ಬಾರದ ಮಳೆ,  ಇದು ಅಂತಿಮ ಎಚ್ಚರಿಕೆ!

Share Button

ಮಳೆ ಬಂದರೂ ಕಷ್ಟ,  ಬರದಿದ್ದರೂ ಕಷ್ಟ,  ಬಂದರೆ ಪ್ರವಾಹ. ಬರದಿದ್ದರೆ ಬರ. ಕಾಡ್ಗಿಚ್ಚಿನಿಂದ ಅನೇಕ ಜೀವಿಗಳು ನಾಶವಾಗಿವೆ. ಮಳೆ ಬಂದು ಎಲ್ಲೆಡೆ ಹಸಿರಿನ ಜನನವಾಗುತ್ತದೆ ಎನ್ನುವಷ್ಟರಲ್ಲೇ ಅದರ ಬೆನ್ನ ಹಿಂದೆ ಈಗ ಎಲ್ಲೆಡೆ ಈಗ ಬಿಸಿಲಿನ ತಾಪ. ಅದು ಉಗ್ರ ರೂಪ ತಾಳಿದಂತಿದೆ. ರಾತ್ರಿಯೂ ಕೂಡ ತಣ್ಣನೆ ಗಾಳಿ ಬೀಸುವುದೇ ಇಲ್ಲ. ಬಿಸಿ ಗಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೆರಡು ಬಾರಿ ಹಗುರವಾಗಿ ಮಳೆ ಬಿದ್ದುದ್ದೆ ಈಗ ಇದುವರೆಗಿನ ದಾಖಲೆಯಾಗಿದೆ. ಅದು ಬಿಟ್ಟು ಮನುಷ್ಯನನ್ನು ಒಳಗೊಂಡಂತೆ ಸಕಲ ಜೀವ ಕೋಟಿ ರಾಶಿಗಳು ಮಳೆರಾಯನ ಆಗಮನಕ್ಕಾಗಿ ಕಾತರ ಆತುರ ಪಡುವಂತಾಗಿದೆ.  ಒಂದೆಡೆ ಬರ, ಮತ್ತೊಂದೆಡೆ ಬಿಸಿಲಿನ ಬೇಗೆ ಇವೆರಡರ ನಡುವೆ ಎಲ್ಲರೂ ಬಸವಳಿದಿದ್ದಾರೆ. ಏನು ಮಾಡಲು ಆಗುವುದಿಲ್ಲ ಬಂದಿದ್ದನ್ನು ಅನುಭವಿಸಲೇಬೇಕು. 

ಈ ರೀತಿಯಾಗಿ ಎಲ್ಲರೂ ದಿನ ತುಂಬುವುದೇ ಕಷ್ಟವಾಗುತ್ತಿದೆ. ಭಾರತದ ಹವಾಮಾನ ಇಲಾಖೆ ಕರ್ನಾಟಕದ 15 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಆರೆಂಜ್ ಘೋಷಿಸಲಾಗಿದೆ. ಅದು ಈಗ ಮುಂದುವರೆದಿದೆ. ನಡೆದು ಹೋಗುವುದಕ್ಕು ಸಾಹಸ ಪಡಬೇಕು. ವಾಹನಗಳಲ್ಲಿ ಹೋಗುತ್ತಿದ್ದರೂ ಕೂಡ ತಂಪಾದ ಗಾಳಿ ಬೀಸುವುದೇ ಇಲ್ಲ. ಬೀಸುವ ಗಾಳಿಯು ಕೂಡ ಸುಡುತ್ತದೆ. ಒಮ್ಮೆಲೇ ಬೆವರಿಳಿಸುತ್ತದೆ!.  ಅಲ್ಲದೆ ಉತ್ತರ ಕನ್ನಡ, ದಕ್ಷಿಣ ಕನ್ನಡ,  ಉಡುಪಿ ಸೇರಿದಂತೆ ಅನೇಕ ಕಡೆ ಏರುತ್ತಿರುವ ಹವಾಮಾನ ಆತಂಕ ಮೂಡಿಸಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶವು ಸಲಹೆ ಸೂಚನೆ ನೀಡಿದೆ. 

ಸದ್ಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲದಿದ್ದರೆ ಮಕ್ಕಳು ಕೂಡ ಬಿಸಿಲಿನ ಬೇಗೆಗೆ ಒಳಗಾಗುತ್ತಿದ್ದರು. ಹಲವು ಸಾಂಕ್ರಾಮಿಕ ರೋಗಗಳಿಗೂ ಮುನ್ನುಡಿ ಬರೆದಿಡುತ್ತದೆ. ಈಗ ದೊಡ್ಡವರು ಕೂಡ ಹೊರಗಡೆ ಹೋಗಲು ಕಷ್ಟವಾಗುತ್ತಿದೆ. ಜನರುಗಳು ತಂಪು ಪಾನೀಯ ಅಂಗಡಿಗಳತ್ತ ಮೊರೆ ಹೋಗುತ್ತಿದ್ದಾರೆ. ಈ ಬೇಸಿಗೆಯಲ್ಲಿ ಹೆಚ್ಚಾಗಿ ತಂಪು ಪಾನೀಯಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಹಾನಿಕರವಾಗಿದೆ. 

ಈ ವರ್ಷ ನಿರೀಕ್ಷಿತ ಮಳೆಯಾಗುವ ಮುನ್ಸೂಚನೆ ಕಾಣುತ್ತಿಲ್ಲ. ಎಲ್ಲರೂ ಆಕಾಶದತ್ತ ನೋಡುವಂತಾಗಿದೆ. ಕ್ಷಣ ಕ್ಷಣಕ್ಕೂ ತಾಪಮಾನ ಹೆಚ್ಚುತ್ತಿದೆ. ಕನಿಷ್ಠ ಇದ್ದದ್ದು ಗರಿಷ್ಠವಾಗುತ್ತಿದೆ. ಎಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇರುವ ಜನರ ಸಂಕಟ ಹೇಳ ತೀರದು. ಸಿಟಿಯಲ್ಲಿ ಮನೆಯಲ್ಲಿದ್ದುಕೊಂಡೆ ಬಿಸಿಲಿನ ಬೇಗೆ ಕಡಿಮೆಯಾಗಲು ಫ್ಯಾನ್, ಜ್ಯೂಸ್ ಇತ್ಯಾದಿ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹೊಲಗದ್ದೆಗಳಿಗೆ ಹೋಗಲೇಬೇಕು. ಮತ್ತೆ ಜಾನುವಾರುಗಳನ್ನು ಮೇಯಿಸಲು ಹೊರಗಡೆ ಹೋಗುವುದರಿಂದ ಬಿಸಿಲಿನ ಬವಣೆಯನ್ನು ಜನರು ತೀವ್ರವಾಗಿ ಅನುಭವಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಉಭಯ ಸಂಕಟ. ಎಲ್ಲೆಲ್ಲಿ ಮರಗಳು ಸಿಗುತ್ತೋ ಅಲ್ಲಿ ಆಶ್ರಯ ಪಡುತ್ತಾರೆ. ದನಗಳಂತೂ ಬಿಸಿಲಿನ ತಾಪಕೆ ಮೇಯುವುದೆ ಇಲ್ಲ. ಅವು ಕೂಡ ನೆರಳಿನಲ್ಲಿ ನಿಲ್ಲುತ್ತವೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೂ ಕೂಡ ಬಿಸಿಲೋ ಬಿಸಿಲು. ನಂತರ ಬಿಸಿ ಗಾಳಿಯ ಸಂಚಲನ.      ಅದರಿಂದಾಗಿ ಈಗಾಗಲೆ ಗರಿಷ್ಠ 33.90 ರಿಂದ ಕನಿಷ್ಠ 21.10 ಡಿಸಿ ತಾಪಮಾನ ದಾಖಲಾಗುತ್ತಿದೆ. ರೈತರ ಪಾಡು ಮಾತ್ರ ಹೇಳತೀರದು. ನೀರಾವರಿ ಆಶ್ರಿತ ಗದ್ದೆ- ಹೊಲಗಳಲ್ಲಿ ಉಳುಮೆ ಮಾಡಿ ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜ ಬಿತ್ತಲು ಕೂಡಾ ಮಳೆ ಬೀಳುತ್ತಿಲ್ಲ.   ಕೆಲವರು ಬಗೆ ಬಗೆಯ ಹೂವುಗಳನ್ನೂ  ಹಾಕಿದ್ದಾರೆ. ಜೊತೆಗೆ ಹತ್ತಿ, ರಾಗಿ, ಹಸರು, ಉದ್ದು, ಹಲಸಂದೆ  ಬೆಳೆಗಳನ್ನು ಕೂಡ ಹಾಕಿದ್ದು, ಅವು ಒಣಗುತ್ತಿವೆ. ಗ್ರಾಮೀಣ ಪ್ರದೇಶದ ಅನೇಕ ಊರುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕೂಡ ಉಲ್ಬಣಗೊಂಡಿದೆ. ಕೈ ಪಂಪುಗಳಲ್ಲೂ ನೀರು ಆಳಕ್ಕೆ ಇಳಿದಿದೆ. ಕೆಲವು ಕಡೆ ನೀರು ಬಂದರೂ ವಿದ್ಯುತ್ ಸಮಸ್ಯೆ. ಹೀಗೆ ಒಂದು ಸಮಸ್ಯೆ ಮತ್ತೊಂದು ಸಮಸ್ಯೆಗೆ ವೇದಿಕೆಯಾಗುತ್ತಿದೆ. 

ಪ್ರಸಕ್ತ ವರ್ಷ ಮಳೆಯಾದರೂ ಯಾವುದೇ ಕೆರೆ, ಬಾವಿಗಳಲ್ಲಿ ನೀರು ತುಂಬಿಲ್ಲ. ಈಗಾಗಲೇ ಹೆಚ್ಚು ತಾಪಮಾನ ದಾಖಲಾಗುತ್ತಿರುವುದು ಜನರನ್ನು ಕಂಗೆಡಿಸಿದೆ. ನಮ್ಮ ಭೂಮಿ ತಾಯಿಯು ಕೂಡ ಈಗ ಹೆಚ್ಚಾಗಿ ಮುನಿದಿದ್ದಾಳೆ. ಭೂಮಿಯಲ್ಲಿ ತೇವಾಂಶ ಕೊರತೆಯಿಂದ ತಾಪಮಾನ ಹೆಚ್ಚುತ್ತಿದೆ. ಅಂತರ್ಜಲ ತೀವ್ರ ಕುಸಿತ ಕಂಡಿರುವುದು ವಾತಾವರಣ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. 

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ  ಇತ್ತೀಚೆಗೆ ರಸ್ತೆ ವಿಸ್ತರಣೆ ಸೇರಿದಂತೆ ನಾನಾ ಕಾರಣಕ್ಕೆ ಮರ ಕಡಿಯುತ್ತಿರುವುದೂ ತಾಪಮಾನ ಹೆಚ್ಚಳಕ್ಕೆ ಕಾರಣ ವಾಗಿದೆ. ಇಂತಹ ಸಮಯದಲ್ಲಿ ಸಾಲ ಮರದ ತಿಮ್ಮಕ್ಕ ನೆನಪಾಗುತ್ತಾರೆ. ಅವರ ಜೀವನ ಇವತ್ತಿಗೂ ಕೂಡ ಸಾರ್ಥಕ ಪಡೆದುಕೊಂಡಿದೆ. ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಕ್ಷಣದಲ್ಲಿ ಅವರಿಗಿರುವ ತೃಪ್ತಿ ಬೆಲೆ ಕಟ್ಟಲಾಗದು. ತಾವು ಅಂದು ಕಷ್ಟಪಟ್ಟು ಹಾಕಿದ ಗಿಡಗಳು ಇಂದು ನೆರಳಾಗಿ ಸಾವಿರಾರು ಜನರಿಗೆ ಆಶ್ರಯ ನೀಡಿವೆ. 

ಜೊತೆಗೆ ನಮ್ಮ ಪೂರ್ವಿಕರು ಕೂಡ ತಮ್ಮ ಅವಧಿಯಲ್ಲಿ ನೂರಾರು ಗಿಡಗಳನ್ನು ನೆಟ್ಟರು. ಅವೆಲ್ಲ ನೆರಳು ಕೊಟ್ಟವು. ಹಣ್ಣು ಕೊಟ್ಟವು. ಇನ್ನೂ ಕೊಡುತ್ತಿವೆ. ನಮ್ಮ ಕಾಲದಲ್ಲಿ ನಾವು ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ?! ಎನ್ನುವುದೇ ಯಕ್ಷಪ್ರಶ್ನೆಯಾಗಿದೆ!. ಜೊತೆಗೆ ಉತ್ತರಿಸಲು ಆಗುವುದಿಲ್ಲ. ಅವರು ತಮ್ಮ ಜೀವಿತಕಾಲದಲ್ಲಿ ಎಷ್ಟೊಂದು ಮರಗಳನ್ನು ನೆಟ್ಟರು. ನೆಟ್ಟ ಗಿಡಗಳನ್ನು ಅಭಿವೃದ್ಧಿಯ ನೆನಪದಲ್ಲಿ ನಾವು ಕಡಿದುಬಿಟ್ಟಿದ್ದೇವೆ. ಮನೆಗೆ ಒಂದೊಂದು ಗಿಡವನ್ನಾದರೂ ನಾವು ನೆಡಬೇಕು. ಮಾನವ ಇಂದು ಏನೆಲ್ಲಾ ಸಾಧನೆ ಮಾಡಿದ್ದಾನೆ. ಆದರೆ ಪ್ರಕೃತಿಯ ಮುಂದೆ ಕುಬ್ಜ. ತಾನು ತೊಡಿದ ಗುಂಡಿಗೆ ತಾನೇ ಬೀಳುವಂತಾಗಿದೆ!.     

ಇಷ್ಟೆಲ್ಲಾ ಸಮಸ್ಯೆಯ ನಡುವೆ ಎಳನೀರು, ಕಲ್ಲಂಗಡಿ ಹಣ್ಣು , ಕಬ್ಬಿನ ಹಾಲು, ಮೋಸಂಬಿ ಹಾಗೂ ಲಿಂಬು ಜೂಸ್ ಸೇರಿದಂತೆ ನಾನಾ ಹಣ್ಣಿನ ಜೂಸ್‌ಗೆ ಭಾರಿ ಬೇಡಿಕೆ ಉಂಟಾಗಿದೆ.  ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ನಾ ಮೊದಲೇ ಹೇಳಿದಂತೆ ತಂಪು ಪಾನೀಯಗಳನ್ನು ಅಂಗಡಿಯಲ್ಲಿ ಕುಡಿಯುವುದರ ಬದಲು ಮನೆಯಲ್ಲೇ ಮಾಡಿ ಕೊಂಡು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯ. ಸುತ್ತಮುತ್ತ ತೋಟದಲ್ಲಿ ಬೆಳೆದ ಎಳನೀರು ಕಾಯಿಗಳನ್ನು ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಪ್ರಮುಖ ರಸ್ತೆಯಲ್ಲಿ, ದ್ವಿಚಕ್ರವಾಹನದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದಾರೆ. 50 ರೂ.ಗೆ ಒಂದು ಎಳನೀರು ದೊರೆಯುತ್ತಿದೆ. ಒಂದೆಡೆ ವ್ಯಾಪಾರದ ದೃಷ್ಟಿ, ಅವರ ಹೊಟ್ಟೆ ಕೂಡ ತುಂಬಬೇಕಲ್ಲ. ಎಳನೀರು ದೊರೆಯುವ ತೋಟ ಕಡಿಮೆಯಾಗಿದೆ. ಇನ್ನೂ ಬೇಸಿಗೆ ಪ್ರಾರಂಭವಾಗಿಲ್ಲ. ಜನರು ಈಗಾಗಲೇ ಬಿಸಿಲಿನ ಧಗೆಗೆ ನರಕ ಯಾತನೆ ಅನುಭವಿಸಬೇಕಾಗಿದೆ.

ಭೂಮಿ ತಾಯಿಯ ಒಡಲು ಕೊತ ಕೊತನೇ ಕುದಿಯುತ್ತಿದೆ. ನೆಲ ಹಸಿರುಟ್ಟು ಸಂಭ್ರಮಿಸಬೇಕಾಗಿದ್ದ ಈ ಕಾಲದಲ್ಲಿ ಬಿಸಿಲಿನ ಝಳ ಹೆಚ್ಚಿದೆ. ಬಯಲಿನ ಹುಲ್ಲನ್ನು ಮೇಯಬೇಕಾಗಿದ್ದ ಕುರಿ, ಮೇಕೆ ಮತ್ತಿತರ ಜಾನುವಾರುಗಳು ಬಿಸಿಲು ತಾಳಲಾರದೆ ಮರಗಳ ನೆರಳಲ್ಲಿ ಆಶ್ರಯ ಪಡೆಯುತ್ತಿವೆ. ಇನ್ನು ಪ್ರಾಣಿ ಪಕ್ಷಿಗಳಿಗೂ ಕೂಡ ಕುಡಿಯುವ ನೀರಿಲ್ಲ. ನಮ್ಮ ಮನೆಯ ಸುತ್ತಮುತ್ತ ಇರುವ ಪ್ರಾಣಿ- ಪಕ್ಷಿಗಳ ಸ್ಥಿತಿ ಈ ರೀತಿ ಆದರೆ, ಇನ್ನು ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಗತಿ ಏನು?.

ಅನೇಕ ತಾಲ್ಲೂಕಿನಲ್ಲಿ ಬಿತ್ತನೆ ಮಾಡಲಾಗಿದ್ದ ರಾಗಿ ಹೊಲಗಳು ಒಣಗಿವೆ. ಅವರೆ ಹಾಗೂ ತೊಗರಿ ಗಿಡಗಳಲ್ಲಿ ಎಲೆಗಳು ಹಣ್ಣಾಗಿ ಉದುರುತ್ತಿವೆ. ನೆಲಗಡಲೆ ನೆಲದ ಪಾಲಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಬೈಕ್ ಮೇಲೆ ದೂರದ ಊರುಗಳಿಂದ ಹುಲ್ಲು ಸಂಗ್ರಹಿಸಿ ತರುವ ದೃಶ್ಯ ಸಾಮಾನ್ಯವಾಗಿದೆ. ಗ್ರಾಮೀಣ ಮಹಿಳೆಯರಿಗೆ ಜಾನುವಾರು ಪಾಲನೆ ಸವಾಲಾಗಿದೆ. ಬೆಳಿಗ್ಗೆ, ಸಂಜೆ ಬಯಲಿನಲ್ಲಿ ಹುಲ್ಲು ಸಂಗ್ರಹಿಸುವುದೇ ಅವರ ನಿತ್ಯದ ಕಾಯಕ ಎನ್ನುವಂತಾಗಿದೆ. ಮಳೆಗಾಲದಲ್ಲಿ ಹಸಿರು ಅಥವಾ ಒಣ ಮೇವಿನ ಖರೀದಿ ನಡೆಯುತ್ತಿರಲಿಲ್ಲ. ಹೀಗೆ ಸಮಸ್ಯೆಗಳು ಒಂದೇ ಎರಡೇ?. ಈ ಮೇಲ್ಕಂಡ ಎಲ್ಲಾ ಅಂಶಗಳು ರಾಜ್ಯದ ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ನೋವಿನ ಚಿತ್ರಣ ಇದಾಗಿದೆ. 

ಒಣ ಹುಲ್ಲಿನ ದಾಸ್ತಾನು ಮುಗಿದ ಬಳಿಕ ಹುಲ್ಲು ಖರೀದಿ ಪ್ರಕ್ರಿಯೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಆದರೆ ಈಗ ಕೆಲವು ರೈತರು ನೆರೆಯ ಆಂಧ್ರಪ್ರದೇಶದ ಮುಂತಾದ ರಾಜ್ಯ ಗಳಿಂದ ಅಧಿಕ ಬೆಲೆ ಕೊಟ್ಟು ರಾಗಿ ತಾಳು ಖರೀದಿಸಿ ತರುತ್ತಿದ್ದಾರೆ. ಇಷ್ಟಾದರೂ ಹುಲ್ಲು ಸಿಗುತ್ತಿಲ್ಲ. ಈಗ ಸಮಸ್ಯೆ ಮೇಲೆ ಸಮಸ್ಯೆ ಉಂಟಾಗುತ್ತದೆ. 

ವಿದ್ಯುತ್ ಕಣ್ಣಮುಚ್ಚಾಲೆ ಆಟದಿಂದ ನೀರೆತ್ತುವ ಪಂಪ್ಗಳೂ ಕೂಡ ಕೆಲಸ ಮಾಡುತ್ತಿಲ್ಲ.   ಮನೆ ನಲ್ಲಿಗಳಲ್ಲಿ ಬಿಸಿ ನೀರು ಬರುತ್ತಿದೆ. ಮಳೆಗಾಲದಲ್ಲಿಯೇ ಹೀಗಾದರೆ, ಬೇಸಿಗೆ ಎದುರಿಸುವುದು ಹೇಗೆ ಎಂಬುದು ಎಲ್ಲರ ಆತಂಕ.ತಕ್ಷಣ ಬರ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಜಾನುವಾರು ಮೇವಿನ ಸಮಸ್ಯೆ ನೀಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಕಾಡಿಸುತ್ತದೆ.

ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಬಂದಿದೆ.ಹೆಚ್ಚು ನೀರು ಕುಡಿಯುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಬಿಸಿಲ ಶಾಖವನ್ನು ತಪ್ಪಿಸಲು ದೇಹವನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಸಾಧ್ಯವಾದಷ್ಟು ಒಳಾಂಗಣದಲ್ಲಿ, ಉತ್ತಮ ಗಾಳಿ ತಂಪಾದ ಪ್ರದೇಶದಲ್ಲಿರಲೂ ಸೂಚನೆಯನ್ನ ನೀಡಲಾಗಿದೆ.
ನವಜಾತ ಶಿಶುಗಳು ಹಾಗೂ ಗರ್ಭಿಣಿಯರ ಬಗ್ಗೆ ಕಾಳಜಿವಹಿಸುವುದು, ವಯಸ್ಸಾದವರು ಹೊರಗಡೆ ಬರದಂತೆ ನೋಡಿಕೊಳ್ಳುವುದು ಅವರಿಗೆ ಹೆಚ್ಚು ನೀರು ಕುಡಿಯಲು ಸಲಹೆ ಸೂಚನೆ ನೀಡಲಾಗಿದೆ. 
ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಸುತ್ತಾಡುವುದು ನಿಲ್ಲಿಸಿ
ಹೈಡ್ರೇಟೆಡ್ ಆಗಿರಿ

ಬೇಸಿಗೆಯಲ್ಲಿ ನಿಮ್ಮ ದೇಹವು ಹೆಚ್ಚು ಬೆವರುತ್ತದೆ. ನೀವು ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಇದು ಅತ್ಯಗತ್ಯವಾಗಿರುತ್ತದೆ, ಆದ್ದರಿಂದ ನೀವು ಪ್ರತಿದಿನ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ತ್ವಚೆಯನ್ನು ಮೃದುವಾಗಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ಪ್ರತಿದಿನ ನಿಂಬೆ ನೀರು ಅಥವಾ ತಾಜಾ ರಸವನ್ನು ಕುಡಿಯಲು ಶಿಫಾರಸು ಮಾಡಲಾಗಿದೆ. ಬೇಸಿಗೆಯಲ್ಲಿ ಸಾಕಷ್ಟು ರಸಭರಿತವಾದ ಹಣ್ಣುಗಳನ್ನು ತಿನ್ನುವುದು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತದೆ. ಹೊರಗಡೆ ಸಿಗುವ ರೆಡಿ ಜ್ಯೂಸ್ ಗಳನ್ನು ಕುಡಿಯುವುದರ ಬದಲು. ತಾಜಾ ಹಣ್ಣನ್ನು ಕೊಂಡುಕೊಂಡು ಮನೆಯಲ್ಲಿ ಜ್ಯೂಸ್ ಕುಡಿಯುವುದು.     

ಇನ್ನು ಮುಖ್ಯವಾಗಿ ಮಕ್ಕಳಲ್ಲಿ ಅತಿಸಾರ ಭೇದಿ, ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುವ ಸಂಭವ ಇರುತ್ತದೆ ಎಂದು ತಜ್ಞವೈದ್ಯರು ಸಲಹೆ ಸೂಚನೆ ನೀಡಿದ್ದಾರೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಬೆಳಗ್ಗೆ, ಸಂಜೆ ಕೆಲಸ ಮಾಡುವ ಪದ್ಧತಿ ರೂಢಿಸಿಕೊಳ್ಳಿ.  ನೀರನ್ನು ಹೆಚ್ಚಾಗಿ ಸೇವಿಸಬೇಕು. ದ್ರವರೂಪದ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಕರಿದ ಎಣ್ಣೆಯ ಪದಾರ್ಥಗಳನ್ನು ಉಪಯೋಗಿಸದೇ ಇರುವುದು ಆರೋಗ್ಯಕ್ಕೆ ಉತ್ತಮ.  ಒಆರ್‌ಎಸ್‌ ಹೆಚ್ಚಾಗಿ ಉಪಯೋಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಜೀವ ಅಪಾಯ ಸಾಧ್ಯತೆಗಳಿರುತ್ತವೆ. ಈಗಾಗಲೇ ಅನೇಕ ದುರಂತಗಳು ಸಂಭವಿಸುವೆ ಮರುಕಳಿಸುವುದು ಬೇಡ. 

ಆಯುರ್ವೇದವು ಚಿಕಿತ್ಸೆಗಿಂತ ತಡೆಗಟ್ಟುವಿಕೆಯನ್ನು ಒತ್ತಿಹೇಳುತ್ತದೆ ಮತ್ತು ಯಾವುದೇ ಹಾನಿ ಸಂಭವಿಸುವ ಮೊದಲು ನಮ್ಮನ್ನು ನಾವು ನೋಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಬಿಸಿಲಿನ ದಿನಗಳಿಗೆ ಸೂಕ್ತವಾದ ಬಟ್ಟೆಯನ್ನು ಹೇಗೆ ಆರಿಸುವುದು ಮತ್ತು ಒಬ್ಬರ ವೈಯಕ್ತಿಕ ಅಗತ್ಯಗಳನ್ನು ಅವಲಂಬಿಸಿ ಯಾವ ರೀತಿಯ ಸನ್‌ಸ್ಕ್ರೀನ್ ಅನ್ನು ಅನ್ವಯಿಸಬೇಕು ಎಂಬಂತಹ ಪ್ರಾಯೋಗಿಕ ಸಲಹೆಗಳನ್ನು ಚರ್ಚಿಸಲಾಗುವುದು. ತೀವ್ರವಾದ ಸುಟ್ಟಗಾಯಗಳಿಂದ ಉಂಟಾಗುವ ನೋವನ್ನು ನಿವಾರಿಸುವ ನೈಸರ್ಗಿಕ ವಿಧಾನಗಳನ್ನು ಸಹ ಅನ್ವೇಷಿಸಲಾಗುವುದು, ತಲೆಮಾರುಗಳ ಮೂಲಕ ಹಾದುಹೋಗುವ ಸಾಂಪ್ರದಾಯಿಕ ಪರಿಹಾರಗಳನ್ನು ಆಧರಿಸಿದೆ. ಇನ್ನು ಆಯುರ್ವೇದವು ಸೂರ್ಯನ ಬೆಳಕಿಗೆ ನಿಮ್ಮನ್ನು ಒಡ್ಡಿಕೊಳ್ಳುವಾಗ ಜಾಗರೂಕರಾಗಿರಲು ಶಿಫಾರಸು ಮಾಡುತ್ತದೆ, ನೀವು ತೆರೆದಿರುವ ದಿನದ ಸಮಯ ಮತ್ತು ಎಷ್ಟು ಸಮಯದವರೆಗೆ ಮೇಲ್ವಿಚಾರಣೆ ಮಾಡುವುದು ಸೇರಿದಂತೆ. ನ್ಯಾಯೋಚಿತ ಚರ್ಮವನ್ನು ಹೊಂದಿರುವವರಿಗೆ ಅಥವಾ ಬಿಸಿಲು ಬೀಳುವ ಪ್ರವೃತ್ತಿಯನ್ನು ಹೊಂದಿರುವವರಿಗೆ, ಪೀಕ್ ಅವರ್‌ಗಳಲ್ಲಿ ಮುಚ್ಚಿಕೊಳ್ಳುವುದನ್ನು ಶಿಫಾರಸು ಮಾಡಲಾಗುತ್ತದೆ. ಆಯುರ್ವೇದ ವಿಧಾನಗಳು ಹೊರಾಂಗಣದಲ್ಲಿ ಸಮಯ ಕಳೆಯುವ ಮೊದಲು ತೆಂಗಿನ ಎಣ್ಣೆಯಂತಹ ನೈಸರ್ಗಿಕ ತೈಲಗಳನ್ನು ಬಳಸುವುದನ್ನು ಒಳಗೊಂಡಿರುತ್ತದೆ. ಇದು ಚರ್ಮಕ್ಕೆ ಹಾನಿಯುಂಟುಮಾಡುವ ಯು ವಿ ಕಿರಣಗಳನ್ನು ಸುಡುವುದರ ವಿರುದ್ಧ ಹೆಚ್ಚುವರಿ ರಕ್ಷಣಾತ್ಮಕ ಪದರವನ್ನು ರಚಿಸುತ್ತದೆ.

ಒಟ್ಟಿನಲ್ಲಿ ಈ ಬಿಸಿಲಿನ ಬೇಗೆ, ಅತಿವೃಷ್ಟಿ, ಬರ ಇದೆಲ್ಲಾ ಪ್ರಕೃತಿಯ ಒಂದು ಸ್ಯಾಂಪಲ್ ಅಷ್ಟೇ!. ಮುಂಬರುವ ದಿನಗಳಲ್ಲಿ ಇನ್ನೇನು ಸಮಸ್ಯೆಗಳನ್ನು ನಾವು ಎದುರಿಸುತ್ತೇವೋ ಆ ದೇವರಿಗೆ ಗೊತ್ತು. 

ತನ್ನ ದಿನಚರಿಯನ್ನು ನಿತ್ಯ ತಪ್ಪದೇ ಯಾವುದೇ ಒತ್ತಡಕ್ಕೆ ಒಳಗಾಗದೆ ನಿತ್ಯ ಕಾಯಕದಂತೆ ಮಾಡುವ ಪರಿಸರದ ಜೊತೆಗೆ ನಾವು ಸಾಮರಸ್ಯದಿಂದ ಬದುಕಬೇಕು. ಅಂತರ್ಜಲ ಹೆಚ್ಚುವಂತೆ ನೋಡಿಕೊಳ್ಳಬೇಕು. ಹಲವು ಕಡೆ ಇಂಗು ಗುಂಡಿ ತೋಡಿಸಬೇಕು. ಹರಿದು ಹೋಗುವ ನೀರು ನಮ್ಮ ಭೂಮಿಯಲ್ಲೇ ಹೊಲ-ಗದ್ದೆಗಳಲ್ಲಿ ಇಂಗುವಂತೆ ನೋಡಿಕೊಳ್ಳಬೇಕು. ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಕ್ಕೆಲ್ಲ ಅನುದಾನ ಮೀಸಲಿಟ್ಟಿದೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಉಪಯೋಗಿಸಿಕೊಳ್ಳುವಂತಾಗಬೇಕು. ಅರಣ್ಯ ಇಲಾಖೆಯು ಕೂಡ ಹಲವು ಬಾರಿ ಗಿಡಗಳನ್ನು ಉಚಿತವಾಗಿ ನೀಡುತ್ತಿದೆ. ಗಿಡ ಬೆಳೆಸಲು ಸಬ್ಸಿಡಿ ಕೂಡ ಹಣ ನೀಡುತ್ತಿದೆ. ಎಲ್ಲವುಗಳನ್ನು ಉಪಯೋಗಿಸಿಕೊಂಡು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಮನೆಗಳಲ್ಲಿ ನಾವು ನೀರನ್ನು ಮಿತವಾಗಿ ಬಳಸಬೇಕು. ನಾವು ನಮ್ಮ ಮನೆಯಲ್ಲಿ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು. ನಾವು ಬಳಸಿದ ನೀರು ಗಿಡಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಜೊತೆಗೆ ನಮ್ಮ ಮನೆಯ ಸುತ್ತಮುತ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಜಾನುವಾರುಗಳು,  ಪಕ್ಷಿಗಳು ಎಲ್ಲವುಗಳಿಗೂ ಕೂಡ ಅನುಕೂಲವಾಗುತ್ತದೆ. ಅವು ಕೂಡ ನಮ್ಮಂತೆ ನಾವು ಕೇಳಿ ಪಡೆಯುತ್ತೇವೆ ಅವೆಲ್ಲ ಮೂಕ ಪ್ರಾಣಿಗಳು ಪಕ್ಷಿಗಳು, ಕೂಡ ನಮ್ಮ ಪರಿಸರ ಸಮತೋಲನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತೇವೆ. ನಾವು ಬದುಕಿ ಅವುಗಳನ್ನು ಬದುಕಿಸೋಣ. ಇವತ್ತಿನಿಂದಾದರೂ ಕೂಡ ನಾವು ನಮ್ಮ ಸುತ್ತಮುತ್ತ ಹೊಲಗದ್ದೆಗಳಲ್ಲಿ ನಮ್ಮ ಕೈಯಲ್ಲಿ ಎಷ್ಟು ಆಗುತ್ತದೋ ಅಷ್ಟು ಗಿಡಗಳನ್ನು ನೆಡೋಣ. ಪಾಣಿ ಪಕ್ಷಿಗಳಿಗೆ ಆಹಾರದ ಜೊತೆಗೆ ನೀರು ನೀಡೋಣ. 

-ಕಾಳಿಹುಂಡಿ ಶಿವಕುಮಾರ್, ಮೈಸೂರು

6 Responses

 1. MANJURAJ H N says:

  ನಿಮ್ಮ ಆತಂಕ ಬೆರೆತ ಕಾಳಜಿ ಅರ್ಥಪೂರ್ಣ. ವಿಚಾರಪ್ರಚೋದಕ, ಧನ್ಯವಾದಗಳು ಸರ್

 2. Anonymous says:

  Nice

 3. ಕಾಳಜಿಯನ್ನುಉಳ್ಳಂತಹ….ಲೇಖನ ಆ ನಿಟ್ಟಿನಲ್ಲಿ ಬರಯುವ ನಿಮಗೆ ವಂದನೆಗಳು ಸಾರ್

 4. ಶಂಕರಿ ಶರ್ಮ says:

  ಅತ್ಯಂತ ಕಳಕಳಿಯ ಬರಹವು ಚಿಂತನೆಗೆ ಹಚ್ಚುವಂತಿದೆ.
  ಈ ಹಿಂದೆ ನಳನಳಿಸುತ್ತಿದ್ದ ನಿಸರ್ಗವು ಸಕಾಲದಲ್ಲಿ ಮಳೆ ಇಲ್ಲದೆ ಸೊರಗುತ್ತಿದೆ…ಜೀವಿಗಳು ಬಿಸಿಲ ಬೇಗೆಯಿಂದ ಬಸವಳಿದಿವೆ. ಅನಾಹುತ ಸಂಭವಿಸುವ ಮೊದಲೇ ಇದಕ್ಕೆ ಕಾರಣವಾದ ಮಾನವ ಪ್ರಾಣಿಯು ಎಚ್ಚೆತ್ತುಕೊಳ್ಳಬೇಕಿದೆ….

 5. ನಯನ ಬಜಕೂಡ್ಲು says:

  ಇಂದಿನ ವಾಸ್ತವ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದೀರಿ ಸರ್

 6. ಪದ್ಮಾ ಆನಂದ್ says:

  ಕಾಲಕಾಲಕ್ಕೆ ಮಳೆ ಬಾರದಿದ್ದರೆ ಉಂಟಾಗಬಹುದಾದ ತೊಂದರೆ ತಾಪತ್ರಯಗಳನ್ನು ಮನಕ್ಕೆ ನಾಟುವಂತೆ ಕಟಿಟಕೊಟ್ಟಿರುವ ಲೇಖನ. ಸಧ್ಯಕ್ಕೆ ಮಳೆಯಾಗುತ್ತಿರುವುದು ಶುಭಸೂಚನೆ. ಪ್ರಕೃತಿಯನ್ನು ನಾಶಪಡಿಸುವ ಮುನ್ನ ಮನುಷ್ಯನನ್ನು ಯೋಚನೆಗೆ ಹಚ್ಚುವ ಲೇಖನಕ್ಕಾಗಿ ಅಭಿನಂದನೆಗಳು ಶಿವಕುಮಾರ್‌ ಅವರೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: