ವಿಶ್ವ ಮಾನವತೆಯ ಹೊಂಬೆಳಕು: ಜಗಜ್ಜೋತಿ ಬಸವೇಶ್ವರ.

Share Button

ಭಾರತದ ಸನಾತನ ಧರ್ಮವು ಸುಸಂಸ್ಕೃತಿಯ ಸಂಕೇತವಾದುದು. ಅದು ಹುಟ್ಟುಹಾಕಿದ ವೈದಿಕ ಸಂಪ್ರದಾಯ ಮತ್ತು ಅದು ಪೋಷಿಸಿಕೊಂಡು ಬಂದ ದೇಗುಲ ಸಂಸ್ಕೃತಿ, ಆಚರಣೆಗಳು ಮಾನವರ ಉದ್ಧಾರವನ್ನೇ ಗುರಿಯಾಗಿ ಹೊಂದಿದ್ದವು. ಯಾವುದೇ ಉದಾತ್ತ ಜೀವನವಿರಲಿ, ಬಹಳ ಕಾಲದ ನಂತರ ಅದು ಮನುಷ್ಯನ ಯಾಂತ್ರಿಕ ನಡವಳಿಕೆಗಳಿಂದ, ಸೌಲಭ್ಯಾಕಾಂಕ್ಷೆಗಳಿಂದ ಕ್ರಮೇಣ ಅರ್ಥಹೀನವಾಗಿ ಮೌಲ್ಯ ಕಳೆದುಕೊಳ್ಳುತ್ತದೆ. ಕ್ರಮೇಣ ಆಚರಣೆಗಳು ಶುಷ್ಕವಾಗುತ್ತವೆ. ಸಂಪ್ರದಾಯದ ಹೆಸರಿನಲ್ಲಿ ತಾರತಮ್ಯ ತೋರುವುದು, ಸ್ವಾರ್ಥಪರರಾಗಿ ದುರ್ಲಾಭ ಪಡೆಯುವುದು, ಶೋಷಣೆ ಮಾಡುವುದು ಮೊದಲಾದ ಅಕಾರ್ಯಗಳು ಹೆಚ್ಚಾಗಿ ಜನರು ಕಂಗಾಲಾಗುತ್ತಾರೆ. ಕರ್ನಾಟಕದಲ್ಲಿ ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದ ಕಾಲದಲ್ಲಿ ಪರಿಸ್ಥಿತಿಯು ಇದೇ ರೀತಿಯಲ್ಲಿತ್ತು. ಎಲ್ಲೆಲ್ಲೂ ಬಡವ-ಬಲ್ಲಿದ, ಕುಲಜ-ಕುಲಹೀನ, ಉಳ್ಳವ-ಇಲ್ಲದವ, ಉಚ್ಛ-ನೀಚ, ಸ್ಪೃಶ್ಯ-ಅಸ್ಪೃಶ್ಯ ಎಂಬೆಲ್ಲ ಭೇದಭಾವಗಳಿಂದ ಸಮಾಜವು ಒಡೆದಿತ್ತು. ಬದುಕಿನ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದ ಕೆಳವರ್ಗದವರ ಸ್ಥಿತಿಯಂತೂ ಚಿಂತಾಜನಕವಾಗಿತ್ತು. ಈ ಶೋಷಿತ ಜನಾಂಗ ಅಜ್ಞಾನ ಮತ್ತು ಕೀಳರಿಮೆಯಿಂದ ಕರುಣಾಜನಕ ಜೀವನವನ್ನು ನಡೆಸುತ್ತಿದ್ದರು. ಇನ್ನೊಬ್ಬರ ಸುಖಕ್ಕಾಗಿ ಗಾಣದೆತ್ತಿನಂತೆ ದುಡಿಯುವುದಷ್ಟೇ ಅವರ ಕೆಲಸವಾಗಿತ್ತು.

ಒಂದುಕಡೆ ರಾಜಕೀಯ ಅಸ್ಥಿರತೆ, ಇನ್ನೊಂದು ಕಡೆ ಸಾಮಾಜಿಕ ವೈಷಮ್ಯ, ಮತ್ತೊಂದು ಕಡೆ ಧಾರ್ಮಿಕ ಕುಟಿಲತೆ, ವ್ರತಾಚರಣೆಗಳ ಢಾಂಬಿಕತೆಗಳಿಂದ ಜನರು ಕಂಗೆಟ್ಟಿದ್ದರು. ಸಾಮಾಜಿಕ ಸ್ಥಿತಿಗಳು ಶೋಚನೀಯವಾಗಿದ್ದವು. ಬದುಕಿನಲ್ಲಿ ಶಿಕ್ಷಣ, ಕಲೆ, ಧರ್ಮ, ಸಾಹಿತ್ಯ ಮೊದಲಾದುವೆಲ್ಲಾ ಪ್ರತಿಷ್ಠಿತ ವರ್ಗಕ್ಕೆ ಮಾತ್ರ ಮೀಸಲಾಗಿದ್ದವು, ಚಾತುರ್ವರ್ಣ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡ ಉತ್ತಮರು ಬಿತ್ತಿದ್ದ ವಿಷಫಲಗಳಿವು. ಗುಣ ಪ್ರಾಧಾನ್ಯವಿಲ್ಲದೆ ಅನುವಂಶಿಕತೆಗೆ ಪ್ರಾಶಸ್ತ್ಯ ಕೊಟ್ಟದ್ದರಿಂದ ಅನರ್ಹರಾಗಿದ್ದವರು ಮಾನ್ಯತೆ ಗಳಿಸಿಕೊಳ್ಳುತ್ತಿದ್ದರು. ಹುಟ್ಟಿನಿಂದ ಮಾತ್ರವೇ ಮನುಷ್ಯನ ಯೋಗ್ಯತೆಯನ್ನು ಅಳೆಯುತ್ತಿದ್ದುದರಿಂದ ಅನೇಕರ ಪ್ರತಿಭೆ, ಕೌಶಲ್ಯಗಳು ಗುರುತಿಸುವವರಿಲ್ಲದೆ ಮೂಲೆಗುಂಪಾದವು. ಜಾತಿ ಆಧಾರದ ಮೇಲೆ ವೃತ್ತಿ ಎಂಬ ಸಿದ್ಧಾಂತ ಅಂದಿನ ಒಡೆದು ಆಳುವ ನೀತಿಯಾಗಿತ್ತು. ಕೆಳವರ್ಗದವರಿಗೆ ಕಲಿಯಲು ಅವಕಾಶವೇ ಇರಲಿಲ್ಲ. ದೇವಾಲಯಗಳಿಗೆ ಪ್ರವೇಶಾವಕಾಶವಿರಲಿಲ್ಲ. ದೇವರಲ್ಲಿಯಾದರೂ ತಮ್ಮ ಅಳಲನ್ನು ತೋಡಿಕೊಳ್ಳಲೂ ಅವಕಾಶವಿಲ್ಲದ್ದರಿಂದ ಅವರೆಲ್ಲರೂ ಅನ್ಯಮಾರ್ಗಗಳನ್ನು ಹುಡುಕಿದರು. ಕ್ಷುದ್ರ ದೇವತೆಗಳಾದ ಮಾರಿ, ಮಸಣಿಗಳ ಉಪಾಸಕರಾಗಿ ಅವುಗಳನ್ನು ಮೆಚ್ಚಿಸಲು ಬಲಿ, ಹಿಂಸಾಚಾರ, ವಾಮಾಚಾರಗಳಲ್ಲಿ ತೊಡಗಿದರು. ಸ್ಪೃಶ್ಯಾಸ್ಪೃಶ್ಯ ಭಾವನೆಯಂತೂ ಭಯಾನಕವೆನ್ನಿವಷ್ಟು ಆಚರಣೆಯಲ್ಲಿತ್ತು. ಕುರುಡು ನಂಬಿಕೆ, ಅಂಧಶ್ರದ್ಧೆಗಳಿಂದ ತಮ್ಮ ವಿಚಾರಶಕ್ತಿಯನ್ನು ಕಳೆದುಕೊಂಡ ಅಮಾಯಕ ಜನರು ಒಂದು ಕಡೆಯಾದರೆ, ಇಂಥಹವರನ್ನು ಹೆದರಿಸಿ, ಶೋಷಿಸಿ ಲಾಭ ಮಾಡಿಕೊಂಡು ಬದುಕುವ ಬುದ್ಧಿವಂತ ಜನ ಇನ್ನೊಂದು ಕಡೆಯಿದ್ದರು. ಇಂಥಹ ಅಸಮತೆಯಿಂದಾಗಿ ಸಮಾಜದಲ್ಲಿ ಅಶಾಂತಿ ತುಂಬಿ ತುಳುಕುತ್ತಿತ್ತು. ಧಾರ್ಮಿಕವಾಗಿ ಪುರೋಹಿತವರ್ಗ ಜನರಲ್ಲಿ ಪಾಪಭೀತಿಯನ್ನು ಬಿತ್ತಿ ಪಾಪಪರಿಹಾರಕ್ಕೆ, ಪುಣ್ಯಾರ್ಜನೆಗೆಂದು, ಪೂಜೆ ವ್ರತಾದಿಗಳನ್ನು ಮಾಡಬೇಕೆಂದು ಜನರನ್ನು ಪ್ರಚೋದಿಸುತ್ತಾ ಅವರಿಂದ ಸುಲಿಗೆ ಮಾಡಿ ತಾವುಗಳು ಸುಖಜೀವನ ನಡೆಸುತ್ತಿದ್ದರು. ಧರ್ಮದ ಮೂಲಸ್ಫೂರ್ತಿ ಅಳಿದುಹೋಗಿ ಅರ್ಥಹೀನ ಬಾಹ್ಯ ಆಡಂಬರದ ಆಚರಣೆಗಳೇ ಹೆಚ್ಚಾಗಿದ್ದವು. ಜೊತೆಗೆ ಧರ್ಮದ ಆಚರಣೆಗಳು ಹೆಣ್ಣಿಗೊಂದು ಪರಿ, ಗಂಡಿಗೊಂದು ಪರಿ, ಸಿರಿವಂತರಿಗೊಂದು ರೀತಿ, ಬಡವರಿಗೆ ಮತ್ತೊಂದು ರೀತಿಯಾಗಿತ್ತು. ಸಾಹಿತ್ಯ, ಸಾಂಸ್ಕೃತಿಕ ರಂಗವೂ ಅಸಮತೆಯಿಂದ ಕೂಡಿತ್ತು. ಜನ ಸಾಮಾನ್ಯರು ಸಾಹಿತ್ಯದ ಸವಿಯಿಂದಲೂ ವಂಚಿತರಾಗಿದ್ದರು. ಪಂಡಿತ ಮಂಡಳಿಯಲ್ಲಿ ಮಾತ್ರ ಸಾಹಿತ್ಯ ಸಮಾರಾಧನೆ ಬೇರೆಯವರಿಗೆ ಅಲ್ಲಿ ಪ್ರವೇಶವೇ ನಿಷಿದ್ಧವಾಗಿತ್ತು.

ಹೀಗೆ ಒಟ್ಟಾರೆ ಜನಜೀವದ ಎಲ್ಲ ರಂಗಗಳಲ್ಲಿಯೂ ಅವ್ಯವಸ್ಥೆ, ಅಸಮತೋಲನ, ಮೌಢ್ಯ, ತುಂಬಿಕೊಂಡು ಬದುಕು ಅಸಹನೀಯವಾಗಿತ್ತು. ಇಂತಹ ಕತ್ತಲೆಯ ನಿರಾಶಾಮಯ ವಾತಾವರಣವಿದ್ದಾಗ ಆಶಾ ಜ್ಯೋತಿಯೊಂದರ ಆಗಮನಕ್ಕಾಗಿ ಜನರು ಪರಿತಪಿಸುತ್ತಿದ್ದರು.

ಆಗ ಕರ್ನಾಟಕದ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಹೊಸಬೆಳಕಿನ ಕಿರಣವೊಂದು ಮೂಡಿತು. ಬಾಗೇವಾಡಿ ಅಂದಿನ ಕಾಲದಲ್ಲಿ ಪ್ರಸಿದ್ಧವಾದ ಅಗ್ರಹಾರವಾಗಿತ್ತು. ಅಲ್ಲಿದ್ದ ಐನೂರು ಮಹಾಜನರಿಗೆ ‘ಮಾದಿರಾಜ’ರೆಂಬುವರು ಅಗ್ರಹಾರದ ಮುಖ್ಯಸ್ಥರಾಗಿದ್ದರು. ಆತ ಕಮ್ಮಕುಲದ ಶೈವಬ್ರಾಹ್ಮಣರು. ಆತನ ಧರ್ಮಪತ್ನಿ ಸದ್ಗುಣವತಿ ‘ಮಾದಲಾಂಬಿಕೆ’. ಅವರು ಕೂಡಲ ಸಂಗಮದ ಸಂಗಮನಾಥನ ಅನನ್ಯ ಭಕ್ತರಾಗಿದ್ದರು. ಅವರಿಗೆ ನಾಗಲಾಂಬಿಕೆ ಎಂಬ ಹೆಣ್ಣುಮಗಳಿದ್ದು ಅವಳ ನಂತರ ಗಂಡು ಮಗುವೊಂದು ಬೇಕೆಂದು ಮಾದಲಾಂಬಿಕೆ ನಂದೀಶ್ವರನ ವ್ರತವನ್ನು ಕೈಕೊಂಡಿದ್ದಳು. ಅದರ ಫಲವೋ ಎಂಬಂತೆ ಅವರಿಗೆ 1131 ನೆಯ ನವೆಂಬರ್ 7 ನೆಯ ತಾರೀಖಿನಂದು ಪುತ್ರರತ್ನವೊಂದು ಜನಿಸಿತು. ಅದೇ ದಿನ ಕೂಡಲಸಂಗಮದಿಂದ ಆಗಮಿಸಿದ್ದ ಜಾತವೇದಮುನಿಗಳು ಅವರ ಮನೆಗೇ ಬಂದು ಮಗುವನ್ನು ಹರಸಿ ಶೈವದೀಕ್ಷೆಯನ್ನಿತ್ತು ”ಬಸವ” ಎಂದು ನಾಮಕರಣ ಮಾಡಿ ಹೋದರು. ಮಗುವು ತಂದೆ, ತಾಯಿ ಮತ್ತು ಅಗ್ರಹಾರದವರ ಕಣ್ಮಣಿಯಾಗಿ ಬೆಳೆಯಿತು.

ಗುರುಕುಲದಲ್ಲಿ ಕಲಿಯುತ್ತಿದ್ದ ಬಸವಣ್ಣ ಚಿಕ್ಕಂದಿನಿಂದಲೂ ಚುರುಕು ಬುದ್ಧಿಯವನು. ಸುಸಂಸ್ಕೃತ ವಾತಾವರಣದಲ್ಲಿ ಬೆಳೆಯುತ್ತಿದ್ದ ಆತನಿಗೆ ವೇದಾಗಮ, ಪುರಾಣಗಳ, ಸಂಗೀತದ, ಸಾಹಿತ್ಯದ ನಿಕಟ ಪರಿಚಯವಾಯಿತು. ಗಣಿತದಲ್ಲಿ ಆತನಿಗೆ ವಿಶೇಷವಾದ ಆಸಕ್ತಿ. ಅವನ ತೀಕ್ಷ್ಣಮತಿಯನ್ನು ಕಂಡು ಆತನ ಗುರುಗಳೇ ಆಶ್ಚರ್ಯಪಡುತ್ತಿದ್ದರು.

ಅವನು ತನ್ನ ಓರಗೆಯ ಬಾಲಕರೊಡನೆ ಓದುವಾಗ, ಆಡುವಾಗ ಒಂದು ಅಂಶವನ್ನು ಗಮನಿಸಿದನು. ಓದುಬರಹ ಕೇವಲ ಕೆಲವರಿಗೆ ಮಾತ್ರ ಮೀಸಲಾಗಿತ್ತು. ಅವನ ಜೊತೆಯ ಕೆಲವರು ಕೆಳವರ್ಗದ ಹುಡುಗರಿಗೆ ಕಲಿಯುವ ಆಸಕ್ತಿಯಿದ್ದರೂ ಅವರಿಗೆ ಅವಕಾಶ ಇರಲಿಲ್ಲ. ಇನ್ನು ಶೂದ್ರರ ಪಾಡಂತೂ ತೀರಾ ಕೀಳಾಗಿತ್ತು. ಅಸ್ಪೃಶ್ಯತೆಯ ಕಾರಣದಿಂದಾಗಿ ಅವರನ್ನು ಕಡೆಗಣಿಸಲಾಗಿತ್ತು. ಮನುಷ್ಯರಲ್ಲಿದ್ದ ಈ ತಾರತಮ್ಯಭಾವ ಬಾಲ ಬಸವನ ಮನಸ್ಸಿಗೆ ಆಘಾತವನ್ನುಂಟುಮಾಡಿತ್ತು. ಬದುಕಿನ ಅನೇಕ ಸೌಲಭ್ಯಗಳನ್ನು, ಸವಲತ್ತುಗಳನ್ನು ಅನ್ಯರಿಗೆ ಅವಕಾಶ ನೀಡದಂತೆ ಮೇಲ್ವರ್ಗದವರು ತಾವೇ ಇದರ ಗುತ್ತಿಗೆ ಹಿಡಿದವರಂತೆ ಅನುಭವಿಸಿದ್ದರು. ಹಾಗೂ ಮುಗ್ಧತೆ, ಮೌಢ್ಯ, ಅವಕಾಶವಂಚಿತ ದೀನದಲಿತರು ಪಶುಸದೃಶ ಜೀವನ ನಡೆಸುತ್ತಿದ್ದರು. ಈ ಸ್ಥಿತಿಗಳನ್ನು ಬಸವಣ್ಣ ಕಣ್ಣಾರೆ ಕಂಡು ಅವನ ಅಂತಃಕರಣ ಮಿಡಿಯಿತು. ಅಲ್ಲದೆ ಧಾರ್ಮಿಕ ಆಚರಣೆಗಳಲ್ಲಿ ಸ್ತ್ರೀಯರಿಗೆ ಅವಕಾಶವಿಲ್ಲವೆಂಬುದನ್ನು ಗಮನಿಸಿದ್ದ. ಸ್ವತಃ ತಮ್ಮ ಮನೆಯಲ್ಲೇ ತನ್ನಕ್ಕ ನಾಗಲಾಂಬಿಕೆಗೂ ಆ ಅವಕಾಶವಿರಲಿಲ್ಲ. ಏಕೆ ಈ ತಾರತಮ್ಯ? ಇಂಥಹ ಹತ್ತಾರು ಪ್ರಶ್ನೆಗಳು ಅವನನ್ನು ಕಾಡುತ್ತಿದ್ದವು. ತನ್ನ ಸುತ್ತಮುತ್ತ ನಡೆಯುತ್ತಿದ್ದ ಕೆಲವು ಧಾರ್ಮಿಕ ಆಚರಣೆಗಳ ಅರ್ಥಹೀನತೆ, ಢಾಂಬಿಕತೆಗಳನ್ನು ಕಂಡು ಆತನಿಗೆ ಬೇಸರಬಾಗುತ್ತಿತ್ತು. ಜನರ ಬದುಕನಲ್ಲಿ ಈ ದ್ವಂದ್ವವನ್ನು ಕಂಡು ಬಾಲಬಸವ ಅಚ್ಚರಿಗೊಂಡನು. ವಯಸ್ಸಿಗೆ ಮೀರಿದ ಆಲೋಚನೆಗಳು ಅವನಿಗೆ ಬರಲಾರಂಭಿಸಿದವು. ಆತನ ಚಿಕಿತ್ಸಕ ಬುದ್ಧಿ, ಕ್ರಾಂತಿಕಾರಕ ಮನಸ್ಸು ಈ ಅಂಧಶ್ರದ್ಧೆಯ ಪ್ರವಾಹದ ವಿರುದ್ಧ ಈಜಲು ಸನ್ನದ್ಧವಾಗುತ್ತಿತ್ತು.

ಮಾನಸಿಕ ತೊಳಲಾಟದಲ್ಲಿ ಸಿಲುಕಿದ್ದ ಬಸವಣ್ಣನು ಸಾಂಪ್ರದಾಯಕವಾದ ಕiಮಾರ್ಗವನ್ನು ಬಿಟ್ಟು ಸಹಜವಾದ ಭಕ್ತಿಮಾರ್ಗವನ್ನು ಅನುಸರಿಸುವ ನಿರ್ಧಾರಕ್ಕೆ ಬರುವುದರಲ್ಲಿದ್ದ. ಅಷ್ಟರಲ್ಲಿ ಆತನ ತಂದೆ ಪ್ರಾಪ್ತವಯಸ್ಕನಾದ ಬಸವಣ್ಣನಿಗೆ ಉಪನಯನ ಮಾಡಲು ಏರ್ಪಾಡುಗಳನ್ನು ಮಾಡತೊಡಗಿದರು. ಆಗ ಬಸವಣ್ಣ ಆ ಸಾಂಪ್ರದಾಯಕ ವಿಧಿಯನ್ನೊಪ್ಪದೆ ತನಗೆ ಈಗಾಗಲೇ ಜಾತವೇದ ಮುನಿಗಳಿಂದ ಮಂತ್ರೋಪದೇಶ ಆಗಿರುವುದರಿಂದ ಭಗವಂತನ ಒಲವನ್ನು ಸಂಪಾದಿಸಲು ತನಗೆ ಭಕ್ತಿಮಾರ್ಗವೇ ಸಾಕೆನ್ನುತ್ತಾನೆ. ಒತ್ತಾಯ ಮಾಡಿದಾಗ ಬಸವಣ್ಣ ಮನೆಯನ್ನೇ ತೊರೆದು ಹೊಗುತ್ತಾನೆ. ಹಾಗೆ ಹೊರಟ ಬಸವಣ್ಣ ಕೆಲವುಕಾಲ ತನ್ನ ಮುತ್ತಜ್ಜಿಯ ಆಶ್ರಯದಲ್ಲಿದ್ದು ಆನಂತರ ಅಕ್ಕ ನಾಗಲಾಂಬಿಕೆ, ಅವಳ ಪತಿ ಶಿವಸ್ವಾಮಿಯರೊಡನೆ ಕೂಡಲ ಸಮಗಮಕ್ಕೆ ಬರುತ್ತಾನೆ. ಅಕ್ಕ ನಾಗಮ್ಮ ತಮ್ಮನ ಮನದ ತುಮುಲವನ್ನು ಅರ್ಥಮಾಡಿಕೊಂಡಿದ್ದಳು. ಅವನ ಆಲೋಚನಾ ರೀತಿ ಆಕೆಗೆ ಹಿಡಿಸಿತು. ಆತನ ಪುರೋಭಿವೃದ್ಧಿ ಬಯಸಿದ ಆಕೆ ಕೂಡಲ ಸಂಗಮದ ಗುರುಕುಲದಲ್ಲಿ ತಮ್ಮನು ಅಭ್ಯಾಸ ಮುಂದುವರೆಸಲು ಒತ್ತಾಸೆಯಾದಳು. ಆಗಿನ ಕಾಲದಲ್ಲಿ ಕೂಡಲ ಸಂಗಮ ಒಂದು ಪ್ರಸಿದ್ಧ ಘಟಿಕಾಸ್ಥಾನವಾಗಿತ್ತು. ಧರ್ಮ, ಸಾಹಿತ್ಯ, ಸಂಸ್ಕೃತಿಗಳ ತ್ರಿವೇಣೀ ಸಂಗಮವಾಗಿತ್ತು. ಅದೊಂದು ಸುವಿಖ್ಯಾತ ವಿದ್ಯಾಕೇಂದ್ರವಾಗಿದ್ದು ಅನೇಕ ವಿದ್ಯಾರ್ಥಿಗಳು, ಸಾಧಕರು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ವಿಚಾರಶೀಲನಾದ ಬಸವಣ್ಣನ ಆಗಮನ ಗುರುಗಳಿಗೆ ಹೆಚ್ಚಿನ ಸಂತೋಷ ತಂದಿತು. ಘಾಸಿಗೊಳಗಾಗಿದ್ದ ಆತನ ಮನಸ್ಸು ಸತ್ಯಾನ್ವೇಷಣೆಗೆ ಯೋಗ್ಯವಾದ ಸ್ಥಳ ದೊರೆತುದಕ್ಕೆ ಸಮಾಧಾನಗೊಂಡಿತು. ಗುರುಗಳ ಬೋಧನೆ, ಗ್ರಂಥಾಧ್ಯಯನ, ಸುತ್ತಲಿದ್ದ ಸಾಧಕರ ಆಚರಣೆಗಳ ಪ್ರತ್ಯಕ್ಷ ದರ್ಶನಗಳಿಂದ ಬಸವಣ್ಣನ ವ್ಯಕ್ತಿತ್ವ ವಿಕಾಸಗೊಳ್ಳತೊಡಗಿತು. ಅಲ್ಲಿನ ಸ್ಥಾನಪತಿಗಳಾದ ಈಶಾನ್ಯ ಗುರುಗಳ ಶಿಕ್ಷಣ, ಜಾತವೇದ ಮುನಿಗಳ ದೀಕ್ಷೆ, ಸಂಗಮನಾಥನ ರಕ್ಷೆ ಬಸವಣ್ಣನಿಗೆ ಹೊಸ ಜನ್ಮವನ್ನೇ ನೀಡಿದವು. ಅವರು ಮೃಣ್ಮಯಿಯಾದ ಬಸವಣ್ಣನನ್ನು ಚಿನ್ಮಯಿಯನ್ನಾಗಿಸಿದರು. ಕೂಡಲ ಸಂಗಮದೇವನ ಬಗ್ಗೆ ಅನನ್ಯ ಭಕ್ತಿಭಾವವನ್ನು ಬೆಳೆಸಿಕೊಂಡನು. ಶಿವಪೂಜೆ, ಶಿವಧ್ಯಾನ, ಶಿವಾನುಭವಗೋಷ್ಠಿಗಳು ಅಲ್ಲಿ ನಿರಂತರವಾಗಿ ನಡೆದಿದ್ದವು. ಬಸವಣ್ಣನ ಸಾಧನೆ ಸ್ಥಾವರ ಲಿಂಗೋಪಾಸನೆಯಿಂದ ಆರಂಭವಾದರೂ ಕ್ರಮೇಣ ಇಷ್ಟಲಿಂಗೋಪಾಸನೆಯಾಗಿ ಪರಿವರ್ತನೆಗೊಂಡಿತು.

ಆನಂತರ ಬಸವಣ್ಣ ಈ ದೆಸೆಯಲ್ಲೇ ಆಳವಾದ ಅಧ್ಯಯನ, ಸಂಶೋಧನೆ ನಡೆಸಿದನು. ಒಂದು ವಿಶೇಷ ವಿಚಾರ ಅವನ ಮನಸ್ಸಿನಲ್ಲಿ ಸ್ಫುರಿಸಿತು. ಇದರಿಂದ ಅವನ ಆಲೋಚನೆಯಲ್ಲಿ ಹೊಸ ದಿಗಂತವೊಂದು ತೆರೆದುಕೊಂಡಿತು. ಸಮಾಜದಲ್ಲಿನ ವೈಷಮ್ಯವನ್ನು, ಮಾನವ ಮಾನವರ ನಡುವಿನ ತಾರತ೬ಮ್ಯವನ್ನು ಹೋಗಲಾಡಿಸಿ ಎಲ್ಲರನ್ನೂ ಒಂದೇ ಕೃಪಾಚ್ಛತ್ರದಡಿಯಲ್ಲಿ ತರಲು ಇಷ್ಟಲಿಂಗದ ಉಪಾಸನೆ ಉತ್ತಮ ಸಾಧನವಾಗುತ್ತದೆ ಎಂದು ಮನಗೊಂಡನು. ದೇವಾಲಯಕ್ಕೆ ಓಡಿ ಅಲ್ಲಿ ಭಕ್ತಿ, ಕಾಣಿಕೆಗಳನ್ನು ಅರ್ಪಿಸ ಬಯಸುವ ಮುಗ್ಧಭಕ್ತರು ಅಲ್ಲಿನ ಪೂಜಾರಿಗಳ ಶೋಷಣೆಗೆ ಒಳಗಾಗುವವರು ಒಂದುಕಡೆ, ದೇವಾಲಯಗಳಿಗೆ ಪ್ರವೇಶವೂ ಇಲ್ಲದೆ ದೇವನ ದರ್ಶನಭಾಗ್ಯದಿಂದ ವಂಚಿತರಾಗಿ ಅಸಹಾಯಕರಾಗಿ ನಿಲ್ಲುವ ಕೆಳವರ್ಗದವರಿನ್ನೊಂದು ಕಡೆ. ಈ ಇಬ್ಬರಿಗೂ ಇಷ್ಟಲಿಂಗದ ಪರಿಕಲ್ಪನೆಯಿಂದ ಪರಿಹಾರ ದೊರೆಯುವುದೆಂದು ಬಸವಣ್ಣ ಕಂಡುಕೊಂಡನು. ‘ದೇಹವೇ ದೇವಾಲಯ, ಅಲ್ಲಿ ಮನವೇ ಪೀಠ, ಅಲ್ಲಿಯೇ ದೇವರು ನೆಲೆಸಿರುವನು. ಅಲ್ಲಿ ಆತನಿದ್ದಾನೆ ಎಂಬ ಅರಿವಿನ ಕುರುಹೇ ಇಷ್ಟಲಿಂಗ’. ದೇವರನ್ನು ಹೊರಗಡೆ ಹುಡುಕುವುದಕ್ಕಿಂತ ತಮ್ಮೊಳಗೇ ಕಾಣಲು ಪ್ರೇರೇಪಿಸುವ ಉಪಾಸನಾ ಮಾರ್ಗ ಇದಾಯಿತು.

”ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ. ಬೆಳಗಿದರೆ ಅದೇ ಕನ್ನಡಿಯೆನಿಸಿತ್ತು ಅದರಂತೆ ಮನಸ್ಸನ್ನೂ ಸಂಸ್ಕಾರಕ್ಕೆ ಒಳಪಡಿಸಿ ನಿರ್ಮಲಗೊಳಿಸಿದರೆ ಅರಿವಿನ ದಾರಿ ಕಾಣಿಸುತ್ತದೆ. ಆಗ ಸಾಕ್ಷಾತ್ಕಾರಕ್ಕೆ ಎಷ್ಟು ಹೊತ್ತು?” ಬಸವಣ್ಣನ ಮನಸ್ಸಿನಲ್ಲಿ ಮೂಡಿದ ಈ ಕ್ರಾಂತಿಕಾರಕ ವಿಚಾರ ಯಾರನ್ನೂ ಅರಸುವ ಗೋಜಿಗೇ ಹೋಗದೇ ವ್ಯಕ್ತಿಯು ತಂತಾನೇ ವಿಕಾಸಗೊಳ್ಳುವ ಮುಕ್ತ ಅವಕಾಶವನ್ನು ನೀಡುವಂಥಹುದಾಗಿತ್ತು. ಬಡವ-ಬಲ್ಲಿದ, ಕುಲಜ-ಕುಲಹೀನ, ಹೆಣ್ಣು-ಗಂಡು, ಮೊದಲಾದ ತಾರತಮ್ಯವನ್ನು ಹೋಗಲಾಡಿಸಿ ಸಮರಸದ ಸಮಾಜವನ್ನು ಕಟ್ಟಲು ಇದೊಂದು ಸಮರ್ಥ ಮಾಧ್ಯಮವಾಗಬಲ್ಲುದು ಎಂಬುದನ್ನು ಬಸವಣ್ಣ ಕಂಡುಕೊಂಡನು.

ಹೀಗೆ ಬಸವಣ್ಣ ಒಬ್ಬ ಕ್ರಿಯಾತ್ಮಕ ತತ್ವಜ್ಞಾನಿಯಾಗಿ ರೂಪುಗೊಂಡ. ಯಾವುದೇ ಆಲೋಚನೆಯಿರಲಿ ಅದನ್ನು ತನ್ನ ಅನುಭವದ ಮೂಸೆಯಲ್ಲಿಟ್ಟು ಕಾಯಿಸಿ ಪರೀಕ್ಷಿಸುತ್ತಿದ್ದನು. ಅದು ಅಪ್ಪಟ ಅಪರಂಜಿಯಾದರೆ ಮಾತ್ರ ಸ್ವೀಕರಿಸುತ್ತಿದ್ದನು. ಅದನ್ನು ವಿಚಾರದ ಒರೆಗಲ್ಲಿಗೆ ಉಜ್ಜಿ ನೋಡುತ್ತಿದ್ದನು. ಬಣ್ಣ ಖಾತರಿಯಾದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದನು. ಚಿಕ್ಕಂದಿನಿಂದಲೂ ಅವನ ಮನಸ್ಸಿನಲ್ಲಿ ತುಡಿಯುತ್ತಿದ್ದ ಮಾನವ-ಮಾನವರ ನಡುವೆ ಇದ್ದ ಕಂದಕಗಳನ್ನು ಮುಚ್ಚಿ, ತಾರತಮ್ಯದ ಗೋಡೆಗಳನ್ನು ಕೆಡವಿ ಸಾಮರಸ್ಯವನ್ನುಂಟುಮಾಡಿ ವರ್ಗರಹಿತ, ವರ್ಣರಹಿತ, ಪ್ರೇಮಮಯ ಸಮಾಜವನ್ನು ಕಟ್ಟಬೇಕೆಂಬ ಸಂಕಲ್ಪ ಈಡೇರಲು ಬಸವಣ್ಣನಿಗೆ ಹೊಸದಾರಿಯೊಂದು ಕಾಣಿಸಿತು.

ಬಸವಣ್ಣನ ಉದ್ದೇಶ, ಆಲೋಚನೆ ಆತ್ಮೋದ್ಧಾರ ಮಾತ್ರವಲ್ಲ, ಲೋಕೋದ್ಧಾರ. ಆತ್ಮೋನ್ನತಿಯೊಂದಿಗೆ ಲೋಕೋನ್ನತಿಯನ್ನೂ ಸಾಧಿಸುವಂತಹವರೇ ಮಾನವರ ನಿಜವಾದ ಹಿತಚಿಂತಕರು, ಮಹಾತ್ಮರು. ಬಸವಣ್ಣ ಅಂಥಹ ಸಾಧನೆಯನ್ನು ಕೈಗೆತ್ತಿಕೊಳ್ಳಬಯಸಿದನು. ಅವನು ಇಂಥಹ ಸಾಧನೆಯನ್ನು ಬೆಳಗಾಗುವುದರೊಳಗೆ ಮಾಡಲಿಲ್ಲ. ಸಾಮಾನ್ಯರಾದ ಜನರಿಗಿರುವ ಎಲ್ಲ ದೌರ್ಬಲ್ಯಗಳು ಆತನಿಗೂ ಇದ್ದವು. ಎಲ್ಲಾರಿಗೂ ಎದುರಾಗುವ ಸಮಸ್ಯೆಗಳು ಅವನಿಗೂ ಬಂದೊದಗಿದವು. ಆದರೆ ಬಸವಣ್ಣನ ಮನಸ್ಥೈರ್ಯ ಘಟ್ಟಿಯಾಗಿತ್ತು. ಅವೆಲ್ಲವನ್ನೂ ದಾಟಿ ಬರಲು ಅವನಿಗೆ ಸಾಧ್ಯವಾಯಿತು. ಪಂಚೇಂದ್ರಿಯಗಳ ಕಾಟಗಳಿಂದ ಬೇಸತ್ತ ಅವನು ತನ್ನ ಆರಾಧ್ಯದೈವದಲ್ಲಿ ಹೀಗೆ ಮೊರೆಯಿಟ್ಟಿದ್ದನು.

”ಆಸೆಯಾಮಿಷ ಹುಸಿ ವಿಷಯ
ಕುಟಿಲ ಕುಹಕ ಕ್ರೋಧ ಕ್ಷುದ್ರ ಮಿಥ್ಯೆ
ಇವನೆನ್ನ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು
ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚರಯ್ವರ
ಭಕ್ತರ ಮಾಡು ಕೂಡಲ ಸಂಗಮದೇವಾ”


ಕೂಡಲ ಸಂಗಮದ ಕಮ್ಮಟದಲ್ಲಿ ಬಸವಣ್ಣ ಒಬ್ಬ ಆದರ್ಶ ಸಮಾಜಸೇವಕನಾಗಿ, ವಿಚಾರವಂತ ಧರ್ಮಬೋಧಕನಾಗಿ, ರಚನಾತ್ಮಕ ಮಾನವ ಹಿತಸಾಧಕನಾಗಿ ರೂಪುಗೊಂಡನು. ಅಲ್ಲಿ ನಡೆಯುತ್ತಿದ್ದ ಬೋಧನೆ, ಚರ್ಚೆ, ವಿಚಾರ ವಿನಿಮಯ ಶಿವಾನುಭವ ಗೋಷ್ಠಿಗಳು, ಆತನ ತಿಳಿವಳಿಕೆಯನ್ನು ಗಟ್ಟಿಗೊಳಿಸಿ ಹರಿತಗೊಳಿಸಿದವು. ಕೂಡಲ ಸಂಗಮದ ಒಳ-ಹೊರಗೆ ಆತ ಖ್ಯಾತನಾಮನಾದನು.
ಬಸವಣ್ಣನ ಬಗ್ಗೆ ಕೇಳಿ ತಿಳಿದ ಮಂತ್ರಿ ಬಲದೇವರಸನು ಜಾತ್ರೆಯ ನೆವದಲ್ಲಿ ಕೂಡಲ ಸಂಗಮಕ್ಕೆ ಬಂದನು. ಆತ ವಾವೆಯಿಂದ ಬಸವಣ್ಣನಿಗೆ ಸೋದರಮಾವನಾಗಿದ್ದನು. ಬಸವಣ್ಣನ ಪಾಂಡಿತ್ಯ, ಪ್ರತಿಭೆ, ವ್ಯವಹಾರ ಚಾತುರ್ಯ, ವಿನಯವಂತಿಕೆ, ಭಕ್ತಿಸಂಪನ್ನತೆ ಗುಣಗಳು ಆತನಿಗೆ ತುಂಬ ಹಿಡಿಸಿದವು. ಸೋದರಳಿಯನೇ ಆಗಿರುವ ಅವನು ತನ್ನ ಮಗಳು ಗಂಗಾಂಬಿಕೆಗೆ ತಕ್ಕನಾದ ವರನೆಂದು ತೀರ್ಮಾನಕ್ಕೆ ಬಂದನು. ಅಕ್ಕ ನಾಗಲಾಂಬಿಕೆ, ಆಚಾರ್ಯರೊಡನೆ ಸಮಾಲೋಚಿಸಿ ಬಸವಣ್ಣನನ್ನು ಒಪ್ಪಿಸಿದನು. ಬಸವಣ್ಣ ಗಂಗಾಂಬಿಕೆಯರ ವಿವಾಹ ಜರುಗಿತು. ಬಸವಣ್ಣ ಮಂತ್ರಿಗಳ ಅಳಿಯನಾದನು. ಅಕ್ಕನಾಶ್ರಯದಲ್ಲಿ ಕೆಲಕಾಲವಿದ್ದು ಬಿಜ್ಜಳ ರಾಜನ ಆಸ್ಥಾನದಲ್ಲಿ ಒಂದು ನೌಕರಿ ದೊರಕಿಸಿಕೊಳಬೇಕೆಂದು ಮಾವನೊಡನೆ 1154 ರಲ್ಲಿ ರಾಜಧಾನಿ ಮಂಗಳವೇಡಗೆ ತೆರಳಿದನು.
ಉದ್ಯೋಗವನ್ನರಸಿ ಅರಮನೆಗೆ ಆಗಮಿಸಿದ ಸಂದರ್ಭದಲ್ಲಿ ಕರಣಶಾಲೆಯಲ್ಲಿ ಗಣಕರು ಭಂಡಾರದ ಆದಾಯ ವೆಚ್ಚದ ಲೆಕ್ಕವನ್ನು ಸರಿಹೊಂದಿಸುವುದರಲ್ಲಿ ತೊಡಗಿದ್ದರು. ಎಷ್ಟೇ ಪ್ರಯತ್ನಪಟ್ಟರೂ ಆಯ-ವ್ಯಯಗಳ ಪಟ್ಟಿ ಹೊಂದಾಣಿಕೆಯಾಗದೆ ಅಪಾರ ಹಣದ ಕೊರತೆ ಕಂಡುಬರುತ್ತಿತ್ತು. ಇದನ್ನು ಗಮನಿಸಿದ ಬಸವಣ್ಣ ಪ್ರಭುಗಳ ಅಪ್ಪಣೆ ಪಡೆದು ತಾನು ಪ್ರಯತ್ನಿಸುವುದಾಗಿ ಮುಂದಾದ. ಅಲ್ಲಿನ ಲೆಕ್ಕಪತ್ರಗಳನ್ನು ಪರಿಶಿಲನೆ ಮಾಡಿ ತಪ್ಪೆಲ್ಲಿದೆಯೆಂದು ಕಂಡುಹಿಡಿದು ಪಟ್ಟಯನ್ನು ಸರಿಪಡಿಸಿಕೊಟ್ಟನು. ಅಂಥಹ ಸಮರ್ಥ ಲೆಕ್ಕಶಾಸ್ತ್ರ ನಿಪುಣನ ಆವಶ್ಯಕತೆ ಕರಣಶಾಲೆಗೆ ಇದೆಯೆಂದು ಬಸವಣ್ಣನನ್ನು ಆಗಲೇ ಕರಣಿಕನೆಂದು ಸೇವೆಗೆ ಸೇರಿಸಿಕೊಳ್ಳಲಾಯಿತು.

ಅವನ ಕಾರ್ಯದಕ್ಷತೆಯಿಂದ ರಾಜ ಬೊಕ್ಕಸ ತುಂಬಿಬಂತು. ಲೆಕ್ಕದಲ್ಲಿ ಬಸವಣ್ಣ ಕುಶಾಗ್ರಮತಿ. ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಹಲವಾರು ಮೂಲಗಳಿಂದ ಬರಬೇಕಾದ ಹಣವನ್ನು ವಸೂಲಿಮಾಡುವ, ಸೋರಿಹೋಗುತ್ತಿದ್ದ ಹಣವನ್ನು ತಡೆಯುವ ಕ್ರಮದಿಂದ, ಅಪವ್ಯಯವನ್ನು ನಿಯಂತ್ರಿಸುವ ಮೂಲಕ ಬೊಕ್ಕಸಕ್ಕೆ ಸಲ್ಲಬೇಕಾದ ರಾಜಾದಾಯವನ್ನು ಹೆಚ್ಚಿಸಿದನು. ಇದರಿಂದಾಗಿ ರಾಜ ಬಿಜ್ಜಳನಿಗೆ ಬಸವಣ್ಣನ ಬಗ್ಗೆ ವಿಶೇಷ ಗೌರವಾದರಗಳು ಉಂಟಾಗಿ ಆತನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದನು.
ಬಿಜ್ಜಳ ರಾಜನ ಭಂಡಾರದ ಅಧಿಪತಿಯಾಗಿದ್ದ ಸಿದ್ಧರಸರು ಬಸವಣ್ಣನ ಗುಣಗಳಿಗೆ ಮಾರುಹೋಗಿದ್ದರು. ವೃತ್ತಿಯಲ್ಲಿ ಅವನಿಗೆ ಸಕಾಲಿಕ ಮಾರ್ಗದರ್ಶನ ನೀಡಿದರು. ಅವನ ಹಿನ್ನೆಲೆಯ ವಿವರಗಳು ತಿಳಿದಾಗ ಆತನು ತಮಗೆ ದೂರ ಸಂಬಂಧಿಯೆಂದು ತಿಳಿದು ತಮ್ಮ ಮಗಳು ನೀಲಾಂಬಿಕೆಯನ್ನು ಅವನಿಗೆ ಮದುವೆ ಮಾಡಿಕೊಡಲು ಆಶಯ ವ್ಯಕ್ತಪಡಿಸಿದರು. ಇದಕ್ಕೆ ನೀಲಾಂಬಿಕೆಯ ಬಾಲ್ಯದ ಗೆಳತಿ, ಬಸವಣ್ಣನ ಪತ್ನಿ ಗಂಗಾಂಬಿಕೆಯ ಸಹಮತವೂ ಇತ್ತು. ರಾಜ ಬಿಜ್ಜಳನ ಆಸೆಯೂ ಅದೇ ಆಗಿತ್ತು. ಬಸವಣ್ಣ ನೀಲಾಂಬಿಕೆಯನ್ನು ಎರಡನೆಯ ಪತ್ನಿಯಾಗಿ ಸ್ವೀಕರಿಸಿದನು. ಆತನ ಇಹ-ಪರದ ಸಾಧನೆಗೆ ಸಾಂಸಾರಿಕ ಜೀವನವು ಪೂರಕವೇ ಹೊರತು ಅಡ್ಡಿಯಾಗಲಾರದೆಂದು ತನ್ನ ಜೀವನದಲ್ಲಿ ಆತ ತೋರಿಸಿಕೊಟ್ಟನು.

1156 ರ ಹೊತ್ತಿಗೆ ಬಿಜ್ಜಳನು ರಾಜಕೀಯವಾಗಿ ಸಬಲನಾಗಿ ತಾನೇ ಚಾಲುಕ್ಯ ಚಕ್ರವರ್ತಿಯೆಂದು ಘೋಷಿಸಿಕೊಂಡನು. ಆಗ ರಾಜಧಾನಿಯನ್ನು ಮಂಗಳವೇಡೆಯಿಂದ ಕಲ್ಯಾಣಕ್ಕೆ ಬದಲಾಯಿಸಿಕೊಂಡನು. ಮುಂದೆ ಇದರಿಂದಾಗಿ ಬಸವಣ್ಣನ ಕಾರ್ಯಕ್ಷೇತ್ರವು ಕಲ್ಯಾಣವೇ ಆಯಿತು. ಕರಣಿಕನಾಗಿದ್ದ ಬಸವಣ್ಣ ತನ್ನ ದಕ್ಷತೆ, ಪ್ರಾಮಾಣಿಕತೆಯಿಂದ ಹುದ್ದೆಯಲ್ಲಿ ಮೇಲೇರಿ ಭಂಡಾರಿಯಾಗಿದ್ದನು. ಆತನು ಇಷ್ಟುಬೇಗ ಹುದ್ದೆಯಲ್ಲಿ ಪ್ರಗತಿ ಹೊಂದಿದ್ದುದನ್ನು ಕಂಡು ಕರುಬುವವರು ಬಹಳ ಮಂದಿಯಿದ್ದರು. ಬಸವಣ್ಣ ಅರಮನೆಯ ಒಬ್ಬ ಅಧಿಕಾರಿಯಾಗಿ ಮಾತ್ರ ಉಳಿಯಲಿಲ್ಲ. ಆತ ತನ್ನೊಬ್ಬನ ಸುಖಕ್ಕಾಗಿ ಎಂದೂ ಚಿಂತಿಸಲಿಲ್ಲ. ಆತನು ಸದಾ ಚಿಂತಿಸುತ್ತಿದ್ದುದು ಅವಕಾಶ ವಂಚಿತರಿಗಾಗಿ, ಶೋಷಿತರಿಗಾಗಿ, ನತದೃಷ್ಟರಿಗಾಗಿ, ಸಮಾಜದಲ್ಲಿ ತುಳಿತಕ್ಕೊಳಗಾದವರಿಗಾಗಿ. ಅದಕ್ಕಾಗಿ ಸಮಾಜದ ಎಲ್ಲ ರಂಗಗಳಲ್ಲೂ ತನ್ನ ವಿಚಾರದ ಬೆಳಕನ್ನು ಹರಿಸತೊಡಗಿದನು. ದುರ್ಬಲರಲ್ಲಿರುವ ಕುಂದುಕೊರತೆಗಳನ್ನು ತಿಳಿದುಕೊಂಡನು. ಜನಪರ ಕಾಳಜಿಯಿಂದ ಅವುಗಳಿಗೆ ಪರಿಹಾರಗಳನ್ನು ಒಂದೊಂದಾಗಿ ಕಾರ್ಯಗತ ಮಾಡತೊಡಗಿದನು. ಇದರಿಂದಾಗಿ ಬಸವಣ್ಣ ಸಮಾಜದ ಸಮಗ್ರ ಕ್ರಾಂತಿಗೆ ಕಾರಣನಾದನು.

ಬಸವಣ್ಣನ ಕ್ರಾಂತಿಯ ರೀತಿಯೇ ವಿಶಿಷ್ಟವಾದದ್ದು. ಅದು ಹಳೆಯದನ್ನು ಅಳಿಸಿ ಹೊಸದನ್ನು ಸೃಷ್ಟಿಸುವುದಾಗಿರಲಿಲ್ಲ. ಹಳೆಯದರಲ್ಲಿ ಒಳ್ಳೆಯ ಆಶಯಗಳನ್ನು ಉಳಿಸಿ ಬಳಸಿಕೊಂಡು ಹೊಸದನ್ನು ಕಟ್ಟುವುದಾಗಿತ್ತು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯ ಪದವಿಯೊಂದು ತೆರವಾದಾಗ ಕಲ್ಯಾಣದ ಜನತೆ ಬಸವಣ್ಣನೇ ಆ ಸ್ಥಾನದಲ್ಲಿ ಮಂತ್ರಿಯಾಗಬೇಕೆಂದು ಆಗ್ರಹಪಡಿಸಿದರು. ಬಿಜ್ಜಳ ರಾಜನು ಜನಾದೇಶದಂತೆ ಬಸವಣ್ಣನನ್ನು ಮಂತ್ರಿ ಮತ್ತು ದಂಡಾಧೀಶನನ್ನಾಗಿ ನೇಮಕ ಮಾಡಿದನು. ಬಸವಣ್ಣನು ಹೆಚ್ಚಿನ ಹೊರೆ ಹೊರುವುದರ ಜೊತೆಗೆ ಅವನು ರೂಪಿಸಲು ಹೊರಟ ವರ್ಗರಹಿತ, ವರ್ಣರಹಿತ, ಆರೋಗ್ಯಪೂರ್ಣ ಸಮಾಜದ ರೀತಿನೀತಿಗಳ ಬಗ್ಗೆ ವ್ಯಾಪಕ ಪ್ರಚಾರ ದೊರೆಯುವುದಕ್ಕೆ ಅವನ ಅಧಿಕಾರದ ಹುದ್ದೆಯೂ ನೆರವಾಯಿತು.

ಬಸವಣ್ಣನ ವಿಚಾರಧಾರೆ ಭರತಖಂಡದ ಅನೇಕ ಭಾಗಗಳಲ್ಲಿನ ಸಮಾನ ಚಿಂತಕರ ಗಮನ ಸೆಳೆಯಿತು. ಸಾವಿರಾರು ಜನ ಕಲ್ಯಾಣಕ್ಕೆ ಬಂದು ಸೇರತೊಡಗಿದರು. ಉತ್ತರದ ಕಾಶ್ಮೀರದಿಂದ ಮಹದೇವಭೂಪಾಲ ದಂಪತಿಗಳು, ದಕ್ಷಿಣದಿಂದ ಸಕಳೇಶ ಮಾದರಸ, ಗುಜರಾತಿನಿಂದ ಆದಯ್ಯ, ಕಳಿಂಗದಿಂದ ಮರುಳ ಶಂಕರದೇವ, ಆಂಧ್ರದಿಂದ ಮೈದುನ ರಾಮಯ್ಯ, ಮುಂತಾದ ಎಲ್ಲ ಜಾತಿಯ, ಎಲ್ಲ ಕಸುಬಿನ, ಜನರು ಸೇರಿ ”ಶರಣ”ರೆಂಬ ಸಮಷ್ಟಿಯಲ್ಲಿ ಬೆರೆತು ಒಂದಾದರು. ಇವರಿಗೆ ಬಸವಣ್ಣನ ಅರಮನೆಯೇ ”ಮಹಾಮನೆ”ಯಾಯಿತು. ಶರಣರಲ್ಲಿ ಜಾತಿಸೂತಕವಳಿದು ತಂತಮ್ಮ ಕಾಯಕವನ್ನು ಮುಂದುವರೆಸಿದರು. ತಮ್ಮ ವೃತ್ತಿ ಯಾವುದೇ ಇರಲಿ ಅದನ್ನು ಗೌರವಿಸಿದ್ದರು. ದುಡಿಯದೇ ಯಾರೂ ಉಣ್ಣುವಂತಿಲ್ಲ. ಗಳಿಸಿದ್ದರಲ್ಲಿ ತಮ್ಮ ಅಗತ್ಯಗಳಿಗಿಂತ ಹೆಚ್ಚಾದುದನ್ನು ಇತರರಿಗೆ ಹಂಚುತ್ತಿದ್ದರು. ಅಪಾರವಾಗಿ ಸಂಗ್ರಹಮಾಡಿ ಇಟ್ಟುಕೊಳ್ಳುವುದು ಮಹಾಪಾಪವೆಂದು ಪರಿಗಣಿಸಿದ್ದರು. ಇದೇ ಕಾಯಕ-ದಾಸೋಹ ಮಹಾಮಂತ್ರವಾಯಿತು. ದಾಸೋಹವೆಂದರೆ ಬರಿಯ ಹಣ,ಪದಾರ್ಥವನ್ನು ಹಂಚಿಕೊಳ್ಳುದಷ್ಟೇ ಅಲ್ಲ. ತಮಗೆ ತಿಳಿದಿರುವ ಜ್ಞಾನವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವುದು, ಅವರಲ್ಲಿಯೂ ಅರಿವನ್ನು ಮೂಡಿಸುವುದಾಗಿತ್ತು. ಇದು ಜ್ಞಾನ ದಾಸೋಹ. ಹೀಗೆ ಬಸವಣ್ಣ ತಾನು ಆವಿಷ್ಕಾರ ಮಾಡಿದ ಬೆಳಕಿನ ಈ ದಾರಿಯನ್ನು ಸಕಲರಿಗೂ ತೋರಿದ. ಅವರು ಜ್ಞಾನಿಗಳಾಗುವುದನ್ನು, ಅನುಭಾವಿಗಳಾಗಿ ಪ್ರಗತಿ ಹೊಂದುತ್ತಿರುವುದನ್ನು ಕಂಡು ಆನಂದಪಟ್ಟನು. ಇನ್ನೊಬ್ಬರಿಗೆ ನೀಡುವಲ್ಲಿ ತಾನು ಮಾಡಿದೆನೆಂಬ ಅಹಂಭಾವವಿರಬಾರದು. ಏಕೆಂದರೆ ”ಮಾಡಿದೆನೆಂದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’‘ ಎಂದು ಬಸವಣ್ಣ ಎಚ್ಚರಿಸಿದ್ದನು.

ಬಸವಣ್ಣನಿಗೆ ಜೀವಕುಲವೇ ಜಂಗಮ. ಅವರ ಸೇವೆಯೇ ದಾಸೋಹ. ಅವನ ಉದ್ದೇಶ ಸಕಲರೂ ಸiಭಾವದಲ್ಲಿ ನೆಮ್ಮದಿಯಾಗಿ ಬದುಕಬೇಕೆಂಬುದಾಗಿತ್ತು. ಹೀಗೆ ಬಸವಣ್ಣ ಕಾಯಕ-ದಾಸೋಹಗಳ ಮೌಲ್ಯಗಳನ್ನು ಎತ್ತಿ ತೋರಿ ಆದರ್ಶ ಸಮಾಜವೊಂದು ರೂಪುಗೊಳ್ಳಲು ಕಾರಣನಾದನು. ಬಂದುಸೇರಿದ್ದ ಶರಣರಿಗೆ ಬಸವಣ್ಣನ ಮಹಾಮನೆಯಲ್ಲಿಯೇ ಪ್ರತಿದಿನ ಪೂಜೆ, ಧಾರ್ಮಿಕ ವಿಚಾರಗಳ ಚರ್ಚೆ, ವಿಚಾರ ವಿನಿಮಯ ನಡೆಯುತ್ತಿತ್ತು. ಇದರಿಂದ ಸಾಮಾನ್ಯ ಶರಣರೂ ಅರಿವು ತಿಳಿದು ಉತ್ತಮ ಆಚಾರವಂತರಾಗುತ್ತಿದ್ದರು.

ಬಸವಣ್ಣ ಒಬ್ಬ ವಾಸ್ತವವಾದಿ. ಆತ ಕಣ್ಣಿಗೆ ಕಾಣದ್ದನ್ನು, ಕಾರ್ಯಸಾಧ್ಯವಲ್ಲದ್ದನ್ನು ಹೇಳಲು ಹೋಗಲಿಲ್ಲ. ಜನರಲ್ಲಿ ಬೇರೂರಿದ್ದ ಸ್ವರ್ಗ-ನರಕಗಳ ಕಲ್ಪನೆ ಅವರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವಂತಹದ್ದು. ಸತ್ತನಂತರ ದೊರೆಯಬಹುದಾದ ಸ್ವರ್ಗದಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವ ಸಂಭ್ರಮದಲ್ಲಿ ಅದಕ್ಕಾಗಿ ಜಪ-ತಪ, ದಾನ-ಧರ್ಮ ಮಾಡುತ್ತಿದ್ದರು. ಇದಕ್ಕೆ ಮಧ್ಯವರ್ತಿಗಳಾಗಿ ವೈದಿಕರು ಇವರನ್ನು ಪ್ರಚೋದಿಸಿ ತಾವುಗಳು ಲಾಭ ಮಾಡಿಕೊಳ್ಳುತ್ತಿದ್ದರು. ಬಸವಣ್ಣ ಇಂಥವರನ್ನು ಕಂಡು ‘ಸ್ವರ್ಗ ನರಕಗಳೆಂಬುವು ಹೊರಗೆಲ್ಲೋ ಇರುವ ಲೋಕಗಳಲ್ಲ. ಅವು ನಮ್ಮ ಮಾನಸಿಕ ಸ್ಥಿತಿಗಳು ಮಾತ್ರ. ಅವನ್ನು ನಾವಿಲ್ಲಿದ್ದೇ ಅನುಭವಿಸಬಹುದು’ ಎಂದು ಸಾರಿದನು. ‘‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಸತ್ಯವ ನುಡಿವುದೇ ಸ್ವರ್ಗಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ” ಎಂದು ಅರಿವು ಮೂಡಿಸಿದನು.

ಲೋಕವೆಂಬುದು ಕರ್ತಾರನ ಕಮ್ಮಟ. ನಮ್ಮ ಸನ್ನಡತೆ ಹಾಗೂ ಸದಾಚಾರದಿಂದ ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಚಲಾವಣೆಯಿಲ್ಲದ ನಾಣ್ಯವಾಗಿಬಿಡುತ್ತೇವೆ ಎಂದು ಎಚ್ಚರಿಕೆ ನೀಡಿದನು. ಹೀಗೆ ಇಹ-ಪರಗಳೆರಡನ್ನೂ ಸಾಧಿಸುವ ಪರಿಯನ್ನು ಜನತೆಗೆ ತಿಳಿಸಿಕೊಟ್ಟನು. ಆತ್ಮೋನ್ನತಿಗೆ ಪರಿಶುದ್ಧವಾದ ಬದುಕೇ ಭದ್ರ ಬುನಾದಿ. ಹಿಂದೂಧರ್ಮದ ಇಂತಹ ಮೂಲ ಆಶಯಗಳನ್ನು ಎತ್ತಿ ತೋರಿಸಿ ಅದಕ್ಕೆ ಹೊತ್ತಿಸಿದ್ದ ಧೂಳು ಒರೆಸಿ ಹೊಳಪು ತಂದು ಜನತೆಯ ಮುಂದಿರಿಸಿದ್ದು ಬಸವಣ್ಣನ ಮಹತ್ವದ ಸಾಧನೆ. ಅಂದು ಆಚರಣೆಯಲ್ಲಿದ್ದ ಧರ್ಮದ ಒಂದು ಅಮಾನವೀಯ ನಡವಳಿಕೆಯೆಂದರೆ ಪತಿತರಿಗೆ ಪಾವನರಾಗಲು ಅವಕಾಶವೇ ಇರಲಿಲ್ಲ. ತಿಳಿದೋ ತಿಳಿಯದೆಯೋ ಯಾರಾದರೂ ನಡತೆಯಲ್ಲಿ ಎಡವಿದರೆ, ಅಧರ್ಮದಲ್ಲಿ ನಡೆದರೆ ಅವರಿಗೆ ಕ್ಷಮೆಯೇ ಇರಲಿಲ್ಲ. ನರಕ ಅವರಿಗೆ ಕಟ್ಟಿಟ್ಟದ್ದು ಎನ್ನುತ್ತಿದ್ದರು. ಇಂತಹ ಪತಿತರ ದೊಡ್ಡ ಪಡೆಯನ್ನೇ ಸೃಷ್ಟಿಸಿ ಅವರನ್ನು ಮೂಲೆಗುಂಪಾಗಿಸಿ ಅವರು ನಿರಂತರವಾಗಿ ಕಣ್ಣೀರಿನಲ್ಲಿ ಕಾಲ ನೂಕುವಂತೆ ಮಾಡಿದ್ದರು. ಮನುಷ್ಯ ಸಹಜವಾಗಿ ಮಾಡಿದ ತಪ್ಪುಗಳನ್ನು ಅವನಲ್ಲಿರುವ ದೈವತ್ವವೇ ತಿದ್ದುತ್ತದೆ. ಅದಕ್ಕಾಗಿ ಒಂದು ಅವಕಾಶ ನೀಡಬೇಕು ಇದು ಬಸವಣ್ಣನ ಸ್ಪಷ್ಟ ಅಭಿಪ್ರಾಯ. ಅಂತೆಯೇ ಅವನು ಪತಿತರಿಗೊಂದು ಕರೆಯಿತ್ತನು.
ಎಲವೋ ಎಲವೋ ಪಾಪಕರ್ಮ ಮಾಡಿದವನೆ
ಎಲವೋ ಎಲವೋ ಬ್ರಹ್ಮಹತ್ಯೆ ಮಾಡಿದವನೆ
ಒಮ್ಮೆ ಶರಣೆನ್ನೆಲವೋ. ಒಮ್ಮೆ ಶರಣೆಂದರೆ
ಸಕಲ ಪಾಪಕರ್ಮಗಳು ಓಡುವುವು

ಪತಿತನಿಗೆ ತಾನು ಮಾಡಿದ್ದು ತಪ್ಪಾಯಿತು ಎಂಬ ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ. ಆತನನ್ನು ಕ್ಷಮಿಸಿ ಎಲ್ಲರಂತೆ ಬಾಳಲು ಅವಕಾಶ ನೀಡುವುದು ಮಾನವೀಯತೆ ಎಂದು ಸಾರಿದನು.ಬಸವಣ್ಣನು ಭಾರತೀಯ ತತ್ವಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದನು. ಆತನಿಗೆ ವೀರಶೈವ ಧರ್ಮದಲ್ಲಿರುವ ಮಾನವೀಯ ಮೌಲ್ಯಗಳನ್ನು, ಏಕದೇವೋಪಾಸನೆಯ ಬದ್ಧತೆಯನ್ನು ಮೆಚ್ಚಿಕೊಂಡನು. ಇಷ್ಟಲಿಂಗೋಪಾಸನೆಯ ಮೂಲಕ ಇಡೀ ಸಮಾಜವನ್ನು ಕಟ್ಟಿ ಒಂದಾಗಿ ಬೆಸೆಯುವ ಹಂಬಲ ಆತನದಾಗಿತ್ತು. ಜಾತಿ, ಮತ, ಪಂಥ, ವರ್ಣ, ಲಿಂಗ ಭೆದವಿಲ್ಲದೆ ಜನರು ಸಾಮರಸ್ಯದಿಂದ ಬದುಕಬೇಕೆಂಬುದು ಆತನ ಕನಸು. ಇದು ಹನ್ನೆರಡನೆಯ ಶತಮಾನದ ಕಲ್ಯಾಣದಲ್ಲಿ ನನಸಾಗಿತ್ತು. ಬಸವಣ್ಣ ಹೀಗಾಗಿ ಜಾತ್ಯಾತೀತ ಸಮಾಜ ನಿರ್ಮಾಣ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾದನು. ಆದರೆ ಆತನ ಪುರೋಗಾಮಿ ಚಿಂತನೆಗಳನ್ನು ಅರಗಿಸಿಕೊಂಡು ಸ್ವೀಕರಿಸುವಲ್ಲಿ ಅಂದಿನ ಕಾಲಮಾನದ ಸಮಾಜ ಪಕ್ವವಾಗಿರಲಿಲ್ಲ. ಇದರಿಂದಾಗಿ ಮನುಕುಲೋದ್ಧಾರದ ಈ ಪ್ರಯತ್ನವು ಕ್ರಾಂತಿಯಲ್ಲಿ ಕುಸಿದು ಹೋದದ್ದು ದುರ್ದೈವದ ಸಂಗತಿ. ಬಸವಣ್ಣನದ್ದು ಜಗತ್ತನ್ನೇ ಉದ್ಧರಿಸುವಂಥಹ ಅನುಕರಣೀಯ ಆದರ್ಶ. ತನ್ನ ಸಹಜೀವಿಗಳ ಬಗ್ಗೆ ಮಾನವೀಯ ಅಂತಃಕರಣವಿಲ್ಲದನ ಬಾಳು ಪಶುವಿಗಿಂತ ಕೀಳು ಎಂದು ಅವನು ನಂಬಿದ್ದನು. ಕೂಡಿ ಬಾಳುವುದನ್ನು ನಾವು ಪಶುಪಕ್ಷಿಗಳಿಂದಲೂ ಕಲಿಯಬಹುದು ಎಂದು ಹೀಗೆ ಉದಾಹರಿಸಿದನು:

”ಕಾಗೆ ಒಂದಗುಳ ಕಂಡರೆ ಕರೆಯದೇ ತನ್ನ ಬಳಗವೆಲ್ಲವನು
ಕೋಳಿಯೊಂದು ಗುಟುಕ ಕಂಡರೆ
ಕೂಗಿ ಕರೆಯದೇ ತನ್ನ ಕುಲವೆಲ್ಲವ,
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ ಕಾಗೆ
ಕೋಳಿಗಿಂತ ಕರಕಷ್ಟ ಕೂಡಲ ಸಂಗಮದೇವಾ”


ಮನುಷ್ಯ ತನ್ನ ಸಹಜೀವಿಗಳ ಬಗ್ಗೆ ಸೌಹಾರ್ದದಿಂದ ಬದುಕಬೇಕು. ಕನಿಷ್ಟ ಸೌಜನ್ಯದ ನಡವಳಿಕೆಯಾದರೂ ಇರಬೇಕು.
”ಏನ ಬಂದಿರಿ ಹದುಳವಿದ್ದಿರೆ?
ಎಂದರೆ ನಿಮ್ಮ ಮೈಸಿರಿ ಹಾರಿಹೋಹುದೇ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಶಿರ ಹೊಟ್ಟ ಒಡೆವುದೇ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ
ಮೆಟ್ಟಿ ಮೂಗ ಕೊಯ್ವ ನಮ್ಮ ಕುಡಲ ಸಂಗಮದೇವಾ”

ನಾವು ಒಳ್ಳೆಯವರಾಗಿದ್ದರೆ ಲೋಕವೂ ಒಳ್ಳೆಯದಾಗಿರುತ್ತದೆ ಎಂಬ ನಂಬಿಕೆ ಬಸವಣ್ಣನದು.

ಮಹಾಮನೆಯ ಶರಣರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಭೆ, ಚರ್ಚೆಗಳಿಗೆ ದೊಡ್ಡದಾದ ಕಟ್ಟಡ ಬೇಕಾಯಿತು. ಭವ್ಯವಾದ ಕಟ್ಟಡವನ್ನು ಶರಣರು ನಿರ್ಮಿಸಿದರು. ಅದನ್ನು ಅನುಭವ ಮಂಟಪ ಅನುಭಾವಿಗಳ ಕೂಟ, ಅರಿವಿನ ಅರವಟ್ಟಿಗೆ ಎಂದು ಕರೆದರು. ಬೆಳಗಿನಿಂದ ಸಂಜೆಯವರೆಗೆ ಕಾಯಕದಲ್ಲಿ ನಿರತರಾದ ಶರಣರು ಸಂಜೆಗೆ ಅನುಭವ ಮಂಟಪದಲ್ಲಿ ಕಲೆತು ತಮ್ಮ ಜ್ಞಾನಾನುಭವಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದರು. ಐಹಿಕ ಬಾಳಿನೊಂದಿಗೆ ಪಾರಮಾರ್ಥಿಕ ಸಾಧನೆಯನ್ನು ಸಮನ್ವಯಗೊಳಿಸಲು ಅಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದರು. ಅದೊಂದು ಜನತಾ ವಿಶ್ವವಿದ್ಯಾಲಯವಾಗಿತ್ತು. ಯೋಗಿಶ್ರೇಷ್ಠ ಅಲ್ಲಮ ಪ್ರಭುಗಳು ಅದರ ಅಧ್ಯಕ್ಷರಾದರೆ ಬಸವಣ್ಣ ಅದರ ವ್ಯವಸ್ಥಾಪಕ. ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶರಣ ಶರಣೆಯರಲ್ಲಿ ಅನೇಕರು ತಮ್ಮ ಅನಿಸಿಕೆಗಳನ್ನು ವಚನ ಮಾಧ್ಯಮದ ಮೂಲಕ ತಮ್ಮ ಅನುಭವದ ನೆಲೆಯಲ್ಲಿ ಹೇಳುತ್ತಿದ್ದರು. ಅವುಗಳನ್ನು ದಾಖಲಿಸಿ ಬರೆದಿಡಲಾಗುತ್ತಿತ್ತು. ವಿಶ್ವ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ವಚನ ವಾಙ್ಮಯ ಮೂಡಿದ್ದು ಅನುಭವ ಮಂಟಪದಲ್ಲಿ. ಈ ಪ್ರಭಾವ ವಲಯದಲ್ಲಿ 150 ಕ್ಕೂ ಹೆಚ್ಚು ಶರಣರು, 30 ಕ್ಕೂ ಹೆಚ್ಚು ಶರಣೆಯರು ವಚನಗಳ ರಚನೆ ಮಾಡಿದ್ದಾರೆ. ಇವರೆಲ್ಲ ಸಮಾಜದ ವಿವಿಧ ಸ್ತರದಿಂದ ಬಂದವರು, ವಿವಿಧ ವೃತ್ತಿಯವರು, ವಿವಿಧ ವಯಸ್ಸಿನವರು, ಭಿನ್ನ ಜಾಯಮಾನದ ಜನರು. ತಮ್ಮದೇ ಅನುಭವದ ಹಿನ್ನೆಲೆಯಲ್ಲಿ ತಮ್ಮ ವೃತ್ತಿಪರ ಪದಗಳನ್ನೇ ಬಳಸಿ ವಚನಗಳನ್ನು ರಚಿಸಿದರು. ಏಕಕಾಲದಲ್ಲಿ ಇಷ್ಟೊಂದು ಅಧಿಕ ಸಂಖ್ಯೆಯ ಜನ, ಅದರಲ್ಲೂ ಸಮಾಜದ ಕೆಳವರ್ಗದ ಶ್ರೀಸಾಮಾನ್ಯರು ಸಾಹಿತ್ಯ ಸೃಷ್ಟಿಮಾಡಿದ ನಿದರ್ಶನ ಜಾಗತಿಕ ಇತಿಹಾಸದಲ್ಲೇ ಇನ್ನೊಂದು ಕಾಣಿಸದು. ಇಂತಹ ವಚನವಾಙ್ಮಯದಲ್ಲಿ ಬಸವಣ್ಣನ ವಚನಗಳಿಗೆ ಮಿಗಿಲಾದ ಸ್ಥಾನವಿದೆ. ಏಕೆಂದರೆ ಅವು ತುಂಬ ಸರಳವಾಗಿದ್ದು ಆತ್ಮೀಯವಾಗಿವೆ, ಜನಪ್ರಿಯವಾಗಿವೆ. ಜನತೆಗೆ ಆತನು ನೀಡಿರುವ ಸಪ್ತ ಸೂತ್ರಗಳನ್ನೊಳಗೊಂಡ ಈ ವಚನವಂತೂ ಅದ್ಭುತ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವನ ಒಲಿಸುವ ಪರಿ


ಬಸವಣ್ಣನ ಹಿರಿಮೆಯನ್ನು ಕುರಿತು ಅನೇಕರು ಮೆಚ್ಚುಗೆ , ಗೌರವಗಳನ್ನು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಅನುಭವ ಮಂಟಪದ ಅಧ್ಯಕ್ಷತೆ ವಹಿಸಿದ್ದ ಯೋಗಿಶ್ರೇಷ್ಟ ಅಲ್ಲಮ ಪ್ರಭುಗಳ ಈ ಮಾತುಗಳು ಮಹತ್ವವಾದವು.
ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗಿತ್ತಯ್ಯ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿರ್ದರಯ್ಯಾ ಅಸಂಖ್ಯಾತ ಭಕ್ತ ಮಹಾಗಣಗಳು
ಶಿವಭಕ್ತನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೇ?
ನಿಮ್ಮ ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ
ಸಂಗನ ಬಸವಣ್ಣನ ಕಂಡು ಬದುಕಿದೆನು ಕಾಣಾ


ಲವಲೇಷ ಸ್ವಾರ್ಥವೂ ಇಲ್ಲದೆ ಸಮಷ್ಟಿ ಚೇತನವನ್ನೇ ಹಿಡಿದೆತ್ತಲು ಬಸವಣ್ಣ ಹಗಲಿರುಳು ಶ್ರಮಿಸುತ್ತಿರುವಾಗ ಆತನ ಸದಾಶಯವನ್ನು ಅರ್ಥಮಾಡಿಕೊಳ್ಳದೆ ಅವನ ಪ್ರಗತಿಯನ್ನು ಕಂಡು ಸಹಿಸದ ತಿಳಿಗೇಡಿಗಳೂ ಇದ್ದರು. ಅವರೆಲ್ಲರೂ ಅನುಭವಮಂಟಪ ಎಂಬುದು ಒಂದು ಕಾರಸ್ಥಾನ, ಅಲ್ಲಿ ಸೇರುವವರೆಲ್ಲ ರಾಜ ಬೊಕ್ಕಸವನ್ನು ದುರ್ವಿನಿಯೋಗ ಮಾಡುವ ಪುಂಡರ ಗುಂಪು. ಚಾತುರ್ವರ್ಣ ವ್ಯವಸ್ಥೆಯನ್ನು ಸರಿಯಾಗಿ ತಿಳಿಯದೆ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಧರ್ಮದ್ರೋಹಿಗಳು. ಎಂದು ಆರೋಪಿಸಿ ರಾಜನವರೆಗೆ ದೂರನ್ನೊಯ್ದರು. ಇದೇ ಸಮಯದಲ್ಲಿ ಅಧಿಕಾರದ ಗದ್ದುಗೆಗಾಗಿ ರಾಜ ಬಿಜ್ಜಳನ ಮಕ್ಕಳಲ್ಲಿಯೇ ಪೈಪೋಟಿ ನಡೆದಿತ್ತು. ಕೆಲವು ದಂಡಾಧೀಶರು ತಮ್ಮ ಸ್ವಾರ್ಥ ಸಾಧನೆಗಾಗಿ ದೊಡ್ಡ ಮಗನನ್ನು ಬೆಂಬಲಿಸಿದರೆ ಇನ್ನು ಕೆಲವರು ಬಿಜ್ಜಳನ ತಮ್ಮನ ಪಕ್ಷ ವಹಿಸಿದ್ದರು. ಹೀಗಾಗಿ ರಾಜಕೀಯವಾಗಿ ರಾಜನ ವಿರುದ್ಧ ಇದ್ದ ಸಂಘಟನೆಗಳು ಬಸವಣ್ಣನ ವಿರುದ್ಧವೂ ಕೆಲಸ ಮಾಡುತ್ತಿದ್ದವು.

ಬಸವಣ್ಣನ ಉನ್ನತ ವಿಚಾರಗಳು ಅನುಭವ ಮಂಟಪದಲ್ಲಿ ಚರ್ಚಿಸಲ್ಪಡುತ್ತಿದ್ದವು. ಪರ ವಿರೋಧ ಅಭಿಪ್ರಾಯಗಳನ್ನು ಆಲಿಸಿ ಮುಂದಿನ ತೀರ್ಪನ್ನು ತೆಗೆದುಕೊಳ್ಳಲಾಗುತ್ತಿತ್ತು. ಶರಣರ ಸಮಾಜದಲ್ಲಿ ಸೇರಿ ಒಂದಾಗಿದ್ದ ಮಧುವರಸರ ಮಗಳನ್ನು ಹರಳಯ್ಯನ ಮಗ ಇಷ್ಟಪಟ್ಟಿದ್ದ ವಿಚಾರವೂ ಇಲ್ಲಿ ಚರ್ಚಿಸಲ್ಪಟ್ಟಿತು. ಪೂರ್ವದಲ್ಲಿ ಮಧುವರಸ ಬ್ರಾಹ್ಮಣ ಸಮಾಜದಿಂದ ಬಂದಿದ್ದು ಹರಳಯ್ಯನು ಚಮ್ಮಾರಿಕೆ ಮಾಡುತ್ತಿದ್ದವನು. ಶರಣರು ಅವರಿಬ್ಬರೂ ಶರಣಧರ್ಮವನ್ನು ಸ್ವೀಕರಿಸಿರುವುದರಿಂದ ಅವರ ಜಾತಿಭೇದವಳಿದಿದೆ. ಅವರಲ್ಲಿ ಯಾವುದೇ ವ್ಯತ್ಯಾಸ ಇಲ್ಲವೆಂದು ಪರಿಗಣಿಸಿದರು. ಅವರ ವಿವಾಹವನ್ನು ಮಾಡಬಹುದೆಂದು ತೀರ್ಮಾನಿಸಲಾಯಿತು. ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಪ್ರಭುದೇವರು ಬಸವಣ್ಣನಿಗೆ ಈ ತೀರ್ಪನ್ನು ಒಪ್ಪಿ ಅರಗಿಸಿಕೊಳ್ಳುವಷ್ಟು ಹೊರಗಿನ ಸಮಾಜ ಇನ್ನೂ ಸಿದ್ಧವಾಗಿಲ್ಲ. ಆದ್ದರಿಂದ ಪ್ರವಾಹದ ವಿರುದ್ಧ ಈಜಬೇಕಾದರೆ ತೆರೆಗಳ ಹೊಡೆತಕ್ಕೆ ಜಗ್ಗದೆ ದಡಮುಟ್ಟಬೇಕಾದ ಶಕ್ತಿ ಮತ್ತು ಎದೆಗಾರಿಕೆ ಅಗತ್ಯವೆಂದು ಎಚ್ಚರಿಸಿದರು. ಆದರೆ ಶರಣಬಂಧುಗಳೆಲ್ಲರೂ ಇದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಮದುವೆ ನಡೆದುಹೋಯಿತು. ಇದು ಸನಾತನಿಗಳಿಗೆ ಸಮ್ಮತವಾಗಲಿಲ್ಲ. ದೇಶದ ಇತಿಹಾಸದಲ್ಲೇ ಕ್ರಾಂತಿಕಾರಕವೆನ್ನಿಸಬಹುದಾದ ಈ ಘಟನೆ ಕರ್ಮಠರ ಮನದ ಆಕ್ರೋಶ ಕಿಡಿಗೆದರುವಂತೆ ಮಾಡಿತು. ಇದು ‘ವರ್ಣಸಂಕರ’ ವಿವಾಹ, ನಿಷಿದ್ಧವೆಂದು ಬೊಬ್ಬಿಟ್ಟರು. ಧರ್ಮಬಾಹಿರ ಕೃತ್ಯವೆಂದು ದೂರಿ, ವರ್ಣಾಶ್ರಮ ಧರ್ಮವನ್ನು ಪಾಲನೆ ಮಾಡುವುದು ರಾಜನ ಕರ್ತವ್ಯವೆಂದು ಒತ್ತಿಹೇಳಿದರು. ಇದರಲ್ಲಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಪಡಿಸಿದರು. ಅವರನ್ನು ಸಂಪ್ರೀತಗೊಳಿಸಲು ರಾಜನು ಹರಳಯ್ಯ, ಮಧುವರಸರ ವಿಚಾರಣೆಗೆ ಆಜ್ಞಾಪಿಸಿದನು. ಈ ಏಕಪಕ್ಷೀಯ ಆದೇಶದಿಂದ ಮನನೊಂದ ಬಸವಣ್ಣನು ತನ್ನ ಮಂತ್ರಿ ಪದವಿಗೆ ರಾಜಿನಾಮೆಯಿತ್ತು ಕಲ್ಯಾಣವನ್ನು ತೊರೆದು ಕೂಡಲ ಸಂಗಮಕ್ಕೆ ಹೋಗಿಬಿಡಲು ನಿರ್ಧರಿಸಿದನು. ಹೊರಡುವ ಮೊದಲು ಚೆನ್ನಬಸವಣ್ಣನನ್ನು ಕರೆದು ಆತನು ಶರಣರೆಲ್ಲರ ನೇತಾರನನ್ನಾಗಿ ನೇಮಕಮಾಡಿದನು.

ಇತ್ತ ರಾಜನು ಸನಾತನಿಗಳ ಸಲಹೆಯಂತೆ ಹರಳಯ್ಯ, ಮಧುವರಸರು ಘೋರಪಾಪ ಮಾಡಿದ್ದಾರೆಂದು ತೀರ್ಮಾನಿಸಿ ಅವರ ಕಣ್ಣುಗಳನ್ನು ಕೀಳಿಸಿ, ಅವರ ದೇಹವನ್ನು ಆನೆಗಳಿಂದ ಎಳೆಸಿ ಬಯಲಿನಲ್ಲಿ ಕೊಲ್ಲುವಂತೆ ಆಜ್ಞೆ ಮಾಡಿದನು. ಬಸವಣ್ಣನ ಪ್ರಗತಿಪರ ವಿಚಾರಗಳನ್ನು ರಾಜನೂ ಅರ್ಥಮಾಡಿಕೊಳ್ಳಲಿಲ್ಲ. ಕಾಲವೂ ಪ್ರಬುದ್ಧವಾಗಿರಲಿಲ್ಲ. ಈ ಘಟನೆ ಮತ್ತು ಬಸವಣ್ಣನ ನಿರ್ಗಮನದಿಂದ ಬಿಜ್ಜಳನಿಗೂ ಪಶ್ಚಾತ್ತಾಪವಾಗಿತ್ತು. ಇಂತಹ ಘೋರ ಅನರ್ಥದಿಂದ ಶರಣರೆಲ್ಲ ಕ್ರುದ್ಧರಾಗಿದ್ದರು ರಾಜನ ವಿರುದ್ಧ ಆಕ್ರೋಶಗೊಂಡಿದ್ದರು. ಈ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗಪಡಿಸಿಕೊಂಡ ಪಟ್ಟಭದ್ರ ಶಕ್ತಿಗಳು ತಾವೇ ಸಂಚುಹೂಡಿ ಬಿಜ್ಜಳನನ್ನು ಕೊಲೆ ಮಾಡಿಸಿ ಅದರ ಆರೋಪವನ್ನು ಅತೃಪ್ತರಾಗಿದ್ದ ಶರಣರೇ ಅದನ್ನು ಗೈದಿದ್ದಾರೆಂದು ಪ್ರಚಾರ ಮಾಡಿದರು. ಒಂದೇಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವುದರಲ್ಲಿ ಯಶಸ್ವಿಯಾದರು. ಇದರಿಂದ ರಾಜನ ಸೈನ್ಯ ಶರಣರ ಮಾರಣ ಹೋಮಕ್ಕೆ ಮುಂದಾಯಿತು. ನೂರಾರು ಅಮಾಯಕ ಶರಣರು ಪ್ರಾಣ ಕಳೆದುಕೊಂಡರು. ಪ್ರಾಣಭಯದಿಂದ ಉಳಿದವರು ಅಮೂಲ್ಯ ವಚನ ಸಾಹಿತ್ಯದ ಸಂಪತ್ತನ್ನು ಗಂಟುಕಟ್ಟಕೊಂಡು ಕಲ್ಯಾಣವನ್ನು ತೊರೆದು ದಿಕ್ಕಾಪಾಲಾದರು. ಶ್ರೀಶೈಲ, ಉಳವಿ, ಹಂಪೆ, ಮೈಸೂರು ಮೊದಲಾದ ಸ್ಥಳಗಳಿಗೆ ಚದುರಿಹೋದರು.

ಕಲ್ಯಾಣದಲ್ಲಿ ನಡೆದ ರಕ್ತಕ್ರಾಂತಿ, ಬಿಜ್ಜಳರಾಜನ ಹತ್ಯೆ, ಶರಣರು ಕಲ್ಯಾಣವನ್ನು ತೊರೆದುಹೋದ ಸುದ್ಧಿಯು ಬಸವಣ್ಣನಿಗೆ ತಲುಪಿತು. ಆತನು ಅಪಾರವಾದ ಮಾನಸಿಕ ಯಾತನೆಯನ್ನು ಅನುಭವಿಸಿದನು. ಆರಾಧ್ಯದೈವ ಕೂಡಲ ಸಂಗಮನಲ್ಲಿ ಲೋಕದಾಟವನ್ನಿನ್ನು ಸಾಕು ಮಾಡಯ್ಯಾ ತಂದೆ ಎಂದು ಮೊರೆಯಿಟ್ಟನು. ಕ್ರಿ.ಶ. 1162 ಜುಲೈ 19 ನೆಯ ದಿನ ಬಸವಣ್ಣನು ಎಂದಿನಂತೆ ಸಂಗಮತೀರ್ಥದಲ್ಲಿ ಮಿಂದು ಈಗಿರುವ ಐಕ್ಯ ಮಂಟಪವಿರುವಲ್ಲಿ ಕುಳಿತು ಇಷ್ಟಲಿಂಗಪೂಜೆ ಮಾಡಿ ಸಂಗಮನಾಥನಲ್ಲಿ ಐಕ್ಯನಾದನು. ಅಕ್ಕ ನಾಗಮ್ಮನ ಈ ವಚನ ಬಸವಣ್ಣನ ಪೂರ್ಣ ಜೀವನವನ್ನು ವಿವರಿಸುವಂತಿದೆ:

ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವನಿರಿಸಿ
ಲಿಂಗವೆಂಬ ಎಲೆಯಾಯಿತ್ತು. ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಕಾಯಾಯಿತ್ತು. ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆ ಬೇಕೆಂದೆತ್ತಿಕೊಂಡ


ಬಸವಣ್ಣ ಐಕ್ಯವಾದ ಈ ಘಟನೆಯಿಂದ ವಿಶ್ವ ಮಾನವತಾವಾದಿಗಳ ಪ್ರೀತಿಯ ಹೊಂಬೆಳಕೊಂದು ಸಂಗಮನಾಥನಲ್ಲಿ ಅಡಗಿ ಅಸ್ತಮಿಸಿತು.

-ಬಿ.ಆರ್.ನಾಗರತ್ನ, ಲೇಖಕಿ, ಮೈಸೂರು.

7 Responses

 1. MANJURAJ H N says:

  ಸಮಯೋಚಿತ ಮತ್ತು ಅರ್ಥಪೂರ್ಣವಾದ ಲೇಖನ. ಪೂರ್ತ ಓದಿದೆ. ಧನ್ಯವಾದಗಳು.

  ನೀವು ಆಯ್ಕೆ ಮಾಡಿಕೊಂಡಿರುವ ವಚನಗಳು ಸರ್ವಶ್ರೇಷ್ಠವಾದವು. ಬಸವಜಯಂತಿಯ
  ಶುಭಾಶಯಗಳು ಮೇಡಂ

 2. Padmini Hegde says:

  ಬಹಳ ವಿವರವಾದ ಬಸವಣ್ಣನವರ ವಿಶಿಷ್ಟ ವ್ಯಕ್ತಿ ಚಿತ್ರಣ!

 3. ಧನ್ಯವಾದಗಳು ಪದ್ಮಿನಿ ಮೇಡಂ

 4. ಶಂಕರಿ ಶರ್ಮ says:

  ತಮ್ಮ ಸರಳ, ಸುಂದರ, ಮೌಲ್ಯಯುತ ವಚನಗಳಿಂದ ಮಾನವರ ಆತ್ಮೋನ್ನತಿಗೆ ಕಾರಣರಾದ ಬಸವಣ್ಣನವರ ಕುರಿತ ಸಾಂದರ್ಭಿಕ ಲೇಖನ ತುಂಬಾ ಚೆನ್ನಾಗಿದೆ ನಾಗರತ್ನ ಮೇಡಂ

 5. ಪದ್ಮಾ ಆನಂದ್ says:

  ಬಸವ ಜಯಂತಿಯ ಈ ಸಂದರ್ಭಕ್ಕೆ ಮತ್ತೊಮ್ಮೆ ಬಸವಣ್ಣನ ತತ್ಬಗಳ ತಾತ್ಪರ್ಯಗಳನ್ನು ವಿವರವಾಗಿ ಚಂದದ ವಚನಗಳೊಂದಿಗೆ ಹೆಣೆದಿರುವ ಪ್ರಬುದ್ಧ ಲೇಖನಕ್ಕಾಗಿ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: