90ರ ಸಂಭ್ರಮದಲ್ಲಿ ಮೈಸೂರು ಆಕಾಶವಾಣಿ
“ಬಹುಜನ ಹಿತಾಯ… ಬಹುಜನ ಸುಖಾಯ…” ಎಂಬ ದಿವ್ಯ ವಾಕ್ಯವನ್ನಿಟ್ಟುಕೊಂಡು ಬಹಳಷ್ಟು ವರ್ಷಗಳಿಂದ ಮೈಸೂರು ಆಕಾಶವಾಣಿಯು ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳ ಮಹಾಪೂರವೇ ಕೇಳುಗರಿಗೆ ತಲುಪುತ್ತಿದೆ. ಆದರೆ ಈಗ ವಿಭಿನ್ನ ರೀತಿಯ ಕಾರ್ಯಕ್ರಮದ ಸುಗ್ಗಿ ಮೈಸೂರು ಆಕಾಶವಾಣಿಯಲ್ಲಿ ಶುರುವಾಗಿದೆ. ಇದು ಮೈಸೂರು ಆಕಾಶವಾಣಿ ಯ 90ನೇ ಹುಟ್ಟುಹಬ್ಬದ ಕೊಡುಗೆಯಾಗಿದೆ!.
ಈ ಮೊದಲು ಪ್ರತಿದಿನ 11 ಗಂಟೆಗೆ ನಿಮ್ಮೊಂದಿಗೆ ಆಕಾಶವಾಣಿ ಪ್ರಸಾರವಾಗುತ್ತಿತ್ತು. ಮುಂದುವರಿದ ಭಾಗವಾಗಿ ಈಗ ಸೋಮವಾರದಿಂದ ಭಾನುವಾರದವರೆಗೆ ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಜೊತೆಗೆ ಒಂದೊಂದು ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಸದಭಿರುಚಿಯ ಕಾರ್ಯಕ್ರಮ ಪ್ರಸಾರವಾಗುತ್ತಿವೆ. ಆದರೆ ಈ ಕಾರ್ಯಕ್ರಮದ ವಿಶೇಷ ಎಂದರೆ ಕೇಳುಗರೆ ಪ್ರತಿ ದಿನ ಹೆಚ್ಚಾಗಿ ಭಾಗವಹಿಸುವಂತಹ ಕಾರ್ಯಕ್ರಮ ಇದಾಗಿದೆ. ಇದರಿಂದಾಗಿ ಕೇಳುಗರ ಮತ್ತು ಆಕಾಶವಾಣಿಯ ಜೊತೆ ವಿಭಿನ್ನ ಸುಮಧುರ ಬಾಂಧವ್ಯ ಉಂಟಾಗಿದೆ.
ಪ್ರತೀ ಸೋಮವಾರ “ಗೇಮ್ ಶೋ”- (ಬಿ ದಿಗ್ವಿಜಯ್), ಮಂಗಳವಾರ “ಕಥೆಯಲ್ಲಿದೆ ಉತ್ತರ..!”- ( ಪ್ರಭುಸ್ವಾಮಿ ಮಳಿ ಮಠ), ಬುಧವಾರ ಕೇಳುಗರೊಂದಿಗೆ ಅನಿಸಿಕೆ ಕಾರ್ಯಕ್ರಮ ಜೊತೆಗೆ ಕೇಳುಗರು ಪತ್ರದ ಮುಖೆನಾ ಬರೆದ/ಮಿಂಚಂಚೆ/ ಪತ್ರ ಎಲ್ಲವನ್ನು ಓದುವುದು. ಗುರುವಾರ- ಜಿ ಶಾಂತಕುಮಾರ್ ಪ್ರಸ್ತುತಪಡಿಸುವ “ಕಾಡಿನ ರೋಚಕ ಕಥೆಗಳ” ವಿಭಿನ್ನ ಸಂದರ್ಶನ ಪ್ರಸಾರವಾಗುತ್ತಿದೆ. ಶುಕ್ರವಾರ ತಿಂಗಳಲ್ಲಿ ಮೂರು ಶುಕ್ರವಾರ “ಸಂಗೀತ ಸಂಭ್ರಮ”…. ಇದರ ರೂವಾರಿ ಎಚ್ ಎಲ್ ಶಿವಶಂಕರ್ ಸ್ವಾಮಿರವರು.
ನಂತರ ಮತ್ತೆರಡು ಶುಕ್ರವಾರ “ಟ್ರಿಣ್ ಟ್ರಿಣ್ ಸೈಕಲ್ ಸವಾರಿ: ಮಾತಿನ ಲಹರಿ, ಕಾರ್ಯಕ್ರಮ ಇದರ ನೇತೃತ್ವ ಜಾಂಪಣ್ಣ ಆಶಿಯಾಳ್ ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಇವರು ಸ್ಟುಡಿಯೋಕ್ಕೆ ಬರುವ ಆಗಿಲ್ಲ. ಸಾಮಾನ್ಯ ಸೈಕಲ್ ಸವಾರರ ಹತ್ತಿರವೇ ಹೋಗಿ ಸಂದರ್ಶನ ಮಾಡಿ ಪ್ರಸಾರ ಮಾಡುತ್ತಾರೆ. ಶನಿವಾರ ವಿಶೇಷ ಕಾರ್ಯಕ್ರಮ ಎಂದರೆ ನಮ್ಮ ಊರಿನ ಬಗ್ಗೆ ನಾವೇ ಪರಿಚಯ ಮಾಡಿಕೊಡುವ “ನಮ್ಮೂರ್ ಹೆಸರು” ಕಾರ್ಯಕ್ರಮ ಇದಾಗಿದೆ. ಇದರ ನೇತೃತ್ವ ಡಾ. ಮೈಸೂರು ಉಮೇಶ್ ರವರು. ಭಾನುವಾರ “ಮಿಶ್ರಮಾಧುರ್ಯ” ಭಾವಗೀತೆ ಭಕ್ತಿಗೀತೆ, ಜನಪದ ಗೀತೆ, ಚಲನಚಿತ್ರ ಗೀತೆ ಎಲ್ಲವೂ ಸೇರಿರುತ್ತದೆ. ಒಟ್ಟಾರೆ ಮೈಸೂರು ಆಕಾಶವಾಣಿ ಪ್ರತಿದಿನ ಬೆಳಿಗ್ಗೆ 11 ರಿಂದ 12 ಗಂಟೆಯ ಒಳಗೆ ವೈವಿಧ್ಯಮಯ ಕಾರ್ಯಕ್ರಮಗಳ ಮಹಾಪೂರವನ್ನು ಹರಿಸುತ್ತಿದೆ.
“ಕಾದಂಬರಿ ವಿಹಾರ” ಕಾರ್ಯಕ್ರಮ ಅದ್ಭುತ. ಇದುವರೆಗೂ ಐದಕ್ಕೂ ಹೆಚ್ಚು ಕವಿಗಳ/ ಲೇಖಕರ ಕಾದಂಬರಿಯನ್ನು ಮೈಸೂರಿನ ಮುಖ್ಯಸ್ಥರಾದ ಉಮೇಶ್ ಎಸ್ ಎಸ್ ರವರು ತಮ್ಮದೇ ಆದ ಶೈಲಿಯಲ್ಲಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮ ಪ್ರತಿದಿನ ಮಂಗಳವಾರ ಬೆಳಿಗ್ಗೆ 7:15 ಕ್ಕೆ ಪ್ರಸಾರವಾಗುತ್ತಿದೆ. ಅದರಲ್ಲೂ “ಹೀಗಿದೆ ನಮ್ ಜೋಡಿ”- ಪ್ರತಿ ಬುಧವಾರ ಪ್ರಸಾರವಾಗುವ ಕಾರ್ಯಕ್ರಮ. ಯುವ ಜೋಡಿಗಳ, ಹಿರಿಯ ಜೋಡಿಗಳ ಸಂದರ್ಶನಗಳು ಪ್ರಸಾರವಾಗಿವೆ ಆಗುತ್ತಿವೆ. ಅಬ್ದುಲ್ ರಶೀದ್ ರವರು ಪ್ರಸ್ತುತಪಡಿಸುತ್ತಿರುವ “ಹಾದಿಯಲ್ಲಿ ಕಂಡ ಮುಖ” ಕಾರ್ಯಕ್ರಮ ಪ್ರತಿ ಶನಿವಾರ 8:30ಕ್ಕೆ ಪ್ರಸಾರವಾಗುತ್ತದೆ.
ರೈತರಿಗೆ ಪ್ರಸಾರಾಗುವ ಕಾರ್ಯಕ್ರಮದ ರೂವಾರಿ ಎನ್ ಕೇಶವಮೂರ್ತಿ ಇವರು ಪ್ರತಿದಿನ ಸಂಜೆ 6.50ಕ್ಕೆ ಹಲವು ಸರಣಿ ಕಾರ್ಯಕ್ರಮಗಳು ಸಂದರ್ಶನ ಕೃಷಿ ಬಗ್ಗೆ ಮಾಹಿತಿ ಎಲ್ಲವೂ ಒಳಗೊಂಡಿರುತ್ತದೆ ಜೊತೆಗೆ ಪ್ರತಿದಿನ ಬೆಳಿಗ್ಗೆ ರೂ.6.50 ರೈತರಿಗೆ ಸಲಹೆ ಎಂಬ ವಾರ ಪೂರ್ತಿ ಪ್ರಸಾರ ಮಾಡುವ 5 ನಿಮಿಷದ ಕಾರ್ಯಕ್ರಮ ಇದಾಗಿದೆ.
ಇನ್ನು ಮಹಿಳಾ ರಂಗ ಕಾರ್ಯಕ್ರಮದಲ್ಲಿ ಮೈಸೂರು ಆಕಾಶವಾಣಿಯಿಂದ ಪ್ರತಿ ದಿನ 4:30 ರಿಂದ 5 ರವರೆಗೆ ಕೂಡ ವೈವಿಧ್ಯ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅವುಗಳಲ್ಲಿ “ನಾನು ಮತ್ತು ನನ್ ಕಂಪನಿ” “ಸ್ತ್ರೀ ಚೇತನ”, ಡಾಕ್ಟರ್ ಸಮಯ “ಸಖೀ ಪದ”, ಸಖೀ ಸಂವಾದ, ಇದರ ಪ್ರಸ್ತುತಿ ಎಂ ಎಸ್ ಭಾರತಿ. ಈ ಕಾರ್ಯಕ್ರಮದಲ್ಲಿ ಪದಬಂಧ, ರಸಪ್ರಶ್ನೆ , ಚಿತ್ರಗೀತೆ, ನಡುವೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ಸಂದರ್ಶನ ಎಲ್ಲವೂ ಕೂಡ ಪ್ರಸಾರವಾಗುತ್ತದೆ.
ಮಕ್ಕಳ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ ಪ್ರತಿ ಭಾನುವಾರ ಬೆಳಿಗ್ಗೆ 10ಕ್ಕೆ “ಕೇಳಿ ಗಿಳಿಗಳೇ” ಪುಟಾಣಿ ಮಕ್ಕಳ ಕಾರ್ಯಕ್ರಮ ಪ್ರಸಾರವಾಗಲಿದ್ದು ಇದರಲ್ಲಿ ಮಕ್ಕಳ ಸಾಧನೆಯ ಬಗ್ಗೆ ಜೊತೆಗೆ ಅವರಿಗೆ ಕಥೆಗಳನ್ನು ಕೂಡ ಹೇಳಲಾಗುತ್ತದೆ ಅಲ್ಲದೆ 15 ನಿಮಿಷ ನೇರ ಫೋನ್ ಇನ್ ಕಾರ್ಯಕ್ರಮವು ಕೂಡ ಇರುತ್ತದೆ. ಮಕ್ಕಳು ಇದರಲ್ಲಿ ಹಾಡು, ಕಥೆ ಹೇಳುತ್ತಾ ಭಾಗವಹಿಸುತ್ತಾರೆ. ಇನ್ನು ದೊಡ್ಡ ಮಕ್ಕಳಿಗಾಗಿ “ಮಕ್ಕಳ ಮಂಟಪ” ಕಾರ್ಯಕ್ರಮ ಪ್ರತಿ ಭಾನುವಾರ 10:30 ಕ್ಕೆ ಬೆಳಿಗ್ಗೆ ಪ್ರಸಾರವಾಗುತ್ತದೆ. ಪ್ರತಿ ಶನಿವಾರ 4:30 ರಿಂದ 5 ಗಂಟೆಯವರೆಗೆ “ನೆನಪಿನಂಗಳ” ಶೀರ್ಷಿಕೆಯಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಲೇಖಕರು, ಕವಿಗಳು, ಸ್ವತಂತ್ರ ಹೋರಾಟಗಾರರು, ದಾರ್ಶನಿಕರು ಎಲ್ಲರ ಹಿಂದೆ ಮಾಡಿದ ಸಂದರ್ಶನ ಧ್ವನಿ ಮುದ್ರಣ ಭಂಡಾರದಿಂದ ಆಯ್ದು ಮತ್ತೆ ಮತ್ತೆ ಪ್ರಸಾರ ಮಾಡುತ್ತಾರೆ. ಇದೊಂದು ಅತ್ಯದ್ಭುತ ಸಂಗ್ರಹ ಯೋಗ್ಯ ಕಾರ್ಯಕ್ರಮ. ಇನ್ನು ಹಿರಿಯರಿಗಾಗಿ “ಸಂಧ್ಯಾ ರಾಗ” ಕಾರ್ಯಕ್ರಮ ಪ್ರಸಾರವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸರಣಿ ಕಾರ್ಯಕ್ರಮಗಳು ಸಂದರ್ಶನಗಳು, ಚರ್ಚೆಗಳು ತಜ್ಞ ವೈದ್ಯರೊಂದಿಗೆ ಭೇಟಿ ಕಾರ್ಯಕ್ರಮ ಜೊತೆಗೆ ನೇರ ಪೋನ್ ಇನ್ ಕಾರ್ಯಕ್ರಮ, ಜೊತೆಗೆ ಸರ್ಕಾರದ ಹಲವು ಯೋಜನೆಗಳನ್ನು ಸಾರುವ ಆರೋಗ್ಯ ಕಾರ್ಯಕ್ರಮಗಳು, ಪ್ರಯೋಜಕ ಕಾರ್ಯಕ್ರಮಗಳು ಗಂಡು ಹೆಣ್ಣು ಹಾಗೂ ಮಕ್ಕಳಿಗೆ ಸಂಬಂಧ ಪಟ್ಟಂತೆ ನಮಗೆ ಕುಳಿತಲ್ಲೇ ತಜ್ಞ ವೈದ್ಯರಂತೆ ಕಾರ್ಯಕ್ರಮ ಪ್ರಸಾರ ಮಾಡುತ್ತಾರೆ. ಇದರ ರೂವಾರಿ ಬೇದ್ರೆ ಮಂಜುನಾಥ್.
ಇನ್ನು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಕನ್ನಡ ಭಾರತಿ ಕಾರ್ಯಕ್ರಮ ಪ್ರಸಾರ ಮಾಡುತ್ತಾರೆ. ಅಲ್ಲದೆ ಚಿಂತನ, ಚರ್ಚೆ, ಭಾಷಣ, ಲಘು ಧಾಟಿಯ ಭಾಷಣ, ಸಾಹಿತಿಗಳೊಂದಿಗೆ ಚರ್ಚೆ, ಸಂದರ್ಶನ ಒಟ್ಟಿನಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವೈವಿಧ್ಯಮಯ ಕಾರ್ಯಕ್ರಮ ಪ್ರಸಾರವಾಗುತ್ತದೆ.
ಇನ್ನು ವಿಶೇಷವಾಗಿ ಹೇಳುವುದಾದರೆ “ಚಟ್ ಪಟ್ ಚುರುಮುರಿ’ ಹಾಸ್ಯದ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನ ಕೇಳುಗರಿಗೆ ನೀಡಿ 10 ವರ್ಷ ಪೂರೈಸಿ, ಇತ್ತೀಚಿಗೆ ತಾನೇ ಸಮುದ್ಯತಾ ಕೇಳುಗರ ಬಳಗ ಮತ್ತು ಆಕಾಶವಾಣಿ ಸಹಯೋಗದೊಂದಿಗೆ ರಂಗಾಯಣದಲ್ಲಿ ಅರ್ಥಪೂರ್ಣ ಮೌಲಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಇದೊಂದು ಕೇಳುಗರ ಮತ್ತು ಆಕಾಶವಾಣಿಯ ನಡುವೆ ಇರುವ ಸುಮಧುರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಈ ಕಾರ್ಯಕ್ರಮದ ಯಶಸ್ವಿನ ರೂವಾರಿ ಪ್ರಭು ಸ್ವಾಮಿ ಮಳಿಮಠ ಮತ್ತು ಕೆ ಬಿ ಮೀನಾ ರವರು.
ಇದಲ್ಲದೆ ಸಾರ್ವಜನಿಕವಾಗಿ ಎನ್ ಕೇಶವಮೂರ್ತಿಯವರು ಸಾಧನೆ ಮಾಡಿದ ಕೃಷಿಕರ ದೃಷ್ಟಿಯನ್ನು ಇಟ್ಟುಕೊಂಡು “ಬಾನುಲಿ ಕೃಷಿ ಬೆಳಗು” ಕಾರ್ಯಕ್ರಮವನ್ನು ಅವರ ಜಮೀನಿನಲ್ಲಿ ಆಯಾ ರೈತ ಪ್ರತಿಭೆಗಳ ಸಹಯೋಗದೊಂದಿಗೆ ರೈತರನ್ನು ಕೂಡ ಒಟ್ಟುಗೂಡಿಸಿಕೊಂಡು ರೈತನ ನಡುವೆ ಸಂಪರ್ಕ ಸೇತುವೆಯಾಗಿದೆ. ಅಲ್ಲಿ ಇಡೀ ದಿನ ಕಾರ್ಯಕ್ರಮ ರೂಪಿತವಾಗಿರುತ್ತದೆ. ಅಲ್ಲಿ ರೈತರೊಂದಿಗೆ ಚರ್ಚೆ, ರೈತರು ಬೆಳೆದ ಕೃಷಿ ಪದಾರ್ಥಗಳ ಬಗ್ಗೆ ವಿಶ್ಲೇಷಣೆ ಜೊತೆಗೆ ಕೃಷಿ ತಜ್ಞರ ಸಲಹೆ ಸೂಚನೆಗಳು ಜೊತೆಗೆ ಭೋಜನ ವ್ಯವಸ್ಥೆ ಸಾವಯವ ಕೃಷಿ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಆಹಾರಪದಾರ್ಥಗಳು ರೈತನಿಗೆ ಇಡಿ ಇಡಿಯಾಗಿ ಉಪಯುಕ್ತ ಮಾಹಿತಿಯನ್ನು ತಿಳಿಸಲಾಗುವುದು. ಜೊತೆಗೆ ಕೃಷಿಯಲ್ಲಿ ಅಳವಡಿಸಿಕೊಳ್ಳಬಹುದಾದ ನೂತನ ವಿಧಾನಗಳನ್ನು ಅಲ್ಲಿ ಭಾಗವಹಿಸಿದ ರೈತರಿಗೆ ಕೃಷಿ ತಜ್ಞರಿಂದ ನೀಡಲಾಗುವುದು.
ಎಲ್ಲಾ ಕಾರ್ಯಕ್ರಮಗಳ ಜೊತೆ ಜೊತೆಗೆ ವಿಶ್ವವಿಖ್ಯಾತ ಮೈಸೂರು ದಸರಾ, ಜಂಬೂಸವಾರಿಯ ವೀಕ್ಷಕ ವಿವರಣೆಯನ್ನು ಕೂಡ ಮೈಸೂರು ಆಕಾಶವಾಣಿ ಒಂದು ತಂಡವಾಗಿ ರಾಜ್ಯ ವ್ಯಾಪಿ ಪ್ರಸಾರ ಮಾಡುತ್ತಿದೆ. ಇದು ಬಹಳ ವರ್ಷಗಳಿಂದಲೂ ಕೂಡ ಪ್ರಸಾರವಾಗುವ ಕಾರ್ಯಕ್ರಮ ಇದಾಗಿದೆ. ಅಲ್ಲದೆ ದಸರಾ ಸಂಭ್ರಮ ಪ್ರಾರಂಭದಿಂದ ಹಿಡಿದು ಅಂತಿಮದವರಿಗೂ ಕೂಡ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮ ಪ್ರಸಾರವಾಗುತ್ತದೆ ಜೊತೆಗೆ ದಸರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಗೆ ದಸರದಲ್ಲಿ ಭಾಗವಹಿಸುವ ಕಲಾತಂಡಗಳ ಬಗ್ಗೆ, ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಪೊಲೀಸ್ ಅಧಿಕಾರಿ ಅಲ್ಲದೆ ಭಾಗವಹಿಸುವ ಕಲಾತಂಡಗಳ ಬಗ್ಗೆ ಮಾಹಿತಿ ಯುವ ಸಂಭ್ರಮ ಮಹಿಳಾ, ಯೋಗ, ಕೃಷಿ, ಆಹಾರ, ಗ್ರಾಮೀಣ ದಸರಾ ಇತ್ಯಾದಿ ತಂಡಗಳ ಬಗ್ಗೆಯೂ ಕೂಡ ಸಮಗ್ರ ಮಾಹಿತಿ ನಡೆಯುತ್ತದೆ ಅಲ್ಲದೆ ದಸರಾದ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತ್ತಿನ ನೇರಪ್ರಸಾರವೂ ಕೂಡ ಮಾಡುತ್ತಾ ಬರುತ್ತಿದೆ. ಒಟ್ಟಿನಲ್ಲಿ ಆಕಾಶವಾಣಿಯು ಆಬಾಲವೃದ್ಧರಾಗಿಯಾಗಿ ಒಂದಲ್ಲ ಒಂದು ಕಾರ್ಯಕ್ರಮವನ್ನು ಎಲ್ಲರಿಗೂ ತಲುಪಿಸುತ್ತಾ ಅನೇಕ ಕೇಳುಗರ ಸಂಪರ್ಕ ಸೇತುವೆಯಾಗಿದೆ.
ಆಕಾಶವಾಣಿಯ ಧ್ವನಿಯು ಅತಿ ಎತ್ತರದಿಂದ ಅಲೆ ಅಲೆಗಳಲ್ಲಿ ತೇಲಿ ಬಂದರೂ ಕೂಡ ಪ್ರತಿಯೊಬ್ಬ ಕೇಳುಗರ ಕಿವಿಯ ಮೂಲಕ ಹೃದಯಕ್ಕೆ ಹತ್ತಿರವಾಗಿದೆ!. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆಕಾಶವಾಣಿಯ ಕಾರ್ಯಕ್ರಮಗಳನ್ನ ಕೇಳುತ್ತಾ ಕೇಳುತ್ತಾ ನಮ್ಮ ಇನ್ನಿತರ ಕೆಲಸಗಳನ್ನು ಕೂಡ ನಾವು ಮಾಡಬಹುದಾಗಿದೆ. ಜೊತೆಗೆ ಆಕಾಶವಾಣಿಯು ಸಮಯಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾ ಬರುತ್ತಿದೆ. ಜೊತೆಗೆ ಆಕಾಶವಾಣಿಯಲ್ಲಿ ಯಾವುದೇ ಕಾರ್ಯಕ್ರಮ ಪ್ರಸಾರವಾದರೂ ಅದನ್ನು ಸಂಬಂಧಪಟ್ಟಂತೆ ಎಲ್ಲರೂ ಚರ್ಚಿಸಿ, ಚಿಂತಿಸಿ ಅದು ಪ್ರಸಾರ ಮಾಡಲು ಯೋಗ್ಯವೇ ಎಂದು ತಿಳಿದು ನಂತರವೇ ಅದು ಪ್ರಸಾರವಾಗುತ್ತದೆ. ಆದುದರಿಂದ ಇಲ್ಲಿ ಆಕಾಶವಾಣಿಯಿಂದ ಅದು ಐದು ನಿಮಿಷದ ಕಾರ್ಯಕ್ರಮ ಆಗಿರಬಹುದು. 10 ನಿಮಿಷದ ಕಾರ್ಯಕ್ರಮ ಆಗಿರಬಹುದು. ಅರ್ಧ ಗಂಟೆಯ ಕಾರ್ಯಕ್ರಮ ಆಗಿರುವುದು ಅತ್ಯಂತ ಮೌಲ್ಯಯುತವಾಗಿರುತ್ತದೆ. ಇದರಿಂದಾಗಿ ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಕೂಡ ವಿಶಿಷ್ಟ ರೀತಿಯ ಸಾಹಿತ್ಯ ಆಗುತ್ತದೆ.
ಇನ್ನೊಂದು ವಿಶೇಷ ಅಂಶವೆಂದರೆ ಇಡೀ ಭಾರತದಲ್ಲೇ ಮೊಟ್ಟಮೊದಲ ಆಕಾಶವಾಣಿ ಎಂಬ ಕೀರ್ತಿಗೆ ನಮ್ಮ ಮೈಸೂರು ಆಕಾಶವಾಣಿಯು ಭಾಜನವಾಗಿದೆ. ಜೊತೆಗೆ ಆಕಾಶವಾಣಿ ಎಂಬ ಹೆಸರನ್ನ ನಾಮಕರಣ ಮಾಡಲು ಮೈಸೂರಿನಲ್ಲಿದ್ದ ನಾ ಕಸ್ತೂರಿ ಯವರೇ ಕಾರಣ. ಮೈಸೂರು ಆಕಾಶವಾಣಿಯ ಸಂಸ್ಥಾಪಕರಾದ ಡಾ ಎಂ ವಿ ಗೋಪಾಲಸ್ವಾಮಿ ಅವರು ಮನಸ್ಸು ಶಾಸ್ತ್ರಜ್ಞರು ಕಾರಣಿ ಕರ್ತರು. ಆದುದರಿಂದ ಮೈಸೂರು ಆಕಾಶವಾಣಿ ತನ್ನದೇ ಕಾರ್ಯಕ್ರಮಗಳನ್ನ ಪ್ರಸಾರಮಾಡುವುದರ ಜೊತೆಗೆ ರಾಜ್ಯ ವ್ಯಾಪಿ ಇನ್ನಿತರ ಆಕಾಶವಾಣಿಗಳ ಸಹಪ್ರಸಾರವೂ ಕೂಡ ಇರುತ್ತದೆ.
ಮೈಸೂರು ಆಕಾಶವಾಣಿಯು ಬೆಳಿಗ್ಗೆ 5:55 ಕ್ಕೆ ಪ್ರಾರಂಭವಾಗಿ ರಾತ್ರಿ 11:10 ವರೆಗೂ ಕೂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಮೈಸೂರು ಆಕಾಶವಾಣಿಯಿಂದಾಗಿ ಅನೇಕ ಸಾಹಿತಿಗಳು ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಇಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತಾ ಬರುತ್ತಿರುವ ನಮ್ಮ ಮೈಸೂರು ಆಕಾಶವಾಣಿಯು ಶತಮಾನೋತ್ಸವದ ಹೊಸ್ತಿಲಲ್ಲಿ ದಾಪುಗಾಲು ಹಾಕುತ್ತಿದೆ. ಈಗ 90ರ ಸಂಭ್ರಮ. ಈ ಸಂಭ್ರಮಾಚರಣೆಯಲ್ಲಿ ತೊಡಗಿರುವ ಮೈಸೂರು ಆಕಾಶವಾಣಿಯ ನಿಲಯದ ಉಪ ನಿರ್ದೇಶಕರಿಗೆ, ಸಹಾಯಕ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ತಂತ್ರಜ್ಞರಿಗೆ, ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಕೇಳುವ ವರ್ಗದವರಿಗೆ ವಿಶೇಷ ಅಭಿನಂದನೆಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಮೈಸೂರು ಆಕಾಶವಾಣಿಯ ಖಾಯಂ ಕೇಳುಗ.
ಅಭ್ಭಾ.. ಆಕಾಶವಾಣಿ ಯ ಇಡೀ ಕಾರ್ಯಕ್ರಮಗಳ ಪಟ್ಟಿ ಯಲ್ಲದೆ ಅವುಗಳನ್ನು ನೆಡೆಸಿಕೊಡುವವರ..ವಿವರಗಳು…ಆಕಾಶವಾಣಿಯ ಹಿನ್ನೆಲೆ… ಶೋತೃವರ್ಗ..ಒಂದೇ ಎರಡೇ ಎಲ್ಲವನ್ನೂ…ಅನಾವರಣ ಗೊಳಿಸಿರುವ ರೀತಿ..ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ..ಆಕಾಶವಾಣಿ 90 ರ ಸಂಭ್ರಮಾಚರಣೆಯನ್ನು ನಾನು ಕೇಳಿದ್ದೆ.
ಮತ್ತೊಂದು ಸಾರಿ ಮೆಲಕು ಹಾಕುವಂತೆಮಾಡಿದ ನಿಮಗೆ ಧನ್ಯವಾದಗಳು ಶಿವಕುಮಾರ್ ಸಾರ್ ..
ನಿಮಗೂ ಧನ್ಯವಾದಗಳು ಮೇಡಂ. ನಮಗಿಂತಲೂ ನೀವೂ ಕೂಡ AIR ಅಭಿಮಾನಿ ಜೊತೆಗೆ ಅನೇಕ ಕಾರ್ಯಕ್ರಮವನ್ನ ನೀಡಿದ್ದೀರಿ. 90 ರ ನೆನಪು ಎಲ್ಲರಿಗು ಪುಳಕ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಂ.
ಕಾಲ ಸಾಕಷ್ಟು ಬದಲಾಗಿದ್ದರೂ, ಬೇರೆ ಬೇರೆ ಮನೋರಂಜನ ಸಾಧನಗಳು ಬಂದಿದ್ದರೂ ಆಕಾಶವಾಣಿ ಎಡೆಗಿನ ಸೆಳೆತವೇ ಬೇರೆ. ಚೆನ್ನಾಗಿದೆ ಲೇಖನ
ನಿಜ ಮೇಡಂ. ವೈವಿಧ್ಯಮಯ ಸಂಪರ್ಕ ಮಾಧ್ಯಮಗಳು ಇದ್ದರೂ ಕೂಡ ಆಕಾಶವಾಣಿ ಎಂದಿನಂತೆ ಎಲ್ಲರನ್ನ ತನ್ನತ್ತ ಸೆಳೆಯುತ್ತಿದೆ. ನಿಮ್ಮ ಅನಿಸಿಕೆಗೆ ಧನ್ಯವಾದಗಳು ಮೇಡಂ.
ಮೈಸೂರು ಆಕಾಶವಾಣಿಯ 90ರ ಸಂಭ್ರಮದ ಸಾಂದರ್ಭಿಕ ಲೇಖನವು, ದಿನದ ಕಾರ್ಯಕ್ರಮದ ವಿಸ್ತೃತ ವಿವರಣೆಯೊಂದಿಗೆ ಅತ್ಯಂತ ಸೊಗಸಾಗಿ ಮೂಡಿಬಂದಿದೆ.
ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾಗುವ ವೈವಿಧ್ಯಮಯ, ವಿಭಿನ್ನ ಹಳೆಯ ಕಾರ್ಯಕ್ರಮಗಳ ನಡುವೆ ಹೊಸ ಕಾರ್ಯಕ್ರಮಗಳ ಸಿಂಚನ ಸಾಗುತ್ತಿದೆ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.