ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

‘ದೊಡ್ಡ ಕಾರಣವೇನೂ ಇಲ್ಲ. ಯಾಕೋ ಬದುಕು ತುಂಬಾ ಯಾಂತ್ರಿಕ ಅನ್ನಿಸಿಬಿಟ್ಟಿತ್ತು. ಅವರಿಬ್ಬರೂ ಅವರ ಪ್ರಪಂಚದಲ್ಲಿ ಮುಳುಗಿಹೋಗಿದ್ರು, ಮನೆಯ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ತಿರಲಿಲ್ಲ. ಆದಿನ ಒಂದು ನಡೆದ ಸಣ್ಣ ಘಟನೆ ನಾವು ಅವರಿಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.”

“ಯಾವ ಘಟನೆ?” ವಸುಮತಿಗೆ ಆ ಘಟನೆಯ ಬಗ್ಗೆ ಗೊತ್ತಿದ್ದರೂ ಕೇಳಿದಳು.
ದಾಕ್ಷಾಯಿಣಿ ಹೇಳಿದರು.
“ಅಪ್ಪ ಒಳ್ಳೆಯ ನಿರ್ಧಾರ ತೆಗೆದುಕೊಂಡರು ಬಿಡು, ರಮ್ಯಾಳಿಗೆ ಈಗ ತುಂಬಾ ಕಷ್ಟವಾಗಿರಬಹುದು.”

‘ಮೊದಮೊದಲು ಕಷ್ಟವಾಗಿರಬಹುದು. ಈಗ ಅವಳೇ ಅಡಿಗೆ ಮಾಡ್ತಿದ್ದಾಳೆ. ಅವರಮ್ಮ ಅವಳಿಗೆ ಸಪೋರ್ಟ್ ಮಾಡಲಿಲ್ಲ. ‘ನಿನ್ನದೇ ತಪ್ಪಂತ’ ಬೈದರಂತೆ……”

“ಅವಳಿಗೆ ಈಗ ನಿಮ್ಮ ಜೊತೆ ಇರಬೇಕು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನಿಸಿದೆ.”
“ನೋಡೋಣ. ನೀನು ಹೇಗಿದ್ದೀಯ? ನಿಮ್ಮ ಅತ್ತೆ ಏನಂತಾರೆ?”

“ಅವರಿಗೆ ನಾನು ಕೆಲಸಮಾಡುವುದು ಇಷ್ಟವಿಲ್ಲ. ‘ನೀನು ಮೊದಲನೆ ಸೊಸೆ ಮನೆಯಲ್ಲೇ ಇರಬೇಕು ಅಂತಿದ್ರು.’ ಮುರುಳಿ ತಮ್ಮ ಪ್ರಕಾಶ್ ಹೆಂಡತಿ, ಮುರುಳಿ ತಂಗಿಯರು ಕೆಲಸಕ್ಕೆ ಹೋಗ್ತಾರೆ. ಅದಕ್ಕೆ ಮುರುಳಿ ತಾಯಿ ಜೊತೆ ಜಗಳವಾಡಿದರು.”

“ಅವರೆಲ್ಲಾ ಕೆಲಸಕ್ಕೆ ಹೋಗುವಾಗ ವಸು ಯಾಕೆ ಕೆಲಸ ಮಾಡಬಾರದು? ಮನೆಯಲ್ಲಿ  ಅಡಿಗೆಯವರನ್ನು ಇಡ್ತೀನಿ. ನಿನಗೇನೂ ತೊಂದರೆಯಾಗಲ್ಲ. ಕೆಲಸದವಳು ಕೆಲಸ ಮಾಡ್ತಾಳೆ.ನಿನಗೇನು ಕಷ್ಟಾಂತ ಕೇಳಿದ್ರು. ಅದಕ್ಕೆ ಉತ್ತರವಿಲ್ಲ.”

“ನಿಮ್ಮಾವ ಏನಂದ್ರು?”

“ಅವರು ನನಗೆ ತುಂಬಾ ಸಪೋರ್ಟ್ ಮಾಡಿದರು. ಪ್ರಕಾಶ ಬೆಂಗಳೂರಿಗೆ ಓಡಾಡ್ತಿದ್ದ. ಅವನ ಹೆಂಡತೀನೂ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡಳು. ಅವರು ಬೆಂಗಳೂರಿನಲ್ಲೇ ಮನೆ ಮಾಡಿದ್ರು. ‘ನಮ್ಮತ್ತೆ ಅವರ ಜೊತೆಯಲ್ಲೇ ಇದ್ದೀನಿ’ ಅಂತಿದ್ರು, ಅವರು ಇವರನ್ನು ಕರೆಯಲೇ ಇಲ್ಲ. ಈಗ ಸುಮ್ಮನಿದ್ದಾರೆ.”

‘ಹೋಗಲಿ ಬಿಡು, ಎಲ್ಲಾ ಒಳ್ಳೆಯದಾಯ್ತಲ್ಲಾ….?”
“ಏನು ಒಳ್ಳೆಯದಾಯ್ತ? ಅಡಿಗೆಯವರು ಇರೋದ್ರಿಂದ ನನಗೆ ಕೆಲಸವೇ ಇಲ್ಲ” ಅಂತಿರ್‍ತಾರೆ. ನಮ್ಮಾವ “ನಿನಗೆ ಹೊತ್ತು ಹೋಗದಿದ್ರೆ ಹೇಳು ಎಸ್.ಎಸ್.ಎಲ್.ಸಿ.ಗೆ ಕಟ್ಟಿಸ್ತೀನಿ” ಅಂತಿರ್‍ತಾರೆ.
“ಮಕ್ಕಳನ್ನು ನೋಡಿ ತುಂಬಾ ದಿನಗಳಾದವು. ಏನು ಓದ್ತಿದ್ದಾರೆ?”
‘ವರುಣ್ ಬಿ.ಇ. ಓದ್ದಿದ್ದಾನೆ. ವೇದ ಈ ಸಲ ಪಿ.ಯು.ಸಿಗೆ ಬರ್‍ತಿದ್ದಾಳೆ.”
“ವಾರಿಣಿ ಮಕ್ಕಳು?”
“ನವ್ಯ ಬಿ.ಎಸ್.ಸಿ., ದಿವ್ಯ ಎಸ್.ಎಸ್.ಎಲ್.ಸಿ. ಅವಳೂ ಇತ್ತೀಚೆಗೆ ಎಲ್ಲಿಗೂ ಬಂದಿಲ್ಲ.”
“ಇಬ್ಬರೂ ಬಿಡುವುಮಾಡಿಕೊಂಡು ಮಕ್ಕಳ ಜೊತೆ ಬಂದು ನಾಲ್ಕು ದಿನಗಳು ಇರಬಾರದಾ? ಈ ಮನೆ ದೊಡ್ಡದಾಗಿರುವುದರಿಂದ ಮಕ್ಕಳಿಗೆ ಇರಲು ಕಷ್ಟವಾಗದು.”

“ಆಗಲಮ್ಮ. ಬರೋದಿಕ್ಕೆ ಪ್ರಯತ್ನಪಡ್ತೀವಿ, ಆದಿ- ರಮ್ಯಾ ಕೂಡ ಬನ್ನೀಂತ ತುಂಬಾ ಹೇಳಿದ್ದಾರೆ. ರಮ್ಯಾ ಹೇಗಿದ್ದಾಳೆ?”

“ಚೆನ್ನಾಗಿದ್ದಾಳೆ. ಇತ್ತೀಚೆಗೆ ನಮ್ಮನೆಗೆ ತುಂಬಾ ಬರ್‍ತಾಳೆ, ಅದಕ್ಕೆ ನಂಗೆ ಭಯ.”
“ಭಯ ಯಾಕಮ್ಮಾ?”

“ನಾವು ಈ ಮನೆಗೆ ಬಂದ ಮೇಲೆ ನಮ್ಮ ಜೊತೆ ಮಾತು ಕಥೆ ನಿಲ್ಲಿಸಿದ್ದಳು. ಆದೀನೂ ಬರೋದು ನಿಲ್ಲಿಸಿದ್ದ. ಮಕ್ಕಳು ಬಂದು-ಹೋಗಿ ಮಾಡ್ತಿದ್ರು, ಆಮೇಲೆ ಆದಿ ಬರುವುದಕ್ಕೆ ಶುರು ಮಾಡಿದ. ಸುಬ್ಬು ಮನೆ ಫಂಕ್ಷನ್ ಆದಮೇಲೆ ರಮ್ಯಾ ಬರುವುದು ಜಾಸ್ತಿಯಾಗಿದೆ. ಅವಳು ಏನೋ ಮನಸ್ಸಿನಲ್ಲಿಟ್ಟುಕೊಂಡು ಬರಿದ್ದಾಳೆ ಅನ್ನಿಸ್ತಿದೆ. ಅದಕ್ಕೆ ಭಯ.”

“ಬಂದರೆ ಬರಲಿ ಬಿಡು, ಅದಕ್ಕೆ ನೀನು ಯಾಕೆ ಭಯ ಪಡಬೇಕು?”
“ನನಗೆ ಅವಳೂಂದ್ರೆ ಭಯಾನೇ ವಸು. ಒಂದೊಂದು ಸಲ ಎಷ್ಟು ಬೇಜಾರಾಗತ್ತೆ ಗೊತ್ತಾ? ಈ ಮನೆಗೆ ಸೊಸೆಯಾಗಿ ಬಂದ ಮೇಲೆ ನಮ್ಮತ್ತೆಗೆ ತುಂಬಾ ಹೆದರ್‍ತಿದ್ದೆ, ನಿಮ್ಮಪ್ಪ ಸಮಾಧಾನ ಹೇಳಿದ್ರು, ಈಗ ನೋಡಿದರೆ ಸೊಸೆಗೆ ಹೆದರುವಂತಾಗಿದೆ.”

“ನೀ ಯಾಕೆ ಹೆದರಬೇಕಮ್ಮಾ?”
“ಅವಳು ನಿಜವಾಗಿ ಏನೂ ಕೆಲಸ ಮಾಡ್ತಿರಲಿಲ್ಲ. ಸಾಯಂಕಾಲ ನಾನು ಚಪಾತಿ ಹಿಟ್ಟು ಕಲಿಸಿ, ಚಪಾತಿಗೆ ಪಲ್ಯಾನೋ, ಗೊಜ್ಜೋ ಮಾಡಿ, ಅನ್ನಕ್ಕೆ ಅಕ್ಕಿ ತೊಳೆದಿಟ್ಟು ಹೊರಗೆ ಬರ್‍ತಿದ್ದೆ. ರಮ್ಯಾ ಬಂದ ಕೂಡಲೇ ಕಾಫಿ ಕುಡಿದು ಏನಾದರೂ ತಿಂದು ತನ್ನ ರೂಂನಲ್ಲಿ ಸೇರಿ ಫೋನ್ ಹಿಡಿದು ಮಲಗಿದ್ದಳು. ಆದಿ 7 ಗಂಟೆಗೆ ಬರುವ ಹೊತ್ತಿಗೆ ಅಡಿಗೆ ಮನೆಗೆ ಹೋಗಿ ಧಡಧಡ ಶಬ್ದ ಮಾಡ್ತಾ ಪಾತ್ರೆ ಜೋಡಿಸ್ತಿದ್ದು. ಹಾಗೇ ಅನ್ನಕ್ಕೆ ಒಲೆ ಹಚ್ಚುತ್ತಿದ್ದಳು. ಮೂಡ್ ಚೆನ್ನಾಗಿದ್ರೆ ಅನ್ನ ಮಾಡ್ತಿದ್ದಳು. ಇಲ್ಲದಿದ್ದರೆ ಇಲ್ಲ. ನಿಜ ಹೇಳಬೇಕೂಂದ್ರೆ ಅವಳು ಮನೆಯಿಂದ ಹೊರಗಿದ್ರೆ ನಾನು ನಿರಾಳವಾಗಿರ್‍ತಿದ್ದೆ.”

“ರಮ್ಯಾ ಕೆಟ್ಟವಳೇನಮ್ಮ?”
“ಕೆಟ್ಟವಳಲ್ಲ, ಆದರೆ ತುಂಬಾ ಲೆಕ್ಕಾಚಾರದ ವ್ಯಕ್ತಿ. ಅವಳು ಯಾವತ್ತು ನನ್ನ ಜೊತೆ ಜಗಳವಾಡಿರಲಿಲ್ಲ. ಆದಿನ ನನಗೆ ತಲೆನೋವು ಬಂದು ಒದ್ದಾಡ್ತಿದ್ದಾಗ ಮಕ್ಕಳು ಅಪ್ಪ-ಅಮ್ಮನಿಗೆ ದಬಾಯಿಸಿಬಿಟ್ರು, ಅದಕ್ಕೆ ಅವಳೇನಂದಳು ಗೊತ್ತಾ?”

“ಏನ೦ದಳು?”

“ನಿಮ್ಮಜ್ಜಿ ನಿಮಗೆ ಹೇಳಿಕೊಟ್ಟು ನನ್ನನ್ನು ಬೈಸ್ತಿದ್ದಾರೆ’ ಅಂದಳು, “ನನಗೆಷ್ಟು ಬೇಜಾರಾಯ್ತು ಗೊತ್ತಾ? ನಾನು ಯಾವತ್ತಾದರೂ ಹಾಗೆ ಮಾಡ್ತೀನಾ?”

“ಅಮ್ಮ ನೀನು ಎಂತಹವಳೂಂತ ನಮಗೆ ಗೊತ್ತು, ಅವರಮ್ಮನಿಗೂ ಗೊತ್ತು, ನಿನ್ನನ್ನು ಯಾವ ಭಯ ಕಾಡುತ್ತಿದೆ ಹೇಳು.”
“ಪುನಃ ಒಟ್ಟಿಗೆ ಇರೋಣಾಂತ ಹೇಳ್ತಾಳೇನೋ ಅನ್ನುವ ಭಯ, ನನಗೆ ಒಟ್ಟಿಗೆ ಇರಲು ಇಷ್ಟವಿಲ್ಲ. ನನಗೆ ಸ್ವಾತಂತ್ರ್ಯ ಬೇಕು. ಅವರ ಮನೆಯಲ್ಲಿ ಒಂದು ತರಹ ಉಸಿರುಗಟ್ಟಿಸುವ ವಾತಾವರಣ.’

“ನನಗೆ ಅರ್ಥವಾಗತ್ತಮ್ಮ, ಅಪ್ಪ ಖಂಡಿತಾ ಒಟ್ಟಿಗೆ ಇರಲು ಒಪ್ಪಲ್ಲ. ಧೈರ್ಯವಾಗಿರು.”

ತುಂಬಿದ ಕುಟುಂಬದಲ್ಲಿ ಬೆಳೆದ ನಾನು ತುಂಬಿದ ಮನೆಯನ್ನೇ ಸೇರಿದೆ. ಮಾವನ ಮನೆಯಲ್ಲಿ ಅವರ ತಂದೆ-ತಾಯಿ, ಮಾವನ ಇಬ್ಬರು ವಿಧವೆ ಅಕ್ಕಂದಿರು, ಮಕ್ಕಳು ಎಲ್ಲರೂ ಇದ್ರು. ಆಗ ಯಾವತ್ತೂ ಬೇಜಾರಾಗ್ತಿರಲಿಲ್ಲ. ಈಗ ನಾನು ಒಟ್ಟಿಗೆ ಇರೋದು ಬೇಡಾಂದ್ರೆ ತಪ್ಪಾಗಲ್ವಾ?’

“ಖಂಡಿತಾ, ತಪ್ಪಿಲ್ಲ. ನೀನು ಆ ಬಗ್ಗೆ ಯೋಚಿಸೋದು ಬಿಡು. ಅಂತಹ ಸಂದರ್ಭ ಬಂದರೆ ‘ಒಟ್ಟಿಗೆ ಇರಲು ನನಗೆ ಇಷ್ಟವಿಲ್ಲಾಂತ’ ಹೇಳಮ್ಮ.”
“ಆಗಲಿ ನೋಡೋಣ” ಎಂದರು ದಾಕ್ಷಾಯಿಣಿ.

****

‘ವಸುಮತಿ ಬಂದು ಹೋದ ವಿಚಾರ  ಕೇಳಿ  ರಮ್ಯಾ ತುಂಬಾ ಬೇಜಾರು ಮಾಡಿಕೊಂಡಳು. ಅವರು ಬರೋದು ಮೊದಲೇ ತಿಳಿದಿದ್ದಿದ್ರೆ ಖಂಡಿತಾ ನಾವು ಪ್ರೋಗ್ರಾಂ ಕ್ಯಾನ್ಸಲ್ ಮಾಡಿಕೊಳ್ತಿದ್ದೆವು’ ಎಂದಳು.

ಒಂದು ತಿಂಗಳು ಕಳೆಯಿತು. ಒಂದು ಶನಿವಾರ ಸುಮಾರು 9 ಗಂಟೆಯ ಹೊತ್ತಿಗೆ ಆದಿ, ರಮ್ಯ ಬಂದರು.

“ಮಾವ, ನಾವು ರಾಜರಾಜೇಶ್ವರಿ ನಗರದಲ್ಲಿ ಒಂದು ಡೂಪ್ಲೆಕ್ಸ್ ಮನೆ ನೋಡಿದ್ದೇವೆ. ಕೆಳಗಡೆ 2 ರೂಮು, ಫಸ್ಟ್ ಫ್ಲೋರ್‌ನಲ್ಲಿ 3 ರೂಮು ಇರುವ ಮನೆ, ಅದರ ಮೇಲೆ ಒಂದು ರೂಮ್ ಇದೆ. ವಾಸ್ತು ಪ್ರಕಾರ ಕಟ್ಟಿದ್ದಾರೆ.”

“ಈಗ ಎಲ್ಲರೂ ಅಪಾರ್ಟ್‌ಮೆಂಟ್‌ ಇಷ್ಟಪಡುತ್ತಾರೆ. ನೀವ್ಯಾಕೆ ಇಂಡಿಪೆಂಡೆಂಟ್ ಮನೆ ತೊಗೊಳ್ತಿದ್ದೀರಾ?”
“ಆದಿಗೆ ಇಂಡಿಪೆಂಡೆಂಟ್ ಮನೇನೆ ಇಷ್ಟವಂತೆ.”
“ಎಷ್ಟು ಹೇಳ್ತಿದ್ದಾರೆ?”
“ಒಂದು ಮುಕ್ಕಾಲು ಕೋಟಿ ಹೇಳಿದ್ದಾರೆ. ಮಾತು-ಕಥೆಯಿಂದ ಕಡಿಮೆ ಮಾಡಿಸಬಹುದು. ನೀವು ಅತ್ತೆ ಒಂದು ಸಲ ಆ ಮನೆ ನೋಡಿದರೆ ಚೆನ್ನಾಗಿರುತ್ತದೆ. ನಾಳೆ ಹೋಗೋಣವಾ?”
“ಯಾಕಮ್ಮ ನಿನಗೆ ಈ ಏರಿಯಾ ಇಷ್ಟವಿಲ್ವಾ?”
“ಈಗ ನಾವು ನೋಡಿರುವ ಮನೆ ಆದಿ ಫ್ರೆಂಡ್‌ದು. ಅವರು ದುಬೈಗೆ ಹೋಗಿ ಸೆಟ್ಲ್ ಆಗ್ತಿದ್ದಾರೆ. ಮನೆ ಕಟ್ಟಿ ಒಂದು ವರ್ಷವಾಗಿದೆಯಷ್ಟೆ. ಅದಕ್ಕೆ ನೋಡಿದೆವು…..”

“ನಾಳೆ ನಾನು-ನಿಮ್ಮತ್ತೆ ನಮ್ಮ ಹಳೆಯ ಸ್ನೇಹಿತರ ಮನೆಗೆ ಸತ್ಯನಾರಾಯಣ ಪೂಜೆಗೆ ಹೋಗ್ತಿದ್ದೀವಿ. ಮುಂದಿನ ವಾರವಾದರೆ ನಾನು ಬರ್‍ತೀನಿ.”

“ಆಗಲಿ ಮಾವ. ಮುಂದಿನ ವಾರಾನೇ ಹೋಗೋಣ” ಎಂದಳು ರಮ್ಯ.

ಎರಡು ದಿನ ಕಳೆಯಿತು. ಬುಧವಾರ ಬೆಳಿಗ್ಗೆಯೇ ಪಂಕಜಮ್ಮ ಮಗಳಿಗೆ ಫೋನ್ ಮಾಡಿದರು.
“ಏನಮ್ಮಾ?”
“ಸಾಯಂಕಾಲ ಮನೆಗೆ ಬಾ. ನಾನು ನಿನ್ನ ಹತ್ತಿರ ಮಾತನಾಡಬೇಕು.”
“ಏನು ವಿಷಯಾಮ್ಮ?”
“ಬಾ ಮಾತಾಡೋಣ.”

ಸಾಯಂಕಾಲ ರಮ್ಯ ಆಫೀಸ್‌ನಿಂದ ನೇರವಾಗಿ ತಾಯಿಮನೆಗೇ ಹೋದಳು.

”ಅಮ್ಮಾ, ತುಂಬಾ ಹಸಿವು ಏನಾದ್ರೂ ಕೊಡು.”
ನಿಂಗೆ ನಮ್ಮ ಮನೆಯಲ್ಲಿ ಒಂದು ಲೋಟ ನೀರೂ ಕೊಡಲ್ಲ. ನಿಮ್ಮ ಮನೆಗೆ ಹೋಗಿ ಏನು ಬೇಕಾದರೂ ತಿಂದುಕೋ” ಪಂಕಜಮ್ಮ ಖಡಕ್ಕಾಗಿ ಹೇಳಿದರು.

“ಪಂಕಜ ನೀನು ಸುಮ್ಮನಿರು. ಆಮೇಲೆ ಮಾತಾಡೋಣ.”
ರಮ್ಯಾಳ ತಂದೆ ಮಗಳಿಗೆ ಕಾಫಿ ಕೊಟ್ಟು, ಚೂಡವಲಕ್ಕಿ, ಬಾಳೆಹಣ್ಣು ಕೊಟ್ಟು ಹೇಳಿದರು.

“ಅಮ್ಮಾ ಯಾವ ವಿಚಾರಕ್ಕೋ ಕೋಪಮಾಡಿಕೊಂಡಂತಿದೆ”. ತಟ್ಟೆ ಖಾಲಿ ಮಾಡುತ್ತಾ ಹೇಳಿದಳು ರಮ್ಯಾ.

ಅವಳು ಕಾಫಿ ಕುಡಿದ ನಂತರ ಪಂಕಜಮ್ಮ ಕೇಳಿದರು. “ನಾವು ನಿನಗೇನೇ ಅನ್ಯಾಯ ಮಾಡಿದ್ದೀವಿ? ನನ್ನ ಹೊಟ್ಟೆ ಉರಿಸಕ್ಕೆ ಹುಟ್ಟಿದ್ದೀರ ನೀನು-ನಿಮ್ಮಣ್ಣ.’
“ಯಾಕಮ್ಮಾ ಏನಾಯ್ತು?”

“ಅಪ್ಪ-ಅಮ್ಮನ ತಂಟೆಯೇ ಬೇಡಾಂತ ನಿಮ್ಮಣ್ಣ ದುಬೈಗೆ ಹೋಗಿ ಸೆಟ್ ಆದ. ನೀನೂ ಈಗ ನಮ್ಮ ಸಹವಾಸ ಬೇಡಾಂತ ದೂರ ಹೋಗ್ತಿದ್ದೀಯಾ?”
“ನಾನೆಲ್ಲಿ ದೂರ ಹೋಗ್ತಿದ್ದೀನಮ್ಮಾ?”

“ನಿಮ್ಮಾವ ನಿಮ್ಮ ತಂದೆಗೆ ಸಿಕ್ಕಿದಂತೆ, ಅವರಿಂದಲೇ ನೀವು ರಾಜರಾಜೇಶ್ವರಿ ನಗರಕ್ಕೆ ಹೋಗ್ತಿರುವ ವಿಚಾರ ತಿಳಿಯಿತು. ಇದೇ ಏರಿಯಾದಲ್ಲಿದ್ದರೆ ನಮ್ಮ ಜವಾಬ್ದಾರಿ ತೆಗೆದುಕೊಳ್ಳಬೇಕೂಂತ ಭಯವಾಯ್ತಾ?’

“ಯಾಕಮ್ಮ ಹಾಗಂತಿದ್ದೀಯ? ನಾನು ಈ ಏರಿಯ ಬಿಟ್ಟು ಹೋಗಲು ಹೇಗೆ ಸಾಧ್ಯ? ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಪಿ.ಯು.ಸಿ ವರೆಗೂ ಇದೆ. ಈಗ ಹೊಸ ಸ್ಕೂಲು ಹುಡುಕುವವರಾರು?”

‘ಹಾಗಾದ್ರೆ ರಾಜರಾಜೇಶ್ವರಿ ನಗರದ ಮನೆಯನ್ನು ಬಾಡಿಗೆಗೆ ಕೊಡ್ತೀರಾ?”

‘ನಾವು ಮನೆ ತೆಗೆದುಕೊಳ್ತಿಲ್ಲಮ್ಮ, ನಾವು ಮೈಸೂರಿಗೆ ಸುಬ್ಬು ಮನೆ ಫಂಕ್ಷನ್‌ಗೆ ಹೋಗಿದ್ದಾಗ ವಸುಮತಿ ಅತ್ತಿಗೆ ಬಂದಿದ್ರು. ಅವರಿಂದ ಮಾವ ಅವರಿಗೆ, ವಾರುಣಿಗೆ ಅತ್ತಿಗೆಗೆ ಹಣ ಕೊಟ್ಟಿರುವ ವಿಚಾರ ತಿಳಿಯಿತು. ವಿಚಾರ ತಿಳಿದು ನಮಗೆ ಬೇಜಾರಾಯ್ತು.’

”ಬೇಜಾರಾಕೆ? ಅವರ ಹಣ ತಾನೆ ಅವರು ಕೊಟ್ಟಿರೋದು?”

“ಆ ಹಣ ಕೊಡಕ್ಕೆ ಮೊದಲು ನಮಗೆ ಹೇಳಬಹುದಿತ್ತಲ್ವಾ? ಹಣಕಾಸಿನ ವಿಚಾರದಲ್ಲಿ ನಮ್ಮಾವ ತುಂಬಾ ಬಿಗಿ, ಯಾರ ಹತ್ತಿರಾನೂ ಏನೂ ಹೇಳಲ್ಲ. ಅಂತಹವರು ನಮಗೆ ತಿಳಿಸದೆ ಹೆಣ್ಣು ಮಕ್ಕಳಿಗೆ ಯಾಕೆ ಹಣ ಕೊಟ್ರು? ನಾಳೆ ಹೆಣ್ಣು ಮಕ್ಕಳ ಓದು, ಮದುವೆಗೆ ಹಣ ಕೊಡ್ತಾ ಹೋದರೆ ಏನ್ಮಾಡೋದು?”

“ಅವರು ಪ್ರತಿಯೊಂದಕ್ಕೂ ಲೆಕ್ಕ ಕೊಡಲೀಂತ ನೀವು ಬಯಸೋದು ತುಂಬಾ ತಪ್ಪು ರಮ್ಯ,  ನೀನು ಖರ್ಚು ಮಾಡಿದ್ದೆಲ್ಲಾ ನಮಗೆ ಹೇಳ್ತೀಯ? ಅಥವಾ ನಾವು ಖರ್ಚು ಮಾಡಿದ್ದೆಲ್ಲಾ ನಿನಗೆ ಹೇಳ್ತೀವಾ? ಇದು ಸಿಲ್ಲಿ ಮ್ಯಾಟರ್ ಅನ್ನಿಸತ್ತೆ” ಪಂಕಜಮ್ಮ ಹೇಳಿದರು.

“ಸಿಲ್ಲಿ ಅಲ್ಲಮ್ಮ, ಒಂದು ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಎಲ್ಲಾ ಹೇಳಬೇಕು. ಇದುವರೆಗೂ ಅವರು ಹೆಣ್ಣು ಮಕ್ಕಳಿಗೆ ಎಷ್ಟು ಹಣ ಕೊಟ್ಟಿದ್ದಾರೆ ಅನ್ನುವುದು ನಮಗೆ ತಿಳಿದಿಲ್ಲ.”

“ನಿನ್ನ ಜೊತೆ ವಾದ ಮಾಡುವವರಿಗೆ ಬುದ್ಧಿಯಿಲ್ಲ.”
“ಪಂಕಜ ನೀನು ಏನೂ ಮಾತಾಡಬೇಡ, ನಾನು ಮಾತಾಡ್ತೀನಿ ರಮ್ಯ ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರ ಹೇಳೀಯಾ?’
“ಅದೇನು ಕೇಳುತ್ತೀರೋ ಕೇಳಿ.”
“ಡಿಸೆಂಬರ್ ತಿಂಗಳಲ್ಲಿ ನೀನೂ, ಆದಿ ನೆಲಮಂಗಲದ ಹತ್ತಿರ 30×50ರ ಒಂದು ಸೈಟನ್ನು 18 ಲಕ್ಷಕ್ಕೆ ತೆಗೆದುಕೊಂಡಿದ್ದೀರಂತೆ ನಿಜಾನಾ?”
“ಅದೇನಾಯ್ತಂದ್ರೆ….”
‘ನನಗೆ ಕಾಗಕ್ಕ ಗುಬ್ಬಕ್ಕನ ಕಥೆ ಬೇಡ, ಹೌದೋ, ಅಲ್ಲವೋ ಹೇಳು.”
” ಹೌದು….”
“ಈ ವಿಚಾರ ನೀವು ನಮಗ್ಯಾಕೆ ಹೇಳಲಿಲ್ಲ?”

“ಅದೂ……..”
”ನೀನೂ ಆದಿ ಸ್ವಂತ ಮನೆಯವರಿಂದ ಈ ವಿಚಾರ ಮುಚ್ಚಿಟ್ಟಿದ್ದೀರ. ಇದು ಸರೀನಾ?”
“ಹೇಳಬೇಕೂಂತಿದ್ದೆವು. ಮರೆತುಹೋಯ್ತು.”
“ಹಾಗೆ ನಿಮ್ಮ ಮಾವನಿಗೂ ಮರೆತಿರಬಹುದೂಂತ ಯಾಕೆ ಯೋಚಿಸಲ್ಲ? ನಿನಗೊಂದು ನಿಯಮ, ಅವರಿಗೊಂದು ನಿಯಮಾನಾ?”
“ಸಾರಿ ಅಪ್ಪ…..”

“ಈ ವಯಸ್ಸಿನಲ್ಲಿ ನಿಮ್ಮ ಮಾವ, ಅತ್ತೆ ಬಂದು ನೀವು ಕೊಂಡುಕೊಳ್ಳದೇ ಇರುವ ಮನೆಯನ್ನು ನೋಡಬೇಕಾ? ನಾಚಿಕೆ ಆಗಲ್ವಾ ನಿನಗೆ? ನಿಮ್ಮ ಮಾವ-ಅತ್ತೆ ದೇವರಂತಹ ವ್ಯಕ್ತಿಗಳು, ಮಕ್ಕಳಿಗೆ ಮೋಸಮಾಡಿ ಅವರು ಏನು ಸಾಧಿಸ್ತಾರೆ? ಇಂತಹ ಕಳ್ಳಾಟ ಇಲ್ಲಿಗೇ ಬಿಡು.”

‘ನೀವು ನಮ್ಮ ಸಂಸಾರದಲ್ಲಿ ಪ್ರವೇಶಿಸಬೇಡಿ ಅಪ್ಪ, ಮೂರನೇ ವ್ಯಕ್ತಿ ನಮ್ಮ ಸಂಸಾರದಲ್ಲಿ ತಲೆ ಹಾಕೋದು ನನಗಿಷ್ಟವಾಗಲ್ಲ.’

‘ಕೇಳದೇನೆ ಪಂಕಜ ನಿನ್ನ ಮಗಳ ಮಾತು. ಜನ್ಮ ಕೊಟ್ಟ ನಾವು ಇವಳಿಗೆ ಮೂರನೇ ವ್ಯಕ್ತಿಗಳಾದ್ವಿ, ಗೆಟ್‌ಡೌಟ್, ನಾಳೆಯಿಂದ ನೀನಾಗಲಿ, ನಿನ್ನ ಮಕ್ಕಳಾಗಲಿ ನಮ್ಮನೆಗೆ ಬರಕೂಡದು, ಪಂಕಜ ನೀನೇನಾದರೂ ಇವಳನ್ನು ಸೇರಿಸಿದರೆ ನನ್ನನ್ನು ಕಳೆದುಕೊಳ್ತೀಯ…..”

“ಅಪ್ಪ, ಸಾರಿ…..”

”ನಿನಗೆ ಕನ್ನಡ ಅರ್ಥವಾಗತ್ತೆ ಅಂದುಕೊಂಡಿದ್ದೇನೆ. ದಯವಿಟ್ಟು ಮನೆ ಬಿಟ್ಟು ಹೋಗು” ಗಣೇಶರಾಯರು ಮಗಳಿಗೆ ಕೈ ಮುಗಿದರು.

ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ:    https://www.surahonne.com/?p=40084

(ಮುಂದುವರಿಯುವುದು)
ಸಿ.ಎನ್. ಮುಕ್ತಾ, ಮೈಸೂರು.

4 Responses

  1. ಕುತೂಹಲ ಉಳಿಸಿಕೊಂಡೇ ಸಾಗುತ್ತಿರುವ ಕಾದಂಬರಿಯಲ್ಲಿ ರಮ್ಯಾಳ ಪೋಷಕ ರ ಪಾತ್ರ.. ನನಗಿಷ್ಟವಾಯಿತು..ಈಗಿನ ಕಾಲಕ್ಕೆ ಇಂತಹ ವಿಚಾರವಂತವ ಪೋಷಕರು ಬೇಕು..ಚಿಂತನೆ ಮಾಡುವಂತಿದೆ..ಮೇಡಂ

  2. ನಯನ ಬಜಕೂಡ್ಲು says:

    Beautiful

  3. ಶಂಕರಿ ಶರ್ಮ says:

    ಸ್ವಂತ ಮಗಳೇ ಆದರೂ, ತಪ್ಪು ದಾರಿಯಲ್ಲಿ ಸಾಗುತ್ತಿರುವಾಗ ಬೆಂಬಲ ನೀಡದೆ ಖಡಕ್ಕಾಗಿ ವರ್ತಿಸಿದ ರಮ್ಯಾಳ ಹೆತ್ತವರ ನಡೆ ಶ್ಲಾಘನೀಯ. ಕಥೆ ಎಂದಿನಂತೆ ರಸವತ್ತಾಗಿ ಸಾಗುತ್ತಿದೆ. ಧನ್ಯವಾದಗಳು…ಮುಕ್ತಾ ಮೇಡಂ.

  4. Padma Anand says:

    ಸಮಕಾಲೀನ ತಲ್ಲಣಗಳನ್ನು ಭಾವನಾತ್ಮಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗುತ್ತಾ ಕಾದಂಬರಿ ಮುಂದೆ ಸಾಗುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: