ಅಮ್ಮ
ದಿನವೊಂದು ಸಾಲದು ನಿನ್ನ ಸ್ಮರಿಸಲು
ಯುಗವೊಂದು ಸಾಲದು ನಿನ್ನ ಬಣ್ಣಿಸಲು
ನಿರೀಕ್ಷೆ ಸ್ವಾರ್ಥವಿಲ್ಲದ ಪ್ರೀತಿ ನಿನ್ನದು
ಪರೀಕ್ಷೆ ಫಲಿತಾಂಶವಿಲ್ಲದ ನೀತಿ ಪಾಠವದು
ಹೇಳುವುದಕ್ಕಿಂತ ಹೆಚ್ಚು ಮಾಡಿ ತೋರಿಸಿದ್ದು ನೀನು
ಈ ಬಾಳಲ್ಲಿ ನಮಗೆ ನೀಡಿದ್ದು ಬರೀ ಸವಿ ಜೇನು
ಜೀವನದಲ್ಲಿ ಕಡು ಕಷ್ಟದ ದಿನಗಳ ಕಳೆದರೂ
ಹೆಜ್ಜೆ ಹೆಜ್ಜೆಗೂ ನಿಂದನೆ ನಿಷ್ಠುರಗಳ ಉಂಡರೂ
ಯಾರನ್ನು ದೂಷಿಸದ ಸ್ಥಿತ ಪ್ರಜ್ಞೆಯ ಮೂರ್ತರೂಪವೇ
ದ್ವೇಷವನ್ನು ಸಾಧಿಸದ ಕ್ಷಮಾಗುಣದ ಸಗುಣಾಕರವೇ
ಮನೆಗೆ ಬಂದವರಲ್ಲಿ ಭೇದ ಭಾವ ಮಾಡದ
ಬಂಧು ಬಾಂಧವರಲ್ಲಿ ದೋಷ ಹುಡುಕದ
ಧನಾತ್ಮಕ ಮನೋಭಾವದ ಖನಿಯೇ
ಭರಪೂರ ಒಲವು ತುಂಬಿದ ಮಾತೃಭಾವವೇ
ತರ್ಕಬದ್ಧ ಆಧಾರದ ಮೇಲೆ ಈ ಬದುಕ ಕಟ್ಟಿ
ಶಿಸ್ತುಬದ್ಧ ಜೀವನದ ಮಹಲು ನಿರ್ಮಿಸಿದವಳೇ
ಹಮ್ಮು ಬಿಮ್ಮು ಇಲ್ಲದ ಸರಳ ಸಜ್ಜನಳೇ
ದೇವರು ದೈವವೆಂದು ನಿನ್ನ ದೂರವಿಡುವುದಿಲ್ಲ ನಾನು
ಎನ್ನ ಆತ್ಮಕ್ಕೆ ಹತ್ತಿರವಾದ ಪರಮಾಪ್ತ ಗೆಳತಿ ನೀನು
ನಿನ್ನ ಮಡಿಲಲಿ ಮಗುವಾಗೀ ಮನದಣಿಯೇ ಮಾತನಾಡುವಾಸೆ
ನಿನ್ನ ಕಂಗಳ ಕಡಲಲಿ ಹಾಗೇ ಕಳೆದುಹೋಗುವಾಸೆ
ಎಷ್ಟು ಜನ್ಮವೆತ್ತಿದರೂ ನನ್ನ ನಿನ್ನ ನಂಟು ಹೀಗೆ ಇರಲಿ
ನಿನ್ನ ಮಗುವಾಗಿ ಪಡೆದು ಮುದ್ದಿಸುವ ಭಾಗ್ಯ ನನಗಿರಲಿ
ಆಗಲಾದರೂ ನಿನ್ನ ಋಣ ತೀರಿಸುವ ಅವಕಾಶ ಜಾರದಿರಲಿ
–ಕೆ.ಎಂ ಶರಣಬಸವೇಶ
ಅಮ್ಮನ…ವ್ಯಕ್ತಿತ್ವದ ಅನಾವರಣ.. ಹಾಗೇ…ನನಗೆ ಮಗಳಾಗಿ ಹುಟ್ಟಿಬಾ..ಆಮೂಲಕ ನಾನು ನಿಮ್ಮ..ಋಣವನ್ನು ತೀರಿಸುವೆ ಎಂಬ ಬಯಕೆಯನ್ನು… ಕವಿತೆಯ ಮೂಲಕ ಅನಾವರಣ ಗೊಳಿಸಿರುವ ರೀತಿ ಚೆನ್ನಾಗಿದೆ… ಸಾರ್..
ಸೊಗಸಾಗಿದೆ ಕವನ.
ಧನ್ಯವಾದಗಳು ನಾಗರತ್ನ ಹಾಗೂ ನಯನ ಬಜಕೂಡ್ಲು ಮೇಡಂ ಗೆ
ಆಗಸದಷ್ಟು ವಿಶಾಲತೆಯನ್ನು ಹೊಂದಿದ ಅಮ್ಮನ ಪ್ರೀತಿಯದು ಎಷ್ಟು ಬಣ್ಣಿಸಿದರೂ ತಣಿಯದ ಅಕ್ಷಯ ಪಾತ್ರೆ. ಸುಂದರ ಕವಿತೆ.
ಅಮ್ಮನ ಮೇಲಿನ ಅಗಣಿತ ಪ್ರೀತಿಯು, ಭಾವಪೂರ್ಣ ಕವನದ ರೂಪದಲ್ಲಿ ಮನಮುಟ್ಟಿತು…ಮನತಟ್ಟಿತು…ಧನ್ಯವಾದಗಳು.
ಧನ್ಯವಾದಗಳು ಪದ್ಮಾಆನಂದ್ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ