ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್ ಎಂಬ ಅಕ್ಷಯ ಪಾತ್ರೆ:ಹೆಜ್ಜೆ-10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮೊದಲಬಾರಿಗೆ ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್ ಎಂಬ ಪದ ಕಿವಿಗೆ ಬಿದ್ದಾಗ ಯಾರೋ ರಾಜಮಹಾರಾಜರು, ಆಗರ್ಭ ಶ್ರೀಮಂತರು ಅಥವಾ ಮಂತ್ರಿಗಳಿಗಾಗಿ ಮೀಸಲಾದ ಉಪಹಾರ ಇರಬೇಕು ಎಂದೆನಿಸಿತ್ತು. ಇದು ನಮ್ಮ ನಿಮ್ಮಂತಹ ಶ್ರೀ ಸಾಮಾನ್ಯರಿಗೆ ಎಟುಕುವ ಉಪಹಾರ ಅಲ್ಲವೇ ಅಲ್ಲ ಎಂಬ ಭಾವ. ಮಕ್ಕಳು ಬೆಳೆದು ದೊಡ್ಡವರಾಗಿ ವೈದ್ಯರಾಗಿ, ಇಂಜಿನಿಯರ್ ಆಗಿ ಹೊರದೇಶಗಳಿಗೆ ವಲಸೆ ಹೋಗಿ ಪೌಂಡ್, ಡಾಲರ್‌ಗಳನ್ನು ಗಳಿಸತೊಡಗಿದಾಗ ಮಧ್ಮಮ ವರ್ಗದವರಾದ ನಮಗೆ ಪ್ರವಾಸ ಮಾಡಲು ರೆಕ್ಕೆ ಪುಕ್ಕ ಹುಟ್ಟಿದ್ದಂತೂ ಅಕ್ಷರಶಃ ಸತ್ಯ. ನಾನು ಸಹ್ಯಾದ್ರಿ ಗೆಳತಿಯರ ಜೊತೆ 2011 ರಲ್ಲಿ ಯೂರೋಪ್ ಪ್ರವಾಸಕ್ಕೆ ಹೋದಾಗ ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್ ಸವಿಯುವ ಸುಯೋಗ ಲಭಿಸಿತ್ತು.

ವಿಶಾಲವಾದ ಸುಸಜ್ಜಿತವಾದ ಉಪಹಾರದ ಕೊಠಡಿ, ಬಗೆ ಬಗೆಯ ವ್ಯಂಜನಗಳು, ಎಲ್ಲಿಂದ ಆರಂಭಿಸಲಿ, ನಂತರದಲ್ಲಿ ಯಾವ ಟೇಬಲ್ಲಿಗೆ ಹೋಗಲಿ, ಯಾವುದು ಮಾಂಸಾಹಾರ, ಯಾವುದು ಸಸ್ಯಾಹಾರ ಎಂಬ ದಿಗಿಲು ಮನದಲ್ಲಿ. ಬ್ರೇಕ್ ಫಾಸ್ಟ್ ಎಂದರೆ ಉಪವಾಸವನ್ನು ಕೊನೆಗೊಳಿಸಲು ಸೇವಿಸುವ ಆಹಾರ ಎಂಬ ಅರ್ಥ. ಮೊದಲು ಕಂಡದ್ದು ಬ್ರೆಡ್, ಅದನ್ನು ಟೋಸ್ಟ್ ಮಾಡಲು ಬ್ರೆಡ್ ಟೋಸ್ಟರ್, ಬಳಿಯಲ್ಲಿದ್ದ ಬೆಣ್ಣೆ ಹಾಗೂ ಜಾಮ್. ಮುಂದೆ ಪಾಶ್ಚಿಮಾತ್ಯರು ಪ್ರತಿನಿತ್ಯ ತಿನ್ನುವ ‘ಸೀರಿಯಲ್ಸ್’ ಅವಲಕ್ಕಿಯ ಹಾಗೆ ಕಾಣುವ ಈ ಖಾದ್ಯದ ಗತ್ತೇ ಬೇರೆ – ಮಕ್ಕಳಿಗಾಗಿ ಚಾಕೋಲೇಟ್ ಮಿಶ್ರಿತ ಸೀರಿಯಲ್ಸ್, ದೊಡ್ಡವರಿಗಾಗಿ ಒಣಹಣ್ಣುಗಳ ಮಿಶ್ರಣವಾದ ಸೀರಿಯಲ್ಸ್, ಯಾವುದೇ ಬಗೆಯ ಮಿಶ್ರಣ ಬೇಡ ಎನ್ನುವವರಿಗೆ ಸಾದಾ ಸೀದಾ ಸೀರಿಯಲ್ಸ್. ಒಂದು ಬಟ್ಟಲಲ್ಲಿ ಇದನ್ನು ಸುರಿದುಕೊಂಡು ಮೇಲೆ ಸ್ವಲ್ಪ ಹಾಲು ಹಾಕಿಕೊಂಡು ತಿಂದರೆ ಅವತ್ತಿನ ನಾಷ್ಟಾ ಆದ ಹಾಗೇ. ಅಬ್ಬಾ, ನಮ್ಮ ಮನೆಯ ಗಂಡುಮಕ್ಕಳೂ ಹೀಗೆ ಡಬ್ಬಗಳಿಂದ ಸೀರಿಯಲ್ಸ್ ಸುರಿದುಕೊಂಡು ತಿನ್ನುವಂತಾದರೆ.. ಎನ್ನುವ ಕಲ್ಪನೆಯೇ ಮನಸ್ಸಿಗೆ ಕಚಕುಳಿ ನೀಡಿದ್ದಂತೂ ನಿಜ. ಬೆಳಗಾಗೆದ್ದು, ‘ಏನು ತಿಂಡಿ ಮಾಡಲಿ’ ಎಂದು ಚಿಂತಿಸುತ್ತಲೇ ಅಡುಗೆ ಮನೆಗೆ ಧಾವಿಸುವ ಹೆಣ್ಣಿಗೆ ಈ ವ್ಯವಸ್ಥೆ, ಸ್ವಾತಂತ್ರ್ಯ ನೀಡುವುದಂತೂ ದಿಟ. ದೋಸೆ, ಇಡ್ಲಿ, ಪೂರಿ ಎಂತೆಲ್ಲಾ ತರಹೇವಾರು ತಿಂಡಿ ಮಾಡುವ ನಮಗೆ ಸೀರಿಯಲ್ಸ್ ಆ ದೇವರು ಕರುಣಿಸುವ ವರವೇ ಸರಿ.

ಪಕ್ಕದ ಮೇಜಿನ ಮೇಲೆ ತರಹೇವಾರಿ ಹಣ್ಣುಗಳು – ಬಾಳೆಹಣ್ಣು, ಸೇಬು, ಕಲ್ಲಂಗಡಿ, ಕಿತ್ತಳೆ, ಕಿವಿ, ಪೇರ್‍ಸ್, ಸೀಬೆ ಇತ್ಯಾದಿ. ತರಕಾರಿಗಳ ಸೊಬಗನ್ನು ಹೆಚ್ಚಿಸಲು ವಿಬಿನ್ನ ಆಕೃತಿಗಳಲ್ಲಿ ಕ್ಯಾರಟ್, ಸೌತೇಕಾಯಿ, ಟೊಮ್ಯಾಟೋ, ಮೂಲಂಗಿ, ಬೀಟ್‌ರೂಟ್‌ಗಳ ಹೋಳುಗಳನ್ನು ಮಾಡಿ ಜೋಡಿಸಿಟ್ಟಿದ್ದರು. ಇಲ್ಲ ಅಂದರೆ ಬೆಳಿಗ್ಗೆ ಎದ್ದು ಹಸಿ ತರಕಾರಿಗಳನ್ನು ತಿನ್ನುವರಾರು ನೀವೇ ಹೇಳಿ? ಮುಂದೆ ಒಂದು ದೊಡ್ಡ ಜಾರ್‌ನಲ್ಲಿ ಎರಡು ಮೂರು ಬಗೆಯ ಹಣ್ಣಿನ ರಸ – ಸೇಬು ಹಣ್ಣಿನ ರಸ, ಕಿತ್ತಳೆಯ ರಸ, ದ್ರಾಕ್ಷಿ ಹಣ್ಣಿನ ರಸ, ಸ್ಟ್ರಾಬೆರಿ ರಸ ಇತ್ಯಾದಿ ಇತ್ತು. ಆಸೆ ಪಟ್ಟು ಹಣ್ಣಿನ ರಸವನ್ನು ಒಂದು ಲೋಟದಲ್ಲಿ ಹಿಡಿದು ಕುಡಿದವಳಿಗೆ ಕಾದಿತ್ತು ನಿರಾಸೆ, ಅದು ತಾಜಾ ಹಣ್ಣಿನ ರಸ ಆಗಿರದೆ, ಎಂದೋ ಮಾಡಿ, ಕೆಡದಂತೆ ಪ್ರಿಸರ್ವೇಟಿವ್ ಸೇರಿಸಿ ಬಾಟಲಿಗಳಲ್ಲಿ ತುಂಬಿಸಿಟ್ಟ ಪೇಯವಾಗಿತ್ತು. ಮುಂದೆ ಸಾಗಿದವಳಿಗೆ ಕಂಡದ್ದು ಮಾಂಸಾಹಾರಿ ಖಾದ್ಯಗಳು – ಲ್ಯಾಂಬ್, ಚಿಕನ್, ಡಕ್, ಪೋರ್ಕ್, ಬೀಫ್, ಮೀನು ಇತ್ಯಾದಿಗಳಿಂದ ತಯಾರಿಸಿದ ತಿನಿಸುಗಳು. ನಾನು ಗಡಿಬಿಡಿಯಿಂದ ನನ್ನ ತಟ್ಟೆಯೆತ್ತಿಕೊಂಡು ಹಿಂದೆ ಬರುವಾಗ ಸಹಪ್ರಯಾಣಿಕರೊಬ್ಬರು, ‘ಯಾಕೆ ಮೇಡಂ ಗಾಬರಿಯಿಂದ ಓಡುತ್ತಿರುವಿರಿ’ ಎಂದು ಲೇವಡಿ ಮಾಡಿದರು. ನಾನು, ‘ಕೊಕ್ಕೊಕ್ಕೊ, ಕ್ವಾಕ್ ಕ್ವಾಕ್, ಅಂಬಾ..’ ಎಂದು ಕೂಗಿದ್ದು ಕೇಳಿ ಓಡಿ ಬಂದೆ’, ಎಂದು ಉತ್ತರಿಸಿದೆ. ಮೊಟ್ಟೆ ಮಾತ್ರ ತಿನ್ನುವವರೂ ನಮ್ಮ ಮಧ್ಯೆ ಇದ್ದರು, ಅವರಿಗಾಗಿ ಬೇಯಿಸಿದ ಮೊಟ್ಟೆ, ಆಮ್ಲೆಟ್, ಪಾನ್ ಕೇಕ್ ತಯಾರಾಗಿ ಕುಳಿತಿದ್ದವು. ಒಂದು ಮೇಜಿನ ಮೇಲೆ ಎರಡು ಮೂರು ಬಗೆಯ ಕೇಕ್‌ಗಳೂ, ಹೆಸರು ಗೊತ್ತಿಲ್ಲದ ಸಿಹಿ ತಿಂಡಿಗಳೂ ಇದ್ದವು. ಒಂದೆರೆಡು ಸಿಹಿ ತಿನಿಸುಗಳನ್ನು ಎತ್ತಿ ತಟ್ಟೆಗೆ ಹಾಕಿಕೊಂಡು ಬಂದೆ.

ಕುಡಿಯಲು ಕಾಫಿ ಬೇಕೆನಿಸಿ, ಕಾಫಿ ಮೇಕರ್ ಮೆಷಿನ್ ಇದ್ದ ಟೇಬಲ್ ಕಡೆ ಹೋದೆ. ಯಾವುದೋ ಬಟನ್ ಒತ್ತಿ ನಲ್ಲಿಯ ಕಡೆಗೆ ಲೋಟ ಹಿಡಿದೆ. ಕಪ್ಪು ಕಪ್ಪಾದ ಕಾಫಿ, ಟೇಬಲ್ ಮೇಲಿದ್ದ ಕ್ರೀಮ್, ಸಕ್ಕರೆ ಪೌಚ್‌ಗಳನ್ನು ಕಾಫಿಗೆ ಬೆರೆಸಿದೆ. ಒಂದು ಗುಟುಕು ಕಾಫಿ ಹೀರಿದೆ, ಸಿಕ್ಕಾಪಟ್ಟೆ ಕಹಿ, ಮತ್ತೆ ಕ್ರೀಮ್ ಹಾಗೂ ಸಕ್ಕರೆಯನ್ನು ಕಪ್ಪಿಗೆ ಸುರಿದೆ. ಅಷ್ಟೆಲ್ಲಾ ಮಾಡುವ ಹೊತ್ತಿಗೆ ಕಾಫಿ ತಣ್ಣಗಾಗಿತ್ತು. ಕಾಫಿಯನ್ನು ಚೆಲ್ಲಬಾರದು ಎಂಬ ಒಂದೇ ಕಾರಣದಿಂದ ಒಂದೆ ಗುಟುಕಿಗೆ ಕುಡಿದು ಬಿಟ್ಟೆ.

PC: Internet


ಮೊದಮೊದಲು ಈ ಭವ್ಯವಾದ ಊಟದ ಹಾಲನ್ನು ನೋಡಿ ಬೆರಗಾದವಳಿಗೆ, ನಿಧಾನವಾಗಿ ಭ್ರಮನಿರಸನವಾಗ ತೊಡಗಿತ್ತು. ನನಗೆ ತಿನ್ನಲು ಸಾಧ್ಯವಾಗಿದ್ದು – ಒಂದೆರೆಡು ಬ್ರೆಡ್ ಪೀಸ್, ಹಸಿ ತರಕಾರಿ ಹೋಳುಗಳು, ಹಣ್ಣಿನ ಹೋಳು, ಹಣ್ಣಿನ ರಸ ಅಷ್ಟೇ. ಈ ಕಾಂಟಿನೆಂಟಲ್ ಉಪಹಾರಗಳು ವಿಶ್ವದೆಲ್ಲೆಡೆ ಇಂದು ಹಬ್ಬಿವೆ, ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಅವತಾರಗಳನ್ನು ತೋರುವ ಈ ಪದ್ಧತಿ ನಿಜಕ್ಕೂ ಒಂದು ವಿಸ್ಮಯವೇ ಸರಿ. ಭಾರತದಲ್ಲಿ ದಕ್ಷಿಣದತ್ತ ತಿರುಗಿದರೆ – ಇಡ್ಲಿ, ವಡೆ, ಸಾಂಬಾರ್, ದೋಸೆ, ಪೊಂಗಲ್, ಪುಟ್ಟು, ಇತ್ಯಾದಿ, ಇನ್ನು ಉತ್ತರದತ್ತ ಪಯಣಿಸಿದರೆ ಪರೋಟ, ಆಲೂ ಮಟ್ಟರ್ ಪನ್ನೀರ್, ದಾಲ್ ಇತ್ಯಾದಿ ತಿನಿಸುಗಳು ರಾರಾಜಿಸುತ್ತವೆ. ಇತ್ತೀಚೆಗೆ ಕಾಂಬೋಡಿಯಾಕ್ಕೆ ಭೇಟಿ ನೀಡಿದಾಗ ಮಂಗಳೂರಿನ ಕಡೆ ಮಾಡುವ ಅಕ್ಕಿ ಗಂಜಿಯನ್ನು ಒಂದು ದೊಡ್ಡ ಮಡಕೆಯಲ್ಲಿ ಇಟ್ಟಿದ್ದರು, ಜೊತೆಗೆ ನೆಂಚಿಕೊಳ್ಳಲು ಮೀನಿನ ಫ್ರೈ ಸಹ ಇತ್ತು. ಹೀಗೆ ಅವರವರ ದೇಶದ ವಿಶಿಷ್ಟವಾದ ಖಾದ್ಯಗಳನ್ನೂ ಸೇರಿಸಿ ಪ್ರವಾಸಿಗರಿಗೆ ರುಚಿಯಾದ ಉಪಹಾರವನ್ನು ನೀಡುವ ಪ್ರಯತ್ನ ಮಾಡುತ್ತಲೇ ಇರುವರು.

ನೀವು ಏನೇ ಹೇಳಿ, ರೆಸ್ಟೊರಾಂಟ್‌ಗಳಲ್ಲಿ ಕುಳಿತು, ನಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿ – ಗರಿಗರಿಯಾದ ಬೆಣ್ಣೆ ಮಸಾಲೆ ತಿನ್ನುವಾಗ ಇರುವ ಖುಷಿ, ಬಿಸಿ ಬಿಸಿಯಾದ ಇಡ್ಲಿ ವಡೆ ತಿನ್ನುವಾಗ ಸಿಗುವ ಆನಂದ ಈ ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್‌ಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಇದರ ಇನ್ನೊಂದು ರೂಪ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್. ಆ ಹೋಟೆಲ್ಲಿನ ರೂಮ್ ಬುಕ್ ಮಾಡಿದವರಿಗೆ ಪುಕ್ಕಟೆಯಾಗಿ ನೀಡುವ ಉಪಹಾರ. ಹಾಗಿದ್ದಲ್ಲಿ ಇದು ಪುಕ್ಕಟೆ ಎಂದು ಭಾವಿಸಬೇಡಿ, ರೂಮಿನ ಬಾಡಿಗೆಯಲ್ಲಿಯೇ ಈ ಉಪಹಾರದ ವೆಚ್ಚವನ್ನೂ ಸೇರಿಸಿರುತ್ತಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಯಾವುದನ್ನೂ ಲಾಭವಿಲ್ಲದೆ ಕೊಡುವುದಿಲ್ಲ. ಇಂತಹ ಉಪಹಾರವನ್ನು ಹೊಟೇಲಿನವರು ಅತ್ಯಂತ ಕಡಿಮೆ ವೆಚ್ಚದಲ್ಲಿ ವ್ಯವಸ್ಥೆ ಮಾಡಬಹುದು. ಬ್ರೆಡ್, ಸೀರಿಯಲ್ಸ್, ಹಣ್ಣಿನ ರಸ, ಹಣ್ಣು, ಮೊಟ್ಟೆ, ತರಕಾರಿಗಳನ್ನು ಕೆಡದಂತೆ ವಾರಗಟ್ಟಲೇ ಇಡಬಹುದು. ಬೆಳಗಿನ ಉಪಹಾರವನ್ನು ಪುಕ್ಕಟೆಯಾಗಿ ನೀಡುತ್ತೇವೆ ಎಂದು ಗ್ರಾಹಕರನ್ನು ಆಕರ್ಷಿಸಬಹುದು. ಅಂತೂ ಈ ಕಾಂಟಿನೆಂಟಲ್ ಬ್ರೇಕ್‌ಫಾಸ್ಟಿನ ವಿಶ್ವರೂಪ ದರ್ಶನವನ್ನು ಮಾಡಿ ಕೃತಾರ್ಥಳಾದೆ.

ಈ ಬರಹದ ಹಿಂದಿನ ಭಾಗ ಇಲ್ಲಿದೆ https://www.surahonne.com/?p=40518

(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

8 Responses

 1. MANJURAJ H N says:

  ಓದುತ್ತಿದ್ದೇನೆ. ಚೆನ್ನಾಗಿ ಮೂಡಿ ಬರುತ್ತಿದೆ. ಅಭಿನಂದನೆ ಮೇಡಂ.

  ಹೇಳೀ ಕೇಳೀ ಆಹಾರ ಸಂಬಂಧಿತ. ಹಾಗಾಗಿ ಓದಿಸಿಕೊಂಡು ಹೋಯಿತು;
  ಮನಸಿನಲೇ ಮಂಡಿಗೆ ತಿಂದಾಯಿತು!

 2. Hema Mala says:

  ಸೂಪರ್…ನನಗೂ ಸಂಸ್ಥೆಯ ಕೆಲಸದ ಪ್ರಯುಕ್ತ ವಿದೇಶಗಳಿಗೆ ಹೋಗಿದ್ದಾಗ, ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ಭ್ರಮನಿರಸನವಾಗಿತ್ತು. ನಮ್ಮೂರಲ್ಲಿ ಸುಡು ಬಿಸಿಲಿದ್ದರೂ ನಮಗೆ ಹಬೆಯಾಡುವ ಇಡ್ಲಿ-ಸಾಂಬಾರು, ಬಿಸಿ ಉಪ್ಪಿಟ್ಟು ಬೇಕು. ಚಳಿಯಿಂದ ನಡುಗುವ ಹವೆ ಇರುವ ದೇಶಗಳಲ್ಲಿ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ನಲ್ಲಿ ತಣ್ಣನೆಯ ತಿನಿಸುಗಳನ್ನು ನೋಡಿ ನನಗೆ ಅಚ್ಚರಿಯಾಗಿತ್ತು.

  • ನಯನ ಬಜಕೂಡ್ಲು says:

   Sundaravaagide

  • ಸುಂದರವಾದ ಚಿತ್ರದೊಂದಿಗೆ ಚಂದ ಉಳಿಸಿ ನನ್ನ ಬರಹಗಳನ್ನು ಪ್ರಕಟಿಸುತ್ತಿರುವ ಹೇಮಮಾಲ ಮೇಡಂ ಗೆ ತುಂಬು ಹೃದಯದ ವಂದನೆಗಳು

 3. ಹಹ್ಹಾ..ನಾವು ಮೊದಲಿಂದಲೂ..ರೂಢಿಗತವಾಗಿ ಬಂದ ತಿಂಡಿ ಊಟಗಳನ್ನು..ನಮ್ಮ ಇಚ್ಚೆಗನುಗುಣವಾಗಿ..ಮೆದ್ದ..ನಾಲಿಗೆಗೆ ಈ…ಉಪಹಾರಗಳು…ಹೇಗೆ…ಕಂಡ್ಯಾವು..ಮೇಡಂ.. ಸೊಗಸಾದ ನಿರೂಪಣೆ..

 4. ಶಂಕರಿ ಶರ್ಮ says:

  ಹಸಿದ ಹೊಟ್ಟೆಗೆ ಇದರಲ್ಲಿ ಇರುವ ಯಾವುದೂ ನಮಗೆ ಒಗ್ಗುವಂತಹುದಲ್ಲ ಎಂಬುದು ನನಗೂ ವೇದ್ಯವಾಗಿ ಹೊಟ್ಟೆ ತುಂಬಿಸಿಕೊಳ್ಳಲಾಗದೆ ಪೇಚಾಡಿದ ನೆನಪು ಮರುಕಳಿಸಿತು. ಸೊಗಸಾದ ಲೇಖನ ಗಾಯತ್ರಿ ಮೇಡಂ.

 5. Padma Anand says:

  ಕಾಂಟಿನೆಂಟಲ್ ಫ್ರೀ ( ಕಣ್ಣೊರಸುವ) ಬ್ರೇಕ್ ಫಾಸ್ಟ್ ಎಂಬ ಪ್ಲಾಸ್ಟಿಕ್ ಬೊಂಬೆಯ ನಿಜರೂಪದ ದರ್ಶನವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: