ಕಾದಂಬರಿ : ಕಾಲಗರ್ಭ – ಚರಣ 12
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
”ಅರೆ ನೀನು !” ಎಂದು ಉದ್ಗಾರ ತೆಗೆಯುವಷ್ಟರಲ್ಲಿ ಕಣ್ಸನ್ನೆ ಮಾಡಿ ಅವನ ಕೈಹಿಡಿದು ಮತ್ತೆ ರೂಮಿಗೆ ಹಿಂತಿರುಗಿದರು. ರೂಮಿನ ಬಾಗಿಲನ್ನು ಭದ್ರಪಡಿಸಿದರು ಡಾ. ಚಂದ್ರಪ್ಪ.
”ಅಲ್ಲೋ ಗೆಳೆಯ ನೆನ್ನೆ ಬೆಳಗ್ಗೆ ನನಗೆ ಮೆಸೇಜ್ ಮಾಡಿದ್ದೆ, ರಾತ್ರಿ ನನ್ನ ಫಸ್ಟ್‌ನೈಟೆಂದು.. ಇದ್ದಕ್ಕಿದ್ದಂತೆ ಏನಾಯ್ತು?” ಎಂದು ಕೇಳಿದರು ಡಾಕ್ಟರ್.
”ಅದಿರಲಿ ನೀನು ಹೀಗೆ ಧಿಢೀರಂತ ಇಲ್ಲಿಗೆ ಹೇಗೆ ಬಂದೆ? ನನಗೆ ಹುಷಾರಿಲ್ಲವೆಂದು ನಿನಗೆ ಹೇಗೆ ಗೊತ್ತಾಯ್ತು? ನಾನೇ ಕ್ಲಿನಿಕ್ಕಿಗೆ ಹೊರಟಿದ್ದೆ. ಆದರೆ ಮನೆಯವರೆಲ್ಲರೂ ಹೋಗಬಾರದೆಂದರು. ಅದನ್ನು ಮೀರಿ ಬರಲಾಗಲಿಲ್ಲ. ಜೊತೆಗೆ ನಮ್ಮ ತಾಪತ್ರಯವನ್ನು ನಾವೇ ನಿಭಾಯಿಸಿಕೊಳ್ಳೋಣ ಎಂದುಕೊಂಡೆವು?” ಎಂದ ಮಹೇಶ.
”ಹೂಂ .. ನಿನ್ನ ಪರಿಸ್ಥಿತಿಯನ್ನು ಚುಟುಕಾಗಿ ಬರೆದು ನನ್ನ ಹೆಂಡತಿ ಚಿತ್ರಾಳಿಗೆ ಮೆಸೇಜ್ ಮಾಡಿದ್ದಳು ದೇವಿ.ಹಾಗೇ ನೀನು ಈಗ ಹೇಳಿದೆಯಲ್ಲ ಕಾರಣ ಅದನ್ನೂ ತಿಳಿಸಿ ಅಕಸ್ಮಾತ್ ಬರುವಂತೆ ಸೂಚನೆ ಕೊಟ್ಟಿದ್ದಳು. ಅದಕ್ಕೇ ನಾನು ಇಲ್ಲೇ ಯಾರೋ ಪೇಷೆಂಟ್ ನೋಡಬೇಕಾಗಿತ್ತು. ಅದಕ್ಕೇ ಬಂದಿದ್ದೆ. ಹಾಗೇ ಗೆಳೆಯನ ಹತ್ತಿರ ಅರ್ಜೆಂಟಾಗಿ ಮಾತನಾಡಬೇಕಾಗಿತ್ತು. ಸ್ವಲ್ಪ ದಿನ ನೀವು ಅವನನ್ನು ಹೊರಗೆಲ್ಲೂ ಕಳುಹಿಸುವುದಿಲ್ಲವೆಂದು ಗೊತ್ತು. ಅದಕ್ಕೆ ಮನೆಗೇ ಬಂದೆ ಎಂದು ಹೇಳಿದೆ. ಅದನ್ನು ಕೇಳಿದವರೇ ಸಹಜವೆಂದು ಬಾವಿಸಿ ನನ್ನನ್ನು ಇಲ್ಲಿಗೇ ಹೋಗೆಂದು ಕಳುಹಿಸಿದರು” ಎಂದರು ಡಾಕ್ಟರ್.
”ಏನು ನಿನ್ನ ಅವಸ್ಥೆ?” ಎಂದು ಪ್ರಶ್ನಿಸಿದರು. ಅದನ್ನು ವಿವರಿಸಿದಮಹೇಶ. ಅಂತೂ ನನ್ನನ್ನು ಈ ಸಂದಿಗ್ಧದಿಂದ ಪಾರುಮಾಡಿದ ಅರ್ಧಾಂಗಿಗೆ ಮನದಲ್ಲೇ ಕೃತಜ್ಞತೆ ಅರ್ಪಿಸಿದ.
ಇಬ್ಬರೂ ಗೆಳೆಯರು ಚಿಕ್ಕಂದಿನಿಂದಲೂ ಒಟ್ಟಿಗೇ ಆಡಿಬೆಳೆದವರು. ಓದುವಾಗ ಬೇರೆಬೇರೆ ವಿಭಾಗಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಈಗಲೂ ಗೆಳೆತನಕ್ಕೇನೂ ಕುಂದಾಗಿರಲಿಲ್ಲ. ಚಂದ್ರಪ್ಪನೂ ತನ್ನ ಗೆಳೆಯನಂತೆ ಊರಿನ ಅಭಿಮಾನಿಯಾಗಿದ್ದ. ವೈದ್ಯಕೀಯ ವಿದ್ಯಾಭ್ಯಾಸ ಮುಗಿದನಂತರ ತನ್ನ ಸಹಪಾಠಿಯನ್ನೇ ಕೈಹಿಡಿದು ಇಬ್ಬರೂ ಹುಟ್ಟೂರಿನಲ್ಲೇ ಕ್ಲಿನಿಕ್ ತೆಗೆದಿದ್ದರು. ಅವನ ಪೋಷಕರೂ ಅವರ ಜೊತೆಯಲ್ಲಿದ್ದರು. ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಸೇವೆ ಮಾಡುತ್ತಾ ಧನ್ವಂತರಿಯಾಗಿದ್ದರು. ತಮ್ಮ ಸೌಜನ್ಯದ ನಡವಳಿಕೆ, ದುರಾಸೆಗೆ ಒಳಗಾಗದೆ ಒಳ್ಳೆಯ ಸೇವೆಯನ್ನು ಸಲ್ಲಿಸುತ್ತಿರುವ ಇವರನ್ನು ಕಂಡರೆ ಎಲ್ಲರಿಗೂ ಅತ್ಯಂತ ಪ್ರೀತಿ, ಗೌರವ ಮೂಡಿತ್ತು.
ಡಾ.ಚಂದ್ರಪ್ಪ ಮಹೇಶ ಗೆಳೆಯರಾಗಿದ್ದಂತೆಯೇ ಅವರ ಪತ್ನಿಯರೂ ಪರಸ್ಪರ ಗೆಳತಿಯರಾಗಿದ್ದರು. ಹಿರಿಯರೊಡನೆಯೂ ಒಡನಾಟವಿತ್ತು. ಹೀಗಾಗಿ ಮಹೇಶನ ಅಸಹಾಯಕತೆ ಮತ್ತು ಅವನ ಆರೋಗ್ಯದ ಬಗ್ಗೆ ಕಾಳಜಿಯಿಂದ ಬೇರೆಯವರಿಗೆ ಗೊತ್ತಾಗದಂತೆ ಈ ವ್ಯವಸ್ಥೆ ಮಾಡಿದ್ದಳು ಮಾದೇವಿ.
ಮಹೇಶನನ್ನು ಚೆಕಪ್ ಮಾಡಿದ ಚಂದ್ರಪ್ಪ ”ಸದ್ಯಕ್ಕೆ ಇಂಜೆಕ್ಷನ್ನೇನೂ ಬೇಡ. ಈ ಮಾತ್ರೆಗಳನ್ನು ತೆಗೆದುಕೋ. ಅಯಾಸ, ಮತ್ತು ಆಹಾರ ವ್ಯತ್ಯಾಸದಿಂದ ಹೀಗಾಗಿದೆ. ಆದರೆ ಉದಾಸೀನ ಮಾಡದೇ ಔಷಧ ಉಪಚಾರ ಮಾಡಿಸಿಕೊಂಡು ಆರಾಮವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು” ಎಂದು ಮೆಲುದನಿಯಲ್ಲಿ ಎಚ್ಚರಿಕೆ ನೀಡಿದರು. ತಮ್ಮ ಪರಿಕರಗಳನ್ನು ಚೀಲದಲ್ಲಿಟ್ಟುಕೊಂಡು ರೂಮಿನ ಬಾಗಿಲನ್ನು ತೆರೆದರು. ಅದನ್ನೇ ಕಾಯುತ್ತಿದ್ದ ಮಾದೇವಿ ”ನಾನು ಒಳಗೆ ಬರಬಹುದೇ?” ಎಂದು ಕೇಳಿದಳು.
ಧ್ವನಿಯಿಂದಲೇ ಬಂದವರಾರೆಂದು ತಿಳಿದ ಡಾಕ್ಟರ್ ”ಬಾಮ್ಮ ದೇವಿ” ಎಂದರು. ಒಂದು ನೀರು ತುಂಬಿದ ಜಗ್ಗು ಮತ್ತು ಸ್ವಲ್ಪ ತಿಂಡಿಯಿದ್ದ ತಟ್ಟೆ, ಮಿಳ್ಳೆಯಲ್ಲಿ ಬಿಸಿಬಿಸಿ ಹೊಗೆಯಾಡುತ್ತಿದ್ದ ಕಾಫಿ ಇಟ್ಟುಕೊಂಡು ಟ್ರೇಯನ್ನು ಟೀಪಾಯಿಯ ಮೇಲಿಟ್ಟು ”ಚಂದ್ರಣ್ಣಾ ಮಹೀ ಹೇಗಿದ್ದಾರೆ?” ಎಂದು ಪ್ರಶ್ನಿಸಿದಳು.
”ಗಾಭರಿ ಪಡುವಂತಾದ್ದೇನಿಲ್ಲ. ಒಂದೆರಡು ದಿನದಲ್ಲಿ ಸರಿಹೋಗುತ್ತದೆ. ಚಿಂತೆಬೇಡ. ಆದರೆ ಸ್ವಲ್ಪ ಪಥ್ಯದಡಿಗೆ ಕೊಟ್ಟರೆ ಉತ್ತಮ. ಮಿಕ್ಕಿದ್ದು ನಿಮಗೇ ಬಿಟ್ಟದ್ದು. ಹೇಗೆ ನೋಡಿಕೊಳ್ಳುತ್ತೀರೋ ಹಾಗೆ. ಮತ್ತೇನಾದರೂ ತೊಂದರೆಯಾದರೆ ನನಗೆ ಫೋನ್ ಮಾಡಿ, ಇಲ್ಲವೇ ವೀಡಿಯೋ ಕಾಲ್ ಮಾಡಿ. ನನಗೀಗ ತಿಂಡಿ ಬೇಡ” ಎಂದು ಕಾಫಿಯೊಂದನ್ನು ಕುಡಿದು ಮತ್ತೊಮ್ಮೆ ಜೋಪಾನವೆಂದು ಹೇಳಿ ನಿರ್ಗಮಿಸಿದರು ಡಾಕ್ಟರ್ ಚಂದ್ರಪ್ಪ.
ಅವರು ಅತ್ತ ಹೋದಮೇಲೆ ”ಮಹೀ ಮಾತ್ರೆ ತೆಗೆದುಕೊಂಡು ಮಲಗಿಕೊಳ್ಳಿ. ಮಿಕ್ಕವುಗಳನ್ನು ನಾನು ವಾರ್ಡ್‌ರೋಬಿನಲ್ಲಿಟ್ಟಿರುತ್ತೇನೆ” ಎಂದಳು.”ಹಾಗೇ ಮಾಡು, ಸದ್ಯ ಚಂದ್ರು ಬಂದು ಹೋಗಿದ್ದು ನನಗೆ ಸಮಾಧಾನ ತಂದಿತು. ನಿನಗೆ ತುಂಬ ಥ್ಯಾಂಕ್ಸ್” ಎಂದನು.
ಅವನ ಮಾತಿಗೆ ಉತ್ತರ ನೀಡದೆ ತಕ್ಷಣ ತೆಗೆದುಕೊಳ್ಳಬೇಕಾದ ಮಾತ್ರೆ ಯಾವುದೆಂದು ಕೇಳಿಕೊಂಡು ಒಂದುಲೋಟಕ್ಕೆ ನೀರು ಬಗ್ಗಿಸಿ ಮಹೇಶನಿಗೆ ಕೊಟ್ಟಳು. ಅವನು ತೆಗೆದುಕೊಂಡ ನಂತರ ಉಳಿದವನ್ನು ತನ್ನ ವಾರ್ಡ್‌ರೋಬಿನಲ್ಲಿ ಇರಿಸಿ ಹಾಗೇ ಬಾಗಿಲನ್ನು ಮುಚ್ಚಿ ತಾನು ಕೆಳಗಿನಿಂದ ತಂದಿದ್ದ ವಸ್ತುಗಳೊಡನೆ ಹೊರಬಂದಳು.
ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆಯೇ ಅವಳ ಕೈಲಿದ್ದ ಮೊಬೈಲ್ ಸದ್ದುಮಾಡಿತು. ಕಣ್ಣಾಡಿಸಿದರೆ ಅದು ಚಂದ್ರಿಕಾಳ ಕಾಲ್. ಇಲ್ಲಿಯೇ ಮಾತನಾಡಿ ಹೋಗುವುದು ಉತ್ತಮವೆಂದು ಬಾಲ್ಕನಿಯತ್ತ ನಡೆದಳು ದೇವಿ.
”ಹಲೋ ಅಕ್ಕಾ ನಾನು ಚಂದ್ರಿಕಾ, ಶುಭೋದಯ ಹೇಗಿದ್ದೀರಿ? ಸುಬ್ಬು ಅಣ್ಣನಿಗೆ ಫೋನ್ ಮಾಡಿದ್ದರಂತೆ. ಅವರ ಫೋನ್ ಸ್ವಿಚ್ ಆಫ್ ಆಗಿತ್ತಂತೆ. ಅದಕ್ಕೆ ನನಗೇ ಮಾಡಲು ಹೇಳಿದರು. ಮಹೇಶಣ್ಣ ಅಲ್ಲಿಯೇ ಇದ್ದರೆ ಅವರಿಗೆ ಕೊಡಿ” ಎಂದಳು ಚಂದ್ರಿಕಾ.
”ಇಲ್ಲ ಚಂದ್ರ ಅವರು ಮಲಗಿದ್ದಾರೆ. ಎದ್ದಕೂಡಲೇ ಫೋನ್ ಮಾಡಿಸುತ್ತೇನೆ” ಎಂದಳು ದೇವಿ.
”ಏನು ಮಹೇಶಣ್ಣ ಇನ್ನೂ ಎದ್ದಿಲ್ಲವೇ? ಹಾಗಾದರೆ ರಾತ್ರಿಯೆಲ್ಲಾ ಜಾಗರಣೆ ಮಾಡಿರಬೇಕು” ಎಂದು ಕಿಸಕ್ಕನೆ ನಕ್ಕಳು ಚಂದ್ರಿಕಾ.
ಅವಳು ಹೇಳಿದ್ದು ಕೇಳಿಸಲಿಲ್ಲವೇನೋ ಎಂಬಂತೆ ಜಾಣಕಿವುಡನ್ನು ತೋರುತ್ತಾ ”ನಿಮ್ಮಿಬ್ಬರದ್ದು ಯಾವಾಗ ಈ ಕಡೆಗೆ ಸವಾರಿ?” ಎಂದು ಕೇಳಿದಳು.
”ಅದೇ ಅಕ್ಕಾ ಇನ್ನೂ ಒಂದೆರಡು ದಿನ ಇಲ್ಲಿಯೇ ಇರಬೇಕಂತೆ. ಆಮೇಲೆ ಸುಬ್ಬುವಿನ ಚಿಕ್ಕಪ್ಪನವರ ಮನೆ, ನಂತರ ಅವರ ಮನೆದೇವರು ನಂಜನಗೂಡಿಗೆ ಹೋಗಿ ನಂತರ ಅಲ್ಲಿಗೆ ಬರಬಹುದು. ಒಂದು ವಾರದ ಪ್ರೋಗ್ರಾಂ. ಅತ್ತೆ ಮಾವನವರಿಗೆ ಹೇಳಿದ್ದೇನೆ. ಆಯಿತು ಅಕ್ಕಾ ನೀವೂ ವಿಶ್ರಾಂತಿ ತೊಗೊಳ್ಳಿ. ಮಹೇಶಣ್ಣ ಎದ್ದಮೇಲೆ ಹೇಳಿ ಕಾಲ್ ಮಾಡಿಸಿ. ಸುಬ್ಬು ಏನೋ ಮಾತನಾಡಬೇಕಂತೆ” ಎಂದು ಕಾಲ್ ಕಟ್ ಮಾಡಿದಳು ಚಂದ್ರಿಕಾ.
”ಹೂ ರಾತ್ರಿ ಜಾಗರಣೆಯಂತೆ ಜಾಗರಣೆ” ಎಂದು ನಿಡಿದಾದ ನಿಟ್ಟುಸಿರು ಬಿಟ್ಟು ಮೆಟ್ಟಿಲಿಳಿದು ಕೆಳಗೆ ಬಂದಳು. ಮಧ್ಯಾನ್ಹ ಪಥ್ಯದೂಟ ಇವರಿಗೆ ಹೇಗೆ ಮಾಡಿಸುವುದಪ್ಪಾ? ಅಡುಗೆ ತಯಾರಿ ಆಗಲೇ ನಡೆಸಿದ್ದಾರೆ. ಏನೂಂತ ನೋಡೋಣವೆಂದು ಒಳಬಂದಳು. ಪಾತ್ರೆಗಳನ್ನು ತೊಳೆಯಲಿಟ್ಟು ಹಾಗೇ ಎಲ್ಲವನ್ನು ಗಮನಿಸಿದಳು. ”ಚಂದ್ರಣ್ಣ ಹೋದನೇ? ಏನು ಕೆಲಸವೆಂದು ಬಂದಿದ್ದ?” ಪ್ರಶ್ನಿಸಿದರು ಅತ್ತೆ ಗೌರಮ್ಮ.
”ಹೂ ಹೋದರು, ಅದೇನೋ ಅವರುಗಳ ವ್ಯವಹಾರ. ನಾನೇನೂ ಕೇಳಲಿಲ್ಲ”. ಎಂದಳು.
”ಸರಿ ಬಿಡು, ಅಂದಹಾಗೆ ಇನ್ನೊಂದೆರಡು ದಿವಸ ಕಳೆದಮೇಲೆ ನೀವಿಬ್ಬರೆ ಧರ್ಮಸ್ಥಳಕ್ಕೆ ಹೋಗಿ ಬನ್ನಿ. ನನ್ನ ಮಗ ಕೆಲಸಕ್ಕಿಳಿದರೆ ಮತ್ತೆ ಇಲ್ಲಿಂದ ಅಳ್ಳಾಡುವ ಆಳಲ್ಲ” ಎಂದರು.
”ಹೂ ಪುಟ್ಟೀ, ಹಾಗೇಮಾಡು. ಮಕ್ಕಳೆದ್ದುಕೊಂಡಮೇಲೆ ನಮ್ಮೆರಡೂ ಮನೆಗಳ ಹಿರಿತಲೆಗಳು ಮೈಗಳ್ಳರಾಗಿದ್ದಾರೆ. ಈಗೇನೋ ಸ್ವಲ್ಪ ಓಡಾಡುತ್ತಿದ್ದಾರೆ. ಇದೇ ಛಾನ್ಸು ತೆಗೆದುಕೊಂಡು ನೀವಿಬ್ಬರೇ ಹೋಗಿ ಬಂದುಬಿಡಿ. ಮತ್ತೆಲ್ಲಿಗಾದರೂ ಹೋಗುವ ಇಚ್ಛೆಯಿದ್ದರೂ ಹೋಗಿ. ಶಂಕರೂ ಇದ್ದಾನೆ. ಒಂದೆರಡು ದಿವಸಗಳಲ್ಲಿ ಸುಬ್ಬುಕೂಡ ಬರುತ್ತಾನೆ” ಎಂದರು ಅಜ್ಜಿ ಬಸಮ್ಮ.
”ಆಯ್ತು ನೋಡೋಣ ಅಜ್ಜೀ. ಇವತ್ತೇನು ಅಡುಗೆ ತಯಾರಿ ನಡೆಸಿದ್ದೀರಿ?” ಎಂದು ಕೇಳಿದಳು ದೇವಿ.
‘ಓ ಅದಾ, ಹದಿನೈದು ದಿನಗಳಿಂದ ಸಿಹಿ, ಖಾರ, ವಿಧವಿಧದ ತಿಂಡಿತಿನಿಸುಗಳನ್ನು ತಿಂದು ಸಾಕಾಗಿ ಹೋಗಿದೆ. ನೆಂಟರಿಷ್ಟರೆಲ್ಲ ಅವರವರ ಊರಿಗೆ ಹೋಗಿದ್ದಾಯ್ತು. ಇನ್ನು ನಾವುಗಳೇ ತಾನೇ. ಅದಕ್ಕೆ ಅನ್ನ ತಿಳಿಸಾರು, ಹೆಚ್ಚು ಎಣ್ಣೆ ಹಾಕದೆ ಬಾಡಿಸಿ ಮಾಡಿದ ಒಂದೆರಡು ತರಕಾರಿ ಪಲ್ಯ, ಸುಟ್ಟ ಹಪ್ಪಳ, ಮೊಸರು, ಮಜ್ಜಿಗೆ ಅಷ್ಟೇ. ರಾತ್ರಿಗಂತೂ ಗೌರಾ ಎಲ್ಲರಿಗೂ ಸೇರಿಸಿ ಗಂಜಿ ಮಾಡಿಕೊಡುತ್ತಳಂತೆ” ಎಂದರು ಬಸಮ್ಮ.
ಅಜ್ಜಿಯ ಮಾತನ್ನು ಕೇಳಿ ದೇವಿಗೆ ಹಿಗ್ಗಾಯಿತು. ಸದ್ಯ ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಅಂದ ಹಾಗಾಯಿತು. ಒಂದೆರಡು ದಿನ ಇದೇ ಕಾರಣವನ್ನು ಹೇಳುತ್ತಾ ನಿಭಾಯಿಸಬೇಕು. ಭಗವಂತಾ ಎಂಥಹ ಪರೀಕ್ಷೆ ತಂದೊಡ್ಡಿದೆಯಪ್ಪಾ. ‘ಇವರನ್ನೇ ಪತಿಯಾಗಬೇಕೆಂದು ಅನಂತ ಕಾಲದಿಂದ ತಪಿಸಿದ್ದೆ ನೋಡಾ’ ಎಂಬ ಅಕ್ಕನ ವಚನವನ್ನು ನೆನಪುಮಾಡಿಕೊಂಡು ಸಮಾಧಾನದಿಂದ ಏನಾದರೂ ಕೆಲಸ ಮಾಡೋಣವೆಂದು ಮುಂದಾದಳು. ”ಏ..ಮಾಡುವವರಿದ್ದೇವೆ, ಸ್ವಲ್ಪ ದಿನಗಳಾದರೂ ತೆಪ್ಪಗಿರು” ಎಂಬ ಹಿರಿಯರ ಆಣತಿಯಂತೆ ಸುಮ್ಮನೆ ತಮ್ಮ ರೂಮಿಗೆ ಸರಿದು ಹೋದಳು.
ನಿದ್ರೆಯಲ್ಲಿದ್ದ ಮಹೇಶನನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಎಂಥಹ ಚೆಲುವನಾಗಿದ್ದಾನೆ ನನ್ನವ ಎಂದುಕೊಂಡಳು. ನಾನೇನು ಕುರೂಪಿಯೇ? ಊಹುಂ ನಾನೂ ಚೆಲುವೆಯೇ ಎಂದು ಮನದೊಳಗೇ ಪಿಸುಗುಟ್ಟಿದಳು. ಅವನ ಹತ್ತಿರ ಹೋಗಿ ಕುಳಿತುಕೊಳ್ಳುವ ಮನಸ್ಸಾಯಿತು. ಬೇಡಪ್ಪಾ ಹುಷಾರಿಲ್ಲದಿದ್ದರೂ ಹೀಗೆ ಬಂದಿದ್ದಾಳೆ ಎಂದುಕೊಳ್ಳುವರೇನೋ ಎಂದು ಭಾವಿಸಿ ಅಲ್ಲಿಯೇ ಇದ್ದ ಪುಸ್ತಕವೊಂದನ್ನು ಎತ್ತಿಕೊಂಡು ದಿವಾನದ ಮೇಲೆ ಕುಳಿತುಕೊಂಡಳು ದೇವಿ.
ಹೀಗೇ ಒಂದೆರಡು ದಿವಸಗಳ ವರೆಗೆ ಕಣ್ಣಾಮುಚ್ಚಾಲೆ ನಡೆಸಿದ ಜ್ವರ ತಹಬಂದಿಗೆ ಬಂದಿತಾದರೂ ಮೈಯಲ್ಲಿ ಸುಸ್ತು, ಆಯಾಸ ಕಡಿಮೆಯಾಗಲಿಲ್ಲ. ಊಟೋಪಚಾರಗಳಲ್ಲಿ ಮನೆಯವರು ಸರಳಕ್ರಮ ಅನುಸರಿಸಿದ್ದರಿಂದ ಹೆಚ್ಚು ತೊಂದರೆಯಾಗಲಿಲ್ಲ. ಯಾರಿಗೂ ಯಾವುದೇ ಅನುಮಾನ ಬರಲಿಲ್ಲ. ಆದರೆ ಮಹೇಶನ ತಾಯಿ ಗೌರಮ್ಮ ಮಾತ್ರ ”ಅದೇನೋ ಮಗಾ ಮನೆಯಲ್ಲಿರಬೇಕೆಂದಾಕ್ಷಣ ಯಾವಾಗಲೂ ಕೋಣೆ ಸೇರಿಕೊಳ್ಳಬೇಕೆಂದಿದೆಯಾ? ಗಲಗಲ ಓಡಾಟವಿಲ್ಲ, ನಿನ್ನ ಮಾತಂತೂ ಕೇಳಿದ್ದಕ್ಕೆ ಮಾತ್ರ ಉತ್ತರ ಅಷ್ಟೇ. ಮೂರೂ ಹೊತ್ತೂ ಕೋಣೆ ಸೇರುತ್ತೀ. ಮುಖನೋಡು ಏನೋ ಒಂದು ನಮೂನೆಯಾಗಿದೆ” ಎಂದು ಆರೋಪಿಸಿದರು.
ಅವರ ಮಾತನ್ನು ಕೇಳಿ ಮಿಕ್ಕವರೂ ದೇವಿಯ ಮುಖನೋಡಿ ನಕ್ಕರೇ ವಿನಃ ಏನೂ ಮಾತನಾಡಲಿಲ್ಲ. ಇವೆಲ್ಲ ಮಾತುಗಳನ್ನು ಕೇಳಿದ ದೇವಿಯ ಮುಖವು ನಾಚಿಕೆಯಿಂದ ಕೆಂಪಾಗದೆ ಸಿಟ್ಟಿನಿಂದ ಕೆಂಪಾಯಿತು. ಏನೂ ಉತ್ತರ ಹೇಳಲಾಗದೆ ಮಹೇಶನ ಕಡೆ ನೋಡಿದಳು. ಅವನಿಗೆ ಕಸಿವಿಸಿಯಾದರು ಮೌನ ವಹಿಸಿದ್ದ.
ಹತ್ತು ದಿನಗಳು ಕಳೆಯುತ್ತಿದ್ದಂತೆ ಸುಬ್ಬಣ್ಣ ಚಂದ್ರಿಕಾ ದಂಪತಿಗಳ ಆಗಮನವಾಯಿತು. ಮಹೇಶನೂ ಅವರೊಟ್ಟಿಗೆ ತಮ್ಮ ಮನೆ ಸೇರಿಕೊಂಡನು.
ದೇವಿಗೆ ಸುಬ್ಬು ಚಂದ್ರಿಕಾರ ಮುಖದಲ್ಲಿ ಉಲ್ಲಾಸ ಕಂಡುಬಂದರೆ ಅವರಿಬ್ಬರಿಗೆ ಮಹೇಶ, ಮಾದೇವಿಯ ಮುಖಗಳಲ್ಲಿ ಚಿಂತೆಯಾವರಿಸಿದಂತೆ ಮ್ಲಾನವಾಗಿರುವುದು ಕಂಡಿತು. ”ನಮ್ಮ ಹಾಗೇ ಅವರೂ ನವ ದಂಪತಿಗಳು, ಹೀಗೇಕೆ? ನಿದ್ರೆಗೆಟ್ಟು ಸೋತು ಬಳಲಿದಂತೆ ಕಾಣುತ್ತಿದ್ದಾರಲ್ಲಾ. ಹೇಗಾದರೂ ಕೆಲವು ಕಾಲ ಅವರನ್ನೊಪ್ಪಿಸಿ ಹೊರಗೆಲ್ಲಾದರೂ ಓಡಾಡಿಕೊಂಡು ಬರುವಂತೆ ಕಳಿಸಬೇಕು” ಎಂದುಕೊಂಡರು.
ಅದೇ ಸಮಯಕ್ಕೆ ಎರಡೂ ಮನೆಯ ಹಿರಿಯರ ಒತ್ತಾಯದಂತೆ ದೇವಿಯ ಮನಸ್ಸಿನಲ್ಲೂ ”ಹೌದು ಮನೆದೇವರಿಗೆ ಹೋಗಿ ಅಲ್ಲಿಂದ ಎಲ್ಲಿಗಾದರೂ ಸರಿ ಕೆಲವು ಕಾಲ ತಿರುಗಾಡಿಕೊಂಡು ಬರಬೇಕು” ಎಂಬ ಆಸೆ ಆಯಿತು. ಈಗ ತಾನೇ ಜ್ವರದಿಂದ ಸಾಕಷ್ಟು ಸಂಕಟ, ಸುಸ್ತು ಅನುಭವಿಸಿ ಎದ್ದಿದ್ದಾರೆ. ಓಡಾಟದಿಂದ ಮತ್ತೆ ಏನಾದರೂ ಹೆಚ್ಚುಕಡಿಮೆಯಾದರೆ ಎಂಬ ಅಳುಕೂ ಮೂಡಿತು. ಇರಲಿ ಮಹೀ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣವೆಂದು ತನ್ನ ಪಾಡಿಗೆ ಸುಮ್ಮನಿದ್ದಳು.
ಇತ್ತ ಮಹೇಶನ ಮನಸ್ಸಿನಲ್ಲೂ ಹೊರಗಡೆ ಹೋಗಿಬರುವ ಆಸೆ ಚಿಗುರತೊಡಗಿತು. ”ಹೌದು..ಏಕೆ ಹೋಗಿ ಬರಬಾರದು. ಹಿರಿಯರ ಆಸೆಯೂ ಅದೇ ಆಗಿದೆ. ದೇವರ ದರ್ಶನ ಮುಗಿಸಿ ನಂತರ ಬೇರೆಡೆಗೆ ಎಲ್ಲಾದರೂ ಹೋಗಿಬರೋಣ. ಪಾಪ..ದೇವಿಗೂ ಒಂದೇ ಕಡೆ ಕುಳಿತು, ನನ್ನನ್ನು ಸೇವೆ ಮಾಡುತ್ತಾ ಸಹಿಸಿಕೊಂಡು ಇದನ್ನು ಯಾರಿಗೂ ಹೇಳದಂತೆ ಕಾಯ್ದುಕೊಂಡದ್ದೇ ಆಯಿತು” ಎಂದುಕೊಂಡನು.
ಅಂದು ರಾತ್ರಿಯೇ ತನ್ನ ಆಲೋಚನೆಯನ್ನು ದೇವಿಗೆ ಹೇಳಿ ಅವಳ ಅಭಿಪ್ರಾಯವನ್ನು ತಿಳಿಯಬಯಸಿದನು. ಅವನ ಮಾತನ್ನು ಕೇಳಿ ದೇವಿ ”ಹೋಗಿಬರೋಣ ಮಹೀ, ನನಗೂ ಸ್ವಲ್ಪ ಬದಲಾವಣೆ ಬೇಕೆನ್ನಿಸುತ್ತಿದೆ. ಆದರೆ ತುಂಬಾ ದೂರದ ಪ್ರಯಾಣ ಬೇಡ. ದೇವರ ದರ್ಶನ ಮುಗಿಸಿ ಅಲ್ಲೇ ಸುತ್ತಮುತ್ತ ಒಡಾಡೋಣ ಸಾಕು. ನನಗೆ ನಿಮ್ಮ ಅರೋಗ್ಯ ಮುಖ್ಯ” ಎಂದಳು.
ಸ್ವಲ್ಪ ಹೊತ್ತು ಯೋಚಿಸಿ ಮಹೇಶ ” ಹೀಗೆ ಮಾಡಿದರೆ ಹೇಗೆ? ಮೊದಲು ಧರ್ಮಸ್ಥಳಕ್ಕೆ ಹೋಗಿ ದೇವರದರ್ಶನ ಪಡೆಯೋಣ. ನಂತರ ಸ್ವಲ್ಪ ದಿನ ಅಲ್ಲಿಗೆ ಸಮೀಪದಲ್ಲೇ ನನ್ನ ಸಹಪಾಠಿ ಗಣಪತಿ ಎಂಬುವನು ನನ್ನಹಾಗೇ ಕೃಷಿಕನಾಗಿದ್ದಾನೆ. ಅವರ ತೋಟದಲ್ಲಿಯೇ ಮನೆ ಕಟ್ಟಿಕೊಂಡಿದ್ದಾನೆ. ಜೊತೆಗೆ ಅವನು ನಾಟಿ ವೈದ್ಯನೂ ಆಗಿದ್ದಾನೆ. ಯೋಗಪಟು ಕೂಡ. ಜೋತಿಷ್ಯವನ್ನೂ ಕಲಿತಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ ಅವನು ಒಬ್ಬಂಟಿ ಬ್ರಹ್ಮಚಾರಿಯಾಗಿದ್ದಾನೆ. ಹೆತ್ತವರೊಡನೆ ನೆಲೆಸಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಬದುಕಿನ ಬಂಡಿಯನ್ನು ಆಸಕ್ತಿದಾಯಕವಾಗಿ ಎಳೆಯುತ್ತಿದ್ದಾನೆ. ಅವನಲ್ಲಿಗೆ ಹೋಗಿ ಕೆಲವು ದಿನವಿದ್ದು ಬರೋಣ” ಇವೆಲ್ಲ ಜಂಝಾಟ ಮುಗಿದ ಮೇಲೆ ಹಿಂದಿರುಗೋಣ ಎಂದನು ಮಹೇಶ.
”ಆಗಲಿ ನಿಮ್ಮ ಬಾಯಲ್ಲಿ ನಿಮ್ಮ ಸ್ನೇಹಿತರ ಹೆಸರನ್ನು ಬಹಳ ಸಾರಿ ಕೇಳಿದ್ದೇನೆ. ಆದರೆ ಅವರು ನಮ್ಮ ಮದುವೆಗೆ ಬರಲಿಲ್ಲ ಅಲ್ಲವೇ?” ಎಂದಳು ಮಾದೇವಿ.
”ಹೌದು ಆ ಸಮಯದಲ್ಲಿ ಯೋಗಕೆಂದ್ರದ ಕಡೆಯಿಂದ ಅವನು ವಿದೇಶಕ್ಕೆ ಹೋಗಿದ್ದ. ಬಂದನಂತರ ಫೋನ್ ಮಾಡಿ ನಮ್ಮನ್ನೇ ಅಲ್ಲಿಗೆ ಆಹ್ವಾನಿಸಿದ್ದಾನೆ. ಹಾಗಾದರೆ ಈಗಲೆ ಅವನಿಗೊಂದು ಮೆಸೇಜ್ ಹಾಕುತ್ತೇನೆ”ಎಂದು ಅವಳ ಉತ್ತರ ನಿರೀಕ್ಷಿಸಿದ ಮಹೇಶ.
”ಹಾಗೇ ಮಾಡಿ ಹೋಗಿ ಬರೋಣ” ಎಂದಳು ದೇವಿ.
”ಸರಿ ಈಗ ಮಲಗೋಣ ಸುಮಾರು ಹತ್ತು ಹನ್ನೆರಡು ದಿವಸಗಳಿಂದ ನಿನಗೆ ನಿದ್ರೆಗೆಟ್ಟು ನನ್ನನ್ನು ನೋಡಿಕೊಳ್ಳುವುದೇ ಆಯ್ತು. ಇವತ್ತಾದರೂ ಕಣ್ತುಂಬ ನಿದ್ರೆಮಾಡು ಗುಡ್‌ನೈಟ್” ಎಂದವನೇ ಹೊದಿಕೆ ಹೊದ್ದು ಮಲಗಿದ ಮಹೇಶ.
”ನನ್ನ ಬಳಿಗೇ ಬಾ” ಎಂದು ಕರೆಯುತ್ತಾನೆಂದು ನಿರೀಕ್ಷಿಸಿದ್ದ ದೇವಿಗೆ ಅವನ ವರ್ತನೆ ತೀವ್ರ ನಿರಾಸೆಯುಂಟುಮಾಡಿತು. ತಾನಾಗಿ ಮಂಚದ ಬಳಿ ಹೋಗಿ ಮಲಗಲು ಸ್ವಾಭಿಮಾನ ತಡೆಯಿತು. ಈ ಮಹಾರಾಯ ನನ್ನನ್ನೇನೆಂದು ತಿಳಿದುಕೊಂಡಿದ್ದಾನೆ. ಈಗಲೂ ಗೆಳತಿಯೆಂದೇ? ನಾನವರ ಪತ್ನಿಯೆಂಬುದನ್ನು ಸ್ವೀಕರಿಸುವುದು ಯಾವಾಗ? ವಿಚಿತ್ರ ಮನುಷ್ಯ ಎಂದುಕೊಳ್ಳುತ್ತಾ ದೀಪವಾರಿಸಿ ಎಂದಿನಂತೆ ದೀವಾನದ ಮೇಲೇ ಮಲಗಿದಳು.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40726
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಗೆಳತಿ ಹೇಮಾರವರಿಗೆ ಧನ್ಯವಾದಗಳು
ಬಹಳ ಸುಂದರವಾಗಿ ಸಾಗುತ್ತಿದೆ ಕಥೆ. ಮಹಿ -ದೇವಿಯ ನಡುವಿನ ದೂರ ಕಮ್ಮಿ ಆಗುವುದು ಯಾವಾಗ ಅನ್ನುವ ಕುತೂಹಲ.
ನಿಮ್ಮ ಪ್ರೀತಿ ಯ ಪ್ರತಿಕ್ರಿಯೆ ಗೆ ಹೃತ್ಪೂರ್ವಕವಾದ ಧನ್ಯವಾದಗಳು ನಯನ ಮೇಡಂ
ಸುಖವಾಗಿ ಸಂಸಾರವನ್ನು ಪ್ರಾರಂಭಿಸಬೇಕಿದ್ದ ಮದುಮಕ್ಕಳ ತೊಳಲಾಟ ನೈಜವಾಗಿ ಪ್ರತಿಬಿಂಬಿತವಾಗಿದೆ.
ಪ್ರೀತಿಯ ಪ್ರತಿಕ್ರಿಯೆ ಗೆ ಅನಂತ ಧನ್ಯವಾದಗಳು ಪದ್ಮಾ ಮೇಡಂ
ನವದಂಪತಿಗಳ ಮನದ ತೊಳಲಾಟ, ಮನೆಯವರ ಗಮನಕ್ಕೆ ಬಾರದಂತೆ ಮಹೇಶನ ಅನಾರೋಗ್ಯದ ಪರಿಸ್ಥಿತಿಯನ್ನು ದೇವಿ ನಿಭಾಯಿಸಿದ ರೀತಿ… ಎಲ್ಲವೂ ಸರಳ, ಸಹಜ! ಎಂದಿನಂತೆ ಕುತೂಹಲವನ್ನು ಉಳಿಸಿಕೊಳ್ಳುತ್ತಾ ಮುಂದುವರಿಯುತ್ತಿರುವ ಕಥೆಯು ಸೊಗಸಾಗಿ ಮೂಡಿಬರುತ್ತಿದೆ ನಾಗರತ್ನ ಮೇಡಂ.
ನಿಮ್ಮ.. ಪ್ರೇಮಪೂರ್ವಕ ಪ್ರತಿ ಕ್ರಿಯೆಗೆ ..ಆತ್ಮೀಯ ಧನ್ಯವಾದಗಳು ಶಂಕರಿ ಮೇಡಂ