ಭೂಮಿಯ ಮೇಲಿನ ಸ್ವರ್ಗ ಭೂತಾನ್ ಪುಟ – ಮೂರು
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಾವು ಭೂತಾನಿನ ರಾಜಧಾನಿ ತಿಂಪುವಿನಲ್ಲಿ ಸುತ್ತಾಡುವಾಗ, ಬೆಟ್ಟದ ನೆತ್ತಿಯ ಮೇಲೆ ಧ್ಯಾನಮಗ್ನನಾಗಿ ಕುಳಿತಿದ್ದ ಬೃಹತ್ತಾದ ಬುದ್ಧನ ಬಂಗಾರದ ಮೂರ್ತಿ ಕಾಣುತ್ತಿತ್ತು. ಇದು ಅತ್ಯಂತ ಪ್ರಮುಖವಾದ ಪ್ರವಾಸೀ ತಾಣ. ಇದನ್ನು ಬುದ್ಧ ಪಾಯಿಂಟ್ ಎನ್ನುವರು, ಭೂತಾನೀ ಭಾಷೆಯಲ್ಲಿ ಬುದ್ಧ ದೋರ್‌ದೆನ್ಮಾ (Buddha Dordenma) ಎಂಬ ನಾಮಧೇಯ. ನಾಲ್ಕನೆಯ ದೊರೆ ಜಿಗ್ಮೆ ಸಿಂಗ್ಯೆ ವ್ಯಾಂಗ್‌ಚಕ್‌ನ ಅರವತ್ತನೆಯ ಜನ್ಮದಿನದ ನೆನಪಿಗಾಗಿ ಕುಯೆನ್‌ಸೈಪೋದ್ರಾಂಗ್ (Kuenseiphodrang) ಎಂಬ ಸ್ಥಳದಲ್ಲಿ, ನೂರು ಎಕರೆ ಕಾಡಿನ ಮಧ್ಯೆ, ಶಾಕ್ಯಮುನಿ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇಗುಲವನ್ನು ಚೈನಾದ ಏರೋಸನ್ ಕಾರ್ಪೊರೇಷನ್ ಹಾಗೂ ಹಲವು ಬೌದ್ಧ ಧರ್ಮದ ಅನುಯಾಯಿಗಳ ನೆರವಿನಿಂದ 2006-2015 ರ ಅವಧಿಯಲ್ಲಿ ನೂರು ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿಗ್ರಹ 169 ಅಡಿ ಎತ್ತರವಾಗಿದ್ದು, ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಧ್ಯಾನಮಗ್ನನಾದ ಬುದ್ಧನ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪದ್ಮಾಸನದಲ್ಲಿ ಕುಳಿತು, ಬಲಗೈ ಬಲತೊಡೆಯ ಮೇಲಿದ್ದು, ಎಡಗೈಲಿ ಬಿಕ್ಷಾಪಾತ್ರೆ ಹಿಡಿದು ಅರೆನಿಮೀಲಿತ ನೇತ್ರಗಳನ್ನು ಹೊಂದಿರುವ ಬುದ್ಧ ಧ್ಯಾನಮಗ್ನನಾಗಿ ಆಸೀನನಾಗಿದ್ದು ಸತ್ಯ, ಅಹಿಂಸೆ ಕರುಣೆಯ ಸಂದೇಶವನ್ನು ಸಾರುತ್ತಿದೆ. ಅರಳಿದ ಕಮಲದ ಮೇಲೆ ಕುಳಿತು ಮಂದಹಾಸ ಬೀರುತ್ತಿರುವ ಬುದ್ಧನ ಮೂರ್ತಿಯನ್ನು ಒಂದು ಧ್ಯಾನಮಂದಿರದ ಮೇಲೆ ಸ್ಥಾಪಿಸಲಾಗಿದ್ದು, ಈ ಮೂರ್ತಿಗೆ ಪ್ರಾರ್ಥನೆ ಸಲ್ಲಿಸಿದರೆ 1,25,000 ಬುದ್ಧನ ಮೂರ್ತಿಗಳನ್ನು ಪ್ರಾರ್ಥಿಸಿದಂತೆ ಎನ್ನುವ ನಂಬಿಕೆಯೂ ಇದೆ. ಹೇಗೆ ಅಂತೀರಾ – ಧ್ಯಾನ ಮಂದಿರದಲ್ಲಿ ಚಿನ್ನದ ಲೇಪನ ಹೊಂದಿರುವ ತಾಮ್ರದ ಎಂಟು ಇಂಚಿನ ಒಂದು ಲಕ್ಷ ಬುದ್ಧನ ಮೂರ್ತಿಗಳೂ ಹಾಗೂ ಹನ್ನೆರೆಡು ಇಂಚಿನ 25,000 ಬುದ್ಧನ ಮೂರ್ತಿಗಳೂ ಇವೆ. ಪವಿತ್ರವಾದ ಬೌದ್ಧ ಅವಶೇಷಗಳನ್ನು ಹಾಗೂ ಮಂತ್ರಗಳನ್ನು ಒಳಗಿಟ್ಟು, ಈ ಮೂರ್ತಿಗಳನ್ನು ತಯಾರಿಸಲಾಗಿದೆ. ದೇಗುಲದ ಪ್ರಾಂಗಣದಲ್ಲಿ ಸುತ್ತಲೂ ‘ಡಾಕಿನಿ’ ಎಂದು ಕರೆಯಲ್ಪಡುವ ಬೌದ್ಧ ಸನ್ಯಾಸಿನಿಯರ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಚಿನ್ನದ ಲೇಪನ ಹೊದ್ದಿರುವ ಈ ಡಾಕಿನಿಯರ ಮೂರ್ತಿಗಳು ಅಪ್ಸರೆಯರಂತೆ ನಿಂತು ಈ ಸ್ಥಳದ ಶೋಭೆಯನ್ನು ಹೆಚ್ಚಿಸಿದ್ದಾರೆ.
ಈ ಧ್ಯಾನಮಂದಿರದ ಮಧ್ಯೆ ನಾಲ್ಕು ತಲೆಯುಳ್ಳ ವಿರೋಚನಾ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಸುತ್ತಲಿನ ಗೋಡೆಗಳ ಮೇಲೆ ಬುದ್ಧನ ಜೀವನ ಚರಿತ್ರೆಯಿಂದ ಆಯ್ದ ಕೆಲವು ಪ್ರಸಂಗಗಳನ್ನು ಬಿಡಿಸಲಾಗಿದೆ. ನಮ್ಮ ಗೈಡ್ ಧರ್ಮ, ಆ ಚಿತ್ರಗಳ ಐತಿಹ್ಯವನ್ನು ಹೇಳತೊಡಗಿದ. ಈ ಚಿತ್ರದಲ್ಲಿ ನಾಲ್ಕು ದಿಕ್ಪಾಲಕರ ಚಿತ್ರಗಳನ್ನು ಬಿಡಿಸಲಾಗಿದೆ – ಗರುಡ, ಡ್ರಾಗನ್, ಹಿಮ ಸಿಂಹ ಹಾಗೂ ಹುಲಿ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕುಗಳನ್ನು ಪ್ರತಿನಿಧಿಸುವ ಈ ಪ್ರಾಣಿಗಳು ನಾಡನ್ನು ಕಾಯುವ ದಿಕ್ಪಾಲಕರು. ಹಾಗೆಯೇ ಇವು ಹುಟ್ಟು, ಮುದಿತನ, ರೋಗ ಹಾಗೂ ಸಾವಿನ ಸಂಕೇತಗಳಾಗಿಯೂ ನಿಲ್ಲುವುವು. ಮತ್ತೊಂದು ಚಿತ್ರದಲ್ಲಿ ಒಂದು ಮರದ ಕೆಳಗೆ ನಾಲ್ಕು ಪ್ರಾಣಿಗಳ ಚಿತ್ರವನ್ನು ಬಿಡಿಸಲಾಗಿತ್ತು. ನಿಂತಿರುವ ಆನೆಯ ಮೇಲೆ ಕುಳಿತಿದ್ದ ಮಂಗ. ಮಂಗದ ಭುಜದ ಮೇಲೆ ಕುಳಿತಿದ್ದ ಮೊಲ ಹಾಗೂ ಮೊಲದ ಮೇಲೆ ಹಾರುತ್ತಿದ್ದ ಟಿಟ್ಟಿಭ ಹಕ್ಕಿ. ಒಮ್ಮೆ ಈ ನಾಲ್ಕು ಪ್ರಾಣಿಗಳ ಮಧ್ಯೆ ಯಾರು ಹಿರಿಯ ಎಂಬ ವಿವಾದ ಆರಂಭವಾಯಿತಂತೆ. ಆನೆಯು, ‘ನಾನು ಬಾಲ್ಯದಿಂದಲೂ ಈ ಮರವನ್ನು ನೋಡುತ್ತಾ ಬೆಳೆದಿದ್ದೇನೆ, ಆದುದರಿಂದ ನಾನೇ ಹಿರಿಯ’, ಎಂದಿತಂತೆ. ಮಂಗವು, ‘ನಾನು ಈ ಮರ ಪುಟ್ಟ ಮರವಾಗಿದ್ದಾಗಿನಿಂದಲೂ ನೋಡಿದ್ದೇನೆ, ಆದುದರಿಂದ ನಾನೇ ಹಿರಿಯ’, ಎಂದಿತಂತೆ. ಮೊಲವು, ‘ನಾನು ಈ ಮರ ಸಸಿಯಾಗಿದ್ದಾಗಿನಿಂದಲೂ ನೋಡಿದ್ದೇನೆ, ಆದುದರಿಂದ ನಾನೇ ಹಿರಿಯ’, ಎಂದಿತಂತೆ. ಆಗ ಟಿಟ್ಟಿಭ ಹಕ್ಕಿಯು, ‘ನಾನು ಮಲ ವಿಸರ್ಜಿಸಿದಾಗ ಬಿದ್ದ ಬೀಜದಿಂದಲೇ ಹುಟ್ಟಿದ ವೃಕ್ಷವಿದು. ಆದುದರಿಂದ ನಾನೇ ಹಿರಿಯ’, ಎಂದಿತಂತೆ. ಅಂದಿನಿಂದ ಈ ಟಿಟ್ಟಿಭ ಹಕ್ಕಿಗೆ ಹಿರಿಯನ ಪಟ್ಟ ಕಟ್ಟಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ. ಟಿಟ್ಟಿಭ ಹಕ್ಕಿಯನ್ನು ಬುದ್ಧನ ಅವತಾರ ಎಂದೂ ಪೂಜಿಸುವರು. ಹಾಗೆಯೇ ಹಿರಿಯರಿಗೆ ಗೌರವ ಸಲ್ಲಿಸುತ್ತಾ, ಅವರನ್ನು ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ, ನಮ್ಮಲ್ಲಿ ವೃದ್ಧಾಶ್ರಮಗಳಿಲ್ಲ ಎಂದು ಹೆಮ್ಮೆಯಿಂದ ಹೇಳಿದ ಧರ್ಮ. ವೃದ್ಧಾಶ್ರಮಗಳು ಹೆಚ್ಚುತ್ತಿರುವ ನಮ್ಮ ನಾಡಿನ ನೆನಪಾಗಿ ತುಸು ಬೇಸರವಾಗಿದ್ದು ಸುಳ್ಳಲ್ಲ.
ಬುದ್ಧನ ಮೂರ್ತಿಯ ಮುಂದೆ ಏಳು ಅಥವಾ ಒಂಬತ್ತು ಬಟ್ಟಲುಗಳಲ್ಲಿ ಶುದ್ಧವಾದ ಜಲವನ್ನು ತುಂಬಿಸಿಟ್ಟಿದ್ದರು. ಈ ಸಂಪ್ರದಾಯದ ಅರ್ಥವನ್ನು ಧರ್ಮನ ಮಾತುಗಳಲ್ಲೇ ಕೇಳೋಣ ಬನ್ನಿ – ‘ಗಂಗೆಯು ಪರ್ವತಗಳ ಮೇಲಿನಿಂದ ಹರಿದು ಬರುವಳು, ಸ್ವರ್ಗದ ಕೆಳಗಿರುವ ಎಲ್ಲಾ ಒಂಬತ್ತು ಲೋಕಗಳಲ್ಲೂ ಹರಿದು ಪಾವನಗೊಳಿಸುವಳು. ಗಂಗೆನಿಂದಲೇ ಸೃಷ್ಟಿ, ಇವಳೇ ಎಲ್ಲ ಜೀವಿಗಳನ್ನೂ ಪೊರೆಯುವ ಶಕ್ತಿ. ಪಾವಿತ್ರ್ಯತೆಯ ಸಂಕೇತವಾದ ಗಂಗೆ ನಮ್ಮ ಪಾಪಗಳನ್ನೆಲ್ಲಾ ತೊಳೆದು ನಮ್ಮನ್ನು ಪಾವನಗೊಳಿಸುವಳು. ಎಲ್ಲಾ ಬಗೆಯ ಕಲ್ಮಷವನ್ನೂ ಪರಿಶುದ್ಧಗೊಳಿಸುವ ಗಂಗೆಯನ್ನು ನಾವು ಪೂಜಿಸುತ್ತೇವೆ.’ ನಮ್ಮ ಸಂಸ್ಕೃತಿಗೂ ಇವರ ಸಂಸ್ಕೃತಿಗೂ ಇರುವ ಸಾಮ್ಯ ನೋಡಿ ಬೆರಗಾದೆ. ನಾವೂ ಗಂಗೆಯ ಪೂಜೆಯಿಂದಲೇ ಎಲ್ಲಾ ಸಮಾರಂಭಗಳನ್ನು ಆರಂಭಿಸುತ್ತೇವಲ್ಲವೇ?
ಬುದ್ಧನ ದೇಗುಲಕ್ಕೆ ಬಂದವರೆಲ್ಲಾ ತುಪ್ಪದ ದೀಪಗಳನ್ನು ಬೆಳಗಿ ಬುದ್ಧನ ಮುಂದೆ ಸಾಲುಸಾಲಾಗಿ ದೀಪಗಳನ್ನು ಜೋಡಿಸುತ್ತಿದ್ದರು. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಿ ಸುಜ್ಞಾನವೆಂಬ ಬೆಳಕನ್ನು ಬೆಳಗಲಿ ಎಂಬುದರ ಸಂಕೇತವಾಗಿತ್ತು ಈ ಸಂಪ್ರದಾಯ. ಬುದ್ಧ ಪಾಯಿಂಟ್‌ನ ಸುತ್ತಲೂ ಸಾಗಿದಾಗ ಒಂದು ಬಗೆಯ ಮಾಂತ್ರಿಕ ಹಾಗೂ ಅತೀಂದ್ರಿಯ ಶಕ್ತಿ ಸುಳಿಯುತ್ತಿದ್ದ ಅನುಭವವಾಗಿತ್ತು. ಎತ್ತರವಾದ ಸ್ಥಳ, ಗಿರಿಯ ನೆತ್ತಿಯ ಮೇಲೆ ಧ್ಯಾನಮಗ್ನನಾಗಿ ಕುಳಿತಿರುವ ಬುದ್ಧ, ಸುತ್ತಲೂ ನಳನಳಿಸುತ್ತಿರುವ ಮರಗಿಡಗಳು, ತಂಗಾಳಿಗೆ ಸುಳಿದಾಡುತ್ತಿರುವ ಬಣ್ಣ ಬಣ್ಣದ ಪತಾಕೆಗಳು, ಪ್ರಶಾಂತವಾದ ವಾತಾವರಣ ಎಲ್ಲರಲ್ಲೂ ಸಂತಸ, ನೆಮ್ಮದಿಯನ್ನು ಮೂಡಿಸಿತ್ತು. ಬುದ್ಧನ ಅಷ್ಟಾಂಗ ಮಾರ್ಗದ ಬೋಧನೆಗಳು ಕಿವಿಯಲ್ಲಿ ಗುಯ್‌ಗುಡಲಾರಂಭಿಸಿದವು – ಬೌದ್ಧ ಧರ್ಮದಲ್ಲಿ ನಂಬಿಕೆ, ಉತ್ತಮವಾದ ಆಲೋಚನೆಗಳು, ಒಳ್ಳೆಯ ನಡತೆ, ಸವಿಯಾದ ಮಾತು, ನಿರಂತರವಾದ ಧ್ಯಾನ, ಅವಿರತ ಪ್ರಯತ್ನ, ಸದ್ವಿಚಾರಗಳು ಹಾಗೂ ಉತ್ತಮವಾದ ಕಾಯಕ.
ಅಂದು ಅಲ್ಲಿ ಸೇರಿದ್ದ ಸುಮಾರು ನೂರೈವತ್ತು ಮಂದಿ ಬೌದ್ಧ ಭಿಕ್ಷುಗಳು, ಸಡಗರ ಸಂಭ್ರಮದಿಂದ ಮರುದಿನ ನಡೆಯಲಿದ್ದ ಕಾರ್ಯಕ್ರಮಕ್ಕೆ ಹತ್ತು ಹಲವು ತಯಾರಿ ನಡೆಸುತ್ತಿದ್ದರು. ಏಳೆಂಟು ವರ್ಷದ ಬಾಲಕರೂ ಅಲ್ಲಿ ಸೇರಿದ್ದರು, ನುಣುಪಾಗಿ ಬೋಳಿಸಿದ್ದ ತಲೆ, ಧರಿಸಿದ್ದ ಕೆಂಪು ವಸ್ತ್ರಗಳನ್ನು ನೋಡುತ್ತಿದ್ದವಳಿಗೆ ಯಾವುದೋ ನೋವಿನ ಸೆಲೆ ಕಾಡಿತ್ತು. ಬದುಕು ಏನೆಂದೂ ಗೊತ್ತಿಲ್ಲದ ಎಳೆ ಜೀವಿಗಳನ್ನು ಸನ್ಯಾಸಾಶ್ರಮಕ್ಕೆ ದೂಡುವುದು ನ್ಯಾಯವೇ? ಹಿಂದೆ ಎಲ್ಲಾ ಕುಟುಂಬದವರೂ ಒಂದು ಮಗುವನ್ನು ಬೌದ್ಧ ಮೊನಾಸ್ಟಿçಗೆ ಸೇರಿಸುವುದು ಕಡ್ಡಾಯವಾಗಿತ್ತು, ಆದರೀಗ ಈ ನಿಯಮವನ್ನು ಸಡಿಲಿಸಲಾಗಿದೆ. ಅಲ್ಲಿದ್ದ ಧರ್ಮ ಚಕ್ರಗಳನ್ನು ತಿರುಗಿಸುತ್ತಾ, ‘ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’ ಎಂದು ಪ್ರಾರ್ಥಿಸುತ್ತಾ ಅಲ್ಲಿಂದ ಹಿಂತಿರುಗಿದೆವು.
(ಮುಂದುವರಿಯುವುದು)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://www.surahonne.com/?p=40956
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಭೂಮಿಯ ಮೇಲಿನ ಸ್ವರ್ಗ ಭೂತಾನ್…ಅದನ್ನು ನೋಡಿ ಅಭಿವ್ಯಕ್ತಿ ಸುವ…ರೀತಿ ನಮಗೆ ಸ್ವರ್ಗ..ಗಾಯತ್ರಿ ಮೇಡಂ.. ಧನ್ಯವಾದಗಳು..
ಮಾಹಿತಿಪೂರ್ಣ
ಧನ್ಯವಾದಗಳು ನಿಮ್ಮ ಮೆಚ್ಚುಗೆಯ ಮಾತುಗಳಿಗೆ
ಬುದ್ಧ ಪಾಯಿಂಟ್, ವೃದ್ಧಾಶ್ರಮಗಳಿಲ್ಲವೆಂಬ ಹೆಮ್ಮೆ, ಗಂಗಾಮಾತೆಯ ಪೂಜೆ, ಪುಟ್ಟ ಬಾಲಸನ್ಯಾಸಿಗಳು… ಎಲ್ಲವನ್ನೂ ಕಣ್ಮುಂದೆ ಚಿತ್ರಿಸಿದ ಲೇಖನವು ಮೆಚ್ಚುಗೆಯಾಯ್ತು ಮೇಡಂ