ಕಾದಂಬರಿ : ಕಾಲಗರ್ಭ – ಚರಣ 19

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸುಶ್ರಾವ್ಯವಾದ ಗಾನ ಮಹೇಶನನ್ನು ಎಚ್ಚರವಾಗುವಂತೆ ಮಾಡಿತು. ಹಾಸಿಗೆ ಮೇಲಿದ್ದುಕೊಂಡೇ ಹಾಗೇ ಆಲಿಸಿದ. ಆಹಾ ! ಎಂಥಹ ಸಿರಿಕಂಠ, ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಾಗಿದ್ದೇ ಮನೆಯವರೊಡಗೂಡಿ ಮನೆದೇವರ ಪೂಜೆಗೆಂದು ಹೋದಾಗಲೇ. ಈಗಿನ್ನೂ ಮುತುವರ್ಜಿಯಿಂದ ಹಾಡುತ್ತಿರುವಂತೆ ಕಾಣಿಸುತ್ತದೆ. ನೆನ್ನೆ ರಾತ್ರಿಯ ಪ್ರಾಜೆಕ್ಟ್ ಬಗ್ಗೆ ಎಲ್ಲರೂ ಒಪ್ಪಿದ್ದು ಅವಳಿಗೆ ಬಹಳ ಹಿಗ್ಗಾದಂತಿದೆ. ಈ ವಿಷಯವನ್ನು ಅವಳ ಮನೆಯವರಿಗೂ ತಿಳಿಸಿ ಆದಷ್ಟು ಬೇಗ ಅವಳು ಕೆಲಸ ಪ್ರಾರಂಭಿಸಬೇಕು. ಇದರಿಂದ ಅವಳಲ್ಲಿ ಮೊದಲಿನ ಲವಲವಿಕೆ, ಹುರುಪು ಮತ್ತೆ ಬರುತ್ತದೆ. ನನ್ನ ಕೆಲಸವೂ ಸುಲಭವಾಗುತ್ತದೆ. ಮೊನ್ನೆ ಕಾರ್ಯಾಗಾರಕ್ಕೆ ಹೋಗಿದ್ದಾಗ ಬಹಳ ಜನರು ನನ್ನನ್ನು ಮಹೇಶ ನೀವು ನಮ್ಮ ಊರುಗಳಿಗೆ ಭೇಟಿ ನೀಡಿ ಅಲ್ಲಿಯ ಜನರಿಗೆ ಈ ಬಗೆಯ ತಿಳಿವಳಿಕೆ ನೀಡಬೇಕೆಂದು ಕೇಳಿಕೊಂಡರು. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆಂದು ಉತ್ಸುಕತೆಯನ್ನು ತೋರಿದರು. ಆಗ ನಾನು ನೀವೆಲ್ಲ ಹೇಳುವುದು ಸರಿಯೇ, ಆದರೆ ನನಗೂ ಕೆಲವು ವ್ಯಯಕ್ತಿಕ ಜವಾಬ್ದಾರಿಗಳಿವೆ. ಅವುಗಳಿಗೆಲ್ಲ ಒಂದು ವ್ಯವಸ್ಥೆ ಮಾಡಿದ ನಂತರ ನೀವು ಹೇಳಿದಂತೆ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದಿದ್ದೆ. ಹೌದು ಮೊದಲು ಈ ವಿಷಯವನ್ನು ಅಪ್ಪನಿಗೆ ಹೇಳಬೇಕು. ಸುಬ್ಬುವಿನ ಗಮನಕ್ಕೂ ತರಬೇಕು. ನನ್ನ ಗೈರುಹಾಜರಿಯಲ್ಲಿಯೂ ಇಲ್ಲಿನ ನವೀನ ಯೋಜನೆಗಳಿಗೆ ಧಕ್ಕೆಯಾಗದಂತೆ ನಿಭಾಯಿಸಕೊಂಡು ಹೋಗುವ ಏರ್ಪಾಡು ಮಾಡಬೇಕು. ಇವೆಲ್ಲಕ್ಕಿಂತ ಮೊದಲು ನನ್ನ ಬಾಳಸಂಗಾತಿಯ ಕೆಲಸಗಳು ಒಂದು ಘಟ್ಟಕ್ಕೆ ಬರುವವರೆಗೂ ಇದರ ಸುಳಿವನ್ನು ಹೊರಗೆಡಬಾರದು. ಹೀಗೇ ಆಲೋಚನಾ ಲಹರಿಯನ್ನು ಹರಿಯಬಿಡುವಾಗಲೇ ಮೊಬೈಲ್ ಸದ್ದುಮಾಡಿತು.

ಸ್ಟೂಲಿನ ಮೇಲಿದ್ದ ಮೊಬೈಲನ್ನು ಕೈಗೆತ್ತಿಕೊಂಡು ಕಣ್ಣಾಡಿಸಿದ ಮಹೇಶ. ಓ ಸುಬ್ಬು ! ಜಮೀನಿನ ಕಡೆಗೆ ಹೊರಟಿರಬೇಕು. ಏನಾದರೂ ಹೇಳುವುದೋ, ಕೇಳುವುದೋ ಇರಬೇಕೆಂದುಕೊAಡು “ಹಲೋ” ಎಂದ. ಆಕಡೆಯಿಂದ “ಮಹೇಶಣ್ಣಾನಾನು ಜಮೀನಿನ ಹತ್ತಿರ ಹೋಗುತ್ತಿದ್ದೇನೆ. ನೀವು ಅಲ್ಲಿಗೆ ಬಂದಮೇಲೆ ನಾನು ಸಿಟಿಗೆ ಹೋಗುತ್ತೇನೆ. ಕೆಲವು ಪದಾರ್ಥಗಳನ್ನು ಮಾರುಕಟ್ಟೆಗೆ ಹಾಕಿದ್ದೆ. ಅದರ ಲೆಕ್ಕಾಚಾರ ಮಾಡುವುದಿದೆ. ನೀವೇ ಹೋಗುವುದಾದರೆ ಅದರ ವಿವರಗಳನ್ನು ನಿಮಗೇ ಕೊಡುತ್ತೇನೆ” ಎಂದನು.

ಅದನ್ನು ಕೇಳಿ ಮಹೇಶ “ವ್ಯವಹಾರದ್ದೆಲ್ಲಾ ನೀನೇ ಮುಗಿಸಿಕೋ, ನಾನೂ ಜಮೀನಿನ ಹತ್ತಿರ ಬರುತ್ತೇನೆ. ಈಗ ನಿನ್ನಕ್ಕನ ಪೂಜಾ ಕಾರ್ಯ ಮುಗಿದಿದ್ದರೆ ಅವಳನ್ನೂ ಕರೆದುಕೊಂಡು ಹೋಗಿರು. ನಾನೂ ಸ್ನಾನ, ಪೂಜೆ ಮುಗಿಸಿ ಅದಷ್ಟೂ ಬೇಗ ಬರುತ್ತೇನೆ.” ಎಂದನು ಮಹೇಶ.

“ಏ ನೀವೆಲ್ಲಿದ್ದೀರಾ? ದೊಡ್ಡಮ್ಮನಿಗೆ ದೇವಿಯಕ್ಕಾ, ಚಂದ್ರಿಕಾ ಜಮೀನಿನ ಹತ್ತಿರ ಹೋಗುವುದು ಇಷ್ಟವಾಗುತ್ತಿಲ್ಲ. ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ನಿಯಮವಿದು. ಮನೆಯಲ್ಲಿನ ಹಿರಿಯರು ಯಾವಾಗಲಾದರು ಒಟ್ಟಿಗೆ ಹೋಗುವಾಗ ಅಂದರೆ ಸುಗ್ಗಿ, ಪೂಜೆ, ಹಬ್ಬಹರಿದಿನಗಳಲ್ಲಿ, ಗುಡಿಗೆ ಹೋಗುವಾಗ ಮಾತ್ರ ಅವರೊಟ್ಟಿಗೆ ಹೋಗುವುದೆಂದು ಸೀಮಿತ ಮಾಡಿದ್ದಾರೆ. ಬುತ್ತಿ ತಂದುಕೊಡಲು ಬೇರೆ ವ್ಯವಸ್ಥೆಯಾಗಿದೆ.” ಎಂದು ಸೂಕ್ಷ್ಮ್ಮವಾಗಿ ತಿಳಿಸಿದ ಸುಬ್ಬು.

“ ಓ ! ಇದೇನು ಹೊಸ ಕಾನೂನು? ಇರಲಿ ವಿಚಾರಿಸುತ್ತೇನೆ. ಈಗ ನೀನು ಹೋಗಿರು, ಹಿಂದೆಯೇ ನಾನೂ ಬರುತ್ತೇನೆ” ಎಂದು ಕಾಲ್‌ಕಟ್ ಮಾಡಿದ.

ಹಾಸಿಗೆಯಿಂದೆದ್ದು ಬ್ಲಾಂಕೆಟ್ ಮಡಿಸಿಟ್ಟು ಹಾಸಿಗೆಯನ್ನು ಸರಿಪಡಿಸಿದ. ಪ್ರಾತಃವಿಧಿಗಳನ್ನು ಮುಗಿಸಿ ಸ್ನಾನ ಪೂರೈಸಿ ಕೆಳಗಿಳಿದು ಬಂದವನೇ ಪೂಜೆಯನ್ನು ಮಾಡಿ ಹೊರಬಂದ ಮಹೇಶ. ಅಡುಗೆ ಮನೆಯಿಂದ ರುಬ್ಬುವ, ಕುಟ್ಟುವ ಸದ್ದಿನೊಂದಿಗೆ ನಗೆಯ ಸದ್ದೂ ಕೇಳಿಸುತ್ತಿತ್ತು. ಅಡುಗೆ ಮನೆಯ ಹೊರಗೆನಿಂತು ಹುಸಿಕೆಮ್ಮುತ್ತಾ ಒಳಗಿನವರಿಗೆ ತನ್ನ ಬರುವಿಕೆಯ ಸುಳಿವು ಕೊಟ್ಟ.
ತಕ್ಷಣವೇ ಅತ್ತ ತಿರುಗಿದ ಗೌರಮ್ಮನವರು “ ಬಾ..ಏನು ಬೇಕು? ಕಷಾಯವೋ ಗಂಜಿಯೋ?” ಎಂದು ಕೇಳಿದರು. “ಅದಿರಲಿ ನಮ್ಮಪ್ಪ ಜಮೀನಿನ ಹತ್ತಿರ ಹೋಗುತ್ತೇನೆಂದಿದ್ದರಲ್ಲ, ಹೋಗಿ ಬಂದರಾ?” ಎಂದು ಕೇಳಿದ ಮಹೇಶ.

“ ನಿಮ್ಮಪ್ಪನಾ ಬಾಯಿಲ್ಲಿ” ಎಂದು ಮಹೇಶನ ಕೈಹಿಡಿದು ಮುಂಬಾಗಿಲು ತೆರೆದು “ನೋಡಲ್ಲಿ” ಎಂದು ಕೈ ತೋರಿದರು. ಅಲ್ಲಿ ಕಂಡ ದೃಶ್ಯ ಗೆಳೆಯರಿಬ್ಬರೂ ಎದುರು ಮನೆಯ ಮುಂದಿದ್ದ ಜಗುಲಿಯ ಮೇಲೆ ಕುಳಿತು ಪಟ್ಟಾಂಗ ಹೊಡೆಯುತ್ತಿದ್ದುದು ಕಾಣಿಸಿತು. ಪಕ್ಕದಲ್ಲೇ ಪುಸ್ತಕಗಳೂ ಇದ್ದವು.

“ನೋಡಿದೆಯಾ, ನಾವೆಲ್ಲ ಏಳುವ ಮೊದಲೇ ನಿಮ್ಮಪ್ಪನ ಸ್ನಾನ ಪೂಜೆ ಮುಗಿದಿತ್ತು. ಅವರ ಗೆಳಯರು ಫೋನ್ ಮೂಲಕ ಮಾತುಕತೆಯಾಡಿ ಹೊರಬಂದರು. ಸ್ವಲ್ಪ ಹೊತ್ತು ಪ್ರಾಕ್ಟೀಸ್ ಮಾಡಿದ್ದು ಕಿವಿಗೆ ಬಿತ್ತು. ಆ ನಂತರ ಹೊತ್ತುಗೊತ್ತಿನ ಪರಿವೇ ಇಲ್ಲದಂತೆ ನೆನ್ನೆಯ ಸಮಚಾರದ ಬಿತ್ತರ, ಅದಕ್ಕವರ ಉತ್ತರ, ಅದರ ಮೇಲೆ ಅವರದ್ದೇ ವ್ಯಾಖ್ಯಾನ.. ‘ನೀಲಗಂಗಾ ಹೋಂ ಪ್ರಾಡಕ್ಟ್ಸ್’ ಎಂದು ಹೆಸರಿಡಲು ಮಕ್ಕಳಿಗೆ ಹೇಳಿ ಎಂದದ್ದೂ ಕೇಳಿತ್ತಂತೆ. ಅದೇನೋ ಹೇಳ್ತಾರಲ್ಲ ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ’ಅಂತ ಹಾಗಾಗಿದೆ ಅವರಿಬ್ಬರ ಮಾತುಗಳು. ಇದೆಲ್ಲ ನನಗೆ ಹೇಗೆ ತಿಳೀತು ಅಂತೀಯೋ ನನ್ನ ಗೆಳತಿ ಆ ಮನೆಯಲ್ಲಿದ್ದಾಳಲ್ಲ ಅವಳಿಂದ ಫೋನ್‌ನ ಮೂಲಕ” ಎಂದರು ಗೌರಮ್ಮ.

“ಆಹಾ ಎಲ್ಲರೂ ಚೆನ್ನಾಗಿದ್ದೀರಾ, ಅವರ ಬಾಯಿಂದ ಬಂದ ‘ನೀಲಗಂಗಾ ಹೋಂ ಪ್ರಾಡಕ್ಟ್ಸ್ ’ ಹೆಸರು ಚೆನ್ನಾಗಿದೆ. ಎಷ್ಟು ವರ್ಷಗಳ ಗೆಳೆತನ ಉಳಿಸಿಕೊಂಡು ಬಂದಿದ್ದಾರೆ. ನಿಷ್ಕಲ್ಮಶ ಮನಸ್ಸಿನವರು. ಅದನ್ನೇ ನಾವು ಬಳಸಿಕೊಳ್ಳೋಣ. ದೇವಿಗೂ ಅವರಜ್ಜನೆಂದರೆ ಪ್ರಾಣ. ನಮ್ಮಪ್ಪನೆಂದರೆ ನನಗೂ ಪ್ರೀತಿ, ಗೌರವಅಲ್ಲವಾ? ಬನ್ನಿ ನಾವು ಅವರ ಸಂತೋಷಕ್ಕೆ ಏಕೆ ಅಡ್ಡಿ ಪಡಿಸೋಣ. ಈಗ ಗಂಜಿ ಕೊಡಿ ಕುಡಿದು ಜಮೀನಿನ ಹತ್ತಿರ ಹೋಗಬೇಕು. ಸುಬ್ಬು ಆಗಲೇ ಫೋನ್ ಮಾಡಿದ್ದ. ಅಂದಹಾಗೆ ದೇವೀನೂ ಕರೆದುಕೊಂಡು ಹೋಗಲಾ?” ಎಂದು ಕೇಳಿದ ಮಹೇಶ.

“ ಬೇಡಪ್ಪಾ, ಮೊದಲಾದರೆ ಸರಿ, ಈಗ ಮನೆಯ ಸೊಸೆ ತಿಳೀತಲ್ಲೋ.” ಎಂದು ಮೆಲುದನಿಯಲ್ಲಿ ಅದಕ್ಕೆ ಕಾರಣವನ್ನೂ ಹೇಳಿ ಮಾತಿಗವಕಾಶ ಕೊಡದಂತೆ “ದೇವೀ ಮಹೇಶನಿಗೆ ಗಂಜಿ ಕೊಡಮ್ಮಾ” ಎಂದು ಕೂಗಿ ಹೇಳಿ ಹಿತ್ತಲಿಗೆ ಹೋದರು ಗೌರಮ್ಮ.

ತಾಯಿಯ ಮಾತುಗಳನ್ನು ಕೇಳಿದ ಮಹೇಶ ಮನೆಯ ಹೆಣ್ಣುಮಕ್ಕಳ ಫಿಟ್ಟಿಂಗ್, ಮುಂದಾಲೋಚನೆಯಿಂದ ದಿಢೀರ್ ಬದಲಾವಣೆ. ಸರಿಸರಿ ಎಂದುಕೊಳ್ಳುವಷ್ಟರಲ್ಲಿ ದೇವಿ ಮಿಳ್ಳೆಯಲ್ಲಿ ತಂದುಕೊಟ್ಟ ಗಂಜಿಯನ್ನು ಕುಡಿದು ಖಾಲಿ ಮಿಳ್ಳೆಯನ್ನು ಅವಳ ಕೈಗಿತ್ತು ಹೊರಟ ಮಹೇಶ.

“ಮಹೀ ಮಧ್ಯಾನ್ಹದ ಊಟಕ್ಕೆ” ದೇವಿಯ ವಾಕ್ಯವಿನ್ನೂ ಮುಗಿಯುವ ಮುನ್ನವೇ “ಭಂಟನ ಕೈಯಲ್ಲಿ ಕಳುಹಿಸಿಕೊಡು. ಅಮ್ಮ ಇದು ನಿಮ್ಮದೆ ಏರ್ಪಾಡಾಗಿದೆಯಂತೆ” ಎಂದುಹೇಳುತ್ತಾ ತಿರುಗಿ ನೋಡದೆ ಮನೆಯಿಂದ ಹೊರನಡೆದ. ಹಿಂದೆಯೇ ಗಾಡಿ ಸ್ಟಾರ್ಟ್ ಮಾಡಿದ ಶಬ್ಧಕೇಳಿ “ಈ ಪುಣ್ಯಾತ್ಮನನ್ನು ಹೇಗೆ ಪಳಗಿಸಬೇಕೊ ತಿಳಿಯದಾಗಿದೆ ಶಿವನೇ” ಎಂದುಕೊಂಡು ಬಿಟ್ಟಿದ್ದ ಕೆಲಸವನ್ನು ಗಮನಿಸಲು ಒಳ ನಡೆದಳು.

ಮಹೇಶ ಜಮೀನಿನ ಉಸ್ತುವಾರಿ ತನ್ನ ಕೈಗೆ ಬರುತ್ತಿದ್ದಂತೆ ಒಳಗಿನ ಕಾರ್ಯಗಳ ಚಟುವಟಿಕೆ ಆಧುನೀಕರಿಸಿದಂತೆ ಹೊರಗಿನ ಆವರಣವನ್ನೂ ಮಾರ್ಪಾಡು ಮಾಡಿದ್ದ. ಅದರ ಫಲವಾಗಿ ಮುಳ್ಳುಬೇಲಿ, ತಟಿಕೆ ಮಾಯವಾಗಿ ಭದ್ರವಾದ ಕಾಂಪೌಂಡು ಎದ್ದಿತ್ತು. ಅದಕ್ಕೆ ಕಬ್ಬಿಣದ ಗೇಟು ಅಳವಡಿಸಲಾಗಿತ್ತು. ಅದನ್ನು ತೆರೆದು ಒಳಗಡಿಯಿಟ್ಟ ತಕ್ಷಣವೇ ತೋಳದಂತಹ ನಾಯಿಗಳ ಬೊಗಳುವಿಕೆ.. ಯಾರಾದರೂ ಬಂದು ಅವುಗಳನ್ನು ಕರೆದುಕೊಂಡು ಹೋಗುವವರೆಗೆ ತಮ್ಮ ಕಾಯಕವನ್ನು ಮಾಡುತ್ತಿದ್ದವು. ಕೆಂಚ, ಕರಿಯ ಎಂಬ ಹೆಸರುಗಳನ್ನು ಅವುಗಳಿಗೆ ಇಡಲಾಗಿತ್ತು. ಬೆಳಗಿನ ಹೊತ್ತು ಅವುಗಳನ್ನು ಗೂಟಕ್ಕೆ ಕಟ್ಟಿಹಾಕಲಾಗುತ್ತಿತ್ತು. ರಾತ್ರಿಕಾಲದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರುತ್ತಿದ್ದವು. ಜಮೀನಿನ ಒಡೆತನ ತಲೆಮಾರಿನಿಂದ ತಲೆಮಾರಿಗೆ ಬಂದಂತೆ ಈ ಶುನಕಗಳ ಸಂತತಿಯೂ ಹಿಂದಿನಿಂದ ಮುಂದುವರೆದಿತ್ತು. ಇವುಗಳಲ್ಲಿ ಕೆಲವು ನಿಲಕಂಠಪ್ಪನವರ ಜಮೀನಿನ ಕಾವಲಿಗೂ ವರ್ಗಾವಣೆಗೊಂಡಿದ್ದವು. ಬಹಳ ತೀಕ್ಷ್ಣಮತಿಗಳು. ಹೆಜ್ಜೆಯ ಸಪ್ಪಳ, ಗಾಡಿಗಳ ಸದ್ದಿನಿಂದಲೇ ಬಂದವರು ಪರಿಚಿತರೇ, ಅಪರಿಚಿತರೇ ಎಂಬುದನ್ನು ಕ್ಷಣಮಾತ್ರದಲ್ಲಿ ಗ್ರಹಿಸುತ್ತಿದ್ದವು. ಹೊಲ, ಗದ್ದೆ. ತೋಟಗಳಿಗೆ ಸರ್ಪಗಾವಲಿನಂತೆ ಕಾಯುತ್ತಿದ್ದವು.

ಮಹೇಶ ಜಮೀನನ್ನು ಸಮೀಪಿಸುತ್ತಿದ್ದಂತೆ ಗೇಟಿನ ಹೊರಗೆ ಗಾಡಿ ನಿಲ್ಲಿಸಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬರು ಕಾಣಿಸಿದರು. ಯಾರಿರಬಹುದು? ಅವರನ್ನು ಒಳಗೆ ಹೋಗಲು ನಮ್ಮ ಕಾವಲುಗಾರರು ಬಿಟ್ಟಿಲ್ಲ ಅನ್ನಿಸುತ್ತೆ . ಅದಕ್ಕೇ ಯಾರಾದರೂ ಅತ್ತಕಡೆ ಬರುತ್ತಾರೆಂದು ಕಾಯುತ್ತಿದ್ದಾರೆ ಎಂದುಕೊಂಡು ಮತ್ತಷ್ಟು ಸಮೀಪಕ್ಕೆ ಬಂದ ಮಹೇಶ. ಅರೇ ! ಸಾಹುಕಾರ ರುದ್ರಪ್ಪನವರು, ಅವರು ಕಾರಣವಿಲ್ಲದೆ ಬರುವವರಲ್ಲಾ. ಸುಬ್ಬುವಿನ ಮೊಬೈಲ್ ನಂಬರ್ ಅವರಿಗೆ ಗೊತ್ತಿತ್ತು. ಕಾಲ್ ಮಾಡಿದ್ದರೆ ಅವನೇ ಬಂದು ಕರೆದುಕೊಂಡು ಹೋಗುತ್ತಿದ್ದ ಅಂದುಕೊಂಡೇ ಗಾಡಿಯಿಂದಿಳಿದು ತಳ್ಳಿಕೊಂಡೇ “ನಮಸ್ಕಾರ ತಾವು ಇಲ್ಲಿಯತನಕ? ಹಿರಿಯರು ಮನೆಯಲ್ಲಿದ್ದಾರೆ.” ಎಂದು ಪ್ರಶ್ನಿಸಿದ.

ಆ ಕಡೆಗೆ ತಿರುಗಿ ನಿಂತಿದ್ದ ರುದ್ರಪ್ಪನವರು ಧ್ವನಿಕೇಳಿ “ಓ ಮಹೇಶಪ್ಪ ಬಂದಿರಾ, ನಾನು ನಿಮ್ಮನ್ನೇ ನೋಡಲು ಬಂದೆ. ಒಳಕ್ಕೆ ಹೋಗಲು ಸುಬ್ಬಣ್ಣನನ್ನು ಕೂಗಬಹುದಿತ್ತು, ಆದರೆ ನೀವು ಬರುವುದು ಕಾಣಿಸಿತು ಅದಕ್ಕೇ ಹಾಗೇ ನಿಂತೆ”

“ಹೌದೇ, ಸರಿ ಹಾಗಾದರೆ ಬನ್ನಿ ಒಳಗೆ ಹೋಗೋಣ. ನಿಮ್ಮ ಡ್ರೈವರ್‌ಗೆ ಹೇಳಿ ಕಾರನ್ನು ಒಳಗೇ ಬಿಡಿಸಿ.ಅದಕ್ಕೆಲ್ಲಾ ಸ್ಥಳಾವಕಾಶ ಕಲ್ಪಿಸಿದ್ದೇನೆ ಮೊದಲಿನಂತಿಲ್ಲ.” ಎಂದ ಮಹೇಶ.
“ಹೂಂ ಅದುಗೊತ್ತು ಒಂದು ಸಾರಿ ನಿಮ್ಮಪ್ಪನನ್ನು ನೋಡಲು ಇಲ್ಲಿಗೆ ಬಂದಿದ್ದೆ. ಸದ್ಯ ಅಲ್ಲೇ ಇರಲಿಬಿಡಿ. ಸ್ವಲ್ಪ ಮಾತಾಡೋದಿದೆ ಅಷ್ಟೇ” ಎಂದರು ರುದ್ರಪ್ಪ.

“ಸರಿ ಬನ್ನಿ, ತೋಟದ ಮನೆಗೆ ಹೋಗೋಣ.” ಎಂದು ಗೇಟನ್ನು ತೆರೆದು ಒಳಗೆ ಬರಲು ಅನುವು ಮಾಡಿಕೊಟ್ಟ ಮಹೇಶ. ಎಡಬಲದಲ್ಲಿ ನಿಂತು ಗುರಾಯಿಸುತ್ತಿದ್ದ ಕರಿಯ, ಕೆಂಚ ನಾಯಿಗಳು ತಮ್ಮ ಯಜಮಾನನನ್ನು ಕಂಡು ಸುಮ್ಮನಾದವು.

ತನ್ನ ಗಾಡಿಯನ್ನು ಒಳಗೆ ನಿಲ್ಲಿಸಿದ ಮಹೇಶ ಸುಬ್ಬುವಿಗೆ ಫೋನ್ ಮಾಡಿ ತಾನು ಬಂದಿದ್ದೇನೆಂದು ತಿಳಿಸಿದ. ಹಾಗೆ ಬಂದಿರುವವರ ಬಗ್ಗೆ ಕೂಡ ತಿಳಿಸಿ ತನ್ನ ಕೆಲಸವನ್ನು ಗಮನಿಸಲು ಹೇಳಿದ. ಅದನ್ನೇ ಕಾಯುತ್ತಿದ್ದನೇನೋ ಎಂಬಂತೆ ಕ್ಷಣಾರ್ಧದಲ್ಲಿ ಓಡಿಬಂದ ಸುಬ್ಬು ರುದ್ರಪ್ಪನವರಿಗೆ ನಮಿಸಿ ಮಹೇಶನಿಗೆ ತಾನು ಸಿಟಿಗೆ ಹೋಗಿಬರುವುದಾಗಿ ಹೇಳಿ ಬೆಳಗಿನ ಕಾರ್ಯಗಳ ಬಗ್ಗೆ ಒಂದು ಚಿತ್ರಣವನ್ನಿತ್ತು ಜೊತೆಗೊಬ್ಬನನ್ನು ಕರೆದುಕೊಂಡು ಹೊರಟ.

ತೋಟದ ಮನೆಯ ಮುಂದಿನ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ರುದ್ರಪ್ಪನವರು ಇವರಿಬ್ಬರ ಹೊಂದಾಣಿಕೆಯನ್ನು ನೋಡಿ ಮನಸ್ಸಿನಲ್ಲೇ ಹೀಗೆಂದುಕೊAಡರು. ವರಸೆಯಲ್ಲಿ ಚಿಕ್ಕಮ್ಮನ ಮಗ ಆದರೂ ಇಬ್ಬರೂ ಒಂದೇ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿಬಂದ ಅಣ್ಣತಮ್ಮಂದಿರಿಗಿಂತ ಚೆನ್ನಾಗಿದ್ದಾರೆ. ಹೂಂ..ನಮ್ಮಲ್ಲೂ ಇದ್ದಾರೆ ಎರಡು ಗಂಡುಮಕ್ಕಳು, ಒಂದು ಉತ್ತರ ಎಂದರೆ ಇನ್ನೊಂದು ದಕ್ಷಿಣ. ಎಲ್ಲಕ್ಕೂ ಕೇಳಿಕೊಂಡು ಬಂದಿರಬೇಕು.

“ಈಗ ಹೇಳಿ ರುದ್ರಪ್ಪನವರೇ ನನ್ನಿಂದೇನು ಆಗಬೇಕೆಂದು?” ಎಂಬ ಮಾತನ್ನು ಕೇಳಿದಾಗ ಎಚ್ಚೆತ್ತುಕೊಂಡರು.

“ಏನಿಲ್ಲ ಮಹೇಶಪ್ಪಾ ನೀವು ಅದೇನೋ ಕಾರ್ಯಾಗಾರ ನಡೆಸಿಕೊಡಲು ಬೆಂಗಳೂರಿಗೆ ಹೋಗಿದ್ದಿರಂತೆ. ಅಲ್ಲಿಗೆ ಬಂದಿದ್ದ ಒಂದಿಬ್ಬರು ನಿಮ್ಮ ಬಗ್ಗೆ ಹೇಳಿದರು. ಅಷ್ಟೇ ಅಲ್ಲ ನೀವು ಜನರಿಗೆ ತಿಳಿವಳಿಕೆ ನೀಡುವ ರೀತಿಯ ಬಗ್ಗೆ ತುಂಬಾ ಹೊಗಳಿದರು. ಅದಕ್ಕೆ ಅಂತಹ ಕಾರ್ಯಾಗಾರಗಳನ್ನು ಆಗೊಮ್ಮೆ ಈಗೊಮ್ಮೆ ಇಲ್ಲೇ ನಿಮ್ಮ ಜಮೀನಿನಲ್ಲೇ ನಡೆಸಬಹುದು. ತೋಟ, ಹೊಲ, ಗದ್ದೆ ಎಲ್ಲವು ಒಂದೆಡೆಯಲ್ಲಿಯೇ ಇವೆ. ಮೇಲಾಗಿ ನೀವು ಅನುಷ್ಟಾನಕ್ಕೆ ತಂದಿರುವ ಹೊಸಹೊಸ ಆವಿಷ್ಕಾರಗಳು, ಯಂತ್ರೋಪಕರಣಗಳು, ಸಮೇತ ಪ್ರಾತ್ಯಕ್ಷಿಕವಾಗಿ ತೋರಿಸಿ ವಿವರಿಸಲು ಅನುಕೂಲವಾಗುತ್ತದೆ. ಜೊತೆಗೆ ನಿಮ್ಮಕೆಲಸದ ಕಡೆಗೂ ಗಮನವಿರುತ್ತದೆ. ಅದಕ್ಕಾಗುವ ಖರ್ಚುವೆಚ್ಚಗಳ ಕಡೆ ತಲೆ ಕೆಡಿಸಿಕೊಳ್ಳಬೇಡಿ. ಅದನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ. ಅಲೋಚಿಸಿ ಏಕಾಗಬಾರದು? ಇದನ್ನು ಫೋನಿನಲ್ಲೆ ಹೇಳಬಹುದಿತ್ತು. ಅದು ಬೇಡ ಅನ್ನಿಸ್ತು. ಎದುರಿಗೇ ಕುಳಿತು ಮಾತನಾಡೋಣ ಅಂದುಕೊಂಡು ಇಲ್ಲಿಗೆ ಬಂದೆ” ಎಂದರು ರುದ್ರಪ್ಪ.

ಅವರ ಕೋರಿಕೆಯನ್ನು ಆಲಿಸಿದ ಮಹೇಶನಿಗೆ ಹೌದಲ್ಲವಾ ! ಯಾಕಾಗಬಾರದು, ಸ್ವಾಮಿಕಾರ್ಯ ಸ್ವಕಾರ್ಯ ಎರಡು ಆಗುತ್ತೆ. ಯವಾಗಲಾದರೊಮ್ಮೆ ಹೊರಗಡೆಗೂ ಹೋಗಿಬರಬಹುದು ಅಂದುಕೊಂಡ. ಹಾಗೇ ಈ ಮನುಷ್ಯರಿಗೆ ನಾವು ಪ್ರಾರಂಭ ಮಾಡಬೇಕೆಂದಿರುವ ಹೊಸ ಯೋಜನೆಯ ಬಗ್ಗೆಯೂ ತಿಳಿಸಬೇಕು. ದೇವಿಯ ಯೋಜನೆಗಳಿಗೆ ಲೈಸೆನ್ಸ್, ಜಾಹೀರಾತುಗಳಿಗೆ ಅತ್ಯಂತ ಸೂಕ್ತವಾದ ವ್ಯಕ್ತಿ. ಹತ್ತು ಹಳ್ಳಿಗಳಲ್ಲಿ ನಮಗಿಂತಲೂ ಎದ್ದುಕಾಣುವ ಕುಳ. ಜೊತೆಗೆ ಜನಾನುರಾಗಿ, ಇವರ ಮಾತುಗಳನ್ನು ತೆಗೆದು ಹಾಕುವವರಿಲ್ಲ. ಇವರಿಗೆ ರಾಜಕೀಯದ ಹಿನ್ನೆಲೆಯೂ ಇದೆ. ಇದೇ ಸುಸಮಯ ಕೇಳಿಯೇ ಬಿಡಬೇಕು ಎಂದುಕೊಂಡ ಮಹೇಶ.

“ಮಹೇಶಪ್ಪಾ ಕಷ್ಟವಾಗುತ್ತಾ, ಆಗೋಲ್ಲವೇ? ಬಹಳ ಚಿಂತೆಮಾಡಿದಂತೆ ಮೌನವಾದಿರಿ” ಎಂದು ಪ್ರಶ್ನಿಸಿದರು.

“ ಹ್ಹೆ..ಹ್ಹೆ ತಪ್ಪು ತಿಳಿಯಬೇಡಿ, ಕಷ್ಟವೇನಾಗೋಲ್ಲ. ಆದರೆ ನಿಮ್ಮಿಂದ ನನಗೊಂದು ಸಹಾಯ ಆಗಬೇಕಾಗಿತ್ತು. ಹೇಗೆ ಹೇಳುವುದೆಂದು ಆಲೋಚಿಸುತ್ತಿದ್ದೆ” ಎಂದು ತಡೆತಡೆದು ಹೇಳಿದ ಮಹೇಶ.
“ಏ..ನೀವು ನನ್ನ ಮಗನ ಸಮಾನ, ನನ್ನ ಹತ್ತಿರ ನಿಮಗೆಂತಹ ಸಂಕೋಚ. ನಿಮ್ಮನ್ನು ಏಕವಚನದಲ್ಲಿ ಮಾತನಾಡಿಸಬಹುದು ಆದರೆ ನನಗೆ ಅದೇಕೊ ಸರಿ ಕಾಣಿಸದು ಅಷ್ಟೇ. ಹೇಳಿ ನನ್ನ ಕೈಲಾದರೆ ಮಾಡುತ್ತೇನೆ. ಇಲ್ಲವೇ ಮಾಡಿಸಿಕೊಡುತ್ತೇನೆ.” ಎಂದು ಅವನನ್ನು ಹುರಿದುಂಬಿಸಿದರು ಸಾಹುಕಾರರು.

ಅವರಷ್ಟು ಹೇಳಿದ್ದೇ ತಡ, ವಿಳಂಬಮಾಡದೆ ತಮ್ಮ ಮನೆಯಲ್ಲಿ ಹಿಂದಿನ ರಾತ್ರಿ ಚರ್ಚಿಸಿದ ಯೋಜನೆಯ ರೂಪುರೇಷೆಗಳನ್ನು ತಿಳಿಸಿ ಅದಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಕೂಡ ಹೇಳಿದ ಮಹೇಶ.

“ಓ ಬಹಳ ಒಳ್ಳೆಯ ಆಲೋಚನೆ ! ನಿಮ್ಮಲ್ಲಿ ಚಿಕ್ಕವರಷ್ಟೇ ಅಲ್ಲ ಹಿರಿಯರು, ಅದರಲ್ಲೂ ಹೆಣ್ಣುಮಕ್ಕಳು ನಾಲ್ಕಕ್ಷರ ಕಲಿತವರೇ. ಮಾತ್ರವಲ್ಲ ಅವರಿಗೆ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ತಿಳಿವಳಿಕೆಯೂ ಇದೆ. ಅದಕ್ಕೇನು ಮಾಹಿತಿ ಬೇಕೊ ಅದನ್ನೆಲ್ಲ ನಾನೇ ವಿಚಾರಿಸಿ ಅರ್ಜಿ ಬರೆಸಿಕೊಂಡುಮಾಡಿಸಿಕೊಡುತ್ತೇನೆ. ಯೋಚನೆ ಮಾಡುವುದು ಅನಾವಶ್ಯಕ. ಒಳ್ಳೆಯ ಕೆಲಸ, ಸುಮ್ಮನೆ ಕಾಡು ಹರಟೆ ಹೊಡೆದುಕೊಂಡು ಕಾಲಹರಣ ಮಾಡುವ ಹೆಣ್ಣುಮಕ್ಕಳಿಗೆ ಒಳ್ಳೆಯ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಪಾಪ ಕೆಲವರಿಗೆ ಇಂತದರ ಅಗತ್ಯವೂ ಇದೆ. ನನಗೆ ಹೇಳಿದ್ದೀರಲ್ಲಾ ನಿಶ್ಚಿಂತರಾಗಿರಿ. ನಾನು ಕೇಳಿದ್ದು ನಿಮಗೆ ನೆನಪಿರಲಿ ನಾನಿನ್ನು ಬರುತ್ತೇನೆ” ಎಂದು ಹೊರಟರು ಸಾಹುಕಾರ ರುದ್ರಪ್ಪನವರು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:   https://www.surahonne.com/?p=40838
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

7 Responses

  1. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  2. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

    ಬಹಳ ಚೆನ್ನಾಗಿದೆ ಮೇಡಂ

  3. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  4. ಶಂಕರಿ ಶರ್ಮ says:

    ಸುಂದರ ಕಥಾಹಂದರ ಹೊಂದಿರುವ “ಕಾಲಗರ್ಭ”… ಕುತೂಹಲಕಾರಿಯಾಗಿ ಸಾಗುತ್ತಿದೆ ನಾಗರತ್ನ ಮೇಡಂ.

  5. ಧನ್ಯವಾದಗಳು ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: