ಕಾದಂಬರಿ : ಕಾಲಗರ್ಭ – ಚರಣ 20
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅವರ ಜೊತೆಯಲ್ಲಿ ಗೇಟಿನವರೆಗೂ ಹೋಗಿ ಬೀಳ್ಕೊಂಡು ಬಂದ ಮಹೇಶನ ಮನಸ್ಸು ಹತ್ತಿಗಿಂತ ಹಗುರವಾಗಿ ಗಾಳಿಯಲ್ಲಿ ತೇಲಿದಂತಾಯಿತು. ಈ ವಿಷಯವನ್ನು ಇವತ್ತೇ ಮನೆಯವರೊಂದಿಗೆ ಹಂಚಿಕೊಳ್ಳಬೇಕು. ಎಲ್ಲರಿಗಿಂತಾ ಹೆಚ್ಚು ಸಂತಸ ಪಡುವವಳು ದೇವಿ. ಅವಳಿಗೂ ಸಾಹುಕಾರ ರುದ್ರಪ್ಪನವರ ಬಗ್ಗೆ ಚೆನ್ನಾಗಿ ಗೊತ್ತು. ಅವರಿಗೆ ಯಾವುದೇ ಕೆಲಸ ವಹಿಸಿದರೂ ಅದು ಅವರಿಗೆ ಸರಿಯೆನಿಸಿದಲ್ಲಿ ಶತಾಯ ಗತಾಯ ಮಾಡೇ ಮಾಡಿಸುತ್ತಾರೆ. ಹಾಗೇ ಅವರ ಕೋರಿಕೆಯಂತೆ ನಾನೂ ಮಾಡಿದರೆ ಅನಿರೀಕ್ಷಿತವಾಗಿ ನನ್ನ ಪ್ರತಿಭೆಯ ಅನಾವರಣಕ್ಕೆ ಬಾಗಿಲು ತೆರೆದಂತಾಗುತ್ತದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಹುಂ ಇದು ಎಲ್ಲ ಸರಿಹೋಯಿತು ಆದರೆ ದೇವಿಯನ್ನು ನನ್ನ ಹೆಂಡತಿಯಂತೆ ನಡೆಸಿಕೊಳ್ಳಲಾಗುತ್ತಿಲ್ಲವಲ್ಲ, ಅದೇ ಸಮಸ್ಯೆ. ಮದುವೆಯಾದ ಪ್ರಾರಂಭದಲ್ಲೇ ನನ್ನಿಂದ ತೊಡಕಾಯಿತು. ಆ ನಂತರ ಏಕೋ ಏನೋ ಘಟನೆಗಳೆಲ್ಲ ವಿರುದ್ದ ದಿಕ್ಕಿನಲ್ಲಿ ಸಾಗುತ್ತಿವೆ. ನೆನ್ನೆ ನಾನು ಮಲಗಿದ್ದಾಗ ಆಕೆ ನನ್ನ ಹಣೆಗೆ ಹೂ ಮುತ್ತನ್ನಿತ್ತಳು. ನನಗೆ ಗೊತ್ತಾಯಿತು. ಆದರೆ ನನಗೆ ಏನೋ ಒಂದು ರೀತಿಯ ಅವ್ಯಕ್ತ ಭೀತಿಯಿಂದ ಕಣ್ಣು ತೆರೆಯಲಾಗಲಿಲ್ಲ. ಅವಳ ಕ್ರಿಯೆಗೆ ಪ್ರತಿಯಾಗಿ ನನ್ನ ಬಾಹುಗಳಿಂದ ಅವಳನ್ನು ನನ್ನೆದೆಗೆರಗಿಸಿಕೊಳ್ಳಬೇಕಿತ್ತು. ಅದು ಸಾಧ್ಯವಾಗಲೇ ಇಲ್ಲ. ನನ್ನ ಈ ಅಸಹಜ ನಡವಳಿಕೆಗೆ ಕಾರಣವನ್ನು ಅವಳೊಡನೆ ಹಂಚಿಕೊಳ್ಳಬೇಕು. ಛೇ..ಹಾಗೆ ಮಾಡಿದರೆ ಅವಳು ಏನೆಂದುಕೊಂಡಾಳು. ಬೇಡ, ಸ್ವಲ್ಪ ಸಮಯದ ಒಡನಾಟದಿಂದ ಬಯಕೆಯು ಮೂಡಬಹುದು ಎಂದುಕೊಂಡು ಸುಬ್ಬುವಿನ ವರದಿಯಂತೆ ಆದ ಕೆಲಸ, ಆಗಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸಲು ಆಳುಕಾಳುಗಳಿದ್ದ ಕಡೆಗೆ ನಡೆದ ಮಹೇಶ.
ಆ ದಿನ ರಾತ್ರಿ ಊಟವಾದ ಮೇಲೆ ವಾಡಿಕೆಯಂತೆ ಒಳಗಿನ ಅಂಗಳದಲ್ಲಿ ಎಲ್ಲರೂ ಕುಳಿತರು. ಮಹೇಶ “ಹಾ ! ಎಲ್ಲರು ಕೇಳಿ ಒಂದೊಳ್ಳೆಯ ಸುದ್ಧಿ” ಎಂದ.
ಎಲೆ ಅಡಿಕೆಯನ್ನು ಗಂಡನಿಗೆ ಮಡಿಸಿಕೊಡುತ್ತಿದ್ದ ಗೌರಮ್ಮನವರು “ಮಗಾ ಸಾಹುಕಾರ ರುದ್ರಪ್ಪನವರ ಸುದ್ಧಿ ತಾನೇ?” ಎಂದರು.
“ಹೂ..ಅವರಿಗೇನಾಯ್ತಮ್ಮ?” ಎಂದ ಕುತೂಹಲದಿಂದ.
“ಹ್ಹೆ.ಹ್ಹೆ. ಅವರಿಗೇನೂ ಆಗಿಲ್ಲ. ಅವರು ನಮ್ಮ ಮನೆಗೆ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ಬಂದಿದ್ದರು. ಅವರು ನಮ್ಮ ಜಮೀನಿನ ಹತ್ತಿರ ಹೋಗಿದ್ದು, ಅಲ್ಲಿ ನಿನಗೆ ಅವರಿಗೆ ನಡೆದ ಎಲ್ಲ ಮಾತುಕತೆ ಸಮಾಚಾರಗಳನ್ನು ಹೇಳಿ ದೇವಿಯಿಂದ ಒಂದು ಅರ್ಜಿ ಬರೆಸಿಕೊಂಡು ಹೋದರು. ಜೊತೆಗೆ ನಿನಗೆ ಕಾರ್ಯಾಗಾರದ ಬಗ್ಗೆ ಒಪ್ಪಿಸಿದ್ದನ್ನೂ ಹೇಳಿದರು. ಅವರು ತೋರಿದ ಉತ್ಸಾಹ, ಹುರುಪು ನೋಡಿದರೆ ನಮಗೆ ನಾವು ಅಂದುಕೊಂಡ ಕೆಲಸ ಆದಷ್ಟು ಬೇಗ ನೆರವೇರುತ್ತದೆ ಅನ್ನಿಸಿತು.” ಎಂದರು.
ಅದನ್ನು ಕೇಳಿದ ಮಹೇಶನಿಗೆ ಒಂದು ಕ್ಷಣ ನಿರಾಸೆಯಾದರೂ ಆ ಮನುಷ್ಯನ ಬದ್ಧತೆಯ ಬಗ್ಗೆ ತಲೆದೂಗಿದ. ಅದೇ ವೇಳೆಗೆ “ಮಹೇಶಣ್ಣಾ ನೀವು ನಮ್ಮ ಜಮೀನಿನಲ್ಲೇ ಕೃಷಿಯ ಪ್ರಾತ್ಯಕ್ಷಿಕೆಯನ್ನು ನಡೆಸುವ ಸುದ್ದಿ ಕೇಳಿ ನನಗಂತೂ ತುಂಬ ಸಂತೋಷವಾಯಿತು. ನೀವು ಅಲ್ಲಿ ಬೇರೆ ಊರಿಗೆ ಹೋಗಿಬಿಟ್ಟರೆ ಇಲ್ಲಿ ನಮಗೆ ಏನೋ ಖಾಲಿಖಾಲಿಯಾದಂತೆನ್ನಿಸುತ್ತದೆ. ನೀವು ಕೃಷಿಯ ಬಗ್ಗೆ ತಿಳಿದುಕೊಂಡಷ್ಟು ತಿಳಿವಳಿಕೆ ನನಗಿಲ್ಲ. ನೀವು ಹೀಗೆ ಮಾಡೆಂದರೆ ಹಾಗೆ ಮಾಡುತ್ತೇನಷ್ಟೇ. ಈಗ ಸಾಹುಕಾರ ರುದ್ರಪ್ಪನವರ ಯೋಜನೆ ನಮಗೂ ಒಳಿತು. ಜಮೀನಿಗೂ ಒಳಿತು. ನಿಮಗಂತೂ ಕೀರ್ತಿ ಸಂಪಾದನೆಯಾಗುತ್ತದೆ. ಇದು ನನ್ನ ಅನಿಸಿಕೆ” ಎಂದ ಸುಬ್ಬಣ್ಣ.
“ಹುಂ ಮಹೀ. ನೀವದನ್ನು ಒಪ್ಪಿಕೊಂಡುಬಿಡಿ. ಇದರ ಹಿಂದೆ ಅವರ ಸ್ವಾರ್ಥವಿದೆಯೆಂಬುದು ಗೊತ್ತು. ಏಕೆಂದರೆ ಮುಂದೆ ಬರಲಿರುವ ಚುನಾವಣೆಗೆ ಅವರು ಸ್ಪರ್ಧಿಸುತ್ತಾರೆಂಬ ಸುದ್ಧಿಯಿದೆ. ಇಂತದ್ದೆಲ್ಲ ಅವರಿಗೆ ಪ್ಲಸ್ ಪಾಯಿಂಟಾಗುತ್ತದೆ. ನಮ್ಮ ಕೆಲಸವೂ ಕುಳಿತಕಡೆಯೇ ಆಗುತ್ತದೆ. ಯೋಚಿಸಿ ನೋಡಿ” ಎಂದು ಸುಬ್ಬುವಿನ ಮಾತನ್ನು ಅನುಮೋದಿಸಿದಳು ದೇವಿ.
ಹುಂ ನಿಮಗೇನುಗೊತ್ತು ನನ್ನ ಮನಸ್ಸಾಗಲೇ ಆಕಡೆ ವಾಲಿದೆ. ಬಂದ ಭಾಗ್ಯವನ್ನು ಯಾರಾದರೂ ನಿರಾಕರಿಸುತ್ತಾರಾ. ಅದನ್ನು ಉಪಯೋಗಿಸಿಕೊಂಡೇ ನನ್ನ ಕೆಲಸವನ್ನು ಅವರಿಗೆ ಒರಗಿಸಿದ್ದು. ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಹುನ್ನಾರ ಇದು ಎಂದು ಮನಸ್ಸಿನಲ್ಲೇ ಅಂದುಕೊಂಡ ಮಹೇಶ. ಹೊರಗೇನೂ ತೋರ್ಪಡಿಸಿಕೊಳ್ಳದೆ “ನಿಮಗೆಲ್ಲರಿಗೂ ಸಮ್ಮತಿಯೆನ್ನಿಸಿದರೆ ಆಯಿತು. ನಾಳೆಯೇ ಫೋನ್ ಮಾಡಿ ಅವರಿಗೆ ಒಪ್ಪಿಗೆಯನ್ನು ತಿಳಿಸಿಬಿಡುತ್ತೇನೆ.” ಎಂದು ಹೇಳಿದ. ಎಂದಿನಂತೆ ತಂದೆಯ ಹತ್ತಿರ ಆ ದಿನದ ಆಗುಹೋಗುಗಳ ಮಾತನ್ನು ಮುಗಿಸಿ ಮಹಡಿ ಹತ್ತಿ ತನ್ನ ಕೋಣೆಗೆ ಹೋದ ಮಹೇಶ.
ತನ್ನ ಹಿಂದೆಯೇ ಬಂದ ದೇವಿಯನ್ನು “ಓ ಈ ದಿನದ ಟಾಕಿಂಗ್ ಪ್ರೊಗ್ರಾಂ ಮುಗಿದೇ ಹೋಯಿತೇ? ಅಥವಾ ಬೆಳಗಿನಿಂದ ಮಾತಾಡಿ ಮಾತಾಡಿ ಕೋಟಾ ಮುಗಿದ ಹಾಗೆ ಕಾಣುತ್ತೆ” ಎಂದ.
“ಹೂಂ ಹಾಗೆಂದರೂ ಸರಿ ಆದರೆ ಇವತ್ತು ನಾನು ನಿಮ್ಮ ಹತ್ತಿರ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು. ಅದಕ್ಕೇ ಬರುತ್ತಿದ್ದೇನೆ. ತಡಮಾಡಿದರೆ ನೀವು ನಿದ್ರೆಗೆ ಜಾರಿಬಿಡುತ್ತೀರಿ, ಮಾತನಾಡಲು ಆಗುವುದೇ ಇಲ್ಲ. ಬೆಳಗ್ಗೆ ಏಳುವಷ್ಟರಲ್ಲಿ ಮಂಗಮಾಯವಾಗಿರುತ್ತೀರಿ.” ಎಂದು ಮೆಲುದನಿಯಲ್ಲಿ ನುಡಿದು ಮಹೇಶನಿಗಿಂತ ಮುಂಚೆಯೇ ರೂಮಿನೊಳಕ್ಕೆ ನಡೆದಳು.
ಅದನ್ನು ಕೇಳಿಸಿಕೊಂಡ ಮಹೇಶ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತಲೇ ರೂಮಿನೊಳಗೆ ಬಂದ.
ನಿತ್ಯದಂತೆ ತನ್ನ ಧ್ಯಾನ ಮುಗಿಸಿ ರಾತ್ರಿ ಉಡುಪು ಧರಿಸಿ ಮಂಚದ ಹತ್ತಿರ ಬಂದಾಗ ಮಹೇಶ ಯಾವುದೊ ಪುಸ್ತಕದಲ್ಲಿ ತಲೆ ಹುದುಗಿಸಿಕೊಂಡದ್ದು ಕಾಣಿಸಿತು. ಅದನ್ನು ಗಮನಿಸುತ್ತಲೇ ಹಾಸಿಗೆ ಸರಿಪಡಿಸಿ ಅವನು ಕುಳಿತಿದ್ದ ಕುರ್ಚಿಯ ಎದುರಿಗೆ ಮತ್ತೊಂದು ಕುರ್ಚಿಯ ಮೇಲೆ ಕುಳಿತಳು.
ತನ್ನವಳು ಬಂದು ಕುಳಿತದ್ದನ್ನು ಗಮನಿಸಿದ ಮಹೇಶ ಪುಸ್ತಕವನ್ನು ಮುಚ್ಚಿಟ್ಟು “ದೇವಿ ನೀನು ಹೇಳಿದಂತೆ ಸಾಹುಕಾರ ರುದ್ರಪ್ಪನವರದ್ದು ಏನೇ ಸ್ವಾರ್ಥವಿದ್ದರೂ ಅವರ ಕಾರ್ಯಕ್ಷಮತೆ ಮೆಚ್ಚುವಂತದ್ದು.” ಎಂದು ಹೇಳಿದ.
“ಹೌದು ಮಹೀ, ನಮ್ಮಿಬ್ಬರ ಆಸೆ ಆಕಾಂಕ್ಷೆಗಳನ್ನು ತೊಂದರೆಯಿಲ್ಲದಂತೆ ನೆರವೇರಿಸಿಕೊಳ್ಳುವ ಸದವಕಾಶ ನೀಡಲು ಭಗವಂತನಂತೆ ಬಂದಿದ್ದಾರೆ” ಎಂದು ಸಂತಸ ವ್ಯಕ್ತಪಡೆಸಿದಳು ದೇವಿ.
ಇದೇ ಸುಸಮಯವೆಂದು ತನ್ನ ಮನದಲ್ಲಿ ಕೊರೆಯುತ್ತಿರುವ ಮತ್ತು ಹೇಳಬೇಕೆಂದಿರುವ ಸಂಗತಿಯನ್ನು ಹೇಳಬೇಕೆಂದು “ದೇವಿ ನಾನು ನಿನ್ನ ಹತ್ತಿರ ಒಂದು ವಿಷಯ ಹೇಳಬೇಕು. ಅನ್ಯಥಾ ಭಾವಿಸಬಾರದು” ಎಂದ ಮಹೇಶ.
ಹೂಂ ಯಾವ ವಿಷಯಕ್ಕೆ ಪೀಠಿಕೆಯೋ, ಏನು ಹೇಳುತ್ತಾರೋ ನೋಡೋಣ. ಆನಂತರ ನಾನು ಅಂದುಕೊಂಡಿದ್ದನ್ನೂ ಕೇಳಿಯೇ ಬಿಡುತ್ತೇನೆ ಅಂದುಕೊಂಡಳು ದೇವಿ. ಅಷ್ಟರಲ್ಲಿ ಮತ್ತೊಮ್ಮೆ ಅವನಿಂದ ನಿವೇದನೆ ಬಂದದ್ದರಿಂದ “ಗಂಡ ಹೆಂಡತಿಯಲ್ಲಿ ಅದೇನು ಫಾರ್ಮಾಲಿಟಿ, ನೇರವಾಗಿ ಹೇಳಿ ಮಹೀ” ಎಂದು ಕೇಳಿದಳು.
“ ಮತ್ತೆ..ಮತ್ತೇ ನೀನು ನನಗಿನ್ನೂ ನನ್ನ ಗೆಳತಿಯಂತೆಯೇ ಕಾಣುತ್ತಿದ್ದೀಯಾ, ನಿನ್ನನ್ನು ಹೆಂಡತಿಯಂತೆ ನಡೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿನ್ನ ಮೈ ಮುಟ್ಟುತ್ತಿದ್ದಂತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದೇನೆ, ಅನುಚಿತವಾಗಿ ವರ್ತಿಸುತ್ತಿದ್ದೇನೆ ಅನ್ನಿಸಿಬಿಡುತ್ತದೆ. ಅದಕ್ಕಾಗಿ ನನಗಿನ್ನೂ ಸ್ವಲ್ಪ ಸಮಯಾವಕಾಶ ಕೊಡುತ್ತೀಯಾ? ಪ್ಲೀಸ್” ಎಂದ ಮಹೇಶ. ಮೈಯೆಲ್ಲ ಹಿಡಿಯಾಗಿಸಿಕೊಂಡವನಂತೆ ತಲೆಬಗ್ಗಿಸಿಕೊಂಡು ತಗ್ಗಿದ ದನಿಯಲ್ಲಿ ಬೇಡಿಕೊಳ್ಳುವಂತೆ ಹೇಳಿದ್ದನ್ನು ಕೇಳಿದ ದೇವಿಗೆ ಒಂದುಕ್ಷಣ ಮ್ಯೆಯೆಲ್ಲಾ ಉರಿಯುವಂತಾಯಿತು. ತಕ್ಷಣವೇ ಸಾವರಿಸಿಕೊಂಡು ಕುಳಿತ ಕಡೆಯಿಂದ ಎದ್ದು ಅವನೆಡೆಗೆ ಬಂದಳು. ಅವನ ಕೈಹಿಡಿದು ಮಂಚದ ಹತ್ತಿರ ಕರೆದುಕೊಂಡು ಹೋದಳು. ಅದರ ಮೇಲೆ ಅವನನ್ನು ಕುಳ್ಳಿರಿಸಿ ತಾನೂ ಎದುರಿಗೆ ಕುಳಿತಳು.
“ಹೌದು ಮಹೀ, ಚಿಕ್ಕಂದಿನಿಂದಲೂ ನಾವಿಬ್ಬರೂ ಗೆಳೆಯರೇ. ಆದರೀಗ ಕಾಯಾ, ವಾಚಾ. ಮನಸಾ ಒಬ್ಬರನ್ನೊಬ್ಬರು ಒಪ್ಪಿಕೊಂಡು ಸಪ್ತಪದಿ ತುಳಿದು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದೇವೆ.. ಅರ್ಥೇಚ, ಧರ್ಮೇಚ, ಕಾಮೇಚ, ನಾತಿಚರಾಮಿ ಎಂದು ಶಪಥಗೈದು ನನಗೆ ಮಾಂಗಲ್ಯಧಾರಣೆ ಮಾಡಿದ್ದೀರಿ. ಅಂದಮೇಲೆ ನಾವಿಬ್ಬರೂ ಸಾಯುವವರೆಗೂ ಸತಿಪತಿಗಳು. ಹೀಗಿದ್ದೂ ನೀವಿನ್ನೂ ನನ್ನನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲವೆಂದರೆ! ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳಿ” ಎಂದು ಬಲವಂತವಾಗಿ ಅವನ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡು ಕೇಳಿದಳು ದೇವಿ. ಅವಳ ಕೈಗಳೆರಡೂ ಅವನ ಭುಜಗಳನ್ನು ಹಿಡಿದಿದ್ದವು. ಒಬ್ಬರಿಗೊಬ್ಬರು ಮುಖಾಮುಖಿಯಾಗಿದ್ದರು. ಒಂದೇ ಕ್ಷಣ, ಮಹೇಶನ ಮುಖದಲ್ಲಿ ಅವ್ಯಕ್ತ ಭಯ ಕಾಣಿಸಿತು. ಅದನ್ನು ಗಮನಿಸಿದ ದೇವಿ “ಏನಾಗುತ್ತಿದೆ? ಮಹೀ ಏಕೆ ಹೀಗೆ ವರ್ತಿಸುತ್ತೀರಿ? ನಮ್ಮದು ಪರಸ್ಪರ ಸಮರ್ಪಣಾಭಾವ, ವ್ಯವಹಾರವಲ್ಲ” ಎಂದು ತನ್ನ ಹಿಡಿತವನ್ನು ಸಡಿಲಗೊಳಿಸಿದಳು.
“ನಿಮ್ಮ ಮನದಲ್ಲೇನಾಗುತ್ತಿದೆ? ಅದನ್ನಾದರೂ ಹೇಳಿ. ನಾನೇನು ನಿಮ್ಮನ್ನು ಬಲವಂತವಾಗಿ ವಶಮಾಡಿಕೊಳ್ಳುವವಳಲ್ಲ. ನಿಮ್ಮ ತಲೆಯಿಂದ ಪಾಪಭೀತಿಯನ್ನು ತೆಗೆದುಹಾಕಿ. ಸಾಮಾನ್ಯವಾಗಿ ನಡೆದುಕೊಳ್ಳಿ. ನಾನು ಅಲ್ಲಿಯವರೆಗೂ ಕಾಯುತ್ತೇನೆ. ಆದರೆ ಪ್ರತಿದಿನ ನನ್ನೊಡನೆ ಒಡನಾಟವನ್ನಿರಿಸಿಕೊಳ್ಳಿ. ನಾವಿಬ್ಬರೂ ಬಾಳಸಂಗಾತಿಗಳಾಗಿದ್ದೇವೆ ಎಂಬ ಅರಿವು ನಿಮ್ಮಲ್ಲಿರಲಿ, ಗುಡ್‌ನೈಟ್” ಎಂದು ಮುಂದಿನ ಮಾತಿಗೆ ಅವಕಾಶ ನೀಡದೆ ಬ್ಲಾಂಕೆಟ್ ಹೊದ್ದು ಒಂದು ಮಗ್ಗುಲಿಗೆ ಮಲಗಿಬಿಟ್ಟಳು.
ಹೌದು ದೇವಿ ಹೇಳಿದಂತೆ ನನಗೇಕೆ ಹೀಗಾಗುತ್ತಿದೆ? ಅವಳ ಮೈ ಕೈ ಮುಟ್ಟಿದಾಗ ಸಹಜವಾಗಿಯೇ ಇರುತ್ತದೆ. ಯಾವುದೇ ರೀತಿಯ ಕಸಿವಿಸಿಯಾಗುವುದಿಲ್ಲ. ಆದರೆ ಪರಸ್ಪರ ಸಮೀಪಕ್ಕೆ ಬಂದಾಗ, ತಬ್ಬಿಹಿಡಿದಾಗ, ಅದೇ ಅವಳು ಆವೇಶಗೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಎಂದಳಲ್ಲ ಆಗ ಏನೋ ಭಯ, ನೇರವಾಗಿ ದೃಷ್ಟಿಯನ್ನು ಎದುರಿಸಲಾಗುವುದಿಲ್ಲ. ಅವ್ಯಕ್ತ ಭೀತಿ ಆವರಿಸಿಕೊಂಡು ದೇಹದ ಶಕ್ತಿಯೆಲ್ಲಾ ಸೋರಿಹೋಗಿ ನಿಶ್ಶಕ್ತನಾಗಿಬಿಡುತ್ತೇನೆ. ಎನೋ ತಪ್ಪು ಮಾಡುತ್ತಿದ್ದೇನೆಂಬ ಭಾವನೆ ಮನದಲ್ಲಿ ಮೂಡುತ್ತಿದೆಯಲ್ಲಾ..ಛೇ.. ಪಾಪ ಅವಳು ಅಳುತ್ತಿರುವಂತಿದೆ. ಅವಳನ್ನಪ್ಪಿ ಎದೆಗೊರಗಿಸಿಕೊಂಡು ಸಂತೈಸಬೇಕು. ನನ್ನ ಕೈಗಳೇಕೆ ಮುಂದಾಗುತ್ತಿಲ್ಲ? ಮನಸ್ಸೇಕೆ ಹಿಂಜರಿಯುತ್ತಿದೆ? ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾತ್ತಿರುವುದರಿಂದ ಅಕಡೆಗೆ ಗಮನ ಕೊಡಲಾಗುತ್ತಿಲ್ಲವೇ?..ಇಲ್ಲ ಹಾಗಲ್ಲ, ಏನೋ ಗೊತ್ತಿಲ್ಲ, ದೇವಿ ಹೇಳಿದಂತೆ ಮನಸ್ಸನ್ನು ಹದಗೊಳಿಸಿಕೊಳ್ಳಬೇಕು. ದೇವರೇ ನನಗೆ ದಾರಿ ತೋರಿಸು. ಎಂದು ಗೊಂದಲದಲ್ಲಿರುವಾಗಲೇ ಯಾವಾಗಲೋ ನಿದ್ರೆಗೆ ಜಾರಿದಂತಾಯಿತು. ಮೆಲುದನಿಯಲ್ಲಿ ‘ಮಹೀ’ ಎಂದು ಕರೆದಂತಾಗಿ ಕಣ್ಣುಬಿಟ್ಟ. ತೀರ ಸಮೀಪದಲ್ಲಿ ದೇವಿ ಅವನ ಹಣೆಯಮೇಲಿನ ಕೂದಲನ್ನು ಹಿಂದಕ್ಕೆ ಸರಿಸಿದಳು. “ಹೆದರಬೇಡಿ ನಿಮಗೆ ನಾನು ಟೈಂ ಕೊಡುತ್ತೇನೆ. ನಿಧಾನವಾಗಿ ನಾನು ನಿಮ್ಮ ಬಾಳಸಂಗಾತಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಪಡಿ. ಏಳಿ ಈಗ ಬಹಳ ಹೊತ್ತಾಗಿದೆ. ನೀವು ದಿನವೂ ಬೆಳಗ್ಗೆ ಏಳುವ ಸಮಯದ ಕ್ರಮ ತಪ್ಪಿಸಬೇಡಿ. ಎಲ್ಲರ ಬಾಯಿಗೆ ಇದು ಆಹಾರವಾಗಬಾರದು. ಬೇಗ ಸ್ನಾನ ಮುಗಿಸಿ ಬನ್ನಿ” ಎಂದುಹೇಳಿ ದೇವಿ ಕೆಳಗಿಳಿದುಹೋದಳು.
ಒಂದರೆಕ್ಷಣ ತಬ್ಬಿಬ್ಬಾದ ಮಹೇಶನಿಗೆ ರಾತ್ರಿಯಲ್ಲಿ ತಮ್ಮಿಬ್ಬರ ನಡುವೆ ನಡೆದ ಸನ್ನಿವೇಶಗಳು ಕಣ್ಮುಂದೆ ಬಂದು ನಿಂತಂತಾಯಿತು. ಹಾಗೇ ಈಗ ತಾನೇ ದೇವಿ ಹೇಳಿಹೋದ ಮಾತು ‘ಎಲ್ಲರ ಬಾಯಿಗೆ ಆಹಾರವಾಗಬಾರದು’ ನೆನಪಾಯಿತು. ಹೌದು ಗೆಳೆಯ ಗಣಪತಿಗಾದರೂ ಫೋನ್‌ಮಾಡಿ ನನ್ನ ಅಂತರಂಗದ ತುಮುಲವನ್ನು ಹೇಳಿಕೊಂಡರೆ ಹೇಗೆ? ಅವನಿಂದ ಏನಾದರೂ ಸಲಹೆ, ಸೂಚನೆ, ಪರಿಹಾರ ಸಿಗಬಹುದೇ? ಉಹುಂ..ಬೇಡಬೇಡ ಅವನಲ್ಲಿಗೆ ಹೋಗಿದ್ದಾಗ ಅವರ ಮನೆಯಲ್ಲಿ ಪೂಜೆಯ ಸಮಯದಲ್ಲಿ ಬಂದಿದ್ದ ಮಹಾತ್ಮರಿಗೆ ಗಣಪತಿ ಇವರು ಇತ್ತೀಚೆಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ ಆಶೀರ್ವದಿಸಿ ಎಂದು ತನ್ನನ್ನು ಪರಿಚಯಿಸಿದ್ದ. ಆಗವರು ನನ್ನನ್ನು ಆಪಾದಮಸ್ತಕ ವೀಕ್ಷಿಸಿ ಶುಭವಾಗಲಿ ಎಂದರಷ್ಟೇ. ಆಗ ನಾನು ಈ ಸ್ವಾಮಿಗಳು ತುಂಬ ಚೆನ್ನಾಗಿ ಭವಿಷ್ಯ ಹೇಳುತ್ತಾರಂತೆ. ನನಗೂ ಕೇಳಿ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ ಕೇಳಲೇನು? ಎಂದಿದ್ದೆ. ಆಗವನು ಈ ಗೀಳನ್ನು ಬೆಳೆಸಿಕೊಳ್ಳಬೇಡ ಗೆಳೆಯಾ, ನಾನೂ ಜ್ಯೋತಿಷ್ಶಾಸ್ತ್ರ ಕಲಿತಿದ್ದೇನೆ, ಆದರೆ ನನ್ನ ಭವಿಷ್ಯವೇ ನನ್ನ ಕೈಯಲ್ಲಿಲ್ಲ. ಜಾತಕದ ಪ್ರಕಾರ ಎಲ್ಲವೂ ದಿವ್ಯವಾಗಿದೆ. ಮನೆತನವೂ ಉತ್ತಮವಾದುದು. ಆದರೆ ವಿಧಿಲಿಖಿತ ಬೇರೇನೋ ಇದೆ. ಅಂದಮೇಲೆ ಜನ್ಮದ ಘಳಿಗೆಗೂ ಸುತ್ತಮುತ್ತಲಿನ ಲೆಕ್ಕಾಚಾರಗಳಿಗೂ ಕರಾರುವಾಕ್ಕಾಗಿದೆ ಎಂದು ಹೇಳಲಾಗದು. ಸುತ್ತಮುತ್ತಲಿನ ಜನರೇಕೆ, ಬಹುತೇಕರು ¸ಣ್ಣಸಣ್ಣ ತೊಂದರೆ ಬಂದರೂ ತಡೆದುಕೊಳ್ಳಲಾಗದೆ ಪರಿಹಾರ ಕೇಳಲು ಓಡಿಬರುತ್ತಾರೆ. ಅವರೆಲ್ಲ ಏನಾದರೂ ಶಾಂತಿ ಮಾಡಿಸಬೇಕಾದರೆ ಮಾಡಿಸಿಬಿಡಿ ಖರ್ಚು ಹೆಚ್ಚಾದರೂ ಪರವಾಗಿಲ್ಲ ಹೇಗಾದರೂ ಈ ಸಮಸ್ಯೆಗೆ ಪರಿಹಾರ ಕೊಡಿಸಿ ಎಂದು ಅಲವತ್ತುಕೊಳ್ಳುತ್ತಾರೆ. ಅವರಿಗೆ ಇಲ್ಲಿಗೆ ಬಂದರೆ ಹೇಗಾದರೂ ಸಮಸ್ಯೆ ದೂರಹೋಗುತ್ತದೆ ಅವರ ನಂಬಿಕೆ. ಇತ್ತೀಚೆಗಂತೂ ವಿವಾಹಕ್ಕಾಗಿ ವಧೂ ವರರನ್ನು ಹುಡುಕಿ ಅಲೆದುಸಾಕಾಗಿ ಬೇಸತ್ತ ತಂದೆತಾಯಿಗಳು ತಮ್ಮ ಮಕ್ಕಳ ನಿಜವಾದ ಹುಟ್ಟಿದ ದಿನಾಂಕ, ವಯಸ್ಸುಗಳನ್ನೇ ಬದಲಾಯಿಸಿದರೂ ಸರಿ ಹೇಗಾದರೂ ಬಂದಿರುವ ಪ್ರಸ್ತಾವನೆಗಳಿಗೆ ಹೊಂದಿಸಿಕೊಡಿ ಎಂದು ಹಣದ ಆಮಿಷವನ್ನು ಒಡ್ಡುತ್ತಾರೆ. ಇವೆಲ್ಲ ವಿದ್ಯಮಾನಗಳಿಂದ ಬೇಸತ್ತು ನಾನು ಪುರುಸೊತ್ತಾಗುತ್ತಿಲ್ಲ ಕ್ಷಮಿಸಿ ಎಂದು ಪೂಜೆ ಪುನಸ್ಕಾರಗಳಿಗೆ ಮಾತ್ರ ನನ್ನ ಚಟುವಟಿಕೆಯನ್ನು ಸೀಮಿತಗೊಳಿಸಿಕೊಂಡು ಬಿಟ್ಟಿದ್ದೇನೆ. ಜ್ಯೋತಿಷ್ಯ ಸುಳ್ಳಲ್ಲ ನಿಜ. ವೈಜ್ಞಾನಿಕವಾಗಿಯೂ ಅರ್ಥೈಸಿದ್ದಾರೆ. ಒಪ್ಪುತ್ತೇನೆ. ನಮ್ಮ ಮನೆಗೆ ಬಂದಿದ್ದ ಮಹಾತ್ಮರು ಪ್ರಚಂಡರೇ ಸರಿ. ಅವರನ್ನು ನಾವಾಗಿ ಕೇಳದಿದ್ದರೆ ಏನನ್ನೂ ಹೇಳುವುದಿಲ್ಲ. ಹಾಗೇ ರಹಸ್ಯವನ್ನು ಕಾಪಾಡುತ್ತಾರೆ. ಅದರೆ ನಾವು ಕೊಟ್ಟ ಲೆಕ್ಕಾಚಾರ ಹಾಕುವಾಗ ಸ್ವಲ್ಪ ಹೆಚ್ಚೂಕಡಿಮೆ ಆದರೂ ಯಡವಟ್ಟು ಪರಿಣಾಮ ಖಚಿತ. ಇದು ಕೇಳಿದವರ ಆತ್ಮಬಲವನ್ನು ಕುಗ್ಗಿಸಿಬಿಡುತ್ತದೆ. ಆ ಕ್ಷೇತ್ರ ನಿನ್ನದಲ್ಲ ಬಿಡು. ನೀನು ಬಾಲ್ಯದ ಗೆಳತಿಯನ್ನೇ ವರಿಸಿದ್ದೀಯೆ. ಒಬ್ಬರಿಗೊಬ್ಬರು ಅನುಸರಿಸಿಕೊಂಡು ಬದುಕು ನಡೆಸುವುದನ್ನು ಕಲಿಯಿರಿ. ಬಾ ಎಂದು ಕೈಹಿಡಿದು ಹೊರಗೆಳೆದುಕೊಂಡು ಬಂದಿದ್ದನು. ಅನಂತರ ಜನಜಂಗುಳಿಯಲ್ಲಿ ಗುರುಗಳು ಒಬ್ಬರೇ ಸಿಗಲಿಲ್ಲ. ಕೆಲಸ ಕಾರ್ಯಗಳ ನಡುವೆ ಸಮಯ ಹೋದದ್ದೇ ತಿಳಿಯಲಿಲ್ಲ. ಅ ಕ್ಷಣಕ್ಕೆ ಅವನು ಹೇಳಿದ್ದು ಸರಿಯೆನ್ನಿಸಿ ಮತ್ತೆ ಆ ಕಡೆ ಗಮನ ಹರಿಸಲಿಲ್ಲ. ಆದರೀಗ ಅಡೆತಡೆಗಳು, ಈ ರೀತಿಯ ಅಸಹಜತೆಗೆ ಏನೇನೋ ಯೊಚಿಸುವಂತಾಗಿದೆ. ಅಲ್ಲದೆ ಈಗ ಮತ್ತೆ ಅವನಲ್ಲಿ ನಿವೇದಿಸಿಕೊಂಡರೆ ನನ್ನ ಬಗಲಿಗೇ ಗೂಟ ಹೊಡೆದುಕೊಂಡು ಪ್ರಚಾರವಾಗುವಂತಾದರೆ..ಬೇಡಪ್ಪ, ಸದ್ಯಕ್ಕೆ ಅದಕ್ಕೆ ವಿರಾಮ ಹಾಕಿ ಕೆಲಸದ ಕಡೆಗೆ ಗಮನ ಹರಿಸೋಣವೆಂದುಕೊಂಡು ಹಾಸಿಗೆಯಿಂದೆದ್ದು ಪ್ರಾತಃವಿಧಿಗಳನ್ನು ಮುಗಿಸಿ ಸ್ನಾನಮಾಡಿ ಕೆಳಗಿಳಿದು ಬಂದ ಮಹೇಶ.
ಹಾಲಿನಲ್ಲೇ ಕುಳಿತಿದ್ದ ಗೌರಮ್ಮನವರು ಕೆಳಗಿಳಿದು ಬಂದ ಮಗನನ್ನು ನೋಡಿದರು. “ಏಕಪ್ಪಾ ದೇಹದಲ್ಲಿ ಸ್ವಾಸ್ಥ್ಯ ವಿಲ್ಲವೇ? ಎಂದೂ ಇಷ್ಟು ತಡವಾಗಿ ಏಳುವವನಲ್ಲ. ದೇವಿ ಹೇಳಿದಳು ನೀನೇನೋ ಬುಕ್ ಹಿಡಿದು ಕುಳಿತಿದ್ದೆಯಂತೆ, ರಾತ್ರಿ ಎಷ್ಟು ಹೊತ್ತಿಗೆ ಮಲಗಿದರೋ ಕಾಣೆ ಅತ್ತೆ ಎಂದು. ಹಾಗೇಕೆ ನಿದ್ದೆಗೆಟ್ಟು ಓದುವಂಥದ್ದೇನಿದೆ? ಅರೋಗ್ಯದ ಕಡೆ ಗಮನ ಕೊಡು. ನೀನು ಏಳದಿದ್ದುದನ್ನು ನೋಡಿ ಸುಬ್ಬಣ್ಣನ ಜೊತೆ ನಿಮ್ಮಪ್ಪ ಜಮೀನಿನ ಹತ್ತಿರ ಹೋಗಿದ್ದಾರೆ. ಆಲಸ್ಯವೆನ್ನಿಸಿದರೆ ಮನೆಯಲ್ಲೇ ಇದ್ದುಬಿಡು.” ಎಂದು ಹೇಳುತ್ತ ಹತ್ತಿರ ಬಂದು ಮೈಕೈ ಮುಟ್ಟಿ ನೋಡಿದರು.
ಇದರಿಂದ ತನ್ನ ಬಗ್ಗೆ ತನಗೇ ನಾಚಿಕೆಯಾದಂತಾಗಿ ಛೇ..ಇನ್ನೆಂದು ಹೀಗಾಗಲು ಬಿಡುವುದಿಲ್ಲ ಎಂದುಕೊಂಡು ಅಲ್ಲಿಗೆ ಬಂದು ನಿಂತಿದ್ದ ದೇವಿಯ ಕಣ್ಣು ತಪ್ಪಿಸಿ ಪೂಜಾಗೃಹವನ್ನು ಹೊಕ್ಕನು ಮಹೇಶ.
ಇದಾದ ಮೇಲೆ ಏನೂ ನಡೆದೇ ಇಲ್ಲವೇನೋ ಎಂಬಂತೆ ದೇವಿ ಮಹೇಶನೊಡನೆ ನಡೆದುಕೊಂಡಳು. ಆದರೆ ಮಹೇಶನಿಗೆ ‘ನಾನೇನೂ ನಿಮ್ಮನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ. ಒಡನಾಟವಿರಿಸಿಕೊಳ್ಳಿ’ ಎಂಬ ಮಾತುಗಳು ಪದೇಪದೇ ಕಿವಿಯಲ್ಲಿ ಮಾರ್ದನಿಸುತ್ತಿದ್ದವು. ಅವನೊಳಗೆ ಹೀಗೇಕೆ ಆಗುತ್ತಿದೆಯೆಂಬ ಪ್ರಶ್ನೆಗಳು ಏಳತೊಡಗಿದವು. ಈ ಚಿಂತೆಯಲ್ಲಿಯೇ ತಿಂಗಳುರುಳಿದ್ದು ಗೊತ್ತಾಗಲೇ ಇಲ್ಲ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40848
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ತುಂಬಾ ಚೆನ್ನಾಗಿದೆ ಮೇಡಂ
ಧನ್ಯವಾದಗಳು ವನಿತಾ ಮೇಡಂ
ಪ್ರಕಟಣೆಗಾಗಿ ಗೆಳತಿ ಹೇಮಾರವರಿಗೆ ಧನ್ಯವಾದಗಳು..
Beautiful
ಧನ್ಯವಾದಗಳು ನಯನಮೇಡಂ
ಈ ಸಲದ ಚರಣದಲ್ಲಿ ಮಹೇಶನ ಅಸಹಜ ನಡವಳಿಕೆಯು ಸೂಕ್ಷ್ಮವಾಗಿ ಅನಾವರಣಗೊಂಡು ಕಥೆಗೆ ಕುತೂಹಲಕಾರಿ ತಿರುವನ್ನು ನೀಡುವುದರಲ್ಲಿ ಸಫಲವಾಗಿದೆ..ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ