ಕಾದಂಬರಿ : ಕಾಲಗರ್ಭ – ಚರಣ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬೆಂಗಳೂರಿಗೆ ಕಾರಿನಲ್ಲೇ ಹೊರಟ ಮಹೇಶ ಮನೆಯವರಿಂದ ಬೀಳ್ಕೊಂಡಾಗ ಮೌನವಾಗಿಯೇ ಕೈಬೀಸಿದ, ದೇವಿಯ ಕಡೆ ನೋಡಿದ. ಜೊತೆಯಲ್ಲಿ ಬಂದಿದ್ದರೆ ಚೆಂದಿತ್ತು. ಅವಳಿಗೆ ಹೇಳಲಿಲ್ಲವೆಂದೇಕೆ ಅಸಮಧಾನ? ಛೇ ಸೂಕ್ಷ್ಮ ಹುಡುಗಿ, ಭಾವುಕತೆ ಹೆಚ್ಚು. ಹಿರಿಯರಿರುವ ಮನೆಯಲ್ಲಿನ ಆಗುಹೋಗುಗಳು ಅವಳಿಗೇನೂ ಅಪರಿಚಿತವಾದುದೇನು ಅಲ್ಲ. ಆದರೆ ಹೀಗೇಕೆ? ಎಲ್ಲದಕ್ಕೂ ನಿರೀಕ್ಷೆ. ಗೆಳತಿಯಂತೆ ನೋಡುತ್ತಲೇ ಒಡನಾಟ ಬೆಳೆಸಿಕೊಂಡಿದ್ದ. ಆದರೆ ಅವನಿಗಿನ್ನೂ ಅವಳೊಡನೆ ಸರಸದಿಂದಿರಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ತಕ್ಕಂತೆ ಮದುವೆಯಾದಾಗಿನಿಂದ ಒದಗಿದ ಸನ್ನಿವೇಶಗಳೂ ಪೂರಕವಾಗದೆ ಪ್ರತಿರೋಧವನ್ನೊಡ್ಡುವಂತೆ ಬರುತ್ತಿವೆ. ನಾವಿಬ್ಬರೇ ಇದ್ದಾಗ ದೇವಿಗೆ ಹೇಳಬೇಕು. ನನಗೆ ಸ್ವಲ್ಪ ಟೈಂ ಕೊಡು ಅನ್ಯಥಾ ಬಾವಿಸಬೇಡವೆಂದು. ಜೊತೆಗೆ ಬಂದಿದ್ದರೆ ಸೆಮಿನಾರ್ ಟೈಂ ಮುಗಿದ ಮೇಲೆ ನಾನು ಓದಿದ ಕಾಲೇಜು, ಇಲ್ಲೇ ಸುತ್ತಮುತ್ತ ತಿರುಗಾಡಬಹುದಿತ್ತು. ಹಿರಿಯರಿರುವ ಮನೆಯಲ್ಲಿ ಎಷ್ಟು ಸಾರಿ ಕರೆಯಲಿ. ರೂಮಿಗೆ ಬಂದಿದ್ದರೆ ಹೇಳಬಹುದಿತ್ತು. ಬಿಮ್ಮನಿದ್ದುಬಿಟ್ಟಳು. ಹಂ..ಈ ಯೋಚನೆ ಸಾಕು, ದಿಢೀರನೆ ವಹಿಸಿರುವ ಜವಾಬ್ದಾರಿಯ ಕಡೆ ಗಮನ ಹರಿಸೋಣವೆಂದುಕೊಂಡನು. ತಾನು ಜೊತೆಗೆ ಕೊಂಡೊಯ್ದಿದ್ದ ಕಡತದಿಂದ ಫೈಲು ತೆಗದು ಓದತೊಡಗಿದ.

ಪ್ರತಿ ರಾತ್ರಿ ಕಮ್ಮಟಕ್ಕೆ ಬಂದಿದ್ದವರ ಪ್ರತಿಕ್ರಿಯೆ, ಅದು ನಡೆಯುತ್ತಿದ್ದ ರೀತಿ, ಅದಕ್ಕೆ ಸಂಬಂಧಿಸಿದಂತೆ ತನ್ನ ಅನುಭವವನ್ನು ಅತಿ ಉತ್ಸಾಹದಿಂದ ದೇವಿಯೊಡನೆ ಫೋನಿನಲ್ಲಿ ಹಂಚಿಕೊಳ್ಳುತ್ತಿದ್ದ. ಹಾಗೇ ಅವಳ ಅನುಪಸ್ಥಿತಿಯನ್ನು ನೆನಪಿಸಿಕೊಳ್ಳುತ್ತಿದ್ದ ಮಹೇಶ. ಅದನ್ನೆಲ್ಲ ಕೇಳುತ್ತಿದ್ದ ದೇವಿಯ ಮನದ ಮೂಲೆಯಲ್ಲಿ ತಾನೂ ಹೋಗಿದ್ದರೆ ಒಳ್ಳೆಯದಿತ್ತೇನೊ, ನಾನು ಸುಖಾಸುಮ್ನೆ ಮೌನ ತಾಳಿಬಿಟ್ಟೆ. ಪಾಪ ಮಹೀಗೆ..ಊರಿಗೆ ಬಂದಾಗಿನಿಂದ ಪುರುಸೊತ್ತಿಲ್ಲದಂತಾಗಿತ್ತು. ರಾತ್ರಿ ವಿಷಯವನ್ನು ಹಿರಿಯರ ಜೊತೆ ಮಾತನಾಡುವಾಗ ಹೇಳಿರಬಹುದು. ನಾನೀಗಷ್ಟೇ ಕುಟುಂಬದೊಳಗೆ ಬಂದವಳು. ವಿಚಾರ ಮಾಡದೆ ಅದೇ ಕಾರಣವನ್ನು ಮುಂದಿಟ್ಟುಕೊಂಡು ಸಾಧಿಸಿಬಿಟ್ಟೆನಲ್ಲಾ, ಬಂದ ಕೂಡಲೇ ಅವನ ಕ್ಷಮೆ ಕೇಳಬೇಕು. ಇನ್ನೆಂದಾದರೂ ಹೊರಟಾಗ ಬಾರೆಂದು ಕರೆದರೆ ಹೋಗಿಬಿಡಬೇಕು ಎಂದುಕೊಂಡಳು. ಹಾಗೇ ಅದನ್ನೆಲ್ಲ ಚಂದ್ರಿಕಳ ಬಳಿ ಹೇಳಿಕೊಂಡು ಪಶ್ಚಾತ್ತಾಪ ಪಟ್ಟಳು.

ಇದೇ ಸಮಯವೆಂದು ಚಂದ್ರಿಕಾ “ದೇವಿಯಕ್ಕಾ ನಾನಿಂಗೆ ಹೇಳುತ್ತಿದ್ದೇನೆಂದು ತಪ್ಪು ತಿಳಿಯಬೇಡಿ. ಮಹೇಶಣ್ಣನ ಬುದ್ಧಿಮತ್ತೆ ಸದುಪಯೋಗ ಪಡಿಸಿಕೊಳ್ಳುವ ಸಂದರ್ಭ ಒದಗಿ ಬರುತ್ತಿರುವಾಗ ಅದಕ್ಕವರು ಸ್ಫಂದಿಸಿದರೆ ಒಳಿತೆನ್ನುವ ಅಭಿಪ್ರಾಯ ನನ್ನದು. ನೀವೇನು ದಡ್ಡರಲ್ಲ, ನೀವು ಏನು ಮಾಡಿಕೊಳ್ಳಬೇಕೆಂಬ ಯೋಜನೆಗೆ ಮನೆಯವರೆಲ್ಲ ಅಸ್ತು ಎಂದಾಗ ನೋಡುವೆಯಂತೆ, ಹೇಗೆ ನಿಮ್ಮಿಬ್ಬರಲ್ಲೆ ಪೈಪೋಟಿಯಾಗುತ್ತೇಂತ.” ಎಂದಳು.

ಚಂದ್ರಿಕಾ ಹೇಳಿದ್ದನ್ನು ಕೇಳಿದ ದೇವಿಗೆ ಅದು ಕಿವಿಮಾತಿನಂತೆ ಮನಸ್ಸಿನೊಳಕ್ಕೆ ಹೊಕ್ಕಿತು. ಇವಳು ವಯಸ್ಸಿನಲ್ಲಿ ನನಗಿಂತ ಚಿಕ್ಕವಳು, ಅವಳು ಯೋಚಿಸುವಷ್ಟು ವಿಶಾಲವಾಗಿ ನಾನು ಯೋಚಿಸಲಾರೆ. ಸಣ್ಣ ಮನಸ್ಸಿನವಳಾಗಿಬಿಟ್ಟೆ. ಮುಂದೆ ಹೀಗಾಗದಂತೆ ನಡೆದುಕೊಳ್ಳಬೇಕು ಎಂದುಕೊಂಡಳು. ಸಿಟ್ಟು ಸೆಡವುಗಳನ್ನು ಬದಿಗಿಟ್ಟು ಆ ಮನೆ, ಈ ಮನೆಗಳಿಗೆ ಓಡಾಡುತ್ತಾ, ಕೆಲಸ ಕಾರ್ಯಗಳನ್ನು ಮಾಡುತ್ತ ಮೂರುದಿನಗಳನ್ನು ತಳ್ಳಿಯೇ ಬಿಟ್ಟಳು.

ನಾಳೆ ಮಹೀ ಹಿಂದಿರುಗುತ್ತಾರೆ. ಎಷ್ಟು ಹೊತ್ತಿಗೆ ಬರುತ್ತೀರಿ ಎಂದು ಕೇಳಬೇಕು ಎಂದುಕೊಳ್ಳುತ್ತಾ ಮಹಡಿಮೇಲಿದ್ದ ತಮ್ಮ ರೂಮಿಗೆ ಹೋದಳು ದೇವಿ. ಮಲಗಲು ಸಿದ್ಧಪಡಿಸಿಕೊಂಡಳು. ಮೊಬೈಲ್ ಕೈಗೆತ್ತಿಕೊಂಡಳು. ಅಷ್ಟರಲ್ಲಿ ಮಹೇಶನಿಂದಲೇ ಕರೆ ಬಂತು. ಓ ! ನೆನೆದವಳ ಮನದಲ್ಲಿ ಎಂದುಕೊಂಡು ಹಲೋ ಎಂದಳು. ಆ ಕಡೆಯಿಂದ ಮಾತುಗಳು “ದೇವಿ, ಕಮ್ಮಟಕ್ಕೆ ಬಂದಿದ್ದವರಲ್ಲಿ ನನ್ನ ಹಳೆಯ ಗೆಳೆಯನೊಬ್ಬನ ಊರು ಇಲ್ಲೇ ಸಮೀಪವಿದೆ. ಅವನು ತನ್ನೂರಿಗೆ ಬಂದು ಅಲ್ಲಿನ ಜನರಿಗೆ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವಂತೆ ಕೆಲವು ಸಲಹೆ ಸೂಚನೆಗಳನ್ನು ಕೊಡುವಂತೆ ಕೇಳಿಕೊಂಡಿದ್ದಾನೆ. ಇನ್ನೊಮ್ಮೆ ಬರುತ್ತೇನೆಂದರೆ ಅವನು ಒಪ್ಪುತ್ತಿಲ್ಲ. ಹೇಗಿದ್ದರೂ ಇಲ್ಲಿಯವರೆಗೆ ಬಂದಿದ್ದೀ, ಒಂದು ದಿವಸವಷ್ಟೇ ನಿನಗೆಲ್ಲ ಏರ್ಪಾಡು ಮಾಡಿಕೊಡುತ್ತೇನೆ, ನೀನು ಹೇಳಿಕೊಡುವ ರೀತಿ ಬಹಳ ಚೆನ್ನಾಗಿದೆ ಪ್ಲೀಸ್ ಎಂದು ಗೋಗರೆದ. ನನಗೆ ಅವನ ಕೋರಿಕೆಯನ್ನು ನಿರಾಕರಿಸಲಾಗುತ್ತಿಲ್ಲ. ಪ್ಲೀಸ್ ದೇವಿ ಇನ್ನೊಂದು ಅಥವಾ ಎರಡು ದಿನವಾಗಬಹುದು. ಅದರಿಂದ ನಾನು ಹಿಂದಿರುಗುವುದು ತಡವಾಗಬಹುದು, ನೀನು ಜಾಣೆ ಅರ್ಥ ಮಾಡಿಕೊಳ್ಳುತ್ತೀ ಎಂದುಕೊಳ್ಳುತ್ತೇನೆ. ದಯವಿಟ್ಟು ಸಿಟ್ಟುಮಾಡಿಕೊಳ್ಳದಿರು. ನಿನಗೆ ತೀರಾ ಬೇಡವೆನ್ನಿಸಿದರೆ ಹೇಳು, ಕೂಡಲೇ ಬಂದುಬಿಡುತ್ತೇನೆ. ಏನು ನಾನು ಅವನ ಊರಿಗೆ ಹೋಗಲೋ ಬೇಡವೋ ಹೇಳು” ಎಂದುತ್ತರವನ್ನು ನಿರೀಕ್ಷಿಸಿದ. ದೇವಿಗೆ ಒಂದು ಗಳಿಗೆ ಫೋನನ್ನು ಎತ್ತಿ ಬಿಸಾಡುವಷ್ಟು ರೋಷ ಉಕ್ಕಿಬಂತು. ಕೂಡಲೇ ಚಂದ್ರಿಕಾ ಹೇಳಿದ್ದ ಮಾತುಗಳು ನೆನಪಾದವು. ಆದಷ್ಟು ಸಹನೆ ತಂದುಕೊಂಡು ಶಾಂತಸ್ವರದಲ್ಲಿ ಗೆಳೆಯನ ಊರಿಗೆ ಹೋಗಿಬರಲು ಸಮ್ಮತಿಯಿತ್ತು ಕಾಲ್ ಕಟ್‌ಮಾಡಿದಳು.

ಈ ಸಂಗತಿ ಮಹೇಶನ ತಾಯಿಗೆ ಆಗಲೇ ಗೊತ್ತಾಗಿತ್ತೆಂಬ ಅಂಶ ಮಾತ್ರ ದೇವಿಗೆ ತಿಳಿಯಲಿಲ್ಲ. ಏಕೆಂದರೆ ಮಹೇಶ ತನ್ನ ತಾಯಿಗೆ ಫೋನ್ ಮಾಡಿ ತಾನು ದೇವಿಗೆ ಈ ವಿಷಯ ತಿಳಿಸಲು ಧೈರ್ಯ ಸಾಲುತ್ತಿಲ್ಲ, ನೀವೇ ಪರಿಸ್ಥಿತಿಯನ್ನು ವಿವರಿಸಿ ಹೇಳಿ ನಿಭಾಯಿಸಿ ಎಂದು ಕೇಳಿಕೊಂಡಿದ್ದ. ಆಗ ಗೌರಮ್ಮ “ನೋಡು ಮಗಾ, ಆ ಹುಡುಗಿ ನಿನ್ನೊಡನೆ ಜೀವನ ಪೂರ್ತಿ ಬಾಳ್ವೆ ಮಾಡಲು ಬಂದಿದ್ದಾಳೆ. ಅಪರಿಚಿತಳೂ ಅಲ್ಲ. ಆದರೆ ಹೀಗೆ ಅವಳಿಗೆ ನಮ್ಮ ಮೂಲಕ ವಿಷಯಗಳನ್ನು ತಿಳಿಸುವುದು ಸರಿಯಲ್ಲ. ಪಾಪ ಮೊನ್ನೆ ನಾನು ಕೇಳಿದ್ದಕ್ಕೆ ಆ ಮಗುವಿನ ಮುಖ ಚಿಕ್ಕದಾಗಿ ಏನು ಮಾತನಾಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿತ್ತು. ಅದೇ ವೇಳೆಗೆ ನೀನು ಬಂದು ತಿಪ್ಪೇ ಸಾರಿಸುವ ಕೆಲಸ ಮಾಡಿದೆ. ನನಗೆ ಇವೆಲ್ಲ ಕಣ್ಣಿಗೆ ಕಾಣಿಸಲಿಲ್ಲ ಎಂದುಕೊಂಡೆಯಾ? ಅದಕ್ಕೇ ನಿನ್ನ ಜೊತೆಯಲ್ಲಿ ಬರಲು ಅದು ಹಿಂತೆಗೆಯಿತು. ನೀನೇ ಫೋನ್ ಮಾಡಿ ಅವಳಿಗೆ ತಿಳಿಸು” ಎಂದು ತಾಕೀತು ಮಾಡಿದ್ದರು. ನಂತರವೇ ಅವನು ದೇವಿಗೆ ವಿಷಯ ತಿಳಿಸಿದ್ದು. ಎಂದಿನಂತೆ ಮಾರನೆಯ ದಿನ ಬೆಳಗ್ಗೆ ದೇವಿ “ಅತ್ತೇ ಮಹೀ ಇನ್ನೊಂದೆರಡು ದಿವಸ ಬಿಟ್ಟು ಬರುತ್ತಾರಂತೆ” ಎಂದು ಹೇಳಿದಳು.

ಅದನ್ನು ಕೇಳಿಸಿಕೊಂಡ ಗೌರಮ್ಮನವರು “ಓ ! ಹೌದಾ” ಎಂದು ಸೊಸೆಗೆ ಉತ್ತರ ಕೊಟ್ಟರಾದರೂ ಚಟುವಟಿಕೆಯಿಂದಿದ್ದ ಈ ಹುಡುಗಿಯನ್ನು ಮನೆಯಲ್ಲಿ ಕಟ್ಟಿಹಾಕಿದಂತಾಗಿದೆ. ಏನಾದರೂ ತೊಡಗಿಸಿಕೊಳ್ಳಲು ಹೇಳಬೇಕು. ಮನೆಗೆಲಸ ಇನ್ನೆಷ್ಟು ಹೊತ್ತು ಹಿಡಿದೀತು. ಅವರಿವರ ಬಾಯಿಗೆ ನಮ್ಮ ಮನೆಯ ಹೆಣ್ಣುಮಕ್ಕಳು ಆಹಾರವಾಗಬಾರದು ಎಂದು ಅವಳನ್ನು ಹೊಲಕ್ಕೆ ಹೋಗುವುದನ್ನು ತಪ್ಪಿಸಿದ್ದೇನೆ. ಚಂದ್ರಿಕಾಳಿಗಂತೂ ಅಪ್ಪಟ ಗೃಹಿಣಿಯ ಪಟ್ಟವನ್ನು ಕಟ್ಟಿಕೊಳ್ಳಲು ಇಷ್ಟವಿದ್ದಂತಿದೆ. ಇಲ್ಲೇ ಹುಟ್ಟಿ ಬೆಳೆದವಳೇನೋ ಎಂಬಂತೆ ಪ್ರತಿಯೊಬ್ಬರ ಮರ್ಜಿ ಅರಿತವಳಂತೆ ನಡೆದುಕೊಳ್ಳುತ್ತಿದ್ದಾಳೆ. ಮನೆಯ ಯಾವ ಕೆಲಸವಾದರೂ ಸರಿ ಹಿಂತೆಗೆಯದೇ ನಿಭಾಯಿಸುವ ಹುಮ್ಮಸ್ಸು ಇದೆ. ನನ್ನ ಸೊಸೆ ದೇವಿ ಮನೆಗೆಲಸ ಬೊಗಸೆಗಳನ್ನು ತಾತ್ಸಾರ ಮಾಡದಿದ್ದರೂ ಬೇರೇನೋ ಸಾಧಿಸುವ ಛಲಗಾತಿ. ಇದನ್ನು ಎಷ್ಟೋಸಾರಿ ಅವಳ ತವರಿನ ಕಡೆಯವರಾದ ನನ್ನ ಗೆಳತಿ ಬಸಮ್ಮನ ಬಾಯಿಂದ ಕೇಳಿದ್ದಿದೆ. ಮದುವೆಯಾಗಿ ಬೇರೆ ಮನೆಗೆ ಹೋಗುವವಳು. ಅವರ ಮರ್ಜಿ ಹೇಗಿರುತ್ತದೆಯೋ ಅದಕ್ಕೇ ನಾವೇನೂ ಹೆಚ್ಚು ಉತ್ತೇಜನ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಳು. ಈಗ ಅದರ ಬಗ್ಗೆ ಆಲೋಚಿಸಿದರೆ.. ಮಗ ಹಿಂದಿರುಗಿ ಬಂದಮೇಲೆ ಈ ಬಗ್ಗೆ ಮಾತನಾಡಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದರು. ಹೀಗೇ ಆಲೋಚನಾ ಲಹರಿ ಹರಿಸುತ್ತಾ ಬೆಳಗಿನ ಕೆಲಸ ಕಾರ್ಯಗಳು ಏನಾಗಿವೆ? ಏನಾಗಬೇಕಾಗಿದೆ ಎಂದು ಗಮನಿಸುತ್ತಿದ್ದಾಗ ಗಂಗಾಧರಪ್ಪನವರಿಂದ “ಗೌರಾ” ಎಂಬ ಕರೆ ಕೇಳಿಸಿತು.

ತಮ್ಮ ಆಲೋಚನೆಗಳನ್ನು ಬದಿಗಿರಿಸಿ ರೂಮಿಗೆ ಬಂದ ಗೌರಮ್ಮ “ಏನು ಕರೆದಿರಲ್ಲಾ? ಏನಾದರೂ ಬೇಕಿತ್ತಾ?” ಎಂದು ಕೇಳಿದರು.
ಹೆಂಡತಿಯ ಪ್ರಶ್ನೆಗೆ ಗಂಗಾಧರಪ್ಪ “ಮಗನಿಗೆ ರಾತ್ರಿ ನಾನು ಹೇಳಿದ್ದ ಸಂಗತಿಯ ಬಗ್ಗೆ ಕೇಳಲು ನಿನ್ನ ಕರೆದೆ. ಆ ಮಗು ಬೇಸರ ಮಾಡಿಕೊಂಡಿದ್ದಾಳಾ ಹೇಗೆ?” ಎಂದರು ಮೆಲುದನಿಯಲ್ಲಿ.

“ಓ ಅಷ್ಟೇನಾ ! ನನ್ನ ಮಾತು ಕೆಲಸ ಮಾಡಿದೆ. ದೇವೀನೇ ಬೆಳಗ್ಗೆ ನನಗೆ ಅತ್ತೇ ಮಹೀ ಇನ್ನೊದೆರಡು ದಿನಬಿಟ್ಟು ಬರುತ್ತಾರಂತೆ ಎಂದು ಹೇಳಿದಳು. ಅದಕ್ಕೆ ಕಾರಣವನ್ನೂ ತಿಳಿಸಿದಳು. ನಾನಂತೂ ನನಗೆ ಇದು ಮೊದಲೇ ಗೊತ್ತಿತ್ತೆಂದು ಅಪ್ಪಿತಪ್ಪಿಯೂ ತೋರಿಸಿಕೊಳ್ಳಲಿಲ್ಲ” ಎಂದು ಮೆಲುದನಿಯಲ್ಲೇ ಉತ್ತರಿಸಿದರು. ಹಾಗೇ ಈಗತಾನೇ ತಮ್ಮ ತಲೆಯೊಳಗೆ ಬಂದ ಆಲೋಚನೆಯನ್ನು ಪತಿಯೊಡನೆ ಹಂಚಿಕೊಂಡಳು.
ಹೆಂಡತಿಯ ಮಾತನ್ನು ಕೇಳಿದ ಗಂಗಾಧರಪ್ಪ “ಹೌದು ಗೌರಾ ನನ್ನ ಗೆಳೆಯನ ಬಾಯಲ್ಲೂ ತನ್ನ ಮೊಮ್ಮಗಳ ಬುದ್ಧಿವಂತಿಕೆ ಬಗ್ಗೆ ಅನೇಕ ಬಾರಿ ಕೇಳಿದ್ದೇನೆ. ಮಹೇಶನನ್ನೊಂದು ಮಾತು ಕೇಳಿ ಒಪ್ಪಿದರೆ ನಾವೆಲ್ಲ ಅವಳ ಪ್ರಯತ್ನಗಳಿಗೆ ಒತ್ತಾಸೆಯಾಗಿ ನಿಲ್ಲೋಣ. ಮುಂದೆ ಮಕ್ಕಳು ಮರಿಯಾದರೂ ಎಲ್ಲವನ್ನೂ ನಿಭಾಯಿಸುವ ಛಾತಿಯಿದೆ ಅವಳಿಗೆ. ಮೇಲಾಗಿ ಮನೆಯಲ್ಲಿ ನೀನೂ, ಚಂದ್ರಾ, ಮಂಗಳಾ ಇದ್ದೀರಲ್ಲಾ ನೋಡೋಣ. ಈಗ ಆ ಯೋಚನೆಬಿಡು, ನಾನೀಗ ಗೆಳೆಯನ ಮನೆಗೆ ಹೊರಟಿದ್ದೇನೆ. ಈಗಲೇ ಹೋಗಲಾ ಅಥವಾ ಸಂಜೆಗೆ ಹೋಗಲಾ?” ಎಂದು ಕೆಳಿದರು.

“ಮುಂದಿನವಾರ ಪಕ್ಕದೂರಿನಲ್ಲಿ ನಡೆಸಲು ಒಪ್ಪಿಕೊಂಡಿರುವ ಮಹಾಭಾರತದಲ್ಲಿನ ‘ಕೃಷ್ಣಸಂಧಾನ’ ವಾಚನದ ಕಾರ್ಯಕ್ರಮ ತಾನೇ? ಮಾಡಿ ಆದರೆ ಈಗಲೇ ಹೋದರೆ ಊಟಕ್ಕೆ ನಿಲ್ಲಿಸಿಕೊಂಡು ಬಿಡುತ್ತಾರೆ. ಇಲ್ಲಿ ಮಹಿಯೂ ಇಲ್ಲ, ಸುಬ್ಬು ಜಮೀನಿನ ಬಳಿಯಿದ್ದಾನೆ. ನೀವೂ ಅಲ್ಲಿಗೆ ಹೋದರೆ ತೀರಾ ನಾವುನಾವೇ ಆಗಿಬಿಡುತ್ತೇವೆ. ಸಂಜೆಗೇ ಹೋಗಿ”ಎಂದರು ಗೌರಮ್ಮ.
“ಆಯಿತು ಬಿಡು ಗೌರಾ, ಹಾಗೇ ಮಾಡುತ್ತೇನೆಂದು” ಆ ದಿನದ ಪೇಪರನ್ನು ಕೈಗೆತ್ತಿಕೊಂಡು ವೆರಾಂಡಾಕ್ಕೆ ಬಂದು ಕುರ್ಚಿಯಮೇಲೆ ಕುಳಿತರು ಗಂಗಾಧರಪ್ಪ.
ಗೌರಮ್ಮನವರು ರೂಮಿನಿಂದ ಹೊರಬಂದು ಬಿಟ್ಟಿದ್ದ ಕೆಲಸವನ್ನು ಗಮನಿಸಲು ಅತ್ತ ನಡೆದರು.

ಇನ್ನೊಂದೆರಡು ದಿನಬಿಟ್ಟು ಮಹೇಶ ಊರಿಗೆ ಹಿಂತಿರುಗಿದ. ರಾತ್ರಿ ಊಟದ ನಂತರ ತಾನು ಹೋಗಿದ್ದ ಕಾರ್ಯಾಗಾರದ ಚಟುವಟುಕೆಗಳ ಬಗ್ಗೆ, ಅವುಗಳ ಅನುಕೂಲತೆಗಳನ್ನು ಎಲ್ಲರೊಡನೆ ಹಂಚಿಕೊಂಡನು. ಈ ತರಹದ ಕಾರ್ಯಾಗಾರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು ರೈತಾಪಿ ಜನಗಳಲ್ಲಿ ತಿಳಿವಳಿಕೆ ಮೂಡಿಸಬೇಕು. ಅವರಲ್ಲಿ ಮನೆಮಾಡಿರುವ ಅಂಧಾನುಕರಣೆ, ಮೌಢ್ಯತೆಗಳನ್ನು ಹೋಗಲಾಡಿಸಬೇಕು. ಸರ್ಕಾರ ಕೊಡುವ ಸವಲತ್ತುಗಳನ್ನು ವ್ಯರ್ಥವಾಗದಂತೆ ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಅಂಶಗಳನ್ನು ಅವರಿಗೆ ಮನಮುಟ್ಟುವಂತೆ ತಿಳಿಸಿಕೊಡಬೇಕು. ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣಗಳು ಬಂದಿವೆ. ಅವುಗಳನ್ನು ಉಪಯೋಗಿಸುವ ಬಗೆ ಮತ್ತು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ರೀತಿಗಳನ್ನು ತಿಳಿಸುತ್ತಲೇ ಇತರೆ ಉತ್ಪನ್ನಗಳ ಬಗ್ಗೆಯೂ ತಿಳಿಸಿ ಆಸಕ್ತಿ ಮೂಡಿಸಬೇಕು ಎಂದು ಹೇಳಿದ.

ಅದೆಲ್ಲವನ್ನು ಆಲಿಸಿದ ದೇವಿ “ಓ ಮಹೀ ನೀವು ಇದಕ್ಕಾಗಿ ಊರೂರು ತಿರುಗುವ ಲೋಕಸಂಚಾರಿ ಆಗುತ್ತೀರಾ?” ಎಂದು ನಗೆಚಟಾಕಿ ಹಾರಿಸಿದಳು.
ಅವಳ ಮಾತಿಗೆ ಮನೆಯವರೆಲ್ಲರೂ ನಕ್ಕರು. ಅಗ ಮಹೇಶ “ಕಲಿಕೆಗೆ ಕೊನೆಯಿಲ್ಲ. ಆದರೆ ಕಲಿತಿದ್ದನ್ನು ಇನ್ನೊಬ್ಬರಿಗೆ ತಿಳಿಸಿ ಹೇಳಬೇಕು. ಅದಕ್ಕೀಗ ಸಮಯ ಬಂದಿದೆ. ಜನ ಬಯಸಿದರೆ ನೀನು ಹೇಳಿದಂತೆ ಯಾಕಾಗಬಾರದು? ದೇವಿ” ಎಂದನು.

ಮಹೇಶನ ತಾಯಿ ಗೌರಮ್ಮನವರು “ಸರಿಯಪ್ಪಾ ಅದನ್ನು ಮಾಡು, ಹಾಗೇ ಕಟ್ಟಕೊಂಡವಳ ಬಗ್ಗೆ ಕೂಡ ಕಾಳಜಿಯಿರಲಿ. ನೀನು ಲೋಕೋದ್ಧಾರಕ್ಕೆಂದು ಅಲೆಯುತ್ತಿದ್ದರೆ ಪಾಪ ಈ ಮಗು ಏನು ಮಾಡಬೇಕು? ಇನ್ನೂ ಮದುವೆಯಾಗಿ ನೆಟ್ಟಗೆ ಒಂದೆರಡು ತಿಂಗಳೂ ಆಗಿಲ್ಲ. ಅಕೆಗೂ ಆಸಕ್ತಿಗಳಿರುತ್ತವೆ. ಅದು ನಿನಗೂ ತಿಳಿಯದ್ದೇನಲ್ಲ, ಅದರ ಬಗ್ಗೆ ನೀನು ಏನಾದರೂ ಮಾಡು” ಎಂದು ಒಂದು ಗುಳಿಗೆ ಬಿಟ್ಟರು. ಹೆಂಡತಿಯ ಮಾತಿಗೆ ಗಂಗಾಧರಪ್ಪನವರೂ ದನಿಗೂಡಿಸಿದರು.
ಅನಿರೀಕ್ಷಿತವಾಗಿ ಬದಲಾದ ಈ ಮಾತುಗಳಿಂದ ಬೆರಗಾದ ದೇವಿ ತನ್ನವನು ಏನು ಹೇಳುತ್ತಾನೋ ಎಂದು ಉಸಿರು ಬಿಗಿಹಿಡಿದು ಮಹೇಶನ ಪ್ರತಿಕ್ರಿಯೆಗಾಗಿ ಕಾದಳು. ಅಲ್ಲಿಯೇ ಇದ್ದ ಸುಬ್ಬು, ಚಂದ್ರಿಕಾ, ಮಂಗಳಾ ಕೂಡ ಕಾತುರದಿಂದ ಕಾಯುತ್ತಿದ್ದರು.

ಹೆತ್ತವರಿಗೆ ಸೊಸೆಯ ಬಗ್ಗೆ ಇರುವ ಮಮತೆಯನ್ನು ಕಂಡು ಮಹೇಶನಿಗೂ ಹೃದಯ ತುಂಬಿಬಂತು. ಹಿಂದೆ ಬಾಳಗೆಳತಿಯಾಗಿದ್ದವಳನ್ನು ಬಾಳಿನ ಸಂಗಾತಿಯಾಗಿ ಮಾಡಿಕೊಂಡೆ. ಆದರೂ ಏಕೋ ಸಹಜವಾಗಿ ಅವಳೊಡನೆ ಸ್ಪಂದಿಸಲಾಗುತ್ತಿಲ್ಲ. ಇನ್ನೂ ತಾವಿಬ್ಬರೂ ದೂರವಾಗಿಯೇ ಇದ್ದೇವೆ. ಏಕೆ ಹೀಗಾಗುತ್ತಿದೆ? ತಿಳಿಯದಾಗಿದೆ. ತನ್ನ ಮನಸ್ಸನ್ನು ಹದಗೊಳಿಸಿಕೊಳ್ಳಬೇಕು.ಅಲ್ಲಿಯವರೆಗೆ ದೇವಿಯನ್ನು ಯಾವುದಾದರೂ ವೃತ್ತಿಯಲ್ಲಿ ತೊಗಿಸಿಕೊಳ್ಳುವಂತೆ ಮಾಡುವುದು ಉತ್ತಮ ಎಂದುಕೊಂಡನು.

“ಏನಪ್ಪಾ ಮಗನೇ? ಮೌನಿಯಾದೆ. ಹೆಂಡತಿಗೆ ಏನಾದರೂ ಪ್ರಾರಂಭಿಸಲು ಅನುಮತಿ ಇತ್ತರೆ ನನ್ನನ್ನೂ ಮೀರಿಸಿಬಿಟ್ಟಾಳೆಂಬ ದಿಗಿಲೇ?” ಎಂದು ಗೌರಮ್ಮ ಛೇಡಿಸಿದರು.
“ಛೇ..ಛೇ..ಹಾಗೇನಿಲ್ಲಮ್ಮ, ಆಕೆ ಹಲವಾರು ಕ್ಷೇತ್ರದಲ್ಲಿ ತರಬೇತಿ ಪಡೆದಿದ್ದಾಳೆ. ಯಾವುದನ್ನು ಆರಿಸಿಕೊಂಡರೆ ನಿಭಾಯಿಸಬಹುದು ಎಂಬುದು ನನ್ನ ಯೋಚನೆ. ಹಾ ! ಹೇಳು ದೇವಿ, ನೀನು ಯಾವುದನ್ನು ಮಾಡಬಲ್ಲೆ ಎಂದು ತಿಳಿಸಿದರೆ, ಅದಕ್ಕೆ ಬೇಕಾದ ನೆರವನ್ನು ನಾನು ನೀಡಲು ಸಿದ್ಧ” ಎಂದು ಕೇಳಿದನು ಮಹೇಶ.
ಈ ಮುಂಚೆಯೇ ರೂಪಿಸಿಕೊಂಡಿದ್ದ ತನ್ನ ಮನಸ್ಸಿನ ಯೋಜನೆ ಇಷ್ಟು ಬೇಗ ಹೀಗೆ ಈಡೇರಬಹುದೆಂದು ಕಲ್ಪನೆಯಲ್ಲಿಯೂ ಇರದಿದ್ದ ದೇವಿಗೆ ಇವರೆಲ್ಲರ ಉತ್ತೇಜನ ಕೇಳಿ ಹಾಲು ಕುಡಿದಷ್ಟು ಸಂತೋಷವಾಯಿತು. ಸುಸಂದರ್ಭ ಬಿಡಬಾರದು ಎಂದು ತನ್ನ ವಿವಾಹಕ್ಕೆ ಮುಂಚೆ ಸ್ವಸಹಾಯ ಸಂಘಗಳ ಜವಾಬ್ದಾರಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ತಾನು ಅರ್ಜಿ ಹಾಕಿದ್ದದ್ದು ಅದಕ್ಕೆ ಬಂದಿದ್ದ ಉತ್ತರ, ನಂತರದ ವಿಚಾರ ಎಲ್ಲವನ್ನೂ ಚಾಚೂ ತಪ್ಪದೆ ಒಂದೇ ಉಸಿರಿಗೆ ಹೇಳಿ ತನ್ನವನ ಉತ್ತರ ನಿರೀಕ್ಷಿಸಿದಳು.

ಹೆಂಡತಿಯು ಹೇಳಿದ್ದೆಲ್ಲವನ್ನೂ ಆಲಿಸಿ ಮಹೇಶ “ದೇವಿ, ಈ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಅನೇಕ ಯೋಜನೆಗಳೇನೋ ಇವೆ. ಅವುಗಳಿಗಾಗಿ ಸರ್ಕಾರದಿಂದ ಸಹಾಯಧನವನ್ನೂ ನೀಡುತ್ತಾರೆ. ಮಾರ್ಕೆಟಿಂಗೂ ತಕ್ಕಮಟ್ಟಿಗೆ ಒದಗಿಸಬಲ್ಲರು. ಎಲ್ಲವೂ ಸರಿ ಆದರೆ ಬಹಳ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ. ಅದರ ಬದಲು ನೀನೇ ಲೈಸೆನ್ಸ್ ಪಡೆದು ಸ್ವಂತ ಉದ್ದಿಮೆಯೊಂದನ್ನು ಪ್ರಾರಂಭ ಮಾಡಿದರೆ ಹೇಗೆ? ಹತ್ತಿ ನಮ್ಮಲ್ಲೇ ಬೇಕಾದಷ್ಟು ಬೆಳೆಯುತ್ತದೆ. ಅದನ್ನು ಸ್ವಚ್ಛ ಮಾಡುವ ಯಂತ್ರವೂ ಇದೆ. ಅದರಿಂದ ಪೂಜೆಗೆ ಬೇಕಾಗುವ ಹಾರಗಳು, ಬತ್ತಿಗಳು, ಗೆಜ್ಜೆ ವಸ್ತ್ರಗಳು, ತುಪ್ಪದಬತ್ತಿಗಳು ಇಂತಹವನ್ನು ತಯಾರಿಸಿ ಅಂಗಡಿಗಳಿಗೆ, ಪೂಜಾ ಸಾಮಾನು ಮಾರುವ ಮಳಿಗೆಗಳಿಗೆ, ದೇವಾಲಯಗಳಿಗೆ ಸಪ್ಲೈ ಮಾಡಬಹುದು. ಮನೆಗಳಲ್ಲಿಯೇ ಪಾಕಪ್ರವೀಣೆಯರಿದ್ದಾರೆ. ಅವರುಗಳ ಸಲಹೆಗಳನ್ನು ಪಡೆದುಕೊಂಡು ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳಾದ ಹುಳಿಪುಡಿ, ಚಟ್ನಿಪುಡಿ, ರಸಂಪುಡಿ, ಬಿಸಿಬೇಳೆಬಾತಿನ ಪುಡಿ, ವಾಂಗಿಬಾತಿನ ಮಸಾಲೆ, ಹಪ್ಪಳ ಸಂಡಿಗೆಗಳು, ಉಪ್ಪಿನಕಾಯಿಗಳು ಇತ್ಯಾದಿಗಳನ್ನು ದೊಡ್ಡಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಕಳುಹಿಸಬಹುದು. ಇವೆಲ್ಲವನ್ನು ಮಾಡಲು ನಮ್ಮಲ್ಲೆ ಜಾಗವಿದೆ. ನಾವೇನೂ ಖಾಲಿಯಿರುವ ಮನೆಗಳನ್ನು ಬಾಡಿಗೆಗೆ ಕೊಡುವ ಆಲೋಚನೆಯಿಲ್ಲ. ಬಂದು ಹೋಗುವವರ ಅನುಕೂಲಕ್ಕೆಂದು ಮೊದಲಿನಿಂದಲೂ ಹಾಗೇ ಉಳಿಸಿಕೊಳ್ಳಲಾಗಿದೆ. ನಮ್ಮಲ್ಲೆ ಬೆಳೆಯುವ ದವಸ ಧಾನ್ಯಗಳನ್ನು ಶೇಖರಿಸಿ ಇಟ್ಟುಕೊಳ್ಳುವುದಕ್ಕಾಗಿ ಎಂದು. ಖಾಲಿ ಮನೆಗಳಲ್ಲಿ ನಿಮ್ಮ ಕೆಲಸಗಳಿಗೆಂದು ಒಂದೆರಡನ್ನು ಧಾರಾಳವಾಗಿ ಬಳಸಿಕೊಳ್ಳಬಹುದು. ಲೈಸೆನ್ಸ್ ಮತ್ತು ಜಾಹೀರಾತುಗಳನ್ನು ನಾನು ವ್ಯವಸ್ಥೆ ಮಾಡಿಕೊಡುತ್ತೇನೆ. ಸುತ್ತಮುತ್ತಲಿರುವ ಆಸಕ್ತ ಮಹಿಳೆಯರಿಗೆ ತರಬೇತಿ ಕೊಟ್ಟು ಕೆಲಸ ಪ್ರಾರಂಭಿಸಬಹುದು. ಮೊದಲು ಮೊದಲು ಸ್ವಲ್ಪ ಕಷ್ಟವಾಗಬಹುದು. ಕ್ರಮೇಣ ಎಲ್ಲವು ಸರಿಹೋಗುತ್ತದೆ. ಹೆಚ್ಚು ಜನರ ಸಂಪರ್ಕವಿರುವುದರಿಂದ ಮಾರ್ಕೆಟಿಂಗ್ ಕಷ್ಟವಾಗಲಾರದು. ಯಾವುದಕ್ಕೂ ಯೋಚಿಸಿ ಹೇಳು” ಎಂದು ಸಲಹೆ ನೀಡಿದ.

ಇದು ದೇವಿಯಾದಿಯಾಗಿ ಎಲ್ಲರಿಗೂ ಇಷ್ಟವಾಯಿತು. “ಎಲ್ಲವನ್ನೂ ಯೋಚಿಸಿ ಪ್ರಾರಂಭಿಸಿಬಿಡು ನಿನ್ನ ಹಿಂದೆ ನಾವೆಲ್ಲರೂ ಇರುತ್ತೇವೆ. ಸದ್ಯಕ್ಕೆ ನಾನು ಮಲಗಲು ಹೊರಟೆ. ಬೆಳಗ್ಗೆ ಬೇಗ ಎದ್ದು ಜಮೀನಿನ ಹತ್ತಿರ ಹೋಗಬೇಕು” ಎಂದು ಎದ್ದರು ಗಂಗಾಧರಪ್ಪ.
“ಜಮೀನಿನ ಹತ್ತಿರವಾ? ನೀವಾ? ಯಾಕಪ್ಪಾ ನಿಮ್ಮನ್ಯಾರಾದರೂ ಕರೆದಿದ್ದಾರಾ? ಸುಬ್ಬೂ ನಿನಗೇನಾದರೂ ಹೇಳಿದ್ದರೇನೋ?” ಎಂದ ಮಹೇಶ.

“ಏ ಯಾರೂ ಇಲ್ಲ ಮಗಾ, ನಾನೂ ನನ್ನ ಗೆಳೆಯ ಮುಂದಿನವಾರ ಕಾರ್ಯಕ್ರಮದ ತಯಾರಿ ಬಗ್ಗೆ ಅದೇ ಕಾವ್ಯ ವಾಚನ, ವ್ಯಾಖ್ಯಾನ ನಿಮಗೂ ಗೊತ್ತಿಲ್ಲವಾ..ಅದರ ಬಗ್ಗೆ ಪ್ರಾಕ್ಟೀಸು ಅಲ್ಲೇ ಶಿವಾಲಯದ ಹತ್ತಿರ ಮಾಡಿಕೊಳ್ಳೋಣ ಅಂತ. ಅಲ್ಲಿ ಪ್ರಶಾಂತವಾಗಿದೆ ಇಲ್ಲಿನಂತೆ ಗೌಜು ಗದ್ದಲವಿರೊಲ್ಲ ಅದಕ್ಕೆ” ಎಂದರು.

“ಓಹೋಹೋ ! ಓಡಾಡಲು ಒಂದು ನೆಪ, ಹೋಗಿಬನ್ನಿ ಯಾರು ಬೇಡಾಂದರು. ಖಾಲಿಮನೆಯಲ್ಲಿ ಕುಳಿತು ಗಂಟಲು ಬಿರಿಯುವವರೆಗೂ ಮಾಡುವ ಪ್ರಾಕ್ಟೀಸು ಕೇಳಿಕೇಳಿ ನಮಗೂ ಸಾಕಾಗಿದೆ. ಅಲ್ಲಿ ಮಾಡಿದರೆ ಇಲ್ಲಿ ನಮಗೂ ಸ್ವಲ್ಪ ಪ್ರಶಾಂತವಾಗಿರುತ್ತದೆ.” ಎಂದರು ಗೌರಮ್ಮ.
“ಲೇ ಗೌರಾ ನೀನೂ ನನ್ನ ಗೆಳೆಯನ ಶ್ರೀಮತಿ ಅದೇ ನಿನ್ನ ಗೆಳತಿಯಂತೆ ಗಂಡನನ್ನು ಚುಡಾಯಿಸಲು ಪ್ರಾರಂಭಿಸಿಬಿಟ್ಟೆ. ಬಹಳ ಕಾಲದ ಸಹವಾಸ ದೋಷ ಏನುಮಾಡಲಾಗುತ್ತೆ. ಇರಲಿ ಇರಲಿ ಮಕ್ಕಳೇ ಮಲಗಲು ನಡೆಯಿರಿ. ಬೆಳಗಿನಿಂದ ಸಂಜೆವರೆಗೆ ಕೆಲಸ ಮಾಡಿರುತ್ತೀರಿ. ಸುಬ್ಬುವಂತೂ ಕುಳಿತಲ್ಲೆ ಬೆಲ್ಲ ತೂಗುತ್ತಿದ್ದ. ಮಹೀಗೂ ಸಾಕಾಗಿರುತ್ತೆ. ನಡೆಯಿರಿ” ಎಂದು ನಗುತ್ತಾ ರೂಮಿನತ್ತ ನಡೆದರು.
ಅಷ್ಟೇ ಸಾಕೆಂದು ಎಲ್ಲರೂ ತಂತಮ್ಮ ಮಲಗುವ ಕೋಣೆಗಳತ್ತ ಹೆಜ್ಜೆ ಹಾಕಿದರು.

ರೂಮಿಗೆ ಬಂದ ದೇವಿ ಮಲಗಲು ಹಾಸಿಗೆ ಸಿದ್ದಪಡಿಸಿದಳು. “ನಿಮಗೆ ಆಯಾಸವಾಗಿರಬಹುದು ಮಹೀ, ಮಲಗಿ, ನಾನು ಸ್ವಲ್ಪ ಹೊತ್ತು ಧ್ಯಾನಮಾಡಿ ಮಲಗುತ್ತೇನೆ” ಎಂದಳು.
ಬೆಂಗಳೂರಿಗೆ ಹೋಗುವ ಮೊದಲು ಹೇಳದೆ ಇದ್ದುದಕ್ಕೆ, ಅಲ್ಲಿಗೆ ಹೋದಮೇಲೆ ಒಂದೆರಡು ದಿನ ಹೆಚ್ಚಿಗೆ ಮುಂದುವರಿಸಿದ್ದಕ್ಕೆ ದೇವಿ ರೇಗಾಡಬಹುದು ಎಂದುಕೊಂಡಿದ್ದ ಮಹೇಶ. ಹಾಗೂ ಹೀಗೂ ಸಂಭಾಳಿಸಬೇಕೆಂದು ಆಲೋಚಿಸಿದ್ದ. ಜೊತೆಜೊತೆಯಲ್ಲೇ ತನ್ನ ಮನಸ್ಸಿನ ತೊಳಲಾಟವನ್ನೂ ಅವಳಿಗೆ ತಿಳಿಸಿ ಎಲ್ಲವೂ ಸರಿಯಾಗಲು ಸ್ವಲ್ಪ ಕಾಲಾವಕಾಶ ಕೋರಬೇಕೆಂದು ಅಂದುಕೊಂಡಿದ್ದ ಅವನಿಗೆ ದೇವಿಯ ತಣ್ಣಗಿನಮಾತುಗಳನ್ನು ಕೇಳಿ “ಸದ್ಯ ಬೀಸೋದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸಂತೆ ಅನ್ನುವ ಹಾಗೆ ಯಾವುದನ್ನೂ ಕೆದಕದಿರುವುದೇ ವಾಸಿ” ಎಂದುಕೊಂಡು ಮಾರುತ್ತರಿಸದೆ ಹೊದ್ದು ಮಲಗಿಬಿಟ್ಟ. ಆಯಾಸದ ಪರಿಣಾಮದಿಂದ ಸ್ವಲ್ಪ ಹೊತ್ತಿನಲ್ಲೇ ನಿದ್ರೆಗೆ ಜಾರಿದ.

ಧ್ಯಾನಮಾಡಿ ಮುಗಿಸಿದ ದೇವಿ ಹೊಸ ಪ್ರಸ್ತಾವನೆಯಿಂದ ತನ್ನ ಮನಸ್ಸಿನಲ್ಲಾದ ಸಂತಸವನ್ನು ಹತ್ತಿಕ್ಕಲಾರದೆ ತನ್ನಿನಿಯನ ನೊಸಲಿಗೆ ಸದ್ದಾಗದಂತೆ ಹೂಮುತ್ತನ್ನಿತ್ತು ಲೈಟಾರಿಸಿ ಮಲಗಿದಳು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:   https://www.surahonne.com/?p=40836
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

7 Responses

  1. ನಯನ ಬಜಕೂಡ್ಲು says:

    ಹೊಂದಾಣಿಕೆ ಯ ಸಂದೇಶವನ್ನು ಹೊತ್ತು ಸುಂದರವಾಗಿ ಮುಂದುವರಿಯುತ್ತಿದೆ ಕಾದಂಬರಿ

  2. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  3. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ತುಂಬಾ ಚೆನ್ನಾಗಿದೆ ಮೇಡಂ

  4. ಧನ್ಯವಾದಗಳು ವನಿತಾ ಮೇಡಂ

  5. ಶಂಕರಿ ಶರ್ಮ says:

    ಬಾಳಿನಲ್ಲಿ ಹೊಂದಾಣಿಕೆಯ ಮಹತ್ವವನ್ನು ನೆನಪಿಸುವ ಈ ಸಲದ ಕಥಾಭಾಗವು ಬಹಳ ಆತ್ಮೀಯವಾಗಿ ಮೂಡಿಬಂದಿದೆ.. ಧನ್ಯವಾದಗಳು ನಾಗರತ್ನ ಮೇಡಂ.

  6. ನಿಮ್ಮ ಪ್ರತಿಕ್ರಿಯೆಗೆ ನನ್ನಿಂದಲೂ ಧನ್ಯವಾದಗಳು ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: