ಬಾಡಿ ಮಸಾಜ್ ಎಂಬ ಧನ್ವಂತರಿ: ಹೆಜ್ಜೆ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಾಂಬೋಡಿಯಾ

ಆಂಕೊರ್‌ವಾಟ್‌ನ ದೇಗುಲಗಳ ಸಮುಚ್ಛಯವನ್ನು ಹತ್ತಿ ಇಳಿದೂ, ಆ ಬಿಸಿಲಿನ ಧಗೆಯಲ್ಲಿ ಉಸ್ ಉಸ್ ಎನ್ನುತ್ತಾ ಸೋತು ಸುಣ್ಣವಾಗಿದ್ದೆವು. ಒಂದು ದೇಗುಲದಿಂದ ಇನ್ನೊಂದು ದೇಗುಲ, ಅಲ್ಲಿಂದ ಮತ್ತೊಂದು ದೇಗುಲಕ್ಕೆ ಭೇಟಿ, ಕೆಲವು ಸಹಪ್ರಯಾಣಿಕರು ಅ ಬಿಸಿಲಿನ ಧಗೆಗೆ ಬೇಸತ್ತು ನಾವು ಪಯಣಿಸುತ್ತಿದ್ದ ಎ.ಸಿ. ಕೋಚ್‌ನಿಂದ ಇಳಿಯಲು ಮನಸ್ಸು ಮಾಡುತ್ತಿರಲಿಲ್ಲ. ಕೆಲವರು ಆ ದೇವರಿಲ್ಲದ ಗುಡಿಗಳಿಗೆ ಬರಲು ಬೇಸರ ಎಂದೂ ರಾಗವೆಳೆಯುತ್ತಿದ್ದರು. ನನಗೋ, ನೂರಾರು ವರ್ಷಗಳ ಹಿಂದೆ ಸಾವಿರಾರು ಶಿಲ್ಪಿಗಳು ರಚಿಸಿದ್ದ ಕಲಾ ಕೃತಿಗಳನ್ನು ಮನದ ತುಂಬಾ ತುಂಬಿಕೊಳ್ಳುವ ಹಂಬಲ. ನಾಲ್ಕು ಸಾವಿರ ದೇಗುಲಗಳಿರುವ ನಗರ ಇದು, ನಾವು ಆ ಶಿಲ್ಪಿಗಳಿಗೆ, ಅದನ್ನು ನಿರ್ಮಿಸಿದ ರಾಜ ಮಹಾರಾಜರಿಗೆ ಒಂದು ನುಡಿನಮನ ಸಲ್ಲಿಸದಿದ್ದರೆ, ನಾವು ಅರಸಿಕರೇ ಸರಿ. ಸಂಜೆಯ ಹೊತ್ತಿಗೆ ಕಾಲುಗಳು ಪದ ಹೇಳುತ್ತಿದ್ದವು. ನಮ್ಮ ಟೂರ್ ಮ್ಯಾನೇಜರ್ ಅಂದು ರಾತ್ರಿಯ ಕಾರ್ಯಕ್ರಮವಾದ ‘ಬಾಡಿ ಮಸಾಜ್’ ಬಗ್ಗೆ ಹೇಳುತ್ತಾ ನಿಮ್ಮ ಕಾಲು ನೋವೆಲ್ಲಾ ಮಾಯವಾಗುವುದು ಎಂದು ಹುರಿದುಂಬಿಸುತ್ತಿದ್ದರು. ನಾನು ಟಿ.ವಿ.ಯಲ್ಲಿ ಮಸಾಜ್ ಮಾಡುವುದನ್ನು ನೋಡಿದ್ದೆ, ಆದರೀಗ ವಿದೇಶ ಪ್ರವಾಸದ ಸಮಯದಲ್ಲಿ ಮಸಾಜ್ ಮಾಡಿಸಿಕೊಳ್ಳ್ಳುವ ಸುಯೋಗ ಬಂದೊದಗಿತ್ತು.

ಮಸಾಜ್ ಮಾಡುವ ‘ಕೆಮರ್ ಸ್ಪಾ (Khmer Spa)’ ಕ್ಕೆ ಹೋದಾಗ ಸಂಜೆ ಆರೂವರೆ ಗಂಟೆಯಾಗಿತ್ತು. ಹಲವು ಹವಾನಿಯಂತ್ರಿತ ಸುಸಜ್ಜಿತ ಕೊಠಡಿಗಳು ಇದ್ದು, ಸ್ತ್ರೀ ಪುರುಷರ ವಿಭಾಗಗಳು ಬೇರೆ ಬೇರೆಯಾಗಿದ್ದವು.. ನಾನು ಮತ್ತು ಗೆಳತಿ ಪುಷ್ಪ ಸಂಕೋಚದಿಂದಲೇ ಒಂದು ಕೊಠಡಿ ಹೊಕ್ಕೆವು, ಅಲ್ಲಿ ನೆಲದ ಮೇಲೆ ನಾಲ್ಕು ಹಾಸಿಗೆಗಳು ಇದ್ದವು, ಹಾಸಿಗೆಯ ಮೇಲೆ ಒಂದು ಶುಭ್ರವಾದ ಪೈಜಾಮ ಮತ್ತು ಶರ್ಟ್ ಇತ್ತು. ಅವರ ಸಲಹೆಯಂತೆ ನಾವು ನಮ್ಮ ಉಡುಪನ್ನು ಬದಲಿಸಿ ಹಾಸಿಗೆಯ ಮೇಲೆ ಬೋರಲಾಗಿ ಮಲಗಿದೆವು. ನನ್ನ ಬಳಿ ಬಂದ ಹುಡುಗಿಯ ಹೆಸರು, ‘ಹೋ’ ಇನ್ನೂ ಹದಿನಾರರ ಹರೆಯ, ಸುಕೋಮಲವಾದ ಬಾಲೆ. ಅವಳಿಗೆ ಒಂದೊಂದು ಇಂಗ್ಲಿಷ್ ಪದ ಬರುತ್ತಿತ್ತು. ಅವುಗಳನ್ನು ಜೋಡಿಸಿ ತನ್ನ ಬದುಕಿನ ಬಗ್ಗೆ ತಿಳಿಸಿದಳು. ಅವಳ ತಂದೆ ಇದ್ದಕ್ಕಿದ್ದಂತೆ ಮರಣ ಹೊಂದಿದಾಗ, ಅವಳು ಶಾಲೆಯನ್ನು ಬಿಟ್ಟು ಕೆಲಸ ಮಾಡಲು ಆರಂಭಿಸಿದಳಂತೆ.

ಮೊದಲು ನನ್ನ ಪಾದಗಳನ್ನು ಮೃದುವಾಗಿ ಒತ್ತಿದಳು, ಬೆರಳುಗಳನ್ನು ಒಂದೊಂದಾಗಿ ಎಳೆದೆಳೆದು ಲಟಿಕೆ ತೆಗೆದಳು. ಕಾಲಿನ ಹಿಮ್ಮಡಿಯನ್ನು ನೀವಿದಳು, ಕಾಲಿನ ಕೊಂಡಿಗಳನ್ನು ಒತ್ತಿದಳು. ಕಾಲಿನ ಮೀನಖಂಡಗಳನ್ನು ಒತ್ತಿ ನೀವಿದಳು, ತೊಡೆಯ ಮೇಲೆ ಪಟಪಟನೆ ಬಡಿದಳು. ಭುಜ, ತೋಳುಗಳನ್ನು ನೀವುತ್ತಾ ಬೆರಳುಗಳನ್ನು ಜಗ್ಗುತ್ತಾ ಲಟಿಕೆ ತೆಗೆದಳು. ಬೆನ್ನಿನ ಭಾಗದಲ್ಲಿ ಒಂದೊಂದು ನರವನ್ನೂ ಹಿಡಿದು ಜಗ್ಗಿದಳು. ತುಸು ನೋವಾದರೂ ಸಹಿಸಿದೆ. ಯೋಗ ತರಗತಿಗಳಲ್ಲಿ ಗುರುಗಳು, ‘ನೋವನ್ನು ಎಂಜಾಯ್ ಮಾಡಿ’ ಎನ್ನುತ್ತಿದ್ದುದು ನೆನಪಾಗಿತ್ತು. ನನಗಾಗ ಅಮ್ಮನ ಚಿತ್ರ ಕಣ್ಮುಂದೆ ತೇಲಿ ಬಂತು. ಮೊಮ್ಮಕ್ಕಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಬಿಸಿ ಮಾಡಿದ ಹರಳೆಣ್ಣೆ ಹಚ್ಚುತ್ತಾ, ಮಗುವನ್ನು ಮುದ್ದು ಮುದ್ದಾಗಿ ಮಾತಾಡಿಸುತ್ತಾ, ಅದರ ಕೈ ಕಾಲುಗಳನ್ನು ಸಂಭ್ರಮದಿಂದ ನೀವುತ್ತಾ ಕುಳಿತ ಚಿತ್ರ. ಅಜ್ಜಿಯ ತೊಡೆಯ ಮೇಲೆ ಮಲಗಿ ಕಿಲ ಕಿಲ ನಗುವ ಮಗು, ಕೆಲವು ಬಾರಿ ಅಜ್ಜಿಯ ಎಳೆತಕ್ಕೆ ನೋವಾದಾಗ ಚೀರುವ ಮಗು, ಸ್ವಲ್ಪ ಹೊತ್ತಿನಲ್ಲೇ ಅಜ್ಜಿಯ ಕೈಗಳ ಮೃದುವಾದ ಸ್ಪರ್ಶಕ್ಕೆ ಸೋತು, ನಿದ್ರಾದೇವಿಯ ವಶಕ್ಕೆ ಸಿಲುಕುವ ಮಗುವನ್ನು ನೋಡುತ್ತಾ ಸಂತಸ ಮೂಡುತ್ತಿತ್ತು.

ಈ ಹುಡುಗಿ ಅದ್ಯಾವ ಜನ್ಮದಲ್ಲಿ ನನ್ನ ತಾಯಿಯಾಗಿದ್ದಳೋ ಏನೋ, ನನ್ನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ತಲೆಯನ್ನು ತಟ್ಟಿದಳು, ಹಗುರವಾಗಿ ನನ್ನ ಹಣೆ, ಕಣ್ಣುಗಳು, ಮೂಗು, ಕಿವಿ ಎಲ್ಲವನ್ನೂ ನೀವುತ್ತಾ ಕೆಳಧ್ವನಿಯಲ್ಲಿ ಯಾವುದೋ ಹಾಡನ್ನು ಗುನುಗುತ್ತಿದ್ದಳು. ಅವಳು ಹುಬ್ಬಿನ ಮಧ್ಯೆ ವೃತ್ತಾಕಾರವಾಗಿ ತೀಡಿದಾಗ, ನನ್ನ ಮೈಯಲ್ಲಿ ಚೈತನ್ಯ ಹರಿದಾಡಿದೆಂತೆನಿಸಿತ್ತು. ‘ಇಷ್ಟು ಚೆಂದ ಮಸಾಜ್ ಮಾಡಲು ಎಲ್ಲಿಂದ ಕಲಿತೆ ಹುಡುಗಿ’ ಎಂದುಸಿರಿದಾಗ, ಆ ಹುಡುಗಿಯ ಮಾತುಗಳು ಅವಳ ಹೃದಯದಾಳದಿಂದ ಚಿಮ್ಮಿ ಬಂದವು- ”ಇದು ಶತಶತಮಾನಗಳಿಂದ ನನ್ನಜ್ಜಿ, ಮುತ್ತಜ್ಜಿಯರಿಂದ ಬಳುವಳಿಯಾಗಿ ಬಂದ ವಿದ್ಯೆ. ಇದು ಸಾಂಪ್ರದಾಯಿಕವಾದ ಕೆಮರ್ ಮಸಾಜ್, ವಿಶಿಷ್ಠವಾದ ಥೆರಪಿ. ಇಲ್ಲಿ ನಾವು ಯಾವುದೇ ಎಣ್ಣೆ ಅಥವಾ ಸುಗಂಧ ದ್ರವ್ಯಗಳನ್ನು ಬಳಸುವುದಿಲ್ಲ. ಬದಲಿಗೆ ಮಾನವ ಶರೀರದಲ್ಲಿರುವ ಅಕ್ಯುಪ್ರೆಷರ್ ಬಿಂದುಗಳನ್ನು ತೀಡುತ್ತೇವೆ. ನಿಮ್ಮ ಶರೀರದ ಮಾಂಸಖಂಡಗಳ ಕೆಳಗಿರುವ ಪದರುಗಳನ್ನು ಹಿಡಿದು ಜಗ್ಗುತ್ತೇವೆ, ತೀಡುತ್ತೇವೆ. ನಿಮ್ಮ ದೇಹದಲ್ಲಿರುವ ನಾಡಿಗಳಲ್ಲಿರುವ ಅಡೆತಡೆಗಳನ್ನು ನಿವಾರಿಸಿ, ಚೈತನ್ಯವು ದೇಹದೆಲ್ಲೆಡೆ ಹರಿಯುವಂತೆ ಮಸಾಜ್ ಮಾಡುತ್ತೇವೆ. ಶರೀರದ ತುಂಬೆಲ್ಲಾ ಶಕ್ತಿ, ಲವಲವಿಕೆ, ಉಲ್ಲಾಸ ಪಸರಿಸುವುದು”.

Khmer Massage, PC :Internet

ಮಸಾಜ್ ಮಾಡುವವರಿಗೆ ವಿಶೇಷವಾದ ತರಬೇತಿ ನೀಡಲಾಗುವುದು, ಅವರಿಗೆ ಶರೀರದ ಅಂಗರಚನಾಶಾಸ್ತ್ರದ ಬಗ್ಗೆ ಹಾಗೂ ಅಕ್ಯುಪ್ರೆಷರ್ ಬಿಂದುಗಳು ಎಲ್ಲೆಲ್ಲಿ ಇವೆ ಎಂಬುದರ ಪರಿಚಯ ಮಾಡಿಕೊಡಲಾಗುವುದು. ಲಯಬದ್ಧವಾದ ಬೆರಳುಗಳ ಚಲನೆಯಿಂದ ಶರೀರವು ನಮ್ಯತೆಯನ್ನು ಪಡೆಯುವುದು, ಮಾನಸಿಕ ಹಾಗೂ ಶಾರೀರಿಕ ಒತ್ತಡದ ನಿವಾರಣೆ ಹಾಗೂ ದೈಹಿಕವಾದ ನೋವು ಮಾಯವಾಗುವುದು. ಶರೀರದೆಲ್ಲಡೆ ರಕ್ತ ಪರಿಚಲನೆಯಾಗಿ ಎಲ್ಲಾ ಜೀವಕೋಶಗಳೂ ಶಕ್ತಿಯುತವಾಗುತ್ತವೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು. ನಿದ್ರಾಹೀನತೆ ದೂರವಾಗುವುದು. ಹೀಗೆ ನನ್ನ ಶರೀರವನ್ನು ಮಸಾಜ್ ಮಾಡುತ್ತಾ ಇದ್ದ ಹುಡುಗಿ ಹೇಳುತ್ತಿರುವಾಗ. ಹಾಗೇ ನಾನು ಮಂಪರಿಗೆ ಜಾರಿದ್ದೆ, ನಾನು ಗೂಗಲ್ ನಲ್ಲಿ ಸಂಗ್ರಹಿಸಿದ್ದ ಮಾಹಿತಿ ಮನದಲ್ಲಿ ತೇಲಿಬಂದಿತ್ತು – ಕೆಮರ್ ಥೆರಪಿ ಬಗ್ಗೆ ಪೌರಾಣಿಕವಾದ ಕಥೆಯೂ ಪ್ರಚಲಿತವಾಗಿದೆ. ರೋಗಗಳನ್ನು ಗುಣಪಡಿಸುವ ಶಕ್ತಿಯುಳ್ಳ ನಾಲ್ಕು ದೇವತೆಗಳು ಈ ಮಹಾವಿದ್ಯೆಯನ್ನು ಕಾಂಬೋಡಿಯನ್ನರಿಗೆ ನೀಡಿದರೆಂಬ ಪ್ರತೀತಿಯಿದೆ. ಬಹುಶಃ ನಮ್ಮ ಪುರಾಣಗಳಲ್ಲಿ ಬರುವ ವೈದ್ಯಶಾಸ್ತ್ರದ ಅಧಿದೇವತೆ ಧನ್ವಂತರಿಯ ಹಾಗೆ. ಕೆಮರ್ ಮಸಾಜ್‌ನಿಂದ ದೊರೆಯುವ ಉಪಯೋಗಗಳ ಪಟ್ಟಿ ಹೀಗಿತ್ತು, ಇದರಿಂದ ಅಧಿಕ ರಕ್ತದೊತ್ತಡದ ನಿಯಂತ್ರಣ, ಎಲ್ಲಾ ದೇಹದ ಅಂಗಾಂಗಗಳ ವ್ಯವಸ್ಥೆಯ ಪುನಃಶ್ಚೇತನ, ಮಾಂಸಖಂಡಗಳ ಮತ್ತು ಕೀಲುಗಳ ನೋವು ನಿವಾರಣೆ, ಎಲ್ಲಾ ಅಂಗಾಂಗಳನ್ನು ಸಡಿಲಗೊಳಿಸಿ ವಿಶ್ರಾಂತಿಗೊಳಿಸುವುದು, ಮಾನಸಿಕ ಒತ್ತಡದ ನಿಯಂತ್ರಣ, ಚರ್ಮವನ್ನು ಕಾಂತಿಯುಕ್ತಗೊಳಿಸುವುದು, ನಿದ್ರಾಹೀನತೆ ದೂರವಾಗುವುದು ಇತ್ಯಾದಿ. ಹುಡುಗಿ, ‘ಮೇಡಂ ಟೀ ತಗೊಳ್ಳಿ’ ಎಂದಾಗ ಎಚ್ಚರವಾಗಿತ್ತು. ಮೈಮನವೆಲ್ಲಾ ಹಗುರಾಗಿತ್ತು, ಆಂಕೊರ್ ವಾಟ್ ಹತ್ತಿ ಇಳಿದ ಸುಸ್ತೆಲ್ಲಾ ಮಾಯವಾಗಿತ್ತು, ಉಲ್ಲಾಸ, ಲವಲವಿಕೆ ಮೂಡಿತ್ತು. ನಿಧಾನವಾಗಿ ಹರ್ಬಲ್ ಟೀ ಹೀರುತ್ತಾ ನನ್ನ ಸಹಪ್ರಯಾಣಿಕರ ಅನುಭವವನ್ನು ಕೇಳುತ್ತಾ ಲಾಡ್ಜಿಗೆ ಹಿಂತಿರುಗಿದೆವು.

ಉಡುಪಿಯಿಂದ ಬಂದಿದ್ದ ಭಟ್ ದಂಪತಿಗಳು ಅವರ ಅನುಭವವನ್ನು ಹಂಚಿಕೊಂಡರು – ಕಾಂಬೋಡಿಯಾದ ರೆಡ್ ರಿವರ್ ಕ್ರೂಸ್‌ನಲ್ಲಿ ಪಯಣಿಸುವಾಗ ಮೊಸಳೆಗಳ ನರ್ಸರಿಯನ್ನು ನೋಡಲು ಎಲ್ಲರೂ ಇಳಿಯುವ ಹೊತ್ತಿನಲ್ಲಿ ವೀಣಾ ಭಟ್ ಕುಳಿತಿದ್ದ ಕಬ್ಬಿಣದ ಕುರ್ಚಿಯ ಒಂದು ಕಾಲು ಮುರಿದು, ಅವರು ಮುಗ್ಗರಿಸಿ ಕೆಳಗೆ ಬಿದ್ದರು, ಕುರ್ಚಿ ಅವರ ಭುಜದ ಮೇಲೆ ಬಿತ್ತು. ತುಂಬಾ ನೋವಾಗಿತ್ತು, ತಕ್ಷಣವೇ ಎಲ್ಲರೂ ಸೇರಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ವೈದ್ಯರಾಗಿದ್ದ ಕುಮಾರ್ ಭಾವನವರು ಅವರ ತೋಳುಗಳನ್ನು ಹಿಂದೆ ಮುಂದೆ ಆಡಿಸಿ ನೋಡಿ, ಪ್ರಾಕ್ಚರ್ ಆಗಿಲ್ಲ ಎಂದು ಧೃಢಪಡಿಸಿದ ಮೇಲೆಯೇ ದಂಪತಿಗಳು ನಿರಾಳವಾದ ಉಸಿರು ಬಿಟ್ಟರು. ಎರಡು ದಿನದಿಂದ ನೋವಿನ ಮಾತ್ರೆ ನುಂಗುತ್ತಿದ್ದರು. ಕೆಮರ್ ಮಸಾಜ್ ಸಮಯದಲ್ಲಿ, ಮಸಾಜ್ ಮಾಡಿಸಿಕೊಳ್ಳುವುದು ಬೇಡ ಎಂಬುದು ಅವರ ಅನಿಸಿಕೆಯಾಗಿತ್ತು. ಗೈಡ್ ಒತ್ತಾಯದ ಮೇರೆಗೆ ಮಸಾಜ್ ಮಾಡಿಸಿಕೊಂಡರು, ಮಸಾಜ್ ಮಾಡುವವಳಿಗೆ ತಮ್ಮ ನೋವಿದ್ದ ಬಲಭುಜದ ವಿವರವನ್ನೂ ಮೊದಲೇ ನೀಡಿದ್ದರು. ಆ ಮಸಾಜ್ ಹುಡುಗಿ ನಿಧಾನವಾಗಿ ಅವರ ಭುಜದ ಸುತ್ತಲೂ ಬೆರಳಾಡಿಸುತ್ತಲೇ, ಅಂಗೈ ಹಾಕಿ ಉಜ್ಜತೊಡಗಿದಳಂತೆ, ಒಂದು ಕ್ಷಣ ಛಳಕ್ ಎಂದ ಹಾಗಾಗಿ ತುಂಬಾ ನೋವಾಯಿತಂತೆ. ಮಸಾಜ್ ಎಲ್ಲಾ ಮುಗಿದ ಮೇಲೆ ಭುಜದ ನೋವು ತುಂಬಾ ಕಡಿಮೆಯಾಯಿತು ಎಂದು ಹೇಳಿದಾಗ ಕೆಮರ್ ಮಸಾಜ್‌ನ ಮಹತ್ವ ಅರಿವಾಯಿತು.

ಈ ಬರಹದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40369

(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

13 Responses

  1. Anonymous says:

    Tumbachennagi baredidderi naavoo hoda 46deshgalalalli Cambodia saha ondu nvramesh m9845565238

  2. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ಬಾಡಿಮಸಾಜಿನ..ಅನುಭವ ದ ಅಭಿವ್ಯಕ್ತಿಯ ಅನಾವರಣ.. ಆಪ್ತವಾಗಿ ಮೂಡಿಬಂದಿದೆ.. ವಿಜಯಾಮೇಡಂ

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. SHARANABASAVEHA K M says:

    ವಿದೇಶದಲ್ಲಿನ ಬಾಡಿ ಮಸಾಜ್ ಬಗ್ಗೆ ಮಡಿವಂತಿಕೆ ಜನರ ಋಣಾತ್ಮಕ ಅಭಿಪ್ರಾಯ ಇದೆ. ನಿಮ್ಮ ಲೇಖನ ಓದಿದ ಮೇಲೆ ಅದಕ್ಕೂ ಇತಿಹಾಸವಿದೆ. ಹದಿನಾರರ ಬಾಲೆ ತನ್ನ ಕುಟುಂಬದಿಂದ ಬಂದ ಮಸಾಜ್ ಕಲೆಯನ್ನು ತನ್ನ ಜೀವನೋಪಾಯಕ್ಕಾಗಿ ಅಳವಡಿಸಿಕೊಂಡಿದ್ದು ಅವಳ ಜೀವನ ಪ್ರೀತಿಗೆ ಖುಷಿಯೆನಿಸಿತು. ತುಂಬಾ ಚೆನ್ನಾಗಿದೆ ಮೇಡಂ ಲೇಖನ

  5. ಶಂಕರಿ ಶರ್ಮ says:

    ನನ್ನ ಮಗಳು ವಿಯೆಟ್ನಾಮಿಗೆ ಹೋಗಿದ್ದಾಗ ಅಲ್ಲಿ ಬಾಡಿ ಮಸಾಜ್ ಮಾಡಿಸಿದ್ದ ಬಗ್ಗೆ ಹೇಳಿದ್ದು ನೆನಪಾಯಿತು. ಆಯಾಸಗೊಂಡ ದೇಹಕ್ಕೆ ಶಕ್ತಿಯನ್ನು ನೀಡುವ ವಿಶೇಷ ರೀತಿಯ ಪ್ರಕೃತಿ ಚಿಕಿತ್ಸೆಯ ಕುರಿತ ತಮ್ಮ ಆಪ್ತ ಬರಹ ಖುಷಿ ನೀಡಿತು.. ಗಾಯತ್ರಿ ಮೇಡಂ.

  6. Asha shetty says:

    V very nice mam you always ….create a. Beautiful scene in your wards…

  7. Hema Mala says:

    ಅಪರೂಪದ ವಿಷಯ, ಎಂದಿನಂತೆ ಚೆಂದದ ನಿರೂಪಣೆ. ಇಷ್ಟವಾಯಿತು.

  8. ವಿದ್ಯಾ says:

    ಚೆಂದದ ನಿರೂಪಣೆ

  9. ಸಹೃದಯ ಓದುಗರಿಗೆ ನನ್ನ ಪ್ರೀತಿಯ ವಂದನೆಗಳು

  10. ನನ್ನ ಲೇಖನವನ್ನು ಸುಂದರವಾದ ಚಿತ್ರದೊಂದಿಗೆಇನ್ನಷ್ಟು ಚಂದಗೊಳಿಸಿದ ಹೇಮಮಾಲಾ ಮೇಡಂ ಗೆ ವಂದನೆಗಳು

  11. Anonymous says:

    tumba chennagide

  12. Padma Anand says:

    ನಮ್ಮ ಶರೀರದ ದೇಹಶಾಸ್ರ್ತವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಎಷ್ಟೊಂದು ರೀತಿಯಲ್ಲಿ ಅಧ್ಯಯನ ಮಾಡಿ ಪರಿಹಾರಗಳನ್ನು ಕಂಡುಹಿಡಿದಿದ್ದಾರೆ!
    ಚಂದದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: