ಹಿಮದ ನನಸು !

Share Button

ನನಗೆ ಮೊದಲು ಹಿಮದ ಪರಿಚಯ ಆಗಿದ್ದು, ಪ್ರತಿ ಶುಕ್ರವಾರದಂದು ರಾತ್ರಿ ಎಂಟು ಗಂಟೆಗೆ DD ಯಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಹಾರ್ ನಿಂದ. ಆಗ ನನಗೆ ಸುಮಾರು ಏಳು – ಎಂಟು  ವರ್ಷವಿರಬೇಕು. ಪ್ರತಿ ಶುಕ್ರವಾರದಂದು ರಾತ್ರಿ ಎಂಟು ಗಂಟೆಗೆ ಎದುರು ಮನೆಯ ಆಶಾ ಅಂಕಲ್ ( ಆಶಕ್ಕ ನ ಅಪ್ಪ ಆಶಾ ಅಂಕಲ್ ಆಗಿದ್ದರು ನನ್ನ ಬಾಯಲ್ಲಿ. ನಾ ದೊಡ್ಡವಳಗೊವರೆಗೂ ಅವರ ಹೆಸರು ಶ್ರೀನಿವಾಸಮೂರ್ತಿ ಅಂತ ಗೊತ್ತೇ ಇರಲಿಲ್ಲ. ಕಡೆಗೆ ಎಲ್ಲರ ಬಾಯಲ್ಲೂ ಅವರು ಆಶಾ ಅಂಕಲ್ ಆಗಿದ್ದರು ) , ಡ್ಯಾಶ್ …( ದರ್ಶಿನಿ short form  ಡಾಷ್ ಆಗಿತ್ತು ) ಬೇಗ ಬಾ, ಚಿತ್ರಹಾರ್ ಶುರು ಆಯಿತು ಅಂತ ಕೂಗುತ್ತಿದ್ದರು. ನಾನು ಎದ್ದನೋ ಬಿದ್ದನೋ ಅಂತ ಓಡಿ ಹೋಗುತ್ತಿದ್ದೆ. ಚಿತ್ರಹಾರ್ ನಲ್ಲಿ ಬರುವ  ‘ಕಾಶ್ಮೀರ್ ಕಿ ಕಲಿ’  ಸಿನಿಮಾದ ಹಾಡುಗಳಲ್ಲಿ ಹಿಮದಿಂದ ಆವೃತವಾದ ಪರ್ವತಗಳು, ದಾಲ್ ಲೇಕ್ , ಶಿಕಾರಗಳು ,ಎತ್ತರವಾದ ಶಿಖರಗಳು, ಪೈನ್ ಮರಗಳು,  ಸುಂದರವಾದ ಹೂವುಗಳು……. ಹಾಡು ಎಷ್ಟು ಅರ್ಥವಾಗುತ್ತಿತ್ತೋ ಏನೋ, ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ನಾನು ಕಾಶ್ಮೀರದಲ್ಲಿ ಹಿಮದಲ್ಲಿ ಆಟವಾಡುವ ಹಾಗೆ ಕಲ್ಪನೆಯಂತೂ ಬರುತ್ತಿತ್ತು. 

ನಾನು ಎದುರು ಮನೆಗೆ ಟಿವಿ ನೋಡುವುದಕ್ಕೆ  ಓಡುವುದನ್ನು ನೋಡಿ ಅಪ್ಪ solidaire ಟಿವಿ ತಂದರು. DD ಯಲ್ಲಿ ಮಕ್ಕಳ ಕಥೆಗಳು ಪ್ರಸಾರವಾಗುತ್ತಿದ್ದವು .. ಅದರಲ್ಲಿ ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್ ನನ್ನನ್ನು ಸಿಕ್ಕಾಪಟ್ಟೆ ಆಕರ್ಷಿಸಿತ್ತು. ನಾನೇ ಸ್ನೋ ವೈಟ್ ಆಗಿದ್ದರೆ ಹಿಮದಲ್ಲಿ ಎಷ್ಟು ಆಡಬಹುದಿತ್ತು … ಕನಸಿನಲ್ಲೂ ನಾನು ಸ್ನೋ ವೈಟ್ಎ…. ನನಗೆ ಒಂಬತ್ತು ವರ್ಷವಾದಾಗ ಅಪ್ಪ, OLN , ರಾಜು ಅಂಕಲ್ ಇನ್ನಿತರ ಸ್ನೇಹಿತರು ಕೂಡಿ ಹಿಮಾಲಯಕ್ಕೆ ಟ್ರೆಕಿಂಗ್ ಹೊರಟರು. ಲಡಾಖ್ ಕಡೆಯಿಂದ ಹಿಮಾಲಯ ಹತ್ತೋ , ಒಂದು ತಿಂಗಳ ಟ್ರೆಕಿಂಗ್ ಅದು. ಅಮ್ಮ ಹೋಗಲು ಒಪ್ಪಲಿಲ್ಲ. ನಾನು , ಅಮ್ಮ ಇಬ್ಬರೇ ಒಂದು ತಿಂಗಳು ಇರಬೇಕಿತ್ತು. ಅಪ್ಪನ ಇತರ ಸ್ನೇಹಿತರು ನಾವು ನೋಡಿಕೊಳ್ಳುತೇವೆ ಇವರನ್ನು, ನೀವು ಹೋಗಿ ಬನ್ನಿ ಎಂದು ಆಶ್ವಾಸನೆ ಇತ್ತರು. ಸರಿ ಜೂನ್ – ಜುಲೈ ಇರಬಹುದು. ಟ್ರೆಕಿಂಗ್ ಗೆ ಬೇಕಾಗುವ ಸಾಮಾನುಗಳ ಶಾಪಿಂಗ್ ಆಯಿತು. ನಾನು ಪ್ರತಿ ದಿನ ಅಪ್ಪನಿಗೆ ಹೇಳುತ್ತಿದ್ದೆ, ಮರೆಯದೆ ಹಿಮ ತೆಗೆದುಕೊಂಡು ಬಾ. ಅಪ್ಪನೂ  ಹೇಳುತ್ತಿದ್ದರು, ಖಂಡಿತ ತರುತ್ತೇನೆ. ಒಂದು ದೊಡ್ಡ ಕವರ್ ಗೆ ಹಾಕಿ ತರುತ್ತೇನೆ. ನೀನು ಸ್ಕೂಲಿಂದ ಬರೋದ್ರೊಳಗೆ ಹಿಮ ತರುತ್ತೀನಿ. ಅಪ್ಪನ ಟ್ರೆಕಿಂಗ್ ಶುರು ಆಯಿತು. ಅಮ್ಮನಿಗೆ ಕೋಪ, ಒಂದು ತಿಂಗಳು ನಮ್ಮನ್ನು ಬಿಟ್ಟು ಹೋದರಲ್ಲ ಅಂತ. ನನಗೋ ಖುಷಿಯೋ ಖುಷಿ … ಅಪ್ಪ ಹಿಮ ತರುತ್ತಾರೆ, ನಾನು ಕೈಯಲ್ಲಿ ಅದನ್ನು ಹಿಡಿಯಬಹುದು … 

ಒಂದು ತಿಂಗಳಾಯಿತು ಅಪ್ಪ ಬರುವ ದಿನ ಬಂತು. ಅಮ್ಮನಿಗೆ, ಅಮ್ಮನ ಅಜ್ಜಿಯ ಆರೋಗ್ಯ ತೀರಾ ಹದಗೆಟ್ಟಿದೆ, ಅಡ್ಮಿಟ್ ಮಾಡಿದ್ದೇವೆ  ಬೇಗ ಬಾ ಅಂತ ಫೋನ್ ಬಂತು.ಅಮ್ಮ ರಾತ್ರಿ ಮಲಗೋದಿಕ್ಕೆ ನನ್ನ  ಜೊತೆ ನನ್ನ ಸ್ನೇಹಿತೆ ಅಪರ್ಣಳನ್ನು ಬಿಟ್ಟು, ಬೆಳೆಗ್ಗೆ ಬೇಗ ಬರುವೆ ರಾತ್ರಿ ಅಪ್ಪ ಬರುತ್ತೆ, ಎಂದು ಹೇಳಿ ಹೋದರು. ನಾನು ಅಪರ್ಣ ಇಬ್ಬರು ಮಲಗಿದ್ದೆವು. ಬೆಳಗಿನ ಜಾವ ಅಪರ್ಣ, ನನ್ನ ಎಬ್ಬಿಸಿದಳು .. ಯಾರೋ ಕಳ್ಳ ಬಂದಿದ್ದಾನೆ ಬೇಗ ಏಳು … ನಾನು ಗಾಬರಿಯಾಗಿ ಎದ್ದೆ, ನೋಡಿದರೆ ಯಾರೋ ಗಡ್ಡದ ಕಳ್ಳ ನನ್ನ ಪಕ್ಕಾನೇ ಮಲಗಿದ್ದಾನೆ. ಏನೇ ಮಾಡೋದು ಈಗ ,ಪಕ್ಕ ಬೇರೆ ಬಂದಿದಾನೆ ಎಂದು ಹೆದರಿ .. ನಿಧಾನ ಹೋಗಿ ಟಾರ್ಚ್ ತಗೊಂಡು ಬಂದೆ. ಟಾರ್ಚ್ ಬೆಳಕಲ್ಲಿ ನೋಡಿದರೆ ಅಪ್ಪ! ಗಡ್ಡ ಮೀಸೆ ಎಲ್ಲ ಬೆಳೆದಿದೆ. ಮುಖ ಎಲ್ಲ ಟ್ಯಾನ್ ಆಗಿದೆ. ನನಗೋ  ಖುಷಿಯೋ ಖುಷಿ. ಅಪ್ಪ ಹಿಮ ತಂದಿರಬಹುದು ! ಓಡಿ ಹೋಗಿ ದೊಡ್ಡ ಟ್ರೆಕಿಂಗ್ ಬ್ಯಾಗನ್ನು ಓಪನ್ ಮಾಡಲು ಶುರು ಮಾಡಿದೆ… ಏನೇನೋ ಆಚೆ ಬಂತು. ಅಪ್ಪ ಎದ್ದು ಬಂದರು. ಮೊದಲ ಬಾರಿಗೆ ಗಡ್ಡ ಮೀಸೆ ಬಿಟ್ಟಿದ್ದು ಅವರು. ಗಡ್ಡವನ್ನು ಮುಟ್ಟಿ ನೋಡಿ, ಇದು ಬೇಡ, ನನಗೆ ಇಷ್ಟವಿಲ್ಲ. ಮೊದಲು ಬೋಳಿಸು ಅಂದು ಬ್ಯಾಗನ್ನು ಬಗೆದು ಬಗೆದು ನೋಡತೊಡಗಿದೆ . ಅಪ್ಪ ನಕ್ಕು ಆಗ್ರಾದಿಂದ ತಂದಿದ್ದ ಹೇರ್ ಕ್ಲಿಪ್ , ಉಲ್ಲನ್ ಸ್ಕರ್ಟ್ಸ್. ಶಾಲುಗಳು, ಹಿಮಾಲಯದ ತಪ್ಪಲಿನ ಜನರು ಕೈಯಲ್ಲಿ ಹೆಣೆದ ಹುಲ್ಲಿನ ಚಪ್ಪಲಿ, ಎಲ್ಲ ತೋರಿಸುತ್ತಿದ್ದರು, ಬ್ಯಾಗಿನಿಂದ  ಏನೇನೋ ಆಚೆ ಬರುತ್ತಿದೆ …. ಆದರೆ ನಾನು ಹುಡುಕುತ್ತಿದ್ದ ಹಿಮದ ಕವರ್ರು ಬರಲೇ ಇಲ್ಲ. ನೀನು ಹಿಮ ತರುತ್ತೇನೆ ಅಂದಿದ್ದೆ, ಸಿಗುತ್ತಾನೆ ಇಲ್ಲವಲ್ಲ … ಅಪ್ಪನ ಮುಖ ನೋಡಿದೆ. ಅಪ್ಪ ಹೇಳಿದರು, ತರುವುದಕ್ಕೆ ಕವರ್ರು ರೆಡಿ ಇಟ್ಟುಕ್ಕೊಂಡಿದ್ದೆ. ಆದರೆ ಹತ್ತಿರದಿಂದ ಹಿಮ ಎಷ್ಟು ಗಲೀಜು  ಆಗಿತ್ತು ಅಂದ್ರೆ , ನೀನಂತೂ ಕೈಯಲ್ಲೇ ಮುಟ್ಟುತ್ತಿರಲಿಲ್ಲ. ಟಿವಿ ಯಲ್ಲಿ ಕಾಣುವ ಹಾಗೆ ಕ್ಲೀನ್ ಆಗಿ ಬೆಳ್ಳಗೆ ಇರಲಿಲ್ಲ. ಕುದುರೆ, ಕುರಿಗಳ ಕಕ್ಕ ಏನೇನೋ ಇತ್ತು. ಅದಿಕ್ಕೆ ಬಿಟ್ಟು ಬಂದೆ. ನೀ ದೊಡ್ಡವಳಾದಾಗ  ನೀನೆ ಹೋಗಿ ನೋಡಿಕೊಂಡು ಬಾ… ದೂರದಿಂದ  ಅಷ್ಟೇ ಬೆಳ್ಳಗೆ ಕಾಣುವುದು. ಹತ್ತಿರದಿಂದ ಚೆನ್ನಾಗಿ  ಕಾಣಲಿಲ್ಲ  ಅಂದು, ನೋಡು ನಿಂಗೆ ಪೌಡರ್ ಹಾಕ್ಕೊಳೋಕೆ ಮಾರ್ಬಲ್ ದು ಬಾಕ್ಸ್ ತಂದಿದೀನಿ. ಹೇರ್ ಕ್ಲಿಪ್ ನೋಡು .. ತಾಜ್ ಮಹಲ್ ಹತ್ತಿರ ತಂದೆ, ಇನ್ನೂ  ಏನೇನೋ  ತೋರಿಸಿದರು. ನಂತರದಲ್ಲಿ, ಹಿಮಾಲಯದ ಫೋಟೋಗಳನ್ನು ತೋರಿಸಿ ನೋಡಿದ್ಯಾ ಎಷ್ಟು ಗಲೀಜು ಇದೆ. ಅದಿಕ್ಕೆ ತರಲಿಲ್ಲ ಅಂದರು. ನನಗು ಹೌದು ಎನ್ನಿಸಿತು. ನಿಧಾನವಾಗಿ ಹಿಮ ಮರೆತೇ ಹೋಯಿತು. ಆದರೆ ಹಿಮದಲ್ಲಿ ಆಡುವ ಆಸೆ, ಮುಟ್ಟುವ ಆಸೆಯಂತೂ ಇದ್ದೆ ಇತ್ತು.

ನಾ ನಿಜವಾದ ಹಿಮವನ್ನು ಕೈಯಲ್ಲಿ ಮುಟ್ಟುವುದಕ್ಕೆ ಇಷ್ಟು ವರ್ಷ ಬೇಕಾಯಿತು. ಬೆಂಗಳೂರಿನ ಏರ್ಪೋರ್ಟ್ನಲ್ಲೇ  ಏನೋ ಎಗ್ಸೈಟ್ ಮೆಂಟ್. ಆಹಾ ! ಇನ್ನೇನು ಹಿಮ ನೋಡುವ, ಮುಟ್ಟುವ ಟೈಮ್ ಬಂದೆ ಬಿಟ್ಟಿದೆ. ಶ್ರೀನಗರದ ಮೇಲೆ ವಿಮಾನ ಹಾರುವಾಗ ಕೆಳಗೆ ಹಿಮಾಚ್ಚಾದಿತ ಪರ್ವತಗಳ ಸುಂದರ ನೋಟ ! ವಿಮಾನದ AC  ಮೈನಸ್ 10 ಡಿಗ್ರೀಸ್ಗೆ ಹೋದ ಹಾಗೆ ಕಲ್ಪನೆ. ಏರ್ ಹೋಸ್ಟೆಸ್ ಬೇರೆ ಹೇಳಿದಳು , ಶ್ರೀನಗರದಲ್ಲಿ ಲ್ಯಾಂಡ್ ಆಗೋ ಮೊದಲು ಜಾಕೆಟ್ ಹಾಕಿಕೊಳ್ಳಿ. ಸಿಕ್ಕಾಪಟ್ಟೆ ಚಳಿ ಇರುತ್ತೆ. ಬೆಂಗಳೂರಿನ ಸೆಖೆಯಿಂದ ಬೇಸತ್ತ ನಾನು ಮೈನಸ್ 20 ಇದ್ದರು ತಡೆಯುವೆ    ಅಂದುಕೊಂಡೆ  … ನನ್ನ ಯೋಚನೆಗೆ ನಗು ಬಂತು.  ಅಂತೂ ಕಾಶ್ಮೀರಿಗೆ ಬಂದೆವು. ಯಾವಾಗ ಹಿಮವನ್ನು ಮುಟ್ಟುವೆವೋ ಎಂಬ ಕಾತರ. ಮಾರನೇ ದಿನ ನಾವು ಹೊರಟಿದ್ದು Thajiwas  ಗ್ಲೇಸಿಯರ್ ಗೆ. ಸಿಂಧು ನದಿ ಅಲ್ಲೇ ಹರಿಯುವುದು. ಜಾಗ್ರಫಿಯಲ್ಲಿ ಮಾತ್ರ ಪರಿಚಯವಾದ ಈ ನದಿಯನ್ನು ಮುಟ್ಟಿದ್ದೆ ಒಂದು ಆನಂದ. ಆದರೆ ಹಿಮ ಮುಟ್ಟುವುದಕ್ಕೆ, ವಾಸನೆಯಿರುವ ಬಡಕಲು ಕುದುರೆಯ ಮೇಲೆ ಹೋಗಲು ಅಷ್ಟೇನೂ ಇಷ್ಟವಿರಲಿಲ್ಲ. ಹಿಮದ  ಆಸೆಗೆ ಕುದುರೆ  ಹತ್ತಿ ಏಳು ಕಿಲೋಮೀಟರು ಹೋದೆವು. ಎಲ್ಲಿ ಬಿದ್ದೆ ಹೋಗುತ್ತೀನಿ ಎಂದು ಭಯ. ಕುದುರೆ ಹಿಡಿದುಕೊಳ್ಳುವ ಹುಡುಗ ಪದೇ ಪದೇ ಕುದುರೆ ಬಿಟ್ಟು ಹೋಗುತ್ತಿದ್ದ. ಗೊತ್ತಿದ್ದ ಹಿಂದಿಯನ್ನೆಲ್ಲ ಬಳಸಿ  ಹುಡುಗನನ್ನು ಬೈದು ಬೈದು ನನ್ನ ಧ್ವನಿ ಬದಲಾಗತೊಡಗಿತ್ತು. ನಾನು ಬೈದರೆ ಕುದುರೆಯನ್ನು ಜೋರಾಗಿ ಓಡಿಸುವನು. ಮಕ್ಕಳು ನನ್ನ ಅವಸ್ಥೆ ನೋಡಿ ಬಿದ್ದು ಬಿದ್ದು ನಗೋದು. ನಮ್ಮ ಜೊತೆ ಬಂದ ಸ್ನೇಹಿತರ ಮಗಳು ನಿಹಾರಿಕಾಗೆ ಹಿಂದಿಯ ಗಂಧ ಗಾಳಿ ಇಲ್ಲದೆ, ಕುದುರೆಯನ್ನು ಇಂಗ್ಲಿಷ್ನಲ್ಲೇ helloo hellooo ಎಂದು ಸರಿ ದಾರಿಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಹತ್ತಿದಳು. ಕುದುರೆಗೆಲ್ಲಿಂದ ಇಂಗ್ಲಿಷ್ ಬರುವುದು? ಕಾಶ್ಮೀರದ ಕುದುರೆಗೆ, ಹಿಂದಿ- ಕಾಶ್ಮೀರಿ ಮಾತ್ರ ಗೊತ್ತಿದ್ದುದು. ನಿಹಾರಿಕಾಗೆ ಈ ಎರಡು ಭಾಷೆಯ ಗಾಳಿಯೂ ಸೋಕಿಲ್ಲ. ಅವಳ ಕುದುರೆಯ ಹೆಸರು Deadbody. ತೀರಾ ಬಡಕಲು ಅದು. ನಮ್ಮಿಬ್ಬರ ಅರಚಾಟಕ್ಕೆ ಇಬ್ಬರ ಕುದುರೆಗಳು ಹೆದರಿ ಸರಿ ದಾರಿ ಬಿಟ್ಟು , ದೊಡ್ಡ ದೊಡ್ಡ ಬಂಡೆಗಳನ್ನು ಹತ್ತಲು ಶುರು ಮಾಡಿದವು. ಹಾಂ … ನನ್ನ ಕುದುರೆಯ ಹೆಸರು ಬಾಝಿಗರ್, ಇರುವ ಕುದುರೆಗಳಲ್ಲೇ ಸ್ವಲ್ಪ ದಷ್ಟ ಪುಷ್ಟವಾಗಿತ್ತು. ಅದು senior most ಅಂಡ್ experienced ಕುದುರೆಯಂತೆ. ಈ ಮಾತನ್ನು ಕುದುರೆ ಮಾಲೀಕರು ಎಲ್ಲ ಕುದುರೆಗಳಿಗೆ ಹೇಳಿ ಹೇಳಿ ನಮ್ಮನ್ನು ಮಂಗ ಮಾಡಿದ್ದರು. ನನ್ನ ಹಿಂದೆ ಬರುತ್ತಿದ್ದ ಮಗಳ ಕುದುರೆ ‘ಪುಷ್ಪ’ ಯಾಕೋ ಏನೋ ನನ್ನ ಬಲಗಾಲನ್ನು ನೆಕ್ಕಲು ಶುರು  ಮಾಡಿತು. ನಾನೋ  ಭಯದಲ್ಲಿ  ಕೂಗಿದ್ದೇ ಕೂಗಿದ್ದು. ”ಈ ಪ್ಯಾಂಟನ್ನು ನಾನು ಇನ್ನು ಜೀವಮಾನದಲ್ಲಿ ಹಾಕೋಲ್ಲ.. ಅರೇ ಭಯ್ಯಾ.. ಪಕಡಓ  ಇಸೇ .. ” ಫರ್ಹಾನ್ ಜೋರಾಗಿ ನಗುತ್ತಾ ”ವೊ ಆಪ್ ಸೆ ಪ್ಯಾರ್ ಕರ್ತಾ ಹೈ ಮೇಡಂ ಜಿ” ಎಂದ. ಬಾಝಿಗರ್ ಮತ್ತು ಪುಷ್ಪ ಅಣ್ಣ -ತಮ್ಮ ಅಂತೇ.  ಅದಕ್ಕೆ ಅದು ನನ್ನ ಹತ್ತಿರ ಬಂದು ನೆಕ್ಕುತ್ತಿರುವುದು ಎಂದ ಫರ್ಹಾನ್. ನಾನು ಭಯದಲ್ಲಿ ಸಾಯುತ್ತಿದ್ದರೆ, ಮಿಕ್ಕವಿರಿಗೆಲ್ಲ ನಗು.  ಇನ್ನು ಕುದುರೆಗಳಿಗೆ ಅದರ ಮಾಲೀಕರಿಗೆ ಬೈದು ಉಪಯೋಗವಿಲ್ಲ ,  ಕಡೆಗೆ ಬೈದರೆ ಇವನು ಜೋರಾಗಿ ಕುದುರೆ ಓಡಿಸುತ್ತಾನೆ ಅಂತ ಗೊತ್ತಾಯಿತು. ಅದೇನಾಗುತ್ತೋ ಆಗಲಿ, ಜಾಸ್ತಿ ಎಂದರೆ ಕೆಳಗೆ ಬೀಳಬಹುದು ಎಂದುಕೊಂಡು ,ಬಾಯಿಮುಚ್ಚಿ ಕಣ್ಣುಮುಚ್ಚಿ ಕೂತೆ. ಗಂಡ – ಮಕ್ಕಳು ಜೋರಾಗಿ ಕೂಗಿದರು… ಅಮ್ಮ ಓಪನ್ ಯುವರ್ ಐಯ್ಸ್ ! ಯು ವಿಲ್ ಸೀ ದಿ ಹೆವನ್ ! ಕಣ್ಣು ಬಿಟ್ಟೆ !!! ದೇವರೇ ನೀ ಇರೋದು ನಿಜಾನಾ, ಇಷ್ಟು ಸೌಂದರ್ಯವಾ! ಆ ಸೌಂದರ್ಯ ಹೇಳತೀರದು. ಯಾವ ಕ್ಯಾಮೆರವಾಗಲಿ, ಕಣ್ಣಾಗಲಿ ಹಿಡಿದಿಡಲಾಗದ ಸೌಂದರ್ಯ ! ಜೀವನ ಸಾರ್ಥಕ ಎನ್ನಿಸಿತು ! . ಎತ್ತರದ  ಪರ್ವತಗಳ ಮೇಲೆ  ಬಿಳಿ ಬಣ್ಣದ ಸ್ಯಾಟಿನ್ ನ ದೊಡ್ಡ ಸೀರೆ ಯನ್ನು ಹಾಸಿದಂತೆ ಕಾಣುತ್ತಿತ್ತು. ಅದರ ಮೇಲಿಂದ ಬೀಸುವ ತಣ್ಣನೆಯ ಗಾಳಿ, ತಿಳಿ ಮೋಡ ಗಳು ನಮ್ಮ ಮುಖಕ್ಕೆ ತಣ್ಣನೆಯ ಮುತ್ತಿಟ್ಟು , ಕಚಗುಳಿಯಿಟ್ಟು ಮುಂದಕ್ಕೆ ಓಡುತ್ತಿತ್ತು. ಸಣ್ಣಗೆ ಮಳೆಯೂ ಬರುತ್ತಿತ್ತು. ‘ಕಾಶ್ಮೀರ್ ಕಿ ಕಲಿ’ ಯ ಶರ್ಮಿಳಾ ಟಾಗೋರ್ ನಾನೇ ಈಗ ! ನಮ್ಮ ಅದೃಷ್ಟಕ್ಕೆ ಹಿಮವನ್ನು ಮುಟ್ಟುವ ವೇಳೆಗೆ ಮಳೆ ಮಾಯವಾಗಿ ಬಿಸಿಲು ಬಂತು. ಕ್ಷಣ ಕ್ಷಣಕ್ಕೂ ಹವಾಮಾನದಲ್ಲಿ ಬದಲಾವಣೆ ಆಗುತ್ತಲೇ ಇತ್ತು. ಕುದುರೆಯಿಂದ  ಇಳಿಯುವಾಗ ನನ್ನ ಮಗಳು ‘ಸಿರಿ’ ಕೆಳಗೆ ಬಿದ್ದು, ಮೈಯೆಲ್ಲಾ ಕೊಚ್ಚೆಯಾಗಿ , ಅಲ್ಲೇ ಹರಿಯುವ ಸಿಂಧು ನದಿಯಲ್ಲಿ ಕೈ ಕಾಲು ತೊಳೆದು,  ಓಡಿ ಹೋಗಿ ಹಿಮಕ್ಕೆ ಬಿದ್ದ ಮಕ್ಕಳ ಖುಷಿಗೆ ಪಾರವೇ ಇಲ್ಲ. ಎಲ್ಲರೂ  ಕುಣಿದು ಕುಪ್ಪಳಿಸಿದ್ದೆ! ಪದೇ ಪದೇ ಜಾರಿ ಬಿದ್ದು , ಹಿಮದಲ್ಲಿ ಏನೇನೋ ಆಕಾರಗಳನ್ನು   ಮಾಡಿ , ಸೆಲ್ಫಿಗಳನ್ನು  ತೆಗೆದು, ಮೊಬೈಲ್ ಡಿಪಿಗೆ ಸ್ಟೈಲಾಗಿ ಫೋಟೋ ತೆಗೆದುಕೊಂಡು , ಸುಮಾರು 3  ತಾಸು ಆಟವಾಡಿ, ಎಲ್ಲರ ಮೂತಿಗಳೂ  ಕೆಂಪು ಕೆಂಪು . ಅಲ್ಲೇ ನಮ್ಮೊಟ್ಟಿಗೆ ಇದ್ದ ಕುದುರೆಯ ಹುಡುಗ ಫರ್ಹಾನ್ , ಇನ್ನು ಸ್ವಲ್ಪ ಹೊತ್ತು ಹಿಮದಲ್ಲೆ ಇದ್ದರೆ  ಫ್ರಾಸ್ಟ್ ಬೈಟ್ ಆಗುವ ಸಾಧ್ಯತೆ ಇದೆ, ಬನ್ನಿ ವಾಪಸ್ಸು ಹೋಗೋಣ ಎಂದ. 

ವಾಪಸ್ಸು ಬರುವ ಮನಸ್ಸಿಲ್ಲದೆ, ಕುದುರೆ ಹತ್ತಿ ಹೊರಟೆವು. ವಾಪಸ್ಸು ಪರ್ವತದಿಂದ ಕೆಳಗೆ ಇಳಿಯುವಾಗ ಇಳಿಜಾರಿನಲ್ಲಿ ಕುದುರೆಯ ವೇಗ ತುಸು  ಹೆಚ್ಚೇ ಇತ್ತು. ಬಾಡಿ ವೆಯಿಟ್ ಹಿಂದೆ ಇಟ್ಟುಕೊಳ್ಳಿ, ಆಗ ಕೆಳಗೆ ಬೀಳುವುದಿಲ್ಲ ಎಂದ ಕುದುರೆಯ ಹುಡುಗ ಫರ್ಹಾನ್. ಪಾಪ ನಾ ಹೋಗುವಾಗ ಬೈದಷ್ಟು ಕೆಟ್ಟ ಹುಡುಗನಲ್ಲ ಅವ. ಈಗ ಸ್ವಲ್ಪ ಧೈರ್ಯ ಬಂದಿತ್ತು ,ಅಷ್ಟೇನೂ ಹೆದರಿಕೆ ಆಗಲಿಲ್ಲ. ಸುತ್ತಲಿನ ಸೌಂದರ್ಯ ಇನ್ನೇನು ಮುಗಿದೇ ಹೋಗುತ್ತೆ ಎನಿಸಿ ,ನೋಡಿ ನೋಡಿ ಕಣ್ತುಂಬಿಕೊಂಡು ಸಾಕಾದೆ. ಮಧ್ಯಾಹ್ನದ ಊಟ ಸ್ಕಿಪ್ ಆದ ಹಸಿವೂ ಕಂಡಿಲ್ಲ. ಕುದುರೆಯ ಮೇಲೆ ಕೂತು ವಿಡಿಯೋದಲ್ಲಿ ಏನನ್ನೂ ಸೆರೆ ಹಿಡಿಯಲು  ಆಗಲಿಲ್ಲ. ಕುದುರೆಯನ್ನು ಬಿಟ್ಟರೆ ಕೆಳಗೆ ಬೀಳುವುದೇ ಸರಿ. ಅದರ ಮೇಲೆ ಕೂತು ಬೆನ್ನು ಕಾಲು ಎಲ್ಲ ಪದ ಹೇಳಲು ಶುರು ಆಗಿತ್ತು. ಸಂಜೆಯ ವೇಳೆಗೆ ಛಳಿಯೂ ಹೆಚ್ಚಾಯಿತು. ನಮ್ಮ ಜೊತೆ ಮೇಲೆ ಬರದೇ ಕೆಳಗೇ ಉಳಿದ ಅಮ್ಮ ಮತ್ತು ನಮ್ಮ ಸ್ನೇಹಿತರಿಗೆ ನಾವು ಇಷ್ಟು ಸಮಯ ಬಾರದಿದ್ದು ನೋಡಿ ಜೀವವೇ ಬಾಯಿಗೆ ಬಂದ ಹಾಗಾಗಿ, ನಮಗಾಗಿ ಕಾಯುತ್ತಿದ್ದರು. ಹಿಮಾಚ್ಚಾದಿತ ಪರ್ವತಗಳು ಇಷ್ಟು ಸುಂದರವಾಗಿವೆ ಎಂದು ಗೊತ್ತಿದ್ದಿದ್ದರೆ ಅಪ್ಪನ ಜೊತೆ ಟ್ರೆಕಿಂಗ್ ಹೋಗಬಹುದಿತ್ತು. ಮಿಸ್ ಮಾಡಿದೆ ಅನಿಸಿತು. ಹಿಮಾಲಯಕ್ಕೆ ಟ್ರೆಕಿಂಗ್ ಹೋಗಿ ಬಂದ ಮೇಲೆ ಅಪ್ಪ ಯಾವಾಗಲು ಹೇಳುತ್ತಿದ್ದರು , ನಾವು ಮನುಷ್ಯರು ಎಷ್ಟು ಸಣ್ಣವರು ಎಂದು ಗೊತ್ತಾಗಬೇಕು ಅಂದರೆ ಹಿಮಾಲಯಕ್ಕೆ ಹೋಗಿ ಬರಬೇಕು. ಎತ್ತರದ ಪರ್ವತಗಳ ಮುಂದೆ ನಾವು ನಗಣ್ಯ ! ಅದೆಷ್ಟು ಸತ್ಯ! 

ರಾತ್ರಿ  ಹೋಟೆಲ್ಗೆ ಬಂದು ಊಟ ಮಾಡಿ, ನಡುಗಿಸುವ ಚಳಿಯಲ್ಲಿ ಮಲಗಿ, ಹಿಮ ಪರ್ವತಗಳ ಬಗ್ಗೆ ಮೆಲುಕು ಹಾಕುವಾಗ ಅನಿಸಿತು ……. ಅಪ್ಪನಿಲ್ಲದ ಹಿಮ ಯಾಕೋ  ಅಂದುಕೊಂಡಷ್ಟು ಉತ್ಸಾಹ ಕೊಡಲಿಲ್ಲವಲ್ಲ….

-ಡಾ. ಸಹನಾ ಪ್ರಿಯದರ್ಶಿನಿ, ಬೆಂಗಳೂರು

13 Responses

 1. Manjuraj H N says:

  ಚೆನ್ನಾಗಿದೆ. ಅನುಭವ ಕಥನ ನಮ್ಮದೂ ಆಯಿತು. ಧನ್ಯವಾದಗಳು

 2. ಅನುಭವದ ಕಥನ ನಿರೂಪಣೆ ಸೊಗಸಾಗಿ ಬಂದಿದೆ..ಮೇಡಂ

 3. Hema Mala says:

  ಹಿಮಾಲಯವು ಅಗಾಧ, ಅಪಾರ ಅನುಭವಗಳನ್ನು ಮೊಗೆ ಮೊಗೆದು ಕೊಡುತ್ತದೆ. ಇದು ನಾಥುಲಾ ಪಾಸ್, ಲಡಾಕ್, ಕರ್ದೂಂಗ್ಲಾ ಪಾಸ್, ಜೋಜಿಲಾ ಪಾಸ್, ಚಾಂಗ್ಲಾ ಪಾಸ್ ಮೊದಲಾದೆಡೆ ಚಾರಣ ಮಾಡಿದ ನನ್ನ ಅನುಭವ ಕೂಡ. ಬರಹ ಚೆನ್ನಾಗಿದೆ.

 4. ಮೊದಲ ಬರಹದಲ್ಲೇ ಎಲ್ಲರ ಮನ ಸೆಳೆದಿರುವ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
  ಹೀಗೆ ನಿನ್ನ ಬರವಣಿಗೆ ಮುಂದುವರೆಯಲಿ ಎಂದು ಹಾರೈಸುವೆ

 5. ನಯನ ಬಜಕೂಡ್ಲು says:

  ಚೆನ್ನಾಗಿದೆ ಬರಹ. ಚಿತ್ರಹಾರ ದ ಮೂಲಕ ಹಳೆಯ ನೆನಪುಗಳನ್ನು ಕೆದಕಿದ್ರಿ, ಎಷ್ಟೊಂದು ಸುಂದರ ದಿನಗಳು ಅವು.

 6. Padmini Hegde says:

  ಹಿಮದ ಸ್ಪರ್ಷದ ಆಸೆ, ನಿರೀಕ್ಷೆಯನ್ನು ಮಹತ್ತಾಗಿ ವರ್ಣಿಸಿದ ಬರೆಹ ಚೆನ್ನಾಗಿದೆ

 7. ನಾಗರಾಜ ಬಿ.ನಾಯ್ಕ says:

  ಒಂದು ಚೆಂದದ ಅನುಭವ ಲೇಖನ. ಹಿಮಾಲಯದ ನೋಟವನ್ನು ಸುಂದರ ಸಾಲುಗಳಲ್ಲಿ ಹಿಡಿದಿಟ್ಟಿದೆ ಈ ಲೇಖನ. ಜೊತೆಗೆ ಓದುತ್ತಾ ಹೋದಂತೆ ನಾವೇ ಅಲ್ಲಿಗೆ ಹೋಗಿ ಬಂದಷ್ಟು ನೈಜವಾಗಿ ಮೂಡಿಬಂದಿದೆ. ಪ್ರಕೃತಿಯ ನೋಟ ಒಂದು ಆರಾಧನಾ ಭಾವ.ಅದು ಒಂದು ಬದುಕುವ ಭರವಸೆ. ಅಂತಹ ಹಿಮಾಲಯದ
  ನಿರಂತರತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಸಾಗಿದೆ. ಓದಲು ಆಪ್ತವೆನಿಸುವ ಸಾಲುಗಳು ಇಲ್ಲಿ ಜೀವಂತ. ಚೆನ್ನಾಗಿದೆ ಲೇಖನ.

 8. ಶಂಕರಿ ಶರ್ಮ says:

  ಚಿಕ್ಕಂದಿನಲ್ಲಿ ಹಿಮವನ್ನು ಮುಟ್ಟುವ ಕನಸು ಕೊನೆಗೂ ನನಸಾದಾಗ ಮೊದಲಿನ ಉತ್ಸಾಹ ಉಳಿದಿಲ್ಲದಿದ್ದರೂ ಏನೋ ಸಾಧಿಸಿದ ಸಂತಸವಂತೂ ಇದೆ ಅಲ್ವಾ? ಸೊಗಸಾದ ಸ್ವಾನುಭವ ಲೇಖನ ಇಷ್ಟವಾಯ್ತು.

 9. ಪದ್ಮಾ ಆನಂದ್ says:

  ಹಿಮಕ್ಕಾಗಿ ಪಟ್ಟ ಆಸೆ, ಮತ್ತು ಅದು ಈಡೇರಿದಾಗ ಉಂಟಾದ ಸಂತಸ ಎರಡೂ ಸೊಗಸಾಗಿ ಬಿಂಬಿತವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: