದ ರೂಂಗೆ ಕರೆದೊಯ್ದರು. ಅಲ್ಲೂ ಡಬಲ್‌ಕಾಟ್ ಇತ್ತು.

“ಒಂದು ಘಳಿಗೆ ಮಲಗು” ದಾಕ್ಷಾಯಿಣಿ, ಮಲಗುತ್ತಾ ಹೇಳಿದರು. ವಸುಮತಿ ತಾಯಿ ಪಕ್ಕ ಉರುಳಿದಳು. “ಅಮ್ಮಾ, ನೀವು ಮನೆ ಬಿಡಲು ಏನು ಕಾರಣ?”

ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ:   https://www.surahonne.com/?p=40034

(ಮುಂದುವರಿಯುವುದು)
ಸಿ.ಎನ್. ಮುಕ್ತಾ, ಮೈಸೂರು.

4 Responses

 1. ಕಾದಂಬರಿ ಕುತೂಹಲ ವನ್ನು …ಹುಟ್ಟಿಸುತ್ತಾ ಸಾಗುತ್ತಿದೆ..ಎಲ್ಲವನ್ನೂ ಕೊಟ್ಟು ಬರಿಗೈದಾಸರಾಗಬೇಡಿ..ಏನೂ ಇಲ್ಲದಿದ್ದರೆ ಇಳಿ ವಯಸ್ಸಿನಲ್ಲಿ… ನಮ್ಮ ಸ್ಥಿತಿ..
  ..ಏನಾಗಬಹುದು..ಯೋಚಿಸಬೇಕಾದ ಸಂಗತಿ..ಚೆನ್ನಾಗಿ ಮೂಡಿ ಬರುತ್ತಿದೆ ಮೇಡಂ

 2. ಪದ್ಮಾ ಆನಂದ್ says:

  ಕಂತಿನಿಂದ ಕಂತಿಗೆ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿರುವ ಕಾದಂಬರಿ ಮುಂದಿನ ಕಂತಿಗಾಗಿ ಕಾತುರದಿಂದ ಕಾಯುವಂತೆ ಮಾಡುತ್ತಿದೆ.

 3. ನಯನ ಬಜಕೂಡ್ಲು says:

  ಇವತ್ತಿನ ದಿನ ವೃದ್ದಾಪ್ಯದಲ್ಲಿ ಸಾಮಾನ್ಯವಾಗಿ ಎದುರಿಸುವಂತಹ ಸಮಸ್ಯೆ.

 4. ಶಂಕರಿ ಶರ್ಮ says:

  ಕುತೂಹಲಕಾರಿಯಾಗಿ ಸಾಗುತ್ತಿರುವ ಕಿರುಕಾದಂಬರಿಯು ಮುಂದಿನ ಕಂತಿಗೆ ಕಾಯುವಂತೆ ಮಾಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: