ಮಾಯಾ ಮೃಗ
ಬೆಳಗೆದ್ದ ಕೂಡಲೇ ಎಂದಿನಂತೆ ದರ್ಪಣ ನನ್ನ ಕೂಗಿ ಕರೆದಿತ್ತು
ಮೂಡಿದ ಪ್ರತಿಬಿಂಬ ಎನ್ನ ಕಂಡು ಗಹಗಹಿಸಿ ನಕ್ಕಿತ್ತು
ಸಾಲು ನೆರೆಗಟ್ಟಿದ ಮುಖ ಒಣಹುಲ್ಲಿನಂತ ಬಿಳಿ ಕೂದಲು
ಕೊಕ್ಕೆಯಂತೆ ಮೇಲಕ್ಕೆ ಬಾಗಿದ ಬೊಚ್ಚು ಬಾಯಿ
ನತ್ತು ಸಿಕ್ಕಿಸಿದ ಗೊಪ್ಪೆಯಂತ ಮೂಗು
ಮನ ಬಿಡದೆ ತಾರುಣ್ಯದ ದಿನಗಳ ನೆನೆದಿತ್ತು
ತಿದ್ದಿ ತೀಡಿದ ಮುಂಗುರುಳು ಮಾವಿನಕಾಯಿ ಮಾಟದ ಗಲ್ಲ
ರೆಕ್ಕೆ ಬಿಚ್ಚಿ ಚಿತ್ತಾರದ ಚಿಟ್ಟೆಯೇ ಕೂತಿದೆಯೇನೋ ಅನ್ನಿಸುವಂತ ತುಟಿಗಳು
ನಕ್ಕಾಗ ಗುಳಿ ಬೀಳುವ ಹಾಲುಗೆನ್ನೆಗಳು
ನಿಂತಲ್ಲೇ ನಿಲ್ಲಲಾರದೆ ಹೊರಳಾಡುವ ಗಾಜಿನ ಕಣ್ಣುಗಳು
ಕಾಮನಬಿಲ್ಲಿನಂತೆ ಕಮಾನು ಕಟ್ಟಿದ ಹುಬ್ಬುಗಳು
ಜಲಪಾತದಂತೆ ಮೇಲಿಂದ ಬಿದ್ದು ಅತ್ತಿತ್ತ ತೂಗುವ ನೀಳ ಜಡೆ
ನವಿಲ ನಾಚಿಸುವ ನಡಿಗೆ ಕಣ್ಣು ಕುಕ್ಕುವ ಆಕರ್ಷಕ ಮೈಮಾಟ
ಆ ದಿನಗಳಲಿ ಹಲವರ ನಿದ್ದೆಗೆಡಿಸಿತ್ತು
ಎನಗಿಂತ ಚೆಲುವೆಯಿಲ್ಲ ಎಂಬ ಅಹಂಕಾರ ತಲೆಗೇರಿತ್ತು
ಅತಿಯಾದ ಆತ್ಮವಿಶ್ವಾಸದ ಭರದಲ್ಲಿ ಕರುಣೆ ಸೌಜನ್ಯ ಮೂಲೆ ಸೇರಿತ್ತು
ಅಪ್ಪನ ಸ್ನೇಹ ಬಯಸಿ ಬರುವವರ ದಂಡು ಜೋರಿತ್ತು
ಸೇದುವ ಬಾವಿಯಲಿ ಬಂದಕೂಡಲೇ ಹಗ್ಗಪಡೆಯುವಷ್ಟು
ಜನಪ್ರಿಯತೆ ಮನ್ನಣೆ ಹೆತ್ತಮ್ಮನಿಗೆ ಬಂದಿತ್ತು
ಬಂದ ಸಂಬಂಧಗಳ ಜರಿಯುವಷ್ಟು ಪಿತ್ತ ನೆತ್ತಿಗೇರಿತ್ತು
ಕಾಲನ ಹೊಡೆತಕ್ಕೆ ಸೌಂದರ್ಯ ಕಳೆಗುಂದಿತ್ತು
ಮಾಯಾ ಮೃಗದ ಚೆಲುವು ಮಾಸಿತ್ತು
ಹುಸಿ ಪ್ರತಿಷ್ಠೆಯಲಿ ಬೀಗಿದ ಮನ ದುಃಖದಲಿ ಮುಳುಗಿತ್ತು
ಬಾಹ್ಯ ರೂಪ ಶಾಶ್ವತವಲ್ಲ ಅನ್ನುವ ಸತ್ಯ ನಗ್ನವಾಗಿತ್ತು
ವಯಸ್ಸಿನ ರಾಮಬಾಣಕ್ಕೆ ಪುಟಿಯುವ ಮಾಯಾ ಜಿಂಕೆ ಸಾವನ್ನಪ್ಪಿತ್ತು
ಸದ್ಗುಣಗಳ ಕೂಡ ಮುಖದ ಕಾಂತಿ ಬೆಳಗುವುದು
ಸತ್ಯವು ಶಿವಮಯವಾಗಿ ಸುಂದರತೆಯು ಕುಂದದೆ ಉಳಿಯುವುದು
–ಕೆ.ಎಂ ಶರಣಬಸವೇಶ.
(ಚಿತ್ರ ಕೃಪೆ ರಾಜಶೇಖರ ತಾಳಿಕೋಟೆ. ಚಿತ್ರ ಕಲಾ ಶಿಕ್ಷಕರು ಉಡುಪಿ ಜಿಲ್ಲೆ)
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ; ಅದುವೇ ಜೀವನಸಖ್ಯ
ಎಂಬುದನು ಪ್ರತಿಪಾದಿಸಿದೆ.
ಅಭಿನಂದನೆ ಮತ್ತು ಧನ್ಯವಾದ. ಹಿರಿಯರಿಗೆ ಮನ್ನಣೆ ಮತ್ತು ಮಹತ್ವ
ಕಡಮೆಯಾಗುತಿರುವ ಹಿನ್ನೆಲೆಯಲ್ಲಿ ಇದು ಸಕಾಲಿಕ; ಸಾರ್ವಕಾಲಿಕ ಕೂಡ.
ವಾಸ್ತವ ಸಂಗತಿಯತ್ತ..ದೃಷ್ಟಿ ಹರಿಸುವಂತಹ ಕವನ ಚೆನ್ನಾಗಿ ಪಡಿಮೂಡಿದೆ..ಸಾರ್..
Nice
ಒಳ್ಳೆಯ ಕವನ
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ ಕವನ ಬಹಳ ಚೆನ್ನಾಗಿದೆ.
ಚಂದದ ಕವನ. ಕಾಲ ಸರಿದು ಹೋದ ಮೇಲೆ ಚಿಂತೆಯಷ್ಟೇ ಉಳಿಯುವುದು.
ಓದಿ ಪ್ರತಿಕ್ರಿಯೆ ನೀಡಿದ ಸಹೃದಯರಿಗೆ ತುಂಬಾ ತುಂಬಾ ಧನ್ಯವಾದಗಳು. ಪ್ರಕಟಿಸಿದ ಸುರಹೊನ್ನೆ ಸಂಪಾದಕರಿಗೆ ಹೃದಯ ಪೂರ್ವಕ ನಮನಗಳು.