ದೋಸಾಯಣ

Share Button


                               ದೋಸೆ ದೋಸೆ ತಿನ್ನಲು ಆಸೆ
                               ಅಮ್ಮ ಮಾಡುವ ಸಾದಾ ದೋಸೆ
                               ಅಜ್ಜಿ ಮಾಡುವ ಮಸಾಲೆ ದೋಸೆ
                               ಸಾಗೂ ಪಲ್ಯ ಇಟ್ಟಿಹ ದೋಸೆ
                               ಬೆಣ್ಣೆ ಚಟ್ನಿ ಹಾಕಿಹ ದೋಸೆ

ನಮ್ಮ ಅತ್ತೆಯವರು ನನ್ನ ಮಗಳು ಚಿಕ್ಕವಳಿರುವಾಗ ಹೇಳಿಕೊಡುತ್ತಿದ್ದ ಹಾಡು ಇದು. ನನಗ್ಯಾಕೋ ಆಗಿನಿಂದ ಈಗಿನ ತನಕ ಮನದ ಮೂಲೆಯಲೊಂದು ಸಂಶಯ ಇದ್ದೇಇದೆ.  ಯಾಕೆ, ಅಮ್ಮ ಮಾಡೋದು ಸಾದಾ ದೋಸೆ, ಅಜ್ಜಿ ಮಾಡೋದು ಮಾತ್ರ ಸಾಗು ಪಲ್ಯ ಬೆಣ್ಣೆ ಚಟ್ನಿ ಎಲ್ಲವನ್ನೂ ಹೊಂದಿದ್ದ ಮಸಾಲೆ ದೋಸೆ ಅಂತ.  ಆಗ ಕೇಳೋಕ್ಕೆ ಧೈರ್ಯ ಇರಲಿಲ್ಲ.  ಧೈರ್ಯ ಬರುವಷ್ಟರಲ್ಲಿ ಅವರೇ ಇಲ್ಲ.

ಇರಲಿ, ಇದೊಂದು ʼದೋಸಾಯಣʼವನ್ನು ಬರೆಯಲು ಪ್ರಾರಂಭಿಕ ಘಟನೆಯಷ್ಟೇ ಎಂದುಕೊಳ್ಳಿ.  ಒಂದು ಪಿಸು ಮಾತು ಹೇಳಲೇ ಬೇಕು, ನಮ್ಮ ಅತ್ತೆಯವರಷ್ಟು ಚೆನ್ನಾಗಿ ಸಾಗು, ಪಲ್ಯ, ಚಟ್ನಿ ದೋಸೆಗಳನ್ನು ಮಾಡುವ ಇನ್ನೊಬ್ಬರನ್ನು ನಾನಿನ್ನೂ ಹುಡುಕುತ್ತಲೇ ಇದ್ದೇನೆ.  ಅದು ಬೇರೆ ವಿಷಯ.  ಒಲೆಯ ಮೇಲೆ ದೋಸೆಯ ಹೆಂಚು ಇಟ್ಟರು ಅಂದ್ರೆ ಗಂಟಾನುಗಟ್ಟಲೆ ಹುಯ್ಯುತ್ತಲೇ ಇರುತ್ತಿದ್ದರು.  ನನ್ನ ಮೈದುನ ಅಂತೂ – ಅಮ್ಮಾ, ನಿಮಗೆಲ್ಲಾ ಎಷ್ಟೆಷ್ಟು ದೋಸೆ ಬೇಕೋ ಅಷ್ಟು ಹಿಟ್ಟು ಇಟ್ಟುಕೊಂಡು ನನಗೆ ದೋಸೆಯನ್ನು ಕೊಡುತ್ತಲೇ ಇರು, ನನಗೆ ದೋಸೆ ಸಾಕೆಂಬುದೇ ಇಲ್ಲ, ʼನಿನ್ನ ಪಾಲು ಮುಗಿಯಿತು, ಎದ್ಹೋಗುʼ ಎಂದರೆ, ಹೋಗುತ್ತೀನಿ ಅಷ್ಟೆ – ಅನ್ನುತ್ತಿದ್ದ.

ಇಂದಿಗೂ ಅವನಿಗೆ ದೋಸೆ ಅಂದ್ರೆ ಎಷ್ಟು ಇಷ್ಟ ಅಂದರೆ, ಅವನು ಊರಿಗೆ ಬರುತ್ತಾನೆ ಎಂದ ಕೂಡಲೇ ನಾನೇ ಆಗಲಿ, ಅವರಕ್ಕ, ನನ್ನ ನಾದಿನಿಯವರೇ ಆಗಲಿ, ಮೊದಲು ನೆನೆ ಹಾಕುವುದೇ ದೋಸೆಗೆ.  ನನ್ನ ತಮ್ಮನ ಹೆಂಡತಿಯೂ ಚಂದದ ದೋಸೆಗಳನ್ನೇ ಮಾಡುತ್ತಾಳೆ, ಹಾಗಾಗಿ ಅವಳ ಕಣ್ಣು ಕೆಂಪಗಾದರೂ ನಾವೇನೂ ಬೀಡುವುದಿಲ್ಲ, ಅವನೂ ಚಪ್ಪರಿಸಿಕೊಂಡು ತಿನ್ನುವುದನ್ನು ನಿಲ್ಲಿಸುವುದೂ ಇಲ್ಲ.

ನನ್ನ ಮೈದುನ ಒಬ್ಬನೇ ಏನು, ದೋಸೆ ಯಾರಿಗಿಷ್ಟವಿಲ್ಲ ಹೇಳಿ? ಈಗಂತೂ ಅದು ಯೂನಿವರ್ಸಲ್‌ ತಿಂಡಿ ಆಗಿಬಿಟ್ಟಿದೆ.  ಎಲ್ಲ ದೇಶದಲ್ಲೂ, ಪ್ರದೇಶದಲ್ಲೂ ದೋಸೆಯೇನೋ ಸಿಗುತ್ತದೆ, ಆದರೆ . . . . . . .  ನೋ ಕಾಮೆಂಟ್ಸ್.‌

ನಾವು ನಮ್ಮ ಮಗನ ಮನೆಗೆ ಅಮೆರಿಕೆಯ ವಾಷಿಂಗಟನ್‌ ಡಿಸಿಗೆ ಹೋಗಿದ್ದಾಗ ಗಮನಿಸಿದ್ದು ಅಲ್ಲಿ ಒಂದು ʼಅಮ್ಮಾಸ್‌ ಕಿಚನ್‌ʼ ಎಂಬ ಭಾರತೀಯ ಮೂಲದ ಹೋಟಲ್‌ ಇತ್ತು.  ಅಲ್ಲಿಗೆ ಸದಾ ಹೋಗುತ್ತಿದ್ದ ನನ್ನ ಮಗ, ನಾವಿದ್ದ ಒಂದೆರಡು ತಿಂಗಳುಗಳು ಹೋಗಿರಲೇ ಇಲ್ಲ.  ಮಧ್ಯದಲ್ಲಿ ಒಂದು ದಿನ ನಮ್ಮನ್ನು ಕರೆದೊಯ್ದು – ಈ ಹೋಟೆಲ್‌ ನನ್ನ ಆಪದ್ಬಾಂಧವ – ಎಂದು ತೋರಿಸಿದ.  ಅಲ್ಲಿದ್ದವರಿಗೆಲ್ಲಾ ಇವನು ಎಷ್ಟು ಪರಿಚಿತನಾಗಿಬಿಟ್ಟಿದ್ದ ಎಂದರೆ – ವ್ಹಾಟ್‌ ಮ್ಯಾನ್‌, ಯು ಹ್ಯಾವ್‌ ನಾಟ್‌ ಟರ್ನ್ಡ್‌ ದಿಸ್‌ ಸೈಡ್‌ ಫ್ರಂ ಟೂ ಮಂಥ್ಸ್‌ –ಎಂದು ಕೇಳಿದಾಗ, ಇವನು – ಮೈ ರಿಯಲ್‌ ಅಮ್ಮ ಈಜ಼್ ಇನ್‌ ಮೈ ರಿಯಲ್‌ ಕಿಚನ್‌, ಸೋ ಟೆಂಪೊರರಿ ಬ್ರೇಕ್‌ ಟು ಅಮ್ಮಾಸ್‌ ಕಿಚನ್‌ ಹೋಟಲ್‌ – ಎನ್ನಬೇಕೇ!  ಅಲ್ಲಿಯ ಹಪ್ಪಳದ ತರಹದ ದೋಸೆಯನ್ನು ತಿಂದು ಹೊರಬಂದೆವೆನ್ನಿ.

ಚಿಕ್ಕ ವಯಸ್ಸಿನಲ್ಲಿ ನಮ್ಮಗಳ ಮನೆಯಲ್ಲಿ ಹೋಟಲ್‌ ತಿಂಡಿ ಊಟಗಳು ಅಪರೂಪದಲ್ಲಿ ಅಪರೂಪವಾಗಿತ್ತು.  ವರ್ಷದಲ್ಲಿ ಒಂದೋ ಎರಡೋ ದಿನಗಳು, ಮನೆಯಲ್ಲಿ ಏನಾದರೂ ಮಡಿಯ ಕಾರ್ಯಕ್ರಮಗಳು ಇದ್ದಾಗ ನನಗೆ, ನನ್ನ ಅಣ್ಣನಿಗೆ ಆಗಿನ ಮೈಸೂರಿನ ಸುಪ್ರಸಿದ್ಧ ರಾಜೂ ಹೋಟೆಲ್ಲಿನಿಂದ ಒಂದೊಂದು ಸೆಟ್‌ ದೋಸೆ ತರಿಸಿಕೊಡುತ್ತಿದ್ದರು.  ಹಾಂ, ಹಾಂ, ಎಂಥ ಸ್ವರ್ಗ ಸುಖ, ೨೦ ಪೈಸೆಗೆ ಒಂದು ಸೆಟ್‌, ಅಂದರೆ ನಾಲ್ಕು ದೋಸೆಗಳು ಜೊತೆಯಲ್ಲಿ ಪಲ್ಯ, ಚಟ್ನಿ.  ಅದನ್ನು ಕಟ್ಟಿಕೊಡುತ್ತಿದ್ದ ಪರಿಯೇ ಸೊಗಸು.  ಪೇಪರಿನ ಮೇಲೆ ಬಾಳೆಎಲೆಯ ತುಂಡು, ಅದರ ಮೇಲೆ ಚಟ್ನಿ, ಅದರ ಮೇಲೆ ಇನ್ನೊಂದು ಬಾಳೆಎಲೆಯ ಚೂರು ಅದರ ಮೇಲೆ ಪಲ್ಯ, ದೋಸೆ, ಮೇಲೆ ಬೆಣ್ಣೆ ಹಾಕಿ ಅದನ್ನು ಸುರುಳಿ ಸುತ್ತಿ ಒಂದೊಂದು ಸೆಟ್‌ ಒಂದೊಂದು ಪ್ಯಾಕೆಟ್‌ ಮಾಡಿ ಕೊಡುತ್ತಿದ್ದರು.  ಸಧ್ಯ, ಜಗಳ ಇಲ್ಲ, ಒಬ್ಬರಿಗೆ ಜಾಸ್ತಿ ಪಲ್ಯ, ಜಾಸ್ತಿ ಚಟ್ನಿ ಅಂತ.

ನಂತರ ಇದ್ದಕ್ಕಿದಂತೆ 40 ಪೈಸೆಗೆ ಒಂದು ಸೆಟ್‌ ಅಂತ ದರ ಏರಿಸಿ ಬಿಟ್ಟರು.  ಅಮ್ಮ – ಅಯ್ಯೋ, ಅಯ್ಯೋ ಇಷ್ಟೊಂದು ಬೆಲೆ ಹೆಚ್ಚು ಮಾಡಿದರೆ ಅವರ ದೋಸೆ ಬೇಡವೇ ಬೇಡ, ಅರ್ಧ ಪೌಂಡ್‌ ಬ್ರೆಡ್ಡನ್ನು ತಂದು ತಿನ್ನಿ – ಎಂದುಬಿಟ್ಟರು; ಸುಮಾರು ಒಂದೆರಡು ವರ್ಷಗಳು.  ನಮ್ಮ ನಿರಾಶೆ ಕೇಳಲೇಬೇಡಿ.

ಹಾಗಂದು ಮನೆಯ ದೋಸೆಯೇನು ಇಷ್ಟ ಇಲ್ಲ ಅಂತ ಅಲ್ಲ.  ಅಮ್ಮ ಒರಳುವ ಕಲ್ಲಿನಲ್ಲಿ ದೋಸಯೆ ಹಿಟ್ಟನ್ನು ನುಣ್ಣಗೆ ರುಬ್ಬಿ, ಇಜ್ಜಿಲುಒಲೆಯ ಮೇಲೆ ದೋಸೆಯ ತವಾ ಇಟ್ಟು ತೆಂಗಿನ ನಾರಿನ ಜುಂಗಿನಿಂದ ಎಣ್ಣೆ ಸವರಿ ಮೃದುವಾದ ದೋಸೆಗಳನ್ನು ಬಿಸಿಬಿಸಿಯಾಗಿ ಹುಯಿದು ಕೊಡುತ್ತಿದ್ದರು.  ಅದರೊಂದಿಗೆ ತುಂಬ ತೆಂಗಿನಕಾಯಿ, ಹೊಂದಿಕೊಳ್ಳಲು ಸ್ವಲ್ಪವೇ ಹುರಿಗಡಲೆ, ಅಂಗಳದ ಫಾರಂ ಫ್ರೆಷ್‌ ಕೊತ್ತಂಬರಿ ಸೊಪ್ಪು ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಖಾರ ಮುಂದಾಗಿ ಹಸೀಶುಂಠಿ, ಚೂರು ಹುಣಸೇಹಣ್ಣು, ಘಂ ಎನ್ನುವ ಇಂಗನ್ನು ಹಾಕಿ ಒರಳುಕಲ್ಲಿನಲ್ಲಿ ರುಬ್ಬಿದ ಗಟ್ಟಿ ಚಟ್ನಿಯೊಂದಿಗೆ ಅಮ್ಮನ ಅಂತಃಕರಣವೂ ಬೆರೆತಾಗ ಆ ದೋಸೆ ತಿನ್ನುವ ಸುಖಕ್ಕೆ ಸರಿಸಾಟಿಯುಂಟೆ!

ನಾನು ಎರಡನೇ ಸಲ ಗರ್ಭೀಣಿಯಾಗಿದ್ದಾಗ, ನಾವು ಗುಜರಾತಿನ ಬರೋಡಾ ನಗರದಲ್ಲಿದ್ದೆವು.  ಬಾಣಂತನಕ್ಕಾಗಿ ಇಲ್ಲಿ ಮೈಸೂರಿಗೆ, ಅಮ್ಮನ ಮನೆಗೆ ಬರುವ ಕಾರ್ಯಕ್ರಮ.  ಎಷ್ಟೆಷ್ಟು ದೋಸೆಗಳನ್ನು ಮಾಡಿಕೊಂಡು ಮಾಡಿಸಿಕೊಂಡು ತಿಂದರೂ ನನ್ನ ಮಹಾ ಬಯಕೆ ರಾಜು ಹೋಟಲ್ಲಿನ ಸೆಟ್‌ ಮಸಾಲೆ ದೋಸೆ ತಿನ್ನಬೇಕೆನ್ನುವುದು.  ನಾನಾಗ ನೌಕರಿಯಲ್ಲಿ ಇದ್ದುದರಿಂದ ಆದಷ್ಟು ದಿನ ಕೆಲಸ ಮಾಡಿ ನಂತರ ರಜಾ ತೆಗೆದುಕೊಳ್ಳುವುದು ಅನ್ನುವುದು ನಮ್ಮಗಳ ಅಭಿಪ್ರಾಯವಾಗಿತ್ತು.  ಅಂತೂ ಇಂತೂ ಒಂಭತ್ತನೇ ತಿಂಗಳಿಗೆ ಬಿದ್ದ ನಂತರ ಟ್ರೈನಿನಲ್ಲಿ ಮೈಸೂರ ಕಡೆ ನಮ್ಮ ಪ್ರಯಾಣ.  ನಮ್ಮ ಅಣ್ಣ – ಇವಳು ಗ್ಯಾರಂಟಿ ರೈಲಿನಲ್ಲೇ ಹೆರುತ್ತಾಳೆ – ಎಂದು ರೇಗಿಸಿದರೆ ನಮ್ಮವರು – ಇಲ್ಲಾ ಬಿಡಿ, ಅವಳು ರಾಜು ಹೋಟಲ್‌ ದೋಸೆ ತಿಂದು ಬಯಕೆ ಪೂರೈಸಿಕೊಳ್ಳುವ ತನಕ ಹೆರುವುದಿಲ್ಲ – ಎನ್ನುತ್ತಿದ್ದರು.  ಅಷ್ಟು ನಾನು ಆ ದೋಸೆಗಾಗಿ ಹಂಬಲಿಸುತ್ತಿದ್ದೆ.

ಸರಿ, ಊರಿಗೆ ಬಂದ ಮಾರನೆಯ ದಿನವೇ ನಮಗೇನೋ ರಾಜೂ ಹೋಟಲ್‌ ಕಾರ್ಯಕ್ರಮ ಇತ್ತು.  ಆದರೆ ಅಮ್ಮ ಬೈದು, ಎಣ್ಣೆ ಒತ್ತಿ ನೀರು ಎರೆದು, ದೇವರ ಮುಂದೆ ಕೂಡಿಸಿ ಉಡುಗೊರೆಗಳನ್ನು ನೀಡಿ ಪಾಯಸದ ಅಡುಗೆ ಮಾಡಿ ಬಡಿಸಿ, – ಇನ್ನು ನೀವು ಯಾವ ಹೋಟಲ್ಲಿಗಾದರೂ ಹೋಗಿ, ಸಿನಿಮಾಗಾದರೂ ಹೋಗಿ – ಎಂದರು.  ಸರಿ, ಮಾರನೆಯ ದಿನ ಬೆಳಗ್ಗೆಯೇ ನಾನು, ನಮ್ಮವರು, ನನ್ನ ಮಗಳು ಮತ್ತು ನನ್ನ ಮೈದುನ ರಾಜೂ ಹೋಟೆಲ್‌ ಕಡೆ ಸವಾರಿ ಹೊರೆಟೆವು. 

ದೋಸೆಗೆ ಆರ್ಡರ್‌ ಕೊಟ್ಟಿದ್ದಾಯಿತು.  ನನ್ನ ಬಾಯಲ್ಲಿ ಚಿಲ ಚಿಲ ನೀರು ಬರುಲು ಪ್ರಾರಂಭವಾಯಿತು.  ಮೂಗಿನ ಹೊಳ್ಳೆಗಳು ಘಮಕ್ಕೆ ಅರಳತೊಡಗಿದವು.  ಕಾಯಲು ಸಾಧ್ಯವಾಗದೆ ಚಡಪಡಿಸತೊಡಗಿದೆ.

ನಮ್ಮವರು ಹೇಳೇ ಬಿಟ್ಟರು – ದಯವಿಟ್ಟು ಬೇಗ ದೋಸೆ ಕೊಟ್ಟು ಬಿಡಿ, ಇಲ್ಲಾ ಅಂದರೆ . . . . .  ಅಷ್ಟೇ.

ಅವರ ವಶೀಲಿಯಿಂದ ಬಿಸಿ ಬಿಸಿ ಸೆಟ್‌ ಮಸಾಲೆ ದೋಸೆ ಬಂತು.  ಒಂದರೊಳಗೆ ಸಾಗು, ಇನ್ನೊಂದರೊಳಗೆ ಪಲ್ಯ, ಪಕ್ಕದಲ್ಲಿ ರುಚಿಯಾದ ಚಟ್ನಿ, ಮೇಲೆ ಬೆಣ್ಣೆಯ ಚಿಕ್ಕ ಮುದ್ದೆ.

ತಿನ್ನ ತೊಡಗಿದಂತೆ ಮನಸ್ಸು ದೇಹಗಳಿಗೆ ಮಹದಾನಂದವಾಗತೊಡಗಿತು.  ನಂತರ ಪೈನಾಪಲ್‌ ಬಣ್ಣದ ತುಪ್ಪ ಸೋರುತ್ತಿರುವ ಕೇಸರೀಬಾತ್.‌

ತೃಪ್ತಿಯಾಯಿತೇನಮ್ಮ – ನನ್ನವರು ಛೇಡಿಸುತ್ತಾ ಕೇಳಿದರು.

ಇಲ್ಲಾ, ಇಲ್ಲಾ, ಇನ್ನೂ ಒಂದು ಬೆಣ್ಣೆ ದೋಸೆ ಬೇಕು

ಬೇಡ ಆಮೇಲೆ ಸಂಕಟ ಪಡುತ್ತೀ

ಇಲ್ಲಾ ಬೇಕೇ ಬೇಕು. – ನನಗೆ ಅಳುವೇ ಬರಹತ್ತಿತು.

ಸರಿ,ಸರಿ, ಬೇಸರಿಸಬೇಡ – ಎನ್ನುತ್ತಾ ಮತ್ತೊಂದು ಬೆಣ್ಣೆ ದೋಸೆ ತರಿಸಿದರು.

ಅದು ಅರ್ಧ ತಿನ್ನುವಷ್ಟರಲ್ಲಿ ಸಾಕೆನಿಸಹತ್ತಿತು.  ಆದರೆ ಮನಸ್ಸು ತಡೆಯದೇ ಪೂರ್ತಿ ತಿಂದು ಮುಗಿಸಿದಾಗ ಹೊಟ್ಟೆ ಭಾರವಾಗತೊಡಗಿತು..

ಕಾಫಿ ಕುಡಿಯದೇ ಬಸುರಿ ಬಯಕೆಯ ಕಾರ್ಯಕ್ರಮ ಪೂರ್ತಿಯಾಗದಲ್ಲ, ಮೇಲೆ ಘಮಘಮಿಸುವ ಕಾಫಿಯೂ ಕುಡಿದ ನಂತರ ಪ್ರಾರಂಭವಾಯಿತು, ನಿಜವಾದ ಫಜ಼ೀತಿ.  ಬಾಯಿಗೆ ನಾಲ್ಕು ಕಾಳು ಸೋಂಪನ್ನು ಹಾಕಿಕೊಂಡು ಏಳಲು ಹೋದರೆ ಆಗುತ್ತಲೇ ಇಲ್ಲ.  ಪೂರ್ತಿ ಹೊಟ್ಟೆ ಭಾರ.  ನನ್ನವರು ಬಿಲ್ಲನ್ನು ಪಾವತಿಸಿ ಬಂದು ಕೈಕೊಟ್ಟು ಎಬ್ಬಿಸಲು ನೋಡಿದರೂ ಆಗುತ್ತಲೇ ಇಲ್ಲ.

ಹೋಟಲಿನ ಹುಡುಗರು ಬೇರೆ, ಮೂಲೆಯಲ್ಲಿ ನಿಂತು ಮುಸಿ ಮುಸಿ ನಗುತ್ತಿದ್ದಾರೆ.  ಚಿಕ್ಕವಳಾದ ನನ್ನ ಮಗಳಂತೂ ಅಮ್ಮನಿಗೆ ಏನೋ ಆಗಿ ಹೋಗಿದೆ ಎಂದು ಅಳುವುದಕ್ಕೇ ಪ್ರಾರಂಭಿಸಿಬಿಟ್ಟಳು.

ನನ್ನ ಮೇಲೆ ಏನೋ ರೇಗಲು ಹೋದ ನನ್ನವರು, ನನ್ನ ಪರದಾಟ ನೋಡಿ ನಕ್ಕುಬಿಟ್ಟರು.  ಕಂಕುಳಿಗೆ ಕೈ ಕೊಟ್ಟು ಎಬ್ಬಿಸಿದರು.

ಅಂತೂ ಇಂತು ಪುಟ್ಟ ಬೆಟ್ಟ ರಾಜೂ ಹೋಟಲ್‌ ದೋಸೆ ತಿಂದ ತೃಪ್ತಿಯಿಂದ ಎದ್ದು ನಿಂತಿತು.  ನಿಧಾನವಾಗಿ ಮನೆಗೆ ನಡೆದು ಬಂದು ಹೆಬ್ಬಾವಿನಂತೆ ಮಲಗಿದರೆ ಮೂರುಗಂಟೆಗಳ ಕಾಲ ಮಿಸುಕಿದ್ದರೆ ಕೇಳಿ.  ನಂತರ ಎರಡೇ ದಿನ, ನನ್ನ ಮಗನ ಜನನವಾಯಿತು.

ಇದು ಮದುವೆಯ ನಂತರದ ದೋಸಾಯಣದ ಕಥೆಯಾದರೆ ಮದುವೆಗೆ ಮುಂಚೆ, ಬೆಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ, ನಮಗಿಷ್ಟವಾದ ಕನ್ನಡ ಸಿನಿಮಾಗಳು ಬಿಡುಗಡೆಯಾದಾಗ, ಕಾಲೇಜಿಗೆ ಚಕ್ಕರ್‌ ಹೊಡೆದು ವಿದ್ಯಾರ್ಥಿ ಭವನದ ವಿಶಿಷ್ಟವಾದ ದೋಸೆ ತಿಂದು ಸಂಜಯ ಟಾಕೀಸಿಗೂ, ಎಂಟಿಆರ್‌ ದೋಸೆ ತಿಂದು ಊರ್ವಶಿ ಟಾಕೀಸಿಗೂ ಬೆಳಗಿನ ಆಟಗಳಿಗೆ ಹೋಗುತ್ತಿದ್ದುದು ನಮ್ಮ ಅಣ್ಣನಿಗೆ ಇನ್ನೂ ಗೊತ್ತಿಲ್ಲ, ಪ್ಲೀಸ್‌ ಹೇಳಬೇಡಿ.

ವಾರಕ್ಕೆ ಒಂದೆರಡು ದಿನಗಳು ತರಗತಿಗಳು ಮುಗಿದ ನಂತರ ನಾವು ಮೂವರು ಗೆಳತಿಯರು ನಮ್ಮ ನಮ್ಮ ಪಾಕೆಟ್‌ ಗಳನ್ನು ತಡಕಾಡಿ, ಒಟ್ಟಾಗಿ ಮೂರು ರೂಪಾಯಿ ಹತ್ತು ಪೈಸೆಗಳು ಇದ್ದರೆ ಸಾಕು, ಸೌತ್‌ ಎಂಡ್‌ ಸರ್ಕಲ್ಲಿನಲ್ಲಿ ಆಗ ಇದ್ದ ಬೃಂದಾವನ್ ಹೋಟಲ್ಲಿಗೆ ಹೋಗಿ ಮೂರು ಮಸಾಲೆ ದೋಸೆ ಟೂ ಬೈತ್ರೀ ಕಾಫಿಗೆ ಆರ್ಡರ್‌ ಮಾಡಿ ಕುಡಿಯುತ್ತಿದ್ದೆವು.‌ ಅಲ್ಲಿ ಪಲ್ಯಕ್ಕೆ ಗೋಡಂಬಿ ಹಾಕಿರುತ್ತಿದ್ದರು.    ದೋಸೆ ತಂದಿಟ್ಟ ತಕ್ಷಣ ಸ್ವಲ್ಪವೇ ಬಿಡಿಸಿ ನೋಡಿ ನಮಗೆಷ್ಟು ಗೋಡಂಬಿ ಬಂದಿದೆ ಎಂದು ಪರೀಕ್ಷಿಸುತ್ತಿದ್ದೆವು.  ಅಲ್ಲಿ ಗೆಳತಿ ರುಕ್ಮಿಣಿ ನನಗೆ ಮತ್ತು ಇನ್ನೊಬ್ಬ ಗೆಳತಿ ವಸಂತಳಿಗೆ ಫೋರ್ಕ್‌ ಮತ್ತು ಚಮಚದಿಂದ ದೋಸೆ ತಿನ್ನುವುದನ್ನು ಹೇಳಿಕೊಟ್ಟಳು.  ಮನೆಗೆ ಬಂದ ತಕ್ಷಣ ಅಮ್ಮ, ಊಟಕ್ಕೆ ಎಬ್ಬಿಸುತ್ತಿದ್ದರು.  ನನ್ನ ಫಜ಼ೀತಿ ಕೇಳಬೇಡಿ.

ದೋಸೆಯ ಆಸೆ ಅನವರತ ಕಾಡುವುದರಲ್ಲಿ ಅನುಮಾನವೇ ಇಲ್ಲ.  ಈಗ ವಿಶ್ರಾಂತ ಜೀವನಕ್ಕಾಗಿ ಮೈಸೂರಿಗೆ ೮-೧೦ ವರ್ಷಗಳ ಹಿಂದೆ ಬಂದ ನಂತರವೂ ನಾಲ್ಕು ವರುಷಗಳ ಹಿಂದೆ ಯಾವುದೋ ಒಂದು ಮುಖ್ಯವಾದ ಕಾರ್ಯಸಿದ್ಧಿಗಾಗಿ ೨೧ ವಾರಗಳು, ವಾರಕ್ಕೊಮ್ಮೆ ಚಾಮುಂಡಿ ಬೆಟ್ಟಕ್ಕೆ ಹತ್ತಿಕೊಂಡು ಹೋಗಿ ಬರಲು ಪ್ರಾರಂಭಿಸಿದಾಗಲೂ ಒಂದೆರಡು ವಾರಗಳಲ್ಲೇ ವೇಳಾಪಟ್ಟಿ ಸಿದ್ಧವಾಗಿಬಿಟ್ಟಿತು.  ಬೆಟ್ಟದಿಂದ ಬರುವಾಗಲೇ ವಿದ್ಯಾರಣ್ಯ ಪುರಂ ಸರ್ಕಲ್ಲಿನ ಜಿಟಿಆರ್‌ ಹೋಟಲ್ಲಿನಲ್ಲಿ ಮಸಾಲೆ ದೋಸೆಯನ್ನು ತಿಂದು ಬಂದು ಮತ್ತೆ ಹೆಬ್ಬಾವಿನ ನಿದ್ರೆಗೆ ಜಾರುತ್ತಿದ್ದೆ.

ಹಾಗಂತ ಮನೆಯಲ್ಲೇನು ದೋಸೆ ಮಾಡುವುದು ಅಪರೂಪವೇನಲ್ಲ.  ಕೆಳಬಾಗ ಗರಿಗರಿಯಾಗಿರಬೇಕು, ಮೇಲುಗಡೆ ಮೃದುವಾಗಿ ತೂತುಗಳಿಂದ ಕೂಡಿರುವ, ಏಕೆಂದರೆ ಎಲ್ಲರ ಮನೆಯ ದೋಸೆಗಳಲ್ಲೂ ತೂತುಗಳಿರಲೇಬೇಕಲ್ಲ, ಘಂ ಎನ್ನುವ ಮೆಂತ್ಯದ ಸುವಾಸನೆಯೂ ಬರುವ ದೋಸೆಗಳು ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ.

ಮಕ್ಕಳಿಗಾಗಿ ಉದ್ದಿನಬೇಳೆಯೊಂದಿಗಿನ ದೋಸೆಯಲ್ಲದೆ ಆಗಾಗ್ಗೆ ತೆಳ್ಳಗಿನ ಗರಿಗರಿಯಾದ ರವೆ ದೋಸೆ, ಮೆಂತ್ಯದ ದೋಸೆ, ಕಾಯಿದೋಸೆಗಳೂತಯಾರಾಗುತ್ತಿರುತ್ತದೆ.  ಇದ್ದಕ್ಕಿದಂತೆ ಡಯಟ್‌ ಜ್ಞಾಪಕ ಬಂದು ಬಿಟ್ಟರೆ ರಾಗಿ ದೋಸೆಗೆ ಮೊರೆ ಹೋಗುವುದೂ ಇದೆ. ನಮ್ಮೆಲ್ಲರ ಮನೆಗೆ ಹಲವಾರು ದಶಕಗಳಿಂದ ಮಂಡ್ಯದ ವ್ಯಾಪಾರಿಯೊಬ್ಬರು ಹಸನಾದ ಬೆಣ್ಣೆ ತಂದು ಕೊಡುತ್ತಾರೆ.  ಅದನ್ನು ಕಾಯಿಸಿ ತುಪ್ಪ ಮಾಡುವ ಮೊದಲು ಸ್ವಲ್ಪ ಬೆಣ್ಣೆಯನ್ನು ತೆಗೆದು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ನೀರಿರುವ ಒಂದು ಡಬ್ಬಿಯಲ್ಲಿ ಹಾಕಿ ಫ್ರಿಡ್ಜಿನಲ್ಲಿ ಸಾಧಾರಾಣ ಇಟ್ಟಿರುತ್ತೀನಿ.  ದೋಸೆ ಮೇಲೆ ಒಂದು ಚಿಕ್ಕ ಉಂಡೆ ಬೆಣ್ಣೆ ಹಾಕಿ ಕೊಟ್ಟಾಗ ತಿನ್ನುವ ಮೊದಲು ನನ್ನ ಮಕ್ಕಳು ಫೋಟೋ ತೆಗೆದು ತಮ್ಮ ಫೇಸ್‌ ಬುಕ್‌, ವಾಟ್ಸ್ಯಾಪಿನಲ್ಲಿ ಹಾಕಿಕೊಂಡು ನಂತರ ತಿನ್ನುವಾಗ ನಾನು ಅಡುಗೆ ಮನೆಯಿಂದಲೇ ಹೇಳುವುದುಂಟು – ಆರಿಸಿಕೊಂಡು ತಿನ್ನ ಬೇಡಿ, ಬಿಸಿ ಬಿಸಿಯಾಗಿ ತಿನ್ನಿ.

ಹೀಗೆ ಹೇಳುತ್ತಾ ಹೋದರೆ ದೋಸಾಯಣ ಮುಗಿಯದ ಪುರಾಣವೇ ಆಗಿಬಿಡುತ್ತದೆ.  ಹಾಗಾಗಿ ಒಂದು ಪೂರ್ಣ ವಿರಾಮ ಹಾಕಲೇ ಬೇಕು, ಏಕಂದ್ರೆ ದೋಸೆಗೆ ನೆನೆ ಹಾಕಲು ಹೋಗಬೇಕಲ್ಲಾ . . . !

-ಪದ್ಮಾ ಆನಂದ್, ಮೈಸೂರು

18 Responses

 1. ನಯನ ಬಜಕೂಡ್ಲು says:

  ದೋಸೆಯಷ್ಟೇ ಮಸ್ತ್ ಆದ ಬರಹ.

 2. ವಾವ್ ಗೆಳತಿ ಪದ್ಮಾ..ದೋಸಾಯಣ..ಲೇಖನ ಓದಿದ ಮೇಲೆ ನಿಮ್ಮ ಮನೆಯ ದೋಸೆ ತಿನ್ನಲೇ ಬೇಕೆನಿಸುತ್ತಿದೆ…ನೀವೆಷ್ಟೇ ಚೆನ್ನಾಗಿ ದೋಸೆ ಮಾಡಿದರೂ..ನಾನು ತಿನ್ನುವುದು..ಒಂದೇ…ಏನಾದರಾಗಲಿ ನಾನು ಬರುವ ಮುಂಚೆ ಹೇಳಿ ಯೇ ಬರುತ್ತೇನೆ.. ದೋಸೆಯಂತೂ ತಿನ್ನಲೇ ಬೇಕು.
  ಅಷ್ಟು ಚೆನ್ನಾಗಿ ದೆ ಲೇಖನ..

  • ಪದ್ಮಾ ಆನಂದ್ says:

   ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಹೇಳಿ ಯಾವಾಗ ಬರುತ್ತೇರಿ ಎಂದು. ಕಾಯುತ್ತಿದ್ದೇನೆ.

 3. Anonymous says:

  ಚಂದದ ಬರಹ

 4. ಆಶಾ ನೂಜಿ says:

  ಚಂದದ ಬರಹ

 5. MANJURAJ says:

  ಹಿತವಾಗಿದೆ ಮೇಡಂ, ಓದಿದೆ

 6. Hema Mala says:

  ಅಹಾ…ಬರಹ ಓದಿಯೇ ಬಲುರುಚಿಯಾದ ದೋಸೆಯನ್ನು ಸವಿದಂತಾಯಿತು.

  • ಪದ್ಮಾ ಆನಂದ್ says:

   ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ಪ್ರತಿಕ್ರಿಯೆಗಾಗಿ ವಂದನೆಗಳು

 7. Savithri bhat says:

  ಸೂಪರ್ ದೊಸಾಯಣ..ಓದುತ್ತಾ ಹೋದಂತೆ ದೋಸೆ ತಿನ್ನುವಾಸೆ ಯಾಯಿತು…ಸೀದಾ ಅಡಿಗೆ ಕೋಣೆಗೆ ಹೋಗಿ ಅಕ್ಕಿ ನೆನೆಯಲಿಟ್ಟೆ

  • ಪದ್ಮಾ ಆನಂದ್ says:

   ಪ್ರತಿಕ್ರಿಯೆಗಾಗಿ ಧನ್ಯವಾದಗಳು, ನಾನು ಬಂದೆ ನಿಮ್ಮನೆಯ ದೋಸೆ ತಿನ್ನಲು.

 8. Padmini Hegde says:

  ದೋಸಾಯಣ ಪುರಾಣ ಆಗುವಂತಿಲ್ಲವಲ್ಲ! ವಾಸ್ತವ ಆಗಿಸಬೇಕಲ್ಲ! ಯಾವಾಗ ಬರಲಿ ನಿಮ್ಮ ಜೊತೆ ಸೆಟ್‌ ದೋಸೆ ತಿನ್ನಲಿಕ್ಕೆ!

  • ಪದ್ಮಾ ಆನಂದ್ says:

   ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪದ್ಮನಿ ಮೇಡಂ, ಈಗಲೇ ಬನ್ನಿ, ನಾನಂತೂ ಯಾವಾಗಲೂ ರೆಡಿ.

 9. ಶಂಕರಿ ಶರ್ಮ says:

  ಬಾಯಲ್ಲಿ ನೀರೂರಿಸುವ ಸೆಟ್ ದೋಸೆ ತಿನ್ನಲು ಮೈಸೂರಿನ ರಾಜೂ ಹೋಟೇಲಿಗೆ ಈಗಲೇ ಹೊರಟೆ!!
  ಸಖತ್ತಾಗಿದೆ ದೋಸೆ ಲೇಖನ…ಪದ್ಮಾ ಮಾಡಂ.

  • ಪದ್ಮಾ ಆನಂದ್ says:

   ಅಯ್ಯೋ ಶಂಕರಿ ಮೇಡಂ, ರಾಜೂ ಹೋಟೆಲ್‌ ಈಗ ಮುಚ್ಚೇ ಹೋಗಿದೆ, ಏನು ಮಾಡುವುದು, ಬನ್ನಿ, ಬನ್ನಿ, ನಮ್ಮನೆಯ ಅಥವಾ ಜಿಟಿಆರ್‌ ದೋಸೆಗಾಗಿ, ಆಯ್ಕೆ ನಿಮ್ಮದು. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: