ಮೆಕಾಂಗ್ ಎಂಬ ಮಹಾಮಾತೆ : ಹೆಜ್ಜೆ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಾಂಬೋಡಿಯಾ ಪ್ರವಾಸ ಕಥನ

ನೂರು ನೋವುಗಳ ಮಧ್ಯೆ ಮನಸ್ಸು ಅರಳಬಲ್ಲದೇ, ಆದರೆ ನೂರು ಮುಳ್ಳುಗಳ ಮಧ್ಯೆ ಗುಲಾಬಿ ಅರಳಬಲ್ಲದು. ನೈಸರ್ಗಿಕ ಸಂಪತ್ತಿನ ಕಣಜಗಳಾದ ವಿಯೆಟ್ನಾಂ ಮತ್ತು ಕಾಂಬೋಡಿಯಾ ಹಲವು ಬಾರಿ ಪರಕೀಯರ ದಾಳಿಗೆ ಸಿಕ್ಕು ನಲುಗಿದರೂ ಮತ್ತೆ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ಎದ್ದು ನಿಂತವು. ಬಹುಶಃ ಈ ಮಣ್ಣಿನ ಗುಣವೋ, ಅಥವ ಈ ಮಣ್ಣಿಗೆ ನೀರುಣಿಸಿದ ಮೆಕಾಂಗ್ ನದಿಯ ಪ್ರಭಾವವೋ ಗೊತ್ತಿಲ್ಲ. ಹಿಮಾಲಯದಲ್ಲಿ ಜನಿಸಿದ ಮೆಕಾಂಗ್ ನದಿ ಚೈನಾ, ಮಯನ್‌ಮಾರ್, ಲಾವೋಸ್, ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯಾ ದೇಶಗಳ ಜೀವನಾಡಿಯಾಗಿದೆ. ಈ ನದೀ ತೀರದಲ್ಲಿ ಉಗಮಿಸಿದ ನಾಗರೀಕತೆಗಳನ್ನು ಪೋಷಿಸಿದ ಮಹಾಮಾತೆ ಮೆಕಾಂಗ್. ವ್ಯವಸಾಯ, ಮೀನುಗಾರಿಕೆ, ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿದೆ. ಕಾಂಬೋಡಿಯಾ ಸಂಗೀತ, ನೃತ್ಯ, ಸಾಹಿತ್ಯ, ಶಿಲ್ಪಕಲೆಗಳ ತವರೂರಾಗಿದ್ದರೆ, ಭತ್ತದ ಕಣಜ ಎಂದೇ ಹೆಸರಾಗಿರುವ ವಿಯೆಟ್ನಾಂ ಏಷ್ಯಾದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಲ್ಲುವುದು.

ಮೆಕಾಂಗ್ ನದಿಯು 4904 ಕಿ.ಮೀ. ಉದ್ದವಿದ್ದು, ವಿಶ್ವದಲ್ಲಿ ಹನ್ನೆರೆಡನೇ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಮೂರನೆಯ ಸ್ಥಾನ ಪಡೆದಿರುವ ಮೆಕಾಂಗ್ ಪದದ ಅರ್ಥ, ನದಿಗಳ ಮಾತೆ. ಈ ನದಿಯ ಮಡಿಲಲ್ಲಿ ಹಲವು ವಿದ್ಯುತ್ ಯೋಜನೆಗಳಿದ್ದು ಇಡೀ ನಾಡಿಗೇ ಬೆಳಕು ಹರಿಸುತ್ತಿದೆ. ಮುಗಿಲು ಮಳೆ ಸುರಿಸಿದಾಗ, ನದಿಯಲ್ಲಿ ಪ್ರವಾಹ ಉಕ್ಕಿ, ಮೆಕ್ಕಲು ಮಣ್ಣನ್ನು ತನ್ನ ಉಡಿಯಲ್ಲಿ ತಂದು ಈ ನೆಲದ ಫಲವತ್ತತೆಯನ್ನು ಹೆಚ್ಚಿಸುವ ಮೆಕಾಂಗ್, ಸುಮಾರು ಅರವತ್ತು ಮಿಲಿಯನ್ ಜನರಿಗೆ ಅನ್ನ ನೀಡುವ ಅನ್ನಪೂರ್ಣೆಯಾಗುವಳು.
ಕಾಂಬೋಡಿಯಾದ ಬೃಹತ್ ಸರೋವರ, ಟೋನ್ಲೆ ಸ್ಯಾಪ್ನ ಉಸಿರಾಗಿರುವಳು ಮೆಕಾಂಗ್. ಆಗ್ನೇಯ ಏಷ್ಯಾದ ಅತ್ಯಂತ ದೊಡ್ಡ ಸರೋವರವಾದ ಟೋನ್ಲೆ ಸ್ಯಾಪ್‌ನ ವೈಶಿಷ್ಠ್ಯವೇನು ಗೊತ್ತೆ? ವರ್ಷಕ್ಕೆರಡು ಬಾರಿ ತನ್ನ ಹರಿವಿನ ದಿಕ್ಕನ್ನು ಬದಲಿಸುವುದು. ನವೆಂಬರ್‌ನಿಂದ ಮೇ ತಿಂಗಳಿನವರೆಗೆ ಈ ಸರೋವರವು ಮೆಕಾಂಗ್ ನದಿಯತ್ತ ಮುಖ ಮಾಡಿದರೆ, ಜೂನ್ ತಿಂಗಳಿನಿಂದ ಅಕ್ಟೋಬರ್‌ವರೆಗೆ ವರುಣನ ಆರ್ಭಟದಿಂದ ಉಕ್ಕಿ ಹರಿಯುವ ಮೆಕಾಂಗ್ ನದಿಯ ನೀರಿಗೆ ಬೆದರಿ ಹಿಂದೆ ಸರಿಯುವುದು, ನದಿಯ ನೀರು ಮುನ್ನುಗ್ಗಿ ಸರೋವರವನ್ನು ತುಂಬಿಸುವುದು. ನೀರಿನ ಜೊತೆಗೇ ಮೆಕಾಂಗ್ ನದಿಯು ಹೊತ್ತು ತರುವ ಫಲವತ್ತಾದ ಮೆಕ್ಕಲು ಮಣ್ಣನ್ನು ತನ್ನೊಡಲೊಳಗೆ ತುಂಬಿಸಿಕೊಂಡ ಸರೋವರವು, ತಾನು ಸಾಗುವ ಬಯಲು ಪ್ರದೇಶವನ್ನೆಲ್ಲಾ ಹಚ್ಚ ಹಸಿರಾಗಿ ಮಾರ್ಪಡಿಸುವುದು. ಹೊಂಬಣ್ಣದ ಭತ್ತದ ತೆನೆಗಳು ತಲೆದೂಗುತ್ತಾ ಪ್ರವಾಸಿಗರನ್ನು ಸ್ವಾಗತಿಸುವುವು. ಮೆಕಾಂಗ್ ನದಿಯು ಉಕ್ಕಿ ಹರಿಯುತ್ತಿದ್ದಂತೆ ಮತ್ಸೋದ್ಯಮವೂ ಅರಳಿ ನಿಲ್ಲುವುದು. ಮೆಕಾಂಗ್ ಡೆಲ್ಟಾ ಪ್ರದೇಶವು ವೈವಿಧ್ಯಮಯ ಜೀವ ಜಂತುಗಳ ನೆಲೆಯಾಗಿರುವುದರಿಂದ ಇದನ್ನು 1997 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.

ನಾವು ಒಂದು ಮೋಟಾರ್ ಬೋಟ್ ನಲ್ಲಿ ಕುಳಿತು ಟೋನ್ಲೆ ಸ್ಯಾಪ್ ಸರೋವರದಲ್ಲಿ ಒಂದು ಸುತ್ತು ಹಾಕಿದೆವು. ಹಲವು ಬೆಸ್ತರು ನೀರಿನ ಮೇಲೆಯೇ ತಮ್ಮ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇವನ್ನು ತೇಲಾಡುವ ಹಳ್ಳಿಗಳು ಎಂದು ಕರೆಯಬಹುದೇನೋ, ಇವರ ಮಕ್ಕಳಿಗಾಗಿ ಒಂದು ತೇಲಾಡುವ ಶಾಲೆಯೂ ಇದೆ. ಜೊತೆಗೇ ಇವರಿಗೆ ಬೇಕಾದ ತರಕಾರಿ ಹಾಗೂ ದಿನಸಿ ವಸ್ತುಗಳಿಗಾಗಿ ತೇಲಾಡುವ ಮಾರ್ಕೆಟ್ ಸಹ ಇದೆ. ಬಿಸಿಲಿನ ಬೇಗೆಗೆ ಬಾಯಾರಿದ್ದ ನಮಗೆಲ್ಲಾ ಸಿಹಿಯಾದ ಎಳನೀರನ್ನು ನಮ್ಮ ಪ್ರವಾಸೀ ತಂಡದ ಮ್ಯಾನೇಜರ್ ಕೊಡಿಸಿದರು. ಸರೋವರದ ಮೇಲೆಯೇ ತಮ್ಮ ಬದುಕನ್ನು ಕಟ್ಟಿಕೊಂಡ ಇವರ ಜೀವನಶೈಲಿಯನ್ನು ಕುತೂಹಲದಿಂದ ನೋಡುತ್ತಾ ಅಂದಿನ ಪ್ರವಾಸವನ್ನು ಮುಗಿಸಿದೆವು.

ಇನ್ನು ದಕ್ಷ್ಷಿಣ ವಿಯೆಟ್ನಾಮಿನಲ್ಲಿ ದೋಣಿ ವಿಹಾರದ ಮಜವೇ ಬೇರೆ. ಇಲ್ಲಿ ಹಲವಾರು ಉಪನದಿಗಳು ಮೆಕಾಂಗ್ ನದಿಯನ್ನು ಸೇರುವುದರಿಂದ ಹತ್ತಾರು ದ್ವೀಪಗಳ ನಿರ್ಮಾಣವಾಗಿದೆ. ಇಲ್ಲಿನ ದಡಗಳಲ್ಲಿ ಬೊಂಬುಗಳ ಅರಣ್ಯ ಹಾಗೂ ಮ್ಯಾಂಗ್ರೋ ಕಾಡುಗಳು ನಮ್ಮನ್ನು ಸ್ವಾಗತಿಸುತ್ತವೆ. ನಮ್ಮ ಮೊದಲ ಭೇಟಿ ವಿನ್ ತ್ರಾಂಗ್ ಬೌದ್ಧ ದೇಗುಲವಿದ್ದ ದ್ವೀಪಕ್ಕೆ. ಬೌದ್ಧ ಸನ್ಯಾಸಿಗಳು ಧ್ಯಾನ ಮಾಡುತ್ತಿದ್ದರು, ಕೆಲವರು ಬುದ್ಧನ ಮೂರ್ತಿಗಳ ಮುಂದೆ ಪೂಜೆ ಸಲ್ಲಿಸುತ್ತಿದ್ದರು. ಇಲ್ಲಿನ ವಿಶೇಷತೆ ಏನೆಂದರೆ ಮೂರು ಭಂಗಿಗಳಲ್ಲಿರುವ ಬುದ್ಧನ ಮೂರ್ತಿಗಳಿದ್ದು, ಮೂರನೆಯ ಮೂರ್ತಿ ಹ್ಯಾಪಿ ಮ್ಯಾನ್ ನನ್ನು ಹೋಲುತ್ತಿದ್ದ. ಗಣಪನ ಡೊಳ್ಳು ಹೊಟ್ಟೆಯನ್ನು ಹೊತ್ತ ಬುದ್ಧನ ನಗುಮುಖದ ಮೂರ್ತಿಯನ್ನು ಭವಿಷ್ಯದ ಬುದ್ಧ ಎಂದು ಬಿಂಬಿಸುವರು. ಮತ್ತೆ ನಮ್ಮ ಸವಾರಿ ಚಾವ್ ಥಾನ್ ದ್ವೀಪಕ್ಕೆ ಹೊರಟಿತ್ತು. ಅಲ್ಲೊಂದು ತೆಂಗಿನ ವಿಶೇಷವಾದ ಖಾದ್ಯಗಳನ್ನು ತಯಾರಿಸುವ ಗೃಹ ಕೈಗಾರಿಕೆಯಿದ್ದು, ನಾವೆಲ್ಲಾ ಕೊಬ್ಬರಿ ಮಿಠಾಯಿ ಸವಿದೆವು, ತೆಂಗಿನ ಹಾಲಿನಿಂದ ತಯಾರಾದ ಐಸ್ ಕ್ರೀಮ್, ಕೋಕೋನಟ್ ಕ್ಯಾಂಡಿ ಚಪ್ಪರಿಸಿದೆವು, ಉಯ್ಯಾಲೆಗಳ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿದೆವು. ನಮ್ಮ ಸಹಪ್ರಯಾಣಿಕರಲ್ಲಿ ಕೆಲವರು ಏನೋ ಗುಸು ಗುಸು ಮಾತಾಡುತ್ತಿದ್ದರು, ಇಲ್ಲಿ ತಯಾರಾಗುವ ವಿಶೇಷವಾದ ವೈನ್ ಕುಡಿದು ಬರೋಣ ಎಂದು. ವೈನ್ ಕುಡಿಯಲು ಹೋದವರು ಎರಡೇ ನಿಮಿಷದಲ್ಲಿ ವಾಪಸ್ ಬಂದಿದ್ದರು, ನಾನು ಏನೆಂದು ವಿಚಾರಿಸಿದಾಗ ಅವರು ಸತ್ತ ಹಾವು ಮತ್ತು ಚೇಳುಗಳನ್ನು ವೈನ್‌ನಲ್ಲಿ ಐದಾರು ತಿಂಗಳು ಮುಳುಗಿಸಿಟ್ಟು ತಯಾರಿಸುವ ವಿಶೇಷವಾದ ಪೇಯವಂತೆ, ನಮ್ಮವರಿಗೆ ಅದನ್ನು ಕುಡಿಯಲು ಧೈರ್ಯ ಸಾಲದೆ ಹಿಂತಿರುಗಿದ್ದರು.

ನಮ್ಮ ಮುಂದಿನ ಪ್ರವಾಸಿ ತಾಣ ಫುಂಗ್ ದ್ವೀಪ. ಸ್ಥಳೀಯ ಭೋಜನವನ್ನು ಸವಿಯುವ ರೆಸ್ಟೊರಾಂಟ್ ಸದವಕಾಶ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನೂ ವ್ಯವಸ್ಥೆ ಮಾಡಲಾಗಿತ್ತು. ಮೊದಲಿಗೆ ವೆಲ್‌ಕಮ್ ಡ್ರಿಂಕ್ – ಪುಟ್ಟ ಪುಟ್ಟ ಕುಡಿಕೆಗಳಲ್ಲಿ ಅಲ್ಲಿಯೇ ತಯಾರಾಗುವ ಜೇನು ತುಪ್ಪವನ್ನು ಎಲ್ಲರಿಗೂ ನೀಡಿದರು. ಸಿಹಿಯಾದ ಜೇನನ್ನು ಸವಿದು, ಚೌಕಾಕಾರದ ಮರದ ಚೌಕಟ್ಟುಗಳಲ್ಲಿದ್ದ ಜೇನಿನ ಹುಟ್ಟುಗಳನ್ನು ಹಿಡಿದು ಫೋಟೋ ತೆಗೆಸಿಕೊಂಡೆವು. ಜೇನುಹುಳಗಳು ಕಚ್ಚಿದರೆ ಎಂಬ ಭಯದಿಂದ ನಾನು ಎಲ್ಲರೂ ಫೋಟೋ ತೆಗಸಿಕೊಂಡ ಮೇಲೆಯೇ ಧೈರ್ಯ ಮಾಡಿ ಫೋಟೋ ತೆಗೆಸಿಕೊಂಡೆ. ಪ್ರವಾಸಿಗರ ಮನರಂಜನೆಗಾಗಿ ಇಂಪಾದ ವಾದ್ಯ ಸಂಗೀತದೊಂದಿಗೆ ಚೆಂದದ ಹುಡುಗಿಯರು ಸಾಂಪ್ರದಾಯಿಕ ಗೀತೆಗಳನ್ನು ಹಾಡಿದರು. ಬಗೆ ಬಗೆಯ ಜಲಚರಗಳ ಭಕ್ಷ್ಯಗಳು ಮಾಂಸಾಹಾರಿಗಳ ಬಾಯಲ್ಲಿ ನೀರೂರಿಸಿದ್ದವು, ಸಸ್ಯಾಹಾರಿಗಳಾದ ನಾವು ಹಸಿ ತರಕಾರಿಯ ಹೋಳುಗಳು, ಹಣ್ಣುಗಳು ಹಾಗೂ ಪಲಾವ್‌ಗೆ ತೃಪ್ತಿ ಪಡಬೇಕಾಯಿತು. ಬೆಂಗಳೂರಿನಿಂದ ಬಂದಿದ್ದ ಶ್ರೀಲಕ್ಷ್ಮಿಯವರು ಸಿದ್ಧಪಡಿಸಿದ್ದ ಆಹಾರದ ಪ್ಯಾಕೆಟ್‌ಗಳಿಗೆ ನೀರು ಹಾಕಿ ಕುಲುಕಿ ವಾಂಗಿಬಾತ್, ಬಿಸಿಬೇಳೆಬಾತ್, ಪುಳಿಯೋಗರೆ ಇತ್ಯಾದಿಗಳನ್ನು ಕ್ಷಣಮಾತ್ರದಲ್ಲಿ ಸಿದ್ಧಪಡಿಸುತ್ತಿದ್ದರು. ನಾನೂ ಅವರ ಜೊತೆ ಒಂದೆರೆಡು ಬಾರಿ ಈ ದಿಢೀರ್ ಬಾತ್‌ಗಳನ್ನು ಸೇವಿಸಿದ್ದೂ ಉಂಟು.

PC: Internet


ನಮ್ಮ ದೋಣಿ ವಿಹಾರದ ಪ್ರಮುಖ ಘಟ್ಟ ಎಂದರೆ ಚಿಕ್ಕದಾದ ಉದ್ದವಾದ ದೋಣಿಗಳಲ್ಲಿ ಕುಳಿತು ಸಾಗಿದ ಪಯಣ, ಈ ದೋಣಿಗಳ ಹುಟ್ಟು ಹಾಕುತ್ತಿದ್ದ ಬಹುಪಾಲು ಜನರು ಮಹಿಳೆಯರೇ ಎಂಬುದೊಂದು ವಿಶೇಷ. ಮೂರು ಅಥವಾ ನಾಲ್ಕು ಜನರು ದೋಣಿಗಳಲ್ಲಿ ಕುಳಿತು ಆ ಕಾಲುವೆಗಳಂತೆ ಇದ್ದ ನದೀಪಾತ್ರದಲ್ಲಿ ಸಾಗಿದೆವು, ನಮ್ಮ ಅಕ್ಕಪಕ್ಕ ಇದ್ದದ್ದು ಬೊಂಬುಗಳ ಸಾಲು ಸಾಲು ಹಾಗೂ ಮ್ಯಾಂಗ್ರೋ ಮರಗಳು. ಅಲ್ಲಿ ನಮಗೆ ಹಲವು ಬಗೆಯ ಪಕ್ಷಿಗಳ ಕೂಗು ಕೇಳಿಬರುತ್ತಿತ್ತು. ಅಲ್ಲಿ ನನಗೆ ಕಾಣುತ್ತಿದ್ದುದು, ಮುಂದೆ ಚಾಚಿಕೊಂಡಿದ್ದ ನೀರಿನ ಕಾಲುವೆಗಳು, ನೀಲ ಆಗಸದಲ್ಲಿ ಪ್ರಕಾಶಿಸುತ್ತಿದ್ದ ರವಿ, ಸಿನೆಮಾ ಗೀತೆಯೊಂದನ್ನು ಗುನುಗುತ್ತಿದ್ದ ನಾವಿಕಳು. ಈ ಪಯಣ ಮುಗಿಯದಿರಲಿ, ಈ ಜಲರಾಶಿ, ಈ ಗಗನ, ಹಕ್ಕಿಗಳ ಚಿಲಿಪಿಲಿ ಎಂದಿಗೂ ಎಂದೆಂದಿಗೂ ಹೀಗೆಯೇ ನನ್ನನ್ನು ಆವರಿಸಿರಲಿ ಎಂಬ ಭಾವ ಮನದಾಳದಲ್ಲಿ ಮೂಡಿತ್ತು. ನಮ್ಮ ಮೇರು ಪರ್ವತವಾದ ಹಿಮಾಲಯದ ಗರ್ಭದಲ್ಲಿ ಜನಿಸಿದ ಮೆಕಾಂಗ್ ವಿಯೆಟ್ನಾಂ, ಕಾಂಬೋಡಿಯಾದಲ್ಲಿ ನಮಗೆ ದರ್ಶನ ನೀಡುತ್ತಾ ನಮ್ಮ ಮೈ ಮನವನ್ನೆಲ್ಲಾ ಪುಳಕಗೊಳಿಸುತ್ತಾ ಸಾಗುವ ಪರಿ ನಿಜಕ್ಕೂ ಅದ್ಭುತವಲ್ಲವೇ?

ಈ ಬರಹದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40444

(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

9 Responses

 1. SHARANABASAVEHA K M says:

  ಮೆಕಾಂಗ್ ನದಿಯಲ್ಲಿ ನಾವು ಸಾಗಿದಂತಾಯಿತು. ತೇಲುವ ಹಳ್ಳಿಗಳ ಬಗ್ಗೆ ತಿಳಿದು ಅಚ್ಚರಿಯಾಯಿತು. ನಿಮಗೆ ಅನಿಸಿದಂತೆ ಹುಟ್ಟಾಕುತ್ತಾ ಯಾರ ಪರಿವೆಯಿಲ್ಲದೆ ಶಾಂತ ಜಲರಾಶಿಯಲ್ಲಿ ಸಾಗುವ ಮನಸ್ಸಾಯಿತು. ಅದ್ಭುತ ನಿಮ್ಮ ವಿವರಣೆ ಮೇಡಂ

 2. MANJURAJ H N says:

  ನಾವೂ ನಿಮ್ಮೊಂದಿಗೆ ಪ್ರ-ವಾಸ ಮಾಡಿದಂತಾಗುತ್ತಿದೆ. ಧನ್ಯವಾದಗಳು

 3. ಸೊಗಸಾದ ನಿರೂಪಣೆಯುಳ್ಳ ಪ್ರವಾಸ ಕಥನ ಮನಕ್ಕೆ ಮುದ ನೀಡಿತು ಧನ್ಯವಾದಗಳು ಗಾಯತ್ರಿ ಮೇಡಂ

 4. Sahana Priyadarshini says:

  Beautiful narration

 5. ನಯನ ಬಜಕೂಡ್ಲು says:

  ಗುಲಾಬಿ ಹೂ ಮತ್ತು ಮನಸಿನ ಹೋಲಿಕೆ ಬಹಳ ಚಂದ ಮಾಡಿದ್ದೀರಿ. ಚೆನ್ನಾಗಿದೆ

 6. ಸಹೃದಯ ಓದುಗರ ಪ್ರತಿಕ್ರಿಯೆಗಳಿಗೆ ತುಂಬು ಹೃದಯದ ವಂದನೆಗಳು

 7. Nirmala says:

  Good experience

 8. ಶಂಕರಿ ಶರ್ಮ says:

  ಮೆಕಾಂಗ್ ಮಹಾನದಿ, ಪುಟ್ಟ ದೋಣಿ ಪಯಣ, ಸ್ಥಳೀಯ ತಿನಿಸುಗಳ ರುಚಿ….ಸವಿಯಾದ ಜೇನು ಸವಿದಷ್ಟು ಖುಷಿಯಾಯಿತು ಮೇಡಂ, ತಮ್ಮ ಕಾಂಬೋಡಿಯಾ ಪ್ರವಾಸ ಲೇಖನ.

 9. ಲೇಖನ ಓದಿ ಪ್ರತಿಕ್ರಿಯಿಸಿದ ಶಂಕರಿ ಮೇಡಂ ಹಾಗೂ ನಿರ್ಮಲ ರವರಿಗೆ ನನ್ನ ಹೃದಯಪೂರ್ವಕ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: