ಚಿರಂಜೀವಿತ್ವ   ವರವೇ ? / ಶಾಪವೇ ?

Share Button

ಚಿರಂಜೀವಿತ್ವ ಎಂದರೆ ಅಮರ ಎಂದರ್ಥ. ಚಿರಂಜೀವಿತ್ವಕ್ಕಾಗಿ ಪುರಾಣ ಕಾಲದಲ್ಲಿ ಎಷ್ಟೋ ರಾಜರು, ರಾಕ್ಷಸರುಗಳು ಬಹಳ ದೀರ್ಘಕಾಲದ ತಪಸ್ಸನ್ನು ಆಚರಿಸಿದರೂ ಚಿರಂಜೀವಿತ್ವ ಪಡೆಯಲಾಗಲಿಲ್ಲ. ಉದಾಹರಣೆಗೆ ರಾವಣ, ಹಿರಣ್ಯಕಶಿಪು ಇತ್ಯಾದಿ. ಪುರಾಣಗಳಲ್ಲಿ ಕೇವಲ ಏಳು ಜನ ಚಿರಂಜೀವಿಗಳ ಹೆಸರನ್ನು ಕೇಳುತ್ತೇವೆ. 

ಅಶ್ವತ್ಥಾಮೋ ಬಲಿರ್ವ್ಯಾಸಃ
 ಹನೂಮಾಂಶ್ಚ ವಿಭೀಷಣಃ I
 ಕೃಪಃ   ಪರಶುರಾಮಶ್ಟ
ಸಪ್ತೈತೇ ಚಿರಂಜೀವಿನಃ II”

 ಅವರಂತೆಯೇ ಶಾಶ್ವತವಾಗಿ  ಎಂದೆಂದಿಗೂ ನಮ್ಮೆಲ್ಲರ ಮನದಲ್ಲಿ ಮನೆ ಮಾಡಿದ, ಎಷ್ಟೋ ಮನೆಗಳಲ್ಲಿ ಸ್ತುತಿಸಲ್ಪಡುವ, ಪೂಜಿಸಲ್ಪಡುವ ಬಹಳಷ್ಟು ಅಜರಾಮರ ಆದವರ ನಾಮ ಪ್ರಾತಃಸ್ಮರಣೀಯ.  ಉದಾಹರಣೆಗೆ: ಶ್ರೀರಾಮ, ಶ್ರೀ ಕೃಷ್ಣ, ಹರಿಶ್ಚಂದ್ರ, ವಿಶ್ವಾಮಿತ್ರ,ವಸಿಷ್ಠ ಮಹರ್ಷಿಗಳು. ಹೀಗೆ ಅನೇಕಾನೇಕ ವ್ಯಕ್ತಿಗಳನ್ನು ಹಗಲಿರಳು ನೆನೆಸಿಕೊಳ್ಳುತ್ತೇವೆ. ತಮ್ಮ  ಸುಕೃತ್ಯಗಳಿಂದ ಅಜರಾಮರ ನಾಮರಾದವರು ಹಲವಾರು ಮಂದಿಗಳಾದರೆ, ಕುಕೃತ್ಯಗಳಿಂದ ಶಾಶ್ವತವಾದ ಶಾಪಕ್ಕೆ ಗುರಿಯಾದವರೂ ಕೆಲವರು. 

ಚಿರಂಜೀವಿತ್ವ ಆರು ಜನ ಮಹಾನುಭಾವರಿಗೆ ವರವಾದರೆ, ಅಶ್ವತ್ಥಾಮನ ಪಾಲಿಗೆ ಮಾತ್ರ  ಶಾಪವಾಯಿತೆಂಬುದು ಉಲ್ಲೇಖಾರ್ಹ. ಅನುಗ್ರಹ  ರೂಪದಿಂದ ಏಳು ಜನರಿಗೆ ಚಿರಂಜೀವಿತ್ವ  ಲಭಿಸಿದರೂ ಕೂಡಾ ಅಶ್ವತ್ಥಾಮನಿಗೆ ಶಾಪರೀತಿಯಲ್ಲಿ ಬರಲು ಕಾರಣವೇನು?

ಅಶ್ವತ್ಥಾಮನಿಗೆ ತಂದೆಯ ಅನುಗ್ರಹದಿಂದ ಲಭ್ಯವಾಗಿದ್ದರೂ, ಅವನು ದಾರಿ ತಪ್ಪಿದ್ದ ಕಾರಣ ಅದೇ ಅವನಿಗೆ ಶಾಪವಾಗಿ ಪರಿಣಮಿಸಿದ್ದು ಅವನ ದುರದೃಷ್ಟವಲ್ಲದೆ ಇನ್ನೇನು? ಅಪಾತ್ರರು ಯೋಗ್ಯತೆಗೆ ಮೀರಿದ್ದನ್ನು ಪಡೆಯಲು ಹವಣಿಸಿದಾಗ ಹೀಗಾಗುವುದು ಸಹಜ.  

ಕಾಲಕಾಲಕ್ಕೆ ಪ್ರಕೃತಿ ಸಹಜವಾಗಿ ಒದಗುವ ಜನನ – ಮರಣ ಅದೇ ಸಹಜ ರೀತಿಯ ಅನುಗ್ರಹ. ಇಂದಿನ ಈ ಕಾಲಘಟ್ಟದಲ್ಲಿ ಚಿರಂಜೀವಿತ್ವ  ವರವೇ ಅಥವಾ ಶಾಪವೇ ಎಂಬ ಚಿಂತನೆಯನ್ನು ಮಾಡೋಣ.

ಅವರಿಗೆ ಲಭಿಸಿದ ಚಿರಂಜೀವಿತ್ವ ಆ ಸಮಯ, ಸಂದರ್ಭಗಳಲ್ಲಿ ವರವಾಗಿ ಪರಿಣಮಿಸಿರಬಹುದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅದು ಶಾಪ ಎನಿಸಿರಲೂಬಹುದು.

ಜೀವನದಲ್ಲಿ ಅನೇಕ ಅನುಭವಗಳನ್ನು  ಗಳಿಸಿರುವ ಅವರು ಪ್ರಕೃತಿಯ ವಿಕೋಪಗಳಿಗೂ ಸಾಕ್ಷಿಯಾಗಿರುತ್ತಾರೆ. ಅವರು ಲೋಕ ಸೇವೆಯಲ್ಲಿ ನಿರತರಾಗಿರಬಹುದು; ಅಥವಾ ತಮ್ಮ ಸಂಪ್ರದಾಯಗಳ ರಕ್ಷಣೆ ಕಾರ್ಯವನ್ನು ಮಾಡುತ್ತಿರಬಹುದು. ಕೆಲವೊಮ್ಮೆ ಅವರು ಧರ್ಮದ ಹೊಣೆಗೆ ತುತ್ತಾಗಬಹುದು; ಅಥವಾ ಕರ್ಮಫಲದ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು.

ಧರ್ಮದ ಹೊಣೆ ಅಂದರೆ ಧರ್ಮದ ಮೂಲಕ ಸಮಾಜದ ಹಿತಕ್ಕೆ ಬೇಕಾದ ಕೆಲಸ ಮಾಡುವುದು. ಜೀವನದ ಉದ್ದಕ್ಕೂ ಸತ್ಯ, ನೀತಿ, ಧರ್ಮ ಮುಂತಾದ ಗುಣಗಳನ್ನು ಪ್ರತಿಪಾದಿಸುವುದು. ಆದರೆ ಇವೆಲ್ಲ ಅವರು ಲೋಕದ ಜನರ ಮಧ್ಯದಲ್ಲಿದ್ದಾಗ ಮಾತ್ರ ಸಾಧ್ಯ. ಒಂದು ವೇಳೆ ಅವರು ಸಮಾಜದಿಂದ ದೂರವಾಗಿ, ಪ್ರತ್ಯೇಕವಾಗಿ ಕೇವಲ ಭಗವಂತನೊಂದಿಗೆ ಸಂಬಂಧ , ಸಂಪರ್ಕದಲ್ಲಿ ಇರಲೂಬಹುದು.

ಕರ್ಮಫಲದ ಪರಿಣಾಮವೆಂದರೆ ಹಿಂದೆ ಅವರು ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳ ಕರ್ಮಗಳ ಫಲವನ್ನು ಉಣ್ಣಬೇಕಾಗುತ್ತದೆ.

ಚಿರಂಜೀವಿತ್ವ ವರವೂ ಆಗಬಹುದು ಮತ್ತು ಶಾಪವೂ ಆಗಬಹುದು. ಉದಾಹರಣೆಗೆ ಅಶ್ವತ್ಥಾಮ. ಅವನು ಮಾಡಿದ ಕುಕೃತ್ಯವೆಂದರೆ ನಿದ್ರಿಸುತ್ತಿದ್ದ ಉಪ ಪಾಂಡವರ ಹತ್ಯೆ ಮಾಡಿದ್ದಲ್ಲದೆ, ಪಾಂಡವರ ವಂಶ ನಿರ್ಮೂಲನ ಮಾಡುವ ಉದ್ದೇಶದಿಂದ ಉತ್ತರೆಯ ಗರ್ಭದಲ್ಲಿದ್ದ ಶಿಶುವಿನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಹೊರಟವನು. ಅದಕ್ಕಾಗಿ ಶ್ರೀಕೃಷ್ಣನ ಶಾಪಕ್ಕೆ ಗುರಿಯಾಗುತ್ತಾನೆ. ಈಗಲೂ ಅವನು ಬಹಳ  ಹೀನಾಯ ಸ್ಥಿತಿಯಲ್ಲಿ ಬಾಳುತ್ತಿರಬೇಕು.  ಏಕೆಂದರೆ ಅವನು ಚಿರಂಜೀವಿ.

ಇಂದಿನ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದರೆ ಚಿರಂಜೀವಿಗಳ ಮನಸ್ಥಿತಿ ಹೇಗಾಗಬಹುದು? 

ಬಹುಷಃ ಧರ್ಮದ ಮೇಲೆ ಆಸಕ್ತಿ ಹೊಂದಿ  ಆಧ್ಯಾತ್ಮಿಕ ಚಿಂತನೆಯಲ್ಲಿ, ಭಗವಂತನ ಧ್ಯಾನದಲ್ಲಿರಬಹುದು ; ಅಥವಾ ಮನೋವ್ಯಥೆಯನ್ನು ಅನುಭವಿಸುತ್ತಿರಬಹುದು. ಅವರ ಧರ್ಮಾನುಷ್ಠಾನ, ತಪಸ್ಸು, ಆಧ್ಯಾತ್ಮಿಕ ಸಾಧನೆಗಳ ಪ್ರಭಾವದಿಂದ ಸ್ಥಿತಪ್ರಜ್ಞರಾಗಿರಬಹುದು. ಅಥವಾ ಸಮಯ – ಸಮಯಕ್ಕೆ ಅವರ ಜೀವನವು ಪರಿಸ್ಥಿತಿಗನುಗುಣವಾಗಿ ಬದಲಾಗಿರಲೂಬಹುದು. ಸಾಮಾನ್ಯರಾದ ನಮಗೆ  ಅವರು ನಮ್ಮ ಮಧ್ಯೆಯೇ ಇದ್ದರೂ ನಮ್ಮ ಗಮನಕ್ಕೆ ಬಾರದೇನೇ ಇರಬಹುದು. ಚಿರಂಜೀವಿಗಳು ನಮ್ಮ – ನಿಮ್ಮಂತೆ ಲೌಕಿಕ ಬದುಕಿಗೆ ಬಾರದೆ ಪಾರಮಾರ್ಥಿಕದ ಬಗೆಗೆ ಚಿಂತಿಸುತ್ತಿರಬಹುದು. ಯೋಗಬಲದಿಂದ ಚಿರಂಜೀವಿಗಳು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಂಡು, ಆತ್ಮಾನಂದವನ್ನು ಅನುಭವಿಸುತ್ತಾ, ಸದಾ ಭಗವತ್ ಚಿಂತನೆಯಲ್ಲಿದ್ದು ಹೊರ ಪ್ರಪಂಚವನ್ನು ಮರೆತು ತಾನು ಮತ್ತು ಪರಮಾತ್ಮ ಇಬ್ಬರೇ ಎಂದರಿತು ಆತ್ಮಾನಂದದಲ್ಲಿ ವಿಹರಿಸುತ್ತಿರಬಹುದು.

ಮಾನವ ಜನ್ಮವೇ ಒಂದು ದೊಡ್ಡ ವರ. ಅದನ್ನು ಸರಿಯಾದ ರೀತಿಯಲ್ಲಿ ಬಾಳಬೇಕು. ಅದಕ್ಕಿರುವ ಕೈಪಿಡಿಯೇ ಶ್ರೀಮದ್ಭಗವದ್ಗೀತೆ. ಗೀತೆಯಲ್ಲಿ ಶ್ರೀಕೃಷ್ಣನು ನೀಡಿದ ಉಪದೇಶವನ್ನನುಸರಿಸಿ ಆದರ್ಶ ಬದುಕನ್ನು ನಡೆಸಬೇಕು. ಆ ಮೂಲಕ  ಮುಂದಿನ ಪೀಳಿಗೆಯವರ ಮನದಲ್ಲಿ ನಮ್ಮ ಹೆಸರುಗಳು ಚಿರನೂತನವಾಗಿ ಇರಬಹುದು. ಆ ನಿಟ್ಟಿನಲ್ಲಿ ಬಾಳೋಣ, ಬದುಕೋಣ.

 ಹರಿಃ ಓಂ

ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.

7 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ. ಭಗವದ್ಗೀತೆ ಯ ಮಹತ್ವದ ಮೇಲೆ ಬೆಳಕು ಚೆಲ್ಲಿದ ರೀತಿ ಚೆನ್ನಾಗಿದೆ.

 2. ಮಾಹಿತಿಯನ್ನು ಒಳಗೊಂಡ ಲೇಖನ ಚೆನ್ನಾಗಿದೆ.. ಮೇಡಂ

 3. MANJURAJ H N says:

  ಸರಿಚಿಂತನ; ಧರ್ಮನಂದನ……..

  ಅಡಕವಾಗಿದೆ; ವಿಚಾರಪ್ರದವಾಗಿದೆ. ಅಭಿನಂದನೆ.

 4. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

  ನಯನ ಮೇಡಂ, ನಾಗರತ್ನ ಮೇಡಂ, ಮಂಜುನಾಥ್ ಸರ್ ನನ್ನ ಚಿಂತನವನ್ನು ಮೆಚ್ಚಿದ ನಿಮಗೆಲ್ಲರಿಗೂ ಧನ್ಯವಾದಗಳು

 5. ಶಂಕರಿ ಶರ್ಮ says:

  ಸಾಮಾನ್ಯ ಮಾನವನಿಗೆ ಚಿರಂಜೀವಿತ್ವವು ಇಂದಿನ ಕಾಲಘಟ್ಟದಲ್ಲಿ ಶಾಪವಾಗಿ ಪರಿಣಮಿಸಬಹುದು ಎನಿಸುತ್ತದೆ. ಭಗವದ್ಗೀತೆಯ ಒಂದು ಸಾಲಿನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೂ ಜೀವನ ಪಾವನವಾಗುವುದರಲ್ಲಿ ಸಂಶಯವಿಲ್ಲ! ಚಂದದ ಲೇಖನ ವನಿತಕ್ಕ.

 6. Padma Anand says:

  ದೈಹಿಕವಾಗಿ ಚಿರಂಜೀವಿಯಾಗುವುದು ಶಾಪವೇ ಆದರೂ ಬದುಕಿದ ರೀತಿಯಿಂದಾಗಿ ಅಮರವಾಗುವುದು ಸಾಧನೆಯೇ ಸರಿ. ಮನಸ್ಸನ್ನು ನಿಜ ಅರ್ಥದಲ್ಲಿ ಚಿಂತನೆಗೆ ಹಚ್ಚುವ ಚಿಂತನ.

 7. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

  ನಿಮ್ಮ ಪ್ರತಿಕ್ರಿಯೆಗಳಿಗೆ ತುಂಬಾ ತುಂಬಾ ಧನ್ಯವಾದಗಳು ಶಂಕರಿ ಅಕ್ಕ ಹಾಗೂ ಪದ್ಮಕ್ಕ. ನಾನು ಬಹಳ ತಡವಾಗಿ ಇದನ್ನು ಗಮನಿಸಿದ್ದಕ್ಕಾಗಿ ತುಂಬಾ ವಿಷಾದಿಸುತ್ತೇನೆ.
  ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: