ಭೂಮಿಯ ಮೇಲಿನ ಸ್ವರ್ಗ ಭೂತಾನ್ ಪುಟ – ಐದು
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭೂತಾನ್ ಎಂದಾಕ್ಷಣ ನೆನಪಾಗುವುದು ಅಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಗ್ಗುರುತಾದ ಟೈಗರ್ ನೆಸ್ಟ್. ಭಾರತದ ತಾಜ್ ಮಹಲ್‌ನಂತೆ, ಪ್ಯಾರಿಸ್‌ನ ಐಫೆಲ್ ಟವರ್‌ನಂತೆ ಇದು ಭೂತಾನಿನ ಸಾಂಸ್ಕೃತಿಕ ಐಕಾನ್. ಭೂತಾನಿನ ಪ್ರಮುಖ ನಗರವಾದ ಪಾರೋದಿಂದ ಹತ್ತು ಕಿ.ಮೀ. ದೂರದಲ್ಲಿರುವ ಈ ಗುಹೆಗೆ ‘ಪಾರೋ ತಕ್ತ್ಸಾಂಗ್’ ಎಂಬ ನಾಮಧೇಯವೂ ಇದೆ. ಈ ಸ್ಥಳದ ಪೌರಾಣಿಕ ಹಿನ್ನೆಲೆ ಕೇಳೋಣ ಬನ್ನಿ – ಟಿಬೆಟ್‌ನಿಂದ ಹುಲಿಯ ಮೇಲೆ ಕುಳಿತು ಹಾರಿಬಂದ ಗುರು ಪದ್ಮಸಂಭವರು ಈ ಪರ್ವತದ ಗುಹೆಯಲ್ಲಿ ಕುಳಿತು ತಪಸ್ಸು ಮಾಡಿದರಂತೆ. ಆಗ ಆ ಹುಲಿ ಧ್ಯಾನಮಗ್ನರಾಗಿದ್ದ ಗುರು ರಾಂಪೋಚೆ (ಮತ್ತೊಂದು ಹೆಸರು) ಯವರನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಅಲ್ಲಿಯೇ ಸುತ್ತಾಡುತ್ತಿತ್ತಂತೆ. ಬೆಟ್ಟದ ಗುಹೆಯ ಮುಂದೆ ಅಡ್ಡಾಡುತ್ತಿದ್ದ ಹುಲಿಯನ್ನು ದೂರದಿಂದ ಕಂಡ ಭೂತಾನೀಯರು ಹುಲಿಯ ಗುಹೆ ಎಂದು ಕರೆದರಂತೆ ಹಾಗೂ ಗುಹೆಯಿಂದ ಹೊರಬಂದ ಗುರು ಪದ್ಮಸಂಭವರು ಎಂಟು ಅವತಾರಗಳಲ್ಲಿ ಭಕ್ತರಿಗೆ ದರ್ಶನ ನೀಡಿದರಂತೆ – ದುಷ್ಟ ಶಕ್ತಿಗಳನ್ನು ಸಂಹರಿಸಲು ನಾಲ್ಕು ರೌದ್ರಾವತಾರಗಳನ್ನೂ ಹಾಗೂ ಶಿಷ್ಟರಿಗೆ ಮಾರ್ಗ ತೋರಲು ನಾಲ್ಕು ಶಾಂತವಾದ ಅವತಾರಗಳನ್ನೂ ತಳೆದರಂತೆ. ಹಾಗಾಗಿ ‘ತಕ್ತ್ಸಾಂಗ್’ ಎಂಬ ಹೆಸರು ಬಂತಂತೆ, ತಕ್ತ್ಸಾಂಗ್’ ಎಂದರೆ ಎಂಟು ಅವತಾರಗಳು. ಮತ್ತೊಂದು ಪೌರಾಣಿಕ ಐತಿಹ್ಯ ಹೀಗಿದೆ. ಟಿಬೆಟ್‌ನ ರಾಣಿಯೊಬ್ಬಳು ಬೌದ್ಧ ಸನ್ಯಾಸಿನಿಯಾಗಿ ಗುರು ಪದ್ಮಸಂಭವರ ಅನುಯಾಯಿಯಾಗುತ್ತಾಳೆ. ಭೂತಾನಿನಲ್ಲಿದ್ದ ಅಸುರೀ ಶಕ್ತಿಗಳನ್ನು ವಿನಾಶಗೊಳಿಸಲು ರಾಣಿಯು ಹುಲಿಯ ರೂಪ ತಳೆದು, ಗುರುಗಳನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹಕ್ಕಿಯಂತೆ ಹಾರುತ್ತಾ ಈ ಸ್ಥಳವನ್ನು ತಲುಪುವಳು. ಅಸುರೀ ಶಕ್ತಿಗಳನ್ನು ಸಂಹರಿಸಿದ ಗುರುಗಳನ್ನು ಕಂಡ ಜನರೆಲ್ಲಾ ಬೌದ್ಧ ಧರ್ಮಕ್ಕೆ ಮತಾಂತರವಾಗುವರು. ಅಂದಿನಿಂದ ಭೂತಾನಿನ ಪ್ರಮುಖ ಧರ್ಮ ಬೌದ್ಧ ಧರ್ಮವಾಗಿದೆ.
ನಾವು ತಿಂಪೂವಿನಿಂದ ಮುಂಜಾನೆ ಎಂಟುಗಂಟೆಗೆ ಹೊರಟವರು ಹತ್ತು ಗಂಟೆಗೆ ಟೈಗರ್ ನೆಸ್ಟ್ ತಪ್ಪಲನ್ನು ತಲುಪಿದೆವು. ಬಹಳಷ್ಟು ಜನರು ನನಗೆ– ‘ನೀವು ಟೈಗರ್ ನೆಸ್ಟ್ ಹತ್ತುವ ದುಸ್ಸಾಹಸ ಮಾಡಬೇಡಿ, ವಯಸ್ಸಾಗಿದೆ’ ಎಂದರು, ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದ ನನಗೆ ಟೈಗರ್ ನೆಸ್ಟ್ ಹತ್ತುವ ಆತ್ಮವಿಶ್ವಾಸವಿತ್ತು. ಆದರೂ ಇವರೆಲ್ಲರ ಮಾತುಗಳನ್ನು ಕೇಳಿ ಸ್ವಲ್ಪ ಅಳುಕುಂಟಾಯಿತು. ಮನಸ್ಸು ನುಡಿದಿತ್ತು – ಒಮ್ಮೆ ಪ್ರಯತ್ನ ಮಾಡು, ಎಲ್ಲಿಯವರೆಗೆ ಹತ್ತಲು ಸಾಧ್ಯವೋ ಅಲ್ಲಿಯವರೆಗೆ ಹತ್ತಿ, ನಂತರ ಬಂದ ದಾರಿಗೆ ಸುಂಕವಿಲ್ಲೆಂದು ಹಿಂದಿರುಗಿದರಾಯಿತು. ಪ್ರವೇಶದ್ವಾರದಲ್ಲಿ ಒಂದು ಸಾವಿರ ರೂಗಳನ್ನು ನೀಡಿ ಟಿಕೆಟ್ ಪಡೆದೆವು. ಗೈಡ್ ಸಲಹೆಯ ಮೇರೆಗೆ ನಿಂಬೂ ಪಾನಿ, ನೀರಿನ ಬಾಟಲ್, ಚಾಕೊಲೇಟ್ ಹಾಗೂ ಬಿಸ್ಕೇಟ್ ಕೊಂಡು ಬ್ಯಾಕ್‌ಪ್ಯಾಕ್‌ಗೆ ಹಾಕಿ ಮುನ್ನೆಡೆದೆ. ಬೆಟ್ಟ ಹತ್ತಲು ಆಧಾರವಾಗಿ ಕೈಲೊಂದು ಕೋಲಿತ್ತು. ಅರ್ಧ ದಾರಿಯ ತನಕ ಬೆಟ್ಟವೇರಲು ಕುದುರೆಯ ವ್ಯವಸ್ಥೆಯೂ ಇತ್ತು, ಆದರೆ ನನಗೆ ಗುರು ರಾಂಪೋಚೆಯವರು ತಪಸ್ಸು ಮಾಡಿದ ಈ ತಪೋವನ ನೋಡಲು ಕಾಲ್ನಡಿಗೆಯಲ್ಲೇ ಹೋಗಬೇಕೆಂಬ ಆಶಯ. ಗೆಳತಿ ಲತಾಳೊಂದಿಗೆ ಈ ಚಾರಣವನ್ನು ಆರಂಭಿಸಿದೆ, ನಡೆಯುವ ಅಭ್ಯಾಸವಿಲ್ಲದ ಲತಾ ಕುದುರೆಯೇರಿ ಬರುವೆನೆಂದು ಅಲ್ಲಿಯೇ ಉಳಿದಳು. ನಮ್ಮ ತಂಡದ ಸದಸ್ಯರು ಸಣ್ಣ ಗುಂಪುಗಳಾಗಿ ಮುಂದೆ ನಡೆದಿದ್ದರು. ಅಲ್ಲೊಂದು ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ಜಲಪಾತದ ರಭಸಕ್ಕೆ ತಿರುಗುತ್ತಿದ್ದ ಪ್ರಾರ್ಥನಾ ಚಕ್ರ, ಈ ಚಕ್ರದ ಸುಳಿಗೆ ನೀರು ಪರಮಪವಿತ್ರವಾಗುವುದೆಂಬ ನಂಬಿಕೆ ಇವರಲ್ಲಿ. ಆ ನೀರನ್ನು ಬಾಟಲಿಗಳಲ್ಲಿ ತುಂಬಿಸಿ ಕೊಂಡೊಯ್ಯುತ್ತಿದ್ದರು.
ನಾನು ಪ್ರಕೃತಿಯ ಸೌಂದರ್ಯ ಸವಿಯುತ್ತಾ ಮುಂದೆ ಸಾಗಿದ್ದೆ – ನೀಲ ಆಕಾಶ, ಪಕ್ಷಿಗಳ ಕಲರವ, ಎತ್ತರವಾದ ಕೋನಿಫೆರಸ್ ಮರಗಳು, ಬಣ್ಣ ಬಣ್ಣದ ಹೂಗಳು, ಅಲ್ಲಲ್ಲಿ ಕಾಣುತ್ತಿದ್ದ ಪುಟ್ಟ ಜಲಪಾತಗಳು ನನ್ನನ್ನು ಸ್ವಾಗತಿಸುತ್ತಿದ್ದವು. ಬೆಟ್ಟದ ಮೇಲೇರುತ್ತಿದ್ದ ಹಾಗೇ ಪ್ರಕೃತಿಯ ಚೆಲುವು ಇಮ್ಮಡಿಸಿತ್ತು. ಮೇಲಿನಿಂದ ಕಾಣುತ್ತಿದ್ದ ದೃಶ್ಯಗಳು ಈ ಭೂಮಿಯನ್ನು ಸ್ವರ್ಗ ಸಮಾನವನ್ನಾಗಿ ಮಾಡಿದ್ದವು. ಸುಮಾರು ಎರಡು ಕಿ.ಮೀ. ಸಾಗಿರಬಹುದು, ಗುರು ರಾಂಪೋಚೆ ಧ್ಯಾನ ಮಾಡಿದ ಕಡಿದಾದ ಬೆಟ್ಟದ ತಪ್ಪಲಿನಲ್ಲಿದ್ದೆ. ಎದುರಲ್ಲಿ ಕಾಣುತ್ತಿದ್ದ ಬೆಟ್ಟದ ನೆತ್ತಿಯ ಮೇಲಿದ್ದ ಟೈಗರ್ ನೆಸ್ಟ್ ಕಾಣುತ್ತಿತ್ತು. ಅಬ್ಬಾ ಅಷ್ಟು ಮೇಲೇರಲು ಸಾಧ್ಯವೇ ಎಂದು ಒಮ್ಮೆ ಗಾಬರಿಯಾಗಿತ್ತು. ಎದುರಿಗೆ ಸಿಕ್ಕ ಚಾರಣಿಗರನ್ನು ಕೇಳಿದೆ – ಟೈಗರ್ ನೆಸ್ಟ್ ಅನ್ನು ನೋಡಿ ಹಿಂತಿರುಗುತ್ತಿದ್ದೀರಾ? ಅವರು, ‘ಇಲ್ಲ ಇಲ್ಲ ನಮಗೆ ಅಷ್ಟು ಮೇಲೆ ಹತ್ತಲಾಗಲಿಲ್ಲ, ಅರ್ಧದಲ್ಲಿಯೇ ವಾಪಸ್ ಬಂದೆವು’, ಎಂದಾಗ ನನ್ನದೂ ಅದೇ ಪರಿಸ್ಥಿತಿಯೇ ಎಂದೆನ್ನಿಸಿ ನಸುನಕ್ಕೆ. ಕಡಿದಾದ ಬೆಟ್ಟದ ಹಾದಿಯನ್ನು ಮೆಟ್ಟಿಲು ಮೆಟ್ಟಿಲಾಗಿ ಕಡಿದು ಮಣ್ಣು ಜಾರದಿರಲೆಂದು ಅಲ್ಲಲ್ಲಿ ಮರದ ತುಂಡುಗಳನ್ನು ಜೋಡಿಸಿದ್ದರು. ಪುಟ್ಟ ನುಚ್ಚುಗಲ್ಲುಗಳು ಕಾಲಿನಡಿ ಸಿಕ್ಕಾಗ ಝರ‍್ರೆಂದು ಜಾರುತ್ತಿದ್ದೆ. ಆಗ ಅಲ್ಲಿದ್ದ ಚಾರಣಿಗರು ಕೈ ನೀಡಿ ಮೇಲೆ ಹತ್ತಿಸುತ್ತಿದ್ದರು. ಹಿಂತಿರುಗುತ್ತಿದ್ದ ಕೆಲವು ಪಾಶ್ಚಿಮಾತ್ಯರು ತಮ್ಮ ಹೆಬ್ಬೆರಳೆತ್ತಿ, ‘‘keep going, you can do it’’ ಎಂದು ಹುರಿದುಂಬಿಸುತ್ತಿದ್ದರು. ನಡೆದು ನಡೆದು ಸುಸ್ತಾದಾಗ, ನಿಂಬೂ ಪಾನಿಯನ್ನೋ, ಚಾಕಲೇಟನ್ನೂ ತಿಂದು ಸುಧಾರಿಸಿಕೊಂಡು ಮುಂದೆ ಸಾಗುತ್ತಿದ್ದೆ. ನಡೆದಷ್ಟೂ ಹಾದಿ ಮುಂದೆ ಸಾಗುತ್ತಲೇ ಇತ್ತು, ಕೊನೆಯಾಗುವ ಲಕ್ಷಣಗಳೇ ಕಾಣುತ್ತಿರಲಿಲ್ಲ. ದಾರಿಯ ಮಧ್ಯೆ ಒಂದು ಪುಟ್ಟದಾದ ಝರಿ ಹರಿಯುತ್ತಲಿತ್ತು. ಅದರ ಪಕ್ಕದಲ್ಲಿ, ‘ಇದು ಪವಿತ್ರವಾದ ಜಲ, ಕುಡಿಯಿರಿ, ನಿಮ್ಮ ದಣಿವು ಕಡಿಮೆಯಾಗುವುದು’ ಎಂಬ ಫಲಕವಿತ್ತು. ನಾನೂ ಆ ತಣ್ಣನೆಯ ನೀರಿನಲ್ಲಿ ಮುಖ ತೊಳೆದು, ಬೊಗಸೆ ತುಂಬಾ ನೀರು ತುಂಬಿಸಿ ಕುಡಿದೆ, ನೀರು ಎಳನೀರಿನಂತೆ ಸವಿಯಾಗಿತ್ತು. ದಣಿದ ದೇಹಕ್ಕೆ ಚೈತನ್ಯ ನೀಡಿತ್ತು. ಬಾಟಲಿಯಲ್ಲಿ ತುಂಬಿಸಿದ್ದ ಮಿನರಲ್ ವಾಟರ್‌ನ ಚೆಲ್ಲಿ ಆ ನೀರನ್ನು ತುಂಬಿಸಿದೆ. ಸಹಸ್ರ ಸಹಸ್ರ ಮರಗಳ ಒಡಲಿಂದ ಸುಳಿಯುತ್ತಿದ್ದ ಪ್ರಾಣವಾಯುವಿನಲ್ಲಿ ಎಲ್ಲಾ ಜೀವಸತ್ವಗಳೂ ಇದ್ದ ಹಾಗಿತ್ತು.
ಕಾಲೇಜಿನ ಹುಡುಗರ ಗುಂಪೊಂದು ಹರಟುತ್ತಾ ಸಾಗುತ್ತಿತ್ತು, ನನ್ನನ್ನು ನೋಡಿದ ಹುಡುಗನೊಬ್ಬ, ‘ಬನ್ನಿ ಮೇಡಂ, ನಿಮ್ಮನ್ನು ಹೆಗಲ ಮೇಲೆ ಹೊತ್ತು ಸಾಗುವೆ’ ಎಂದ. ಇನ್ನೊಬ್ಬ ನನಗೆ ಬಿಸಿಲು ತಾಕದಂತೆ ಛತ್ರಿ ಹಿಡಿದ, ಹೆಜ್ಜೆ ಹೆಜ್ಜೆಗೂ ಇವರು ತೋರುತ್ತಿದ್ದ ನಿಷ್ಕಳಂಕ ಪ್ರೀತಿಗೆ ಸೋತುಹೋದೆ. ನನ್ನಲಿದ್ದ ಚಾಕಲೇಟುಗಳನ್ನು ಅವರಿಗೆ ನೀಡಿದೆ, ಅವರು ಖುಷಿಯಾಗಿ ಚಾಕಲೇಟ್ ಮೆಲ್ಲುತ್ತಾ ಸಾಗಿದಾಗ ನನ್ನಲ್ಲಿ ಕೆಲವು ಪ್ರಶ್ನೆಗಳು ಮೂಡಿದವು – ಎಲ್ಲಿ ಹೋದವು ಇಲ್ಲಿದ್ದ ದುಷ್ಟ ಶಕ್ತಿಗಳು? ಬಹುಶಃ ಗುರು ರಾಂಪೋಚೆ ಎಲ್ಲ ದುಷ್ಟ ಶಕ್ತಿಗಳನ್ನೂ ಹೊಸಕಿ ಹಾಕಿ ಸ್ನೇಹ, ಪ್ರೀತಿಯನ್ನು ಪಸರಿಸಿದನೇನೋ. ಇಂದು ಇಲ್ಲಿನ ಪೌರಾಣಿಕ ಐತಿಹ್ಯ ನಿಜವಾಗಿತ್ತು. ಈಗ ನಾವು ಟೈಗರ್ ನೆಸ್ಟ್ ಎದುರಿಗೆ ನಿಂತಿದ್ದೆವು, ಅದೊಂದು ಫೋಟೋ ಶೂಟ್ ಮಾಡುವ ಸ್ಥಳವಾಗಿತ್ತು. ಆಯಾಸ ಮರೆತು, ಎಲ್ಲರೂ ಸಂಭ್ರಮದಿಂದ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ನನ್ನ ಮೊಬೈಲ್ ಲತಾಳ ಬಳಿ ಉಳಿದಿತ್ತು. ನಾನು ಪ್ರಕೃತಿಯ ಸೊಬಗನ್ನು ನೋಡುತ್ತಾ ಮೈ ಮರೆತಿದ್ದೆ, ಆಗ, ‘ಮಾ ಜೀ’ ಎಂಬ ಮಾತು ಕೇಳಿ ಹಿಂದೆ ತಿರುಗಿ ನೋಡಿದರೆ ನಮ್ಮ ಗೈಡ್ ಧರ್ಮ ನಿಂತಿದ್ದ. ನನಗೆ ನಡೆದು ನಡೆದು ಸುಸ್ತಾಗಿತ್ತು, ಈ ಬೆಟ್ಟ ಇಳಿದು ಟೈಗರ್ ನೆಸ್ಟ್ ಇದ್ದ ಬೆಟ್ಟ ಹತ್ತಲು ಸುಮಾರು 700 ಕಡಿದಾದ ಮೆಟ್ಟಿಲುಗಳು ಇದ್ದವು. ಅಲ್ಲಿಂದಲೇ ಗುರು ರಾಂಪೋಚೆಯ ದರ್ಶನ ಮಾಡಿ ಹಿಂತಿರುಗುವ ಅಂದುಕೊಂಡೆ, ಆದರೆ ಧರ್ಮ ಬಿಡಬೇಕಲ್ಲ. ಬನ್ನಿ ಬನ್ನಿ ನನ್ನ ಕೈ ಹಿಡಿದು ನಡೆಯಿರಿ, ಇನ್ನೇನು ಟೈಗರ್ ನೆಸ್ಟ್ ಸಮೀಪದಲ್ಲಿಯೇ ಇದೆ, ಎಂದು ಮೆಲ್ಲಗೆ ಕೈ ಹಿಡಿದು ಕೆಳಗಿಳಿಸಿದ. ಅಲ್ಲೊಂದು ಜಲಪಾತ ಇನ್ನೂರು ಅಡಿ ಮೇಲಿನಿಂದ, ನಮ್ಮ ಮೇಲೆಯೇ ಚಿಮ್ಮುತ್ತಿತ್ತು, ಪುಟ್ಟದಾದ ಸೇತುವೆ ಮೇಲೆ ನಡೆದು ಮತ್ತೆ ಬೆಟ್ಟ ಏರಬೇಕಿತ್ತು. ಧರ್ಮ ಆ ಸ್ಥಳದ ಮಹಾತ್ಮೆ ಹೇಳುತ್ತಾ ಸಾಗಿದಾಗ, ದಾರಿ ಸವೆದದ್ದು ಗೊತ್ತಾಗಲೇ ಇಲ್ಲ – ಕ್ರಿಸ್ತಪೂರ್ವ 747 ರಲ್ಲಿ ಗುರು ಪದ್ಮಸಂಭವರು ಇಲ್ಲಿಗೆ ಬಂದು ತಪಸ್ಸು ಮಾಡಿದರಂತೆ. ಆ ಗುಹೆಯನ್ನು ವರ್ಷವಿಡೀ ಮುಚ್ಚಿರುತ್ತಾರೆ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಂದು ಈ ಗುಹೆಯನ್ನು ಭಕ್ತರಿಗಾಗಿ ತೆರೆದಿಡುತ್ತಾರೆ. ಅಂದು ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ ಗುರುಗಳ ದರ್ಶನಭಾಗ್ಯ ಪಡೆದು ಧನ್ಯರಾಗುತ್ತಾರೆ. ಈ ದೇಗುಲದ ಕಟ್ಟಡವನ್ನು 1692 ರಲ್ಲಿ ಕಟ್ಟಲಾಯಿತು. ಅಂದಿನಿಂದ ಬೌದ್ಧ ಧರ್ಮವನ್ನು ಭೂತಾನಿನಲ್ಲಿ ಪ್ರಚಾರ ಮಾಡಲಾಯಿತು.
ನಾನು ಹತ್ತು ಸಾವಿರದ ಇನ್ನೂರು ಅಡಿ ಎತ್ತರದಲ್ಲಿದ್ದ ಟೈಗರ್ ನೆಸ್ಟ್ ತಲುಪಿದ್ದೆ, ಈ ಬೆಟ್ಟ ತಾಮ್ರ ವರ್ಣದಲ್ಲಿ ಕಂಗೊಳಿಸುತ್ತಿತ್ತು. ಅಲ್ಲಿ ನಾಲ್ಕು ದೇಗುಲಗಳಿದ್ದವು. ನಮ್ಮ ಟಿಕೆಟ್ ಚೆಕ್ ಮಾಡಿ, ನಮ್ಮ ಮೊಬೈಲ್, ಕೋಲು, ಬ್ಯಾಕ್ ಪ್ಯಾಕ್ ಎಲ್ಲವನ್ನೂ ಅವರ ಬಳಿಯಿಟ್ಟು ದೇಗುಲ ಪ್ರವೇಶಿಸಿದೆವು, ಗುರು ಪದ್ಮಸಂಭವರ ರೌದ್ರಾವತಾರವಾದ ಗುರು ದೋರ್ಜಿ ದ್ರೋಲೋ ನಮ್ಮೆದುರು ನಿಂತಿದ್ದರು. ಈ ದೇಗುಲದ ಗೋಡೆಗಳ ಮೇಲೆ, ಪುಡಿ ಮಾಡಿದ ಲಾಮಾನ ಎಲುಬುಗಳನ್ನು ಚಿನ್ನದ ಪುಡಿಯೊಂದಿಗೆ ಬೆರಸಿ ಪ್ರಾರ್ಥನೆಗಳನ್ನು ಕೆತ್ತಲಾಗಿದೆ. ಬೌದ್ಧ ಸನ್ಯಾಸಿಗಳು ಟೈಗರ್ ನೆಸ್ಟ್ ನ ಗುಹೆಗಳಲ್ಲಿ ಮೂರು ವರ್ಷಗಳ ಕಾಲ ತಪಸ್ಸನ್ನಾಚರಿಸುವುದು ವಾಡಿಕೆ. ನಾಲ್ಕಾರು ಲಾಮಾಗಳು ಮಂತ್ರಪಠಣ ಮಾಡುತ್ತಾ ತಾಳ ಜಾಗಟೆ ಬಾರಿಸುತ್ತಿದ್ದರು. ನಾನೂ ಅವರ ಜೊತೆ ಐದು ನಿಮಿಷ ಕಣ್ಣು ಮುಚ್ಚಿ ಕುಳಿತೆ, ಮನಸ್ಸು ಸ್ಥಬ್ಧವಾಗಿತ್ತು, ಚೈತನ್ಯದ ಅಲೆಗಳು ನನ್ನ ಶರೀರದಲ್ಲಿ ವ್ಯಾಪಿಸಿದ ಭಾವ. ಸುತ್ತಲೂ ದಟ್ಟವಾದ ಕಾಡು, ಎತ್ತರದಲ್ಲಿರುವ ಗುಹೆಗಳು, ಅಬ್ಬಾ, ಎಂತಹ ಸುಂದರವಾದ ಸ್ಥಳವನ್ನು ಆಯ್ದುಕೊಂಡು, ತಪಗೈದ ಆ ಗುರು ಪದ್ಮಸಂಭವ. ಎಂತಹ ಪಾಮರರಿಗೂ ಜ್ಞಾನೋದಯವಾಗಿ ಬಿಡುವಂತಹ ಸೊಬಗಿನ ಲೋಕವಿದು. ಆಗ ಬಂದ ಭಕ್ತನೊಬ್ಬ ಎಲ್ಲರಿಗೂ ಒಂದೊಂದು ಸೇಬು ಹಣ್ಣನ್ನು ನೀಡಿದ. ಹಸಿವಾಗಿತ್ತು, ಸೇಬು ಅಮೃತದಂತೆ ಸವಿಯಾಗಿತ್ತು.
ಆಗ ಓಡೋಡುತ್ತಾ ಬಂದಳು ಲತಾ, ಅವಳಿಗೆ ಕುದುರೆ ಹತ್ತಲು ಭಯವಾಯಿತಂತೆ, ನಡೆದೇ ಬಂದಿದ್ದಳು. ಟೈಗರ್ ನೆಸ್ಟ್ ಮುಂದೆ ಅವಳನ್ನು ನೋಡಿದಾಗ ನನಗೆ ಸಂತಸಕ್ಕೆ ಪಾರವೇ ಇರಲಿಲ್ಲ. ಕಳೆದು ಹೋದ ನಿಧಿ ಸಿಕ್ಕ ಹಾಗಾಗಿತ್ತು. ಮತ್ತೊಮ್ಮೆ ಅವಳೊಂದಿಗೆ ಗುರುಗಳ ದರ್ಶನ ಮಾಡಿ ಟೈಗರ್ ನೆಸ್ಟ್ ಇಳಿಯತೊಡಗಿದೆ. ಬೆಟ್ಟ ಹತ್ತುವಾಗ ಇದ್ದ ಆತಂಕ, ಉತ್ಸಾಹ, ಉಲ್ಲಾಸ ಕರಗಿ ಶಾಂತ ರಸವಾಗಿತ್ತು.. ಬೆಟ್ಟದ ತಪ್ಪಲನ್ನು ಸೇರಿದಾಗ ಗಂಟೆ ಐದಾಗಿತ್ತು. ಬೆಳಿಗ್ಗೆ ಹತ್ತೂವರೆಯಿಂದ ಸಂಜೆ ಐದರವರೆಗೆ ಸತತವಾಗಿ ನಡೆದಿದ್ದೆ. ಸರ ಸರನೆ ಬೆಟ್ಟ ಇಳಿಯುವಾಗ ಒಂದೆರೆಡು ಬಾರಿ ಕಾಲಿನ ಸ್ನಾಯುಗಳ ಸೆಳೆತ ಉಂಟಾಗಿತ್ತು. ‘‘Enjoy your pain’’ ಎಂದು ಗುರುಗಳು ಯೋಗ ತರಗತಿಗಳಲ್ಲಿ ಹೇಳುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ ಕೋಲೂರುತ್ತಾ ಮೆಲ್ಲನೆ ಕೆಳಗಿಳಿದೆ. ನನ್ನ ಕನಸು ನನಸಾಗಿತ್ತು. ಈ ಅದ್ಭುತವಾದ ಅನುಭವವನ್ನು ಜೋಪಾನವಾಗಿ ಮನದಾಳದಲ್ಲಿ ಕಾಯ್ದಿರಿಸಿದ್ದೇನೆ. ನೀವೂ ಮರೆಯದೆ ಭೂತಾನಿನ ಪ್ರವಾಸ ಮಾಡುತ್ತೀರಾ ಅಲ್ವಾ?
(ಮುಂದುವರಿಯುವುದು)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://www.surahonne.com/?p=41029
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಬಹಳ ಚೆನ್ನಾಗಿದೆ ಮೇಡಂ
ಸೂಕ್ತವಾದ ಚಿತ್ರವನ್ನು ಹಾಕಿ ಲೇಖನವನ್ನು ಪ್ರಕಟಿಸಿರುವ ಹೇಮಮಾಲ ಅವರಿಗೆ ವಂದನೆಗಳು
ವನಿತಾ ರವರಿಗೆ ವಂದನೆಗಳು
ನಡೆದೆ ತಲುಪಬೇಕಾದ ಸ್ಥಳವನ್ನು ತಲುಪುವ ನಿಮ್ಮ ಉತ್ಸಾಹ ಇಷ್ಟ ಆಯಿತು. ಚೆನ್ನಾಗಿದೆ ಮೇಡಂ ಪ್ರವಾಸ. ಕಥನ.
ಪ್ರವಾಸ ಕಥನ ಸೊಗಸಾಗಿ ಮೂಡಿಬರುತ್ತಿದೆ..ಮೇಡಂ