ಕೃಪಾಚಾರ್ಯರ ಕೃಪೆ

Share Button

ಹಿರಿಯರು ತಮ್ಮ ಮಕ್ಕಳ ಹೆಸರನ್ನು ಉಲ್ಲೇಖಿಸುವಾಗ ಅಥವಾ ಬರೆಯುವಾಗ ಹೆಸರಿನ ಹಿಂದೆ ಚಿ| ಅಂದರೆ ಚಿರಂಜೀವಿ ಎಂದು ಸೇರಿಸಿ ಬರೆಯುವುದು ಸರ್ವತ್ರ ವಾಡಿಕೆ. ತಮ್ಮ ಮಕ್ಕಳು ಚಿರಾಯುಗಳಾಗಬೇಕು ಎಂಬುದೇ ಇಲ್ಲಿ ಮಾತಾ-ಪಿತರ ಮನೋಭೂಮಿಕೆ, ಆದರೆ ಅವರೆಲ್ಲಾ ಚಿರಾಯುಗಳಾಗುವುದಿಲ್ಲವಲ್ಲ ಹುಟ್ಟಿದ ಮನುಷ್ಯ ಸಾಯಲೇಬೇಕಲ್ಲವೇ? ಜನ್ಮವೆತ್ತಿ ಬಂದ ಮಾನವರು ಈ ಭೂಮಿಯಲ್ಲಿ ಚಿರಂಜೀವಿಗಳಾಗಲು ಸಾಧ್ಯವಾ? ಹಾಗಿರುವ ಉದಾಹರಣೆ ಇದೆಯಾ? ಎಂದು ಪ್ರಶ್ನೆ ಹಾಕಿದರೆ ಹೌದು ಇದ್ದಾರೆ ಎನ್ನುತ್ತದೆ. ನಮ್ಮ ಪುರಾಣಲೋಕ. ಸಪ್ತ ಚಿರಂಜೀವಿಗಳಂತೆ ಅವರೇ ವ್ಯಾಸ, ಹನುಮಂತ, ಬಲಿ, ವಿಭೀಷಣ, ಕೃಪ, ಪರಶುರಾಮ, ಅಶ್ವತ್ಥಾಮ, ಕೃಷ್ಣ, ಪರಶುರಾಮ, ವಿಶೇಷಣ ಈ ಮೂವರನ್ನುಳಿದು ಉಳಿದೆಲ್ಲರ ಬಗ್ಗೆ ಈ ಅಂಕಣದಲ್ಲಿ ಹಿಂದೆ ಓದಿದ್ದೇವೆ. ಈಗ ‘ಕೃಪ’ನ ಬಗ್ಗೆ ಮಾಹಿತಿ ಅರಿಯೋಣ.

ಈತನು ಗೌತಮ ಕುಲದವನು, ಪ್ರಖ್ಯಾತ ಗೌತಮ ಋಷಿಗಳಿಗೆ ‘ಶರದ್ವಂತ’ ಎಂಬ ಮಗನಿದ್ದನು. ಇವನು ಜನಿಸುವಾಗ ಧನುರ್ಬಾಣಗಳ ಸಹಿತನಾಗಿ ಪ್ರತ್ಯಕ್ಷನಾದನಂತೆ.ಅದಕ್ಕಾಗಿ ಅವನಿಗೆ ‘ಶರದ್ವಂತ’ ಎಂದು ಹೆಸರಿಟ್ಟರಂತೆ. ವೇದಾಧ್ಯಯನ ಅಲ್ಲದೆ ಶಸ್ತಾಭ್ಯಾಸವನ್ನೂ ಮಾಡುತ್ತಿದ್ದು, ದೇವತೆಗಳು ಬೆಚ್ಚಿಬೀಳುವಂತಾಗುತ್ತಿದ್ದರಂತೆ. ಅದರಲ್ಲೂ ದೇವೇಂದ್ರನು ಇವನು ಹೀಗೇ ಮುಂದುವರಿದರೆ ತನಗೆ ಅಪಾಯವೆಂದರಿತು ಅವನ ಅಧ್ಯಯನ, ಅಭ್ಯಾಸಗಳನ್ನು ಕುಂಠಿತಗೊಳಿಸುವುದಕ್ಕಾಗಿ ‘ಜಾನಪದೀ’ ಎಂಬ ಅಪ್ಸರೆಯನ್ನು ಕರೆದು ಅವನನ್ನು ಭಂಗಗೊಳಿಸೆಂದು ಕಳುಹಿಸಿದನಂತೆ, ಅಪ್ಸರೆಯ ನೃತ್ಯದಿಂದ ಶರದ್ವಂತನ ವೇದಾಧ್ಯಯನ ಭಂಗವಾಗಿ ಅವನ ತೇಜಸ್ಸು ರೇತಸ್ಸಿನ ರೂಪದಲ್ಲಿ ಕೆಳಗಿದ್ದ ಶರಸ್ತಂಭದ ಮೇಲೆ ಬಿತ್ತು. ಇದು ಎರಡು ಭಾಗಗಳಾಗಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ಜನನವಾಯ್ತು..ಶರದ್ವಂತನು ಆ ಕೂಸುಗಳನ್ನು ಅಲ್ಲಿಯೇ ಬಿಟ್ಟು ಇನ್ನೊಂದು ಕಡೆಗೆ ತನ್ನ ಅಭ್ಯಾಸಕ್ಕೆ ತೆರಳುತ್ತಾನೆ.ಮಕ್ಕಳು ಅನಾಥರಾಗುತ್ತಾರೆ. ಇಲ್ಲಿ ಓದುಗರಿಗೆ ಶರದ್ವಂತನ ಮೇಲೆ ತಿರಸ್ಕಾರ ಭಾವನೆಗೆ ಎಡೆಯಾಗುತ್ತದೆ. ಆದರೆ ಪುರಾಣದಲ್ಲಿ ಇಂತಹ ಸನ್ನಿವೇಶ ಹಲವಾರು. ವಿಶ್ವಾಮಿತ್ರ-ಮೇನಕೆಯರ ಕೂಸು ಶಕುಂತಲೆಯಿರಬಹುದು, ದ್ರೋಣನ ಜನನ, ಗಂಗಾಸುತ ಭೀಷ್ಮನ ಹುಟ್ಟು ಹೀಗೆ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು. ಎಲ್ಲದರ ಹಿಂದೆ ಕಾಣದ ಕೈವಾಡದ ಸಮಾಜಮುಖಿ ಅಥವಾ ಲೋಕಕಲ್ಯಾಣದ ಫಲಾಪೇಕ್ಷೆಯ ಗುರಿಯಿರುತ್ತದೆ. ಇವುಗಳ ಹಿಂದೆ ಗಮನಿಸುವ ಅಂಶ, ಒಂದು ಉತ್ತಮಿಕೆಯ ಉಗಮ ಇದಾಗಿರುತ್ತದೆ.

ಹೀಗಿರಲು ಚಂದ್ರವಂಶದ ಪ್ರತೀಪನ ಮಗನಾದ ಶಂತನು ರಾಜ ಬೇಟೆಯಾಡುತ್ತಾ ಕಾಡಿಗೆ ಬರಲು ಅವನ ಸೇವಕರು ಶಿಶುಗಳನ್ನು ಕಂಡು ರಾಜನಿಗೆ ಒಪ್ಪಿಸಿದರು. ರಾಜನು ಮಕ್ಕಳನ್ನು ಅರಮನೆಗೆ ತಂದು ಸಾಕಿದನು. ಹೆಣ್ಣು ಮಗುವಿಗೆ `ಕೃಪಿ’ ಎಂದೂ, ಗಂಡು ಶಿಶುವಿಗೆ ‘ಕೃಪ’ ಎಂದೂ ಹೆಸರಿಟ್ಟು ಕರೆಯತೊಡಗಿದರು. ಅರಮನೆಯ ಉತ್ತಮ ಪೋಷಣೆಯಲ್ಲಿ ಬೆಳೆದು ಮಕ್ಕಳು ದೊಡ್ಡವರಾಗತೊಡಗಿದರು. ಇದನ್ನು ಯೋಗ ದೃಷ್ಟಿಯಿಂದರಿತ ಶರದ್ವಂತನು ಅಲ್ಲಿಗೆ ಬಂದು ಬಾಲಕನನ್ನು ಶಸ್ತ್ರಾಸ್ತ್ರ ಪ್ರವೀಣನನ್ನಾಗಿ ಮಾಡಿದನು. ಕೃಪನು ವಿದ್ಯಾಪಾರಂಗತರಾಗಿ ಕೃಪಾಚಾರ್ಯನಾದನು, ಮುಕ್ತ, ಅಮುಕ್ತ, ಮುಕ್ತಾಮುಕ್ತ ಮತ್ತು ಮಂತ್ರಮುಕ್ತಗಳೆಂಬ ಶಸ್ತ್ರಾಸ್ತ್ರಗಳ ನಾಲ್ಕು ಭೇದಗಳನ್ನು ತಂದೆಯಿಂದ ಕಲಿತರು. ಇವರೇ ಮುಂದೆ ಕುರು-ಪಾಂಡವರಿಗೆ ಅಸ್ತ್ರವಿದ್ಯೆಯನ್ನು ಕಲಿಸುವ ಪ್ರಾಥಮಿಕ ಗುರುಗಳೆನಿಸಿದರು. ಮುಂದೆ ದ್ರೋಣಾಚಾರ್ಯರ ಪ್ರವೇಶವಾಗಿ ಅವರಿಂದ ಇನ್ನೂ ಅಧಿಕ ಶಸ್ತ್ರಾಸ್ತ್ರ ವಿದ್ಯೆ ಕಲಿಯುತ್ತಾರೆ.

ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕೃಪಾಚಾರ್ಯರು ಕೌರವನ ಪಕ್ಷದಲ್ಲಿ ನಿಲ್ಲುತ್ತಾರೆ. ಕಾರಣ ಆತ ಆ ದೇಶದ ಅರಸ. ಯುದ್ಧದ ಸಮಯದಲ್ಲಿ ಭೀಮನ ಗದಾ ಪ್ರಹಾರದಿಂದ ದುರ್ಯೋಧನನು ತೊಡೆ ಮುರಿದು ಬಿದ್ದಾಗ ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮರು ರಾಜ ಕೌರವನನ್ನು ಸಮೀಪಿಸಿ ಸಾಂತ್ವನಿಸುತ್ತಾರೆ. ಮುಂದೆ ಕೃಪಾಚಾರ್ಯರು ಅಶ್ವತ್ಥಾಮನನ್ನು ಸೇನಾಪತಿಯನ್ನಾಗಿ ಮಾಡಿದರು. ಕೃಪಾಚಾರ್ಯರ ಸೋದರಳಿಯನಾದ ಅಶ್ವತ್ಥಾಮನು ಪಾಂಡವರನ್ನು ವಂಚನೆಯಿಂದಲೇ ಕೊಲ್ಲಬೇಕೆಂದು ವ್ಯಕ್ತಪಡಿಸಿದಾಗ ಅವರು ಧರ್ಮಸಮ್ಮತವಾದ ನುಡಿಗಳಿಂದ ಹೀಗೆ ಹೇಳುತ್ತಾರೆ- “ಪುರುಷನು ಹಲವಾರು ಆಶಾಗೋಪುರಗಳನ್ನಿಟ್ಟುಕೊಂಡು ಮುನ್ನುಗ್ಗಬಹುದಾದರೂ ವಿಧಿಯ ನಿಶ್ಚಿತವು ಬೇರೆಯೇ ಇದೆ. ದೈವದ ಅನುಗ್ರಹವಿಲ್ಲದೆ ಯಾವುದೂ ಸಿದ್ಧಿಸುವುದಿಲ್ಲ. ‘ತೇನ ವಿನಾತೃಣಮಪಿ ನ ಚಲತಿ’- ಒಂದು ಹುಲ್ಲುಕಡ್ಡಿ ಅಲ್ಲಾಡಬೇಕಾದರೂ ಪರಮಾತ್ಮನ ಕೃಪೆ ಅಗತ್ಯ. ಒಳಗಿರುವ ಮದ-ಮಾತ್ಸರ್ಯಗಳನ್ನು ಬೆಳೆಸಿ ಲೌಕಿಕ ಸಂಪತ್ತಿನ ಮೇಲೆ ಲೋಭಗೊಂಡು ಮಾನವನು ದುಷ್ಕಾರ್ಯವನ್ನೆಸಗಿದರೆ ಜನಬಲವನ್ನೂ, ಧನಬಲವನ್ನೂ ಕಳೆದುಕೊಳ್ಳುತ್ತಾನೆ. ದೈವ ಬಲವಿಲ್ಲದ ಮಾನವ ಪ್ರಯತ್ನ ಪುರುಷ ಪ್ರಯತ್ನವಿಲ್ಲದ ದೈವದ ಒಲುಮೆ ಎಂದಿಗೂ ಫಲಕಾರಿಯಾಗುವುದಿಲ್ಲ. ಭಗವಂತ ಸಹಾಯಕ್ಕೆ ಅರ್ಹವಾಗಿರುವ ಉತ್ತಮ ಕಾರ್ಯಗಳು ಎಂದಿಗೂ ನಿಷ್ಪಲವಾಗುವುದಿಲ್ಲ, ಕೆಲವು ಸಲ ವಿಳಂಬವಾಗುವುದಷ್ಟೆ ಅಶ್ವತ್ಥಾಮ, ಒಂದು ವಿಷಯ ನೆನಪಿಟ್ಟುಕೋ. ಯಾವ ಮಾನವನು ಮದ, ಮಾತ್ಸರ್ಯ, ಭಯ, ಕ್ರೋಧ, ಲೋಭಗಳಿಂದ ಸಿದ್ಧಿಯನ್ನು ಪಡೆಯಲು ಇಚ್ಛಿಸುತ್ತಾನೆಯೋ ಅದನ್ನು ಅವನಿಗೆ ಪಡೆಯಲಾಗದೆ ಅವಮಾನಕ್ಕೆ ಗುರಿಯಾಗುವ ಸಂಭವಗಳೇ ಹೆಚ್ಚು. ಅದಕ್ಕೆ ಜೀವಂತ ಉದಾಹರಣೆ ದುರ್ಯೋಧನನೇ ಆಗಿದ್ದಾನೆ. ಮಹಾಲೋಭಿಯಾಗಿ ಧರ್ಮಪ್ರಕಾರ ತನ್ನ ದಾಯಾದಿಗಳಿಗೆ ಸಲ್ಲಬೇಕಾದ ರಾಜ್ಯವನ್ನು ಸಲ್ಲಿಸದೆ ಗುರು ಹಿರಿಯರ ಸದಭಿಪ್ರಾಯವನ್ನೂ ಅಲ್ಲಗಳೆದು ಅನಾದರಣೆ ತೋರಿ ಹಗೆತನವನ್ನೂ ಬೆಳೆಸಿ ಮಾತ್ಸರ್ಯದ ಕಿಚ್ಚಿಗೆ ಆಹುತಿಯಾಗಬೇಕಾಯಿತು. ಜೊತೆಗೆ ನಿರಪರಾಧಿಗಳಾದ ಉಭಯ ಪಕ್ಷಗಳ ಹನ್ನೊಂದು ಆಕ್ರೋಹಿಣಿ ಸೈನ್ಯ ವೀರರು ಅಸುನೀಗಬೇಕಾಯ್ತು, ದುರಭಿಮಾನ ಹಾಗೂ ದುಷ್ಟತನದ ಚರಮಸೀಮೆಯು ಅವನನ್ನು ಮರಣದಂಚಿಗೆ ಕರೆದುಕೊಂಡು ಹೋಯ್ತು. ಯಾರೇ ಆಗಲಿ ತಮ್ಮ ಬುದ್ಧಿಗೆ ಹೊಳೆಯದಿದ್ದರೆ ಸಹೃದಯರೂ ವಿದ್ವಾಂಸರ ಆದೇಶದಂತೆ ವರ್ತಿಸಬೇಕು. ನಾವೀಗ ವಿದುರನಲ್ಲಿಗೆ ಹೋಗಿ ಅವರ ಸಲಹೆಯಂತೆ ಕಾರ್ಯವೆಸಗುವ” ಎನ್ನುತ್ತಾರೆ ಕೃಪಾಚಾರ್ಯರು.

ಹಿಂದೆ ಕೌರವನ ಮಾವನಾದ ಶಕುನಿಯು ದುಷ್ಟ ಕಾರ್ಯಕ್ಕಿಳಿಸಿದರೆ ಇಲ್ಲಿ ಅಶ್ವತ್ಥಾಮನ ಮಾವನಾದ ಕೃಪಾಚಾರ್ಯರು ಅಧರ್ಮದಿಂದ ಧರ್ಮದೆಡೆಗೆ ಒಯ್ಯಲು ಶ್ರಮಿಸುತ್ತಾರೆ. ಮುಂದೆ ಇವರು ಅಭಿಮನ್ಯುವಿನ ಮಗನಾದ ಪರೀಕ್ಷಿತನಿಗೂ ಅಸ್ತ್ರವಿದ್ಯಾ ಗುರುಗಳಾಗುತ್ತಾರೆ. ಕೃಪಾಚಾರ್ಯರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾದರು ನಿಜ. ಈ ಯುಗದಲ್ಲಿ ನಾವು ಚಿರಂಜೀವಿಗಳಾಗಲು ಅಸಾಧ್ಯವಾದರೂ ನಾವು ಮಾಡುವ ಸತ್ಕಾರ್ಯ, ದೇಶಸೇವೆ, ಈಶ ಸೇವೆಗಳು ಚಿರಾಯುವಾಗಬಹುದಲ್ಲದೇ? ಅದಕ್ಕಾಗಿ ದೈವಾನುಗ್ರಹದ ಜೊತೆಯಲ್ಲಿ ಇಂತಹ ಪುರಾಣ ಪುರುಷರತ್ನರ ಕೃಪೆ ಬೇಕಲ್ಲವೇ?

-ವಿಜಯಾಸುಬ್ರಹ್ಮಣ್ಯ ಕುಂಬಳೆ

4 Responses

  1. Anonymous says:

    ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.

  2. ವಿಜಯಾಸುಬ್ರಹ್ಮಣ್ಯ says:

    ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು

  3. ಪುರಾಣ ಕಥನ ಎಂದಿನಂತೆ ಓದಿಸಿಕೊಂಡುಹೋಯಿತು ..ನೀವು ಕಥೆ ಹೇಳುವ ಮೊದಲು..ಪೂರ್ವ ಪೀಠಿಕೆ ಹೇಳುತ್ತೀರಲ್ಲ ಅದು ನನಗೆ ಬಹಳ ಆಪ್ತವಾಗತ್ತದೆ ವಿಜಯ ಮೇಡಂ ಅದಕ್ಕಾಗಿ ಧನ್ಯವಾದಗಳು

  4. ನಯನ ಬಜಕೂಡ್ಲು says:

    ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: