ಒಂದು ಹಗ್ಗಕ್ಕೆ ಎರಡು ಲಾರಿ !
ವಿನಾಕಾರಣ ನಾವು ಆಸ್ಪತ್ರೆಗಾಗಲೀ, ಸ್ಮಶಾನಕ್ಕಾಗಲೀ ಹೋಗಲಾರೆವು. ಏನಾದರೊಂದು ಹಿನ್ನೆಲೆ ಮತ್ತು ಕಾರಣಗಳಿಲ್ಲದೇ ಸುಖಾ ಸುಮ್ಮನೆ ಒಂದು ರೌಂಡು ಆಸ್ಪತ್ರೆಗೆ ಹೋಗಿ ಅಡ್ಡಾಡಿ ಬರೋಣ ಎಂದು ಹೋದವರಿಲ್ಲ. ತೀರಾ ಅಪರೂಪ. ಇನ್ನು ಸ್ಮಶಾನಕ್ಕೆ ವಾಯುವಿಹಾರಾರ್ಥ ಹೋಗಿ ಬಂದವರನ್ನು ಕೇಳಿಯೇ ಇಲ್ಲ! ಅಂದರೆ ಬದುಕಿನ ನಶ್ವರತೆ ಮತ್ತು ನೋವುಗಳನ್ನು ನಾವಾಗಿಯೇ ಅರಿಯಲು ಹೊರಡುವುದಿಲ್ಲ!! ಹಾಗೆ ಹೋದವರನ್ನು ಹುಚ್ಚರು ಎಂತಲೋ ತಿಕ್ಕಲು ಎಂತಲೋ ಕರೆದು ಕೈ ತೊಳೆದುಕೊಳ್ಳುತ್ತೇವೆ. ಅಂಥ ಎಡವಟ್ಟುತನದ ಸ್ವಾನುಭವದೊಂದಿಗೆ ಒಂದಷ್ಟು ನನ್ನೊಳಗೆ ನಾನಿಳಿದು, ನಾನರಿಯುವ ಪ್ರಯತ್ನ ಈ ಬರೆಹ.
ನನಗೊಬ್ಬ ವಿಚಿತ್ರ ಸಹಪಾಠಿ ಇದ್ದ. ಆತನೊಂದಿಗೆ ಎರಡು ವರ್ಷ ಕಾಲ ಜೊತೆಗಿರುವ ಸಂದರ್ಭ ಬಂದಿತ್ತು. ದಿನಾ ಸಂಜೆ ಆತ ಚಾಮುಂಡಿಬೆಟ್ಟ ತಪ್ಪಲಿಗೆ ಹೊಂದಿಕೊಂಡಂತಿರುವ ಸ್ಮಶಾನಕ್ಕೆ ಹೋಗಿ ಬರುತ್ತಿದ್ದ. ಕೇಳಿದಾಗ ‘ನನಗೆ ಅಲ್ಲಿ ವಿಚಿತ್ರ ನೆಮ್ಮದಿ ಸಿಗುತ್ತದೆ, ಧ್ಯಾನಸ್ಥನಾಗುತ್ತೇನೆ. ಮರಳಿ ಬಂದ ಮೇಲೆ ಓದಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ’ ಎನ್ನುತ್ತಿದ್ದ. ಹೌದೇ ಎಂದು ಸುಮ್ಮನಾಗಿದೆ. ಸುಮ್ಮನಾಗುವುದು ನನ್ನ ಸ್ವಭಾವ ಕೂಡ. ಉಳಿದ ಸ್ನೇಹಿತರು ಕಿಚಾಯಿಸುತ್ತಿದ್ದರು. ‘ಏನೋ ಇದೆ, ಗಾಂಜಾ ಸೇದಲು ಹೋಗಬಹುದು ಅಥವಾ ಬ್ಲಾಕ್ ಮ್ಯಾಜಿಕ್ ವಶಪಡಿಸಿಕೊಳ್ಳಲು ಯಾವುದೋ ಮಾಟಗಾರನ ಹಿಂದೆ ಬಿದ್ದಿರಬೇಕು’ ಎಂದನುಮಾನ ವ್ಯಕ್ತಪಡಿಸಿದ್ದರು. ಆತನೇ ಒಮ್ಮೆ ನನ್ನನ್ನು ಜೊತೆಗೆ ಕರೆದುಕೊಂಡು ಹೋದ. ಒಂದು ಸಮಾಧಿಯ ಬಳಿ ಧ್ಯಾನಸ್ಥನಾದ. ಅರ್ಧ ಗಂಟೆ ಕಣ್ಣು ಮುಚ್ಚಿ ಕುಳಿತಿದ್ದ. ಇವನಂತೆ ಇನ್ನಾರೋ ಬಂದರು. ಆಮೇಲೆ ಇಬ್ಬರೂ ಅದೂ ಇದೂ ಮಾತಾಡಿದರು. ಯಾವುದೋ ಉದ್ಯಾನವನದಲ್ಲಿ ಕುಳಿತಿದ್ದವರಂತೆ ಅಲ್ಲೂ ಲೌಕಿಕವೇ ವಿಜೃಂಭಿಸಿತು. ನನಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಸುತ್ತ ಆವರಿಸಿ, ಬಿಕ್ಕುತ್ತಿದ್ದ ಸ್ಮಶಾನದ ಭೀಕರ ನೀರವತೆಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದೆ. ಓದಿದ ಸಾಹಿತ್ಯ, ಸತ್ತು ಸ್ವರ್ಗಸ್ಥರಾದ ಪಿತೃಗಳು, ವಾಚನ ಮಾಡುವ ಗರುಡ ಪುರಾಣ ಎಲ್ಲವೂ ನೆನಪಾದವು. ಒಂಥರಾ ವಿಲಕ್ಷಣ ಸೌಂದರ್ಯವನ್ನು ಆಸ್ವಾದಿಸಿದೆ. ಇನ್ನಾರೋ ಬಂದರು. ಸ್ವಲ್ಪ ಹೊತ್ತು ಪುಸ್ತಕವನ್ನು ಓದಿ, ಮಡಚಿಟ್ಟು, ಸಿಗರೇಟು ಸೇದತೊಡಗಿದರು. ಯಾವುದೋ ಪುಡಿಯನ್ನು ಅದರೊಳಗೆ ತುಂಬಿ ಹೊಗೆ ಬಿಟ್ಟು ಆನಂದವಾದರು. ಅವರ ಮಾತುಕತೆಗಳಲ್ಲಿ ‘ಹೇಗೂ ಒಂದು ದಿವಸ ಸಾಯುತ್ತೇವೆ. ಸೇದಿಯೇ ಸಾಯೋಣ’ ಎಂಬ ಸಾರಾಂಶವಿತ್ತು. ಇನ್ನಾರೋ ಮಂತ್ರವಾದಿಯಂಥವನು ಬಂದ. ಬ್ಯಾಗಿನಿಂದ ಪುಟ್ಟ ಪುಟ್ಟ ಬೊಂಬೆಗಳನ್ನು ಹೊರತೆಗೆದು ಮಂಡಲ ಬರೆದು ಪೂಜಿಸಿದ. ವಿಚಿತ್ರ ಮಂತ್ರ ಹೇಳಿದ. ಯಾವುದೋ ಗೊಂಬೆಯ ಕೈ ಮುರಿದು ಅಬ್ಬರಿಸಿದ. ಕುತೂಹಲದಿಂದ ನೋಡುತಿದ್ದ ನನ್ನನ್ನು ಕರೆದು ಮಾತಾಡಿಸಿದ. ನಾನು ವಿದ್ಯಾರ್ಥಿ, ಆತನೊಂದಿಗೆ ಬಂದಿರುವೆ ಎಂದು ಬೆರಳು ತೋರಿದೆ. ನಿರ್ಲಕ್ಷ್ಯ ನಗೆ ಬೀರಿ, ಯಾಕೋ ಸುಮ್ಮನಾದ.
ಇದಾದ ಮೇಲೆ ಸುಖಾ ಸುಮ್ಮನೆ ಯಾವತ್ತೂ ಸ್ಮಶಾನಕ್ಕೆ ಹೋಗಲಿಲ್ಲ. ಹೋಗಬೇಕೆನಿಸಲಿಲ್ಲ. ಬಂಧುಗಳು ಸತ್ತಾಗ ಹೋದದ್ದುಂಟು. ಇನ್ನು ತಾಯ್ತಂದೆಯರು ದಿವಂಗತರಾದಾಗ ಆ ಸ್ಮಶಾನಕ್ಕೆ ಹೋಗಬೇಕಾಯಿತು. ಈಗ ಸ್ಮಶಾನಕ್ಕೂ ಕಾವಲು. ವಿನಾಕಾರಣ ಹೋಗುವಂತಿಲ್ಲ. ಉದ್ಯಾನವನದಂತೆ ಬಳಸಿಕೊಳ್ಳಲು ಆಸ್ಪದವಿಲ್ಲ. ಮೈಸೂರಿನ ವಿಜಯನಗರದಲ್ಲಿರುವ ಮಹಾನಗರಪಾಲಿಕೆಯ ಸ್ಮಶಾನ ತುಂಬ ಸುಂದರವಾಗಿದೆ. ಆ ಮಟ್ಟಿಗೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ‘ಈ ಸ್ಮಶಾನ ನೋಡೋಕೆ ಜನ ಸಾಯ್ತಾರೆ ’ ಅಂತೊಂದು ಗಾದೆಯನ್ನೇ ಮಾಡಿಟ್ಟಿದ್ದೆ.
ಕೆ ಆರ್ ಎಸ್ ಕಾಲೇಜಿನಿಂದ ಬೇಗ ಮನೆಗೆ ಮರಳಿ ಬರುವಂತಾದ ದಿನಗಳಲ್ಲಿ ಕೆಲವು ಬಾರಿ ಅಲ್ಲಿಗೆ ಹೋಗಿ ನಾನು ಕುಳಿತು ಬರುತ್ತಿದ್ದೆ. ಮನೆಯಲ್ಲೂ ಯಾರೂ ಇರುತ್ತಿರಲಿಲ್ಲ; ಮಡದಿಯು ಮಗನ ವಿದ್ಯಾಭ್ಯಾಸ ನಿಮಿತ್ತ ಆಗಾಗ ಬೆಂಗಳೂರಿನಲ್ಲಿ ಇರುತ್ತಿದ್ದಳು. ಹಾಗಾಗಿ, ಮನೆಗೆ ಹೋಗಿ ಮಾಡುವುದೇನು? ಎಂದುಕೊಂಡು ಇಲ್ಲಿಯ ರುದ್ರಭೂಮಿಗೆ ಹೋಗುತ್ತಿದ್ದೆ. ಅಲ್ಲಿಯ ಕಾವಲುಗಾರ ಪರಿಚಯವಾಗಿದ್ದ. ಆತ ನನ್ನೊಂದಿಗೆ ಆತ್ಮೀಯವಾಗಿ ಮಾತಾಡುತಿದ್ದ. ಕೋವಿಡ್ ಕಾಣಿಸಿಕೊಂಡ ಮೇಲೆ ಅಲ್ಲಿಯ ಸ್ಮಶಾನಕ್ಕೂ ವಿಪರೀತ ನಿರ್ಬಂಧಗಳನ್ನು ವಿಧಿಸಲಾಯಿತು. ಇನ್ನು ‘ಮಸಣಕ್ಕೆ ಹೋಗಬಾರದು, ಹೋಗಿ ಬಂದ ಮೇಲೆ ಸ್ನಾನ ಮಾಡಬೇಕು, ಭೂತಪ್ರೇತಗಳು ಅಡರಿಕೊಳ್ಳುತ್ತವೆಂಬ ಮಾತು’ಗಳಲ್ಲಿ ನನಗೆ ನಂಬಿಕೆ ಇಲ್ಲದೇ ಇದ್ದುದರಿಂದ ಅಪರೂಪದ ಸಂತೋಷ ಮತ್ತು ತಾದಾತ್ಮ್ಯವನ್ನು ನಾನು ಅನುಭವಿಸಿದ್ದು ಸುಳ್ಳಲ್ಲ.
ಈ ಸ್ಮಶಾನ ಪುರಾಣ ಏಕೆಂದರೆ ಅಲ್ಲಿ ಪ್ರೇಮಿಗಳ ಕಾಟ ಇಲ್ಲ, ವಿಹಾರಕ್ಕಾಗಿ ಬರುವವರಿಲ್ಲ, ನನ್ನ ರೀತಿ ಸುಖಾ ಸುಮ್ಮನೆ ಬರುವವರಿಲ್ಲ! ಸತ್ತವರನ್ನು ಹೊತ್ತು ಬಂದವರಿಗೆ ಮುಂದಣ ಕಾರ್ಯಗಳ ಚಿಂತೆ; ದುಡ್ಡು ಖರ್ಚು ಮಾಡುವ ಲೆಕ್ಕಾಚಾರ. ಹಾಗಾಗಿ ಅಂಥವರನ್ನೂ ಸ್ಟಡಿ ಮಾಡುವ ಜೀವಂತ ಪ್ರಯೋಗಾಲಯವದು. ಇನ್ನು ಆಸ್ಪತ್ರೆ ಎಂಬುದು ಸ್ಮಶಾನದ ಸೋದರ. ಬಹಳಷ್ಟು ಸಲ ಆಸ್ಪತ್ರೆಗಳೇ ಸ್ಮಶಾನಕ್ಕೆ ರಹದಾರಿ. ಅಲ್ಲಿ ಸತ್ತರೂ ಇನ್ನೇನು ಸಾಯುತ್ತಾರೆಂದಿದ್ದರೂ ಮನೆಗೆ ಕೊಂಡೊಯ್ದು ಸ್ವಲ್ಪ ಕಾಲ ಇಟ್ಟು ಆನಂತರ ಸ್ಮಶಾನಕ್ಕೆ ಹೆಣಗಳು ಬರುವುದುಂಟು.
ಕೆ ಆರ್ ಆಸ್ಪತ್ರೆಯ ಅದರಲ್ಲೂ ಮೂಳೆ ಮತ್ತು ಕೀಲು ವಿಭಾಗದಲ್ಲೋ ಸುಟ್ಟಗಾಯಗಳ ವಿಭಾಗದಲ್ಲೋ ಒಂದು ಸುತ್ತು ಹಾಕಿ ಬಂದರೆ ಅನಗತ್ಯ ಸಿಟ್ಟು ಸೆಡವುಗಳು ನಿರಸನಗೊಳ್ಳುತ್ತವೆ. ಹೊಡೆದಾಡಿದವರು, ಹೊಡೆಸಿಕೊಂಡವರು, ಹೊಡೆದು ಹೊಡೆಸಿಕೊಂಡವರ ಕಡೆಯವರು ಕೊರಗುತ್ತಿರುವವರು, ಅಪಘಾತಗಳಿಂದ ಜರ್ಜರಿತರಾಗಿ ನರಳುತ್ತಿರುವವರು, ವಿಧಿ ವಿಪರೀತಕ್ಕೆ ಶಾಪ ಹಾಕುತ್ತಿರುವವರು- ಹೀಗೆ ಅದೊಂದು ಯಾತನಾ ಶಿಬಿರ. ಮನಸ್ಸು ಮೃದುವಾಗಲು ಇಂಥದೊಂದು ನೋಟ ಸಾಕು; ಸಿಂಪಥಿಯ ಸ್ಪರ್ಶ ಬೇಕು. ನಮ್ಮ ದಿನನಿತ್ಯದ ಯಾಂತ್ರಿಕ ಜೀವನದಲ್ಲಿ ‘ರೇಗುತ್ತೇವೆ, ಕೂಗುತ್ತೇವೆ, ವ್ಯಗ್ರರಾಗುತ್ತೇವೆ, ಹತಾಶೆ ಮತ್ತು ನಿರಾಶೆಗಳಿಂದ ಕುಗ್ಗಿ ಹೋಗುತ್ತೇವೆ. ಉಗುರು ಕತ್ತರಿಸಲು ಕೊಡಲಿಯಾಡಿಸುತ್ತೇವೆ. ಹತ್ತು ಪರ್ಸೆಂಟ್ ಕ್ರಿಯೆಗೆ ಎಂಬತ್ತು ಪರ್ಸೆಂಟ್ ಪ್ರತಿಕ್ರಿಯಿಸಿ, ಇನ್ನಷ್ಟು ಜಟಿಲ ಮಾಡುತ್ತೇವೆ. ನೀರು ತಿಳಿಯಾಗುವ ಹೊತ್ತಿಗೆ ನಾವೂ ಇನ್ನೊಂದು ಕಲ್ಲನೆಸೆದು ರಾಡಿಗೊಳಿಸುತ್ತೇವೆ. ವಿನಾಕಾರಣ ಕಡ್ಡಿಯಾಡಿಸುತ್ತೇವೆ.’ ಕೇಳದಿದ್ದರೂ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಘಟನೆ-ಸಂದರ್ಭಗಳನ್ನು ಹೈಜಾಕ್ ಮಾಡುತ್ತೇವೆ. ಉಂಟಾದ ಸಮಸ್ಯೆ-ತೊಡಕುಗಳನ್ನು ಬಗೆಹರಿಸುವತ್ತ ಆಲೋಚಿಸಿ, ಕಾರ್ಯೋನ್ಮುಖರಾಗುವ ಬದಲು ಸಮಸ್ಯೆಗಳು ಯಾರಿಂದ ಮತ್ತು ಯಾತರಿಂದ ಆಯಿತೆಂದು ಕಾರಣ ಹುಡುಕುತ್ತಾ ಅಂಥವರನ್ನು ಅರಸಿ, ಬಯ್ಯಲು ಶುರುಮಾಡುತ್ತೇವೆ. ಈಗಾಗಲೇ ಅಲ್ಲಿದ್ದ ನಕಾರಾತ್ಮಕತೆಗೆ ನಮ್ಮೊಳಗಿನ ಇನ್ನಷ್ಟು ನೆಗಟೀವು ನೋವುಗಳನ್ನು ಬೆರೆಸಿ ಒಟ್ಟೂ ಪ್ರಕರಣವನ್ನು ಗಬ್ಬೆಬ್ಬಿಸುತ್ತೇವೆ. ಇಂಥ ಪ್ರತಿಯೊಂದು ಸಂದರ್ಭದಲ್ಲೂ ನಮ್ಮ ನಾನತ್ವವನ್ನು ಪ್ರತಿಷ್ಠಾಪಿಸಲು ಹೆಣಗುತ್ತೇವೆ. ನಮ್ಮ ಈಗೋ ತೃಪ್ತಿಪಡಿಸಲು ಗೊಣಗುತ್ತೇವೆ. ಇದರಿಂದ ಎಲ್ಲರ ಮನಸ್ಥಿತಿ ಹಾಳಾಗುತ್ತದೆ. ಪರಸ್ಪರ ದೋಷಾರೋಪಗಳು ವಿಜೃಂಭಿಸಿ, ನೀನು-ತಾನುಗಳೇ ಪ್ರಥಮ ಬಹುಮಾನ ಪಡೆದು, ವೈಯಕ್ತಿಕ ಟೀಕೆ-ನಿಂದೆ-ವಿಮರ್ಶೆಗಳು ಮುಂದಾಗಿ ಯಾವ್ಯಾವುದೋ ಹಳೆಯ ನೆಪ-ಕಾರಣ-ಸನ್ನಿವೇಶಗಳು ನೆನಪಾಗಿ ಅನ್ಯಾಯ-ಅಕ್ರಮ-ಅನೀತಿಗಳ ಮಾತುಗಳನ್ನು ತುಳುಕಿಸುತ್ತೇವೆ. ನಮ್ಮ ದೃಷ್ಟಿ ಸರಿಯಿಲ್ಲದಿದ್ದಾಗ, ಮಾನಸಿಕ ಆರೋಗ್ಯವನ್ನು ನಾವೇ ಕೈಯಾರೆ ಕಳೆದುಕೊಂಡಾಗ, ನಂನಮ್ಮ ಅಹಮ್ಮಿನ ದರ್ಪ-ದೌಲತ್ತುಗಳೇ ಮುಂದಾದಾಗ, ಸೀನಿಯರು-ಜೂನಿಯರು ಅಂತಲೋ ಅಧಿಕಾರಿ-ನೌಕರ ಅಂತಲೋ ಹೇಳುವವರು-ಕೇಳುವವರು ಅಂತಲೋ ಒಟ್ಟಿನಲ್ಲಿ ಸ್ವಾತಂತ್ರ‍್ಯ-ಸಮಾನತೆ-ಸೋದರತ್ವಗಳೆಂಬ ಪದಪುಂಜಗಳನ್ನು ಬರೀ ಉಚ್ಚರಿಸುತ್ತಾ ಆಚರಣೆಗೆ ತರುವಲ್ಲಿ ವಿಫಲರಾದಾಗ ಕೈಯ್ಯಲ್ಲಿರುವುದೆಲ್ಲಾ ಸುತ್ತಿಗೆಯಾಗುತ್ತದೆ; ನೋಡುವುದೆಲ್ಲಾ ಮೊಳೆಯಾಗುತ್ತದೆ!
ಎಲ್ಲವನೂ ಎಲ್ಲರಿಗೂ ಅರ್ಥ ಮಾಡಿಸಲು ಸಾಧ್ಯವಿಲ್ಲ. ಹಾಗೆಯೇ ಎಲ್ಲವನೂ ಎಲ್ಲರೂ ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ! ಇಷ್ಟಕೂ ಅರ್ಥ ಮಾಡಿಕೊಳ್ಳುವ ಸಹನೆ, ಸೌಜನ್ಯ, ಸದಭಿಮಾನ, ಸಂಸ್ಕೃತಿಗಳನ್ನು ನಾವೇ ಬೆಳೆಸಿಕೊಳ್ಳಬೇಕು; ಇನ್ನೊಬ್ಬರು ಬೆಳೆಸಲೆಂದು ಕಾಯಬಾರದು. ಸಾಧ್ಯವಾದರೆ ಸಹಾಯ ಮಾಡಬೇಕು; ಇಲ್ಲದಿದ್ದರೆ ಸುಮ್ಮನಿರಬೇಕು. ನಂದೂ ಒಂದಿರಲಿ, ನಂದೂ ಒಂದಿರಬೇಕು, ನಂದಿಲ್ಲದಿದ್ದರೆ ನಾನು ನಿಧಾನವಾಗಿ ಮಹತ್ವ ಕಳೆದುಕೊಳ್ಳಬಹುದು ಅಂತಲೋ ಇನ್ನು ಮೇಲೆ ನನ್ನನ್ನು ಗುರುತಿಸಿ ಗೌರವಿಸುವವರು ಯಾರೂ ಇರುವುದಿಲ್ಲ ಅಂತಲೋ ನನ್ನ ವ್ಹೈಟೇಜು, ಸೆಲ್ಫ್ ಇಮೇಜು (ಹಾಗೆಂದರೇನೆಂದು ನನಗೆ ಇನ್ನೂ ಅರ್ಥವಾಗಿಲ್ಲ!) ಗಳನ್ನು ಪೋಷಿಸಿಕೊಳ್ಳುವ ಭರದಲ್ಲಿ ಸಮಸ್ಯೆಯಾಗಲೀ ಸಮುದಾಯವಾಗಲೀ ನಿರ್ಲಕ್ಷಿತವಾಗಬಾರದು. ಅಪಾರ ಕೀಳರಿಮೆಯಿಂದ ನರಳುತ್ತಿರುವವರು ಮತ್ತು ಐಡೆಂಟಿಟಿ ಕ್ರೈಸೀಸುಗಳೆಂಬ ಮನೋಬೇನೆಯಲ್ಲಿ ಬದುಕುತ್ತಿರುವವರು ಎಲ್ಲರ ಗಮನ ಸೆಳೆಯಲು ಹವಣಿಸುತ್ತಿರುತ್ತಾರೆ. ಅವರ ಯಾವುದೋ ಅತೃಪ್ತಿ, ಅಸಮಾಧಾನ, ಕನಸು-ಕನವರಿಕೆ, ಅಸೂಯೆ-ಗೊಣಗುವಿಕೆ, ಪ್ರಬುದ್ಧರಾಗದ ಚೆಲ್ಲು ಚೆಲ್ಲು ಚಡಪಡಿಕೆಗಳೇ ಮೊದಲಾದ ಮನುಷ್ಯ ಸಹಜವಾದ ವೇದನೆ-ಸಂವೇದನೆಗಳು ಪ್ರಧಾನವಾಗಿ, ಕೆಲಸಕಾರ್ಯಗಳಿಗಾಗಿ ನಾವು ಎಂಬ ತತ್ತ್ವ ಹಿಂದೆ ಸರಿದು, ನಾವಿರುವುದು ನಮ್ಮತನಗಳ ತೋರ್ಪಡಿಕೆಗಾಗಿ ಎಂಬ ಸ್ವಾರ್ಥಮೂಲ ಅವಕಾಶವಾದೀ ಅನಾಹುತಗಳು ಸಂಭವಿಸಿ ಬಿಡುತ್ತವೆ. ಇವೆಲ್ಲ ಬಗೆಹರಿದು, ಜ್ಞಾನೋದಯಗೊಳ್ಳುವುದು ನಂನಮ್ಮ ಏಕಾಂತದಲ್ಲೇ ವಿನಾ ಲೋಕಾಂತದಲ್ಲಿ ಅಲ್ಲ! ಏಕಾಂತ ಬೇಕು, ಲೋಕಾಂತವನರಿಯಲು. ಲೋಕಾಂತವೂ ಬೇಕು; ನಾವು ಹೆಚ್ಚು ಹೆಚ್ಚು ಲೋಕೋತ್ತರರಾಗಲು.
ಗಂಟು ಬಿಡಿಸಲು ಹೋಗಿ ಇನ್ನಷ್ಟು ಕಗ್ಗಂಟು ಮಾಡುವ ಪ್ರಭೃತಿಗಳು ನಾವಾಗಬಾರದು. ನಮ್ಮ ಪಾಲ್ಗೊಳ್ಳುವಿಕೆಯಿಂದ ಕೆಲಸಗಳು ಸಲೀಸಾಗಬೇಕು; ಅದು ಬಿಟ್ಟು ಇನ್ನಷ್ಟು ಕೆಲಸಗಳ ಹೊರೆ ಮೈಮೇಲೆ ಬೀಳಬಾರದು. ಆತಂಕ, ಧಾವಂತ, ಒತ್ತಡ ಮತ್ತು ಯಾಂತ್ರಿಕತೆಗಳನ್ನು ಕಡಮೆ ಮಾಡಲು ನಾವು ನೆರವಾಗಬೇಕೇ ವಿನಾ ನಮ್ಮಿಂದಲೇ ಅವು ಇನ್ನಷ್ಟು ಹೆಚ್ಚಾದರೆ ಅದರರ್ಥ: ನಾವು ನಮ್ಮನ್ನು ಇನ್ನಷ್ಟು ಅರಿತುಕೊಳ್ಳಬೇಕು; ನಮ್ಮತನ ಮರೆತು ಎಲ್ಲರೊಳಗೊಂದಾಗಿ ಬರೆಯಬೇಕು. ನಾವು ಮುಖ್ಯವಲ್ಲ; ವ್ಯವಸ್ಥೆ ಮುಖ್ಯ ಎಂಬುದನ್ನು ಮನಗಾಣಬೇಕು. ‘ಮೊದಲು ನೌಕರನಾಗಿರುವುದನ್ನು ಕಲಿತುಕೊಳ್ಳಿ; ಅಧಿಕಾರಿಯಾಗುವ ಅರ್ಹತೆ ಮತ್ತು ಯೋಗ್ಯತೆಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ’ ಎಂಬೊಂದು ಮಾತಿದೆ. ಮಾತೆತ್ತಿದರೆ ವ್ಯವಸ್ಥೆಯಿಂದ ನನಗೆ ಅನ್ಯಾಯವಾಗಿದೆ ಎಂಬ ವರಾತವನ್ನು ಕೈ ಬಿಟ್ಟು, ಇದ್ದುದರಲ್ಲಿ-ಸಿಕ್ಕಿದುದರಲ್ಲಿ ಸಮಾಧಾನ, ಸಂತೃಪ್ತಿಗಳನ್ನು ಕಾಣದೇ ಕೊರಗುತ್ತಾ ಕಹಿಯನ್ನು ಕಾರುವವರನ್ನು ನಿರ್ವಹಿಸುವುದೇ ಕೆಲಸವಾದರೆ ನಿಜವಾದ ಕೆಲಸ ಮಾಡುವುದು ಯಾವಾಗ? ಒಂದು ವ್ಯವಸ್ಥೆಯ ಸಲೀಸು ನಿರ್ವಹಣೆಗೆ ನಾನು ಕೀಲೆಣ್ಣೆಯಾಗಬೇಕು; ಕೆರದಲ್ಲಿ ಸಿಕ್ಕ ಕಲ್ಲಂತೆ ತೊಡಕಾಗಬಾರದು! ಸೆನ್ಸು ಇದ್ದ ಮಾತ್ರಕೇ ಕಾಮನ್ ಸೆನ್ಸು ಇರುತ್ತದೆಂಬುದಕ್ಕೆ ಖಾತ್ರಿಯಿಲ್ಲ. ಏಕೆಂದರೆ ಕಾಮನ್ ಸೆನ್ಸು ಎಂಬುದನ್ನು ಸಿಲಬಸ್ಸಿನಲ್ಲಿಟ್ಟು ಪಾಠ ಹೇಳಿ ಕೊಡಲು ಆಗುವುದಿಲ್ಲ! ನಾವೇ ಅರಿಯಬೇಕು. ಈ ನಿಟ್ಟಿನಲ್ಲಿ ನನಗೊಂದು ಪ್ರಸಂಗ ನೆನಪಾಗುತ್ತದೆ: ಲಾರಿಯೊಂದು ದಪ್ಪ ಹಗ್ಗ ಕಟ್ಟಿಕೊಂಡು ಕೆಟ್ಟು ಹೋಗಿದ್ದ ಇನ್ನೊಂದು ಲಾರಿಯನ್ನು ಎಳೆದುಕೊಂಡು ಹೋಗುತ್ತಿತ್ತಂತೆ. ಇದನ್ನು ನೋಡಿದ ಮೂರ್ಖನೊಬ್ಬ ತಲೆ ತಲೆ ಚಚ್ಚಿಕೊಂಡನಂತೆ: ‘ಒಂದು ಹಗ್ಗವನ್ನು ಸಾಗಿಸಲು ಎರಡು ಲಾರಿಗಳು ಕಷ್ಟ ಪಡುತ್ತಿವೆಯಲ್ಲಾ’ ಎಂದು!! ಒಮ್ಮೊಮ್ಮೆ ನಾವು ಎಳೆದುಕೊಂಡು ಹೋಗುವ ಲಾರಿಯಾಗುತ್ತೇವೆ. ಹಲವೊಮ್ಮೆ ಹಗ್ಗವಾಗಿರುತ್ತೇವೆ. ಕೆಲವೊಮ್ಮೆ ಕೆಟ್ಟು ಹೋದ ಲಾರಿಯೇ ಆಗಿರುತ್ತೇವೆ. ಬಹಳಷ್ಟು ಸಲ ತಲೆ ಚಚ್ಚಿಕೊಂಡು ಗೋಳಿಟ್ಟ ಅಂಥ ಮೂರ್ಖರೂ ಆಗಿರುತ್ತೇವೆ.
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಬರಹ ತುಂಬ ಸೊಗಸಾಗಿದೆ. ‘ಉಗುರು ಕತ್ತರಿಸಲು ಕೊಡಲಿಯಾಡಿಸುತ್ತೇವೆ. ‘
ನಿಜ.
ಧನ್ಯವಾದ ಮೇಡಂ…….. ಇದರಿಂದ ಉಗುರು ಕತ್ತರಿಸಲು ಕೊಡಲಿ! ಎಂಬ ಶೀರ್ಷಿಕೆಯಲ್ಲಿ ಇನ್ನೊಂದು
ಬರೆಹ ಹೊಸೆಯಲು ಸಹಾಯವಾಯಿತು. ಇನ್ನೊಮ್ಮೆ ಧನ್ಯವಾದ.
ವಿಭಿನ್ನ ಲೇಖನ.. ಸೊಗಸಾಗಿದೆ
ಧನ್ಯವಾದ ಮೇಡಂ
ಒಂದು ಹಗ್ಗಕ್ಕೆಎರಡು ಲಾರಿ.
ಶ್ರೀ ರ್ಷಿಕೆಯೇ ಕುತೂಹಲ ಹುಟ್ಟಿಸಿತು..ಓದಿಸಿಕೊಂಡುಹೋಯಿತು..ನಿಮ್ಮ ಚಂತನಾಲಹರಿ ವಿಶೇಷವಾಗಿ ಸೊಗಸಾದ ಲೇಖನ ವಾಗಿ ಹಿರಹೊಮ್ಮಿದೆ..ಧನ್ಯವಾದಗಳು ಮಂಜು ಸಾರ್
thank you madam, ನಿಮ್ಮ ಕಾದಂಬರಿ ಸಹ ಸೊಗಸಾಗಿ ನಿರೂಪಿತವಾಗುತ್ತಿದೆ.
ಕುತೂಹಲಕಾರಿ ಶೀರ್ಷಿಕೆಯನ್ನು ಹೊತ್ತ ಲೇಖನವು ಓದುಗರನ್ನು ಚಿಂತನೆಗೆ ಹಚ್ಚುವಂತಿದೆ.
ನಿಜ, ಬರೆದ ಮೇಲೆ ಓದಿದೆ, ಯಾರೋ ಬರೆದಂತಿದೆ.
ಬರೆಯುವಾಗ ನಾನು ಕಳೆದು – ಹೋಗಿದ್ದೆ. ನೀವು ಹೇಳುವುದು ನಿಜ. ನಿಮಗೆ ಪ್ರಣಾಮ.
ಸ್ವಾನುಭವದ ಹಿನ್ನೆಲೆ ಇದ್ದರೆ ಚಿಂತನೆ ಕಳೆಗಟ್ಟುತ್ತದೆ ಎಂದಾಯಿತು.
ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು.
ಲೇಖನ ಸೊಗಸಾಗಿ ಮೂಡಿಬಂದಿದೆ