ಆಸ್ತಿ ಕಲಹ
ಗೌಜು ಗದ್ದಲ ನಡೆದಿತ್ತು ಆಸ್ತಿ ಹಂಚಿಕೆಗಾಗಿ
ಸುಕ್ಕುಗಟ್ಟಿದ ಹಿರಿಯ ಜೀವ ಮೌನದಿಂದಿತ್ತು ಮರ್ಯಾದೆಗಾಗಿ
ನೀರಾವರಿಯ ಗದ್ದೆಗೆ ನನಗಿರಲಿ ಎಂದು ಹಿರಿಮಗ
ಫಸಲು ಕೊಡುವ ಅಡಕೆ ತೋಟ ನನಗೆ ಬೇಕು ಎಂದು ಮಧ್ಯದವ
ಮೇಲುಮುದ್ದೆಯ ಕಂಬದ ಮನೆಗೆ ಜೋತು ಬಿದ್ದ ಕಿರಿಯವ
ನಮಗೂ ಆಸ್ತಿಯಲ್ಲೂ ಪಾಲು ಬೇಕೆಂದು ಸೀರೆ ಮೇಲೆ ಸಿಕ್ಕಿಸಿ ನಿಂತ ಹೆಣ್ಣುಮಕ್ಕಳು
ಹಿರಿಯರಿಂದ ಬಂದ ತುಂಡು ಭೂಮಿಯಲ್ಲೇ ಬಿತ್ತಿ ಬೆಳೆದು
ಇಷ್ಟು ಆಸ್ತಿಯ ಮಾಡಿದ ಗಂಡನ ಕಳೆದುಕೊಂಡ ಹಿರಿ ಜೀವ
ಮಾತುಗಳೇ ಹೊರಡದೆ ಸೂರು ದಿಟ್ಟಿಸುತ್ತಾ ಕೂತಿತ್ತು
ಪಾಲಿಗಾಗಿ ಜಗಳ ಕಾಯುವ ಮಕ್ಕಳ ಕಂಡು ಮುದುಡಿ ಮಲಗಿತ್ತು
ದೀರ್ಘಕಾಲದ ಚರ್ಚೆಯ ನಂತರ ಪಾಲು ಪಟ್ಟಿ ಅಂತಿಮವಾಗಿತ್ತು
ಆ ಮನೆ ಈ ಮನೆ ಗದ್ದೆ ತೋಟ ದನ ಕರುಗಳು ಪಾತ್ರೆ ಪಗಡೆಗಳ ಹಂಚಿಕೆ ಮುಗಿದಿತ್ತು
ಅಮ್ಮ ಯಾರ ಬಳಿ ಹೋಗುವುದು ಎಂಬ ಮಾತು ಬಂದಾಗ
ಎಲ್ಲರ ಬಾಯಿ ಕಟ್ಟಿತ್ತು ಆಸ್ತಿಗಾಗಿ ನಡೆದ ಜಿದ್ದಾಜಿದ್ದಿ ಈಗ ಇಲ್ಲದಾಗಿತ್ತು
ಇದರ ಪರಿವೆಯಿಲ್ಲದ ಬಡ ಜೀವ ಬಂದ ದನಗಳ ಕಟ್ಟಲು ಹೊರಗೆ ನಡೆದಿತ್ತು
ಅಂಬಾ ಎಂದು ನಿಜ ಪ್ರೀತಿ ತೋರುವ ಅವುಗಳ ಕಾಳಜಿಯೇ ಮೇಲು ಎಂದನಿಸಿತ್ತು
-ಕೆ.ಎಂ ಶರಣಬಸವೇಶ
ಓ. ಮನಮುಟ್ಟಿ ಎಚ್ಚರಿಸುವಂತಿದೆ
ಇಂದಿನ ವಾಸ್ತವದ ಚಿತ್ರಣ ನೀಡುವ ಹೃದಯಸ್ಪರ್ಶಿ ಸಾಲುಗಳು.
ಪ್ರಸ್ತುತ ಬದುಕಿನ ಅನಾವರಣ… ಹೃದಯ ಸ್ಪರ್ಶಿಯಾಗಿದೆ ಸಾರ್..
ಪ್ರ – ಚಲಿತ ವಿದ್ಯ-ಮಾನ!
ಬುದ್ಧಿ-ಮಿದುಳು, ಹೃದಯ-ಕರುಳು!!
ಮಿದುಳಿಗೆ ಹೃದಯದಿಂದ ರಕ್ತ ಪೂರೈಕೆಯಾದರೂ
ನಾವು ಹೃದಯದ ಮಾತನ್ನಾಲಿಸೆವು. ಎಂಥ ವಿಚಿತ್ರ.
ಆಧುನಿಕ ವಿದ್ಯೆಯು ಸ್ವಾರ್ಥಪರತೆಯನ್ನು ಬೋಧಿಸುವುದಾದರೆ
ಅಂಥ ವಿದ್ಯೆ ವಿದ್ಯೆಯಲ್ಲ; ಅವಿದ್ಯೆ. ನಾವು ಮತಿವಂತ ಮಾನವರೆ?
ಕೇಳಿಕೊಳ್ಳುವಂತಿದೆ.
ಸ್ವಾರ್ಥಿ ಮಾನವನ ಕೆಟ್ಟ ಮನವನ್ನು ತೆರೆದಿಟ್ಟ ಭಾವಪೂರ್ಣ ಕವನ.
ಸಮಾಜ ಹೇಗಿರಬಾರದು ಎಂದು ಮನತಟ್ಟಿ ಎಚ್ಚರಿಸುವಂತಿದೆ.
ಓದಿ ತಮ್ಮ ಅಭಿಪ್ರಾಯ ತಿಳಿಸಿದ ಎಲ್ಲಾ ಸಹೃದಯರಿಗೆ ತುಂಬಾ ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿ ದೆ