ಭೂಮಿಯ ಮೇಲಿನ ಸ್ವರ್ಗ ಭೂತಾನ್
ಪುಟ – ನಾಲ್ಕು

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸಂಜೆ ನಾವೆಲ್ಲಾ ಭೂತಾನಿನ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಉತ್ಸಾಹದಿಂದ ಹೊರಟಿದ್ದೆವು. ‘ಸಿಂಪ್ಲಿ ಭೂತಾನ್’ ಎನ್ನುವ ಹೆಸರಿದ್ದ ಈ ಸಂಸ್ಥೆ ತಮ್ಮ ನಾಡಿನ ಸಂಸ್ಕೃತಿ, ಜನರ ಜೀವನ ಶೈಲಿ, ಅವರ ಆಹಾರ ಪದ್ಧತಿ, ಉಡುಗೆ ತೊಡುಗೆಯ ಪರಿಚಯವನ್ನು ಪ್ರವಾಸಿಗರಿಗೆ ಮಾಡುವುದರ ಜೊತೆಜೊತೆಗೇ ಮನರಂಜನಾ ಕಾರ್ಯಕ್ರಮ ಹಾಗೂ ಸವಿಯಾದ ಭೋಜನ ವ್ಯವಸ್ಥೆಯನ್ನೂ ಮಾಡಿತ್ತು. ಭೂತಾನಿನ ತರುಣ ತರುಣಿಯರು ಪ್ರವಾಸಿಗರಿಗೆ ತಮ್ಮ ನಾಡನ್ನು ಮನಮುಟ್ಟುವಂತೆ ಪರಿಚಯಿಸುತ್ತಿದ್ದ ಬಗೆ ಕಂಡು ಬೆರಗಾಗಿತ್ತು. ನಮ್ಮನ್ನು, ‘ಆರಾ’ ಎಂಬ ಪಾನೀಯ ನೀಡಿ ಸ್ವಾಗತಿಸಿದರು. ಪುಟ್ಟ ಪುಟ್ಟ ಬಟ್ಟಲುಗಳಲ್ಲಿ ನೀಡಿದ್ದ ಈ ಪಾನೀಯದ ಹೆಸರು ಕೇಳಿದರೆ ಬೆರಗಾಗುವ ಸರದಿ ನಿಮ್ಮದು. ಆರಾ – ಅಕ್ಕಿಯಿಂದ ತಯಾರಿಸಿದ ಮದ್ಯ, ಅಕ್ಕಿಯನ್ನು ಬೇಯಿಸಿ, ಹದಿನೈದು ದಿನಗಳ ಕಾಲ ಮುಸುಕು ಹಾಕಿಟ್ಟು, ಯೀಸ್ಟ್ ಸೇರಿಸಿ ಹುದುಗು ಬರಿಸಿ, ಹುಳಿಯಾದ ಅಕ್ಕಿ ಗಂಜಿಯನ್ನು ಚೆನ್ನಾಗಿ ಸೋಸಿ, ನಮಗೆಲ್ಲಾ ನೀಡಿದ್ದರು. ಇದು ಭೂತಾನಿನ ಪಾರಂಪರಿಕ ಪೇಯ. ಕೆಲವು ಬಾರಿ ಅಕ್ಕಿಯ ಜೊತೆಗೆ ಗೋಧಿ, ಮುಸುಕಿನ ಜೋಳ, ಹಣ್ಣುಗಳನ್ನೂ ಸೇರಿಸುವರು. ಮುಖ ಸೊಟ್ಟ ಮಾಡಿದ ಹೆಂಗಳೆಯರು ಕಹಿ ಎನ್ನುತ್ತಾ ಒಂದೇ ಗುಟುಕಿಗೆ ಕುಡಿದರೆ, ಕೆಲವು ಗಂಡಸರು ಮದ್ಯವನ್ನು ಚಪ್ಪರಿಸುತ್ತಾ ಮತ್ತೊಮ್ಮೆ ಮಗದೊಮ್ಮೆ ತಮ್ಮ ಬಟ್ಟಲು ತುಂಬಿಸಿ ಕುಡಿದರು.

ಪಕ್ಕದಲ್ಲಿ ಅವರ ರಾಷ್ಟ್ರೀಯ ಕ್ರೀಡೆಯಾದ ಬಿಲ್ಲುಗಾರಿಕೆಯ ಸ್ಪರ್ಧೆ ನಡೆದಿತ್ತು. ಯಾರು ಬಾಣವನ್ನು ಗುರಿಯತ್ತ ಹೊಡೆಯುವುದರಲ್ಲಿ ಸಫಲರಾಗುವರೋ, ಅವರಿಗಾಗಿ ಒಂದು ಸಂಭ್ರಮದ ನೃತ್ಯವನ್ನು ನಾಲ್ಕಾರು ಭೂತಾನಿ ಹುಡುಗರು ಮಾಡುತ್ತಿದ್ದರು. ನಮ್ಮ ಗುಂಪಿನಲ್ಲಿ ಲತಾ ಎರಡನೇ ಪ್ರಯತ್ನದಲ್ಲಿಯೇ ಗುರಿ ತಲುಪಿದಾಗ, ಅವಳನ್ನೂ ಸೇರಿಸಿಕೊಂಡು ನರ್ತಿಸಿದರು. ಮುಂದೆ ಸಾಗಿದಾಗ ಕಂಡದ್ದು ಹಾಡುತ್ತಾ, ನರ್ತಿಸುತ್ತಾ ಮನೆ ಕಟ್ಟುತ್ತಿದ್ದ ಯುವಕ ಯುವತಿಯರು. ಹೀಗೆ ಮನೆ ಕಟ್ಟುವಾಗ ಜೊತೆಯಾಗುವ ಗಂಡು ಹೆಣ್ಣುಗಳಲ್ಲಿ ಸ್ನೇಹ ಬೆಳೆದು, ನಂತರದಲ್ಲಿ ಗೆಳೆತನ ಪ್ರೀತಿಯಾಗಿ ಮಾರ್ಪಟ್ಟು, ಮನೆ ಮುಗಿಯುವ ಹಂತಕ್ಕೆ ಬಂದಾಗ, ಅವರು ಮದುವೆಯಾಗಿ, ಆ ಮನೆಯಲ್ಲಿಯೇ ಸಂಸಾರ ಹೂಡುವರಂತೆ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಇವರು ಪಕ್ಷಿಗಳಂತೆ ಗೂಡು ಕಟ್ಟಿ ಮದುವೆಯಾಗಿ ಕುಟುಂಬ ಬೆಳೆಸುವ ಹಾಡು ಕೇಳಿ ಮೈಮರೆತೆವು. ಪಕ್ಕದಲ್ಲಿದ್ದ ಗೋಡೆಯ ಮೇಲೆ, ಅವರ ಬೇಟೆಯಾಡುತ್ತಿದ್ದ ಉಪಕರಣಗಳೂ, ಆಯುಧಗಳೂ ಹಾಗು ಮುಖವಾಡಗಳನ್ನೂ ತೂಗು ಹಾಕಿದ್ದರು. ಇಂದು ಈ ಪರಿಕರಗಳೆಲ್ಲಾ ಇವರ ಪುರಾತನ ಜೀವನಶೈಲಿಯ ಪಳೆಯುಳಿಕೆಗಳಾಗಿ ನಿಂತಿವೆ.


Archery in Bhutan PC : Internet

ಅಲ್ಲಿಂದ ಅವರ ಪಾರಂಪರಿಕ ಅಡುಗೆ ಕೋಣೆಗೆ ಬಂದೆವು. ಅಲ್ಲಿ ಭತ್ತ ಕುಟ್ಟುವ ಒನಕೆ, ಜೋಳ ಬೀಸುವ ಬೀಸೆಕಲ್ಲು, ನೂಡಲ್ಸ್ ಅಂದರೆ ಶ್ಯಾವಿಗೆ ಮಾಡುವ ಮಣೆ ಪ್ರದರ್ಶಿಸಲಾಗಿತ್ತು. ಅಡುಗೆ ಮಾಡುವ ಕಟ್ಟಿಗೆ ಒಲೆ, ಮಣ್ಣಿನ ಗಡಿಗೆಗಳು, ಬೆಣ್ಣೆತೆಗೆಯುವ ಕಡಗೋಲುಗಳನ್ನು ನೋಡಿ ನಮ್ಮ ಬಾಲ್ಯ. ನೆನಪಾಗಿತ್ತು. ಚಿಕ್ಕಂದಿನಲ್ಲಿ ಇವೆಲ್ಲವನ್ನೂ ನಾವು ಬಳಸಿದವರೇ ಅಲ್ಲವೇ? ಇಲ್ಲೊಂದು ವಿಶಿಷ್ಟವಾದ ಬೆಣ್ಣೆ ಚಹಾ ತಯಾರಿಸುವ ಕೊಳಗವಿತ್ತು, ಸಕ್ಕರೆ ಬದಲಿಗೆ ಉಪ್ಪು ಬೆರೆಸಿದ ಚಹಾವನ್ನು ಮೊದಲ ಬಾರಿಗೆ ಗುಟುಕರಿಸಿದೆವು. ಅಡುಗೆ ಮನೆಯಿಂದ ಹೊರ ಬಂದವರಿಗೆ ಕಂಡದ್ದು ಒಂದು ಪುಟ್ಟ ಗುಡಿಯಲ್ಲಿಟ್ಟಿದ್ದ ಪುರುಷ ಜನನಾಂಗದ ಆಕೃತಿ, ಪಕ್ಕದಲ್ಲಿ ದೈವಾಂಶ ಸಂಭೂತನಾದ ಮರುಳ ಲಾಮಾ. ಈ ಬೌದ್ಧ ಸನ್ಯಾಸಿಯ ಹೆಸರು ಡ್ರುಕ್ಪಾ ಕುನ್ಲೆ. ಇವನು ಅಸುರೀ ಶಕ್ತಿಗಳನ್ನು ತನ್ನ ಜನನಾಂಗದಿಂದಲೇ ನಾಶ ಮಾಡಿದನೆಂಬ ಪ್ರತೀತಿ. ಇವನೊಬ್ಬ ವಿಚಿತ್ರ ವ್ಯಕ್ತಿ – ಬೌದ್ಧ ಧರ್ಮವನ್ನು ಅಸಂಪ್ರದಾಯಿಕ ಮಾರ್ಗದಲ್ಲಿ ಬೋಧಿಸಿದ ಮರುಳ ಬಿಕ್ಕು. ಇವನ ಹೆಸರಿನಲ್ಲಿ, ‘ಚಿಮಿ ಕಾಂಗ್’ ಎಂಬ ದೇಗುಲವನ್ನೂ ನಿರ್ಮಿಸಲಾಗಿದೆ. ನಮ್ಮ ನಾಗಾ ಸನ್ಯಾಸಿಗಳೂ, ತಾಂತ್ರಿಕ ಮಾರ್ಗವನ್ನು ಅನುಸರಿಸುವ ಸಾಧುಗಳೂ ನೆನಪಾದರು. ನೇಪಾಳದ ಕಾಮಾಕ್ಯ ದೇಗುಲದಲ್ಲಿ ಸ್ತ್ರೀ ಜನನಾಂಗಕ್ಕೆ ಪೂಜೆ ಸಲ್ಲಿಸುವ ಹಾಗೆ ಇವರು ಪುರುಷ ಜನನಾಂಗಕ್ಕೆ ಪೂಜೆ ಸಲ್ಲಿಸುವರು. ಈ ಬಗೆಯ ಪೂಜೆಯಿಂದ ಸಂತಾನ ಪ್ರಾಪ್ತಿಯಾಗುವುದೆಂದೂ ಹಾಗು ದುಷ್ಟ ಶಕ್ತಿಗಳನ್ನು ದೂರವಿಡಬಹುದೆಂದೂ ಇವರ ನಂಬಿಕೆ. ಇದು ಶುಭ ಶಕುನದ ಸಂಕೇತವಾಗಿಯೂ ನಿಲ್ಲುವುದು.

ಅಂದಿನ ಪ್ರಮುಖ ಆಕರ್ಷಣೆ – ಅವರ ಸಂಗೀತ ನೃತ್ಯಗಳು. ಮೊದಲಿಗೆ ಸ್ವಾಗತ ನೃತ್ಯ, ಹಿಮ್ಮೇಳದಲ್ಲಿ ಸಂಗೀತವಾದ್ಯಗಳಾದ – ಉದ್ದನೆಯ ಶಹನಾಯಿಯಂತಹ ವಾದ್ಯ, ಕೊಳಲು, ತಬಲ ಇತ್ಯಾದಿ ನುಡಿಸುವವರೂ ಹಾಗೂ ಗಾಯಕರೂ ಇದ್ದರು. ಜಾನಪದ ನೃತ್ಯಗಳು ಎಲ್ಲರ ಮನ ಸೂರೆಗೊಂಡವು, ಅವರ ಭಾಷೆ ಅರ್ಥವಾಗದಿದ್ದರೂ ಗೀತೆಯ ಭಾವ ಮನನವಾಗಿತ್ತು. ನಂತರದಲ್ಲಿ ಧಾರ್ಮಿಕ ನೃತ್ಯಗಳು – ದುಷ್ಟ ಶಕ್ತಿಗಳನ್ನು ಸಂಹರಿಸುವ ದೈವಗಳು – ಮುಖವಾಡಗಳನ್ನು ಧರಿಸಿ ವೀರಾವೇಶದಿಂದ ಆರ್ಭಟಿಸುವಾಗ, ಛಂಗನೆ ನೆಗೆಯುವಾಗ ಒಮ್ಮೆ ಎದೆ ಝಲ್ಲೆಂದಿತ್ತು. ಬುದ್ಧನ ನರಸಿಂಹಾವತಾರ, ವಿಷ್ಣುವಿನ ದಶಾವತಾರದಂತೆಯೇ ಗೋಚರಿಸಿತ್ತು. ಕೊನೆಯದಾಗಿ ಮಾಡಿದ ಪಾರಂಪರಿಕ ನೃತ್ಯಗಳಲ್ಲಿ ಎಲ್ಲರೂ ಜೊತೆಗೂಡಿ ನರ್ತಿಸಿ ನಕ್ಕು ನಲಿದೆವು. ಇದೊಂದು ಮರೆಯಲಾಗದ ಅನುಭವವಾಗಿತ್ತು. ಅಂದಿನ ಕೊನೆಯ ಘಟ್ಟ – ಸವಿಯಾದ ಪಾರಂಪರಿಕ ಭೋಜನ. ರುಚಿಯಾದ ಭೋಜನವನ್ನು ಸವಿಯುತ್ತಾ ಅವರ ಜೀವನಶೈಲಿ, ಭವ್ಯವಾದ ಸಂಸ್ಕೃತಿಯ ಬಗ್ಗೆ ಚರ್ಚಿಸಿದೆವು.

ಇವರ ಮರುಳ ಲಾಮಾ ಡ್ರುಕ್ಪಾ ಕುನ್ಲೆಯ ಬೋಧನೆಗಳನ್ನು ಮೆಲುಕು ಹಾಕೋಣ ಬನ್ನಿ – ಬಾಹ್ಯ ಆಡಂಬರಗಳನ್ನು ತ್ಯಜಿಸಿ ಭಗವಂತನ ಧ್ಯಾನ ಮಾಡಿ, ನಮ್ಮ ಸುತ್ತಮುತ್ತಲಿರುವ ಎಲ್ಲಾ ಜೀವಿಗಳನ್ನೂ ತಂದೆ ತಾಯಿಯರಂತೆ ಪೋಷಿಸಿ, ಪ್ರೀತಿಯಿಂದ ಪಾಲಿಸಿ, ಯೋಗ ತತ್ವಗಳನ್ನು ಅನುಸರಿಸುತ್ತಾ ಬುದ್ಧನಲ್ಲಿ ಒಂದಾಗಲು ಯತ್ನಿಸಿ, ಎಲ್ಲಾ ಧರ್ಮಗ್ರಂಥಗಳ ಅಧ್ಯಯನ ಮಾಡಿ, ಸತ್ಯವಾದ ಮಾರ್ಗದಲ್ಲಿ ನಡೆಯಿರಿ, ನಮ್ಮ ನಮ್ಮ ಬದುಕೇ ನಮ್ಮ ಶಿಕ್ಷಕ, ನಮ್ಮೊಳಗಿನ ಅರಿವೇ ಗುರು.

ಎಂಥಾ ಮರುಳಯ್ಯ ಇದು ಎಂಥಾ ಮರುಳೋ” ಎಂಬ ಚಲನಚಿತ್ರದ ಪದಗಳು ನೆನಪಾದವು.

(ಮುಂದುವರಿಯುವುದು)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://www.surahonne.com/?p=41009

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

4 Responses

  1. ಭೂಮಿಯ ಮೇಲಿನ ಸ್ವರ್ಗದ ಲೇಖನ.. ಓ ದಿಸಿಕೊಂಡು ಹೋಯಿತು..ನಿಮ್ಮಂತವರು ಪ್ರವಾಸಮಾಡಿದರೆ ನಮ್ಮಂತವರಿಗೆ ಕೂತಲ್ಲೇಕೂತು ಅಲ್ಲಿನ ಚಿತ್ರಣವನ್ನು…ಅನುಭವಿಸಬಹುದು ಅಷ್ಟು ಚೆನ್ನಾಗಿ ವಿವರಿಸುತ್ತೀರಾ ಗಾಯತ್ರಿ ಮೇಡಂ ಧನ್ಯವಾದಗಳು

  2. ನಯನ ಬಜಕೂಡ್ಲು says:

    Nice

  3. ವಂದನೆಗಳು ಸಹೃದಯ ಓದುಗರಿಗೆ

  4. ಶಂಕರಿ ಶರ್ಮ says:

    ಸೊಗಸಾದ ಪ್ರವಾಸ ಚಿತ್ರಣದಿಂದ; ನಮ್ಮನ್ನೂ ನಿಮ್ಮೊಡನೆ ಭೂತಾನ್ ಗೆ ಒಯ್ದಿರುವಿರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: