ಚು ಚಿ ಸುರಂಗಗಳು :ಹೆಜ್ಜೆ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಢಂ, ಢಮಾರ್..ಅಬ್ಬಾ ಕಿವಿ ಕಿವುಡಾಗುವಂತಹ ಸದ್ದು. ಮತ್ತೆ ಅಮೆರಿಕನ್ನರು ಗುಂಡು ಹಾರಿಸುತ್ತಿದ್ದಾರೆ, ಓಡು, ಓಡು ಮಗಾ.. ತಾಯಿ ಕಿರುಚುತ್ತಿದ್ದಳು, ಅಷ್ಟರಲ್ಲಿ ಪುಟ್ಟ ಬಾಲಕನು ಶತ್ರುಗಳ ಗುಂಡಿಗೆ ಆಹುತಿಯಾಗಿದ್ದ, ತಾಯಿ ಬಾಲಕನನ್ನು ಎದೆಗವಚಿಕೊಂಡು ಓಡಹತ್ತಿದಳು, ಯಾರೋ ಅವಳ ಕಾಲುಗಳನ್ನು ಜಗ್ಗಿದರು, ಕ್ಷಣಮಾತ್ರದಲ್ಲಿ ಅವಳು ರಪ್ ಎಂದು ದೊಡ್ಡ ಸುರಂಗದೊಳಗೆ ಬಿದ್ದಿದ್ದಳು. ಸುಧಾರಿಸಿಕೊಂಡು ಏಳುವಷ್ಟರಲ್ಲಿ, ಅವಳ ಮಗುವನ್ನು ವೈದ್ಯರು ಪರೀಕ್ಷಿಸಿದ್ದರು, ಬಾಲಕನು ಇಹಲೋಕ ತ್ಯಜಿಸಿದ್ದ. ದಿಗ್ಭ್ರಾಂತಳಾದ ತಾಯಿಯ ಉಸಿರು ಗಂಟಲಿನಿಂದ ಹೊರಹೊಮ್ಮಲಿಲ್ಲ. ಮೂಕವಾಗಿ ರೋಧಿಸಿದಳು, ಅವಳ ಸುತ್ತ ಇದ್ದವರು ಅವಳನ್ನು ಸಂತೈಸಲು ಯತ್ನಿಸಿದರು.

ಸುಂದರವಾದ ಪ್ರಕೃತಿಯ ಮಡಿಲಲ್ಲಿರುವ ಪುಟ್ಟ ರಾಷ್ಟ್ರವಾದ ವಿಯೆಟ್ನಾಮನ್ನು ಬಲಿ ಹಾಕಲು ದೈತ್ಯ ರಾಷ್ಟ್ರವಾದ ಅಮೆರಿಕನ್ನರು ನಡೆಸಿದ ಮಾರಣಹೋಮದ ಒಂದು ಚಿತ್ರಣ ಇದು. ಒಂದೆಡೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದೊಡ್ಡಣ್ಣ ಅಮೆರಿಕ, ಮತ್ತೊಂದೆಡೆ ತಾಯ್ನಾಡನ್ನು ಪರಕೀಯರ ಬಂಧನದಿಂದ ಬಿಡಿಸಲು ಸನ್ನದ್ಧರಾಗಿದ್ದ ಗೆರಿಲ್ಲಾ ಸ್ವಾತಂತ್ರ್ಯ ಸೇನಾನಿಗಳ ತಂಡ. ತಮ್ಮ ಮಾತೃಭೂಮಿಯನ್ನು ಅಮೆರಿಕಾದ ಸೈನಿಕರಿಂದ ರಕ್ಷಿಸಲು, ವಿಯೆಟ್ ಕಾಂಗ್ ಕ್ರಾಂತಿಕಾರಿಗಳು ತೋಡಿದ್ದ ಚು ಚಿ ಸುರಂಗಗಳು ಮಾನವನ ಕ್ರೌರ್ಯಕ್ಕೆ, ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ವಿಪರ್ಯಾಸವೆಂದರೆ, ರಕ್ತದ ಕಾಲುವೆಯನ್ನೇ ಹರಿಸಿದ್ದ ಚು ಚಿ ಸುರಂಗಗಳು ಇಂದು ಪ್ರವಾಸೋದ್ಯಮಕ್ಕೆ ಹಣದ ಹೊಳೆಯನ್ನೇ ಹರಿಸುತ್ತಿವೆ.. ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸೀ ಕೇಂದ್ರಗಳಲ್ಲಿ ಏಳನೇ ಸ್ಥಾನ ಪಡೆದಿರುವ ಈ ಸುರಂಗಗಳನ್ನು ನೋಡುವ ಕುತೂಹಲದ ಜೊತೆ ಜೊತೆಗೇ ಅಮಾಯಕರ ನೋವು, ನರಳಾಟದ ಚೀತ್ಕಾರ ನನ್ನನ್ನು ಕಂಗೆಡಿಸಿತ್ತು.

ಅಮೆರಿಕಾ ಈ ಕಡಲ ತೀರದ ಪುಟ್ಟ ನಾಡಿನ ಮೇಲೆ ಯುದ್ಧ ಸಾರಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟಾಗ ರಷ್ಯಾ ಮತ್ತು ಅಮೆರಿಕಾ ನಡುವಿನ ಸಂಘರ್ಷ ಬೆಳಕಿಗೆ ಬಂತು. ಉತ್ತರ ವಿಯೆಟ್ನಾಂ ರಷ್ಯಾ ಮತ್ತು ಚೀನಾದ ಕಮ್ಯುನಿಸ್ಟರ ಪ್ರಭಾವದಲ್ಲಿ ಸಿಲುಕಿತ್ತು, ಇನ್ನುಳಿದ ದಕ್ಷಿಣ ವಿಯೆಟ್ನಾಂನ್ನು ಕಮ್ಯುನಿಸ್ಟ್ ಅಲೆಯಿಂದ ರಕ್ಷಿಸಲು ಅಮೆರಿಕನ್ನರು ಯುದ್ಧ ಸಾರಿದರು. 1945 ರಿಂದ 1954 ರವರೆಗೆ ಫ್ರೆಂಚ್ ಸೈನ್ಯವನ್ನು ಕಳುಹಿಸುವರು, ಅವರು ಸೋತು ಹಿಮ್ಮೆಟ್ಟಿದಾಗ 1961 ರಿಂದ 1972 ರವರೆಗೆ ತಮ್ಮ ಸೈನ್ಯವನ್ನು ದಕ್ಷಿಣ ವಿಯೆಟ್ನಾಂಗೆ ಕಳುಹಿಸುವರು. ಕಮ್ಯುನಿಸ್ಟರ ಕಪಿಮುಷ್ಠಿಯಿಂದ ವಿಯೆಟ್ನಾಮೀಯರನ್ನು ಪಾರು ಮಾಡಲು ಬಂದ ದೇವದೂತರು ತಾವು ಎಂಬ ಭ್ರಮೆಯಿಂದ ಬಂದ ಅಮೆರಿಕನ್ನರು ವಿಯೆಟ್ನಾಮಿನಲ್ಲಿ ಎರಡರಿಂದ ಮೂರು ಮಿಲಿಯನ್ ಜನರ ಮಾರಣಹೋಮ ಮಾಡುತ್ತಾರೆ. ಆದರೆ ವಿಯೆಟ್ನಾಮನ್ನು ಒಂದುಗೂಡಿಸಬೇಕೆಂಬ ಛಲದಿಂದ ಉತ್ತರ ಹಾಗೂ ದಕ್ಷಿಣ ವಿಯೆಟ್ನಾಮೀಯರು ಒಂದುಗೂಡಿ ಗೆರಿಲ್ಲಾ ಯುದ್ಧ ಸಾರುತ್ತಾರೆ. ಈ ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ಮುಂದೆ ಶರಣಾದ ಅಮೆರಿಕನ್ನರು 1973 ರಲ್ಲಿ ತಮ್ಮ ಅಳಿದುಳಿದ ಸೈನ್ಯವನ್ನು ವಾಪಸ್ ಕರೆಸುತ್ತಾರೆ.

ಚು ಚಿ ಸುರಂಗಳ ಪ್ರವೇಶ ದ್ವಾರದಲ್ಲಿ ಮೊದಲಿಗೆ ಕಂಡದ್ದು – ಒಂದು ಒಣಹುಲ್ಲು ಹೊದಿಸಿದ ಗುಡಿಸಲು, ಅಲ್ಲಿ ಸುಮಾರು ಒಂದು ನೂರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಹರಡಿದ್ದ ಚು ಚಿ ಸುರಂಗಗಳ ಒಂದು ದೊಡ್ಡದಾದ ನಕ್ಷೆಯಿತ್ತು. ಇದು ವಿಯೆಟ್ ಕಾಂಗೋ ಎಂಬ ಹೆಸರು ಹೊತ್ತ ವಿಯೆಟ್ನಾಮಿನ ಕಮ್ಯುನಿಸ್ಟ್ ಗೆರಿಲ್ಲಾ ಸೈನ್ಯದ ತುಕಡಿಗಳ ಅಡಗುತಾಣವಾಗಿದ್ದುದರ ಜೊತೆಗೇ ಇವರ ಜೀವನಾಡಿಯಾಗಿತ್ತು. ಕಮಾಂಡೋಗಳಿಗೆ ಗುಪ್ತ ಸಂದೇಶಗಳನ್ನು ರವಾನಿಸಲು, ಗಾಯಗೊಂಡ ಯೋಧರು ವೈದ್ಯರ ನೆರವನ್ನು ಪಡೆಯಲು, ವಾಯುದಾಳಿಯ ಸಮಯದಲ್ಲಿ ರಕ್ಷಣೆ ಪಡೆಯಲು ಹಾಗೂ ಶತ್ರು ಪಡೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಕ್ಷಣ ಮಾತ್ರದಲ್ಲಿ ಪರಾರಿಯಾಗಲು ನೆರವಾಗುತ್ತಿದ್ದವು. ಶತ್ರುಗಳ ದಾರಿತಪ್ಪಿಸಲು ಹಲವು ನಕಲಿ ಸುರಂಗಗಳನ್ನೂ ನಿರ್ಮಿಸಿರುವರು. ಒಂದೆಡೆ ಅಮೆರಿಕನ್ನರು ಎಸೆದಿದ್ದ ಬಾಂಬ್‌ಗಳ ಅವಶೇಷಗಳನ್ನು ಸಾಲು ಸಾಲಾಗಿ ಜೋಡಿಸಲಾಗಿದೆ. ನೂರಾರು ಜನರನ್ನು ಹತ್ಯೆ ಮಾಡಿದ ದೊಡ್ಡ ದೊಡ್ಡ ಟ್ಯಾಂಕರ್‌ಗಳನ್ನೂ ಪ್ರದರ್ಶಿಸಲಾಗಿದೆ. ಇನ್ನೊಂದೆಡೆ ಕಮ್ಮಾರರು ಕಬ್ಬಿಣ ಕಾಯಿಸುತ್ತಾ ತಮಗೆ ಬೇಕಾದ ಉಪಕರಣಗಳನ್ನು ತಯಾರಿಸುತ್ತಿದ್ದರು. ಇವರಿಗೆ ಕಬ್ಬಿಣ ಎಲ್ಲಿಂದ ಪೂರೈಕೆಯಾಗುತ್ತಿತ್ತು ಎಂದು ಹೇಳುವಿರಾ ಎಂದು ನಮ್ಮ ಗೈಡ್ ಕೇಳಿದಾಗ ಗಣಿಗಳಿಂದ ಎಂದು ಎಲ್ಲರೂ ಒಕ್ಕೊರಲಿನಲ್ಲಿ ಉತ್ತರಿಸಿದೆವು. ನಿಮ್ಮ ಉತ್ತರ ತಪ್ಪು, ಇವರು ಕಬ್ಬಿಣವನ್ನು ಅಮೆರಿಕನ್ನರು ಹಾಕುವ ಬಾಂಬ್‌ಗಳಿಂದ ಪಡೆಯುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದನು.

ಈ ಸುರಂಗಗಳಲ್ಲಿ ಏನಿತ್ತು ಎಂಬುದನ್ನು ತಿಳಿಯಲು ನಾವೇ ಒಮ್ಮೆ ಸುರಂಗದೊಳಗೆ ಇಣುಕಿ ನೋಡೋಣವೇ? ಪ್ರವಾಸಿಗರ ಸುರಕ್ಷತೆಗಾಗಿ ಕಿರಿದಾಗಿದ್ದ ಪ್ರವೇಶ ದ್ವಾರಗಳನ್ನು ಸ್ವಲ್ಪ ದೊಡ್ಡದಾಗಿ ಮಾಡಿದ್ದಾರೆ. ಒಬ್ಬರ ಹಿಂದೊಬ್ಬರು ನಿಧಾನವಾಗಿ ಸುರಂಗದೊಳಗೆ ಸಾಗಿದೆವು – ಕಡಿದಾದ ಮೆಟ್ಟಿಲುಗಳು, ತಲೆ ಬಾಗಿಸಿ ಸಾಗಬೇಕಿತ್ತು, ಇನ್ನೂ ಕೆಲವೆಡೆ ಸೊಂಟ ಬಾಗಿಸಿ ಹೋಗುವಷ್ಟೇ ಎತ್ತರ, ದಾರಿ ತಪ್ಪಿಸುವಂತಹ ಕವಲುಗಳು, ಎಡಗಡಗೆ ಒಂದು ಹಾದಿ, ಬಲಕ್ಕೆ ಒಂದು, ಕಾರ್ಗತ್ತಲು, ನಾವು ಮೊಬೈಲಿನ ಟಾರ್ಚ್ ಬೇಳಕಿನಲ್ಲಿ ಮುಂದೆ ಸಾಗಿದೆವು. ಉಸಿರು ಕಟ್ಟಿದಂತಹ ಅನುಭವ. ನಮ್ಮ ತಂಡದಲ್ಲಿ ಹೆಚ್ಚು ಮಂದಿ ಹಿರಿಯ ನಾಗರೀಕರಿದ್ದುದರಿಂದ ಗೈಡ್ ಆತಂಕದಲ್ಲಿದ್ದ. ಮುಂದೆ ಸಾಗಲು ಆಗದಿದ್ದವರು ಅಲ್ಲಲ್ಲಿದ್ದ ನಿರ್ಗಮನದ ಹಾದಿಗಳಲ್ಲಿ ಹೊರ ಹೋಗಬಹುದಿತ್ತು. ನಾವು ಸುಮಾರು ನಲವತ್ತೈದು ನಿಮಿಷಗಳ ಕಾಲ ಈ ಸುರಂಗದಲ್ಲಿ ಮುಂದೆ ಸಾಗಿದೆವು, ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ಕಿಚ್ಚು, ಶತ್ರುಗಳ ಧಾಳಿಯಲ್ಲಿ ಗಾಯಗೊಂಡವರ ನೋವು ನರಳಾಟ ಆ ಸುರಂಗ ಮಾರ್ಗಗಳಲ್ಲಿ ಮಾರ್ದನಿಗೊಳ್ಳುತ್ತಿತ್ತು. ಉಸಿರಾಡಲು ಗಾಳಿಯ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ, ಉಣ್ಣುವ ಅನ್ನವೂ ಅಪರೂಪ – ಇಂತಹ ಕಡೆ ಹತ್ತಾರು ವರ್ಷಗಳ ಕಾಲ ಈ ಯೋಧರು ಇದ್ದದ್ದಾದರೂ ಹೇಗೆ ಎಂಬ ಆಲೋಚನೆ ಕಾಡುತ್ತಿತ್ತು.

Chu Chi Tunnel PC: Internet

ಈ ಸುರಂಗಗಳಲ್ಲಿ ಮೂರು ಹಂತಗಳಿದ್ದು ಮೊದಲನೆಯದು ಮೂರು ಮೀಟರ್ ಆಳವಾಗಿದೆ. ಈ ಸ್ಥಳ ಎಷ್ಟು ಸುರಕ್ಷಿತವೆಂದರೆ – ರಾಸಾಯನಿಕ ಯುದ್ಧದಲ್ಲಿ ಬಳಸುವ ಬಾಂಬುಗಳಿಂದ, ಬುಲೆಟ್ಸ್ ಗಳಿಂದ, ಯುದ್ಧದಲ್ಲಿ ಬಳಸುವ ಟ್ಯಾಂಕ್‌ಗಳಿಂದ ರಕ್ಷಣೆ ನೀಡುವಂತೆ ರಚಿಸಲಾಗಿದೆ. ಇನ್ನು ಎರಡನೆಯ ಹಂತವು ಐದು ಮೀಟರ್ ಆಳದಲ್ಲಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ರಕ್ಷಣೆ ಪಡೆಯಲು ನೆರವಾಗುವಂತಿದೆ. ಮೂರನೆಯ ಹಂತವು ಎಂಟರಿಂದ ಹತ್ತು ಮೀಟರ್ ಆಳದಲ್ಲಿದ್ದು ಕಮಾಂಡೋಗಳ ಅಡಗುತಾಣವಾಗಿತ್ತು. ಈ ಎಲ್ಲಾ ಹಂತಗಳಿಗೂ ಒಂದರಿಂದ ಮತ್ತೊಂದಕ್ಕೆ ಚಲಿಸಲು ಅವಕಾಶವಿದ್ದು, ಶತ್ರುಗಳಿಂದ ರಕ್ಷಣೆ ಪಡೆಯಲು ಸೂಕ್ತ ಸ್ಥಳವಾಗಿತ್ತು.
ಈ ಸುರಂಗಗಳ ಇತಿಹಾಸವನ್ನು ನಮ್ಮ ಗೈಡ್ ಕಿಮ್‌ನ ಮಾತುಗಳಲ್ಲಿ ಕೇಳೋಣ ಬನ್ನಿ – ದಕ್ಷಿಣ ವಿಯೆಟ್ನಾಮಿನ ವಾಣಿಜ್ಯ ಕೇಂದ್ರವಾಗಿರುವ ಸೈಗಾನ್ ‘ಹೋ ಚಿ ಮಿನ್’ ನಗರವೆಂದು ಮರುನಾಮಕರಣ ಮಾಡಲ್ಪಟ್ಟಿದೆ. ಸೈಗಾನ್‌ನಿಂದ ಎಪ್ಪತ್ತು ಕಿ.ಮೀ. ದೂರದಲ್ಲಿರುವ ಈ ಸುರಂಗಗಳು ಭೂಮಿಯೊಳಗಡೆ ಜೇಡರ ಬಲೆಯಂತೆ ಸುಮಾರು 240 ಕಿ.ಮೀ. ವಿಸ್ತಾರವಿದ್ದು ಹಲವು ದಿಕ್ಕುಗಳಲ್ಲಿ ಹಬ್ಬಿವೆ. (ಈ ದೈತ್ಯಾಕಾರದ ಸುರಂಗದ ಆಳ, ಅಗಲ ನಮ್ಮ ಕಲ್ಪನೆಗೆ ನಿಲುಕವಂತಿರಲಿಲ್ಲ) ದಟ್ಟವಾದ ಅರಣ್ಯ, ಮಧ್ಯೆ ಮಧ್ಯೆ ಹಾವುಗಳ ವಾಸಸ್ಥಾನವಾದ ಹುತ್ತಗಳು. ಇಷ್ಟೊಂದು ಹುತ್ತಗಳನ್ನು ಒಂದೇ ಕಡೆ ನೋಡಿರಲಾರಿರಿ, ಎಂದು ಗೈಡ್ ಹೇಳಿದಾಗ ನಮಗೆ ಅಚ್ಚರಿಯಾಗಿತ್ತು. ಈ ಹುತ್ತಗಳು ಗೆದ್ದಲು ಹುಳುಗಳ ರಚನೆಯಾಗಿರದೆ, ಮಾನವ ನಿರ್ಮಿತವಾಗಿದ್ದವು. ಕೆಲವೇ ಕೆಲವು ಹುತ್ತಗಳು ಸುರಂಗಕ್ಕಿಳಿಯುವ ರಹದಾರಿಗಳಾಗಿದ್ದವು. ಶತ್ರುಗಳಿಗೆ ಮಂಕುಬೂದಿ ಎರಚಲು ಇಷ್ಟೊಂದು ಹುತ್ತಗಳ ನಿರ್ಮಾಣ ಮಾಡಿದ್ದರು. ಅಲ್ಲೊಂದು ಮರದ ಕೆಳಗೆ ಒಣಗಿದ ಎಲೆಗಳ ರಾಶಿಯಿತ್ತು. ಕಿಮ್ ಎಲೆಗಳನ್ನು ಸ್ವಲ್ಪ ಸರಿಸಿದ, ಅದರಡಿ ಒಂದು ಚೌಕಾಕರದ ಎರಡಡಿ ಅಗಲ ಹಾಗೂ ಎರಡಡಿ ಉದ್ದವಿದ್ದ ಒಂದು ಮರದ ಹಲಗೆ ಇತ್ತು. ಕಿಮ್ ಅದನ್ನು ಮೆಲ್ಲಗೆ ಎತ್ತಿ, ಕೆಳಗಿದ್ದ ಸುರಂಗದೊಳಗೆ ಇಳಿದು ಮತ್ತೆ ಆ ಹಲಗೆಯನ್ನು ಮೊದಲಿದ್ದ ಹಾಗೇ ಮುಚ್ಚಿದ, ಅವನು ಭೂಮಿಯೊಳಗೆ ಅದೃಶ್ಯನಾಗಿದ್ದ. ಅಲ್ಲಿ ನಮಗೆ ಕಾಣುತ್ತಿದ್ದುದು ಕೇವಲ ಒಣಗಿದ ಎಲೆಗಳು. ಸುರಂಗ ಮಾರ್ಗದ ಯಾವ ಸುಳಿವೂ ಸಿಗುವಂತಿರಲಿಲ್ಲ. ಒಂದೆರೆಡು ಕ್ಷಣ ಕಳೆದಿರಬಹುದು, ಕಿಮ್ ಆ ಹಲಗೆಯನ್ನು ತನ್ನ ಕೈಗಳಿಂದ ಮೇಲೆತ್ತಿ, ಆ ಸುರಂಗದಿಂದ ಮೇಲೆದ್ದು ಬಂದ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಅತ್ಯಂತ ಬುದ್ಧಿವಂತಿಕೆಯಿಂದ ನಿರ್ಮಿಸಿದ ಸುರಂಗಗಳಿವು. ನಮ್ಮ ಜೊತೆಗಿದ್ದ ಕೆಲವು ಸಹಪ್ರಯಾಣಿಕರೂ, ಈ ಸುರಂಗದೊಳಗೆ ಧುಮುಕಿದರು, ಆದರೆ ಅವರ ಕೈಗಳು ಮೇಲೆಯೇ ಕಾಣುತ್ತಿದ್ದವು, ಸುರಂಗದೊಳಗೆ ಸಂಪೂರ್ಣವಾಗಿ ಮರೆಯಾಗಲು ಸಾಧ್ಯವಾಗಲಿಲ್ಲ. ಈ ಕಿರಿದಾದ ಪ್ರವೇಶ ದ್ವಾರದೊಳಗೆ ಸಪೂರವಾಗಿದ್ದ ವಿಯೆಟ್ನಾಮೀಯರು ಮಾತ್ರ ಸುಲಭವಾಗಿ ನುಗ್ಗಲು ಸಾಧ್ಯವಿತ್ತು. ಆದರೆ ಧಡೂತಿ ದೇಹದ ಫ್ರೆಂಚ್ ಅಥವಾ ಅಮೆರಿಕಾದ ಯೋಧರು ನುಗ್ಗಲು ಅಸಾಧ್ಯವಾಗಿತ್ತು.

Chu Chi Tunnel, PC :Internet

ವಿಯೆಟ್ ಕಾಂಗ್ ಕ್ರಾಂತಿಕಾರಿಗಳ ತ್ಯಾಗ, ಬಲಿದಾನದ ಪ್ರಸಂಗಗಳನ್ನು ಕಾಣುವ ಸುಯೋಗ ನಮ್ಮದಾಗಿತ್ತು. ದಟ್ಟವಾದ ಅರಣ್ಯದಲ್ಲಿ 1948 ರಿಂದ ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಈ ಚು ಚಿ ಸುರಂಗಗಳನ್ನು ತಮ್ಮ ಕೈಗಳಿಂದಲೇ, ಕೇವಲ ಪಿಕಾಸಿ, ಸಲಿಕೆ, ಹಾರೆಗಳಿಂದ ತೋಡಿದ್ದಾರೆ. ಈ ನೆಲವು ಜೇಡಿ ಮಣ್ಣು ಮಿಶ್ರಿತ ಲ್ಯಾಟರೈಟ್ ಮಣ್ಣಿನಿಂದ ಕೂಡಿದ್ದು, ಇಲ್ಲಿ ತೋಡಿರುವ ಸುರಂಗಗಳು ಕಲ್ಲಿನ ಸುರಂಗಗಳಷ್ಟೇ ಗಟ್ಟಿಯಾಗಿವೆ. ನನಗೆ ನಮ್ಮ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಲ್ಲಿನಷ್ಟೇ ಗಟ್ಟಿಯಾದ ಜಂಬಿಟ್ಟಿಗೆ ತೆಗೆಯುವ ಗುಡ್ಡಗಳ ನೆನಪಾಗಿತ್ತು. ಆಪತ್ತಿನ ಸಮಯದಲ್ಲಿ ಶತ್ರುಗಳಿಂದ ತಪ್ಪಿಸಿಕೊಳ್ಳಲು ಹತ್ತು ಮೀಟರ್‌ಗೊಂದರಂತೆ ಸುರಂಗದಿಂದ ಹೊರಹೋಗುವ ಮಾರ್ಗಗಳನ್ನೂ ರಚಿಸಿದ್ದಾರೆ. ಸುರಂಗದ ಕೆಲವು ಮಾರ್ಗಗಳು ಸೀದಾ ಸೈಗಾನ್ ನದೀ ತೀರಕ್ಕೆ ಹೋಗುವುದರಿಂದ, ಶತ್ರುಗಳ ಆಕ್ರಮಣದ ಸಮಯದಲ್ಲಿ, ನದಿಯಲ್ಲಿ ಈಜಿ ಪಾರಾಗುತ್ತಿದ್ದರು. ಚು ಚಿ ಸುರಂಗಗಳ ಮತ್ತೊಂದು ವೈಶಿಷ್ಠ್ಯವೆಂದರೆ ವಿಯೆಟ್ನಾಮಿನ ಹಲವು ಗ್ರಾಮಗಳನ್ನು ಜೋಡಿಸುವ ತಂತ್ರಗಾರಿಕೆಯೂ ಇಲ್ಲಿತ್ತು. ಆಹಾರ ಪದಾರ್ಥಗಳನ್ನು ಪಡೆಯಲು, ಸಂದೇಶಗಳನ್ನು ರವಾನಿಸಲು ಉತ್ತಮವಾದ ವ್ಯವಸ್ಥೆಯಾಗಿತ್ತು. ವಿಯೆಟ್ನಾಮಿನ ಹಳ್ಳಿಗಳ ಮೇಲೆ ಬಾಂಬ್ ದಾಳಿಯಾದಾಗ ಗ್ರಾಮಸ್ಥರು ಸುರಂಗದೊಳಗೆ ಧುಮುಕಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದರು. ಈ ನಾಡಿನ ಭೂಭಾಗದಲ್ಲಿ ಸುರಂಗಗಳ ಜಾಲವೇ ಅಡಗಿದೆ ಎಂದರೆ ತಪ್ಪಾಗಲಾರದು. ಗೆರಿಲ್ಲಾ ಯುದ್ಧ ನಡೆಸುವ ಯೋಧರಿಗೆ ಹೆಜ್ಜೆ ಹೆಜ್ಜೆಗೂ ನೈಸರ್ಗಿಕ ಶತ್ರುಗಳು ಎದುರಾಗುತ್ತಿದ್ದವು – ಹಾವು ಚೇಳುಗಳಂತಹ ವಿಷಜಂತುಗಳು, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು, ಚರ್ಮ ರೋಗಗಳು ಇತ್ಯಾದಿ. ಕೆಲವು ಬಾರಿ ಉಸಿರಾಡಲು ಬೇಕಾದ ಗಾಳಿಯ ಕೊರತೆ, ಕುಡಿಯಲು ನೀರು, ಉಣ್ಣಲು ಅನ್ನವೂ ಸಿಗುತ್ತಿರಲಿಲ್ಲ.

ಚು ಚಿ ಸುರಂಗದೊಳಗೆ ಒಂದು ಸಾವಿರ ಕ್ರಾಂತಿಕಾರಿಗಳು ತಂಗಲು ಎಲ್ಲಾ ಸೌಲಭ್ಯಗಳೂ ಇದ್ದವು – ಅವರು ವಿಶ್ರಮಿಸಲು ಕೋಣೆಗಳು, ಮನರಂಜನೆಗಾಗಿ ಥಿಯೇಟರ್‌ಗಳು, ಅವರಿಗೆ ಆಹಾರ ತಯಾರಿಸಲು ಅಡುಗೆ ಕೋಣೆಗಳು, ಕುಡಿಯಲು ನೀರು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಗೋದಾಮುಗಳು, ಕಮಾಂಡ್ ಸೆಂಟರ್ ಇತ್ಯಾದಿ. ಹಗಲು ಹೊತ್ತಿನಲ್ಲಿ ಸುರಂಗದೊಳಗೆ ರಕ್ಷಣೆ ಪಡೆಯುತ್ತಿದ್ದ ಕಮಾಂಡೋಗಳು ಇರುಳಿನಲ್ಲಿ ಈ ಬಿಲಗಳಿಂದ ಹೊರಬಂದು ಶತ್ರುಗಳ ಕ್ಯಾಂಪುಗಳ ಮೇಲೆ ದಾಳಿ ನಡೆಸಿ ಮಿಂಚಿನಂತೆ ಮರೆಯಾಗುತ್ತಿದ್ದರು. ಅವರ ಶಸ್ತ್ರಾಸ್ತ್ರಗಳ ಗೋದಾಮುಗಳ ಮೇಲೆಯೂ ಬಾಂಬುಗಳನ್ನು ಎಸೆದು ಧ್ವಂಸ ಮಾಡುತ್ತಿದ್ದರು. ಅಮೆರಿಕನ್ನರಿಗೆ ಕಮಾಂಡೋಗಳನ್ನು ಪತ್ತೆ ಹಚ್ಚುವುದು ನೀರಿನಲ್ಲಿ ಮೀನಿನ ಹೆಜ್ಜೆಯ ಗುರುತನ್ನು ಪತ್ತೆ ಹಚ್ಚಿದಷ್ಟೇ ಕಠಿಣವಾಗಿತ್ತು.

ವಿಯೆಟ್ ಕಾಂಗ್ ಕಮಾಂಡೋಗಳನ್ನು ಹತ್ಯೆ ಮಾಡಲು ಅಮೆರಿಕನ್ನರು ವಿಶೇಷವಾದ ತಂಡಗಳನ್ನೇ ರಚಿಸಿದರು. ಸುರಂಗ ಮಾರ್ಗಗಳ ಪತ್ತೆಯಾದಾಗ, ಆ ಬಿಲದೊಳಗೆ ಇಳಿಯುವ ಸಾಹಸ ಮಾಡದೇ, ಆ ಬಿಲಗಳಲ್ಲಿ ನೀರು ತುಂಬಿಸಿದರು, ವಿಷಾನಿಲಗಳನ್ನು ಹಾಯಿಸಿದರು, ಬಿಸಿ ಬಿಸಿಯಾದ ಟಾರ್ ಸುರಿದರು, ಹ್ಯಾಂಡ್‌ಗ್ರೆನೇಡ್ ಗಳನ್ನು ಎಸೆದರು, ಆದರೂ ಈ ಕಮಾಂಡೋಗಳ ನಿರ್ಮೂಲನೆಯಾಗಲೇ ಇಲ್ಲ. ಕಾರಣ – ಜೇಡರ ಬಲೆಯಂತೆ ಹಬ್ಬಿದ್ದ ಚು ಚಿ ಸುರಂಗಗಳಲ್ಲಿ ಈ ಸ್ವಾತಂತ್ರ್ಯ ಸೇನಾನಿಗಳು ಸುರಕ್ಷಿತವಾಗಿದ್ದರು. ತಮ್ಮ ಅಡಗು ತಾಣಗಳು ಪತ್ತೆಯಾಗದಿರಲೆಂದು, ಇವರ ಅಡುಗೆ ಮನೆಯಿಂದ ಹೊರಬರುವ ಹೊಗೆಯನ್ನೂ ಕೊಳವೆಗಳ ಮೂಲಕ ದೂರ ಸಾಗಿಸಿ, ನಂತರವೇ ಹೊರ ಬಿಡುತ್ತಿದ್ದರು. ಹೊಗೆ ಬರುವ ಕಡೆ ಅಮೆರಿಕನ್ನರು ಬಾಂಬ್ ಹಾಕಿ, ಅವರ ಅಡಗುತಾಣಗಳನ್ನು ನಾಶ ಪಡಿಸಲು ಯತ್ನಿಸಿ ವಿಫಲರಾಗಿದ್ದರು. ಅಮೆರಿಕನ್ನರು ಕ್ರಾಂತಿಕಾರಿಗಳನ್ನು ಸದೆಬಡಿಯಲು ಎರಡು ಬಾರಿ ವಿಶೇಷವಾದ ತಂತ್ರಗಾರಿಕೆ ಮಾಡಿದರು – ಆಪರೇಷನ್ ಕ್ರಿಂಪ್ ಮತ್ತು ಆಪರೇಷನ್ ಸಿಡಾರ್ ಫಾಲ್ಸ್. ಆಪರೇಷನ್ ಕ್ರಿಂಪ್ ನಡೆದಾಗ 8,000 ಸೈನ್ಯದ ತುಕಡಿಗಳನ್ನು ನಿಯೋಜಿಸುತ್ತಾರೆ. ಆ ಸುರಂಗದ ಬಿಲದೊಳಗೆ ಇಳಿಯಲು ಯತ್ನಿಸಿದ ಸೈನಿಕರು ‘ಬೂಬಿ ಟ್ರಾಪ್ಸ್ ಗೆ ಬಲಿಯಾಗುತ್ತಾರೆ’ ಸುರಂಗದ ದ್ವಾರದಲ್ಲಿ ಹಲಗೆಗಳಿಗೆ ಜೋಡಿಸಿದ ಬೊಂಬಿನ ಚೂಪಾದ ಮುಳ್ಳುಗಳು ಮೇಲೆ ಕೆಳಗೆ ತೂಗಾಡುತ್ತಾ ಅಲ್ಲಿ ನುಗ್ಗುವವರನ್ನು ಗಾಯಗೊಳಿಸುತ್ತಿತ್ತು, ಕೆಲವು ದ್ವಾರಗಳಲ್ಲಿ ಇಂತಹ ಹಲಗೆಗಳು ವೃತ್ತಾಕಾರವಾಗಿ ಸುತ್ತುತ್ತಾ ಶತ್ರುಗಳನ್ನು ಹತ್ಯೆ ಮಾಡುತ್ತಿದ್ದವು. ಆಪರೇಷನ್ ಸಿಡಾರ್ ಫಾಲ್ಸ್ ನಡೆದಾಗ ಮೂವತ್ತು ಸಾವಿರ ಸೈನ್ಯದ ತುಕಡಿಗಳನ್ನು ನಿಯೋಜಿಸುತ್ತಾರೆ, ಒಂದೆರೆಡು ಬಾರಿ ಸುರಂಗದೊಳಗೆ ಪ್ರವೇಶಿಸಲು ಯಶಸ್ವಿಯಾದ ಅಮೆರಿಕನ್ನರಿಗೆ ಕಂಡಿದ್ದು ಖಾಲಿಯಾದ ಕೊಠಡಿಗಳು, ಅವರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳೂ, ಅಮೆರಿಕನ್ನರ ಸೈನ್ಯದ ಸಂಪೂರ್ಣ ಮಾಹಿತಿಯಿದ್ದ ದಾಖಲೆಗಳೂ ಕಾಣ ಸಿಗುತ್ತವೆ. ಕುಪಿತಗೊಂಡ ಸೇನಾ ನಾಯಕನು ಆ ಸುರಂಗ ಮಾರ್ಗಗಳು ಹರಡಿದ್ದ ಅರಣ್ಯ ಪ್ರದೇಶವನ್ನೂ. ಅಲ್ಲಿದ್ದ ಎಲ್ಲಾ ಗ್ರಾಮಗಳನ್ನೂ ಸಂಪೂರ್ಣ ಧ್ವಂಸ ಗೊಳಿಸಲು ‘ಕಾರ್ಪೆಟ್ ಬಾಂಬಿಗ್’ ಮಾಡಲು ಆದೇಶಿಸಿತ್ತಾನೆ. ಕಾಡು ಸುಟ್ಟು ಕರಕಲಾಗುತ್ತದೆ, ಇಂದಿಗೂ ಇಲ್ಲಿ ಮರಗಿಡಗಳು ಬೆಳೆಯುತ್ತಿಲ್ಲ. ಅರ್ಧ ಮಿಲಿಯನ್ ಜನರ ಮಾರಣಹೋಮವಾಗುತ್ತದೆ. ಸಿಂಹಸ್ವಪ್ನದಂತಿದ್ದ ಚು ಚಿ ಸುರಂಗಗಳನ್ನು ಬೇಧಿಸಲಾಗಿದೆ. 1973 ರಲ್ಲಿ ಅಮೆರಿಕನ್ನರು ವಿಯೆಟ್ನಾಮಿನಿಂದ ತಮ್ಮ ಸೈನ್ಯವನ್ನು ಹಿಂದೆ ಕರೆಸಿಕೊಳ್ಳುತ್ತಾರೆ. ಉತ್ತರ ಹಾಗೂ ದಕ್ಷಿಣ ವಿಯೆಟ್ನಾಂಗಳು ಒಂದಾಗಿ ತಮ್ಮದೇ ಆದ ಸರ್ಕಾರವನ್ನು ರಚನೆ ಮಾಡಿಕೊಳ್ಳುತ್ತವೆ.

ಚು ಚಿ ಸುರಂಗದಿಂದ ಹಿಂದಿರುಗುವಾಗ ಕಾಡಿನ ಅಂಚಿನಲ್ಲಿ ಒಂದೆಡೆ ಸಂಗೀತಗಾರರ ತಂಡವೊಂದು ವಾದ್ಯಗಳನ್ನು ನುಡಿಸುತ್ತಾ ಕೂತಿದ್ದರು, ನಾವು ಯಾರಿವರು ಎಂದು ಕೇಳಿದಾಗ ಬಂದ ಉತ್ತರ – ಇವರು ಅಮೆರಿಕಾದವರು ಹೂತಿಟ್ಟ ಲ್ಯಾಂಡ್ ಮೈನ್ಸ್‌ಗೆ ಬಲಿಯಾದ ನತದೃಷ್ಟರು. ಕೆಲವರು ಕಾಲಿಲ್ಲ, ಕೆಲವರಿಗೆ ಕೈಗಳಿಲ್ಲ ಮತ್ತೆ ಕೆಲವರಿಗೆ ಕಣ್ಣಿನ ದೃಷ್ಟಿಯೇ ಇಲ್ಲ. ಇವರೆಲ್ಲಾ ಒಂದೆಡೆ ವಾಸಿಸುತ್ತಾರೆ, ತಮ್ಮ ಬದುಕು ನಡೆಸಲು ಕರಕುಶಲ ವಸ್ತುಗಳನ್ನು ತಯಾರಿಸುವರು, ಪ್ರವಾಸೀ ತಾಣಗಳಲ್ಲಿ ವಾದ್ಯ ಸಂಗೀತ ನುಡಿಸುವರು. ಹೀಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂದಿಗೂ ಸಾವಿರಾರು ಲ್ಯಾಂಡ್‌ಮೈನ್ಸ್‌ಗಳು ವಿಯೆಟ್ನಾಮಿನ ನೆಲದಡಿಯಲ್ಲಿದ್ದು ಅಮಾಯಕರನ್ನು ಹತ್ಯೆ ಮಾಡುತ್ತಲೇ ಇವೆ. ಅಬ್ಬಾ, ಯುದ್ಧ ಕೊನೆಯಾದರೂ ಈ ಶಸ್ತ್ರಾಸ್ತ್ರಗಳ ಆಟೋಟಾಪ ನಿಂತಿಲ್ಲ. ಬಕಾಸುರರಂತೆ ಮುಗ್ಧರ ಬಲಿ ಪಡೆಯುತ್ತಲೇ ಇದೆ.

ಈ ವಿವರಗಳನ್ನು ಕೇಳುತ್ತಾ ನಾವೆಲ್ಲಾ ಮೌನಕ್ಕೆ ಜಾರಿದ್ದೆವು, ನಮ್ಮ ದೇಶದ ಇತಿಹಾಸ ನೆನಪಿಗೆ ಬಂತು. ಅಬ್ಬಾ, ಎಷ್ಟೊಂದು ದೇಶಭಕ್ತರು ತಮ್ಮ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ, ಆದರೆ ನಾವಿಂದು ಸ್ವಾರ್ಥ, ಭ್ರಷ್ಟಾಚಾರ, ಅಧಿಕಾರ ಲಾಲಸೆಯಿಂದ ನಮ್ಮ ನಾಡನ್ನು ನರಕಸದೃಶವನ್ನಾಗಿ ಮಾರ್ಪಡಿಸಿದ್ದೇವಲ್ಲವೇ?

ಈ ಬರಹದ ಹಿಂದಿನ ಭಾಗ ಇಲ್ಲಿದೆ https://www.surahonne.com/?p=40444

(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

6 Responses

 1. ನಯನ ಬಜಕೂಡ್ಲು says:

  Nice

 2. ಅಭ್ಬಾ..ಎಂಥಹ ನರಮೇಧ..ಎಂತಹ ದೇಶಪ್ರೇಮ ನಿಜವಾಗಲೂ ಹೃದಯ ತುಂಬಿ ಬಂತು..ಅತ್ಯಂತ ಸೊಗಸಾದ ನಿರೂಪಣೆ ಗಮನಸೆಳೆಯಿತು…ಧನ್ಯವಾದಗಳು ಗಾಯತ್ರಿ ಮೇಡಂ

 3. MANJURAJ H N says:

  ಓ! ರುದ್ರ ರಮಣೀಯ!!

 4. ಶಂಕರಿ ಶರ್ಮ says:

  ಅಬ್ಬಬ್ಬಾ…ಅಮೆರಿಕನ್ನರು ವಿಯೆಟ್ನಾಮಿನವರ ಮೇಲೆ ನಡೆಸಿದ ಅಮಾನವೀಯ ಕೃತ್ಯವು ಖಂಡನೀಯ! ನರಮೇಧದ ದುರಂತವು ಮನಕಲಕಿಸಿತು…ಎಂದಿನಂತೆ ಸೊಗಸಾದ ನಿರೂಪಣೆ ಮೇಡಂ.

 5. Thanks for your encouraging words

 6. Padma Anand says:

  ಭೀಕರ ಸಂಗ್ರಾಮದ ಪರಿಣಾಮಕಾರಿ ನಿರೂಪಣೆಯಿಂದಾಗಿ ಲೇಖನ ಮನತಟ್ಟುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: