ಕಾವ್ಯ ಭಾಗವತ : ಭಾಗವತ ತತ್ವ
10.ತೃತೀಯ ಸ್ಕಂದ
ಅಧ್ಯಾಯ -೧
ಭಾಗವತ ತತ್ವ
ಜನ್ಮಜನ್ಮಾಂತರದಿ ಅರ್ಜಿಸಿದ
ಕಿಂಚಿತ್ ಪುಣ್ಯ ವಿಶೇಷದಿಂ
ಕ್ರಿಮಿ ಕೀಟ ಪಶು ಪಕ್ಷಿ
ಜನ್ಮಗಳ ದಾಟಿ
ಮಾನವ ಜನ್ಮವನ್ನೆತ್ತಿದರೂ
ಕಾಮ ಕ್ರೋಧ ಮದ ಮತ್ಸರದಿ
ಜನ್ಮ ವ್ಯರ್ಥಗೊಳಿಪ
ಮನುಜಂಗೆ
ಮುಕ್ತಿಪಥ, ಭಕ್ತಿಪಥ
ಭೂಭಾರಹರಣಕ್ಕಾಗಿ
ಕೃಷ್ಣನಾವತಾರವೆತ್ತಿದ
ಹರಿಯು ಕೊಂದ
ಪೂತನೀ, ಜರಾಸಂಧ, ಶಿಶುಪಾಲರಿಗೂ
ಕುರುಕ್ಷೇತ್ರದಿ ಮಡಿದೆಲ್ಲ
ಹದಿನೆಂಟಕ್ಷೋಹಿಣಿ
ಸೈನ್ಯದೆಲ್ಲ
ಯೋಧರಿಗೂ
ವೀರ ಮರಣ, ಸ್ವರ್ಗಪ್ರಾಪ್ತಿ
ಉಳಿದೆಲ್ಲ ಭಗವದ್ ಭಕ್ತರ
ಕೈಬಿಡುವನೇ ಕೃಷ್ಣ
ಅವರಿಗೆಲ್ಲ
ನಿರಂತರ ಕೃಷ್ಣ ಸ್ತುತಿಯೇ
ಭಕ್ತಿ ಮಾರ್ಗ
ಮುಕ್ತಿ ಮಾರ್ಗ
ಚೇತನ, ಅಚೇತನ
ಈ ಜಗದಾದಿಯಲಿ
ಪರಮಾತ್ಮನ ರೂಪ
ಅವನ ಸ್ಥೂಲ ಮತ್ತು
ಸೂಕ್ಷ್ಮ ಅವಸ್ಥೆಗಳೂ
ಚೇತನಾಚೇತನ ಸ್ವರೂಪವೇ
ನಮ್ಮೆಲ್ಲ ಜಗತ್ತಿನ ಸೃಷ್ಟಿ
ಈ ಜಗದ ಜೀವಿಗಳೆಲ್ಲ ಕರ್ಮಬಾಧ್ಯರು,
ಸೃಷ್ಟಿಕರ್ತ ಭಗವಂತ ಕರ್ಮನಿಯಾಮಕ
ಈ ಮನುಜನ
ಬಾಲ್ಯ, ಯೌವನ, ಕೌಮಾರ್ಯದ
ಅವಸ್ಥೆಗಳ ಸುಖ ದುಃಖಗಳು
ಜೀವಾತ್ಮಾನಾನುಭವಾಗಿಯೂ
ಭಗವಂತನದರಿಂದ
ನಿರ್ಲಿಪ್ತ
ಸರೋವರದಿ ಪ್ರತಿಫಲಿಪ
ಸೂರ್ಯ ಚಂದ್ರಾದಿಗಳ ಬಿಂಬ
ನೀರಿನ ಚಲನೆಯೊಂದಿಗೆ
ಚಲಿಸಿದರೂ
ಅದೊಂದು ಭ್ರಮೆಯಲ್ಲವೆ?
ಆ ತೆರದಿ
ಜೀವಾತ್ಮನೆಲ್ಲ
ಸುಖ ದುಃಖ ದುಮ್ಮಾನ
ಗಳೆಲ್ಲ ಅವನ ಕರ್ಮಾಧೀನ
ಕರ್ಮಶೇಷವಳಿಯಲು
ನಿತ್ಯ ಭಗವದ್ ಪ್ರಾರ್ಥನೆಯೇ
ಭಾಗವತ ತತ್ವ
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41019
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
Very nice
ಭಾಗವತದ ಕಾವ್ಯಭಾಗದ ಪ್ರಯತ್ನ ಸೊಗಸಾಗಿ ಮೂಡಿಬರುತ್ತಿದೆ..ಸಾರ್..
Nice
ಭಾಗವತ ತತ್ವವಾದ ನಿತ್ಯ ಭಗವತ್ ಪ್ರಾರ್ಥನೆಯ ಮಹತ್ವವನ್ನು ಒತ್ತಿ ಹೇಳುವ ಕವನ ಚಿಂತನೆಗೆ ಯೋಗ್ಯವಾಗಿದೆ.