ಋತುಗಳು
ನಾವು ವಾಸಿಸುವ ಈ ಧರಣಿಯ ಮೇಲಿನ ನಿಸರ್ಗವನ್ನು ಗಮನಿಸಿದರೆ, ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಬದಲಾವಣೆಯನ್ನು ಕಾಣಬಹುದು. ಇದಕ್ಕೇನು ಕಾರಣವಿರಬಹುದೆಂಬ ಕುತೂಹಲ ಮೂಡುವುದು ಸಹಜ ತಾನೇ ? ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಒಂದು ಪೂರ್ಣ ಸುತ್ತು ತಿರುಗಲು ಒಂದು ವರ್ಷ ಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹೀಗೆ ತಿರುಗುವಾಗ, ಭೂಮಿಯ ಹವಾಮಾನ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳನ್ನು ಋತುಗಳು ಎಂದು ಕರೆಯುವರು. ಭೂಮಿಯ ಅಕ್ಷವು ಉತ್ತರ ದಕ್ಷಿಣಕ್ಕೆ ಲಂಬವಾಗಿರದೆ, ತನ್ನ ಕಕ್ಷೆಯ ಸಮತಲಕ್ಕೆ 66.5 ಡಿಗ್ರಿಯಷ್ಟು ವಾಲಿದೆ. ಈ ಕಾರಣದಿಂದಲೇ ಭೂಮಿ ಸೂರ್ಯನ ಸುತ್ತು ಸುತ್ತುವಾಗ ಸೂರ್ಯನಿಂದ ಬರುವ ಲಂಬ ಕಿರಣಗಳು, ವರ್ಷದ ಬೇರೆ ಬೇರೆ ಕಾಲಗಳಲ್ಲಿ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಬೀಳುವುವು. ಋತುಗಳ ವೈವಿಧ್ಯತೆಗೆ ಇದು ಕೂಡಾ ಒಂದು ಮುಖ್ಯ ಕಾರಣವಾಗಿದೆ.
ಹಿಂದೂ ಪದ್ಧತಿ ಪ್ರಕಾರ ಒಂದು ವರ್ಷದಲ್ಲಿ 6 ಋತುಗಳಿವೆ. ಪ್ರತಿಯೊಂದು ಋತುವಿನ ಅವಧಿ 2 ತಿಂಗಳುಗಳಾಗಿವೆ. ಒಂದು ವರ್ಷದಲ್ಲಿ ಋತುಗಳು ನಿರ್ದಿಷ್ಟ ಕಾಲದಲ್ಲಿ ಪುನರಾವರ್ತನೆಗೊಳ್ಳುತ್ತವೆ. ಋತುಗಳ ಸಂಖ್ಯೆ ಮತ್ತು ಅವಧಿ ಪ್ರಪಂಚದ ವಿವಿಧ ಭಾಗಗಳಲ್ಲಿ ಒಂದೇ ಸಮನಾಗಿರುವುದಿಲ್ಲ. ಹಿಂದೂ ಪದ್ಧತಿ ಪ್ರಕಾರ ಹೊಸವರ್ಷವು ಚಾಂದ್ರಮಾನ ಯುಗಾದಿಯಿಂದ ಆರಂಭವಾಗುತ್ತದೆ. ಅಂದರೆ, ಚಾಂದ್ರಮಾನದ ಮೊದಲ ಮಾಸವಾದ, ಚೈತ್ರಮಾಸದ ಪಾಡ್ಯದ ದಿನವೇ ನಮ್ಮ ಹೊಸ ವರ್ಷದ ಆರಂಭ. ವಸಂತ ಋತು, ಗ್ರೀಷ್ಮ ಋತು, ವರ್ಷ ಋತು, ಶರದೃತು, ಹೇಮಂತ ಋತು ಮತ್ತು ಶಿಶಿರ ಋತು, ಇವು ಆರು ಋತುಗಳಲ್ಲಿ ಸಾಮಾನ್ಯವಾಗಿ, ವರ್ಷ, ಶರತ್, ಮತ್ತು ಹೇಮಂತ ಋತುಗಳನ್ನು ದಕ್ಷಿಣಾಯನ ಕಾಲದಲ್ಲೂ, ಶಿಶಿರ, ವಸಂತ ಮತ್ತು ಗ್ರೀಷ್ಮ ಋತುಗಳನ್ನು ಉತ್ತರಾಯಣ ಕಾಲದಲ್ಲೂ ಕಾಣಬಹುದು. ಶುಕ್ಲ ಪಕ್ಷದ ಆದಿಯಿಂದ ಅಮಾವಾಸ್ಯೆಯ ವರೆಗೆ ಕಾಲಗಣನೆ ಮಾಡುವ ಈ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು. ಮೇಷ, ಮಿಥುನ, ಸಿಂಹ, ತುಲಾ, ಧನುಸ್ಸು ಮತ್ತು ಕುಂಭ ರಾಶಿಗಳಿಗೆ ಸೂರ್ಯನು ಪ್ರವೇಶಿಸುವ ದಿನಗಳಂದು ಕ್ರಮವಾಗಿ ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ ಋತುಗಳು ಪ್ರಾರಂಭವಾಗುತ್ತವೆ. ಇವುಗಳಿಗೆ ಸೌರ ಋತುಗಳೆಂದು ಹೆಸರು. ಈಗ ಈ ಆರು ಋತುಗಳ ಬಗ್ಗೆ ತಿಳಿಯೋಣ….
ವಸಂತ ಋತು
ವಸಂತ ಋತುವು, ಚೈತ್ರ ಶುಕ್ಲ ಪ್ರಥಮ ದಿನದಿಂದ ಅಂದರೆ, ಚೈತ್ರ ಶುಕ್ಲ ಪಾಡ್ಯದಿಂದ ಪ್ರಾರಂಭವಾಗಿ ವೈಶಾಖ ಮಾಸದ ಅಮಾವಾಸ್ಯೆಯಂದು ಮುಗಿಯುತ್ತದೆ. (ಮಾರ್ಚ್ ನಿಂದ ಮೇ ವರೆಗೆ) ಈ ಋತುವು ಚಳಿಗಾಲ (ಶಿಶಿರ ಋತು) ಕಳೆದ ಬಳಿಕ ಆಗಮಿಸುತ್ತದೆ. ಈ ಕಾಲದಲ್ಲಿ ಆಕಾಶವು ಮೋಡವಿಲ್ಲದೆ ಶುಭ್ರವಾಗಿದ್ದು, ಪ್ರಕೃತಿಯು ಹಚ್ಚಹಸಿರು ಹೊದ್ದು, ಹೂವು, ಕಾಯಿ, ಹಣ್ಣುಗಳಿಂದ ತುಂಬಿ ನಳನಳಿಸುತ್ತಿರುತ್ತದೆ. ಹವಾಗುಣವು ಬಹಳ ಹಿತಕರವಾಗಿದ್ದು ಮನಸ್ಸಿಗೆ ಉಲ್ಲಾಸ ಮತ್ತು ಚೈತನ್ಯವನ್ನು ತುಂಬುತ್ತದೆ. ಈ ಋತುವಿನಲ್ಲಿ ಮೊದಲಿಗೆ ಹಗಲಿನ ಅವಧಿಯು ಹೆಚ್ಚಾಗಿರುವುದರಿಂದ ಹೊಸ ಸಸ್ಯಗಳ ಬೆಳವಣಿಗೆಯು ಗಮನಾರ್ಹವಾಗಿ ಹೆಚ್ಚಿ, ಪ್ರಕೃತಿಯಲ್ಲಿ ನವೋಲ್ಲಾಸವು ತುಂಬಿ ಹರಿಯುತ್ತದೆ. ಈ ಋತುವಿನಲ್ಲಿ ಬರುವ ವಿಷು ಸಂಕ್ರಮಣದಂದು ಹಗಲು ಮತ್ತು ರಾತ್ರಿಯ ಅವಧಿಯು ಸರಿ ಸುಮಾರು ಒಂದೇ ರೀತಿ, ಅಂದರೆ, ಹನ್ನೆರಡು ಗಂಟೆ ಇರುತ್ತದೆ. ಚಳಿಗಾಲ ಮುಗಿದಿರುವುದರಿಂದ, ಪರ್ವತ ಪ್ರದೇಶದಲ್ಲಿ ಹಿಮವು ಕರಗಿ, ಹೊಳೆಗಳು ತುಂಬಿ ಹರಿಯುತ್ತವೆ. ತಂಪಾದ ಚಳಿಗಾಲದ ಹವೆಯಲ್ಲಿ ನಿದ್ರಾವಸ್ಥೆಯಲ್ಲಿದ್ದು ನಿಷ್ಕ್ರಿಯವಾಗಿದ್ದ ಗಿಡ, ಮರ ಸಸ್ಯಗಳು ಹೊಸ ಎಲೆ, ಚಿಗುರು, ಮೊಗ್ಗುಗಳೊಂದಿಗೆ ಮತ್ತೆ ಹೊಸ ಜೀವ ಪಡೆಯುತ್ತವೆ. ಬಣ್ಣ ಬಣ್ಣದ ಹೂಗಳು, ಪಕ್ಷಿಗಳ ಮಧುರಗಾನವನ್ನು ಎಲ್ಲೆಲ್ಲೂ ಕಾಣಬಹುದು. ಆದ್ದರಿಂದ ಕವಿ ಮನ ಅರಳುವ ಋತು ಇದಾಗಿದೆ. ವಸಂತವು ನವೀಕರಣ, ಪುನರ್ಯೌವನಗೊಳುವಿಕೆ ಮತ್ತು ಬೆಳವಣಿಗೆಯ ಋತುವಾಗಿದೆ. ಪ್ರಕೃತಿಗೆ ಜೀವ ತುಂಬುವ ಇದು ವರ್ಣರಂಜಿತ ಋತುವಾದ್ದರಿಂದ ಋತುಗಳ ರಾಜ ಎಂಬ ಹೆಸರು ಪಡೆದಿದೆ. ಹೋಳಿ, ಚಾಂದ್ರಮಾನ ಯುಗಾದಿ, ರಾಮನವಮಿ, ವಿಷು ಸಂಕ್ರಮಣ, ಅಕ್ಷಯ ತೃತೀಯ, ನರಸಿಂಹ ಜಯಂತಿ, ಹನುಮಜ್ಜಯಂತಿ ಇತ್ಯಾದಿಗಳು ಈ ಋತುವಿನಲ್ಲಿ ಆಚರಿಸಲ್ಪಡುವ ಕೆಲವು ಮುಖ್ಯವಾದ ಹಬ್ಬಗಳು.
ಗ್ರೀಷ್ಮ ಋತು
ಗ್ರೀಷ್ಮ ಋತುವು ಜ್ಯೇಷ್ಠ ಶುಕ್ಲ ಪಾಡ್ಯದಿಂದ ಆರಂಭವಾಗಿ ಆಷಾಢ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. (ಮೇಯಿಂದ ಜುಲೈ ವರೆಗೆ) ಈ ಋತುವಿನಲ್ಲಿ ಬೇಸಿಗೆಗಾಲ ಆರಂಭವಾಗುತ್ತದೆ. ಸೂರ್ಯನ ತಾಪ ಅಧಿಕವಾಗಿರುವುದರಿಂದ ಎಲ್ಲೆಲ್ಲೂ ಒಣ ಹವೆಯನ್ನು ಕಾಣಬಹುದು. ವಾಯುಮಂಡಲದಲ್ಲಿ ತೇವಾಂಶ ಕಡಿಮೆಯಾಗುವುದರಿಂದ ಅದರಲ್ಲಿ ಒತ್ತಡವೂ ಕಡಿಮೆಯಾಗುತ್ತದೆ. ಅಕ್ಕಪಕ್ಕದ ಸಮುದ್ರಗಳ ಮೇಲಿನ ಗಾಳಿಯಲ್ಲಿ ತೇವಾಂಶದೊಂದಿಗೆ ಒತ್ತಡವೂ ಹೆಚ್ಚಿರುವುದರಿಂದ, ಕಡಿಮೆ ಒತ್ತಡವಿರುವ ಪ್ರದೇಶಕ್ಕೆ ನುಗ್ಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ಆಗಸದಲ್ಲಿ ಮೋಡ ಕವಿದಿರುತ್ತದೆ. ಹಗಲಿನಲ್ಲಿ ಬಿಸಿಲಿನ ಬೇಗೆ ಇರುತ್ತದೆ. ಸಂಜೆಯಾಗುತ್ತಲೇ
ಕಾರ್ಮೋಡ ಕವಿದು ಅಲ್ಲಲ್ಲಿ ಮಳೆ ಸುರಿಯುತ್ತದೆ. ಗ್ರೀಷ್ಮ ಋತುವಿನ ಕೊನೆಯಲ್ಲಿ ಮಳೆಯು ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿರುತ್ತದೆ.
ಈ ಸಮಯದಲ್ಲಿ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಆಯಾಸ, ಸುಸ್ತಿನ ಜೊತೆಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ದೇಹವನ್ನು ತಂಪುಗೊಳಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಥಮ ಏಕಾದಶಿ, ಚಾತುರ್ಮಾಸ, ನರಸಿಂಹ ಜಯಂತಿ, ಗುರುಪೂರ್ಣಿಮಾ ಇತ್ಯಾದಿ ಆಚರಣೆಗಳು ಈ ಋತುವಿನಲ್ಲಿ ಕಂಡುಬರುತ್ತವೆ.
ವರ್ಷ ಋತು
ಶ್ರಾವಣ ಶುಕ್ಲ ಪಾಡ್ಯಮಿಯ ದಿನದಿಂದ ಪ್ರಾರಂಭವಾಗಿ ಭಾದ್ರಪದ ಮಾಸದ ಅಮಾವಾಸ್ಯೆಯ ದಿನ ವರ್ಷ ಋತು ಕೊನೆಗೊಳ್ಳುತ್ತದೆ. (ಜುಲೈನಿಂದ ಸೆಪ್ಟೆಂಬರ್ ವರೆಗೆ) ವರ್ಷ ಅಂದರೆ ಮಳೆ… ಹೆಸರೇ ಸೂಚಿಸುವಂತೆ, ಈ ಋತುವಿನಲ್ಲಿ ಮುಂಗಾರು ಮಳೆ ಸುರಿಯಲಾರಂಭಿಸುತ್ತದೆ. ಬೇಸಿಗೆ ಧಗೆಯನ್ನು ತಣಿಸಿ ಭೂಮಿಯನ್ನು ತಂಪುಗೊಳಿಸುತ್ತದೆ. ನೈರುತ್ಯದಲ್ಲಿರುವ ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರಗಳ ಮೇಲಿಂದ ಮಾರುತಗಳು ಬೀಸತೊಡಗಿ, ಈಶಾನ್ಯ ದಿಕ್ಕಿಗೆ ಚಲಿಸುತ್ತಾ ದಕ್ಷಿಣ ಭಾರತ, ಪರ್ಯಾಯ ದ್ವೀಪ ಹಾಗೂ ಶ್ರೀಲಂಕೆಗೆ ಮಳೆಯನ್ನು ತರುತ್ತವೆ. ಈ ಸಮಯದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಬಿಸಿಲ ಬೇಗೆಯಿಂದ ಬಸವಳಿದ ಪ್ರಕೃತಿಯು ಸಂತಸದಿಂದ ಹಸಿರು ಉಡುಗೆಯನ್ನು ತೊಟ್ಟು ಸಂಭ್ರಮಿಸುತ್ತಾಳೆ. ನಾಗರಪಂಚಮಿ, ವರಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಚೌತಿ, ಅನಂತನ ವ್ರತ, ಇತ್ಯಾದಿ ಆಚರಣೆಗಳು ಈ ಋತುವಿನಲ್ಲಿ ಕಂಡುಬರುತ್ತವೆ.
ಶರದೃತು
ಶರದೃತುವು ಆಶ್ವಯುಜ ಶುಕ್ಲ ಪಾಡ್ಯಮಿಯ ದಿನದಿಂದ ಪ್ರಾರಂಭಗೊಂಡು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಕೊನೆಗೊಳ್ಳುತ್ತದೆ. (ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ) ಈ ಋತುವಿನಲ್ಲಿ ಮಿಶ್ರ ಹವಾಗುಣವನ್ನು ಕಾಣಬಹುದು. ಹಗಲು ಬೆಚ್ಚಗಿದ್ದು, ರಾತ್ರಿ ತಂಪಾಗಿರುತ್ತದೆ. ಮೋಡಗಳಿಲ್ಲದ ಶುಭ್ರ ಆಗಸವನ್ನು ಕಾಣಬಹುದು. ಮುಂಜಾನೆ ಹಸಿರು ಹುಲ್ಲಿನ ಮೇಲೆ ಮಂಜಿನ ಮಣಿಗಳು ಹೊಳೆಯುತ್ತಿರುತ್ತವೆ. ಹೊಲಗದ್ದೆಗಳು ಪಚ್ಚೆ ಪೈರು, ತೆನೆಗಳಿಂದ ಕಂಗೊಳಿಸುತ್ತಿರುತ್ತವೆ. ಈ ಋತುವಿನಲ್ಲಿ ಬರುವ ನವರಾತ್ರಿ, ದೀಪಾವಳಿ, ಉತ್ಥಾನ ದ್ವಾದಶೀ, ತುಳಸೀಪೂಜೆ ಇತ್ಯಾದಿ ಸಾಲು ಸಾಲು ಹಬ್ಬಗಳು ಜನಮನವನ್ನು ಉಲ್ಲಾಸಗೊಳಿಸುತ್ತವೆ.
ಹೇಮಂತ ಋತು
ಮಾರ್ಗಶಿರ ಶುಕ್ಲ ಪಾಡ್ಯಮಿಯ ದಿನದಿಂದ ಆರಂಭಗೊಂಡು ಪುಷ್ಯ ಅಮಾವಾಸ್ಯೆಯ ದಿನ ಹೇಮಂತ ಋತು ಕೊನೆಗೊಳ್ಳುತ್ತದೆ (ನವೆಂಬರ್ ನಿಂದ ಜನವರಿ ವರೆಗೆ ). ಚಳಿ ಪ್ರಾರಂಭವಾಗಿ ದಕ್ಷಿಣ ಭಾರತದಲ್ಲಿ ಮಂಜು ಬೀಳಲು ಪ್ರಾರಂಭವಾಗುತ್ತದೆ ಹಾಗೂ ಉತ್ತರ ಭಾರತದ ಹಿಮಾಲಯ ಪರ್ವತ ಪ್ರದೇಶದಲ್ಲಿ ಹಿಮ ಹೆಪ್ಪುಗಟ್ಟುತ್ತದೆ. ಈ ಋತುವಿನಲ್ಲಿ ಬೀಸುವ ಚಳಿಗಾಳಿಯು ಗಿಡಮರಗಳ ಎಲೆಗಳನ್ನು ಒಣಗಿಸುವುದರಿಂದ ಎಲ್ಲೆಡೆ ಗಿಡಮರಗಳು ಬೋಳು ಬೋಳಾಗಿ ಕಾಣುವುವು. ತಡೆಯಲಾರದ ಚಳಿಯಿಂದಾಗಿ ಜನರಲ್ಲಿ ಉತ್ಸಾಹ ಕುಂದುವುದು. ಸುಬ್ರಹ್ಮಣ್ಯ ಷಷ್ಠಿ, ಮಕರಸಂಕ್ರಾಂತಿ ಇತ್ಯಾದಿ ಆಚರಣೆಗಳನ್ನು ಈ ಋತುವಿನಲ್ಲಿ ಕಾಣಬಹುದು.
ಶಿಶಿರ ಋತು
ಮಾಘ ಶುಕ್ಲ ಪಾಡ್ಯಮಿಯ ದಿನದಿಂದ ಪ್ರಾರಂಭವಾಗುವ ಶಿಶಿರ ಋತುವು ಫಾಲ್ಗುಣ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ ( ಜನವರಿಯಿಂದ ಮಾರ್ಚ್ ವರೆಗೆ). ಇದು ಋತು ಚಕ್ರದ ಕೊನೆಯ ಋತುವಾಗಿದ್ದು. ಈ ಸಮಯದಲ್ಲಿ ಮರಗಿಡಗಳ ಹಣ್ಣೆಲೆಗಳು ಉದುರಿ ಚಿಗುರೊಡೆಯಲು ಆರಂಭವಾಗುತ್ತವೆ. ಎಲ್ಲೆಲ್ಲೂ ಆಗತಾನೇ ಚಿಗುರುತ್ತಿರುವ ಹೊಸ ಚಿಗುರುಗಳನ್ನು ಹೊಂದಿದ ಗಿಡ ಮರ ಬಳ್ಳಿಗಳನ್ನು ಕಾಣಬಹುದು. ರಥ ಸಪ್ತಮಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳನ್ನು ಈ ಋತುವಿನಲ್ಲಿ ಆಚರಿಸುತ್ತೇವೆ.
ಹಲವಾರು ವರ್ಷಗಳಿಂದ ಋತುಗಳ ಬದಲಾವಣೆಗಳ ಅರಿವು ಸಾಮಾನ್ಯವಾಗಿ ಆಗುವುದೇ ಇಲ್ಲ ಎನ್ನಬಹುದು. ಈ ಜಗತ್ತು ಪ್ರತಿಯೊಂದು ಜೀವಿಗೂ ಉಳಿದು ಬಾಳಲು ಇರುವಂತಹ ತಾಣವೆಂಬುದನ್ನು ಮಾನವ ಜೀವಿಯು ಎಂದೋ ಮರೆತಂತಿದೆ. ಸ್ವಾರ್ಥ ಲೋಲುಪತೆಯು ಎಲ್ಲೆಲ್ಲೂ ತಾಂಡವಾಡುತ್ತಿದೆ. ನಿಸರ್ಗ ಹಾಗೂ ಸಹಜೀವಿಗಳನ್ನುಉಪೇಕ್ಷಿಸಲಾಗುತ್ತಿದೆ. ಇದರಿಂದ ಉಂಟಾದ ಹಸಿರುಮನೆ ಪರಿಣಾಮದಿಂದಾಗಿ ಭೂಮಿಯ ತಾಪಮಾನ ಮಿತಿಮೀರಿ ಏರುತ್ತಿದೆ. ಇದರಿಂದಾಗಿ ಉಂಟಾಗುತ್ತಿರುವ ಪ್ರಕೃತಿ ಅಸಮತೋಲನವು ಋತುಗಳ ಏರುಪೇರುಗಳಿಗೆ ಕಾರಣವಾಗುತ್ತಿದೆ. ಪರಿಸ್ಥಿತಿಯು ಕೈಮೀರಿ ಹೋಗುವ ಮುನ್ನವೇ ಜಗದ ಜನರೆಲ್ಲರೂ ಎಚ್ಚೆತ್ತುಕೊಳ್ಳುವುದು ವಿಹಿತವಲ್ಲವೇ?
–ಶಂಕರಿ ಶರ್ಮ, ಪುತ್ತೂರು.
ಮಾಹಿತಿ ಪೂರ್ಣ ಹಾಗೇ…ಉತ್ತಮ ಸಂದೇಶ ಬೀರುವ ಲೇಖನ ಶಂಕರಿ ಮೇಡಂ..ವಂದನೆಗಳು..
ಧನ್ಯವಾದಗಳು…ನಾಗರತ್ನ ಮೇಡಂ.
ಬಹಳ ಮಾಹಿತಿಯಿಂದೊಡಗೂಡಿದ ಲೇಖನ ಶಂಕರಿ ಅಕ್ಕ ಧನ್ಯವಾದಗಳು
ಋತುಗಳ ಕುರಿತಾದ ಲೇಖನ, “ಋತುಗಾನ” ಸೊಗಸಾಗಿದೆ.
ಮಾಹಿತಿಪೂರ್ಣ ಲೇಖನ. ಕೊನೆಯ ಪ್ಯಾರ ಬಹಳ ಸತ್ಯ.
ಋತುಗಳ ಬಗ್ಗೆ ಉತ್ತಮ ಮಾಹಿತಿಗಳನ್ನೊಳಗೊಂಡ ಸುಂದರ ಲೇಖನ.