ಧ್ರುವ ತಾರೆ

Share Button

ಸವತಿಯ ಮತ್ಸರವು ಸಾವಿರಾರು ಬಗೆಯಂತೆ. ಮಲತಾಯಿಯ ಕಷ್ಟಕ್ಕೆ ಗುರಿಯಾದರೂ ತನ್ನ ಪ್ರಾಮಾಣಿಕತೆಯಿಂದ, ದೈವ ಸಾನ್ನಿಧ್ಯತೆಯಿಂದ ಮೆರೆದ ಮಣಿಕಂಠ ಆ ಚಂದ್ರಾರ್ಕ ಪೂಜನೀಯ ಸ್ಥಾನ ಪಡೆದ ವಿಚಾರ ಹಿಂದಿನ ಅಂಕಣದಲ್ಲಿ ಓದಿದ್ದೇವೆ. ಹಾಗೆಯೇ ಮಲತಾಯಿಯ ಕುತ್ತಿತ ದೃಷ್ಟಿಗೆ ಬಲಿಯಾಗಿ ನೊಂದು, ಬೆಂದು ಕೊನೆಗೆ ದೇವರನೊಲಿಸಿಕೊಳ್ಳುವುದಕ್ಕಾಗಿ ತಪಸ್ಸು ಕುಳಿತು ಸಾಕ್ಷಾತ್ಕಾರವಾಗಿ, ವರ ಪಡೆದು ಬಾನಂಗಳದಲ್ಲಿ ಬೆಳಗುತ್ತಾನೆ ಇನ್ನೋರ್ವ. ಆತನೂ ಮುದುಕನಲ್ಲ, ಯುವಕನಲ್ಲ. ತುಂಟಾಟವಾಡುವ ವಯಸ್ಸು.

ಯಾರಾದರೊಬ್ಬರು ಸಮಾಜಮುಖಿಯಾಗಿ ಶ್ರೇಷ್ಠ ಕೆಲಸ ಮಾಡಿದರೆ, ಎಲ್ಲರಿಗೂ ಪ್ರೀತಿಪಾತ್ರರಾಗಿ ಗೌರವ ಸ್ಥಾನ ಪಡೆದರೆ ಅವನೊಬ್ಬ ಧ್ರುವತಾರೆ ಎನ್ನುತ್ತಾರೆ. ಎಂದರೆ, ಬಾನಂಗಳದ ಪೂರ್ವದಲ್ಲಿ ಸದಾ ಮಿನುಗುವ ಧ್ರುವ ನಕ್ಷತ್ರವನ್ನು ಎಲ್ಲರೂ ವೀಕ್ಷಿಸುತ್ತಾರೆ. ಹರ್ಷದಿಂದ ರೋಮಾಂಚನಗೊಳ್ಳುತ್ತಾರೆ. ಅದರಲ್ಲೂ ಬಾಲಕರಿಗೆ ಧ್ರುವ ನಕ್ಷತ್ರ ತೋರಿಸಿ ಅವನ ಕತೆ ಹೇಳುವುದರಿಂದ ಅವರ ಭವಿಷ್ಯ ಉಜ್ವಲವಾಗುವುದು ಎಂಬ ನಂಬಿಕೆ ಇದೆ.

ಒಬ್ಬ ಪ್ರಾಮಾಣಿಕ ಮನುಷ್ಯ ಯಾವುದೇ ಆಸೆ-ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಹೊತ್ತಿರುವಾಗ ಇಹಲೋಕ ತ್ಯಜಿಸಿದರೆ; ಮುಂದಿನ ಜನ್ಮವೆತ್ತಿ ಅದನ್ನು ಈಡೇರಿಸಿಕೊಳ್ಳುತ್ತಾನೆ ಎಂಬ ಮಾತೊಂದಿದೆ. ಅಂತೆಯೇ ಒಬ್ಬ ಸದಾಚಾರ ಸಂಪನ್ನನಾದ ಬ್ರಾಹ್ಮಣನಾಗಿದ್ದವನು ತಾನು ರಾಜನಾಗಬೇಕೆಂದು ಬಯಕೆ ಉಳ್ಳವನಾಗಿರುವಾಗ ಸ್ವರ್ಗಸ್ಥನಾದನಂತೆ. ಆತನೇ ಸ್ವಾಯಂಭುವ ಮನುವಿನ ಮೊಮ್ಮಗನಾಗಿ ಉತ್ತಾನಪಾದನ ಮಗನಾಗಿ ಜನ್ಮವೆತ್ತಿದ ‘ಧ್ರುವ’. ‘ಉತ್ತಾನಪಾದ ರಾಯನಿಗೆ ಇಬ್ಬರು ಹೆಂಡಿರು. ಹಿರಿಯವಳು ಸುನೀತಿ, ಕಿರಿಯವಳು ಸುರುಚಿ. ಧ್ರುವನ ತಾಯಿ ಸುನೀತಿ, ಸುರುಚಿಯ ಮಗ ‘ಉತ್ತಮ’ . ಸುನೀತಿಯು ಸಾಧು ಸ್ವಭಾವದವಳೂ, ಮೃದು-ಮಧುರ ಭಾಷಿಣಿಯೂ ಆಗಿದ್ದರೆ ಸುರುಚಿಯು ಈಕೆಗೆ ವಿರುದ್ಧವಾಗಿದ್ದಳು. ಆದರೆ ಸುರುಚಿಯ ಮೇಲೆ ರಾಜನಿಗೆ ಅತೀವ ಅಕ್ಕರೆ.

ಒಂದು ದಿನ ರಾಜಸಭೆಯಲ್ಲಿದ್ದಾಗ ರಾಜನು ಸುರುಚಿಯನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ‘ಉತ್ತಮ’ನನ್ನು ತೊಡೆಯ ಮೇಲೆ ಇಟ್ಟು ಮುದ್ದಿಸುತ್ತಿದ್ದನು. ಆಗ ಧ್ರುವನು ಓಡೋಡಿ ಬಂದು ತಂದೆಯೊಡನೆ ನನ್ನನ್ನೂ ತೊಡೆಗೇರಿಸಿಕೊಳ್ಳಬೇಕೆಂದು ಹಟ ಹಿಡಿಯಲು ಸುರುಚಿಯು ಧ್ರುವನನ್ನು ಕೈಯಿಂದ ಹಿಡಿದೆಳೆದು ಆಚೆ ತಳ್ಳಿ ತಿರಸ್ಕರಿಸುತ್ತಾ ‘ತಪಸ್ಸು ಮಾಡಿ ದೇವರನೊಲಿಸಿಕೊಂಡು ನನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದರೆ ನಿನಗೆ ಈ ಅವಕಾಶವು ಲಭಿಸೀತೇ ಹೊರತು ಇಲ್ಲದಿದ್ದರೆ ಇಲ್ಲ’ ಎಂದಳು.

ಚಿಕ್ಕಮ್ಮನ ವರ್ತನೆಯಿಂದ ಬಹಳ ನೊಂದುಕೊಂಡ ಧ್ರುವನು ಅಮ್ಮನ ಬಳಿಗೋಡಿ ನಡೆದ ಘಟನೆಯನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತನು. ಆಕೆ ಏನು ತಾನೇ ಹೇಳಿಯಾಳು! ತನಗೂ ಇದೇ ಸ್ಥಿತಿ ತನ್ನ ಮಾತೇನು ಇಲ್ಲಿ ನಡೆಯದು ಎಂದು ಹೇಳಿ ಗಳಗಳನೆ ಅತ್ತಳು. ಒಂದು ಕ್ಷಣ ಸುಧಾರಿಸಿಕೊಂಡ ಬಾಲಕನು ‘ಅಮ್ಮಾ…. ನಾನು ದೇವರ ಕುರಿತಾಗಿ ತಪಸ್ಸು ಮಾಡಿ ದೇವರನೊಲಿಸಿಕೊಂಡು ಬಂದು ಉತ್ತಮನಂತೆಯೇ ತಂದೆಯ ತೊಡೆಯೇರುತ್ತೇನೆ’ ಎಂದು ಆಶೀರ್ವದಿಸಮ್ಮಾ ಎಂದನು. ಅದಕ್ಕೆ ತಾಯಿಯು ‘ಮಗೂ ಕಾಡಿಗೆ ಹೋಗಿ ತಪಸ್ಸು ಮಾಡುವುದೆಂದರೆ ಅಷ್ಟು ಸುಲಭವಲ್ಲ. ಕ್ರೂರ ಮೃಗಗಳ, ರಾಕ್ಷಸರ ಹಾವಳಿಯಿದೆ. ನೀನಿನ್ನೂ ಪುಟ್ಟ ಬಾಲಕನಾದುದರಿಂದ ಸುಮ್ಮನೆ ಇಲ್ಲೇ ಇದ್ದು ಬಿಡು’ ಎಂದಳು. ಆದರೆ ಧ್ರುವನು ತಾಯಿಯ ಮಾತಿಗೆ ಮಣಿಯಲಿಲ್ಲ. ತನ್ನ ಪಟ್ಟು ಬಿಡದೆ ‘ಆಶೀರ್ವದಿಸಮ್ಮ ನಾನು ಕಾಡಿಗೆ ಹೋಗಲೇಬೇಕು. ತಪಸ್ಸು ಮಾಡಿ ಬಂದು ತಮ್ಮನಂತೆ ಅಪ್ಪನ ವಾತ್ಸಲ್ಯಕ್ಕೆ ಪಾತ್ರನಾಗಲೇಬೇಕು. ನಿನ್ನ ಕಣ್ಣೀರನ್ನು ಒರೆಸಬೇಕು. ಇದುವೇ ನನ್ನಾಸೆ’ ಎಂದನು. ಮತ್ತೆ ಮತ್ತೆ ಅಮ್ಮನನ್ನು ಆಗ್ರಹಿಸಿ ಬೇಡಿಕೊಂಡ ಮಗನನ್ನು ಭಗವಂತನನ್ನು ನೆನೆಯುತ್ತಾ ”ನೀನೇ ಕಾಪಾಡು ತಂದೆ” ಎಂದು ಪ್ರಾರ್ಥಿಸುತ್ತಾ ಕಳುಹಿಸಿಕೊಟ್ಟಳು. ಏನೂ ಅರಿಯದ ಬಾಲಕ ಧ್ರುವನು ಗೊಂಡಾರಣ್ಯ ಪ್ರವೇಶಿಸಿದನು. ಹೇಗೆ ತಪಸ್ಸು ಮಾಡಲಿ? ಎಲ್ಲಿ ಮಾಡಲಿ? ಎಂದು ಗಲಿಬಿಲಿಗೊಂಡು ನಿಂತಿದ್ದ ಬಾಲಕನ ಮುಂದೆ ನಾರದ ಮಹರ್ಷಿಗಳು ಪ್ರತ್ಯಕ್ಷರಾದರು.

“ಮಗೂ, ನಿನಗೇನಾಗಬೇಕು? ಯಾಕೆ ಇಲ್ಲಿಗೆ ಬಂದೆ?’ ಎಂದು ಪ್ರಶ್ನಿಸಿದರು. ‘ನನಗೆ ದೇವರನ್ನು ಒಲಿಸಿಕೊಳ್ಳಬೇಕು. ತಪಸ್ಸು ಮಾಡಬೇಕು’ ಎನ್ನುತ್ತಾ ನಡೆದ ಘಟನೆಯನ್ನು ಅರುಹಿದ ಬಾಲಕ ‘ತಪಸ್ಸೆಂದರೆ ತುಂಬಾ ಕಠಿಣ. ದೀರ್ಘ ಕಾಲದಲ್ಲಿ ಅನ್ನಾಹಾರಗಳನ್ನು ತೊರೆದು ತಪಸ್ಸು ಮಾಡಲು ನಿನ್ನಿಂದ ಸಾಧ್ಯವೇ’ ಎಂದರು.ನಾರದರು. ‘ನನಗೆ ದೃಢ ಸಂಕಲ್ಪವಿದೆ. ನನ್ನಿಂದ ಅದು ಸಾಧ್ಯ ಗುರುಗಳೇ’ ಎಂದನು ಧ್ರುವ.

‘ಮಗೂ ಇಲ್ಲೇ ಯಮುನಾ ನದಿಯ ತೀರದಲ್ಲಿ ಮಧುವನವೆಂಬ ಪ್ರಶಾಂತವಾದ ಸ್ಥಳವಿದೆ. ಅಲ್ಲಿ ಕುಳಿತುಕೊಂಡು ಏಕೋಧ್ಯಾನದಿಂದ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರಿ ಮಂತ್ರವನ್ನು ಉಚ್ಚರಿಸುತ್ತಿರು ಎಂದು ಉಪದೇಶಿಸಿ ನಾರದರು ಹೊರಟುಹೋದರು. ನಾರದರು ಹೇಳಿಕೊಟ್ಟ ಮಂತ್ರವನ್ನು ಜಪಿಸುತ್ತಾ ಧ್ಯಾನ ಮಾಡುತ್ತಿದ್ದ ಧ್ರುವನಿಗೆ ಸ್ವಲ್ಪ ಕಾಲದಲ್ಲಿ ಮಹಾವಿಷ್ಣುವು ಪ್ರತ್ಯಕ್ಷನಾದನು.

‘ನೀನೇನು ಬಯಸುವೆ ಮಗೂ’ ಎಂದು ಎಷ್ಟು ಕೇಳಲು ‘ನನಗೆ ನನ್ನ ತಮ್ಮನಿಗೆ ದೊರಕುವಂತೆಯೇ ಗೌರವದ ಸ್ಥಾನ ದೊರಕಬೇಕು. ನನ್ನ ತಾಯಿಯು ಸಂತೋಷದಲ್ಲಿರಬೇಕು’ ಎಂದನು. ವಿಷ್ಣುವು ‘ತಥಾಸ್ತು’ ಎಂದನು. ದೇವರ ಸಾಕ್ಷಾತ್ಕಾರ ಮಾಡಿಕೊಂಡು ನಾಡಿಗೆ ಬಂದಾಗ ಎಲ್ಲರೂ ಭಕ್ತಿ, ಗೌರವದಿಂದ ಸ್ವಾಗತಿಸಿದರು. ಸುರುಚಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸಿದಳು. ಮುಂದೆ ಧ್ರುವನು  ಚಕ್ರವರ್ತಿಯಾಗಿ ರಾಜ್ಯಭಾರ ಮಾಡಿದನು.

ಉತ್ತಮನು ಬೇಟೆಯಾಡಲು ಹೋದಾಗ ಯಕ್ಷರೊಡನೆ ಹೋರಾಡಿ ಸ್ವರ್ಗಸ್ಥನಾದನು. ಇದನ್ನರಿತ ಸುರುಚಿಯು ಮಗನು ತೀರಿದ ಸ್ಥಳದಲ್ಲೇ ಸ್ವರ್ಗಸ್ಥಳಾದಳು. ಧ್ರುವನು ಕೋಪದಿಂದ ಯಕ್ಷರನ್ನು ಸದೆಬಡಿಯಲು ಸ್ವತಃ ಕುಬೇರನೇ ಬಂದನು. ಕುಬೇರನು ಧ್ರುವನ ಮುಂದೆ ಸ್ನೇಹ ಹಸ್ತ ಚಾಚಿದನು. ಧ್ರುವನು ಮೂವತ್ತಾರು ಸಾವಿರ ವರ್ಷ ರಾಜ್ಯಭಾರ ಮಾಡಿ ಸದ್ಗತಿ ಹೊಂದಿದಾಗ ವಿಷ್ಣುವು ಮಾತುಕೊಟ್ಟಂತೆ ಧ್ರುವತಾರೆಯಾಗಿ ಆಕಾಶದಲ್ಲಿ ಆ ಚಂದ್ರಾರ್ಕ ನೆಲೆನಿಂತನು.

ಇವನಿಗೆ ಶಂಭು ಎಂಬ ಪತ್ನಿಯಲ್ಲಿ ಕ್ಲಿಷ್ಟ ಮತ್ತು ಭವ್ಯರೆಂಬ ಮಕ್ಕಳಾದರು.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Anonymous says:

  ಸುರಹೊನ್ನೆಯ ಸಂಪಾದಕಿ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು.

 2. Anonymous says:

  ತುಂಬು ಹೃದಯದ ಧನ್ಯವಾದಗಳು.

 3. ಭಕ್ತದೃವನಕಥೆಯನ್ನು ..ಮತ್ತೆ ನೆನಪಿಗೆ… ತಂದ ನಿಮಗೆ.. ವಂದನೆಗಳು.. ವಿಜಯಾ ಮೇಡಂ..

 4. ನಯನ ಬಜಕೂಡ್ಲು says:

  ಸೊಗಸಾಗಿದೆ

 5. ಶಂಕರಿ ಶರ್ಮ says:

  ಏಳನೇ ತರಗತಿಯಲ್ಲಿರುವಾಗ ಸುನೀತಿ ಪಾತ್ರ ಮಾಡಿದ ನೆನಪು ಇನ್ನೂ ಹಸಿರಾಗಿದೆ. ಧ್ರುವ ತಾರೆಯ ಕಥೆ ಎಂದಿನಂತೆ ಚಂದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: