ಕಾಕಪುರಾಣಂ

Share Button

ಏಪ್ರಿಲ್‌ 27 ರಂದು ಅಂತಾರಾಷ್ಟ್ರೀಯ ಕಾಗೆ ದಿನವೆಂದು ಮಾನ್ಯ ಮಾಡಲಾಗಿದೆಯಂತೆ. ಕೆ ರಾಜಕುಮಾರ್‌ ಎಂಬ ಕನ್ನಡದ ಮಹತ್ವದ ಬರೆಹಗಾರರಿಂದ ನನಗಿದು ಗೊತ್ತಾಯಿತು. ಏನೇನೋ ದಿನಾಚರಣೆಗಳು ಬಂದು ದಿನಗಳ ಮಹತ್ವವೇ ಮಂಕಾಗಿರುವ ಕಾಲವಿದು. ಆದರೆ ಕೆಲವೊಂದು ದಿನಾಚರಣೆಗಳಿಗೆ ನಿಜಕ್ಕೂ ಅರ್ಥವಿರುತ್ತದೆ; ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಈ ಕಾಗೆದಿನ ಸಾಕ್ಷಿ. ದಿನನಿತ್ಯದ ಯಾಂತ್ರಿಕ ಬದುಕಿನ ತಾಂತ್ರಿಕ ತೊಡಕು ತೊಂದರೆಗಳಲ್ಲೇ ಜೀವಿಸುವ ನಮಗೆ ಇಂಥ ಡೇಗಳು ನಮ್ಮ ಮತ್ತು ಪ್ರಕೃತಿಯ ಸಹ ಸಂಬಂಧವನ್ನು ನೆನಪಿಸುತ್ತವೆ; ಸಾರ್ಥಕ ಮತ್ತು ಸಹನೀಯ ಆಗಿಸುತ್ತವೆ. ಈ ಮೂಲಕ ಯಃಕಶ್ಚಿತ್‌ ಕಾಗೆಗೂ ಒಂದು ಇಂಟರ್‌ನ್ಯಾಷನಲ್‌ ರೆಕಗ್ನಿಷನ್‌ ಸಿಕ್ಕಿತಲ್ಲ ಎಂಬುದೇ ಖುಷಿ.  ತನ್ನ ಕೂಗುವಿಕೆಯನ್ನೇ ಹೆಸರಾಗಿಸಿಕೊಂಡ ಅಪರೂಪದ ನಿಜರೂಪ ಈ ಕಾಗೆಯದು. ಸಂಸ್ಕೃತದ ಕಾಕಾ ಎಂಬುದು ಕನ್ನಡದಲ್ಲಿ ತದ್ಭವಗೊಂಡು, ಕಾಗೆ ಎಂದಾಗಿದೆ. ಕಾಗೆಯಿಂದ ನಾವು ಕಲಿಯುವುದು ತುಂಬ ಇದೆ. ಅದರ ಬಣ್ಣ ಮತ್ತು ಕಂಠದಿಂದಷ್ಟೇ ಗುರುತಿಸಿ, ಶನಿಯೆಂದೋ ದರಿದ್ರವೆಂದೋ ಅಪಶಕುನವೆಂದೋ ದೂರಬಾರದು. ಎಲ್ಲ ಪಕ್ಷಿ ಪ್ರಾಣಿಗಳಂತೆಯೇ ಕಾಗೆಯು ಸಹ. ಅಷ್ಟು ಮೋಹಕ ಕಂಠವಿಟ್ಟುಕೊಂಡಿರುವ ಕೋಗಿಲೆಯ ಪರಪುಟ್ಟ ಬುದ್ಧಿಯನ್ನು ನಾವು ಮರೆಯಬಾರದು. ಗೂಡು ಕಟ್ಟಲು ಸೋಮಾರಿಗೊಂಡು, ಕಾಗೆಯ ಗೂಡಲ್ಲಿ ಮೊಟ್ಟೆಯಿಟ್ಟು ಹಾರಿ ಹೋಗುವ ಕೋಕಿಲವು ಎಷ್ಟೇ ಇಂಪಾಗಿ ಹಾಡಲಿ, ನಾನದನ್ನು ಆಲಿಸುವಾಗಲೆಲ್ಲಾ ಅದರ ದುಷ್ಟಬುದ್ಧಿಯನ್ನೂ ನೆನಪಿಸಿಕೊಳ್ಳುತ್ತೇನೆ. ಈ ವಿಷಯದಲ್ಲಿ ಕಾಗೆಯು ಪ್ರಾಮಾಣಿಕ ಮಾತ್ರವಲ್ಲ, ತನ್ನ ಒಳ್ಳೆಯತನದಿಂದಲೇ ಮೋಸ ಹೋಗುವ ಮನುಷ್ಯರಂತೆ ನಿರಪಾಯಕರ. ತನ್ನ ಬಣ್ಣ ಮತ್ತು ಕಂಠದ ಕಾರಣಕ್ಕಾಗಿ ಜನರಿಂದ ದೂರವಾಗಿರುವ ಕಾಗೆಯು ಎಂದೂ ಗಿಳಿ, ಪಾರಿವಾಳಗಳಂತೆ ಸಾಕುಪಕ್ಷಿಯಾಗಲೇ ಇಲ್ಲ. ವಿಚಿತ್ರವೆಂದರೆ ತಿಥಿ, ವೈದೀಕ, ಶ್ರಾದ್ಧವೇ ಮೊದಲಾದ ಅಪರಕರ್ಮಗಳ ವೇಳೆಯಲ್ಲಿ ನಮ್ಮ ಪೂರ್ವಜರನ್ನೂ ಹಿರಿಯರನ್ನೂ ಕಾಗೆಯಲ್ಲಿ ಕಾಣಲು ಬಯಸುತ್ತೇವೆ. ಇದು ಕಾಗೆಗೆ ನಮ್ಮ ಸಂಸ್ಕೃತಿ ಕೊಟ್ಟಿರುವ ಅತ್ಯುನ್ನತ ಸ್ಥಾನಮಾನ ಎಂದೇ ನಾ ತಿಳಿಯುವೆ. ನಮ್ಮಲ್ಲಿ ಮಾತ್ರವಲ್ಲ, ಐರೋಪ್ಯ ದೇಶಗಳಲ್ಲೂ ಕಾಗೆಯನ್ನು ಸ್ಪಿರಿಟ್‌ ಸ್ಪೀಸಿಸ್‌ ಎಂದು ಕರೆಯುವರಂತೆ. ಅಂದರೆ ಮನುಷ್ಯನ ಸಾವಿನ ನಂತರ ಆತನ ಆತ್ಮವನ್ನು ಪುನರ್ಜನ್ಮದ ಕಡೆಗೆ ಕೊಂಡೊಯ್ಯುವ ಪಕ್ಷಿ ಎಂದೇ ಭಾವಿಸಿದ್ದಾರೆ.

ಇನ್ನು ಆಫ್ರಿಕಾದ ಬುಡಕಟ್ಟುಗಳಲ್ಲಂತೂ ಕಾಗೆಯನ್ನು ಕುರಿತ ಅಪಾರ ನಂಬುಗೆಗಳಿವೆ. ಕೆಲವು ಮಾಟಗಾತಿಯರು ಕಾಗೆಯನ್ನು ಸಾಕಿಕೊಂಡು, ಅವುಗಳ ಕೈಯಲ್ಲಿ ಸ್ಮಶಾನದಿಂದ ಬೇಕಾದ ಅಪರೂಪದ ವಿಶೇಷ ವಸ್ತುಗಳನ್ನು ತರಿಸಿಕೊಳ್ಳುತ್ತಾರಂತೆ. ಸಾವಿರಾರು ವರುಷಗಳ ನಮ್ಮ ಈ ಜೀವಯಾನದಲ್ಲಿ ಕಾಗೆಯ ಬುದ್ಧಿವಂತಿಕೆ ಮತ್ತು ತನ್ನ ಅತಿಮಾನವ ಲಕ್ಷಣಗಳಿಂದಾಗಿ ಅದು ನಮ್ಮೊಂದಿಗಿದ್ದರೂ ಇನ್ನೂ ಅರ್ಥವಾಗದ ಸಂತತಿಯೇ ಆಗಿದೆ. ಅಂತೂ ಕಾಗೆಯು ನಮಗೆ ಯಕ್ಷಪ್ರಶ್ನೆ; ಇದರಿಂದಾಗಿಯೇ ನಾವು ಅದಕ್ಕೆ ಅಲೌಕಿಕ ಸ್ವಭಾವವನ್ನು ಆರೋಪಿಸಿದ್ದೇವೆ. ತನ್ನ ಶರೀರದ ಅನುಪಾತಕ್ಕೆ ಹೋಲಿಸಿದರೆ ಕಾಗೆಗೆ ಪಕ್ಷಿ ಸಂಕುಲದಲ್ಲೇ ದೊಡ್ಡ ಗಾತ್ರದ ಮಿದುಳಿದೆ ಎಂದು ವಿಜ್ಞಾನಿಗಳ ಸಂಶೋಧನೆ ಹೇಳುತ್ತದೆ. ಮುಂಭಾಗದ ಮಿದುಳಿನಲ್ಲಿ ಹೇರಳವಾದ ನ್ಯುರಾನ್‌ಗಳು ಇರುವುದರಿಂದ ಜಾಣತನದಲ್ಲಿ ಅದು ಎಂದೂ ಮುಂದೆಯೇ! ಪ್ರದೇಶದಿಂದ ಪ್ರದೇಶಕ್ಕೆ ಕಾಗೆಗಳ ಕೂಗುವಿಕೆ ಬದಲಾಗುತ್ತದೆಂದು ಗುರುತಿಸಿದ್ದಾರೆ. ಅದರ ಬೇರೆ ಬೇರೆ ಥರದ ಕೂಗುವಿಕೆಗಳು ಬೇರೆ ಬೇರೆ ಅರ್ಥಗಳನ್ನೂ ಸಂವಹನಗಳನ್ನೂ ಹೊಂದಿದೆಯಂತೆ. ನಮಗೆ ಗೊತ್ತಾಗುವುದಿಲ್ಲ ಅಷ್ಟೇ. ಮಾನವನನ್ನು ಕಾಗೆಯು ಅರಿತಿದೆ; ಆದರೆ ಕಾಗೆಯನ್ನು ಮಾನವ ಅರಿತಿಲ್ಲ ಎಂದೇ ಹೇಳಬೇಕು. ಈ ಮಾತು ಕಾಗೆಗೆ ಮಾತ್ರವೇಕೆ, ಮಿಕ್ಕುಳಿದ ಎಲ್ಲ ಪಶುಪಕ್ಷಿಗಳಿಗೂ ಅನ್ವಯವೇ.

ಬಾಲ್ಯ ಕಾಲದಲ್ಲಿ ಮೈಸೂರಿನ ಕನ್ನೇಗೌಡನ ಕೊಪ್ಪಲಿನ ವಠಾರದ ಮನೆಯಲ್ಲಿದ್ದಾಗ ನಮ್ಮಮ್ಮ ಬೆಳಗಿನ ತಿಂಡಿ ಕೊಟ್ಟ ಮೇಲೆ, ತಿಂದುಳಿದ ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ ಮತ್ತು ತಿನ್ನದೇ ಉಳಿಸಿದ್ದ ತರಕಾರಿಯ ತುಣುಕುಗಳನ್ನು ಮನೆಯೀಚೆ ಬಂದು ಚೆಲ್ಲುತ್ತಿದ್ದೆ. ಕಾಗೆಯೊಂದು ನಿತ್ಯವೂ ಬರುವುದು ಪಾಠವಾಗಿತ್ತು. ಅದು ಗುಳಕ್ಕನೇ ನುಂಗಿ, ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಾ, ಇನ್ನೂ ಹಾಕೆಂದು ಬಲವಂತಪಡಿಸುವಂತೆ ಕೂಗುತ್ತಿತ್ತು. ಅಡುಗೆಮನೆಯ ಒಳಗಿನಿಂದಲೇ ನಮ್ಮಮ್ಮ ಕೂಗುತ್ತಿದ್ದರು: ಅನಿಷ್ಟ ಅದು, ಓಡಿಸು, ಅದು ಒಳಗೆ ಬಂದರೆ ಅಪಶಕುನ ಎಂದು ಗಾಬರಿಪಡಿಸುತ್ತಿದ್ದರು. ಆ ಕಾಗೆಯ ಅಂದವನ್ನೂ ಅದು ತಿನ್ನುವ ವೈಖರಿಯನ್ನೂ ನಾನು ದೂರದಿಂದ ನಿಂತು ನೋಡಿ, ಆನಂದಿಸುತ್ತಿದ್ದೆ. ಕಪ್ಪಗಿದ್ದರೂ ಎಷ್ಟು ಶುಭ್ರವಾಗಿ ಲಕ್ಷಣವಾಗಿದೆ ಈ ಕಾಗೆ! ಎಂದು ಅಚ್ಚರಿಗೊಳ್ಳುತ್ತಿದ್ದೆ. ಒಮ್ಮೆ ಹೀಗೆಯೇ ಬೀದಿ ಬದಿಯಲ್ಲಿ ಯಾರೋ ದಾರಿಹೋಕರು ಕೆಮ್ಮಿ, ಕ್ಯಾಕರಿಸಿ, ದುಪ್ಪನೇ ಕಫದ ಉಂಡೆ ಉಗಿದಾಗ ಸರ್ರನೆ ಅಲ್ಲಿಗೆ ಹೋದ ಆ ಕಾಗೆಯು ಗುಳುಮ್ಮನೇ ಅದನ್ನು ನುಂಗಿಬಿಟ್ಟಿತು. ‘ಥೂ, ಥೂ, ನನಗಂತೂ ಅದು ಅಸಹ್ಯದ ಪರಮಾವಧಿ’ ಎನಿಸಿತ್ತು. ಸ್ವಚ್ಛತಾ ಆಂದೋಲನದಲ್ಲಿ ಅದೂ ಭಾಗಿಯಾಗಿದೆ ಎಂದು ಈಗ ಮನವರಿಕೆ ಮಾಡಿಕೊಳ್ಳುತ್ತಿದ್ದೇನೆ! ಸಂಜೆ ವೇಳೆ ವಠಾರದ ಮನೆಯವರೆಲ್ಲ ಒಟ್ಟಿಗೆ ಕುಳಿತು ಅವರೆಕಾಯಿ ಬಿಡಿಸುವಾಗ ಕಾಗೆಗಳು ಹಿಂಡು ಹಿಂಡಾಗಿ ಬರುತ್ತಿದ್ದವು. ಆಗಿನ ಅವರೆಕಾಯಿಯಲ್ಲಿ ಹುಳಗಳು ತುಂಬ ಇರುತ್ತಿದ್ದವು. ಹುಳ ಸಿಕ್ಕಾಗ ಎಸೆದರೆ ಅವನ್ನು ಗುಳುಂ ಮಾಡಲು ಕಾಗೆಗಳು ಪೈಪೋಟಿ ನಡೆಸುತ್ತಿದ್ದವು; ಕ್ಯಾಚ್‌ ಹಿಡಿದುಕೊಳ್ಳುತ್ತಿದ್ದವು. ಅವರೊಂದಿಗೆ ಕುಂತ ನಾನು ಬಿಡಿಸುವುದಕಿಂತ ಅದನ್ನು ನೋಡಿ ಬೆರಗಗೊಂಡಿದ್ದೇ ಹೆಚ್ಚು.  ಕಾಗೆ ಹಾರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಹೋಯ್ತು ಎಂಬ ಮಾತಿದೆ. ಕಾಗೆ ಮೇಲೆ ಗೂಬೆ ಕೂರಿಸುವ ಇಂಥ ಹೇಳಿಕೆಗಳು ಬದುಕಿನ ಆಕಸ್ಮಿಕವನ್ನು ಪ್ರತಿಮಾತ್ಮಕವಾಗಿ ಕಟ್ಟಿ ಕೊಡುತ್ತವೆ. ಅಂತೂ ಹೋಗಿ ಬಂದು ಮೂಗಿ ಸುತ್ತ ಎಂಬಂತೆ, ಕಾಗೆಯನ್ನೇ ಕೇಂದ್ರೀಕರಿಸಲಾಗಿದೆ. ಸಾರಾಂಶವಿಷ್ಟೇ: ಜನವಸತಿ ಪ್ರದೇಶಗಳ ಸಮೀಪವೇ ವಾಸಿಸುವ ಕಾಗೆಗಳು ಜನರಿಗೆ ಸುಲಭ ತುತ್ತು. ಆರೋಪಿಸಲು ಮತ್ತು ಅರ್ಥವಿಸಲು ಲಭಿಸಿದ ಕುತ್ತು!

ಒಟ್ಟಿನಲ್ಲಿ ಹಿಂದೆಲ್ಲಾ ಕಾಗೆಗಳು ಮನೆಯ ಮೇಲೆ ಕುಳಿತು ಕೂಗುತ್ತಿದ್ದವು. ಆಗೆಲ್ಲಾ ನಮ್ಮ ಹಿರಿಯರು, ಯಾರೋ ನೆಂಟರು ಬರುತ್ತಾರೆಂದು ಭಾವಿಸುತ್ತಿದ್ದರು. ಹೋದಲ್ಲೆಲ್ಲಾ ಹಿಂಡು ಹಿಂಡಾಗಿ ಕಾಣಿಸುತ್ತಿದ್ದವು. ನಿಧಾನವಾಗಿ ಅವುಗಳ ಸಂತತಿ ಕಡಮೆಯಾಗುತ್ತಿದೆ ಎಂಬುದು ನಮ್ಮೆಲ್ಲರ ಗಮನಕ್ಕೂ ಈಗ ಬಂದಿದೆ. ಒಮ್ಮೆ ಶಾಲೆಯಲ್ಲಿ ಕುರುಡು ಕಾಗೆಯೊಂದು ಒಳ ಬಂದು ರಂಪ ಮಾಡಿತ್ತು. ಅದಕ್ಕೋ ಪ್ರಾಣಭಯ. ಕಷ್ಟಪಟ್ಟು ಅದನ್ನು ಹೊರಗೆ ಕಳಿಸಿದ್ದಾಯ್ತು; ಆದರೆ ಅಲ್ಲೆಲ್ಲೋ ಕಾಯುತ್ತಿದ್ದ ಇತರ ಕಾಗೆ ಬಳಗ ಅದನ್ನು ಕುಕ್ಕಿ, ಕಚ್ಚಿ ಸಾಯಿಸಿಯೇ ಬಿಟ್ಟವು. ಮನುಷ್ಯರ ಬಳಿ ಬಂದರೆ ಅವುಗಳ ಬಳಗ ಸಹಿಸುವುದಿಲ್ಲ; ಜೊತೆಗೆ ದುರ್ಬಲವಾದವುಗಳನ್ನು ಅವು ಉಳಿಸುವುದಿಲ್ಲ ಎಂದು ಗುರುಗಳು ಹೇಳಿದ್ದು ನೆನಪಿದೆ. ನನಗೀಗ ಅನಿಸುತಿದೆ. ಕಾಗೆಯನ್ನು ನಾವು ದೂರವಿಟ್ಟಿಲ್ಲ; ಅವುಗಳೇ ನಮ್ಮನ್ನು ದೂರವಿಟ್ಟಿವೆ ಎಂದು. ಇನ್ನು ನಮ್ಮಜ್ಜಿ ಮನೆಯಲ್ಲಿ ಶ್ರಾದ್ಧ, ತಿಥಿ ಇತ್ಯಾದಿಗಳು ವರ್ಷಕ್ಕೊಮ್ಮೆ ಆಗುವಾಗ ಹಸುವನ್ನು ಕರೆದುಕೊಂಡು ಬರುವುದು ನಮ್ಮಂಥ ಹುಡುಗರ ಕೆಲಸವಾಗಿತ್ತು. ಆದರೆ ‘ಕಾಗೆ ಬಂತೆ? ಮನೆಯ ಮೇಲಿಟ್ಟಿದ್ದ ಪಿಂಡವನ್ನು ಮುಟ್ಟಿ ಹೋಯಿತೇ?’ ಎಂಬುದು ದೊಡ್ಡವರ ಚಿಂತೆಯಾಗಿತ್ತು. ನಮ್ಮ ದೊಡ್ಡಪ್ಪನವರಂತೂ ಭಯಂಕರ ಮಡಿ ಮತ್ತು ನಂಬುಗೆಯ ಪೈಕಿ. ಒಂದೊಮ್ಮೆ ಸಂಜೆ ನಾಲ್ಕು ಗಂಟೆಯಾದರೂ ಕಾಗೆ ಬಂದಿಲ್ಲ, ಪಿಂಡ ಮುಟ್ಟಿಲ್ಲ ಎಂದು ಊಟ ಮಾಡದೇ ಕಾಯುತ್ತಾ, ನಿತ್ರಾಣರಾಗಿದ್ದರು. ‘ಏಕೋ ಈ ಬಾರಿ ನಿಮ್ಮ ತಾತನಿಗೆ ಸಿಟ್ಟು ಬಂದಿದೆ ಕಣ್ರೋ, ಆತ ಬಂದಿಲ್ಲ, ನಮ್ಮನ್ನು ಕಾಯಿಸುತ್ತಿದ್ದಾನೆ’ ಎಂದು ಗೋಳಿಟ್ಟರು. ಕಾಗೆ ರೂಪದಲ್ಲಿ ನಮ್ಮ ತಾತನವರನ್ನು ನೋಡುವುದೇ ನಮಗೆ ಒಂದು ಬಗೆಯ ಬೇಸರ; ಅದರಲ್ಲೂ ಹೀಗೇಕೆ ಸತಾಯಿಸುತ್ತಿದ್ದಾರೆ?  ಎಂದು ಅಸಹನೆ. ನಾವೇನೋ ತಪ್ಪು ಮಾಡಿದ್ದೇವೆ, ಅದಕಾಗಿ ನಮಗೀ ದುಗುಡ ಎಂದು ಮೂಲೆಯಲ್ಲಿ ಕುಳಿತು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದರು. ನಮ್ಮ ಹಿರಿಯರು ಕಾಗೆರೂಪದಲ್ಲಿ ಬರುವರೆಂಬ ನಂಬುಗೆಯು ಮೌಢ್ಯವೇ ಇರಬಹುದು; ಆದರೆ ಅದರ ಮೂಲಕ ಇಲ್ಲೊಂದು ಮನೋವಿಜ್ಞಾನದ ಪಾಠವಿದೆ ಎಂದು ಈಗೀಗ ಅರ್ಥವಾಗುತ್ತಿದೆ. ವಿಚಾರವ್ಯಾಧಿಗಳಿಗೆ ಮತ್ತು ಸಂಸ್ಕೃತಿಯ ಸ್ವರೂಪ ಅರಿಯಲು ಮನ ಬಾರದವರಿಗೆ ಇವೆಲ್ಲ ಅರ್ಥವಾಗುವುದಿಲ್ಲ; ಏಕೆಂದರೆ ಅವರು ಅರ್ಥ ಮಾಡಿಕೊಳ್ಳುವ ಆರೋಗ್ಯಕರ ಮನಸ್ಥಿತಿ ತೋರುವುದಿಲ್ಲ.

ಇನ್ನು ಕೆ ಆರ್‌ ನಗರದಲ್ಲಿದ್ದಾಗ ಕೋತಿ ಕಾಂತಣ್ಣ ಎಂದೇ ಹೆಸರುವಾಸಿಯಾದ ವಿಚಿತ್ರ ವ್ಯಕ್ತಿಯೊಬ್ಬರಿದ್ದರು. ಕೋತಿ ಮುಂತಾದ ಹಲವು ರೀತಿಯ ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದರು. ಬೆಳಗ್ಗೆಯೇ ಕೋವಿ ಹಿಡಿದು ಸುತ್ತಾಡುತ್ತಿದ್ದರು. ಆತನ ಕೋವಿ ಸದ್ದು ಮಾಡುತ್ತಿದ್ದಂತೆಯೇ ಕಾಗೆಗಳ ಹಿಂಡು, ಅರಚುತ್ತಾ, ಭಯವಿಹ್ವಲಗೊಂಡು ಚದುರುತ್ತಿದ್ದವು. ಆತ ಕಾಗೆ ಹೊಡೆದು ಸುಟ್ಟು ತಿನ್ನುತ್ತಾನೆಂದು ಗುಸುಗುಸು ಇತ್ತು. ಅದಕ್ಕನುಗುಣವಾಗಿ ಕಾಗೆ ಪುಕ್ಕಗಳು ಮನೆಯ ಹಿಂದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಹೀಗಾಗಿ ಆತ ಕಾಗೆ ಕಾಂತಣ್ಣನೆಂದು ಬಲು ಬೇಗ ಜನಪ್ರಿಯರಾದರು. ಎಲ್ಲೇ ಹಾವು ಕಂಡರೂ ಈತನೇ ಬಂದು ಜನರನ್ನು ರಕ್ಷಿಸಿ, ಹಾವು ಹಿಡಿದುಕೊಂಡು ಹೋಗಿ ಬಿಡುತ್ತಿದ್ದರು. ಗುಂಪಿನ ಮೇಲೆ ಗುರಿಯಿಟ್ಟು ಹೊಡೆದು ಕಾಗೆಯೊಂದನ್ನು ಬೀಳಿಸುವ ಈತ ಗುರಿಕಾರ ಮಲ್ಲಪ್ಪನೇ ಸರಿ ಎಂದುಕೊಳ್ಳುತ್ತಿದ್ದೆ. ಎರಡು ಮೂರು ಸಹ ಸಂಬಂಧಗಳನ್ನು ಸಾಕಿಕೊಂಡಿದ್ದರಿಂದ ಆಧುನಿಕ ಅರ್ಜುನ ಎಂದು ನಾನು ತಮಾಷೆ ಮಾಡುತ್ತಿದ್ದೆ.

ನನ್ನ ವಿದ್ಯಾಗುರುಗಳಾದ ಡಾ. ಸಿ ಪಿ ಕೃಷ್ಣಕುಮಾರರ ‘ಪಕ್ಷಪಾತ’ ಎಂಬ ಪದ್ಯವೊಂದು ಪಾಠವಾಗಿತ್ತು. ‘ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿಹ ಕಾಗೆ; ತಪ್ಪು ಮಾಡದ ವ್ಯಕ್ತಿ ಶಿಕ್ಷೆ ಪಡೆಯವ ಹಾಗೆ! ಎಂದು ಶುರುವಾಗುತ್ತದೆ; ಅನುಕಂಪದ ಶೋಕಾಶ್ರು ಸುರಿಯುತ್ತದೆ. ವಿ ಜಿ ಭಟ್ಟರ ಕವಿತೆಯ ಸಾಲುಗಳು ಹೀಗಿವೆ: ಹುಟ್ಟಿಸಿದ ಬಂದಿರುವೆ, ಕಂಠವಿದೆ ಅಂದಿರುವೆ, ಕರ ಕರ ಕರ ಕರ ಎಂದು ಸಹಜ! ಕಾಗೆಯೇ ಕೂಗದಿರು, ಮಸಿಯ ಮೈ ತೋರದಿರು, ಎಂದು ಹೇಳಲು ನೀನು ಯಾರೋ ಮನುಜ!? ಕಾಕಕುಲವೆಲ್ಲ ಒಂದಾಗಿ ನಮ್ಮ ಮರ್ಮಕ್ಕೆ ತಾಗುವಂತೆ ಹೇಳಿವೆ.

ಹೆಣ್ಣು ಕಾಗೆ ಮತ್ತು ಗಂಡು ಕಾಗೆಗಳನ್ನು ಗುರುತಿಸುವುದು ಸುಲಭ. ಅವುಗಳ ವರ್ತನೆಯಲ್ಲಿ ಅಲ್ಲ, ಮೇಲ್ನೋಟದಲ್ಲೇ! ಇನ್ನು ಗಂಡುಕಾಗೆಯು ಏಕಪತ್ನೀವ್ರತಸ್ಥ ಎಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆಂದು  ಬಹು ಹಿಂದೆ ಓದಿದ್ದೆ. ನಿಜವೋ, ಸುಳ್ಳೋ! ಆದರೆ ಕೇಳಲು ಹಿತವಾಗಿದೆ. ಇಲ್ಲೂ ನಮ್ಮಂಥ ಗಂಡುಪ್ರಾಣಿಗಳಿಗೊಂದು ಪಾಠವಿದೆ ಎಂದುಕೊಂಡೆ. ಈ ಪಾಠದಿಂದ ಕೆಲವರಾದರೂ ನೊಂದುಕೊಳ್ಳಲೂ ಬಹುದು!

ಕಾಗೆಯು ಸಂಘಜೀವಿ. ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು ಎಂದೇ ಬಸವಣ್ಣನವರು ತಮ್ಮೊಂದು ವಚನದಲ್ಲಿ ಹಾಡಿದ್ದಾರೆ. ಸಹಬಾಳ್ವೆಯನ್ನು ಪ್ರತಿಪಾದಿಸಲು ಕಾಗೆಯೇ ಉತ್ತಮ ನಿದರ್ಶನ. ಒಂದು ತುಣುಕು ಆಹಾರ ಕಂಡರೂ ಅದು ತನ್ನ ಕರ್ಕಶ ಕಂಠದಿಂದ (ನಮಗಷ್ಟೇ ಅಹಿತ!) ಕಾ ಕಾ ಎಂದು ಅರಚುತ್ತದೆ. ಇದು ತನ್ನ ಬಳಗಕ್ಕೆ ಕೊಡುತ್ತಿರುವ ಸೂಚನೆ. ಸ್ವಲ್ಪವೇ ಇರುವುದನ್ನು ತಾನಷ್ಟೇ ತಿನ್ನದೇ ತನ್ನ ಬಳಗವನ್ನೆಲ್ಲಾ ಕರೆಯುತ್ತದಲ್ಲ, ಇದೆಂಥ ದಡ್ಡು ಎಂದು ಎಷ್ಟೋ ಸಲ ಅಂದುಕೊಂಡಿದ್ದೇನೆ. ತರುವಾಯ ಜೀವನಾನುಭವದ ಪಾಠದಿಂದ ಗೊತ್ತಾಯಿತು. ಇದು ದಡ್ಡತನವಲ್ಲ, ಬಹು ದೊಡ್ಡ ಮೌಲ್ಯ ಎಂಬುದು!

ಇನ್ನು ಬಾಯಾರಿದ ಕಾಗೆಯು ನೀರು ಕುಡಿಯಲು ಕಲ್ಲುಗಳನ್ನು ತಂದು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ಕುಡಿದು ಹಾರಿ ಹೋದ ಕತೆ ಎಲ್ಲರಿಗೂ ಗೊತ್ತು. ಇದರ ಜಾಣತನ ಮತ್ತು ಕೌಶಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳಿ ಎಂಬ ಕಾರಣಕ್ಕೆ ಈ ಪಾಠವಿತ್ತು. ಈಗಿನ ಕಾಗೆಗಳು ಕಲ್ಲುಗಳನ್ನು ತರುವ ಬದಲು ಎಳನೀರು ಮಾರುವವರ ಬಳಿ ಹೋಗಿ ಸ್ಟ್ರಾ ಒಂದನ್ನು ಎತ್ತಿ ತಂದು, ಹೂಜಿಗೆ ಹಾಕಿ ನೀರು ಎಳೆಯುತ್ತವೆಂದು ತಮಾಷೆ ಮಾಡುತ್ತಾರೆ. ನಮ್ಮಂತೆಯೇ ಅವುಗಳೂ ಸೋಮಾರಿಗಳಾಗಿವೆ ಎಂಬುದನ್ನು ತಿಳಿಸುವುದರ ದ್ಯೋತಕವಿದು. ಒಟ್ಟಿನಲ್ಲಿ ಕಾಗೆಗಳ ಜಾತಕ ಕುತೂಹಲಕಾರಿ. ಜೊತೆಗೆ ನಮ್ಮಗಳ ಜೊತೆಗಿದ್ದೂ ರಹಸ್ಯ ಉಳಿಸಿಕೊಂಡ ಸಂಸಾರಿ! ಆಹಾರ ಸಿಕ್ಕ ಕಡೆ ಕೂಗುತ್ತಾ ಪರಾರಿ.

ಕಾಗೆಯ ವಕ್ರದೃಷ್ಟಿ, ಏನನ್ನೋ ದೃಷ್ಟಿಸುತ್ತಾ ಇನ್ನೇನನ್ನೋ ಕಾಣುವ ಅದರ ಕಣ್ಣಂಚು, ಕುಳಿತಲ್ಲೇ ಕತ್ತು ತಿರುಗಿಸುತ್ತಾ, ಇನ್ನೇನು ಹಾರಿ ಹೋಗಲು ಸಜ್ಜಾಗಿ ಕುಳಿತಂಥ ಭಂಗಿ, ಕಪ್ಪಗಿದ್ದರೂ ಲಕ್ಷಣವಾಗಿರುವ ಅದರ ಶರೀರ ಎಲ್ಲವೂ ನನಗೆ ನೋಡಲು ಮೆಚ್ಚು. ಶನಿದೇವರ ವಾಹನ ಎಂದು ನಮ್ಮ ಪೂರ್ವಜರು ಹೇಳಿದ್ದರೂ ನಾವು ಮಾತ್ರ ಶನಿದೇವರನ್ನೂ ಅದರ ವಾಹನವನ್ನೂ ಇನ್ನೂ ಆತಂಕ ಮತ್ತು ಅನುಮಾನಗಳಿಂದ ಭಯಭೀತ ಮನಸ್ಥಿತಿಯಲ್ಲೇ ದೂರವಿಟ್ಟು ಬದುಕುತ್ತಿದ್ದೇವೆ. ಕಾಗೆ ಹಾರಿಸ್ತಾನೆ ಅಂತಲೂ ಕಾಗೆ ಹಾರಿಸ್ಬೇಡ ಅಂತಲೂ ಕೆಲವು ನುಡಿಗಟ್ಟುಗಳು ಸಿನಿಮಾ ಮಂದಿಯಿಂದ ಚಾಲ್ತಿಗೆ ಬಂದಿವೆ. ಸುಳ್ಳು ಹೇಳುತ್ತಾನೆ ಎಂದಿದರ ಭಾವಾರ್ಥ. ಪಾಪ, ವಿನಾ ಕಾರಣ ಕಾಗೆಗೆ ಆರೋಪಿಸಿದ ಕೆಟ್ಟಗುಣ. 1994 ರಲ್ಲೇ ತೆರೆ ಕಂಡ ದ ಕ್ರೌ ಎಂಬ ಅಮೆರಿಕನ್‌ ಫ್ಯಾಂಟಸೀ ಸಿನಿಮಾದಲ್ಲಿ ಶತ್ರುಗಳ ಕಣ್ಣು ಕೀಳಿಸುವ ಕಾಯಕಕ್ಕೆ ಕಾಗೆಯನ್ನು ಬಳಸಿಕೊಳ್ಳಲಾಗಿದೆ. ಪಾಪ, ಕಾಗೆಗೆ ಏನೆಲ್ಲಾ ದುಷ್ಟಸ್ವಭಾವಗಳನ್ನು ಆರೋಪಿಸಲಾಗಿದೆಯಲ್ಲ ಎಂದು ನಾನು ನೊಂದುಕೊಂಡಿದ್ದೇನೆ. ಕಾಗೆಗೆ ನಮ್ಮಂತೆ ಮಾತಾಡಲು ಬಂದಿದ್ದರೆ ಸರಿಯಾಗಿ ಬುದ್ಧಿ ಹೇಳುತ್ತಿತ್ತೇನೋ? ಮೇಲೆ ಕಾಣುವ ರೂಪ ಮುಖ್ಯವಲ್ಲ; ಹೃದಯದಲ್ಲಿ ಮನೆ ಮಾಡಿರುವ ಗುಣ ಮುಖ್ಯ ಎಂದು. ವಿಶ್ವ ಕಾಗೆ ದಿನದ ನಿಮಿತ್ತ ಇವನ್ನೆಲ್ಲಾ ನೆನಪಿಸಿಕೊಳ್ಳುತ್ತಾ, ಇನ್ನಾದರೂ ನಾವು ಕಾಗೆಯನ್ನು ಪ್ರೀತಿ ಮತ್ತು ಸಹಾನುಭೂತಿಗಳಿಂದ ನೋಡೋಣವೆಂದುಕೊಂಡೆ.  ಸಕಲ ಜೀವಾತ್ಮರಿಗೆ ಲೇಸನು ಬಯಸುವುದೇ ನಿಜಧರ್ಮ; ದೂರುವುದು ಮತ್ತು ದೂರವಿಡುವುದು ಅಧರ್ಮ ಎಂದು ಕಂಡುಕೊಂಡೆ.

-ಡಾ. ಹೆಚ್‌ ಎನ್‌ ಮಂಜುರಾಜ್‌, ಹೊಳೆನರಸೀಪುರ

13 Responses

 1. MANJURAJ says:

  ಧನ್ಯವಾದಗಳು ಸುರಹೊನ್ನೆಗೆ !

  ನನ್ನ ಬಾಲ್ಯಕಾಲದಲಿ ತಪ್ಪದೇ ಬಂದು,
  ಮೆಣಸಿನ ಕಾಯಿ ತಿನ್ನುತ್ತಿದ್ದ “ಆ “ಕಾಗೆಗೆ”
  “ಬರೆಹ”ವನು ಪ್ರೀತಿಯಿಂದ
  ಅರ್ಪಿಸಿದ್ದೇನೆ….!!

  ✍️〽️

 2. ಅಬ್ಬಭ್ಭಾ..ಕಾಗೆಯ ಬಗ್ಗೆ.. ಮಾಹಿತಿಯ ಭಂಡಾರದೊಂದಿಗೆ ತಮ್ಮ ಬಾಲ್ಯದ… ನೆನಪು ಆಗ ಕಂಡ ಆಚರಣೆಗಳಬಗ್ಗೆ ಮುಗ್ದ ಮನಸ್ಸಿನೊಳಗಾಗುತ್ತಿದ್ದ …. ಗೊಂದಲ..ಆನಂತರದ ವೈಜ್ಞಾನಿಕ ವಿವರಣೆ…ಎಲ್ಲವನ್ನೂ ಸೊಗಸಾದ ನಿರೂಪಣೆ ಯೊಂದಿಗೆ..ಅನಾವರಣ ಗೊಳಿಸಿರುವ ನಿಮಗೆ..ವಂದನೆಗಳು ಸಾರ್..

 3. Padmini Hegde says:

  ಕಾಗೆ ಪುರಾಣ ಚೆನ್ನಾಗಿದೆ!

 4. ಶಂಕರಿ ಶರ್ಮ says:

  ತನ್ನ ಪರೋಪಕಾರ ಬುದ್ಧಿ ಹಾಗೂ ವಿಲಕ್ಷಣ ನಡವಳಿಕೆಯಿಂದ, ಪಕ್ಷಿ ಸಂಕುಲದಲ್ಲೇ ಅತೀ ಬುದ್ಧಿವಂತ ಪಕ್ಷಿ ಎಂದು ಗುರುತಿಸಿಕೊಂಡಿರುವ ಕಾಗೆಯ ಕಾಕಪುರಾಣ ಸಖತ್ತಾಗಿದೆ.

 5. ಚಂದ್ರಶೇಖರ್ says:

  ಅದ್ಭುತವಿದೆ ಈ ಕಾಗೆಯ ಕಥನ..ಇದು ನಮಗಂತೂ ಬಾಲ್ಯದಲ್ಲೇ ಅಜ್ಜಿಯ ಕಥೆಗಳ ಸಿಲಬಸ್ ನಲ್ಲಿ ದೊರಕುತ್ತಿದ್ದ ಪಕ್ಷಿ. ಕಾಗಕ್ಕ ಗುಬ್ಬಕ್ಕ ಎಲ್ಲರನ್ನೂ ಸಮಾಧಾನಿಸಿದ ಜೋಡಿ. ವಿರಾಮದಲ್ಲಿ ಗೂಬೆಯ ಬಗ್ಗೆ ಬರೆದರೆ ಜನ ನನ್ನನ್ನು ಸದಾ ಕರೆಯುತ್ತಿದ್ದ ಹೆಸರಿಗೆ ಮೆರುಗು ದೊರಕಿಸುವಿರಾ ಮೇಷ್ಟ್ರೇ.

 6. ಮಂಜುಳ says:

  ಕಾಗೆಯ ಬಗ್ಗೆ ಕೇಳಿದ, ನೋಡಿದ ಅನುಭವದ ವಿಚಾರಗಳನ್ನು ತುಂಬಾ ಸೊಗಸಾಗಿ ವಿವರಿಸಿರುವಿರಿ.
  ಕಾಗೆಗೊಂದು ದಿನ ನಿಜ ಅರ್ಥಪೂರ್ಣ. ಸಹಬಾಳ್ಮೆ, ಪರೋಪಕಾರ ಗುಣಗಳನ್ನು ನೆನಪಿಸುವ ಸಲುವಾಗಿಯೇ ಸಾಂಕೇತಿಕವಾಗಿ ಅವುಗಳ ಬರುವಿಕೆ ಶ್ರಾದ್ಧಗಳಲ್ಲಿ ಪೂರ್ವಜರು ನೆನಪಿಸುತ್ತಿರುವರೇನೋ ಎನಿಸುತ್ತದೆ.

 7. ಕುಂದಣ ನಾಗೇಂದ್ರ says:

  ಕಾಗೆಯ ಬಗ್ಗೆಯೂ ಇಷ್ಟೆಲ್ಲಾ ಬರೆದಿರುವ ತಾವು ನಿಜವಾಗ್ಲೂ ಮಂಜುಗೆ ರಾಜ್ ಇದ್ದೀರಿ ಸರ

 8. ಎನ್ ನಾಗರಾಜು says:

  ಕಾಗೆಯ ಬಗೆಗಿನ ಲೇಖನ ಬಹಳ ಸೊಗಸಾಗಿದೆ.
  ತಿಥಿ ಕಾರ್ಯದಲ್ಲಿ ಕಾಗೆ ಬರದಿದ್ದರೆ ಅಗಲಿದ ಹಿರಿಯರು ನಮ್ಮ ಎಡೆಯನ್ನು ಸ್ವೀಕರಿಸಲು ಬರಲಿಲ್ಲವೆಂದು ಕೊರಗುವವರು ಇನ್ನೂ ಇದ್ದಾರೆ.
  ಕಾಗೆ ಪಿತೃ ಸ್ವರೂಪಿಯೆಂದರೆ ತಪ್ಪಾಗಲಾರದು.
  ಒಂದಗುಳ ಕಂಡರೆ ತನ್ನ ಕುಲವನ್ನೆಲ್ಲಾ ಕರೆಯುವ ಸ್ವಭಾವವನ್ನು ವೈಭವಸೀಕರಿಸಲಾಗಿದೆ. ಕರೆಗೆ ಓಗೊಟ್ಟು ಬಂದ ತನ್ನ ಬಳಗದೊಡನೆ ಸಹ ಭೋಜನ ಮಾಡುವುದಿಲ್ಲ. ಬಲಿಷ್ಟವಾದುದು ಕರೆದವನ/ಳನ್ನೇ ಬದಿಗೊತ್ತಿ ಕಬಳಿಸುವುದನ್ನು ವರದಿ ಮಾಡಲಿಲ್ಲ ಬಲ್ಲವರು. ಪಶು ಪ್ರಾಣಿಗಳಲ್ಲಿ ಗಾಯಗಳಿದ್ದರೆ ಅದನ್ನು ಬಗೆದು ವ್ರಣ ಮಾಡುವುದನ್ನು ಕಂಡಿದ್ದೇನೆ. ಅದಕ್ಕೆಂದೇ ಕಾಗೆಗೇನು ಗೊತ್ತು ಎತ್ತಿನ ಗಾಯ ಎಂಬ ನಾಣ್ಣುಡಿಯನ್ನು ಕಾಣುತ್ತೇವೆ.
  ಆದರೂ ನೀವಂದಂತೆ ಮನುಷ್ಯರೊಡನೆ, ಸಾಕು ಪ್ರಾಣಿಯಂತಾಗದೆ ಇದ್ದರೂ, ಬದುಕುವುದು ಈ ಪಕ್ಷಿ.
  ಶನಿದೇವ ತನ್ನ ವಕ್ರ ದೃಷ್ಟಿಯಿಂದ ಪ್ರಖ್ಯಾತನಾಗಿದ್ದು ಅವನಿಗೆ ವಾಹನವನ್ನಾಗಿಸಿರುವ ನಾವು, ಎರಡು ನಕಾರಾತ್ಮಕ ಅಂಶಗಳು ಸೇರಿದಾಗ ಸಕಾರಾತ್ಮಕವಾಗಿ ಬದಲಾಗುವುದನ್ನು ಕಂಡಿದ್ದೇನೆ ಅಲ್ಲವೇ. ಮೈನಸ್ ಇಂಟು ಮೈನಸ್ ಫಾಲ್ಸ್ ಅಲ್ಲವೇ.
  ಕಾಕರಾಜನ ಬುದ್ಧಿಮತ್ತೆ ಮೆಚ್ಚುವಂತದ್ದೇ. ಹೂಜಿಯೊಳಗಿನ ನೀರು ಕುಡಿಯುವ ದುಷ್ಟ ನಾಗರವನ್ನು ಕೊಲ್ಲಿಸಿ ತನ್ನ ತತ್ತಿ ಮತ್ತು ಮರಿಗಳನ್ನು ರಕ್ಷಿಸಿಕೊಂಡ ಪರಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕ.
  ಒಟ್ಟಾರೆ ಕಾಗೆ ದಿನ/ಪುರಾಣ ಮನನೀಯ.

  • ಮೋದೂರು ಮಹೇಶಾರಾಧ್ಯ, says:

   ಕಾಕ ಪುರಾಣ ಇಷ್ಟೊಂದು ಸ್ವಾರಸ್ಯವಾಗಿರುವುದು ನನಗೆ ತಿಳಿದಿರಲಿಲ್ಲ.ನಮ್ಮ ಕಡೆ ಕಾಗೆಯನ್ನು ಅನಿಷ್ಟದ ಸಂಕೇತವಾಗಿ ನೋಡುವವರೇ ಅಧಿಕ. ಕಾಗೆ ಶನಿಯ ವಾಹನ, ಅದನ್ನು ಬೆಳಗ್ಗೆ ಎದ್ದಾಕ್ಷಣ ನೋಡಿದರೆ ಅನಿಷ್ಟ, ಪ್ರಯಾಣಿಸುವಾಗ ಎದುರಿಂದ ಕಾಗೆ ಬಂದರೆ ಕೆಟ್ಟದ್ದು, ಕಾಕ ಮೈಥುನವನ್ನು ನೋಡಿದರೆ ಮೃತ್ಯು ಇತ್ಯಾದಿ ಮೂಡ ನಂಬಿಕೆಗಳು ಪ್ರಚಲಿತದಲ್ಲಿವೆ.” ಹೊಸ ಮನೆಗೆ ಕಾಗೆ ನುಗ್ಗಿದ ಹಾಗೆ” ಎಂಬ ಗಾದೆಯ ಮಾತಿದೆ.ಈಗಲೂ ಹಳ್ಳಿಯ ಕಡೆ ವಾಸದ ಮನೆಗೆ ಕಾಗೆ ನುಗ್ಗಿದರೆ ಅದನ್ನು ಶುಚೀಕರಿಸಿ ಹೋಮ ಮಾಡಿಸುವ ಪದ್ಧತಿ ಇದೆ. ಕಲ್ಯಾಣ ಕರ್ನಾಟಕದ ಕಡೆ ಕಾಕಾ ಎಂದರೆ ಚಿಕ್ಕಪ್ಪ ಎಂಬ ಅರ್ಥವಿದೆ.
   ಬರೆಹ ಸ್ವಾರಸ್ಯಕರವಾಗಿದೆ. ಕಾಗೆಯ ಬಗ್ಗೆಯೂ ಇಂತಹ ಉತ್ತಮ ಬರೆಹ ಬರೆಯಬಹುದಾದ ನಿಮ್ಮ ಜ್ಞಾನ ಕ್ಕೆ ಶರಣು ಶರಣಾರ್ಥಿಗಳು.

 9. ರಾಮೇಗೌಡ ಬಿ. ಎಚ್. says:

  ನಮಸ್ತೆ ಗುರುಗಳೇ
  ಕಾಗೆಗಳ ಬಗ್ಗೆ ಸುಂದರವಾದ ಬರೆಹ…
  ನಿಮ್ಮ ಬರೆಹದ ಅನುಭವಗಳ ಬಹುಪಾಲು ನಮಗೂ ಆಗಿವೆ… ನಮ್ಮ ಸಮುದಾಯದಲ್ಲಿ ಪಿತೃಪಕ್ಷ ಹಬ್ಬದಲ್ಲಿ ಮಡಿಯಿಂದ ಮಾಡಿದ ಎಲ್ಲಾ
  (ವೆಜ್ಜು ನಾನ್ ವೆಜ್ಜು ) ಎಡೆಯನ್ನು ಮೊರದಲ್ಲಿ ಮನೆಯ ಮೇಲಿಟ್ಟು…. ಹಬ್ಬದ ಸಾರ್ಥಕತೆ ಯನ್ನು ನೋಡುವ ಪರಿಪಾಠವಿದೆ.
  ಹೊಲದಲ್ಲಿ ಕೆಲಸ ಮಾಡುವಾಗಂತೂ ಚಿಕ್ಕ ಮಕ್ಕಳಾದ ನಮಗೆ ಊಟವನ್ನು ಎಳೆದು ತಿನ್ನುವ ಕಾಗೆಗಳನ್ನು ಓಡಿಸುವುದೇ ಒಂದು ಸವಾಲಿನ ಕೆಲಸವಾಗಿತ್ತು. ಆ ಕಡೆ ಈ ಕಡೆ ಆಟದಲ್ಲಿ ಮೈ ಮರೆತು ಆಟದಲ್ಲಿ ಮಗ್ನರಾಗಿರುತ್ತಿದ್ದ ನಮಗೆ ಚಾಲಾಕಿ ಕಾಗೆ ಹೇಗೋ ಯಾಮಾರಿಸಿ ಊಟವನ್ನು ಕಿತ್ತು ತಿಂದಿರುತ್ತಿದ್ದವು. ಬೈಗುಳದ ಸುರಿಮಳೆ…. ತೋಟದಲ್ಲಿ ಚೆನ್ನಾಗಿ ಬೆಳೆದಿದಂತಹ ಪಪ್ಪಾಯಿ ಗಿಡದಲ್ಲಿ ದಿನವೂ ಜೋಪಾನ ಮಾಡಿದ ಹಣ್ಣು ಆಗಲಿ ಎಂದು ಕಾಯುತ್ತಿದ್ದಾಗ ಯಾವುದೋ ಮಾಯದಲ್ಲಿ ಬಂದ ಕಾಗೆ ಅದನ್ನ ಎಗರಿಸಿ, ಕುಟುಕಿ ತಿಂದು ಹಾಕಿರುತ್ತಿತ್ತು. ಹಾಗೆಲ್ಲ ಬೇಸರವಾಗುತ್ತಿದ್ದಕ್ಕಾಗಿಯ ನಡೆ ಇತ್ತೀಚಿಗೆ ಯಾರಾದರೂ ಸತ್ತಾಗ ಪಿಂಡ ತಿನ್ನಲು ಆಹ್ವಾನಿಸಿದರೂ ಕೂಡ ಬರದೆ, ಸತ್ತವರಿಗಾಗಿ ಬದುಕಿರುವವರನ್ನು ಸತಾಯಿಸುವ ಚಾಲಾಕಿ ಪಕ್ಷಿ. ನಾವು ಚಿಕ್ಕ ಮಕ್ಕಳಾಗಿದ್ದಾಗ ಕೈಯಲ್ಲಿ ಇದ್ದ ತಿಂಡಿ ತಿನಿಸುಗಳನ್ನ ಎಗರಿಸಿ ಹೊತ್ತೊಯ್ತಿದ್ದಂತಹ ಕಾಗೆಗಳು ಈಗ ಅಪ…..ರೂಪ….. ವಾಗುತ್ತಿರುವುದು ನೋವಿನ ಸಂಗತಿ…!
  ಇನ್ನಾದರೂ ಮನುಷ್ಯ ಕಾಗೆ ವಿಚಾರದಲ್ಲಿ ‘ ಕಾಗೆ ಹಾರಿಸದೆ ‘ ಅವುಗಳನ್ನು ಉಳಿಸಿಕೊಳ್ಳುವ ಅನಿವಾರ್ಯ ತುರ್ತು ಇಂದಿನ ಪ್ರಜ್ಞಾವಂತ ನಾಗರಿಕ ಸಮಾಜದ್ದು. ಲೇಖನ ಚೆನ್ನಾಗಿದೆ ಮಾಹಿತಿ ಪೂರ್ಣವಾಗಿದೆ ಕುತೂಹಲ ಭರಿತವಾಗಿದೆ.

 10. Padma Anand says:

  ಕಾಗೆಗಳ ಕುರಿತಾದ ವಿವರವಾದ ಲೇಖನ ಆಸಕ್ತಿದಾಯಕವಾಗಿದೆ.

 11. Savithri bhat says:

  ಕಾಕಪುರಾಣ ಹಲವಾರು ಮಾಹಿತಿ ಗಳನ್ನು,,ಕಥೆ,ಬಾಲ್ಯದ ನೆನಪುಗಳನ್ನು ಒಳಗೊಂಡು ವಿಶೇಷ ವಾಗಿದೆ. ಪುಟ್ಟ ಕಾಗೆಯ ಎಸ್ಟೊಂದು ಗುಣಗಳನ್ನು ಬರೆದಿರುವಿರಿ.. ಧನ್ಯವಾದಗಳು.

 12. ನಯನ ಬಜಕೂಡ್ಲು says:

  ಅಬ್ಬಾ, ಕಾಗೆಗಳ ಬಗ್ಗೆ ಅಧ್ಯಯನ ವೇ ಮಾಡಿರೋ ಹಾಗಿದೆ. ಚೆನ್ನಾಗಿದೆ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: