ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಿಯೆಟ್ನಾಮಿಯರ ಅಸ್ಮಿತೆ Water Puppet Show

ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ
ನೀ ಸೂತ್ರಧಾರಿ, ನಾ ಪಾತ್ರಧಾರಿ
ದಡವ ಸೇರಿಸಯ್ಯ


ಎಂಬ ಚಿತ್ರಗೀತೆಯನ್ನು (ಶೃತಿ ಸೇರಿದಾಗ) ಗುನುಗುತ್ತಾ ವಿಯೆಟ್ನಾಮಿನ ರಾಜಧಾನಿ ಹಾನೋಯ್‌ನ ತಾಂಗ್ ಲಾಂಗ್ ಥಿಯೇಟರ್ (Thong Long Theatre)ನಲ್ಲಿ ನಡೆಯಲಿದ್ದ ವಾಟರ್ ಪಪೆಟ್ ಶೋ ನೋಡಲು ಹೊರಟೆವು. ಪಪೆಟ್ ಶೋ/ ತೊಗಲು ಗೊಂಬೆಯಾಟದ ಹೆಸರನ್ನು ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ, ಆನಂದಿಸಿದ್ದೇವೆ ಅಲ್ಲವೇ? ಆದರೆ ವಾಟರ್ ಪಪೆಟ್ ಶೋನ ಹೆಸರು ಕೇಳಿದಾಗ ಅಚ್ಚರಿಯಾಗಿತ್ತು. ಥಿಯೇಟರ್ ಒಳಹೊಕ್ಕಾಗ ಗ್ಯಾಲರಿಯಲ್ಲಿ ಗೊಂಬೆಯಾಟದ ಸಾಕಷ್ಟು ಚಿತ್ರಗಳನ್ನು ವಿವರಣೆಯೊಂದಿಗೆ ಹಾಕಿದ್ದರು. ಬನ್ನಿ ಈ ನೀರಿನಲ್ಲಿ ಆಡುವ ಗೊಂಬೆಯಾಟದ ಇತಿಹಾಸವನ್ನು ತಿಳಿಯೋಣ ಈ ಆಟವು ಹನ್ನೊಂದನೇ ಶತಮಾನದಲ್ಲಿ ಲೈ ರಾಜವಂಶಸ್ಥರ ಕಾಲದಲ್ಲಿ ಆರಂಭವಾಯಿತೆಂದು ಹೇಳಲಾಗುತ್ತದೆ. ಕೆಂಪು ನದಿಯ ಬಯಲು ಪ್ರದೇಶದ (Red River Delta) ರೈತರು ಭತ್ತದ ಕೊಯ್ಲಾದ ಮೇಲೆ ಸುಗ್ಗಿಯ ಕಾಲದಲ್ಲಿ ಮನರಂಜನೆಗಾಗಿ ಆಡುತ್ತಿದ್ದ ಆಟವಿದು. ಭತ್ತವನ್ನು ಉತ್ತು ಬಿತ್ತಿ, ಬೆಳೆಯನ್ನು ಕಟಾವು ಮಾಡಿಯಾದ ಮೇಲೆಯೇ ರೈತನಿಗೆ ಬಿಡುವು. ಭತ್ತದ ಗದ್ದೆಗಳಲ್ಲಿ ಪಗೋಡಗಳನ್ನು ನಿರ್ಮಿಸಿ, ಅದರ ಮುಂದೆ ನೀರು ನಿಲ್ಲಿಸಿ ಗೊಂಬೆಗಳನ್ನು ಆಡಿಸುತ್ತಾರೆ ಈ ಗೊಂಬೆಯಾಟದ ಪ್ರಸಂಗಗಳು ಅವರ ದಿನನಿತ್ಯದ ಚಟುವಟಿಕೆಗಳಾದ ಮೀನುಗಾರಿಕೆ, ಕೃಷಿ, ಮಕ್ಕಳ ಆಟಪಾಠಗಳು, ಬೇಟೆ, ಬಾತುಕೋಳಿ ಸಾಕಾಣಿಕೆಗಳನ್ನು ಬಿಂಬಿಸುತ್ತವೆ. ಹಾಗೆಯೇ ಜಾನಪದ ಕಥೆಗಳು, ಪೌರಾಣಿಕ ಪ್ರಸಂಗಗಳು, ರಾಜ ವಂಶಸ್ಥರ ಮೆರವಣಿಗೆಗಳನ್ನೂ ಒಳಗೊಂಡಿರುತ್ತವೆ. ಈ ಗೊಂಬೆಯಾಟಗಳು ತಮ್ಮ ಭತ್ತದ ಬೆಳೆಯನ್ನು ಸಂರಕ್ಷಿಸುತ್ತವೆಯೆಂದೂ, ತಮ್ಮನ್ನು ಭೂತ, ಪ್ರೇತಗಳಿಂದ ಕಾಪಾಡುತ್ತವೆಯೆಂದೂ ಜನರು ನಂಬಿದ್ದರು.

ವಿಯೆಟ್ನಾಮೀಯರು ಈ ಗೊಂಬೆಯಾಟವಾಡುವ ಕೌಶಲವನ್ನು ಬಹಳ ರಹಸ್ಯವಾಗಿ ಇಡುತ್ತಿದ್ದರು, ತಮ್ಮ ಕುಟುಂಬದ ಇನ್ನಿತರೇ ಸದಸ್ಯರಿಗೂ ಈ ಆಟವಾಡುವ ಕಲೆಯನ್ನು ಹೇಳಿಕೊಡುತ್ತಿರಲಿಲ್ಲ. ತಮ್ಮ ಗಂಡು ಮಕ್ಕಳಿಗೆ ಮಾತ್ರ ಈ ಆಟವನ್ನು ಕಲಿಸುತ್ತಿದ್ದರು, ಹೆಣ್ಣು ಮಕ್ಕಳಿಗೆ ಕಲಿಸುತ್ತಿರಲಿಲ್ಲ, ಕಾರಣ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ಗಂಡನಿಗೆ ಈ ರಹಸ್ಯವನ್ನು ಬಿಟ್ಟುಕೊಟ್ಟರೆ ಎಂಬ ಆತಂಕ ಅವರಿಗೆ. ಈ ಗೊಂಬೆಯಾಟದ ಕಲೆಯ ಕಲಿಕೆಗೆಂದೇ ಮೂರು ವರ್ಷಗಳನ್ನು ಮೀಸಲಿಡುತ್ತಿದ್ದರು. ಈ ಆಟದಲ್ಲಿ ಬಳಸುವ ಗೊಂಬೆಗಳನ್ನು ಅಂಜೂರದ ಮರದಿಂದ ತಯಾರಿಸಿ ಪಾಲಿಷ್ ಮಾಡುತ್ತಾರೆ. ಈ ಗೊಂಬೆಗಳನ್ನು ನೀರಿನೊಳಗಿರುವ ಉದ್ದನೆಯ ಬೊಂಬಿಗೆ ಕಟ್ಟಿ, ಕೈಗಳಿಗೆ ದಾರಗಳನ್ನು ಕಟ್ಟಿ ಆಟವಾಡಿಸುವರು. ಕೆಲವೊಮ್ಮೆ ಗೊಂಬೆಗಳು ಕುತ್ತಿಗೆ ತಿರುಗಿಸಲು, ಕಾಲೆತ್ತಿ ನೆಗೆಯಲು, ಪಲ್ಟಿ ಹೊಡೆಯಲು ವಿಶೇಷವಾದ ತಂತ್ರಗಾರಿಕೆ ಬಳಸುತ್ತಾರೆ. ಈ ಗೊಂಬೆಗಳನ್ನು ಆಡಿಸುವ ಸೂತ್ರಧಾರರು ಬಿದಿರಿನ ಪರದೆಯ ಹಿಂದೆ ಇರುವ ನೀರಿನಲ್ಲಿಯೇ ನಿಂತು ಈ ಗೊಂಬೆಗಳ ಆಟವಾಡಿಸುತ್ತಾರೆ. ಇವರ ಅದ್ಭುತವಾದ ಕೈಚಳಕ, ಶ್ರದ್ಧೆ, ತನ್ಮಯತೆ ಕಂಡು ಬೆರಗಾಗದವರೇ ಇಲ್ಲ.

ಗೊಂಬೆಯಾಟದ ವಿಸ್ತೃತ ಮಾಹಿತಿಯನ್ನು ಓದುತ್ತಾ ನಾವು ಥಿಯೇಟರ್‌ನ ಒಳಹೊಕ್ಕೆವು. ಥಿಯೇಟರ್‌ನ ವೇದಿಕೆಯ ಭಾಗದಲ್ಲಿ ಆಯತಾಕಾರದ ನೀರಿನ ಕೊಳವಿದ್ದು ಅದರ ಅಕ್ಕಪಕ್ಕದಲ್ಲಿ ಒಂದೆಡೆ ವಾದ್ಯ ನುಡಿಸುವವರೂ ಮತ್ತೊಂದೆಡೆ ಸಂಗೀತಗಾರರರಿದ್ದರು. ನಮ್ಮನ್ನೆಲ್ಲಾ ತಮ್ಮ ಗೊಂಬೆಯಾಟಕ್ಕೆ ಆಹ್ವಾನಿಸಿದ ಮೇಲೆ ಸ್ವಾಗತ ಗೀತೆಯನ್ನು ಹಾಡಿದರು. ಸ್ವಾಗತ ಮಾತ್ರ ಇಂಗ್ಲಿಷ್ ಭಾಷೆಯಲ್ಲಿತ್ತು, ಉಳಿದೆಲ್ಲಾ ಸಂಭಾಷಣೆ, ಗೀತೆಗಳು ವಿಯೆಟ್ನಾಮೀಸ್ ಭಾಷೆಯಲ್ಲಿಯೇ ಇದ್ದುದರಿಂದ ಆ ಗೊಂಬೆಯಾಟವನ್ನು ನೋಡಿಯೇ ಪ್ರಸಂಗವನ್ನು ಅರ್ಥಮಾಡಿಕೊಳ್ಳಬೇಕಾದ ಪರಿಸ್ಥಿತಿ ನಮ್ಮದು. ಮೊದಲಿಗೆ ರಂಗ ಪ್ರವೇಶ ಮಾಡಿದವನು ಸೂತ್ರಧಾರ ತ್ಯೂ (Teu) ಕೊಳದ ಸುತ್ತ ಮುತ್ತ ನಡೆದಾಡುತ್ತಾ, ತನ್ನ ಚಿತ್ರ ವಿಚಿತ್ರ ಭಂಗಿಗಳಿಂದ ಹಾಸ್ಯದ ಹೊನಲನ್ನು ಹರಿಸುತ್ತಾ, ತಾನಾಡುವ ಆಟಗಳ ಬಗ್ಗೆ ಮಾಹಿತಿ ನೀಡುತ್ತಿದ್ದನು. ಮೊದಲ ಆಟ ಕೃಷಿಯಾಧಾರಿತ ಇಬ್ಬರು ಗಂಡಸರು ಕೋಣಗಳನ್ನು ನೇಗಿಲಿಗೆ ಕಟ್ಟಿ ಬೇಸಾಯ ಮಾಡುತ್ತಾ ಸಾಗಿದ ಹಾಗೆ, ನಾಲ್ಕು ಮಂದಿ ಹೆಂಗಸರು ಹಾಡುತ್ತಾ ನಲಿಯುತ್ತಾ ಭತ್ತ ನಾಟಿ ಮಾಡಲು ಸಿದ್ಧರಾಗಿ ಬಂದರು. ಒಂದೆರೆಡು ಕ್ಷಣದಲ್ಲಿ ಭತ್ತದ ನಾಟಿ ಮಾಡಿಯಾಗಿತ್ತು, ಅವರು ತಮ್ಮ ಕಷ್ಟ ಸುಖ ಪರಸ್ಪರ ವಿನಿಮಯ ಮಾಡಿಕೊಳ್ಳುವ ಹೊತ್ತಿಗೆ ಭತ್ತದ ಪೈರು ಬೆಳೆದು ನಿಂತಿತ್ತು. ರೈತರು ಸಂತಸದಿಂದ ಬೆಳೆಯ ಕಟಾವು ಮಾಡಿ, ಚೀಲದಲ್ಲಿ ಹೊತ್ತು ಸಾಗಿದರು. ಹಿನ್ನೆಲೆ ಸಂಗೀತ ಈ ಆಟಕ್ಕೆ ಮೆರಗು ನೀಡಿತ್ತು. ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದರು.

PC: Internet

ಈಗ ಬಾತುಕೋಳಿಗಳ ಸರದಿ, ಎರಡು ಸಾಲು ಬಾತುಕೋಳಿಗಳು ಶಿಸ್ತಿನಿಂದ ಒಂದರ ಹಿಂದೊಂದು ಬಂದು ಅತ್ತಿಂದಿತ್ತ ಇತ್ತಿಂದಿತ್ತ ಓಡೋಡುತ್ತಾ ಕೊಳದ ತುಂಬಾ ನಲಿದಾಡಿದವು. ಕ್ವಾಕ್ ಕ್ವಾಕ್ ಎಂದು ಸದ್ದು ಮಾಡುತ್ತಾ ಸಾಗಿದವು. ಅವುಗಳ ಹಿಂದೆಯೇ ಒಡೆಯರು ಬಂದರು, ಕವಳ ಮೆಲ್ಲುತ್ತಾ ಮಾತುಕತೆಗಳಲ್ಲಿ ತೊಡಗಿದರು, ಮತ್ತೆ ತಮ್ಮ ತಮ್ಮ ಬಾತುಕೋಳಿಗಳನ್ನು ಓಡಿಸುತ್ತಾ ತೆರೆಯ ಹಿಂದೆ ಅದೃಶ್ಯರಾದರು, ಆದರೆ ಅಲ್ಲೊಂದು ಪುಟ್ಟ ಮರಿ ಆಟವಾಡುತ್ತಾ ಬಹು ದೂರ ಬಂದು ಬಿಟ್ಟಿತ್ತು, ಸುತ್ತಮುತ್ತ ನೋಡಿತು, ಹಡೆದವರು, ಸಂಗಾತಿಗಳು ಯಾರೂ ಕಾಣಲಿಲ್ಲ, ಗಾಬರಿಯಿಂದ ಅಲ್ಲಿ ಇಲ್ಲಿ ಓಡಿತು, ಅಷ್ಟರಲ್ಲಿ ಒಡತಿ ಬಂದು ಮರಿಯನ್ನು ಕಾಳಜಿಯಿಂದ ಮನೆಯ ಕಡೆ ಕರೆದುಕೊಂಡು ಹೊರಟಳು. ಮರಿಯ ಆತಂಕ, ಒಡತಿಯ ಕಳವಳ ಹಿನ್ನೆಲೆ ಸಂಗೀತದಲ್ಲಿ ಮನ ಕಲಕುವಂತೆ ಮೂಡಿ ಬಂದಿತ್ತು. ಮತ್ತೊಮ್ಮೆ ಪ್ರೇಕ್ಷಕರ ಜೋರಾದ ಚಪ್ಪಾಳೆ.

ಯಕ್ಷಗಾನದ ಮದ್ದಲೆಯ ವಾದ್ಯದಂತೆ ಕೇಳುತ್ತಿದ್ದ ಹಿನ್ನೆಲೆ ಸಂಗೀತದೊಂದಿಗೆ ಬೆಂಕಿ ಉಗುಳುತ್ತಾ, ನೀರು ಚಿಮ್ಮುತ್ತಾ ರಭಸವಾಗಿ ಬಂದವು ನಾಲ್ಕು ಡ್ರಾಗನ್‌ಗಳು. ಅಬ್ಬಾ ಅವುಗಳ ರೋಷ, ವೈರಿಗಳೊಂದಿಗೆ ಕಾದಾಡುವ ಪರಿ ನೋಡಿ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ಕುಳಿತರು. ಹತ್ತಾರು ನಿಮಿಷ ಕಾದಾಡಿದ ನಂತರವೇ ಒಂದೊಂದಾಗಿ ನೇಪಥ್ಯಕ್ಕೆ ಸರಿದವು. ಎರಡು ಡ್ರಾಗನ್‌ಗಳು ನೀರಿನಲ್ಲಿಯೇ ಮುಳುಗಿದರೆ ಇನ್ನೆರೆಡು ಬಿದಿರಿನ ಪರದೆಯ ಹಿಂದೆ ಸರಿದು ಅದೃಶ್ಯವಾದವು. ಕೆಲವು ಬಾರಿ ಲೇಸರ್ ತಂತ್ರಜ್ಞಾನ ಬಳಸಿ, ಅತ್ಯಾಕರ್ಷಕವಾದ ಬೆಳಕಿನ ಚಿತ್ತಾರವನ್ನೂ ಮೂಡಿಸುವರು. ಹೊಮಳೆಯಂತೆ ಬೀಳುವ ಪಟಾಕಿಗಳು, ಬೆಂಕಿಯಿಂದ ಹೊರಡುವ ಹೊಗೆಯಲ್ಲಿ ಅಲ್ಲೊಂದು ಯಕ್ಷಲೋಕವೇ ನಿರ್ಮಾಣವಾಗಿತ್ತು.

ಬಂದರೋ ಬಂದರು ಮೀನು ಹಿಡಿಯುವ ಬೆಸ್ತರು, ಇಬ್ಬರು ದೋಣಿಯಲ್ಲಿ ಹುಟ್ಟು ಹಾಕುತ್ತಾ ಬಂದರೆ ಮತ್ತಿಬ್ಬರು ತ್ರಿಕೋನಾಕಾರದ ಬುಟ್ಟಿಯಲ್ಲಿ ಮೀನು ಹಿಡಿಯುತ್ತಿದ್ದರು, ಮೀನುಗಳು ಅತ್ತಿಂದಿತ್ತ ಇತ್ತಿಂದಿತ್ತ ಹಾರುತ್ತಿದ್ದವು. ಗಂಡಸರು ಒಮ್ಮೊಮ್ಮೆ ಆ ಬಿದಿರಿನ ಬುಟ್ಟಿಯನ್ನು ತಮ್ಮ ಪ್ರಿಯತಮೆಯ ಮೇಲೆ ಹಾಕಿ ನಗುತ್ತಿದ್ದರು. ಅಲ್ಲಿಯೇ ಅವರ ಸರಸ ವಿರಸ ಎಲ್ಲಾ. ಗಂಡಸರು ಮೀನು ಹಿಡಿದರೆ ಹೆಂಗಸರು ಆ ಮೀನುಗಳನ್ನು ಹೊತ್ತೊಯ್ಯುತ್ತಿದ್ದರು. ಸಾಕಷ್ಟು ಮೀನು ಸಿಕ್ಕ ಮೇಲೆ ನಮಗೆಲ್ಲಾ ವಂದಿಸಿ ಹೊರಟೇ ಬಿಟ್ಟರು. ಪ್ರೇಕ್ಷಕರು ಜೋರಾಗಿ ಶಿಳ್ಳೆ ಹಾಕಿದರು.

ಆಗ ಬಂತು ನೋಡಿ, ಅಂದ ಚೆಂದದ ಪೋಷಾಕು ಧರಿಸಿದ ರಾಜ ರಾಣಿಯರ ಮೆರವಣಿಗೆ, ಮುಂದೆ ರಾಜಭಟರ ಸಾಲು, ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದ ರಾಜ, ಅವರ ಹಿಂದೆ ಪಲ್ಲಕ್ಕಿಯಲ್ಲಿ ಕುಳಿತ ರಾಣಿ , ಅವಳ ಜೊತೆಯಲ್ಲಿ ನಡೆದು ಬರುತ್ತಿರುವ ಸಖಿಯರು. ಈ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಅಕ್ಕಪಕ್ಕದಲ್ಲಿ ನಿಂತ ಪ್ರಜೆಗಳು ತಮ್ಮ ದೊರೆಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಈ ಆಟದ ಹಿನ್ನೆಲೆ ಸಂಗೀತ ಕೇಳಿದ ಮೊಮ್ಮಗ ಯಶೂ, ಅಜ್ಜಿ, ಇದು ಕಾಂತಾರ ಸಿನೆಮಾದ ಸಂಗೀತದಂತೆ ಇದೆ ಎಂದಾಗ ಸಂಗೀತಕ್ಕೆಲ್ಲಿದೆ ನಾಡು ನುಡಿಗಳ ಬೇಲಿಗಳು ಎಂದೆನಿಸಿತ್ತು.

ಇನ್ನೇಕೆ ತಡ, ಮೀನು ಹಿಡಿದಾಯ್ತು, ಭತ್ತದ ಒಕ್ಕಲಾಯ್ತು, ಬಾತುಕೋಳಿಗಳನ್ನು ಸಾಕಿದ್ದಾಯ್ತು, ಅರಸನ ಮೆರವಣಿಗೆಯನ್ನೂ ನೋಡಿದ್ದಾಯ್ತು. ಈಗ ಈ ಶ್ರಮಜೀವಿಗಳು ನಕ್ಕು ನಲಿಯುವ ಸಮಯವಲ್ಲವೇ? ಚೆಂಡಾಡುವ ಇಬ್ಬರು ಬಾಲಕರು, ಆ ಚೆಂಡು ಇವರ ಕೈಗೆ ಸಿಕ್ಕರಲ್ಲವೇ? ಮೇಲೆ ಮೇಲೆ ಪುಟಿಯುತ್ತಿತ್ತು, ಹುಡುಗರು ಚೆಂಡು ಹಿಡಿಯುವ ರಭಸದಲ್ಲಿ ಒಬ್ಬ ಮೇಲೊಬ್ಬರು ಹಾರಿ ಬೀಳುತ್ತಿದ್ದರು. ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕು ನಲಿಯುತ್ತಿದ್ದರು. ಅವರಾಡುತ್ತಿದ್ದ ಭಾಷೆ, ಹಾಡುತ್ತಿದ್ದ ಗೀತೆಗಳು ಎಲ್ಲಾ ವಿಯೆಟ್ನಾಮಿ ಬಾಷೆಯಲ್ಲಿಯೇ, ಆದರೆ ಕಲೆಗೆ ಭಾಷೆಯೆಲ್ಲಿದೆ? ಅವರ ಮಾತಿನ ಧ್ವನಿ, ಗೀತೆಗಳ ರಾಗ ಲಯ ಕೇಳಿಯೇ ಅವರಾಡುತ್ತಿದ್ದ ಆಟಗಳ ಸಾರ ನಮಗೆ ತಿಳಿಯುತ್ತಿತ್ತು.

ಕೊನೆಯ ಅಂಕ ಗೊಂಬೆಯಾಟ ಆಡಿಸಿದ ಕಲಾವಿದರು, ಪರದೆಯ ಹಿಂದಿನಿಂದ ನಮ್ಮ ಮುಂದೆ ಬಂದು ನಿಂತರು. ಅಂತಹ ಅದ್ಭುತ ಕಲಾವಿದರನ್ನು ಕಂಡು ಪ್ರೇಕ್ಷಕರು ಜೋರಾದ ಚಪ್ಪಾಳೆ ಹಾಕಿದರು. ಈ ವಾಟರ್ ಪಪೆಟ್ ಶೋನಲ್ಲಿ ಜನ ಸಾಮಾನ್ಯರ ದಿನ ನಿತ್ಯದ ಬದುಕು, ಅವರ ನೋವು ನಲಿವು ಎಲ್ಲವನ್ನೂ ಮನಮುಟ್ಟುವಂತೆ ಪ್ರದರ್ಶಿಸುತ್ತಾರೆ. ಅವರ ಜನಪದ ಕಥೆಗಳನ್ನೂ, ಪೌರಾಣ ಕ ಪ್ರಸಂಗಗಳನ್ನೂ, ಪರಕೀಯರ ಅಕ್ರಮಣಕ್ಕೆ ತುತ್ತಾದ ವಿಯೆಟ್ನಾಮೀಯರ ಹೋರಾಟವನ್ನೂ ಬಿಂಬಿಸುತ್ತಾರೆ. ಹಲವಾರು ಬಾರಿ ಪರಕೀಯರ ಆಕ್ರಮಣಕ್ಕೆ ತುತ್ತಾದರೂ, ಮತ್ತೆ ಮತ್ತೆ ಫೀನಿಕ್ಸ್‌ನಂತೆ ಮರುಜನ್ಮ ಪಡೆದು ಇವರು ತಮ್ಮ ಕಲೆಯನ್ನೂ, ಸಂಸ್ಕೃತಿಯನ್ನೂ, ಅಸ್ಮಿತೆಯನ್ನೂ ಉಳಿಸಕೊಂಡು ಬಂದಿರುವ ಪರಿಯನ್ನು ಚರ್ಚಿಸುತ್ತಾ ನಮ್ಮ ಹೊಟೇಲ್‌ಗೆ ಹಿಂದಿರುಗಿದೆವು.

ಈ ಬರಹದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40293

(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

7 Responses

 1. ವಾವ್…ತೊಗಲು ಬೊಂಬೆಯಾಟವನ್ನು..ಇಲ್ಲೇ ನಮ್ಮ ಕಣ್ಣಮುಂದೆ ನಡೆಯುತ್ತಿದೆ ಎಂಬಂತೆ..
  ವಿವರಾತ್ಮಕವಾಗಿ…ಪ್ರವಾಸ ಕಥನದಲ್ಲಿ… ನಿರೂಪಿಸಿರುವ ರೀತಿ ಸೊಗಸಾಗಿ ಬಂದಿದೆ..ಗಾಯತ್ರಿ ಮೇಡಂ.. ಅದಕ್ಕೆ ಚಿತ್ರ ವೂ ಪುರಕವಾಗಿ ಬಂದಿದೆ ಧನ್ಯವಾದಗಳು

 2. ನಯನ ಬಜಕೂಡ್ಲು says:

  Nice one

 3. ವಂದನೆಗಳು

 4. Nirmala says:

  Fantastic

 5. ಪದ್ಮಾ ಆನಂದ್ says:

  ಹೊಸದೊಂದು ಕಲೆಯನ್ನು ಮನಮುಟ್ಟುವಂತೆ ಪರಿಚಯಿಸಿದ ಪ್ರವಾಸೀ ಲೇಖನದ ಈ ಮಾಲಿಕೆಯ ಕುಸುಮವೂ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು.

 6. ಶಂಕರಿ ಶರ್ಮ says:

  ನೀರಿನಲ್ಲಿ ಇಂತಹ ಗೊಂಬೆಗಳ ಸುಂದರ ಆಟವೊಂದನ್ನು ವೀಡಿಯೋದಲ್ಲಿ ನೋಡಿದ್ದೆ. ಅದು ಏನೆಂದು ಅರ್ಥವೇ ಆಗಿರಲಿಲ್ಲ. ಈಗ ಗೊತ್ತಾಯಿತು ಬಿಡಿ..! ಸೊಗಸಾದ ನಿರೂಪಣೆಯೊಂದಿಗೆ ಪೂರಕ ಚಿತ್ರ ಮನಸೆಳೆಯಿತು…ಧನ್ಯವಾದಗಳು ಮೇಡಂ.

 7. Padmini Hegde says:

  ಚೆಂದಾದ ನಿರೂಪಣೆ!;

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: