ಹೊಸ ಫಲದ ಕಥೆ!

Share Button

ನಮ್ಮ ಮನೆಯಲ್ಲಿಯೇ ಬೆಳೆದ ಹೂಗಿಡಗಳಲ್ಲಿ ಯಥೇಚ್ಛ ಹೂಗಳು ಅರಳಿರುವುದು ಕಂಡಾಗ ಮನಸ್ಸಿಗೇನೋ ಖುಷಿ. ಹಾಗೆಯೇ ಮನೆಯ ಸುತ್ತಮುತ್ತಲಿರುವ ಜಾಗದಲ್ಲಿ ನಾವೇ ಬೆಳೆದ ತರಕಾರಿ ಗಿಡ/ಹಣ್ಣಿನ ಗಿಡದಿಂದ ಯಥೇಚ್ಛ ತರಕಾರಿ/ಹಣ್ಣುಗಳು ದೊರೆತಾಗ ಸಿಗುವ ಆ ಖುಷಿಯೇ ಬೇರೆ. ನಾವು ತಿಂದೆಸೆದ  ಹಣ್ಣಿನ ಬೀಜ ಮೊಳೆತು ಸಸಿಯಾಗಿ, ಪುಟ್ಟ ಮರವಾಗಿ ಬೆಳೆದು ಭರಪೂರ ಹಣ್ಣುಗಳನ್ನು ನೀಡಿದರೆ ಆ ಖುಷಿಗೆ ಎಣೆಯುಂಟೇ? ನಮ್ಮ ಮನೆಯ ಸುತ್ತಮುತ್ತಲಿರುವ ಪುಟ್ಟ ಜಾಗದಲ್ಲಿ ಪೇರಳೆ ಹಾಗೂ ಸೀತಾಫಲ ಬೀಜಗಳುಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆದು ಹಣ್ಣುಗಳನ್ನು ನೀಡಿ ಸತ್ತುಹೋಗಿವೆ. ಆ ಬಳಿಕ ನಕ್ಷತ್ರನೇರಳೆಯ ಗಿಡವೊಂದು ಬೆಳೆದು , ಸಾಕಷ್ಟು ಹಣ್ಣುಗಳನ್ನು ನೀಡಿ, ತನ್ನ ಕಾರ್ಯ ಮುಗಿಯಿತೆಂಬಂತೆ ಮೌನವಾಗಿ ನೇಪಥ್ಯ ಸೇರುತ್ತಿದೆ.  ಆ ಸಾಲಿಗೆ ಇನ್ನೆರಡು ಹಣ್ಣಿನ ಗಿಡಗಳು ಸೇರ್ಪಡೆಯಾಗಿವೆ.ಅವುಗಳಲ್ಲೊಂದು ಗಿಡವೇ ಈ ಲೇಖನದ ವಸ್ತು.

ಎರಡು ವರ್ಷಗಳ ಹಿಂದೆ, ನಮ್ಮ ಮನೆಯೆದುರಿನ ಆವರಣ ಗೋಡೆಯ ಬಳಿ ಪುಟ್ಟ ಗಿಡವೊಂದು ಕಂಡಿತು. ಆ ಗಿಡದ ಎಲೆಗಳನ್ನು ಕಂಡಾಗ ಪನ್ನೇರಳೆ ಗಿಡವಿರಬೇಕು ಅನ್ನಿಸಿತು. ದಿನಗಳುರುಳಿದಂತೆ ಗಿಡ ಬೆಳೆಯುತ್ತಾ ಹೋಯಿತು. ಬೆಳೆದ ಗಿಡವನ್ನು ಕಂಡಾಗ, ಇದು ಯಾವಾಗ ಹೂವುಗಳನ್ನು ಬಿಟ್ಟೀತು ಎಂಬ ನಿರೀಕ್ಷೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಗಿಡದಲ್ಲಿ ಮೊಗ್ಗುಗಳು ಮೂಡಿರುವುದನ್ನು ಕಂಡೆ. ಕೆಲದಿನಗಳ ಬಳಿಕ ಹೂಗಳು ಅರಳಿದವು. ಕಾಯಿಗಳು ಮೂಡಿದ್ದವು. ಯಾವ ಬಣ್ಣದ ಪನ್ನೇರಳೆ ಇರಬಹುದು ಅನ್ನುವ ಕುತೂಹಲ ನನಗೂ. ಆದರೆ ಗಿಡಕ್ಕೊಂದು ಆಘಾತ ಕಾದಿತ್ತು. ಗಿಡ ಎತ್ತರಕ್ಕೆ ಬೆಳೆದು ವಿದ್ಯುತ್ ತಂತಿಗಳನ್ನು ಮುಟ್ಟಿಬಿಟ್ಟೀತು ಅನ್ನುವುದನ್ನು ಮನಗಂಡ ಮೆಸ್ಕಾಂ ನವರು ಗಿಡದ ತುದಿಯ ರೆಂಬೆಗಳನ್ನು ಕತ್ತರಿಸಿಯೇ ಬಿಟ್ಟಿದ್ದಾರೆ; ಅದೂ ನಾವಿಲ್ಲದ ವೇಳೆಯಲ್ಲಿ. ಗಿಡದ ಅವಸ್ಥೆ ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು. ತನಗಾದ ಆಘಾತದಿಂದಕಂಗೆಟ್ಟ ಗಿಡದಲ್ಲಿ ಮೂಡಿದ್ದ ಕಾಯಿಗಳು ಉದುರಿಹೋದವು. ಬಹುದಿನಗಳ ನಿರೀಕ್ಷೆ ಫಲ ಕೊಡಲಿಲ್ಲ.

ಮರಳಿ ಯತ್ನವ ಮಾಡು ಅಂತ ಮಾತಿದೆಯಲ್ವಾ? ಗಿಡಗಳಿಗಂತೂ ಇದು ಮಾಮೂಲು ಸಂಗತಿ. ತನಗಾದ ಆಘಾತದಿಂದ ಚೇತರಿಸಿಕೊಂಡ ಗಿಡ ಮತ್ತೆ ಮೊಗ್ಗುಗಳನ್ನು ಬಿಟ್ಟಿತು. ಕೆಲದಿನಗಳ ಬಳಿಕ ಮೊಗ್ಗುಗರಳಿದವು. ಈ ಸಲವಾದರೂ ಹೂವುಗಳು ಕಾಯಾಗಿ, ಹಣ್ಣುಗಳಾಗಲಿ ದೇವರೇ ಎಂದು ಮನಸಾರೆ ಪ್ರಾರ್ಥಿಸಿದೆ. ಪ್ರತಿದಿನವೂ ಗಿಡವನ್ನು ಗಮನಿಸುತ್ತಿದ್ದೆ. ಹಣ್ಣಿನ ಬಣ್ಣ ಯಾವುದೆಂದು ತಿಳಿಯುವ ಕುತೂಹಲವೂ ಇತ್ತೆಂದು ಈ ಮೊದಲೇ ಹೇಳಿರುವೆ ತಾನೇ? ತಿಳಿ ಹಸಿರು ಬಣ್ಣದ ಕಾಯಿಗಳು ಗೋಚರಿಸಿದಾಗ, ಓಹ್, ತಿಳಿಹಸಿರು ಬಣ್ಣದ ಪನ್ನೇರಳೆ ಇರಬೇಕು ಅಂದುಕೊಂಡೆ. ಆದರೆ ಅದೇನಾಶ್ಚರ್ಯ! ದಿನಗಳೆದಂತೆ, ದೋರೆಕಾಯಿಯ ಬಣ್ಣ ಬದಲಾಗುತ್ತಿತ್ತು. ಪ್ರಕೃತಿಯ ಕಲಾಕಾರ ಆ ಗಿಡದೊಳಗಿದ್ದು ಕೆಂಪು ಬಣ್ಣವನ್ನು ನಿಧಾನಗತಿಯಲ್ಲಿ ಹಚ್ಚುತ್ತಿದ್ದುದು ಸೋಜಿಗವನ್ನುಂಟುಮಾಡಿತು. ತಿಳಿಹಸಿರು ಹೋಗಿ ಕುಂಕುಮ ಕೆಂಪಿನ ಬಣ್ಣ ಕಾಣಲಾರಂಭಿಸಿತ್ತು. ಬಣ್ಣವೇನೋ ಗೊತ್ತಾಯಿತು. ಇನ್ನುಳಿದದ್ದು ಆ ಹಣ್ಣಿನ ರುಚಿ ಹೇಗಿರಬಹುದೆನ್ನುವ ಕುತೂಹಲ.

ಮೊದಲೇ ಹೇಳಿದಂತೆ, ಈ ಗಿಡವಿದ್ದುದು ಮನೆಯೆದುರಲ್ಲಿ. ಮನೆಯೆದುರೇ ರಸ್ತೆ. ರಸ್ತೆಯಲ್ಲಿ ಓಡಾಡುವ ಜನರಿಗೆ ಸುಲಭವಾಗಿ ಎಟಕುವಷ್ಟು ಎತ್ತರದಲ್ಲಿ ಹಣ್ಣುಗಳು! ದಾರಿಹೋಕರ ಕಣ್ಣು ಇತ್ತ ಬೀಳದಿದ್ದರೆ ಸಾಕೆಂದು ಮನಸ್ಸಿನಲ್ಲಿ ಅಂದುಕೊಂಡರೂ ಹಣ್ಣುಗಳು ಕಾಣಿಸದಂತೆ ಮುಚ್ಚಿಡಲು ಸಾಧ್ಯವಿಲ್ಲ ತಾನೇ? ಹಣ್ಣಿನ ರುಚಿಯಂತೂ ನೋಡಲೇಬೇಕು ಅನ್ನುವ ಹಂಬಲ. ಹಣ್ಣು ಬಲಿತಿರಬಹುದೆಂದು ಒಂದು ಹಣ್ಣನ್ನು ಕೀಳಲು ಹೋದಾಗ, ಆ ಹಣ್ಣಿನ ಜೊತೆ ಉಳಿದ ದೋರೆಕಾಯಿಯ ಗೊಂಚಲು ಕೂಡಾ ಕಳಚಿಕೊಂಡಿತು. “ಅಷ್ಟು ಅವಸರ ಯಾಕೆ?ಅದಿನ್ನೂ ಹಣ್ಣಾಗಬೇಕು. ಯಾಕೆ ಕೀಳಲು ಹೋದೆ?” ಅಂದರು ನನ್ನವರು. ನಮ್ಮ ಕಣ್ಣೆದುರೇ ಬೆಳೆದ ಗಿಡದ ಹಣ್ಣು ತಿಂದು ರುಚಿ ನೋಡುವ ಸಂಭ್ರಮ ನನಗೆ. ಹಣ್ಣಾಗಿದೆಯೆಂದು ಬಣ್ಣ ನೋಡಿ ಅಂದುಕೊಂಡಿದ್ದು ಸುಳ್ಳಾಯಿತು. ಆ ದೋರೆಗಾಯಿಗಳನ್ನು ಸ್ವಾಹಾ ಮಾಡಿದೆನೆನ್ನಿ.
“ನೋಡೋಣ. ಇನ್ನೂ ಒಂದು ದೊಡ್ಡ ಗೊಂಚಲಿದೆ. ಅದು ಸರಿಯಾಗಿ ಬೆಳೆಯಲಿ. ಪೂರ್ತಿ ಹಣ್ಣಾದ ಬಳಿಕವೇ ಕಿತ್ತರಾಯಿತು” ಅಂದುಕೊಂಡೆ. ಪ್ರತಿ ದಿನ ಬೆಳಿಗ್ಗೆ ಸಂಜೆ ಹಣ್ಣುಗಳ ಬೆಳವಣಿಗೆಯನ್ಜು ಗಮನಿಸುತ್ತಿದ್ದೆ. ಒಂದು ದಿನ ಸಂಜೆ ನೋಡಿ “ನಾಳೆ ಬೆಳಿಗ್ಗೆ ಹಣ್ಣುಗಳನ್ನು ಕೀಳೋಣ” ಅಂತ ನಿರ್ಧರಿಸಿದೆ. ಮರುದಿನ ಬೆಳಿಗ್ಗೆ ಸುಮಾರು ಆರೂವರೆ ಘಂಟೆಗೆ ಗಿಡದ ಬಳಿ ಹೋದೆ. ಪನ್ನೇರಳೆ ಹಣ್ಣಿನ ಗೊಂಚಲು ಕಾಣದಂತೆ ಮಾಯವಾಗಿತ್ತು. ದಾರಿಹೋಕರ್ಯಾರೋ ಹಣ್ಣುಗಳನ್ನು ಎಗರಿಸಿದ್ದರು. ಯಾವುದಾದರೂ ಹಕ್ಕಿಯೇನಾದರೂ ಹಣ್ಣುಗಳನ್ನು ಕುಟುಕಿ ಹಣ್ಣಿನ ಗೊಂಚಲು ಕೆಳಕ್ಕೆ ಬಿದ್ದಿರಬಹುದೇ ಅನ್ನುವ ಸಂಶಯ ಬಂತು. ತೊಟ್ಟು ಗಟ್ಟಿ ಇರುವ ಕಾರಣ ಹಾಗಿರಲಾರದು ಅನ್ನುವುದು ಗೊತ್ತಿದ್ದ ವಿಷಯವಾದರೂ, ಸಂಶಯ ನಿವಾರಣೆಗೆ ಗಿಡದ ಬುಡದ ಬಳಿ ಪರಿಶೀಲಿಸಿದ್ದೂ ಆಯಿತು.ಮಾಗಿದ ಹಣ್ಣಿನ ನಿಜವಾದ ರುಚಿ ಹೇಗಿರಬಹುದು ಅಂತ ಮನಸ್ಸಿನೊಳಗೆ ಎಣಿಸಿದ್ದೇ ಬಂತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಅದು ಇನ್ಯಾರದೋ ಪಾಲಾಗಿತ್ತು! ಈ ಘಟನೆ ಎಲ್ಲಾ ಕಡೆಯಲ್ಲೂ ಸರ್ವೇ ಸಾಮಾನ್ಯ. ಆದರೂ ನನ್ನ ಮನಸ್ಸಿಗೆ ತೋಚಿದ ವಿಷಯಗಳನ್ನು  ಒಂದು ಲೇಖನದಲ್ಲಿ ಯಾಕೆ ಬರೆಯಬಾರದು ಅನ್ನಿಸಿತು. ಒಂದಿನಿತೂ ನೀರು ಹಾಕದೆ, ಪೋಷಿಸದೆ ಇರುವವರಿಗೆ, ಯಾರದೋ ಮನೆಯ ಆವರಣದೊಳಗಿರುವ ಗಿಡದಲ್ಲಿ ಹಣ್ಣುಗಳನ್ನು ಕಂಡ ಕೂಡಲೇ ಅದನ್ನು ತಿಂದುಬಿಡುವ ಮನಸ್ಥಿತಿ ಅದು ಹೇಗೆ ಬರುತ್ತದೋ. ಅದು ಹೇಗೆ ಅವರ ಮನಸ್ಸಾಕ್ಷಿ ಅದಕ್ಕೆ ಒಪ್ಪುತ್ತದೆ ಅನ್ನುವುದೇ ನನ್ನನ್ನು ಕಾಡುವ ಪ್ರಶ್ನೆ. ನನ್ನ ಹಾಗೆ ಎಲ್ಲರೂ ಯೋಚಿಸುತ್ತಾರೆಂದುಕೊಂಡರೆ ಅದು ನನ್ನದೇ ತಪ್ಪೆಂದು ನನಗೆ ಚೆನ್ನಾಗಿ ಗೊತ್ತಿದೆ.  ಆ ಹಣ್ಣೇನು ಬೆಲೆ ಬಾಳುವ ಹಣ್ಣಲ್ಲ ದಿಟ, ಆದರೆ ಆ ಗಿಡದ ಹಣ್ಣಿನ ರುಚಿ ನೋಡಬೇಕೆಂದು ಒಂದೂವರೆ ವರ್ಷಗಳಿಂದ ಎದುರುನೋಡುತ್ತಿದ್ದೆನೆಂದು, ಆ ಹಣ್ಣು ಕಿತ್ತವರಿಗೇನು ಗೊತ್ತು!ನಮಗೆಷ್ಟು ದಕ್ಕುತ್ತದೋ ಅಷ್ಟು ಮಾತ್ರ ನಮಗೆ ದಕ್ಕುವುದೆಂಬುದು ಸತ್ಯ. ಹಿಂದಿಯಲ್ಲೊಂದು ಮಾತಿದೆ “ದಾನೇ ದಾನೇ ಮೇ ಖಾನೇವಾಲೇ ಕಾ ನಾಮ್ ಲಿಖಾ ಹೈ” ಆ ಹಣ್ಣುಗಳ ಮೇಲೆ ನಮ್ಮ ಹೆಸರಿರಲಿಲ್ಲ ಅಷ್ಟೇ. ಮುಂದಿನ ದಿನಗಳಲ್ಲಿ ಗಿಡದ ತುಂಬಾ ಹೂವುಗಳು ನಳನಳಿಸಿ, ಗಿಡದ ತುಂಬಾ ಹಣ್ಣುಗಳಾಗಲಿ. ನಮಗೂ, ಪಕ್ಷಿಗಳಿಗೂ, ದಾರಿಹೋಕರಿಗೂ ಸಿಗುವಂತಾಗಲೆಂಬ ಆಶಯ.

ಡಾ. ಕೃಷ್ಣಪ್ರಭ ಎಂ, ಮಂಗಳೂರು

9 Responses

 1. ಹೊಸ ಫಲದ ಕಥೆ..ಚೆನ್ನಾಗಿದೆ.. ಹಾಗೇ ತಮ್ಮದಲ್ಲದ ವಸ್ತು ವಿಗೆ ಯಾವ ಸಂಕೋಚವೂ ಇಲ್ಲದಂತೆ…ಅಧಿಕಾರ..ಚಲಾಯಿಸುವುದು…ಬೆಳೆಸದವರ..ಕುತೂಹಲ… ಅಂತಿಮವಾಗಿ..ನಿಸ್ವಾರ್ಥ ಸಂದೇಶ..

 2. ಸುನಂದಾ ಹೊಳ್ಳ says:

  ಚಂದದ ಲೇಖನ.ಹಣ್ಣನ್ನು ತಿಂದು ರುಚಿ ನೋಡಬೇಕೆಂಬಾಸೆಯ ಕಥೆ ಚೆನ್ನಾಗಿದೆ

 3. Krishnaprabha M says:

  ನನ್ನ ಎಂ ಎಸ್ಸಿ ಸಹಪಾಠಿಯೊಬ್ಬಳ ಪ್ರತಿಕ್ರಿಯೆ

  ಸುಂದರ ಲೇಖನ…

  ನಾವು ನೆಟ್ಟು ಬೆಳೆಸಿದ ಗಿಡಗಳಲ್ಲಿ ಅರಳುವ ಹೂವುಗಳು ನೀಡುವ ಸಂತೋಷ ಲಕ್ಷಾಂತರ ರೂಪಾಯಿ ಕೊಟ್ಟು ಪುಷ್ಪ ಖರೀದಿಸಿದರೂ ದೊರೆಯದು.

  ನಿನ್ನ ಸಾಹಿತ್ಯ ಕೃಷಿ ಹೀಗೆಯೇ ಕವನ, ಲೇಖನಗಳೆಂಬ ವಿವಿಧ ಪುಷ್ಪಗಳನ್ನು ನೀಡುತ್ತಾ ನಿರಂತರವಾಗಿ ಮುಂದುವರಿಯಲಿ…

  • Anonymous says:

   ಲೇಖನ ಚೆನ್ನಾಗಿದೆ ma’am.. ಬೆಂಗಳೂರಿನಲ್ಲಿ ಇದೇ ಅನುಭವ ನಾವು ಪ್ರೀತಿಯಿಂದ ಬೆಳೆಸಿದ ಹೂವಿನ ಗಿಡಗಳ ಹೂವುಗಳು ಕಂಡವರ ಪಾಲಾದಾಗ, ಪೂಜೆ ಮಾಡೋ ತುಳಸಿಯನ್ನೂ ಕಿತ್ತುಕೊಂಡು ಹೋಗುವ ಜನರನ್ನು ಕಂಡಾಗ ನನಗೂ ಇದೇ ಪ್ರಶ್ನೆ..

 4. ಶಂಕರಿ ಶರ್ಮ says:

  ಸುಲಭದಲ್ಲಿ ಉಚಿತವಾಗಿ ಸಿಗುವ ವಸ್ತು ಎಂದರೆ ಎಲ್ಲರಿಗೂ ಅದೇಕೋ ಬಹಳ ಪ್ರೀತಿ! ಮುಂದಿನ ಬಾರಿ ಪನ್ನೇರಳೆ ಹಣ್ಣು ನಿಮ್ಮೊಂದಿಗೆ ನಮಗೂ ಸಿಗುವಂತಾಗಲಿ….
  ಹೊಸ ಫಲದ ಲೇಖನ ಚೆನ್ನಾಗಿದೆ ಮೇಡಂ.

 5. Prajwal says:

  ಎಂತಹ ನಿಸ್ವಾರ್ಥ ಸಂದೇಶ… ಅದ್ಭುತವಾದ ಬರವಣಿಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: