“ಬಾಲ್ಯ”ವನ್ನು ನೆನಪಿಸುವ ಪರಿಸರ ಸ್ನೇಹಿ “ಬೈಸಿಕಲ್”….!

Share Button

“ಬೈಸಿಕಲ್” ಎಂಬ ನಾಲ್ಕಕ್ಷರ ಹೇಳಿದೊಡನೆ ನಮಗೆ ಬಾಲ್ಯದ ನೆನಪಾಗುತ್ತದೆ!. ಇದು ನನ್ನೊಬ್ಬನಿಗೆ ಅಲ್ಲ ಪ್ರತಿಯೊಬ್ಬರ ಬಾಲ್ಯದಲ್ಲೂ ಕೂಡ “ಸೈಕಲ್”ಎಂಬ ಹೆಚ್ಚು ಬಳಕೆಯ ಪದದಿಂದ ಒಂದು ರೀತಿಯಲ್ಲಿ ಚಮತ್ಕಾರ ಮೂಡಿಸಿರುತ್ತದೆ. ಬಾಲ್ಯದಲ್ಲಿ ತಾವು ಉಪಯೋಗಿಸಿದ ಸೈಕಲನ್ನು ಇಂದಿಗೂ ಕೂಡ ಮನೆಯಲ್ಲಿ ಜೋಪಾನವಾಗಿ ಇಟ್ಟಿರುವ, ಅದೇ ಸೈಕಲನ್ನು ಮಕ್ಕಳು, ಮೊಮ್ಮಕ್ಕಳಿಗೂ ಕೂಡ ಉಪಯೋಗಿಸಿದ ಉದಾಹರಣೆ ಕೂಡ ಇದೆ!

ಸೈಕಲ್ ಸಂಗ್ರಹಿಸುವವರು ಕೂಡ ಇದ್ದಾರೆ. ಮ್ಯೂಸಿಯಂ ಗಳಲ್ಲೂ ಕೂಡ ಸೈಕಲ್ ತನ್ನ ಇರುವಿಕೆಯನ್ನು ನಮಗೆ ಸಾರಿದೆ. ಸೈಕಲ್ ಸಂಜೀವಿನಿಯಂತೆ ನಮಗೆ ಇದ್ದ ಕಾಲವೊಂದಿತ್ತು. ನಮ್ಮ ನಿತ್ಯ ಜೀವನದಲ್ಲಿ ಸೈಕಲ್ ಬಹಳ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ.ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಈ “ಬೈಸಿಕಲ್” ಬಗ್ಗೆ ತನ್ನದೇ ಆದ ಇತಿಹಾಸ ಇದೆ. ಒಂದೊಂದು ಕಡೆ ಒಂದೊಂದು ರೀತಿಯ ದಾಖಲೆ ಸಿಗುತ್ತದೆ. ಅದರ ಇತಿಹಾಸವನ್ನು ಕೆದಕಿದಂತೆ ವಿಸ್ತಾರವಾಗುತ್ತಾ ಹೋಗುತ್ತದೆ.

ಕ್ರಿಸ್ತ ಶಕ 1817ರ ಜೂನ್‌ 12ರಂದು ಜರ್ಮನಿಯ ಬ್ಯಾರನ್‌ ಕಾರ್ಲ್ ವನ್‌ ಡ್ರೈಸ್‌ ಅವರು ಬೈಸಿಕಲ್‌ ಅನ್ನು ವಿಶ್ವದ ಜನತೆಗೆ ಪರಿಚಯಿಸಿದರು ಎಂಬ ಉಲ್ಲೇಖವಿದೆ. ಹಲವು ಕಡೆ ಸೈಕಲ್ ಉಗಮದ ಬಗ್ಗೆ ಅದರ ತಂತ್ರಜ್ಞಾನದ ಬಗ್ಗೆ ವಿಶೇಷ ಮಾಹಿತಿಗಳು ಇವೆ. ಆ ಬಳಿಕ ನಿರಂತರವಾಗಿ ಜಗತ್ತಿನಾದ್ಯಂತ ಸಂಚಾರ ಸಾಧನವಾಗಿ ಹೊಸ ತಂತ್ರಜ್ಞಾನದ ಆವಿಷ್ಕಾರಗಳೊಂದಿಗೆ ಈ ಸೈಕಲ್‌ ವಿಶ್ವ ವ್ಯಾಪಿಯಾಗಿ ಬಳಸಲ್ಪಟ್ಟಿತ್ತು. ಕಾಲಕ್ಕೆ ತಕ್ಕಂತೆ ಸೈಕಲ್‌ಗ‌ಳೂ ಸುಧಾರಣೆ ಕಂಡವು. ದೊಡ್ಡದಾದ ಸೈಕಲ್ ಗಂಡು ಮಕ್ಕಳಿಗೆ, ಚಿಕ್ಕದಾದ ಸೈಕಲ್ ಹೆಣ್ಣು ಮಕ್ಕಳಿಗೆ ಇತ್ತು. ಆದರೆ ಈಗ ಬಗೆ ಬಗೆಯ ವರ್ಣ ರಂಜಿತ ಸೈಕಲ್ ಗಳನ್ನು ನೋಡುವುದೇ ಒಂದು ರೀತಿಯಲ್ಲಿ ಮೈ- ಮನಗಳಿಗೆ ಮುದ ನೀಡುತ್ತದೆ. ಪುರುಷರು, ಮಹಿಳೆಯರು ಎಲ್ಲರೂ ಒಂದೇ ರೀತಿಯ ಸೈಕಲ್ ಗಳಲ್ಲೂ ಕೂಡ ಪಯಣಿಸುವುದುಂಟು.

ಇದಕ್ಕೆಲ್ಲಾ ನಾನು ಪೀಠಿಕೆ ಏಕೆ ಹಾಕಿದ್ದು ಎಂದರೆ ಇಂದು “ವಿಶ್ವ ಬೈಸಿಕಲ್ ದಿನ”ವನ್ನಾಗಿ ಜೂನ್ 3, 2018 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸ್ಥಾಪಿಸಿತು. ಇದಕ್ಕಾಗಿ ನಿರ್ಣಯವನ್ನು ಏಪ್ರಿಲ್ 12, 2018 ರಂದು ಅಂಗೀಕರಿಸಲಾಯಿತು. ಈ ದಿನವನ್ನು ಯುಎನ್ ಜನರಲ್ ಅಸೆಂಬ್ಲಿಯ ಎಲ್ಲಾ 193 ಸದಸ್ಯ ರಾಷ್ಟ್ರಗಳು ವಿಶ್ವ ಬೈಸಿಕಲ್ ದಿನವೆಂದು ಅಂಗೀಕರಿಸಿದವು. ಅಂದಿನಿಂದ ನಾವೆಲ್ಲ ಆಚರಿಸುತ್ತಾ ಬಂದಿದ್ದೇವೆ. ಇದರಿಂದಾಗಿ ಸೈಕಲ್ಗೆ ಮತ್ತೆ ಹೊಸದಾದ ಜೀವ ಕಳೆ ಬಂತು.

ಸೈಕಲ್ ಸವಾರರಿಗೆ ರೋಗವೇ ಇರುವುದಿಲ್ಲ’! ಎನ್ನುವ ಮಾತು ಕೂಡ ಇದೆ. ಏಕೆಂದರೆ ಸೈಕಲ್ ನಲ್ಲಿ ನಾವು ಸವಾರಿ ಮಾಡಿದರೆ ನಮಗೆ ಎಲ್ಲಾ ರೀತಿಯ ವ್ಯಾಯಾಮ ಸಿಗುತ್ತದೆ. ಹೊಸದಾಗಿ ಸೈಕಲ್ ಖರೀದಿಸುವವರು ಈಗ ಕಾರಿಗೆ ಪೂಜೆ ಮಾಡುವಂತೆ ಮಾಡುತ್ತಿದ್ದರು. ‘ಸೈಕಲ್ ಇದ್ದವರು ಶ್ರೀಮಂತರು’- ಎನ್ನುವ ಮಾತು ಕೂಡ ಇತ್ತು. ಸಾಮಾನ್ಯ ವರ್ಗದವರೆಲ್ಲ ಸೈಕಲ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆವು. ನಾವಂತೂ ಅವರು ಇವರು ಕೊಟ್ಟ ಹಣ ಸಂಗ್ರಹಿಸಿ, ಸೈಕಲ್ ಬಾಡಿಗೆ ಪಡೆದು ಊರೆಲ್ಲಾ ಸುತ್ತುತ್ತಿದ್ದೆವು, ಬೀಳುತ್ತಿದ್ದೆವು ಏಳುತ್ತಿದ್ದೆವು!. ಸೈಕಲ್ ನಮ್ಮ ದಿನನಿತ್ಯದ ಸಾರಿಗೆ ವಾಹನವಾಗಿತ್ತು. ಈಗ ಹಲವರ ದಿನಚರಿ ಪ್ರಾರಂಭವಾಗುವುದು ಸೈಕಲ್ ತುಳಿಯುವುದರಿಂದ. ಇದು ಅಚ್ಚರಿಯಾಗಬಹುದು. ವಯಸ್ಕರ ಕೂಡ ಸೈಕಲ್ಗೆ ಮೊರೆ ಹೋಗಿದ್ದಾರೆ. ಸೈಕಲ್ ಅವರಿಗೆಲ್ಲ ಜೀವನ ಸಂಗಾತಿಯಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಇದರ ನೆಪದಲ್ಲಿ ಸೈಕಲ್ ಯಾತ್ರೆ ಪ್ರಾರಂಭವಾಗುತ್ತದೆ. ಎಲ್ಲಾ ಸ್ನೇಹಿತರು ಒಂದೆಡೆ ಸೇರಿ ಒಂದು ಕಪ್ ಚಹಾ ಕುಡಿದು ತಮ್ಮ ಜೀವನ ಸಂದ್ಯಾ ಕಾಲದ ಕಷ್ಟ ಸುಖಗಳನ್ನು ಕೂಡ ಮಾತನಾಡುತ್ತಾರೆ. ಇನ್ನು ಯುವ ಜನತೆ ತಮಗಿಷ್ಟ ಸ್ಥಳಗಳಿಗೆ ಸೈಕಲ್ನಲ್ಲೇ ಪ್ರಯಾಣ ಮಾಡಿ ಸಂಭ್ರಮಿಸುವುದು ಉಂಟು. ಚಿಕ್ಕ ಮಕ್ಕಳು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎನ್ನದೆ ಸೈಕಲ್ ನಲ್ಲಿ ಮನೆ ಮುಂದೆ ಅವರ ಪಯಣ ಆರಂಭವಾಗಿರುತ್ತದೆ.

ಅಂದಿಗೂ, ಇಂದಿಗೂ, ಮುಂದೆಯೂ ಕೂಡ ಸೈಕಲ್ ಎಂದಿಗೂ ಕೂಡ ಪ್ರಸ್ತುತವಾಗಿ ತನ್ನ ವಿವಿಧ ಆಕಾರಗಳಿಂದ ನಮ್ಮೊಟ್ಟಿಗೆ ಸದಾ ಇರುತ್ತದೆ. ಇಂದು ಸೈಕಲ್ ಖರೀದಿಸುವವರು ಇದ್ದಾರೆ. ವಿವಿಧ ಕಂಪನಿಗಳು….. ಹೀರೋ ಸೈಕಲ್, ಅಟ್ಲಾಸ್ ಸೈಕಲ್, ಹರ್ಕುಲಸ್, ಸ್ಪಾರ್ಕ್, ರ್‍ಯಾಲಿ ಸೈಕಲ್ ಮುಂತಾದ ಹೆಸರುಗಳು ಕೂಡ ಇವೆ. ಲಕ್ಷಕ್ಕೂ ಹೆಚ್ಚು ಬೆಲೆ ಬೆಳೆಬಾಳುವ ಸೈಕಲ್ ಗಳು ಇವೆ.

ಮಕ್ಕಳು ಶಾಲೆಗೆ ಹಾಜರಾಗಲು ಯಶಸ್ವಿ ಕಾರ್ಯಕ್ರಮ ಸರ್ಕಾರದ ಮಟ್ಟದಲ್ಲಿ ನಡೆದಿದೆ. 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಸೈಕಲ್ ವಿತರಣೆ ಮಾಡಿತು. ಹೆಣ್ಣು ಮಕ್ಕಳು ಕೂಡ ಸೈಕಲ್ ಕಲಿಯಲು ಇದರಿಂದ ಅವಕಾಶ ಸಿಕ್ಕಿತು!. ಚಲನಚಿತ್ರಗಳಲ್ಲೂ ಕೂಡ ಸೈಕಲ್ ಬಳಸಿದ ಅನೇಕ ಉದಾರಣೆ ಇವೆ. ಹೀರೋ ಹೀರೋಯಿನ್ ಸೈಕಲ್ ಮೇಲೆ ಕುಳಿತು ಹಾಡು ಹಾಡುತ್ತಾ ಇದ್ದ ಚಿತ್ರಗಳು ನಮ್ಮ ಕಣ್ಮುಂದೆ ಬರುತ್ತವೆ. ಡಾ ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್, ಜೈ ಜಗದೀಶ್ ಅನೇಕ ನಟರು ನಟಿಯರೊಂದಿಗೆ ಸೈಕಲ್ ಮೇಲೆ ಕುಳಿತು ಸುಮಧುರ ಹಾಡುಗಳನ್ನ ಹಾಡುತ್ತಾ ಇರುವ ಚಿತ್ರಣ ಈ ಕ್ಷಣ ನಮ್ಮ ಕಣ್ಣೆದುರು ಬರುತ್ತದೆ.

ಮುಖ್ಯವಾಗಿ ವ್ಯಾಪಾರಸ್ಥರು ಸಂತೆಗೆ ಹೋಗಬೇಕಾದರೆ ಅಥವಾ ಪದಾರ್ಥಗಳನ್ನು ವ್ಯಾಪಾರ ಮಾಡಬೇಕಾದರೆ ಸೈಕಲ್ ಮೇಲೆ ದೊಡ್ಡದಾಗಿ ಬುಟ್ಟಿಯನ್ನು ಕಟ್ಟಿ ಅದರಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಪ್ರತಿ ಹಳ್ಳಿಗೂ ಹೋಗಿ ಮಾರುತಿದ್ದರು. ಇನ್ನು ಐಸ್ ಕ್ರೀಮ್ ಮಾರಾಟಗಾರರು ಕೂಡ ಸೈಕಲನ್ನೇ ಅವಲಂಬಿಸುತ್ತಿದ್ದರು. ದೊಡ್ಡದಾದ ಬಾಕ್ಸ್ ನಲ್ಲಿ ಬಗೆಬಗೆಯ ಆ ಕಾಲದ ಐಸ್ ಕ್ರೀಮ್ ಗಳನ್ನು ತೆಗೆದುಕೊಂಡು ಬರುತ್ತಿದ್ದರು ನಾವು ಕದ್ದು ಐಸ್ ಕ್ರೀಮ್ ಅನ್ನು ಕೊಂಡು ತಿನ್ನುತ್ತಿದ್ದೆವು. ಜೊತೆಗೆ ಹುರುಗಡಲೆ, ಕಡಲೆಪುರಿ ವ್ಯಾಪಾರಸ್ಥರು ಕೂಡ ಸೈಕಲನ್ನೇ ಅವಲಂಬಿಸುತ್ತಿದ್ದರು. ಮನೆಯಲ್ಲಿ ಇಟ್ಟಿದ್ದ ಹಳೆಯ ಪ್ಲಾಸ್ಟಿಕ್, ಕಬ್ಬಿಣ ಇನ್ನಿತರ ಪದಾರ್ಥಗಳನ್ನು ಕೊಟ್ಟು ನಾವು ಕೊಂಡು ಕೊಳ್ಳುತ್ತಿದ್ದೆವು. ಮತ್ತು ರೈತರು ವ್ಯವಸಾಯ ಸಾಮಗ್ರಿಗಳನ್ನು ಊಟ ಕೊಂಡೊಯ್ಯಲು ಜೊತೆಗೆ ಬೆಳೆದ ಪದಾರ್ಥಗಳನ್ನು ಕೂಡ ಸಾಗಿಸಲು ಸೈಕಲನ್ನೇ ಬಳಸುತ್ತಿದ್ದರು. ಜೀವನದ ಎಲ್ಲಾ ಚಟುವಟಿಕೆಗಳನ್ನು ಈ ಮೂಲಕವೇ ನಡೆಸುತ್ತಿದ್ದರು. ಇದೊಂದು ದಾಖಲೆ ಸರಿ.

ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದ ಸೈಕಲ್ ಈಗ ತನ್ನ ಬಹು ರೂಪದೊಂದಿಗೆ ಸೈಕ್ಲಿಂಗ್ ಅಂತಹ ಸ್ಪರ್ಧೆಗಳಲ್ಲಿ… ಜೊತೆಗೆ ಟ್ರಕಿಂಗ್ ಹೋಗುವಾಗ ಕೂಡ ನಮ್ಮ ಯುವಜನತೆಯಾದಿಯಾಗಿ ಎಲ್ಲರೂ ಕೂಡ ಬಳಸುತ್ತಾರೆ. ಒಲಂಪಿಕ್ಸ್ ನಲ್ಲಿ ಸೈಕಲ್ ರೇಸ್ ಕೂಡ ದೊಡ್ಡ ಆಟವಾಗಿ ಒಂದು ರೀತಿಯಲ್ಲಿ ಹೊಸದಾದ ಕ್ರೇಜ್ ಉಂಟು ಮಾಡಿದೆ. ಇವೆಲ್ಲ ಕಣ್ಮುಂದೆ ಈಗಲೂ ಕೂಡ ಇದೆ. ಸೈಕಲ್ ಮೂಲಕವೇ ದೇಶ ಸಂಚಾರ ಮಾಡಿದ್ದಾರೆ. ಈ ಸೈಕಲ್ಲು ಯಾವ ಹಂತಕ್ಕೆ ತಲುಪಿದೆ ಎಂದರೆ ನೆಲಮಟ್ಟದಲ್ಲಿ ಅಲ್ಲದೆ, ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಮ್ಮ ಬಾಲ್ಯದಲ್ಲಿ ಸೈಕಲ್ಸ್ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡುತ್ತಿದ್ದರು. ನಾವು ಸೈಕಲ್‌ನಲ್ಲಿ ಇಬ್ಬರು, ಮೂವರು ಕುಳಿತುಕೊಂಡು ಹಾಡು ಹೇಳುತ್ತಾ ತೋಟ, ಗದ್ದೆ, ಅಕ್ಕ ಪಕ್ಕದ ಊರನ್ನು ಸುತ್ತಿದ್ದೇವೆ. ನಂತರ ಮನೆಯಲ್ಲಿ ಬೈಯಿಸಿ ಕೊಂಡಿದ್ದು ಉಂಟು!.

ಇತಿಹಾಸದ ಪುಟಗಳನ್ನು ನೋಡಿದಾಗ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಕೂಡ ಸೈಕಲ್ ಬಳಸಿದ್ದಾರೆ ಎಂದು ಕೂಡ ತಿಳಿದು ಬರುತ್ತದೆ. ಒಂದು ಚಿತ್ರದಲ್ಲಿ ಗಾಂಧೀಜಿಯವರು ಕೂಡ ಜವರಲಾಲ್ ನೆಹರು ಎಲ್ಲರೂ ಕೂಡ ಸೈಕಲ್ನಲ್ಲಿ ಹೋಗುತ್ತಿರುವ ಚಿತ್ರ ನೋಡಿದ್ದೇವೆ. ಅನೇಕ ಕನ್ನಡಪರ ಹೋರಾಟಗಾರರು, ಅಭಿಮಾನಿಗಳು ಸೈಕಲ್ ನಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಸಿಂಗರಿಸಿ ತಾವು ಸಿಂಗಾರ ಮಾಡಿಕೊಂಡು ಪಯಣ ಮಾಡಿದ ಉದಾಹರಣೆ ಇವೆ. ಎರಡು ಮೂರು ವರ್ಷದ ಹಿಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೂರದ ಊರಿಂದ ಸೈಕಲ್‌ನಲ್ಲಿ ಕನ್ನಡದ ವಿವಿಧ ಪದಗಳನ್ನು, ಕವಿಗಳ ಹೆಸರುಗಳನ್ನು ಬರೆಯಿಸಿ, ಹಾಕಿಕೊಂಡು ಆಕರ್ಷಕವಾಗಿ ಸಿಂಗಾರ ಮಾಡಿಕೊಂಡು ಬಂದಿದ್ದ ಒಬ್ಬ ಕನ್ನಡ ಅಭಿಮಾನಿಯನ್ನು ಕೂಡ ನಾನು ಗಮನಿಸಿದೆ.

ಈ ಬೈಸಿಕಲ್ ಎನ್ನುವುದು ಸಾಹಿತ್ಯ ಪರಂಪರೆಯಲ್ಲೂ ಕೂಡ ಕಥೆ, ಕವನ, ಲೇಖನ ಎಲ್ಲದಕ್ಕೂ ಕೂಡ ಸ್ಪೂರ್ತಿಯಾಗಿದೆ. ಸಾಹಿತಿಗಳು ಕೂಡ ಸೈಕಲ್ನಲ್ಲೇ ತಮ್ಮ ಪುಸ್ತಕ ಮಾರಾಟ ಮಾಡಿದ್ದೂ ಉಂಟು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಬಳಸಲು ಸಲುವಾಗಿ ಸೈಕಲ್ ಲೋನ್ ವ್ಯವಸ್ಥೆಯು ಕೂಡ ಇತ್ತು. ಈಗ ಆ ವ್ಯವಸ್ಥೆ ಇಲ್ಲ ಈಗೇನಿದ್ದರೂ ಮೋಟರ್ ಸೈಕಲ್ , ಕಾರು ತೆಗೆದುಕೊಳ್ಳಲು ಲೋನ್ ಕೊಡುತ್ತಾರೆ.

ಈಗ ಮಕ್ಕಳು ಬೆಳೆದು ಸ್ವಲ್ಪ ದೊಡ್ಡವರಾದಾಗ ಅವರು ಮೊದಲು ಕೇಳುವುದೇ ಸೈಕಲ್!. ಸೈಕಲ್ ತುಳಿಯದೆ ನಮ್ಮ ಬಾಲ್ಯ ಸಾಗುವುದೇ ಇಲ್ಲ!. ಒಂದು ರೀತಿಯಲ್ಲಿ ಸೈಕಲ್ ನಮ್ಮ ಮುಂದಿನ ಸ್ಕೂಟರ್, ಕಾರು ಇತ್ಯಾದಿ ವಾಹನಗಳನ್ನು ಕಲಿಯಲು ಇದು ಮುಖ್ಯ ವೇದಿಕೆಯಾಗುತ್ತದೆ. ಅದು ಏಕೆ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಸೈಕಲ್ಲು ವಿಧವಿಧ ರೀತಿಯಲ್ಲಿ ಇವೆ. ಅಂಗವಿಕಲರು ಕೂಡ ಬಳಸಲು ಅನುಕೂಲವಾಗುವ ಮೂರು ಚಕ್ರದ ಸೈಕಲ್ ಕೂಡ ಇದೆ.

ಇಂದಿಗೂ ಕೂಡ ವೃತ್ತ ಪತ್ರಿಕೆ ಹಾಕುವವರು ಪ್ರತಿದಿನ ಬೆಳಿಗ್ಗೆ, ಸಂಜೆ ಸೈಕಲ್ ನಲ್ಲಿ ವಿತರಿಸುವುದನ್ನು ನಾವು ಕಾಣಬಹುದಾಗಿದೆ. ಉದಾಹರಣೆಗೆ ಮೈಸೂರಿನ ಜವರಪ್ಪ ಇದೇ ವೃತ್ತಿ ಮಾಡಿ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು. ಜೊತೆಗೆ ಸೈಕಲ್‌ನಲ್ಲೇ ಮನೆಮನೆಗೆ ಹಾಲು ವಿತರಿಸುವವರು ಇದ್ದಾರೆ. ಜೊತೆಗೆ ಇನ್ನೂ ಪೋಸ್ಟ್ ಮಾಸ್ಟರ್ ಅನ್ನು ನೆನಪಿಸಿಕೊಳ್ಳಲೇಬೇಕು!. ಮನೆ ಮನೆಗೆ ಪತ್ರಗಳು ಕೆಂಪು ತಲುಪುತ್ತಿದ್ದದ್ದು ಸೈಕಲ್ನಲ್ಲೇ ಅದೂ ಟ್ರಿನ್ ಟ್ರಿನ್ ಸದ್ದಿನೊಂದಿಗೆ ಬಂದು ತಲುಪುತ್ತಿದ್ದವು. ಮುಂಜಾನೆಯ ಸಮಯದಲ್ಲಿ ಸೈಕಲ್ ನಲ್ಲಿ ವಾಯುವಿಹಾರಕ್ಕೆ ಹೋಗುವುದೇ ಒಂದು ರೀತಿಯಲ್ಲಿ ಮಜಾ!.ಉದ್ಯಮ ಕ್ಷೇತ್ರದಲ್ಲೂ ಕೂಡ ಸೈಕಲ್ ಅನ್ನು ಬ್ರಾಂಡ್ ಆಗಿ ಬಳಸಿದ್ದಾರೆ.ಮೈಸೂರಿನ ವಾಸು ಅಗರಬತ್ತಿ ಎಂದು ಎಲ್ಲ ಕಡೆ ಪ್ರಸಿದ್ಧಿಯಾಗಿದೆ.

ಹಿಂದೆ ಪ್ರತಿ ಮನೆಗೂ ಸೈಕಲ್ ಇದ್ದ ಕಾಲವೊಂದಿತ್ತು. ಈಗ ಆ ಜಾಗದಲ್ಲಿ ಸ್ಕೂಟರ್, ಕಾರ್ ಸೇರಿವೆ. ಆದರೂ ಕೂಡ ಮತ್ತೆ ಸೈಕಲ್ ಖರೀದಿಸಿ, ಸವಾರಿ ಮಾಡುವವರು ಇದ್ದಾರೆ!. ನಾನು ಕೂಡ ಇವತ್ತಿಗೂ ಕೂಡ ಸೈಕಲ್ ಉಪಯೋಗಿಸುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ. ಸೈಕಲ್ ಚಕ್ರ ಸ್ವತ್ತುವಾಗ ಗೊರ್ ಎನ್ನುವ ಶಬ್ದದೊಂದಿಗೆ ಬ್ಯಾಟರಿ ಮೂಲಕ ಕ್ಷಣಾರ್ಧದಲ್ಲಿ ಉತ್ಪತ್ತಿಯಾಗುವ ಬೆಳಕು ವ್ಯವಸ್ಥೆಯನ್ನು ಆ ಕಾಲದಲ್ಲೇ ಮಾಡಲಾಗಿತ್ತು. ಬೆಲ್ ಬಾರಿಸುತ್ತಾ ಸೈಕಲ್ ಮೇಲೆ ಸವಾರಿ ಮಾಡುವುದು ಒಂದು ರೀತಿಯಲ್ಲಿ ಖುಷಿ ನೀಡುತ್ತದೆ. ಇನ್ನು ನೆನಪಿದೆ “ಬ್ರೇಕ್ ಇಲ್ಲ ಬೆಲ್ ಇಲ್ಲಾ ಡ್ಯಾಸ್ ಆದರೆ ಕೇಸ್ ಇಲ್ಲ”- ಎನ್ನುವ ಪದವನ್ನು ಕೂಡ ನಾವು ಹೇಳುತ್ತಿದ್ದೆವು!.

ಇನ್ನು ಉದ್ಯಾನ ನಗರಿ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥೆಯು ಕೂಡ ಇತ್ತು. ಈಗ ಹೊಸ ಮಾದರಿಯೊಂದಿಗೆ ಮತ್ತೆ ಪ್ರಾರಂಭವಾಗಿದೆ. ನಾವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ನಿಗದಿತ ಸ್ಥಳದಲ್ಲಿ ಸೈಕಲ್ ನನ್ನು ತೆಗೆದುಕೊಂಡು ಹೋಗಬಹುದು. ಮೈಸೂರಿನಲ್ಲಿ 48 ಸ್ಥಳಗಳಲ್ಲಿ ಸೈಕಲ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 500 ಸೈಕಲ್ ಗಳು ಬಳಕೆಗೆ ಲಭ್ಯವಾಗಿದೆ. ಒಂದೆಡೆ ಸೈಕಲ್ ಗಳನ್ನು ಬಳಸಲು ಸಾರ್ವಜನಿಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬುದು ಕೂಡ ಕಂಡು ಬಂದಿದೆ. ದೇಶದಲ್ಲಿಯೇ ಪ್ರಥಮವಾಗಿ 2017ರಲ್ಲಿ ಪಾರಂಪರಿಕ ನಗರ ಮೈಸೂರಿನಲ್ಲಿ ಆರಂಭವಾದ ಸಾರ್ವಜನಿಕ ಬೈಸಿಕಲ್ ಹಂಚಿಕೆ (ಪಿಬಿಎಸ್) ಯೋಜನೆ ಟ್ರಿಣ್ ಟ್ರಿಣ್ ಜಾರಿಗೊಂಡಾಗ ಸಾರ್ವಜನಿಕರು ಹೆಚ್ಚಿನ ಉತ್ಸಾಹ ತೋರಿದ್ದರು. ಮೊದಲ ಹಂತದ ಯೋಜನೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಬಳಕೆದಾರರು ಉಪಯೋಗಿಸಿದ್ದು ಕಂಡುಬಂದಿತು. ಈಗ ನೂತನ ಟ್ರೈನ್ ಟಿನ್ 2.0 ಉಪಕ್ರಮ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಕೂಡ ಅಂದಾಜು 7,000 ಬಳಕೆದಾರರನ್ನು ಮಾತ್ರ ತಲುಪಲು ಸಾಧ್ಯವಾಗಿದೆ ಎಂದು ಅಂಕಿ ಅಂಶ ತಿಳಿಸುತ್ತದೆ. ಮುಂದುವರೆದು ನಗರದಲ್ಲಿ ಸೂಕ್ತವಾದ ಟ್ರ್ಯಾಕ್ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಕೂಡ ಸಾರ್ವಜನಿಕರು ದೂರಿದ್ದಾರೆ. ಈಗ ನಿರ್ಮಿಸಿರುವ ಸೈಕಲ್ ಪಥ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕವಾಗಿ ಸೈಕಲ್ ಪಥ ಬೇಕು ಎಂದಿದ್ದಾರೆ.ದೊಡ್ಡ ದೊಡ್ಡ ನಗರಗಳಲ್ಲೂ ಕೂಡ ಇದೇ ರೀತಿಯ ಸೈಕಲ್ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ…… ಯುವಜನರಲ್ಲಿ ಫಿಟ್ನೆಸ್ ಗೆ ಸಂಬಂಧಿಸಿದಂತೆ ಆಸಕ್ತಿ ಇದ್ದು, ಇದಕ್ಕಾಗಿ ಸೈಕ್ಲಿಂಗ್ ಗೆ ಮೊರೆ ಹೋಗುತ್ತಿದ್ದಾರೆ. 2013 ರಿಂದ ಸೈಕ್ಲಿಂಗ್ ಅಸೋಸಿಯೇಷನ್ ಮೂಲಕ ಟ್ರಿಪ್ ಗಳನ್ನು ಆಯೋಜಿಸುತ್ತಿದ್ದಾರೆ. ಉದ್ಯಾನ ನಗರಿ ಮೈಸೂರಿನಲ್ಲಿ 18 ರಿಂದ 20 ನ್ಯಾಷನಲ್ ಮೆಡಲಿಸ್ಟ್ ಸೈಕ್ಲಿಸ್ಟ್ ಗಳು ಇರುವುದು ಕಂಡುಬಂದಿದೆ. ಈಗಾಗಲೇ ರಾಜ್ಯ ಬಜೆಟ್ ನಲ್ಲಿ ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣಕ್ಕೆ 10 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಈ ಹಣವನ್ನು ಸದುಪಯೋಗಪಡಿಸಿಕೊಂಡರೆ ವೃತ್ತಿಪರ ಸೈಕ್ಲಿಂಗ್ ಖಂಡಿತ ಅಭಿವೃದ್ಧಿಯಾಗುತ್ತದೆ ಎಂಬುದು ಉದ್ಯಾನ ನಗರಿ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಬಾರಿಯ ಬೈಸಿಕಲ್ ದಿನಾಚರಣೆಯ ಸಂಭ್ರಮಕ್ಕೆ “ಬೈಸಿಕಲ್ ನಿಂದ ಆರೋಗ್ಯ ಔಚತ್ಯ ಮತ್ತು ಸುಸ್ಥಿರತೆ”- ಎಂಬ ಧ್ಯೇಯ ವಾಕ್ಯ ಸ್ಪೂರ್ತಿಯಾಗಿದೆ?. ಈ ಸೈಕಲ್ ಪಯಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪುವುದಲ್ಲದೆ ಆ ನಡುವೆ ಸವಾರಿ ವಿಭಿನ್ನ ಅನುಭವ ತರುತ್ತದೆ!. ಬೈಸಿಕಲ್ ಗಳಿಗೆ ಎಂದೇ ಪ್ರತ್ಯೇಕ ಕಿರುದಾರಿಗಳು ಇರಬೇಕಾಗುತ್ತದೆ. ನೆದರ್ಲ್ಯಾಂಡ್ ನ ರಾಜಧಾನಿ ಆಮ್ಸ್ಟರ್ ಡ್ಯಾo ಅನ್ನು ಬೈಸಿಕಲ್ಗಳ ರಾಜಧಾನಿ ಎಂದೇ ಕರೆಯಲಾಗುತ್ತಿದೆ. ಅಲ್ಲಿ ಜನರಿಗಿಂತ ಬೈಸ್ಕಲ್ಗಳೇ ಹೆಚ್ಚಾಗಿವೆ!. ಟ್ರಿಣ್, ಟ್ರಿಣ್ ಎನ್ನುವುದು ಬರಿ ಶಬ್ದ ವಲ್ಲದೆ ಅದು ಭವಿಷ್ಯದಲ್ಲಿ ಪ್ರಗತಿಯ ಸಂಕೇತದ ಶುಭ ಸೂಚನೆಯಾಗಿದೆ. ಪರಿಸರ ಸ್ನೇಹಿ ಸೈಕಲ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೈಕಲ್ ಗೆ ಪೆಟ್ರೋಲ್ ಹಾಕಿಸುವ ಅವಶ್ಯಕತೆ ಇಲ್ಲ. ಜೊತೆಗೆ ಒಮ್ಮೆ ಖರೀದಿ ಮಾಡಿದರೆ ಅದನ್ನು ಸರಿಯಾಗಿ ಬಳಸುತ್ತಾ ಹೋದರೆ ವರ್ಷಗಟ್ಟಲೆ ಬಳಕೆಗೆ ಬರುತ್ತದೆ.

ಒಂದು ವಿಷಯ ಮರೆತಿದ್ದೆ…. ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಕೂಡ ಸೈಕಲ್ ಕಾಣಿಸಿಕೊಂಡಿದೆ!. ನವರಾತ್ರಿಯ ಸಂದರ್ಭದಲ್ಲಿ ಒಂದು ದಿನ ಸೈಕಲ್ ಮೂಲಕವೇ ನಾವು ಸವಾರಿ ಮಾಡಿ, ಪಾರಂಪರಿಕ ಕಟ್ಟಡಗಳ ಬಗ್ಗೆ ಅದರ ಇತಿಹಾಸದ ಬಗ್ಗೆ ನಾನು ಮತ್ತು ನನ್ನ ಸ್ನೇಹಿತ ಕಣ್ಣೂರು ಗೋವಿಂದಾಚಾರಿ ಕಳೆದ ನಾಲ್ಕೈದು ವರ್ಷಗಳಿಂದಲೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬರುತ್ತಿದ್ದೇವೆ. 100 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸುತ್ತಾ ಬರುತ್ತಿದ್ದಾರೆ. ಇದೊಂದು ಯಶಸ್ವಿ ಕಾರ್ಯಕ್ರಮ.

ಒಟ್ಟಾರೆ ಬಡತನ, ಸಿರಿತನ ಎಂಬ ಭೇದ-ಭಾವವಿಲ್ಲದೆ “ಸೈಕಲ್” ಎಂಬ ಪ್ರೀತಿ ಪೂರ್ವಕ, ಅವಿನಾಭಾವ ಸಂಬಂಧವಿರುವ ಈ ವಾಹನ ಮನೆ- ಮನದಲ್ಲೂ ಕೂಡಾ ಪ್ರಸ್ತುತವಾಗಿಯೂ ಇದೆ. ಈ ಬೈಸಿಕಲ್ ಬಳಸಿಲ್ಲ ಎಂದು ಹೇಳುವವರು ಅತಿ ವಿರಳ!.ಇದು ನಮ್ಮ ಜೀವನದಲ್ಲಿ ಸವಿ ಸವಿ ನೆನಪಾಗಿ ಸದಾ ಉಳಿದಿರುತ್ತದೆ. ಮೊದಲೇ ಹೇಳಿದಂತೆ ಬಹುಪಯೋಗಿ, ಪರಿಸರಕ್ಕೆ ಪೂರಕವಾಗಿ ಯಾವುದೇ ಮಾಲಿನ್ಯ ನೀಡದೆ, ಮಾನ್ಯತೆ ಪಡೆದಿರುವ ಈ ಸೈಕಲ್ ಎಂಬ ವಿಸ್ಮಯ ಪ್ರಪಂಚ ಪ್ರಪಂಚದಾದ್ಯಂತ ಎಲ್ಲರನ್ನೂ ಕೂಡ ಆವರಿಸಿಕೊಂಡಿದೆ. ದೇಶ-ವಿದೇಶಗಳಲ್ಲೂ ಕೂಡ ಮನ್ನಣೆ ಪಡೆದಿದೆ.

ಬನ್ನಿ,ಇವತ್ತಿನಿಂದಾದರೂ ಒಂದು ಸೈಕಲ್ ಖರೀದಿಸಿ, ಅದರ ಸ್ನೇಹ ಮಾಡೋಣ. ನಂತರ ಆದರಿಂದ ಬಹುಪಯೋಗ ಪಡೆದುಕೊಳ್ಳೋಣ!.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

4 Responses

  1. ನಾವೂ ಸಹ ಸೈಕಲ್ ನಲ್ಲಿ ಒಂದು ಸುತ್ತು ಬರುತ್ತಾ ನಮ್ಮ ನೆನಪನ್ನು ಕೆದಕುತ್ತಾ…ಲೇಖನ ಓದಿದೆ… ಚೆನ್ನಾಗಿ ದೆ ಸಾರ್

  2. Hema Mala says:

    ನೆನಪಿನ ಅಂಗಳದಲ್ಲಿ ಮೂಡಿದ ಚೆಂದದ ಬರಹ..

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಲೇಖನ

  4. ಶಂಕರಿ ಶರ್ಮ says:

    ನಮ್ಮ ದೇಶದಲ್ಲಿ ಮೊದಲ ಬಾರಿಗೆ ರಾಕೆಟ್ ಉಡ್ಡಯಣ ಮಾಡುವ ಸಂದರ್ಭದಲ್ಲಿ ಅಲ್ಲಿಯ ವಿಜ್ಞಾನಿಗಳು, ಸಕಾಲದಲ್ಲಿ ಅದರ ಭಾಗವೊಂದನ್ನು ಸಾಗಿಸಲು ವಾಹನ ಸಿಗದೇ ಇದ್ದುದರಿಂದ; ಅದನ್ನು ಸೈಕಲ್ಲಿನಲ್ಲಿ ಸಾಗಿಸಿದ್ದ ಚಿತ್ರವು ಅತ್ಯಂತ ಪ್ರಸಿದ್ಧವಾಗಿದೆ. ಸೈಕಲ್ ಪ್ರಯಾಣದ ಮೋಜನ್ನು ನೀಡಿದ ಲೇಖನ ಸೂಪರ್!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: