ಜಿಜ್ಞಾಸೆ………
ನಾ ಜೀವನದಲ್ಲಿ ಕಳೆದ ವಸಂತಗಳ ನೆನೆದಾಗ
ಮನವರಿಕೆಯಾಯಿತು ಎನಗೆ ಉಳಿದಿರುವ ದಿನಗಳು ಕೆಲವೇ ಕೆಲವೆಂದು
ಸಿಹಿ ತಿಂಡಿಗಳ ಗೆದ್ದು ಆಸೆಯಿಂದ ಗಬಗಬನೆ ತಿಂದು
ಉಳಿದ ತುಣುಕುಗಳ ರುಚಿಯ ಮನಸಾರೆ ಸವಿಯುವ
ಆಡುವ ಮಗುವಿನಂತಾಗಿದೆ ನನ್ನಯ ಪರಿಸ್ಥಿತಿ
ಅಂತಸ್ತುಗಳು ವಿವಿಧ ನಿಯಮಾವಳಿಗಳು ಆಂತರಿಕ ಗೊತ್ತುವಳಿಗಳು
ಇವುಗಳ ಬಗ್ಗೆ ಚರ್ಚಿಸುವ ದೀರ್ಘ ಸಭೆ ಕೂಟಗಳ ಮೇಲೆ ಎನಗೆ ವಿಶ್ವಾಸವಿಲ್ಲ
ವಯಸ್ಸಾಗಿದ್ದರೂ ಇನ್ನೂ ಬೆಳೆಯದಿರುವ
ಸಾಮಾನ್ಯ ಜ್ಞಾನವಿಲ್ಲದ ಜನರೊಂದಿಗೆ ಬೆರೆಯಲು ತಾಳ್ಮೆಯಿಲ್ಲ
ನನ್ನ ಕಾಲಾವಧಿ ಬಹು ಸೀಮಿತವಾಗಿದೆ
ನನ್ನ ಆತ್ಮ ಹೊರಡುವ ಅವಸರದಲ್ಲಿದೆ
ನನಗೆ ನಿಜಜೀವನದ ಸ್ವಾದ ಬೇಕಾಗಿದೆ
ಬಾಳ ಬುತ್ತಿಯಲಿ ಉಳಿದ ಸಿಹಿ ತುಣುಕುಗಳು ಕೆಲವೇ ಕೆಲವು
ಜವಾಬ್ದಾರಿಗಳಿಗೆ ಹೆಗಲು ಕೊಡುವ
ಸತ್ಯ ಪ್ರಾಮಾಣಿಕತೆಯೇ ಉಸಿರಾಗಿರುವ
ತಮ್ಮದೇ ತಪ್ಪುಗಳನ್ನು ಪರಿಹಾಸ್ಯ ಮಾಡಿ ನಗುವ
ವಾಸ್ತವ ಅರಿತ ಮನುಜರ ನಡುವೆ ಕೊನೆಗಾಲ ಕಳೆಯುವಾಸೆ
ಹೀಗೆ ಮಾನವೀಯ ಮೌಲ್ಯಗಳ ಎತ್ತಿ ಹಿಡಿಯುವಾಸೆ
ಜೀವನದಲ್ಲಿ ಕಡು ಕಷ್ಟಗಳನ್ನುಂಡರೂ ಇನ್ನೊಬ್ಬರ ನೋವಿಗೆ ಮಿಡಿಯುವ
ಹೃದಯವಂತರೊಡನೆ ಒಡಗೂಡುವಾಸೆ
ಕಹಿಯನ್ನುಂಡು ಸಿಹಿಯಾದ ಫಲವ ಕೊಡುವ ವೃಕ್ಷಗಳ ಆಶ್ರಯಿಸುವ ಪರಮಾಸೆ
ಹೌದು…. ನನಗೆ ಹೊರಡುವ ಕಡು ಅವಸರವಿದೆ
ಘನ ಉದ್ದೇಶದ ಬದುಕು ನನ್ನದಾಗಬೇಕೆಂಬ ಬಯಕೆಯಿದೆ
ಉಳಿದ ಅಮೂಲ್ಯ ದಿನಗಳ ಸಾರ್ಥಕತೆಯ
ಪಡೆಯಲು ನಿಜವಾದ ಪ್ರೌಢಿಮೆಯಿದೆ
ಇದುವರೆಗೂ ಸವಿದ ಸಿಹಿ ಖಾದ್ಯಗಳಿಗಿಂತ
ಮಿಕ್ಕಿರುವ ರಸಾಯನಗಳ ಸವಿ ಜಾಸ್ತಿ ಎಂಬುದ ನಾ ಬಲ್ಲೆ
ಪ್ರೀತಿಸಿದವರೊಡಗೂಡಿ ಶಾಂತಿ ನೆಮ್ಮದಿಯಿಂದ
ಬಾಳ ಅಂತಿಮ ಗುರಿಯ ತಲುಪುವಾಸೆ ಸ್ವ ಪ್ರಜ್ಞೆಯಿಂದ ಸಮಾಧಾನದಿಂದ
ಎಮ್ಮ ಪಾಲಿಗೆ ಎರಡೆರಡು ಜೀವನಗಳು
ಎರಡನೆಯದು ಪ್ರಾರಂಭವಾಗುವುದು
ನಮಗಿರುವುದು ಒಂದೇ ಒಂದು ಜೀವನ ಎಂದು ಅರಿವಾದಾಗ
(ಬ್ರೆಜಿಲ್ ಕವಿತೆಯ ಭಾವಾನುವಾದ)
-ಕೆ.ಎಂ ಶರಣಬಸವೇಶ
ಸೊಗಸಾದ ಕವನ…ಮೂಲ ಕವಿತೆಯ ಅರಿವಿಲ್ಲದಿದ್ದರೂ..ಸ್ವತಂತ್ರ ವಾಗಿಹೊರಹೊಮ್ಮಿದಂತಿದೆ…ಸಾರ್
ಧನ್ಯವಾದಗಳು ನಾಗರತ್ನ ಮೇಡಂ.
ಬಹಳ ಚೆನ್ನಾಗಿರುವ ಅನುವಾದ. ಜೀವನದ ಸತ್ಯ.
ಧನ್ಯವಾದಗಳು ಮೇಡಂ
ಅರ್ಥಗರ್ಭಿತವಾದ ಕವನ.
ನೀವು ಈ ರೀತಿಯ ಪತ್ರಿಕೆ ಮಾಡಿ ನಮ್ಮ ಪುಟ್ಟ ಪ್ರಯತ್ನ ಎಲ್ಲರಿಗೂ ತಲುಪುವಂತೆ ಮಾಡಿದ್ದೀರಾ. ಅದಕ್ಕೆ ತಮಗೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು
ಕವನ ಅರ್ಥ ಪೂರ್ಣವಾಗಿದೆ. ಈ ಸಲದ ಸುರಹೊನ್ನೆ ಸಂಚಿಕೆಯ ಎಲ್ಲಾ ಲೇಖನಗಳೂ ಸೊಗಸಾಗಿವೆ.
ಧನ್ಯವಾದಗಳು ಮುಕ್ತ ಮೇಡಂ
ಅನುವಾದಿತ ಭಾವಪೂರ್ಣ ಕವನವು ಭಾಷೆಯನ್ನು ಮೀರಿ ಮನಮುಟ್ಟುವಂತಿದೆ.
ಧನ್ಯವಾದಗಳು ಮೇಡಂ
ಚೆನ್ನಾಗಿದೆ
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ