ಕಾದಂಬರಿ : ಕಾಲಗರ್ಭ – ಚರಣ 15
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನೀವು ಯಾವ ಊರಿನವರು ತಾಯಮ್ಮ? ಇಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ. ನಿಮ್ಮಕುಟುಂಬದವರ ಬಗ್ಗೆ ಏನಾದರು ಹೇಳಬಹುದಾದರೆ ಹೇಳಿ” ಎಂದು ಪ್ರಶ್ನಿಸಿದಳು ದೇವಿ.
“ನಮ್ಮೂರು ಕಡೂರಿನ ಹತ್ತಿರ ಒಂದು ಸಣ್ಣ ಹಳ್ಳಿ. ನಮ್ಮ ತಂದೆ ರಾಮಭಟ್ಟರು, ತಾಯಿ ಗೋದಮ್ಮ. ಅವರಿಗೆ ಮೂರು ಮಕ್ಕಳಲ್ಲಿ ನಾನೇ ಹಿರಿಯವಳು. ಒಬ್ಬಳು ತಂಗಿ ಸರಸ, ತಮ್ಮ ತಿಪ್ಪಾಭಟ್ಟ. ತಕ್ಕಮಟ್ಟಿಗೆ ಓದುಬರಹ ಕಲಿತಿದ್ದೇವೆ. ಹೆತ್ತವರ ಕಾಯಕ ಅಡುಗೆ ಕೆಲಸ. ತಮ್ಮನು ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ತಂಗಿಯನ್ನು ಇದೇ ಊರಿನ ಹುಡುಗ ಮಾಧವನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅವರು ದೊಡ್ಡ ಧಣಿಗಳ ಹತ್ತಿರ ಲೆಕ್ಕಪತ್ರದ ವ್ಯವಹಾರ ಹಾಗೇ ತಮ್ಮಪ್ಪನ ಕಡೆಯಿಂದ ತಮ್ಮ ಭಾಗಕ್ಕೆ ಬಂದ ಮಳಿಗೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಬೆಳಗ್ಗೆ ನೀವು ಬಂದಾಗ ನನ್ನ ಜೋಡಿಯಿದ್ದನಲ್ಲ ಹುಡುಗ ಅವರ ಮಗ. ಅವರ ಕುಟುಂಬವೂ ಇಲ್ಲೇ ಇದೆ. ಅವರ ಮನೆಗೆ ಆಗಾಗ ಬರುತ್ತಿದ್ದ ದೊಡ್ಡಮ್ಮ ನನ್ನ ವಿಚಾರ ಕೇಳಿ ತಿಳಿದು ನನ್ನನ್ನು ಕರೆತಂದು ತಮ್ಮಲ್ಲಿಯೇ ಇರಿಸಿಕೊಂಡರು. ಮಡಿ, ಆಚಾರ ಎನ್ನುವುದೊಂದನ್ನು ಬಿಟ್ಟರೆ ಮಿಕ್ಕ ವಿಷಯಗಳಲ್ಲಿ ಯಾವ ತಕರಾರೂ ಇಲ್ಲ ಚೆನ್ನಾಗಿದ್ದೇನೆ” ಎಂದು ಹೇಳಿದರು ತಾಯಮ್ಮ.
“ಅಲ್ಲಮ್ಮ ನೀವು ಮದುವೆ ಆಗಲಿಲ್ಲವೇ?” ಕೇಳಿದಳು ದೇವಿ.
“ಅಮ್ಮಾ ಆ ದೇವರು ನನಗೆ ಎಲ್ಲ ಅಂಗಾAಗಗಳನ್ನು ಕೊಟ್ಟ. ಆದರೆ ಹೆಣ್ಣಿಗೆ ಮುಖ್ಯವಾಗಿ ಕೊಡಬೇಕಾದ ಅಂಗವನ್ನೇ ಮರೆತುಬಿಟ್ಟ. ನಾನು ಮೈನೆರೆದೇ ಇಲ್ಲಮ್ಮ. ಡಾಕ್ಟರುಗಳು ಪರೀಕ್ಷಿಸಿ ನೋಡಿ ನನ್ನ ಹಣೆಬರಹ ಇಷ್ಟೇನೆ ಎಂದು ಬಿಟ್ಟರು” ಎಂದು ನಿರಾಶೆಯ ನಿಟ್ಟುಸಿರುಬಿಟ್ಟರು ತಾಯಮ್ಮ. ದೇವಿಗೆ ಬಡಿಸಿ ಉಳಿದಿದ್ದ ಪದಾರ್ಥಗಳನ್ನು ಮತ್ತೊಂದು ಎಲೆಯಮೇಲೆ ಬಡಿಸಿಕೊಂಡು ಊಟಮಾಡಿ ಎಲೆಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಒಂದುಕಡೆ ಇಟ್ಟು ನೆಲವನ್ನು ಸ್ವಚ್ಛಮಾಡಿದರು. “ನೀವು ಸ್ವಲ್ಪ ಅಡ್ಡಾಡಿ ಮಲಗೋದಾದರೆ ಮಲಗಿಕೊಳ್ಳಿ. ಇಲ್ಲವೇ ಟಿ.ವಿ.ಇದೆ ನೋಡಿ, ಮತ್ತೆ ಬರುತ್ತೇನೆಂದು ಕೆಳಗಿಳಿದು ಹೋದರು.
“ಓ ! ಮಿಕ್ಕ ಪದಾರ್ಥಗಳನ್ನು ಕೆಳಗಡೆಗೆ ತೆಗೆದುಕೊಂಡು ಹೋಗಬಾರದೇನೊ, ಹಾಗೆಂದು ಹೇಳಿಕಳುಹಿಸಿರಬೇಕು. ಲಿಬರಲ್ ಎಂದರು ಗಣಪಣ್ಣ, ಮೊದಲಿಗಿಂತ ಈಗ ವಾಸಿಯೆಂದರು ತಾಯಮ್ಮ, ಹಾಗಾದರೆ ಮೊದಲು ಹೇಗಿದ್ದಿರಬಹುದು? ಪುಣ್ಯಕ್ಕೆ ಅವರ ಮಗ ಮದುವೆಯಾಗಿಲ್ಲ. ಬರುವ ಸೊಸೆ ಆಧುನಿಕ ಮನೋಭಾವದವಳಾಗಿದ್ದರೆ !” ಮನಸ್ಸಿನಲ್ಲೇ ಊಹಿಸಿಕೊಂಡು ನಗುತ್ತಾ ರೂಮಿನ ಬಾಗಿಲನ್ನು ತುಸು ಮುಂದಕ್ಕೆ ಹಾಕಿದಳು ದೇವಿ.
ಊರಿಗೆ ಫೋನ್ ಮಾಡಿ ಮನೆಯವರೊಡನೆ ಮಾತನಾಡಿದಳು ದೇವಿ. ಇನ್ನೂ ಮೂರ್ನಾಲ್ಕು ದಿನ ಇಲ್ಲೇ ಇದ್ದು ಬರುತ್ತೇವೆಂದು ಹೇಳಿದಳು. ತನ್ನ ಪರಿಸ್ಥಿತಿಯನ್ನು ಹೇಳದೆ ಮರೆಮಾಚಿದಳು. ಹಾಗೇ ಸ್ವಲ್ಪ ಹೊತ್ತು ಮಲಗೋಣವೆಂದುಕೊಂಡವಳು ಬೇಡಪ್ಪಾ ಹೊಸಜಾಗ, ಈಗ ಮಲಗಿದರೆ ರಾತ್ರಿ ನಿದ್ರೆ ಬರುವುದಿಲ್ಲ. ಆ ಬೇರೆ ರೂಮಿನಲ್ಲಿ ಒಬ್ಬಳೇ ಎಂದುಕೊಂಡು ಅಲ್ಲಿಯೇ ಇದ್ದ ಪುಸ್ತಕಗಳಲ್ಲಿ ಹುಡುಕಾಡಿ ಶಿವರಾಮಕಾರಂತರ ‘ಮರಳಿಮಣ್ಣಿಗೆ’ ಕಾದಂಬರಿಯನ್ನು ಎತ್ತಿಕೊಂಡು ಕಿಟಕಿಯ ಬಳಿ ಕುರ್ಚಿಹಾಕಿಕೊಂಡು ಓದಲು ಪ್ರಾರಂಭಿಸಿದಳು. ಅದರಲ್ಲಿ ಮಗ್ನಳಾಗಿದ್ದವಳು ಸಂಜೆ ತಾಯಮ್ಮ ಕಾಫಿ ತಂದು ಕೂಗಿದಾಗಲೇ ಬಾಹ್ಯಪ್ರಪಂಚಕ್ಕೆ ಬಂದದ್ದು.
“ ಓ ! ನೀವು ಮಲಗಲೇ ಇಲ್ಲವಾ? ಕುಡಿಯಿರಿ ಬಿಸಿಬಿಸಿ ಕಾಫಿ, ಜೊತೆಗೆ ಒಂದೆರಡು ಪಕೋಡ ಕೂಡ ತಂದಿದ್ದೇನೆ.” ಎಂದು ಬಟ್ಟಲನ್ನು ದೇವಿಯ ಕೈಗೆ ಕೊಟ್ಟಳು.
“ಮಧ್ಯಾನ್ಹ ಊಟಮಾಡಿ ಇಲ್ಲೇ ಕುಳಿತಿದ್ದೇನೆ. ಇವನ್ನು ತಿನ್ನಲು ಹಸಿವಿಲ್ಲ. ಒಂದು ಪಕೋಡ ತೆಗೆದುಕೊಳ್ಳುತ್ತೇನೆ. ಉಳಿದದ್ದನ್ನು ನೀವೇ ಮಗಿಸಬೇಕು” ಎಂದಳು ದೇವಿ.
“ಏ.. ಅದೇನಮ್ಮ, ಉಂಡಮೇಲೂ ಬಾಯಾಡಿಸುವಂಥದ್ದು. ಸಂಕೋಚಪಡಬೇಡಿ, ಎಳೆಯ ನುಗ್ಗೇಸೊಪ್ಪು, ಓವಿನಕಾಳಿನ ಪುಡಿ, ಕೊತ್ತಂಬರಿ ಬೆರೆಸಿ ಮಾಡಿದ್ದು. ಪೇಟೆಯಲ್ಲಿ ಇವೆಲ್ಲ ಅಣಿಯಾಗಿ ಎಲ್ಲಿ ಸಿಗುತ್ತೆ ತಿನ್ನಿ ಪರವಾಗಿಲ್ಲ” ಎಂದು ಜುಲುಮೆ ಮಾಡಿ ತಾನೂ ಒಂದೆರಡು ಪಕೋಡಾವನ್ನು ತೆಗೆದುಕೊಂಡರು ತಾಯಮ್ಮ.
ಇವರಿಬ್ಬರೂ ಗೆಳೆಯರು ಏನುಮಾಡುತ್ತಿದ್ದಾರೆಂದು ಕೇಳಿದಾಗ “ಅವರಿಬ್ಬರೂ ಊಟ ಮಗಿಸಿ ನಾಳೆಯ ಪೂಜೆಗೆ ವ್ಯವಸ್ಥೆ ಮಾಡಲು ಯೋಗಶಾಲೆ ನಡೆಯುವ ಜಾಗಕ್ಕೆ ಹೋದರು” ಎಂದು ಹೇಳಿದರು ತಾಯಮ್ಮ. ಜೊತೆಗೆ ಮಾರನೆಯ ದಿನ ಆಗಮಿಸುತ್ತಿರುವ ಗುರುಗಳ ಬಗ್ಗೆ ತಿಳಿಸುತ್ತಾ “ಅಮ್ಮಾ ಆ ಗುರುಗಳು ಬಹಳ ಜ್ಞಾನಿಗಳಂತೆ, ಹಿಮಾಲಯಕ್ಕೆಲ್ಲ ಹೋಗಿ ಅಲ್ಲೆಲ್ಲಾ ಕಲಿತು ಸಾಧನೆ ಮಾಡಿದ್ದಾರಂತೆ. ಅವರನ್ನು ನೀವೇನೂ ಕೇಳುವುದೇ ಬೇಡ, ಸುಮ್ಮನೆ ಎದುರಿಗೆ ನಿಂತರೆ ಸಾಕು ಇಲ್ಲವಾದರೆ ಫೋಟೋ ನೋಡಿದರೂ ಸಾಕು ಪಟಪಟಾಂತ ಹಿಂದಿನದ್ದು, ಈಗಿನದ್ದು, ಮುಂದಿನದ್ದೂ ಎಲ್ಲಾ ಭವಿಷ್ಯ ಹೇಳಿಬಿಡುತ್ತಾರಂತೆ. ಏನಾದರೂ ತೊಂದರೆಗಳಿದ್ದರೆ ಅವಕ್ಕೆ ಪರಿಹಾರವನ್ನೂ ಸೂಚಿಸುತ್ತಾರಂತೆ. ಆದರೆ ಅವರು ಬಹಳ ಕೋಪಿಷ್ಟರು. ಹೆಚ್ಚು ಪ್ರಶ್ನೆ ಮಾಡಬಾರದು, ಅತಿಯಾಗಿ ಮಾತನಾಡಬಾರದು, ಟೀಕೆ ಮಾಡಬಾರದು. ಈ ಮನೆಯವರಿಗೆಲ್ಲ ಅವರನ್ನು ಕಂಡರೆ ಬಹಳ ಗೌರವ. ನಾನಂತೂ ಒಂದೇ ಒಂದು ಬಾರಿ ಅವರೆದುರಿನಲ್ಲಿ ಹೋಗಿ ನಮಸ್ಕಾರ ಮಾಡಿದ್ದು ಬಿಟ್ಟರೆ ಮತ್ತೊಮ್ಮೆ ಹೋಗುವ ಧೈರ್ಯಮಾಡಿಲ್ಲ. ಅವರನ್ನು ನೋಡಿದರೇ ಭಯವಾಗುತ್ತದೆ. ಒಳ್ಳೆ ಸೈಂಧವನಂತಿದ್ದಾರೆ. ಅವರ ಕಣ್ಣಗಳು ತೀಕ್ಷ್ಣವಾದವು. ದೃಷ್ಟಿಯಲ್ಲೇ ಅಳೆದು ನುಂಗಿಬಿಡುತ್ತಾರೇನೋ ಎಂಬ ಅನುಭವವಾಗುತ್ತೆ. ನೀವು ಈ ಸಂದರ್ಭದಲ್ಲಿ ಅವರನ್ನು ಕಾಣುವ ಸಾಧ್ಯತೆಯೇ ಇಲ್ಲ ಬಿಡಿ. ವಿಪರೀತ ಆಚಾರವಂತರು. ಕಣ್ಣಿಗೆ ಕಾಣಿಸಿಕೊಳ್ಳಲೇಬೇಡಿ” ಎಂದರು ತಾಯಮ್ಮ.
ತಾಯಮ್ಮ ಹೇಳಿದ್ದನ್ನೆಲ್ಲ ಕೇಳುತ್ತಿದ್ದ ದೇವಿ “ಸದ್ಯ ನನಗೆ ಇಂಥದ್ದೆಲ್ಲ ಮೊದಲೇ ಇಷ್ಟವಿಲ್ಲದ್ದು. ಹೀಗೆ ಆಗಿದ್ದು ಒಂದು ರೀತಿಯಲ್ಲಿಒಳ್ಳೆಯದೇ. ಆದರೆ ನನ್ನ ಬಾಳಸಂಗಾತಿ ಮುಖ ತೋರಿಸದಿದ್ದರೆ ಅಷ್ಟೇ ಸಾಕು. ಅವನೆಷ್ಟೇ ಓದಿದ್ದರೂ, ಎಷ್ಟೇ ಆಧುನಿಕ ಮನೋಭಾವವುಳ್ಳವನಾದರೂ ಕೆಲವು ವಿಷಯಗಳಲ್ಲಿ ಅವರ ತಾಯಿಯಂತೆ, ತಕ್ಕ ಮಗ” ಎಂದು ಏನೂ ಆತಂಕವುಂಟು ಮಾಡುವಂತಾದ್ದು ಆಗದಿರಲಿ ಎಂದು ತನ್ನ ಮನದಲ್ಲೇ ಪ್ರಾರ್ಥನೆ ಸಲ್ಲಿಸಿದಳು.
ತಾಯಮ್ಮ ಕೆಳಗಿಳಿದುಹೋದಮೇಲೆ ಬಾಗಿಲು ಭದ್ರಪಡಿಸಿ ಮುಖತೊಳೆದು ಹೊರಗಿನ ಬಾಲ್ಕನಿಯಲ್ಲಿ ಅಡ್ಡಾಡುತ್ತಾ ತೋಟದ ಕೆಲಸ ಮುಗಿಸಿ ಹೊರಗೆ ಹೋಗುತ್ತಿದ್ದವರನ್ನು ನೋಡುತ್ತಿದ್ದವಳಿಗೆ ತಾಯಮ್ಮನ ಕರೆ ಕೇಳಿಸಿತು. ಮತ್ತೇಕೆ ಬಂದಳೆಂದುಕೊಳ್ಳುತ್ತಾ ಲಗುಬಗೆಯಿಂದ ಬಾಗಿಲು ತೆರೆದಳು ದೇವಿ.
“ಅಮ್ಮಾ ಬೇಗ ಕಿಟಕಿಯ ಬಾಗಿಲನ್ನು ಬಂದ್ ಮಾಡಿ. ಸೊಳ್ಳೆಗಳು ಬರದಂತೆ ಮಾಡಲು ಧೂಪ ಹಾಕೋಣವೆಂದು ಬಂದೆ” ಎಂದು ಕಬ್ಬಿಣದ ಬಾಣಲಿಯಲ್ಲಿ ನಿಗಿನಿಗಿ ಕೆಂಡವನ್ನು ತುಂಬಿ ಇಕ್ಕಳದಲ್ಲಿ ಹಿಡಿದು ಒಳಬಂದಳು ತಾಯಮ್ಮ. ಅದರ ಮೇಲೆ ಸಾಂಬ್ರಾಣಿ ಪುಡಿಯನ್ನು ಉದುರಿಸಿ ಎಲ್ಲಾ ಕಡೆ ಹರಡುವಂತೆ ಸಾಕಷ್ಟು ಹೊತ್ತು ಹೊಗೆಯೆಬ್ಬಿಸಿದಳು. ತದನಂತರ ಒಂದು ಮಣ್ಣಿನ ದೊಡ್ಡ ಹಣತೆಯಲ್ಲಿ ಏನೋತುಂಬಿ ತಂದು ಅದನ್ನು ಹಚ್ಚಿ ಕೊಠಡಿಯ ಒಂದು ಮೂಲೆಯಲ್ಲಿರಿಸಿದಳು.
“ತಾಯಮ್ಮ ಧೂಪಹಾಕಿದೆ, ಸರಿ ಆದರೆ ಇದೇಕೆ ಹಣತೆ? ಇಲ್ಲಿ ರಾತ್ರಿ ಕರೆಂಟೇನಾದರೂ ಹೋಗುತ್ತದೆಯೇ?” ಎಂದು ಪ್ರಶ್ನಿಸಿದಳು ದೇವಿ.
“ಇಲ್ಲಮ್ಮಾ ಇದು ಜಜ್ಜಿದ ಬೆಳ್ಳುಳ್ಳಿ, ಕರ್ಪೂರದ ಚೂರು ಜೊತೆಗೊಂದಿಷ್ಟು ಹಿಪ್ಪೆಯೆಣ್ಣೆ ಹಾಕಿ ದೀಪ ಹಚ್ಚಿದೆ. ಇದರಿಂದ ಹುಳು ಹುಪ್ಪಟೆ ಸೊಳ್ಳೆಗಳು ಹತ್ತಿರ ಬರದಂತೆ ತಡೆಯುತ್ತದೆ. ಬೆಳಗಿನ ತನಕ ಉರಿಯುತ್ತದೆ. ಇದು ತೋಟದ ಮನೆ ನೋಡಿ ಆದ್ದರಿಂದ ದಿನನಿತ್ಯದ ಕೆಲಸದಲ್ಲಿ ಇದೂ ಒಂದು. ನಾನು ಬಂದು ಕೂಗುವವರೆಗೆ ಬಾಗಿಲು ತೆರೆಯಬೇಡಿ” ಎಂದಳು ತಾಯಮ್ಮ.
“ಆಯಿತು ತಾಯಮ್ಮ, ರಾತ್ರಿಗೆ ಊಟ ತರಬೇಡಿ, ದೊಡ್ಡಮ್ಮ ಆಕ್ಷೇಪಣೆ ಮಾಡಿದರೆ ಒಂದು ಸಣ್ಣ ಲೋಟ ಹಾಲು ಮಾತ್ರ ತನ್ನಿ” ಎಂದಳು ದೇವಿ.
ಅವಳ ಮಾತಿಗೆ ಪ್ರತಿಯಾಗಿ ನಗುತ್ತಾ “ಹೆದರಬೇಡಿ, ಹಾಗೆ ಹೇಳಿಯೇ ತರುತ್ತೇನೆ” ಎಂದು ಕೆಳಗಿಳಿದುಹೋದಳು ತಾಯಮ್ಮ.
ತಾಯಮ್ಮ ಅತ್ತ ಹೋಗುತ್ತಿದ್ದಂತೆ ಕುಳಿತ ದೇವಿಯ ಕಣ್ಮುಂದೆ ಆ ದಿನ ಬೆಳಗಿನಿಂದ ನಡೆದ ಕಲಾಪಗಳೆಲ್ಲ ಕಣ್ಮುಂದೆ ಹಾಯ್ದವು. ಒಂದು ಹಗಲಂತೂ ಮುಗಿಸಿದ ಹಾಗಾಯಿತು. ಇನ್ನು ರಾತ್ರಿಯ ನಂತರ ಎರಡು ಹಗಲು ಮತ್ತು ರಾತ್ರಿಗಳು. ಈ ಗಂಡ ಎನ್ನಿಸಿಕೊಂಡವರು ಇದು ಹೊಸಜಾಗ, ನನ್ನ ಸ್ಥಿತಿಯ ಅರಿವಿದ್ದೂ ನನ್ನಿರುವಿಕೆಯನ್ನೇ ಮರೆತಂತೆ ವರ್ತಿಸುತ್ತಿದ್ದಾರಲ್ಲಾ ! ಛೇ.ಕೊನೆಯ ಪಕ್ಷ ಒಂದು ಫೋನ್ ಕಾಲ್, ಹೋಗಲಿ ಮೆಸೇಜ್, ನಾನೇ ಈತನಿಗಾಗಿ ಆತುರಪಟ್ಟೆನಾ? ಅವರು ಯಾವರೀತಿಯಲ್ಲಿ ಯೋಚಿಸಿ ಇದಕ್ಕೆ ಒಪ್ಪಿಗೆ ಕೊಟ್ಟರು. ಏಕೊ ಏನೋ.. ಎಲ್ಲವೂ ಗೊಂದಲದ ಗೂಡಾದಂತೆ ಅನ್ನಿಸತೊಡಗಿತು. ಛೇ..ನಾನೆತ್ತ ಆಲೋಚನೆ ಮಾಡುತ್ತಿದ್ದೇನೆ, ಈ ಮೊದಲು ನನ್ನ ವರಿಸಲು ಹಾರಹಿಡಿದು ಯಾರಾದರೂ ಸಾಲುಗಟ್ಟಿ ನಿಂತಿದ್ದರೆ? ಇಲ್ಲವಲ್ಲಾ, ಸನ್ನಿವೇಶಗಳು ಪೂರಕವಾಗಿಲ್ಲವಾದ್ದರಿಂದ ಹೀಗಾಗುತ್ತಿರಬಹುದು. ಎಂದು ತನಗೆ ತಾನೆ ಸಮಾಧಾನ ಪಟ್ಟುಕೊಂಡಳು. ಟಿ.ವಿ. ಹಾಕಿದ ಅವಳ ಕೈ ಚಾನಲ್‌ಗಳನ್ನು ಬದಲಾಯಿಸುತ್ತ ಹೋಯಿತೇ ವಿನಃ ಒಂದರಲ್ಲೂ ನೆಲೆಯಾಗಿ ನಿಲ್ಲಲಿಲ್ಲ. ಮನಕ್ಕೊಪ್ಪುವ ಕಾರ್ಯಕ್ರಮ ಸಿಗದೆ ಸ್ವಿಚ್‌ಆಫ್ ಮಾಡಿದಳು.
ಪಕ್ಕದಲ್ಲೇ ಇದ್ದ ಟೇಪ್‌ರೆಕಾರ್ಡರ್ ಕಾಣಿಸಿತು. ಅರೆ ! ಇದನ್ನು ಗಮನಿಸಲೇ ಇಲ್ಲವಲ್ಲಾ ಎಂದುಕೊಂಡಳು. ಮಹೇಶನ ಗೆಳೆಯರು ಬಹಳಷ್ಟು ವಿಭಾಗಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ ಎಂದುಕೊಂಡು ತನಗಿಷ್ಟವಾದ ತತ್ವಪದಗಳ ಕ್ಯಾಸೆಟ್ ಒಂದನ್ನು ಆರಿಸಿ ಕೇಳಲು ಪ್ರಾರಂಭಿಸಿದಳು.
ಮಧ್ಯೆ ಆಕೆಯ ಫೋನ್ ಸದ್ದುಮಾಡಿತು. ಹಾಡಿನ ಸದ್ದು ಕಡಿಮೆಮಾಡಿ ಅದನ್ನೆತ್ತಿಕೊಂಡಳು. ಹೊಸ ನಂಬರ್, ಹಲೋ ಎಂದಳು ಅತ್ತ ಕಡೆಯಿಂದ “ನಾನು ಪುಟ್ಟೀ ಗಣಪನ ತಾಯಿ, ಹೇಗಿದ್ದೀ? ಬೇಸರವಾಗುತ್ತಿದೆಯಾ? ಏನು ಮಾಡುವುದಮ್ಮಾ ಹೆಣ್ಣೆಂದ ಮೇಲೆ ಇವನ್ನೆಲ್ಲ ಅನುಭವಿಸಲೇಕೇಕು. ಇನ್ನೊಂದೆರಡು ದಿನವಷ್ಟೇ. ಈಗ ನಾನು ಫೋನ್ ಮಾಡಿದ್ದು ತಾಯಮ್ಮನ ಕೈಲಿ ಮಹೇಶನ ಬಟ್ಟೆಗಳಿರುವ ಕಿಟ್‌ಬ್ಯಾಗನ್ನು ಕಳುಹಿಸಿಕೊಡು. ನಾಳೆ ಬರುವ ಗುರುಗಳು ಕಟ್ಟಾ ನೇಮನಿಷ್ಠೆಯುಳ್ಳವರು. ಅವರ ಪೂಜಾದಿಗಳ ಸಿದ್ಧತೆಗೆ ಗಣಪನ ಜೊತೆ ಇವನೂ ಇರುತ್ತಾನಲ್ಲಾ, ಅದಕ್ಕೆ ಅವನು ಅಲ್ಲೆಲ್ಲ ಓಡಾಡಬಾರದು. ಮಧ್ಯಾನ್ಹ ಊಟಕ್ಕೆ ಬಂದಾಗಲೆ ನಿನಗೆ ಇದನ್ನು ತಿಳಿಸಲು ಹೇಳಿದ್ದೆ. ಆದರೆ ಅವ ಹೇಳಿದಂತೆ ಕಾಣಲಿಲ್ಲ. ಅದಕ್ಕೆ ನಾನೇ ಈ ಕೆಲಸ ಮಾಡಬೇಕಾಯ್ತು. ತಪ್ಪು ತಿಳಿಯಬೇಡಮ್ಮ. ರಾತ್ರಿ ಮಲಗುವಾಗ ತಾಯಮ್ಮನನ್ನು ಕಳುಹಿಸಿಕೊಡುತ್ತೇನೆ. ಭಯಪಡಬೇಡ. ಪರಿಸ್ಥಿತಿ ಹೀಗಾಗದಿದ್ದರೆ ನೀನೇ ಓಡಾಡಿಕೊಂಡು ಎಲ್ಲ ಕೆಲಸಗಳಲ್ಲೂ ಭಾಗಿಯಾಗಬಹುದಿತ್ತು. ಗುರುಗಳ ಆಶೀರ್ವಾದವನ್ನು ಪಡೆದುಕೊಳ್ಳಬಹುದಿತ್ತು. ನಿನಗೇನಾದರೂ ಬೇಕಾದರೆ ತಾಯಮ್ಮನ ಕೈಲಿ ಹೇಳಿಕಳುಹಿಸು ಅಥವಾ ಈ ನಂಬರಿಗೆ ಫೋನ್‌ಮಾಡು.” ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಸ್ವಿಚ್‌ಆಫ್ ಮಾಡಿಕೊಂಡರು.
ಹೂಂ ಇದಕ್ಕೇ ಇರಬಹುದು ಈ ಭೂಪರು ಫೋನ್ ಮಾಡಲು ಹಿಂದುಮುಂದು ನೋಡಿದ್ದಾರೆ. ಹೋಗಲಿ ಒಂದು ಮೆಸೇಜ್ ಹಾಕಬಹುದಿತ್ತು. ಇನ್ನು ಆ ಮಹಾಗುರು ಮಹಾಶಯರು ಬಂದುಹೋಗುವವರೆಗೂ ಇವರು ಇತ್ತ ತಲೆ ಹಾಕಲಾರರು ಎಂದೆನ್ನಿಸಿ ಅಳುಬಂತು. ಆದರೆ ಅಳುವುದಕ್ಕೂ ಹಿಂಜರಿದು ಬೇಡಪ್ಪಾ ಯಾವಘಳಿಗೆಯಲ್ಲಿ ತಾಯಮ್ಮ ತಲೆಹಾಕುತ್ತಾಳೋ. ಇದಕ್ಕೆ ಬೇರೊಂದು ಅರ್ಥ ಕಲ್ಪಿಸಿಕೊಳ್ಳಲು ಅವಕಾಶವಾದೀತು. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗಿದೆ. ಇಲ್ಲಿನ ರೀತಿ ರಿವಾಜುಗಳಿಗೆ ತಲೆಬಾಗಲೇಬೇಕು ಎಂದು ನಿಡಿದಾದ ನಿಟ್ಟುಸಿರು ಬಿಟ್ಟಳು. ತತ್ವಪದಗಳನ್ನು ಕೇಳುವುದನ್ನು ನಿಲ್ಲಿಸಿದಳು. ಮತ್ತೊಂದು ಫೋನ್ ಕರೆಬಂತು . ಅದು ಮಹೇಶನದು. ಬೆಳಗಿನಿಂದ ನಿರೀಕ್ಷೆಮಾಡಿ ನಿರಾಸೆಗೊಂಡಿದ್ದವಳಿಗೆ ಒಂದು ಕ್ಷಣ ಎಲ್ಲ ಅಸಮಧಾನಗಳನ್ನು ಮರೆತಳು. ಬಹಶಃ ಬಿಡುವಾಗಿರಲಿಕ್ಕಿಲ್ಲ ಎಂದು ಕಾಣುತ್ತದೆ ಎಂದು ಹಲೋ ಎಂದಳು. ಆದರೆ ಆಕಡೆಯಿಂದ ಕೇಳಿಸಿದ ಧ್ವನಿ ಗಣಪತಿಯದ್ದು. ಅವನು ಹೇಳಿದ್ದೂ ಅವನ ತಾಯಿ ಹೇಳಿದ ಮಾತುಗಳೇ. ಏನೂ ವಿಶೇಷವಿರಲಿಲ್ಲ. ಹಾಂ…ಹೂಂ ಎನ್ನುತ್ತಾ ಫೋನ್ ಇಟ್ಟಳು.
ಸ್ವಲ್ಪ ಹೊತ್ತಿನಲ್ಲೇ ತಾಯಮ್ಮ ಬಂದಾಗ ಏನನ್ನೂ ಪ್ರಶ್ನಿಸದೆ ಕುಳಿತಲ್ಲಿಂದಲೇ ಮಹೇಶನ ಕಿಟ್‌ಬ್ಯಾಗನ್ನು ತೋರಿಸಿದಳು. ತಾಯಮ್ಮನೂ ಪ್ರತಿಯಾಡದೆ ದೇವಿ ತೋರಿಸಿದ ಬ್ಯಾಗನ್ನು ತೆರೆದು ನೋಡಿ ಅದರಲ್ಲಿ ಮಹೇಶನ ಬಟ್ಟೆಗಳಷ್ಟೇ ಇರುವುದನ್ನು ಖಚಿತಪಡಿಸಿಕೊಂಡು ತೆಗೆದುಕೊಂಡು ಹೋದಳು.
ರಾತ್ರಿ ತಮ್ಮೆಲ್ಲ ಕೆಲಸಗಳನ್ನೂ ಪೂರೈಸಿ ಹಾಲು ಹಣ್ಣಿನೊಂದಿಗೆ ಮತ್ತೆ ಬಂದರು ತಾಯಮ್ಮ. ಮೊದಲು ಎಲ್ಲಿ ಕುಳಿತಿದ್ದಳೋ ಅಲ್ಲಿಯೇ ಕುಳಿತಿದ್ದ ದೇವಿಯನ್ನು ಕಂಡಳು. ಅವಳು ತನ್ನ ತಲೆಯನ್ನು ಹುದುಗಿಸಿಟ್ಟುಕೊಂಡುದ್ದನ್ನು ನೋಡಿ ಮನಸ್ಸು ಚರ‍್ರೆಂದಿತು. ಪಾಪ ಎಂದುಕೊಂಡು “ಅಮ್ಮಾ..ನೀವು ಹೇಳಿದಂತೆ ಊಟ ತಂದಿಲ್ಲ. ಅಮ್ಮನಿಗೆ ಹೇಳಿ ಹಾಲನ್ನು ಮಾತ್ರ ತಂದಿದ್ದೇನೆ. ಬಲವಂತ ಮಾಡಿ ಒಂದೆರಡು ಬಾಳೆಹಣ್ಣನ್ನು ಕೊಟ್ಟಿದ್ದಾರೆ. ನೀವು ಹಣ್ಣುತಿಂದು ಹಾಲುಕುಡಿಯಿರಿ. ನಾನು ಸೊಳ್ಳೆಪರದೆ ಕಟ್ಟಿ ನೀವು ಮಲಗಲು ಅಣಿಮಾಡಿಕೊಡುತ್ತೇನೆ. ಬೆಳಗಿನಿಂದ ಇಲ್ಲಿ ಕುಳಿತೇ ಕಾಲಹಾಕಿದ್ದೀರ. ಆಯಾಸ ಆಗಿರಬಹುದು. ಮಲಗಿ ನಿದ್ರೆ ಮಾಡಿ.” ಎಂದರು.
ತಲೆಯೆತ್ತಿ ದೇವಿ “ಓ.. ತಾಯಮ್ಮ ಬಂದಿರಾ, ಎಲ್ಲ ಕೆಲಸ ಮುಗಿಯಿತೇ? ನನಗೆ ಹಣ್ಣುಬೇಡಿ, ಬೆಳಗ್ಗೆ ನೋಡೋಣ. ಹಾಲು ಕೊಡಿ, ಕುಡಿದು ನಾನು ಮಲಗುವ ತಯಾರಿ ನಾನೇ ಮಾಡಿಕೊಳ್ಳುತ್ತೇನೆ. ಈ ವಿಷಯ ನಿಮ್ಮ ಆಶ್ರಯದಾತರ ಕಿವಿಗೇನಾದರೂ ಬಿದ್ದರೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ನಾಳೆ ಗುರುಗಳ ಆಗಮನ, ಪೂಜೆಗಳು ಇತ್ಯಾದಿಗಳಿವೆ. ಬೆಳಗಿನಿಂದ ನಿಮ್ಮ ಕೆಲಸಗಳ ಜೊತೆಗೆ ನನಗೋಸ್ಕರ ಹಲವು ಸಾರಿ ಹತ್ತಿ ಇಳಿದಿದ್ದೀರಿ. ನಿಮಗೂ ಸಾಕಾಗಿರುತ್ತೆ” ಎಂದಳು ದೇವಿ.
“ಹೆದರಬೇಡಿ ಅಮ್ಮಾ ನಾನಿದನ್ನೆಲ್ಲ ಹೇಳುವುದಿಲ್ಲ. ನಾನು ಗುರುಗಳ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವುದಿಲ್ಲ. ಒಂದೆರಡು ದಿವಸ ನಿಮ್ಮನ್ನು ನೋಡಿಕೊಳ್ಳುವುದಷ್ಟೇ ನನ್ನ ಕೆಲಸ.” ಎಂದರು ತಾಯಮ್ಮ.
“ಏನೆಂದಿರಿ ! ನೀವು ಅಲ್ಲಿಗೆ ಹೋಗುವುದಿಲ್ಲವೇ? ಅಡುಗೆ ಕೆಲಸ ಹೇಗೆ? ಮನೆಯವರು ಬಲವಂತ ಮಾಡುವುದಿಲ್ಲವೇ? ನಾನು ಬಂದು ಈ ರೀತಿ ಆಗಿರುವುದರಿಂದ ಹೀಗಾಯಿತೇ?” ಎಂದು ಬಡಬಡನೆ ಅಚ್ಚರಿಯಿಂದ ಪ್ರಶ್ನಿಸಿದಳು ದೇವಿ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40813
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ
ಕಥೆ ಸಾಗುತ್ತಿರುವ ರೀತಿ ಬಹಳ ಆಪ್ತವಾಗಿದೆ, ಸೊಗಸಾಗಿದೆ.
ನಿಮ್ಮ ಪ್ರತಿ ಕ್ರಿಯೆಗೆ ಧನ್ಯವಾದಗಳು ನಯನಮೇಡಂ
ಮಹೇಶನ ಗೆಳೆಯನ ಮನೆಯಲ್ಲಿ ದೇವಿಯ ಪಾಡು ನೋಡಿ ಅಯ್ಯೋ ಎನಿಸಿತು.. ಕುತೂಹಲಕಾರಿಯಾಗಿ ಸಾಗುತ್ತಿದೆ “ಕಾಲಗರ್ಭ”… ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ