ಕಾದಂಬರಿ : ಕಾಲಗರ್ಭ – ಚರಣ 3
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಗಂಡನ ಮಾತುಗಳನ್ನು ಕೇಳಿಸಿಕೊಂಡ ಗೌರಮ್ಮನವರಿಗೆ ಹಿಗ್ಗುಂಟಾಯಿತು. ತಮ್ಮ ಮನೆತನಗಳ ಬಹಳ ವರ್ಷಗಳ ಗೆಳೆತನ ಬಂಧುತ್ವಕ್ಕೆ ನಾಂದಿಯಾದರೆ ಎಂಬ ಆಲೋಚನೆಯೇ ಅವರ ಮನಕ್ಕೆ ಮುದ ತಂದಿತು. ಮಗನು ಏನು ಹೇಳುತ್ತಾನೋ ಎಂಬ ಕಾತುರತೆಯಿಂದ ಅವನತ್ತ ನೋಡಿದರು. ಅಲ್ಲಿಯೇ ಕುಳಿತಿದ್ದ ಮಂಗಳಮ್ಮ ಅವರ ಮಗ ಸುಬ್ಬಣ್ಣನೂ ಕಾಯುತ್ತಿದ್ದರು. ಮಾದೇವಿ ಅವರೆಲ್ಲರಿಗೂ ಆತ್ಮೀಯಳು. ಅವಳೇ ಈ ಮನೆಗೆ ಸೊಸೆಯಾಗಿ ಬಂದರೆ ತಮ್ಮನ್ನು ಈಗಿನಂತೆ ಗೌರವಾದರಗಳಿಂದ ಕಾಣುತ್ತಾಳೆ ಎಂಬ ಭರವಸೆ ಅವರಿಗೆ.
ತಂದೆಯ ಪ್ರಸ್ತಾಪವು ಮಹೇಶನಿಗೆ ಅಚ್ಚರಿಯನ್ನು ತಂದಿತು. ಆದರೂ ಅವನ ಮನದ ಒಂದು ಮೂಲೆಯಲ್ಲಿ ಯಾಕಾಗಬಾರದು ಎನ್ನಿಸದೆ ಇರಲಿಲ್ಲ. ಮತ್ತೊಂದು ಮಗುಲಲ್ಲಿ ದೇವಿಯ ಮನದ ಆಸೆ ಏನಿದೆಯೋ ನಾನ್ಯಾವತ್ತೂ ಅವಳನ್ನು ಈ ದೃಷ್ಟಿಯಿಂದ ನೋಡಿರಲಿಲ್ಲ. ಒಮ್ಮೆ ಅವಳನ್ನು ಕೇಳದೇ ನನ್ನ ಅಭಿಪ್ರಾಯವನ್ನು ಹೇಳುವುದು ಹೇಗೆ? ನಾಳೆ ನಾನು ತೋಟಕ್ಕೆ ಹೋದಾಗ ಹೇಗಿದ್ದರೂ ಭೇಟಿಯಾಗುತ್ತಾಳೆ. ಅವಳನ್ನು ಕೇಳಿ ನಂತರ ಅಭಿಪ್ರಾಯ ತಿಳಿಸಿದರಾಯಿತು ಎಂದು ನಿರ್ಧರಿಸಿ ತನಗೆ ಯೋಚಿಸಲು ಸ್ವಲ್ಪ ಕಾಲಾವಕಾಶ ಬೇಕೆಂದು ಕೇಳಿದನು. ಗಂಗಾಧರಪ್ಪನವರು ಆಗಬಹುದೆಂದರು. ತಮ್ಮ ಕೆಲಸವಾಯಿತೆಂದು ನಿದ್ರೆಮಾಡಲು ತಮ್ಮ ರೂಮಿಗೆ ಹೋದರು.
ಉಳಿದವರೂ ತಮ್ಮ ತಮ್ಮ ಕೋಣೆಗಳಿಗೆ ನಡೆದರು. ಮಹೇಶನ ಆಲೋಚನೆಯೂ ಸಾಗಿತ್ತು. ದೇವಿ ಇದಕ್ಕೆ ಒಪ್ಪಿಕೊಂಡರೆ ಎಷ್ಟು ಚಂದ, ನಮ್ಮಿಬ್ಬರಿಗೂ ಸಮಾನ ಆಸಕ್ತಿ, ಮನೋಭಾವನೆಗಳು, ಚಿಕ್ಕ ವಯಸ್ಸಿನಿಂದಲೂ ಇಬ್ಬರ ಒಡನಾಟವಿತ್ತು, ಮೇಲಾಗಿ ಆಕೆ ನೋಡಲು ಸುಂದರಿ ಮತ್ತು ಗುಣಸಂಪನ್ನೆ. ಅ ಮನೆಯಿಂದ ಈ ಮನೆಗೆ ವಧುವಾಗಿ ಬರುತ್ತಾಳೆ ಅಷ್ಟೆ. ಹಿಂದಿನಂತೆಯೇ ಓಡಾಟ ಮುಂದುವರೆಯುವುದು. ತಮ್ಮಿಬ್ಬರ ನಡುವೆ ವಯಸ್ಸಿನ ಅಂತರದ ಪ್ರಶ್ನೆಯೊಂದೇ. ಹೀಗೇ ಆಲೋಚಿಸುತ್ತಾ ಮಲಗಿದ ಮಹೇಶನಿಗೆ ನಿದ್ರೆ ಯಾವಾಗ ಆವರಿಸಿತೋ ತಿಳಿಯಲಿಲ್ಲ. ಬೆಳಗ್ಗೆ ಎಂದಿಗಿಂತಲೂ ತುಸು ತಡವಾಗಿ ಎಚ್ಚರವಾಯಿತು. ಪ್ರಾಥಃವಿಧಿಗಳನ್ನು ಪೂರೈಸಿ ಸ್ನಾನ, ಪೂಜೆಯ ನಂತರ ಅಡುಗೆ ಮನೆಗೆ ಬಂದ.
ಒಲೆಯ ಮುಂದೆ ಕುಳಿತು ಅಡುಗೆ ತಯಾರಿ ನಡೆಸುತ್ತಿದ್ದ ಗೌರಮ್ಮ ಮಹೇಶ ಬಂದಿದ್ದು ನೋಡಿ ”ಓ..ಬಾ, ಮಗಾ ಇಕೋ ತೊಗೊಂಡು ಕುಡಿ” ಎಂದು ರಾಗಿ, ಗೋಧಿ, ಹೆಸರು, ಕಡಲೆ, ನೆನಸಿಟ್ಟು ಮೊಳಕೆ ಬರಿಸಿ ಅವನ್ನು ಹುರಿದು ಪುಡಿಮಾಡಿ ಸೋಸಿ ಅದಕ್ಕೊಂದು ಸ್ವಲ್ಪ ಬೆಲ್ಲ ಹಾಕಿ ಹದವಾಗಿ ಕಾಯಿಸಿದ್ದ ಗಂಜಿಯನ್ನು ಒಂದು ಲೋಟಕ್ಕೆ ಬಗ್ಗಿಸಿ ಅದನ್ನವನ ಕೈಗೆ ಕೊಟ್ಟರು. ಹಾಗೇ ”ನೆನ್ನೆ ರಾತ್ರಿ ನಿಮ್ಮ ಅಪ್ಪಯ್ಯ ಹೇಳಿದ ವಿಚಾರ ಯೋಚನೆ ಮಾಡಿದೆಯಾ? ನಿನ್ನ ಇಷ್ಟವೇನು ಮಗಾ?” ಎಂದು ಪ್ರಶ್ನಿಸಿದರು.
”ಹೂಂ ನಮಗೆಲ್ಲಾ ಇಷ್ಟವಿದ್ದರೆ ಆಯ್ತಾ, ದೇವೀನೂ ಕೇಳಬೇಕಲ್ಲವಾ. ಅವಳು ಏನು ಹೇಳ್ತಾಳೋ. ಅದರ ಮೇಲೆ ನನ್ನ ತೀರ್ಮಾನ” ಎಂದು ಯಾವುದನ್ನೂ ಖಚಿತವಾಗಿ ಹೇಳದೆ ಗಂಜಿ ಕುಡಿದು ಮುಗಿಸಿ ಲೋಟ ಅಲ್ಲಿಟ್ಟು ”ಅಮ್ಮಾ ನಾನು ತೋಟದ ಕಡೆಗೆ ಹೋಗ್ತೀನಿ. ಬರೋದು ತಡವಾದರೆ ಸುಬ್ಬು ಹತ್ತಿರ ಬುತ್ತಿ ಕಳಿಸಿಕೊಡಿ ” ಎಂದು ಹೇಳಿದ.
ಸುಬ್ಬುವಿನ ತಾಯಿ ಮಂಗಳಾ ”ಮಹೇಶಪ್ಪಾ ಅವನಾಗಲೇ ತೋಟಕ್ಕೆ ಹೋಗಿಯಾಯ್ತು. ನೀವು ಹೋದಮೇಲೆ ಅವನ್ನಿಲ್ಲಿಗೆ ಕಳಿಸಿ” ಎಂದಳು.
”ಓ ! ಮರೆತೇ ಬಿಟ್ಟಿದ್ದೆ, ನೆನ್ನೆ ಬಾಳೆಗೊನೆಗಳನ್ನು ಕಡಿಸಿ ಅಲ್ಲೇ ರೂಮಿನಲ್ಲಿ ಇರಿಸಿದ್ದೆವು. ಅವನ್ನು ಕೊಂಡಿದ್ದವರು ಬೆಳಗ್ಗೇನೇ ಗಾಡಿ ತೆಗೆದುಕೊಂಡು ಬರ್‍ತೀವಿ ಅಂದಿದ್ದರು. ಬೇಗನೇ ಹೋಗಿ ಲೋಡ್ ಮಾಡಿಸಲು ಸಹಾಯಮಾಡು ಅಂತ ನಾನೇ ಹೇಳಿದ್ದೆ. ಆಯಿತು ಮಂಗಳಕ್ಕ, ನಾನು ಹೋಗಿ ಅವನನ್ನು ಕಳಿಸುತ್ತೇನೆ. ಅವನು ಊಟಮುಗಿಸಿದ ಮೇಲೇ ನನಗೆ ಕಳುಹಿಸಿಕೊಡಿ. ಅಂದ ಹಾಗೇ ಇವತ್ತೇನು ಊಟಕ್ಕೆ?” ಎಂದು ಕೇಳಿದ ಮಹೇಶ.
”ಬೆರೆಕೇ ಸೊಪ್ಪಿನ ಸಾರು, ಮುದ್ದೆ, ಅನ್ನ, ಹುರುಳಿ ಹಪ್ಪಳ, ಗಟ್ಟಿಮೊಸರು, ಮಜ್ಜಿಗೆ. ಮತ್ತೇನಾದರೂ ಬೇಕೇನು?” ಕೇಳಿದರು ಗೌರಮ್ಮ.
”ಬಾಳಕದ ಮೆಣಸಿನಕಾಯಿ ನಾಲ್ಕೈದು ಕರಿದು ಕಳಿಸಿ” ಎಂದು ಹೇಳಿ ಹೊರನಡೆದ ಮಹೇಶ.
”ಅಹಾ ! ರುಚಿಕಂಡಣ್ಣಾ, ಎಲ್ಲವೂ ಸಮವಾಗಿರಬೇಕು ಅವನಿಗೆ ಹಂಗೆ ಹಿಂಗೆ ಒಪ್ಪಲ್ಲ. ಅವನಿಗೇನಾದರೂ ದೇವೀನ ತಂದರೆ.. ಅಲ್ಲಾ ಅವರಿಬ್ಬರೂ ಒಬ್ಬರಿಗೊಬ್ಬರು ಪಸಂದು ಮಾಡಿದರೆ ಬಹಳಾ ವೈನಾಗಿರುತ್ತೆ ಮಂಗಳಾ. ಆ ಪುಟ್ಟಿ ನೋಡಲಷ್ಟೇ ಅಂದಗಾತಿಯಲ್ಲಾ, ಗುಣದಲ್ಲೂ ಅಪರಂಜಿಯಂಥೋಳು. ಇಂಥಹ ಕೆಲಸ ಬರಲ್ಲಾ ಅನ್ನೊಹಂಗಿಲ್ಲ. ನಮ್ಮ ಕೈಲೇ ಆಡಿಬೆಳೆದೋಳು. ಆಮನೆ, ಈಮನೆ ಅಂಗಳದಲ್ಲೇ ಓಡಾಡುತ್ತಾ ಹೆಣ್ಣಾದವಳು. ಓದಿಯೂ ಇದ್ದಾಳೆ. ನಯ, ನಾಜೂಕು, ಮಿಗಿಲಾಗಿ ದಾಷ್ಟಿಕ ಹೆಣ್ಣುಮಗಳು. ಹೀಗೊಂದು ಪ್ರಸ್ತಾಪ ಬರಬಹುದೆಂದು ಮೊದಲೇ ಅಂದುಕೊಂಡಿರಲಿಲ್ಲ..ಅದಕ್ಕೇ ಎನೋ ಇಬ್ಬರಿಗೂ ಬೇರೆಲ್ಲೂ ಸಂಬಂಧ ಕೂಡಿಬರಲಿಲ್ಲ. ಹಿರಿಯರೇಳ್ತಾರಲ್ಲಾ ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ವಂತೆ. ಆದದ್ದೆಲ್ಲಾ ಒಳ್ಳೆಯದೇ ಅಂದುಕೊಳ್ಳೋಣ. ಇನ್ನೊಂದು ಮಾತು ಮಂಗಳಾ ಸುಬ್ಬೂಗೂ ಒಬ್ಬ ಜೊತೆಗಾತಿಯನ್ನು ಹುಡುಕಿದರೆ ಎರಡೂ ಮದುವೆಗಳನ್ನು ಒಟ್ಟಿಗೇ ಮಾಡಿಬಿಡಬಹುದು. ನೀನೇನಂತಿ?” ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಹೇಳಿದರು ಗೌರಮ್ಮ.
”ದೇವರಿಚ್ಛೆ ಹಾಗಿದ್ದರೆ ಹಾಗೇ ಮಾಡೋಣ.ಅದಕ್ಕೂ ಮುಂಚೆ ನಾನು ನಿಮ್ಮೊಡನೆ ಒಂದು ವಿಷಯ ಹಂಚಿಕೊಳ್ಳಬೇಕು. ಹೇಗೆ ಹೇಳೋದೂಂತ ತಿಳಿಯುತ್ತಿಲ್ಲ” ಎಂದಳು ಮಂಗಳಮ್ಮ.
”ಏನದು? ಹೇಳಮ್ಮಾ, ನಾನೇನು ಹೊರಗಿನವಳೇ? ತಾಯಿಮಗ ಇಬ್ಬರೂ ನಮ್ಮ ಮನೆಗೋಸ್ಕರ ಎಷ್ಟು ದುಡಿಯುತ್ತಿದ್ದೀರಿ. ಅಲ್ಲದೆ ಸುಬ್ಬು ಬೇರೆ ನನ್ನ ಮಗ ಮಹೇಶ ಬೇರೆಯಲ್ಲ ನನಗೆ. ಸಂಕೋಚ ಬಿಟ್ಟು ಏನೇ ಇದ್ದರೂ ಹೇಳು” ಎಂದರು ಗೌರಮ್ಮ.
”ಮತ್ತೇ..ಮತ್ತೇ..ದೇವಿಯ ಚಿಕ್ಕತ್ತೆ ಅದೇ ಕೊನೆಯವರು ಕಾತ್ಯಾಯಿನಿ ಅಮ್ಮನರ ಮೊಮ್ಮಗಳು ಚಂದ್ರಿಕಾನ್ನ ಸುಬ್ಬು ಇಷ್ಟಪಡ್ತಾವ್ನೇ. ಆ ಹುಡುಗಿಗೂ ಮನಸ್ಸಿದ್ದ ಹಾಗೆ ಕಾಣುತ್ತೆ. ಅವರ ಪೋಷಕರು ಕೊಡಲು ಒಪ್ಪಿದರೆ ಒಂದು ಮಾತು ಅಯ್ಯನವರ ಹತ್ತಿರ ಕೇಳಿಸೋಣ, ಒಪ್ಪದಿದ್ದರೆ ಬೇಡ. ನಾನು ಸುಬ್ಬು ನಿಮ್ಮಾಶ್ರಯದಲ್ಲಿದ್ದೇವೆ ನಿಜ. ಅವನಿಗೂ ಅಯ್ಯನವರು ಅವರಜ್ಜನ ಆಸ್ತಿಯಿಂದ ಬಂದ ಹಣದಲ್ಲಿ ಸ್ವಲ್ಪ ಜಮೀನು ಮಾಡಿಕೊಟ್ಟಿದ್ದಾರೆ. ಒಂದು ಸಣ್ಣ ಮನೆಯೂ ಇದೆ. ಮದುವೆಯಾದಮೇಲೆ ಗಂಡಹೆಂಡಿರು ಇಲ್ಲೇ ಇರುತ್ತೇವೆಂದರೆ ಅಡ್ಡಿಯಿಲ್ಲ. ಇಲ್ಲವೆಂದರೆ ಆ ಮನೆಯಲ್ಲಿ ಇರಲಿ. ಕೆಲಸ ಬೊಗಸೆ ಈ ಮನೆಯದ್ದೇ ಅದನ್ನೇನೂ ಬಿಡುವಂತಿಲ್ಲ. ವಾಸ ಮಾತ್ರ ಅಲ್ಲಿ. ನಾನಂತೂ ಎಲ್ಲೂ ಹೋಗುವಳಲ್ಲ. ನನ್ನ ಠಿಕಾಣಿ ಇಲ್ಲೇ” ಎಂದಳು ಮಂಗಳಾ.
ತನ್ನ ತವರಿನ ಬಂಧುವಾದ ಮಂಗಳಾ ಮತ್ತು ಅವಳ ಮಗ ಸುಬ್ಬುವನ್ನು ಕರೆದುಕೊಂಡು ಬಂದಾಗಿನ ಚಿತ್ರ ಗೌರಮ್ಮನ ಕಣ್ಮುಂದೆ ಬಂದು ನಿಂತಿತು. ಅವರ ಬವಣೆ ನೋಡಲಾಗದೆ ತಮ್ಮ ಮನೆಯವರನ್ನೊಪ್ಪಿಸಿದ್ದು ಹೆಣ್ಣುಮಕ್ಕಳಿಗೆ ಮದುವೆಯಾಗಿ ಮಗನು ಓದಿನ ಸಲುವಾಗಿ ಮನೆಯಿಂದ ಹೊರಗಿದ್ದುದರಿಂದ ಮನೆಯಲ್ಲಿನ ನೀರವತೆಯನ್ನು ಕಳೆದುಕೊಳ್ಳಲು, ನಮಗೆ ಜೊತೆಯಾಗಿ ಇರಲೆಂದು ಯೋಚಿಸಿದ್ದು ಎಲ್ಲವೂ ನೆನಪಾಯಿತು. ಪಾಪ ಹಾಗೆ ಬಂದವರು ಈಗ ನಮ್ಮಲ್ಲೇ ಒಬ್ಬರಾಗಿಬಿಟ್ಟಿದ್ದಾರೆ. ಅವರಿಗೆ ತಮ್ಮದು ಅಂತ ಆಸೆ ಇರುವುದಿಲ್ಲವೇ? ತಪ್ಪೇನಿದೆ. ಅವರುಗಳೊಪ್ಪಿದರೆ ಈ ಮನೆಗೆ ಮತ್ತೂ ಒಳ್ಳೆಯದೇ ಎಂದುಕೊಂಡರು ಗೌರಮ್ಮ.
”ಅಕ್ಕಾ ಏನೂ ಮಾತನಾಡುತ್ತಿಲ್ಲ, ನಿಮಗೆ ಸರಿಯೆನ್ನಿಸದಿದ್ದರೆ ಬೇಡ ”ಎಂದಳು ಮಂಗಳಾ.
”ಛೇ..ಛೇ.. ಹಾಗೇಕೆ ಅಂದುಕೊಳ್ಳುತ್ತೀ ಮಂಗಳಾ, ಇದು ಒಳ್ಳೇ ಸುದ್ದೀನೇ. ಆ ಪೋರಿನೂ ನಮ್ಮ ಸುಬ್ಬು ಓದುತ್ತಿದ್ದ ಶಾಲೆಯಲ್ಲೇ ಕಲಿಯುತ್ತಿದ್ದಳು. ಅವಳನ್ನು ಮುಂದಕ್ಕೆ ಓದಲು ಕಳಿಸಿದಂತಿತ್ತು. ಒಂದೆರಡು ವರ್ಷ ಸುಬ್ಬುವಿಗಿಂತ ಕಿರಿಯವಳಿರಬೇಕು. ಇರಲಿ ಯಾವುದಕ್ಕೂ ಒಂದು ಮಾತು ಕೇಳಿಸೋಣ, ಅವರೇನು ಧಿಮಾಕಿನ ಜನವಲ್ಲ. ಕಂಡು ನೋಡಿದವರೇ, ಒಂದು ಹೆಣ್ಣಿದ್ದ ಕಡೆ ಗಂಡಿನವರ ಪ್ರಸ್ತಾಪ ಇದ್ದೇ ಇರುತ್ತದೆ. ಅವರು ಸಮ್ಮತಿಸಿದರೆ ಸೈ, ಇಲ್ಲದಿದ್ದರೆ ಬೇರೆ ಕಡೆ ನೋಡಿದರಾಯ್ತು.” ಎಂದು ಹೇಳಿ ಬೇರೆ ಕೆಲಸಗಳ ಕಡೆಗೆ ಗಮನ ಹರಿಸಿದರು.
ಅಕ್ಕಾ ಏನನ್ನುತ್ತಾರೋ ಎಂಬ ಆತಂಕದಲ್ಲಿದ್ದ ಮಂಗಳಾಳಿಗೆ ಅವರ ಕಡೆಯಿಂದ ಬಂದ ಉತ್ತರ ಕೇಳಿ ಮನಸ್ಸು ನಿರಾಳವಾಗಿ ತನ್ನ ಕೆಲಸದಲ್ಲಿ ತೊಡಗಿದಳು.
ತೋಟಕ್ಕೆ ಬಂದ ಮಹೇಶನನ್ನು ನೋಡಿದ ಸುಬ್ಬಣ್ಣ ತನಗೆ ಬೆಳಗ್ಗೆ ಅವರು ಹೇಳಿದ್ದ ಕೆಲಸವನ್ನು ಮುಗಿಸಿದ್ದು ನಂತರ ಜಮೀನಿನ ಕೆಲಸಗಳ ಬಗ್ಗೆ, ಆಳುಕಾಳುಗಳಿಗೆ ಕೊಟ್ಟಿರುವ ನಿರ್ದೇಶನಗಳ ಬಗ್ಗೆ ಚಾಚೂ ತಪ್ಪದೆ ವರದಿ ಮಾಡಿದ. ಎಲ್ಲವನ್ನೂ ಕೇಳಿದ ಮಹೇಶ ”ಅಬ್ಬಾ ! ಯಾವ ಜನ್ಮದ ಪುಣ್ಯಾನೋ ಕಾಣೆ ಅಮ್ಮ,ಮಗ ನಮ್ಮ ಮನೆಗೆ ಬಂದಿದ್ದಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ದೇವರೇ ಇವರು ಕೊನೆವರೆಗೆ ಹೀಗೇ ಮುಂದುವರಿಯುವಂತೆ ಕರುಣಿಸು. ಹಾಗೆ ನನಗೂ ಮನಸ್ಸಿನಲ್ಲಿ ಅವರ ಬಗ್ಗೆ ಒಡಕು ಮೂಡದಂತೆ ನೋಡಿಕೋ” ಎಂದು ಮನದಲ್ಲೇ ಪ್ರಾರ್ಥಿಸಿದ.
”ಮಹೇಶಣ್ಣಾ ಎಲ್ಲಿ ಕಳೆದುಹೋದಿರಿ? ನಾನಿನ್ನು ಮನೆಗೆ ಹೋಗಿ ಬರುತ್ತೇನೆ. ಇನ್ನೂ ಸ್ನಾನವಾಗಿಲ್ಲ, ಬಾಳೇಹಣ್ಣಿನ ವ್ಯಾಪಾರಿಗಳು ಹೇಳಿದ್ದಕ್ಕಿಂತ ಬೇಗನೇ ಬಂದು ಫೋನ್ ಮಾಡಿದ್ದರು. ನಾನೇ ರಿಸೀವ್ ಮಾಡಿದ್ದೆ. ನೀವಿನ್ನೂ ಮಲಗಿದ್ದಿರಿ, ಅಲ್ಲದೆ ನನಗೆ ಈ ಕೆಲಸ ವಹಿಸಿದ್ದರಿಂದ ನಾನೇ ಬೇಗ ಬಂದುಬಿಟ್ಟಿದ್ದೆ” ಎಂದ ಸುಬ್ಬಣ್ಣ.
ಅವನ ಮಾತಿನಿಂದ ಎಚ್ಚೆತ್ತ ಮಹೇಶ ”ಸಾರಿ ಕಣೋ ಸುಬ್ಬು, ನೀನು ಮನೆಗೆ ಹೋಗಿ ಬಾ. ಊಟಕ್ಕೇನೂ ಅವಸರವಿಲ್ಲ. ಈಗ ತಾನೇ ಗಂಜಿ ಕುಡಿದು ಬಂದೆ. ನೀನು ಸ್ನಾನ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ನಂತರ ಬುತ್ತಿ ತಂದರೆ ಸಾಕು ” ಎಂದು ಅವನನ್ನು ಬೀಳ್ಕೊಟ್ಟನು.
ಹೊಲ, ಗದ್ದೆ, ತೋಟ ಎಲ್ಲವನ್ನೂ ಒಮ್ಮೆ ಸುತ್ತುಹಾಕಿ ರೇಷ್ಮೆಸೊಪ್ಪಿನ ಕಟಾವಿಗೆ ಬಂದವರ ಹತ್ತಿರ ವ್ಯವಹಾರ ಮುಗಿಸಿದ. ಎರೆ ಗೊಬ್ಬರದ ತಯಾರಿಕೆಯ ಮೆಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ರಂಗನ ಹತ್ತಿರ ಹೋಗಿ ಅಲ್ಲಿನ ಆಗುಹೋಗುಗಳ ಚರ್ಚಿಸಿ ಮುಂದೇನು ಮಾಡಬೇಕೆಂದು ಅವನಿಗೆ ತಿಳಿಸಿಕೊಟ್ಟನು. ಸಸಿಗಳನ್ನು ಕಸಿ ಮಾಡುತ್ತಿದ್ದಲ್ಲಿಗೆ ಬಂದು ನೋಡುತ್ತಿದ್ದಂತೆಯೇ ಅಲ್ಲಿ ಕೆಲಸದಲ್ಲಿದ್ದ ಬೈರಾ ಅವನಲ್ಲಿಗೆ ಬಂದು ಕಸಿ ಮಾಡಿದ್ದ ಸಸಿಗಳನ್ನು ಸಾಲಾಗಿ ಜೋಡಿಸುತ್ತಾ ”ಯಜಮಾನರೇ, ಇದನ್ನು ಇನ್ನೂ ವಸಿ ಜಾಸ್ತಿ ಮಾಡಬೇಕು. ಅದೇನು ಮಂತ್ರ ಹಾಕಿದ್ದೀರೋ ಕಾಣೆ ಸುಮ್ಮನೆ ಎತ್ತರಕ್ಕೆ ಬೆಳೆದು ಬರಡಾದವೇನೋ ಎಂಬಂತಿದ್ದ ತೆಂಗಿನ ಮರಗಳು ಗುತಿಗುತಿ ಕಾಯಿಗಳಿಂದ ಜೋತಾಡ್ತಾ ಇವೆ. ಬರೀ ಛತ್ರಿಯ ಹಾಗೆ ಅಗಲಕ್ಕೆ ಹರಡಿಕೊಂಡು ಬೆಳೆದು ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕಾಯಿ ಕಚ್ಚುತ್ತಿದ್ದ ಹಲಸಿನ ಮರದಲ್ಲಿ ಈಗ ಎಲೆಗೊಂದರಂತೆ ಕಾಯಿ ಬಿಟ್ಟಿವೆ. ಇನ್ನು ಚಿಕ್ಕು, ಸೀಬೆ, ಬೇಲ, ನೇರಳೆ, ಪಪಾಯಿ, ನಿಂಬೆ, ಎರಳೆ, ಬೆಟ್ಟನೆಲ್ಲಿ, ಹುಣಸೆ, ಮಾವು ಕೂಡ ಹೇರಳವಾಗಿ ಬಿಟ್ಟಿವೆ. ಇಂತಹ ಕಡೆ ಕೆಲಸ ಮಾಡೋಕೆ ಖುಷಿಯಾಗ್ತದೆ”. ಎಂದು ಹರ್ಷ ವ್ಯಕ್ತಪಡಿಸಿದ ಬೈರ.
”ಅಬ್ಬಾ ! ಏನೋ ಬೈರಾ ಎಷ್ಟೊಂದು ಪದಗಳು ನಿನ್ನ ಬಾಯಿಂದ ವೈನಾಗಿ ಹೊರಬರುತ್ತಿವೆ” ಎಂದು ಅಚ್ಚರಿಪಟ್ಟ ಮಹೇಶ.
ಅವನ ಮಾತು ಕೇಳಿ ಅಲ್ಲಿದ್ದ ಇತರೆ ಕೆಲಸಗಾರರು ನಗುತ್ತಾ ”ಎಲ್ಲ ನಿಮ್ಮ ಮಹಿಮೆ ಚಿಕ್ಕ ಯಜಮಾನರೇ, ಇಲ್ಲಿ ನೀವೊಬ್ರೇ ಬೆಳೀತಿಲ್ಲಾ ಸುತ್ತಮುತ್ತಲಿನ ರೈತಾಪಿ ಜನರೆಲ್ಲರನ್ನೂ ನಿಮ್ಮ ತೆಕ್ಕೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಹಂಗೇ ಬೇಗನೇ ನಿಮಗೊಂದು ಜೋಡಿಯಾಗಿಬಿಟ್ಟರೆ ವೈನಾಗುತ್ತೆ. ಅದನ್ನು ಆ ದ್ಯಾವರು ಸಿಗುವಂತೆ ಮಾಡಲಿ” ಎಂದು ಒಕ್ಕೊರಲಿನಿಂದ ಹಾರೈಸಿದರು.
”ಹೂ..ಅದೂ ಆಗೋಹಾಗೆ ಕಾಣಿಸ್ತದೆ. ಅದಕ್ಕೆ ನಿಮ್ಮ ಚಿಕ್ಕ ಯಜಮಾನರು ಮನಸ್ಸು ಮಾಡಬೇಕಷ್ಟೇ” ಧ್ವನಿ ಬಂದ ಕಡೆಗೆ ತಿರುಗಿದ ಮಹೇಶನಿಗೆ ತನ್ನ ಕಣ್ಣುಗಳನ್ನು ತಾನೇ ನಂಬಲಾಗಲಿಲ್ಲ. ಊಟದ ಬುತ್ತಿಯನ್ನು ತಲೆಯಮೇಲೆ ಹೊತ್ತಿದ್ದ ಮಂಗಳಮ್ಮ ಅವರ ಹಿಂದೆ ಮಾದೇವಿ ಕಾಣಿಸಿದರು.
”ಇದೇನು ಮಂಗಳಕ್ಕಾ ನೀವು !” ಎಂದು ಕೇಳುತ್ತಾ ತಲೆಯ ಮೇಲಿದ್ದ ಬುಟ್ಟಿಯನ್ನು ಕೆಳಕ್ಕಿಸಲು ಮುಂದಾದ.
”ಏ..ಬೇಡಿ ಮಹೇಶಪ್ಪಾ, ಇಲ್ಲೆಲ್ಲ ಕೆಸರು, ಮಣ್ಣಿನ ಧೂಳು. ತೋಟದ ಮನೆಯ ಮುಂಭಾಗದ ಅಂಗಳಕ್ಕೆ ಹೋಗೋಣ ನಡೆಯಿರಿ” ಎಂದಳು ಮಂಗಳಾ.
”ಅಲ್ಲಾ ನೀವೇಕೆ ಈ ಬಿಸಿಲಿನಲ್ಲಿ ಬರೋಕೆ ಹೋದಿರಿ? ಸುಬ್ಬು ಬರುತ್ತಿದ್ದ. ಅಥವಾ ಅಪ್ಪಯ್ಯ ಅವನನ್ನು ಬೇರೆಲ್ಲಿಗಾದರೂ ಕಳಿಸಿದ್ದರಾ? ” ಕೇಳಿದ ಮಹೇಶ.
”ಅದೇನೂ ಇಲ್ಲ, ಅಕ್ಕಾವರು ದೇವಿಯ ಜೊತೆ ಬುತ್ತಿ ಕಳುಹಿಸಲು ಹೇಳಿದರು. ಇವತ್ತು ಅವಳಿಗೆ ಎಲ್ಲಿಲ್ಲದ ನಾಚಿಕೆ ಬಂದುಬಿಟ್ಟಿದೆ. ಅವಳ ಬಲವಂತಕ್ಕೆ ನಾನೂ ಜೊತೆಯಲ್ಲಿ ಬಂದೆ. ಬುತ್ತಿ ತಲುಪಿಸಿದ್ದಾಯ್ತು, ನಾನಿನ್ನು ಬರುತ್ತೇನೆ. ಊಟವನ್ನು ನಿಮಗೆ ಬಡಿಸುತ್ತಾಳೋ, ತಿನ್ನಿಸುತ್ತಾಳೋ ಅವಳಿಗೆ ಬಿಟ್ಟದ್ದು. ಪೂಜೆಗೆ ಸ್ವಲ್ಪ ಹೂ ಬೇಕಿತ್ತು ನಾನು ಬಿಡಿಸಿಕೊಂಡು ಹೋಗುತ್ತೇನೆ”. ಎಂದು ಬುಟ್ಟಿಯಲ್ಲಿದ್ದ ವಸ್ತ್ರವನ್ನು ಎತ್ತಿಕೊಂಡರು. ”ಹಾಗೇ ಮನೆಗೆ ಬರುವಾಗ ಬುಟ್ಟಿ, ಸಾಮಾನುಗಳನ್ನು ಮರೆಯದೇ ತನ್ನಿ. ನಾ ಹೊರಟೆ” ಎಂದು ಹೂಗಿಡಗಳಿದ್ದ ಕಡೆ ಮಂಗಳಾ ಹೊರಟಳು.
ಪ್ರತಿದಿನ ತನ್ನೊಡನೆ ಬರುವಾಗ ಹರಳು ಹುರಿದಂತೆ ಪಟಪಟ ಮಾತನಾಡುತ್ತಿದ್ದ ಮಾದೇವಿ ಇಂದು ಇಲ್ಲಿಗೆ ಬರಲು ಒಬ್ಬರ ನೆರವು ಪಡೆದಿದ್ದಾಳೆ. ಬಂದಮೇಲೂ ಮೌನಗೌರಿಯಂತೆ ಕುಳಿತಿದ್ದ ಬಾಲ್ಯಕಾಲದ ಗೆಳತಿಯ ಕಡೆಗೆ ನೋಡಿದ ಮಹೇಶ. ಅವರ ತಂದೆತಾಯಿಗಳಿಗಿಂತ ಅಜ್ಜ, ಅಜ್ಜಿಯರ ಹೋಲಿಕೆಯನ್ನೇ ಹೊದ್ದಂತಿದ್ದಳು ಮಾದೇವಿ. ಅಜ್ಜನಂತೆ ಎತ್ತರದ ನಿಲುವು, ಅಜ್ಜಿಯಂತೆ ಲಕ್ಷಣವಾದ ಬಣ್ಣ. ಉಟ್ಟಿದ್ದು ನೂಲಿನ ಸೀರೆಯಾದರೂ ಒಪ್ಪ ಓರಣವಾಗಿತ್ತು. ಎಂದಿಗಿಂತ ಈದಿನ ಹೆಚ್ಚು ಮುತುವರ್ಜಿಯಿಂದ ಅಲಂಕಾರ ಮಾಡಿಕೊಂಡು ಬಂದಂತೆ ಕಾಣಿಸಿತವನಿಗೆ. ಅಥವಾ ತನ್ನ ಭ್ರಮೆಯೋ ಅಂದುಕೊಂಡು ಮೆಲುವಾಗಿ ಅವಳನ್ನು ”ಮಾದೇವಿ” ಎಂದು ಕರೆದ.
ಹೇಗೆ ಮಾತಿಗಾರಂಭಿಸಬೇಕೆಂದೇ ತೋಚದೆ ಕುಳಿತಿದ್ದ ಅವಳಿಗೆ ಮಹೇಶನ ಕರೆಯಿಂದ ಉತ್ತೇಜನ ಸಿಕ್ಕಂತಾಯಿತು. ”ಕೈಕಾಲು ತೊಳೆದುಕೊಂಡು ಬನ್ನಿ, ಊಟ ಮಾಡುವಿರಂತೆ” ಎಂದಳು.
”ಅಬ್ಬಾ ! ಅಂತೂ ಮಾತನಾಡಿದೆಯಲ್ಲಾ. ಈಗ ಮಂಗಳಕ್ಕ ಹೇಳಿದಂತೆ ಊಟ ಬಡಿಸುತ್ತೀಯೋ ಇಲ್ಲಾ ಮಾಡಿಸುತ್ತೀಯೋ?” ಎಂದ ಮಹೇಶ.
ಮಹೇಶನ ಮಾತಿಗೆ ನಾಚುತ್ತಾ ”ಸದ್ಯಕ್ಕೆ ಬಡಿಸುತ್ತೇನೆ, ನಂತರ ನೀವೊಪ್ಪಿದರೆ ಮಾಡಿಸುತ್ತೇನೆ” ಎಂದಳು ಮಾದೇವಿ.
‘ಅಂದರೆ..ನೀನು ಹಿರಿಯರ ಅಭಿಪ್ರಾಯಕ್ಕೆ ಮಣಿದು ಹೇಳುತ್ತಿದ್ದೀಯೋ ಇಲ್ಲಾ…’
ಅವನ ಮಾತನ್ನು ಅರ್ಧದಲ್ಲೇ ತಡೆಯುತ್ತಾ ‘ಇದರಲ್ಲಿ ಯಾರ ಒತ್ತಡವೂ ಇಲ್ಲ. ನಾನೇ ಮನಸಾರೆ ಒಪ್ಪಿದ್ದೇನೆ. ನಿಮ್ಮ ಒಪ್ಪಿಗೆ ಮುಖ್ಯ ನನಗೆ’ ಎಂದು ಎದ್ದು ಬುಟ್ಟಿಯಿಂದ ತಟ್ಟೆ ತೆಗೆದು ತೊಳೆಯುವ ನೆಪದಲ್ಲಿ ಅಲ್ಲಿಯೇ ಇದ್ದ ನಲ್ಲಿಯ ಬಳಿಗೆ ಹೋದಳು.
ಈಕೆ ವಿದ್ಯಾವಂತೆ, ಆಧುನಿಕ ಮನೋಭಾವದವಳು, ವಯಸ್ಸಿನ ಅಂತರ ಇವಳ ಮನಸ್ಸಿಗೆ ಬರಲಿಲ್ಲವೇ? ಬಂದರೂ ಅದನ್ನು ಕಡೆಗಣಿಸಿದಳೇ? ಅಥವಾ ಇವಳೂ ನನ್ನಂತೆಯೇ ಕಂಡು ಕೇಳಿರದ, ಮೊದಲು ನೋಡಿರದವರು ಬಾಳಸಂಗಾತಿಯಾಗಿ ಬರುವುದಕ್ಕಿಂತ… ಇರಬಹುದು. ಒಳ್ಳೆಯದೇ ಆಯಿತು. ಹೀಗೇ ಆಗಬೇಕೆಂದು ದೇವರ ನಿಯಮವಿತ್ತೇನೋ ಎಂದು ಇಲ್ಲಸಲ್ಲದ ಯೋಚನೆಗಳನ್ನು ಬದಿಗಿಟ್ಟು ನನ್ನ ಸಮ್ಮತಿಯನ್ನೂ ಹೇಳಿಬಿಡಬೇಕು ಎಂದುಕೊಂಡ ಮಹೇಶ.
”ಹಲೋ..ಮಹೀ, ತಟ್ಟೆಗೆ ಮುದ್ದೆ ಬಡಿಸಿದ್ದಾಯಿತು. ಏನು ಯೋಚಿಸುತ್ತೀದ್ದೀರಾ?” ಎಂದು ಕೇಳಿದ ದೇವಿಯ ಮಾತಿನಿಂದ ಎಚ್ಚೆತ್ತು ಅತ್ತಿತ್ತ ಕಣ್ಣು ಹಾಯಿಸಿ ಸಾರನ್ನು ಬಡಿಸಲು ಚಾಚಿದ್ದ ಅವಳ ಕೈಯನ್ನು ಹಿಡಿದು ”ಇದೇ ನನ್ನ ಉತ್ತರ. ನೀನು ಹೇಳಿದಂತೆ ಸದ್ಯಕ್ಕೆ ಬಡಿಸು” ಎಂದ ಮಹೇಶ.
ನಂತರ ಊಟ ಮುಂದುವರಿದಂತೆ ಅವರಿಬ್ಬರ ಮಧ್ಯೆ ಇದ್ದ ಸಂಕೋಚದ ತೆರೆ ಸರಿದು ಮುಕ್ತವಾಗಿ ತಂತಮ್ಮ ಅಂತರಂಗದ ಭಾವನೆಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ಬೈರನ ಕೂಗು ಅವರನ್ನೆಚ್ಚರಿಸಿತು. ”ದೇವಿ ಬೈರ ಇತ್ತಕಡೆಗೆ ಬರುತ್ತಿದ್ದಾನೆಂದರೆ ಅಮ್ಮ ಕಳಿಸಿದ ಊಟಕ್ಕೇಂತ ಅರ್ಥ. ಉಳಿದಿರುವ ಪದಾರ್ಥಗಳು ತೀರ ಸ್ವಲ್ಪವಿದ್ದರೆ ಬೇಡ” ಎಂದನು.
”ಅವನ್ಯಾಕೆ ಊಟಕ್ಕೆ ಇಲ್ಲಿಗೆ ಬರುತ್ತಾನೆ? ನಾನೂ ಮಂಗಳಕ್ಕ ಇಲ್ಲಿಗೆ ಬರುತ್ತಿರುವಾಗ ಆತನ ಹೆಂಡತಿ ನಿಂಗಿ ಗಂಡನಿಗೆ ಬುತ್ತಿ ತಂದುಕೊಟ್ಟು ಮನೆಗೆ ಹೋಗುತಿದ್ದುದನ್ನು ನಾನೇ ನೋಡಿದೆ. ಅವಳು ನಮ್ಮನ್ನು ಮಾತನಾಡಿಸಿಕೊಂಡು ಹೋದಳು’ ”ಎಂದಳು ಮಾದೇವಿ.
”ಹೂಂ ಇರಬಹುದು. ಆದರೆ ಅವನ ಹೊಟ್ಟೆಯ ವಿಷಯ ನಿನಗೆ ಗೊತ್ತಿಲ್ಲ. ನಾನವನನ್ನು ಚಿಕ್ಕವನಾಗಿದ್ದಾಗಿನಿಂದಲೂ ಬಲ್ಲೆ. ನಮ್ಮ ಮನೆಯಲ್ಲಿ ವಿಶೇಷವೇನಾದರು ಇದ್ದರೆ ರೈತಾಪಿ ಜನರನ್ನೆಲ್ಲ ಊಟಕ್ಕೆ ಕರೆಯುತ್ತಿದ್ದರು. ಬೈರನೂ ಅವರಲ್ಲೊಬ್ಬ. ನಮ್ಮ ಅಜ್ಜಿ ಬೈರನನ್ನು ಎಲ್ಲರ ಪಂಕ್ತಿಯಲ್ಲಿ ಕೂಡಿಸುತ್ತಿರಲಿಲ್ಲ. ಬಡಿಸುವಾಗ ತಾವೇ ಮುಂದಾಗಿ ಗಮನಿಸುತ್ತಿದ್ದರು. ಎಲ್ಲರದ್ದೂ ಮುಗಿದ ನಂತರ ಅವನನ್ನು ಬಾಗಿಲ ಮರೆಯಲ್ಲಿ ಪ್ರತ್ಯೇಕವಾಗಿ ಕೂಡಿಸಿ ಬಡಿಸುತ್ತಿದ್ದರು. ಅವನನ್ನು ನೋಡುತ್ತಿದ್ದ ನನಗೆ ನನ್ನಜ್ಜ ಹೇಳುತ್ತಿದ್ದ ಕಥೆಯ ಬಕಾಸುರನ ನೆನಪಾಗುತ್ತಿತ್ತು. ಅವನ ಹಾಗೆ ಬಂಡಿಗಟ್ಟಲೆ ಅಲ್ಲದಿದ್ದರೂ ಇತರರಿಗಿಂತ ಹೆಚ್ಚು ಅನ್ನಿಸುತ್ತಿತ್ತು. ಆಗ ನಾನು ಅಜ್ಜಿಯನ್ನು ಕೇಳಿದರೆ ‘ಅವರು ಛೇ ಬಿಡ್ತು ಅನ್ನು, ಹಾಗೆಲ್ಲ ಊಟ ಮಾಡುತ್ತಿರುವಾಗ ಕಣ್ಣಹಾಕಬಾರದು. ದೇವರು ಅವನಿಗೆ ದೊಡ್ಡ ಹೊಟ್ಟೆ ಕೊಟ್ಟಿದ್ದಾನೆ. ಜೀರ್ಣವಾಗಿಬಿಡುತ್ತದೆ. ಹಾಗೇ ನಾಲ್ಕು ಜನರು ಮಾಡುವ ಕೆಲಸವನ್ನು ಒಬ್ಬನೇ ಮಾಡಿ ಮುಗಿಸುವಷ್ಟು ಶಕ್ತಿಯೂ ಇದೆ’ ಎಂದು ಹೇಳುತ್ತಿದ್ದರು. ದಿನಗಳೆದಂತೆ ಅಜ್ಜಿ ಹೇಳುತ್ತಿದ್ದ ಮಾತುಗಳ ಸತ್ಯ ಅರ್ಥವಾಯಿತು. ಈಗಂತು ನೀನೇ ನೋಡಿದ್ದೀಯಲ್ಲಾ ಅವನ ಕೆಲಸದ ಪ್ರಮಾಣವನ್ನು”. ಎಂದು ಹೇಳಿದ ಮಹೇಶನ ಮಾತಿಗೆ ಮಾದೇವಿ ”ಹೂಂ ಈಗ ನನಗೆ ನೆನಪಿಗೆ ಬಂತು ಆತನ ಮದುವೆಯಾದ ಹೊಸತರಲ್ಲಿ ಅವನ ಹೆಂಡತಿ ನಮ್ಮಜ್ಜಿಯ ಮುಂದೆ ಹೇಳುತ್ತಿದ್ದ ಮಾತು, ಅವ್ವಾ ನನ್ನ ಗಂಡನ ಹೊಟ್ಟೆ ಕನ್ನಂಬಾಡಿಕಟ್ಟೆ ಇದ್ದಂಗೆ, ಎಷ್ಟು ಬೇಯಿಸಿ ಹಾಕಿದರೂ ತಿಂದು ತೇಗುತ್ತಾನೆ” ಎಂದು. ಅದಕ್ಕೆ ನಮ್ಮಜ್ಜಿ ”ಹೂ ಅದು ಗೊತ್ತಿರುವ ವಿಷಯಾನೇ, ಆದರೆ ಕೈಹಿಡಿದ ಗಂಡನ ಹೊಟ್ಟೆಯ ಬಗ್ಗೆ ಬೇರೆಯವರ ಎದುರಿನಲ್ಲಿ ಹೀಗೆಲ್ಲ ಹೇಳಬಾರದು ನಿಂಗಿ ”ಎಂದು ಬುದ್ಧಿ ಹೇಳುತ್ತಿದ್ದರು. ಅದಕ್ಕವಳು ”ಸರಿಯವ್ವಾ ಮನೆಯಲ್ಲಿ ಎಷ್ಟಾದರೂ ಮುಕ್ಕಲಿ ಮಾರಾಯ, ಹೋದಕಡೆಯಲ್ಲಿ ವಸಿ ನಿಗವಾಗಿರಬೇಕಲ್ಲವ್ರಾ..ಇಲ್ಲಾಂದ್ರೆ ಕಣ್ಣೆಸರಾಗಲ್ಲವಾ?” ಎಂದು ತನ್ನ ಕಾಳಜಿಯನ್ನು ವ್ಯಕ್ತಪಡಿಸಿದ್ದಳು.
‘ಓ ಅದರ ವಾಸನೆ ನಿನಗೂ ಸ್ವಲ್ಪ ತಿಳಿದಿದೆ. ಇಲ್ಲಿ ಕೇಳು ಮನೆಯಿಂದ ಬುತ್ತಿ ಬಂದಿದೆ ಎಂದು ಗೊತ್ತಾದ ದಿವಸ ಏನಾದರೂ ನೆವ ಮಾಡಿಕೊಂಡು ಇಲ್ಲಿಗೆ ಬರುತ್ತಾನೆ. ನಮ್ಮ ಊಟವಾದ ನಂತರ ಏನಾದರೂ ಮಿಕ್ಕೇ ಇರುತ್ತದೆಂಬ ನಂಬಿಕೆ ಅವನಿಗೆ. ಅಜ್ಜಿಯಂತೆ ನಮ್ಮ ಅಮ್ಮನ ಕೈಯೂ ದೊಡ್ಡದೇ, ಗೆರೆ ಎಳೆದಂತೆ ಬುತ್ತಿ ಕಳುಹಿಸುವುದಿಲ್ಲ. ಮಿಕ್ಕದ್ದನ್ನು ಮನೆಗೆ ಯಾರು ತೆಗೆದುಕೊಂಡು ಹೋಗುತ್ತಾರೆ. ಇಲ್ಲೇ ಯಾರಿಗಾದರೂ ಕೊಡುವುದು ತಾನೇ. ಬಹುಪಾಲು ಅದರ ಪಾಲುದಾರ ಅವನೇ. ಉಳಿದದ್ದನ್ನು ಕೊಟ್ಟುಬಿಡು” ಎಂದನು ಮಹೇಶ.
‘ಆಯಿತು ಬಿಡಿ, ನೀವು ಅವನ ಹತ್ತಿರ ಮಾತನಾಡುವಷ್ಟರಲ್ಲಿ ಹಾಕಿಕೊಡುತ್ತೇನೆ’ ‘ಎಂದು ಅಡಿಕೆ ಪಟ್ಟೆಯ ದೊನ್ನೆಯನ್ನು ತರಲು ತೋಟದ ಮನೆಯೊಳಕ್ಕೆ ಹೋದಳು ಮಾದೇವಿ.
ಅಷ್ಟರಲ್ಲಿ ಅಲ್ಲಿಗೆ ಬಂದ ಬೈರಾ ”ಯಜಮಾನರೇ, ಕಸಿ ಮಾಡಿದ ಸಸಿಗಳನ್ನು ಕೇಳಿಕೊಂಡು ಒಂದಿಬ್ಬರು ಬಂದವರೆ, ನಿಮಗೆ ಫೋನ್ ಮಾಡುತ್ತೇನೆಂದರು. ನಾನೇ ಬೇಡ ಇಲ್ಲೇ ಬಂದವರೆ, ಊಟ ಮಾಡುತ್ತಿರಬೇಕು, ಆಗಿದ್ದರೆ ನಾನೇ ಕರೆತರುತ್ತೇನೆ ಎಂದು ಬಂದೆ. ಊಟವಾಯಿತೇ? ”ಎಂದು ಕೇಳಿದ.
”ಆಯಿತು ಬೈರಾ, ನಾನು ಅಲ್ಲಿಗೋಗಿ ಬರುತ್ತೇನೆ, ನೀನು ಕೂತುಕೋ, ಮಾದೇವಿ ನಿನಗೆ ಊಟವಿಟ್ಟು ಕೊಡುತ್ತಾಳೆ” ಎಂದು ಅವನ ಉತ್ತರಕ್ಕು ಕಾಯದೇ ಬಂದವರನ್ನು ಮಾತನಾಡಿಸಲು ಹೊರಟ ಮಹೇಶ.
ಅವನ ಮಾತುಗಳು ಬೈರನ ಕಿವಿಗಳಿಗೆ ಹಿತವಾಗಿ ಕೇಳಿದವು. ಮನಸ್ಸಿನಲ್ಲಿ ನಾನು ಬಂದದ್ದೂ ಅದಕ್ಕೇ ಅಲ್ಲವಾ, ದೊಡ್ಡವ್ವಾರ ಕೈಯಿನ ಅಡುಗೆ ಚಪ್ಪರಿಸುವಂತಿರುತ್ತದೆ ಅಂದುಕೊಂಡನು. ‘ದೇವಮ್ಮಾ’ ಎಂದು ಕೂಗಿದ.
‘ಬಂದೇ ಬೈರಾ’ ಎಂದು ಹೇಳುತ್ತಾ ಅಡಿಕೆಪಟ್ಟೆಯ ಒಂದೆರಡು ದೊನ್ನೆಗಳನ್ನು ಹಿಡಿದು ಅಲ್ಲಿಯೇ ಚೊಂಬಿನಲ್ಲಿದ್ದ ನೀರು ಚಿಮುಕಿಸಿ ಡಬ್ಬಿಯಲ್ಲಿದ್ದ ಪದಾರ್ಥಗಳನ್ನು ಅವುಗಳಿಗೆ ಹಾಕಿ ಅವನ ಕೈಗಿತ್ತಳು ಮಾದೇವಿ.
ಕಣ್ಣಳತೆಯಿಂದಲೇ ಅಲ್ಲಿದ್ದ ಪದಾರ್ಥಗಳ ಅಂದಾಜು ಮಾಡಿದ ಬೈರನ ಮನಸ್ಸು ಹಿಗ್ಗಿತು. ಸಣ್ಣದೊಂದು ಮುದ್ದೆ, ಆದರೆ ಮಲ್ಲಿಗೆ ಹೂವಿನಂತಿದ್ದ ಅನ್ನ ಸಾಕಷ್ಟಿತ್ತು. ಅಡಿಕೆ ದೊನ್ನೆಯೊಂದರಲ್ಲಿ ಸಾರು, ಜೊತೆಗೆ ಕರಿದ ಬಾಳPಪಡೆದುಕೊಂಡು ಅವುಗಳನ್ನು ಕಣ್ಣಿಗೊತ್ತಿಕೊಂಡು ಸ್ವಲ್ಪ ದೂರದಲ್ಲಿ ಕುಳಿತ. ಮಾದೇವಿ ಖಾಲಿಯಾದ ಡಬ್ಬಿಗಳನ್ನು ನೀರಿನಲ್ಲಿ ತೊಳೆದು ಬುಟ್ಟಿಯಲ್ಲಿಟ್ಟುಕೊಂಡಳು. ಅಮ್ಮ ಹೇಳಿದ ಮಾತು ನೆನಪಿಗೆ ಬಂದವು. ‘ಮಗಳೇ ಊಟಮಾಡಿ ಮುಗಿಸಿದ ಮೇಲೆ ಮನೆಗೆ ಬಂದುಬಿಡು’ ಮಹೇಶನಿಗಾಗಿ ಕಾಯಬೇಡ. ಅಮ್ಮನ ಮಾತಿಗೆ ‘ಇದೇನಮ್ಮಾ ಎಂದೂ ಇಲ್ಲದ್ದು ಇವತ್ತು ಹೊಸ ಆಚರಣೆ ತರುತ್ತಿದ್ದೀಯಾ’ ಎಂದಿದ್ದಳು.
”ಹಾ..ಮಗಳೇ ಇಂದಿನಿಂದ ಹೊಸದೇ, ಒಪ್ಪಿದರೂ ಸರಿ ಇಲ್ಲದಿದ್ದರೂ ಸರಿ. ಒಂದುಸಾರಿ ಇಬ್ಬರ ಮನೆಗಳಲ್ಲಿ ಮೂಡಿರುವ ವಿಚಾರಗಳಿಗೆ ನಿಮ್ಮಿಬ್ಬರ ಒಮ್ಮತದ ಅಭಿಪ್ರಾಯ ಮುಖ್ಯ. ಅದು ಮೂಡದಿದ್ದರೆ ಇದು ಇಲ್ಲಿಗೇ ನಿಲ್ಲುವಂತಾಗಲಿ. ಇಲ್ಲದಿದ್ದರೆ ಗುಲ್ಲಾಗುತ್ತದೆ, ಅದಾಗುವುದು ಬೇಡ”ಎಂದರು ತಾಯಿ.
ತಾಯಿಯ ಮಾತುಗಳಲ್ಲಿದ್ದ ಎಚ್ಚರಿಕೆ, ಕಾಳಜಿಯನ್ನು ಕಂಡು ಹೆಚ್ಚು ವಾದಿಸದೆ ”ಆಯಿತಮ್ಮ” ಎಂದಷ್ಟೇ ಹೇಳಿದ್ದಳು. ಅತ್ತಕಡೆ ತನಗೆ ಅತ್ತೆಯಾಗಲು ತುದಿಗಾಲಲ್ಲಿ ನಿಂತಿರುವ ಗೌರಮ್ಮ ”ದೇವೀ ನನ್ನ ಮಗ ಬರುವವರೆಗೆ ಕಾಯುತ್ತಿರಬೇಡ, ಬೇಗ ಬಂದುಬಿಡು. ನಾನು ಕಾಯುತ್ತಿರುತ್ತೇನೆ ಹಣ್ಣೋ , ಕಾಯೋ ಅಂತ ತಿಳಿಯೋದಕ್ಕೆ” ಎಂದು ನಗೆಚಾಟಿಕೆ ಮಾಡಿದ್ದರು. ಒಬ್ಬಳೇ ಬರಲು ಮುಜುಗರವಾಗಿ ಮಂಗಳಮ್ಮನ ಜೊತೆಯಲ್ಲಿ ತೋಟಕ್ಕೆ ಬಂದದ್ದು. ಇಲ್ಲಿಗೆ ಬಂದಾಗ ಮಹೇಶನ ಬಾಯಿಂದ ಕೇಳಿದ ಮಾತುಗಳಿಂದ ಎಲ್ಲರ ಆತಂಕ, ತಳಮಳಗಳಿಗೆ ಪೂರ್ಣವಿರಾಮ ಹಾಕಿದಂತಾಯಿತು. ಅದನ್ನು ಹಿರಿಯರಿಗೆ ತಿಳಿಸಲು ತಡವೇಕೆಂದು ಮನೆಗೆ ಹೊರಡಲು ತಯಾರಾದ ಮಾದೇವಿ ಬೈರನಿಗೆ ಹೇಳಿ ಹೋಗಬೇಕೆಂದು ಅವನನ್ನು ಕರೆದಳು. ಊಟ ಮುಗಿಸಿ ದೊನ್ನೆಗಳನ್ನು ತಿಪ್ಪೆಗೆ ಹಾಕಿ ಕೈ ತೊಳೆಯುತ್ತಿದ್ದ ಬೈರನಿಗೆ ಮಾದೇವಿ ಕರೆದದ್ದು ಕೇಳಿಸಿತು. ಲಗುಬಗೆಯಿಂದ ಬಂದು ”ಏನು ದೇವಮ್ಮಾ?’ ”ಎಂದು ಕೇಳಿದ.
”ನಾನು ಮನೆಗೆ ಹೋದೆನೆಂದು ನಿಮ್ಮೆಜಮಾನರಿಗೆ ಹೇಳಿಬಿಡು. ನಾನು ಮೊಬೈಲ್ ತಂದಿಲ್ಲ” ಎಂದು ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡಳು.
‘ಅವ್ವಾ..ನಾನಿಂಗೆ ಹೇಳ್ತೀನೀಂತ ಬೇಸರ ಮಾಡ್ಕೋಬ್ಯಾಡಿ’ ಎಂದು ರಾಗ ಎಳೆದ ಬೈರಾ.
‘ನಾನ್ಯಾಕೆ ‘ಬೇಸರ ಮಾಡ್ಕೊಳ್ಳೀ ಅದೇನಂತ ಹೇಳು’ಎಂದಳು ಮಾದೇವಿ.
‘ಅವ್ವಾ..ನೀವು ಓದಿರೋರು, ಮೈಸೂರು ಸೀಮೇಗೆ ಹೋಗಿ ಎಂಥೆಂತದೋ ಪಾಸು ಮಾಡಿದವರು. ಹಿಂಗೆ ಬುಟ್ಟಿ ತಲೆಮೇಲೆ ಇಕ್ಕೊಂಡು ಬೀದೀಲಿ ನಡ್ಕೊಂಡು ಮನೆಗೋಗೋದು ತರವಲ್ಲ. ನಾನೇ ಒಂದೆಜ್ಜೆ ತಂದು ಮುಟ್ಟಿಸೋಣವೆಂದರೆ ದೊಡ್ಡಮ್ಮನವರು ವಸಿ ಮಡಿ, ಏನಂತಾರೋ ಅಂತ ದಿಗಿಲು, ಒಂದು ಕೆಲಸ ಮಾಡಿ, ನೀವು ಬುತ್ತಿ ತರೋ ದಿನಕ್ಕೇಂತ ನನ್ನ ಹೆಂಡ್ರು ಅದೆಂತದ್ದೋ ಪ್ಲಾಸ್ಟಿಕ್ ದಾರದಾಗೆ ಎಣೀತಾರಲ್ಲಾ ಅಂಥದ್ದೊಂದು ಬುಟ್ಟಿ ಮಾಡಿಸಿಕ್ಕೊಳ್ಳಿ. ಅದರಲ್ಲಿ ತನ್ನಿ. ತಲೆಮೇಲೆ.. ಇವೆಲ್ಲ ನಿಮಗೊಪ್ಪಕ್ಕಿಲ್ಲ ಬೇಡಿ’ ಎಂದು ಹೇಳಿ ‘ಹೊರಡಿ ನೀವಿನ್ನು, ನಾನು ಯಜಮಾನರಿಗೆ ಹೇಳ್ತೀನಿ’ ಎಂದು ಹೇಳುತ್ತಿದ್ದಂತೆ ‘ಏ..ಬೈರಾ , ಬಾರಲಾ ಅಲ್ಲಿ ಒಡೇರು ಕರೀತಾ ಅವ್ರೆ’ ಎಂದು ತಾರಕಸ್ವರದಲ್ಲಿ ಕೂಗುತ್ತಾ ಬಂದ ಕರಿಯಣ್ಣನನ್ನು ನೋಡಿ ‘ಹಾ.. ಬಂದೇ ಎನ್ನುತ್ತಾ ಹಂಗೇ ವಸಿ ಬಾಯಿಲ್ಲಿ’ ‘ಎಂದು ಅವನನ್ನು ಕರೆದ.
‘ಏನಲಾ ಅದು?’ ಎನ್ನುತ್ತಾ ಬಂದ ಕರಿಯಣ್ಣನ ಕಡೆ ತಿರುಗಿ ‘ನೋಡು ದೇವಮ್ಮನಿಂದ ಆ ಬುಟ್ಟಿ ನೀನು ತೊಗೋ, ಮನೇಗಂಟ ಜೊತೇಲಿ ಹೋಗಿ ಅವರನ್ನು ಬಿಟ್ಟುಬುಟ್ಟು ಬಾ. ನಾನು ಒಡೇರಿಗೆಲ್ಲ ಹೇಳ್ತೀನಿ. ನೀನು ತಕ್ಕೊಂಡುಹೋಗಿ ಕೊಟ್ರೆ ದೊಡ್ಡವ್ವಾರು ಏನೂ ಅನ್ನಲ್ಲ’. ಎಂದನು. ಮಾದೇವಿ ಕಡೆ ತಿರುಗಿ ‘ಅವ್ವಾ ಅದ ಕೆಳಗಿಳಿಸಿಕೊಡಿ’ ಎಂದು ಒತ್ತಾಯಿಸಿದ.
ಮಾದೇವಿ ನಗುತ್ತಾ ‘ಆಯಿತಪ್ಪಾ’ ಎಂದು ಬುಟ್ಟಿಯನ್ನು ಕರಿಯಣ್ಣನ ಕೈಗಿತ್ತು ಅವನೊಡನೆ ಮನೆಯ ಹಾದಿ ಹಿಡಿದಳು. ಅವರನ್ನು ನೋಡಿದ ಬೈರಾ ತಾನೇನೋ ಮಹತ್ಕಾರ್ಯ ಸಾಧಿಸಿದಂತೆ ಬೀಗುತ್ತಾ ಯಜಮಾನರಿದ್ದೆಡೆಗೆ ನಡೆದ.
ಮನೆ ಸಮೀಪಿಸುತ್ತಿದ್ದಂತೆ ಮೊದಲಿಗೆ ಎದುರಾದವರು ತಾತ ನೀಲಕಂಠಪ್ಪನವರು. ”ಓ ! ಏನುಕೂಸೇ, ಬೇಗ ಮನೆಗೆ ಬರುತ್ತಿದ್ದೀ? ಹೋದ ಕೆಲಸ ಹಣ್ಣೋ ಕಾಯೋ? ಎಂದು ಕೇಳಿ ಕಣ್ಣುಮಿಟುಕಿಸಿದರು”
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40383
(ಮುಂದುವರಿಯುವುದು)
ನನ್ನ.. ಕಾದಂಬರಿಯನ್ನು… ಧಾರಾವಾಹಿ ಯಾಗಿ ..ಪ್ರಕಟಿಸುತ್ತಿರುವ…ಗೆಳತಿ… ಹೇಮಾ ಅವರಿಗೆ ಧನ್ಯವಾದಗಳು.
ತುಂಬಾ ಸುಂದರವಾಗಿದೆ ಕಥೆ.
ಧನ್ಯವಾದಗಳು ನಯನಮೇಡಂ
ಚಂದದ ನಿರೂಪಣೆಯ ಸುಂದರ ಕಥೆಯು ಬಹಳ ಚಿನ್ನಾಗಿ, ಕುತೂಹಲದಾಯಕವಾಗಿ ಮೂಡಿಬರುತ್ತಿದೆ…ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಸಹಜ ಸುಂದರ ಸಂಬಾಷಣೆಗಳಿಂದ ಕಂಗೊಳಿಸುತ್ತಾ ಮುಂದೆ ಸಾಗುತ್ತಿದೆ ‘ಕಾಲಗರ್ಭ’
ಧನ್ಯವಾದಗಳು ಪದ್ಮಾ ಮೇಡಂ