ಮಹಾಭಾರತದಲ್ಲಿ-ನೇಪಥ್ಯಕ್ಕೆ ಸರಿದ ಪಾತ್ರಗಳು : ಚಿತ್ರಸೇನ
ಚಿತ್ರಸೇನ :-
ಈ ಹೆಸರಿನ ಹಲವು ವ್ಯಕ್ತಿಗಳು ಮಹಾಭಾರತದಲ್ಲೂ ಭಾಗವತದಲ್ಲೂ ಕಂಡು ಬರುತ್ತಾರೆ.ಇದರಲ್ಲಿ ಮುಖ್ಯನಾದವ ಚಿತ್ರಸೇನನೆಂಬ ಗಂಧರ್ವ. ಈತ ವಿಶ್ವಾವಸುವಿನ ಮಗ.
ಒಮ್ಮೆ ದುರ್ಯೋಧನ ನಿಗೆ ಪಾಂಡವರು ಕಾಡಿನಲ್ಲಿ ಅನುಭವಿಸುತ್ತಿರುವ ಕಷ್ಟಕೋಟಲೆಯನ್ನು ನೋಡಿ ಆನಂದಿಸುವ ಹಂಬಲ ಉಂಟಾಗುತ್ತದೆ. ಅದಕ್ಕೆ ಶಕುನಿ, ದುಶ್ಯಾಸನ, ಮತ್ತು ಕರ್ಣರ ಬೆಂಬಲವೂ ಇತ್ತು. ಅವರೆಲ್ಲರೂ ದೃತರಾಷ್ಟ್ರನಿಗೆ ದ್ವೈತವನದಲ್ಲಿರುವ ತಮ್ಮ ಗೋ ಸಂಪತ್ತನ್ನು ಕಂಡುಬರುವುದಾಗಿ ತಿಳಿಸಿ ದೊಡ್ಡ ಸೇನೆಯೊಡನೆ ಅರಣ್ಯಕ್ಕೆ ಹೊರಡುತ್ತಾರೆ.
ದುರ್ಯೋಧನಾದಿಗಳು ಮೊದಲು ದ್ವೈತವನದಲ್ಲಿ ಇದ್ದ ಸರೋವರಕ್ಕೆ ಬರುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಅನಂತರ ಪಾಂಡವರ ಬಳಿಗೆ ಹೋಗಲು ಯೋಚಿಸುತ್ತಾರೆ. ಅವರು ಆ ಸರೋವರದ ಬಳಿ ಬಂದಾಗ ಅಲ್ಲಿ ಚಿತ್ರಸೇನವೆಂಬ ಗಂಧರ್ವನೂ ಅವನ ಸೈನಿಕರೂ ಇರುತ್ತಾರೆ. ಚಿತ್ರಸೇನ ಅಮರಾವತಿಯಲ್ಲಿ ಅರ್ಜುನನಿಗೆ ನೃತ್ಯ- ಗೀತೆಗಳನ್ನು ಕಲಿಸಿದ ಗಂಧರ್ವರಾಜ. ಅವನ ಸೈನಿಕರು ದುರ್ಯೋಧನನನ್ನು ಸರೋವರದ ಬಳಿ ಹೋಗದಂತೆ ತಡೆಯುತ್ತಾರೆ. ಆದರೆ ದುರ್ಯೋಧನಾಧಿಗಳು ಅವರ ಮಾತನ್ನು ನಿರ್ಲಕ್ಷಿಸಿ ಯುದ್ಧಕ್ಕೆ ಇಳಿಯುತ್ತಾರೆ. ತಮ್ಮ ಮಾತನ್ನು ದುರ್ಯೋಧನ ಹಾಗೂ ಅವನ ಸಹಚರರು ತಳ್ಳಿ ಹಾಕಿದ್ದನ್ನು ಕಂಡು ಗಂಧರ್ವ ಸೇನೆಗೆ ಅಪಾರ ಕೋಪ ಬರುತ್ತದೆ. ಅವರು ಮಾಯಾ ಯುದ್ಧವನ್ನು ಮಾಡಿ ಕರ್ಣಾದಿಗಳನ್ನು ಸೋಲಿಸಿ ಹಿಮ್ಮೆಟ್ಟುತ್ತಾರೆ. ದುರ್ಯೋಧನ ಮತ್ತು ದುಶ್ಯಾಸನ ರನ್ನು ಬಂಧಿಸುತ್ತಾರೆ.
ತಾನೂ ತನ್ನ ಪತ್ನಿಯೂ ಚೆನ್ನಾಗಿ ಅಲಂಕರಿಸಿಕೊಂಡು ಕಾಡಿನಲ್ಲಿ ಓಡಾಡಿ ಪಾಂಡವರ ಮತ್ತು ದ್ರೌಪದಿಯ ಹೊಟ್ಟೆ ಉರಿಸಬೇಕೆಂದು ದುರ್ಯೋಧನ ಯೋಚಿಸಿದ್ದನು. ಆದರೆ ಅವನೇ ಗಂಧರ್ವರಿಗೆ ಸೆರೆಯಾಗಿ ಬಿಟ್ಟನು. ಆಗ ಅವನ ಹೆಂಡತಿ ಭಾನುಮತಿ ಅಳುತ್ತಾ ಸೈನಿಕರ ಸಹಾಯದಿಂದ ಪಾಂಡವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತನಗೆ ಒದಗಿದ್ದ ಸಂಕಟವನ್ನು ಹೇಳಿ ಕೊಂಡಳು. ಆಗ ಭೀಮನು ” ಬಹಳ ಒಳ್ಳೆಯದಾಯಿತು. ಕಾಡಿನಲ್ಲಿದ್ದ ನಮ್ಮನ್ನು ಕೆಣಕಲು ಬಂದವರಿಗೆ ತಕ್ಕ ಶಾಸ್ತಿಯಾಯಿತು” ಎಂದನು. ಆಗ ಯುಧಿಷ್ಠಿರನು ” ಭೀಮಸೇನಾ, ನಿನ್ನ ಧರ್ಮ ಬುದ್ಧಿ ಎಲ್ಲಿ ಹೋಯಿತು, ದುರ್ಯೋಧನನು ನಮ್ಮ ಸಹೋದರ. ನಮ್ಮ ನಮ್ಮಲ್ಲಿ ಜಗಳವಾದಾಗ ಹೇಗಾದರೂ ಇರಲಿ, ಆದರೆ ಈಗ ನಮ್ಮ ಸಹೋದರ ದುರ್ಯೋಧನನನ್ನು ಬಂಧಿಸಿರುವವರು ಮೂರನೇಯವರಾದ ಗಂಧರ್ವರು. ಇಂತಹ ಸಮಯದಲ್ಲಿ ನಾವು ನಮ್ಮ ವೈ ಮನಸನ್ನ ಸಾಧಿಸಬಾರದು. ನಮ್ಮ ಸಹೋದರನೊಬ್ಬನು ಬೇರೆಯವರಿಂದ ಬಂಧಿಸಲ್ಪಟ್ಟಿದ್ದಾನೆಂದರೆ ಅದು ನಮ್ಮ ಕುಲಕ್ಕೆ ಅಪಮಾನ. ಅರ್ಜುನ, ನೀನೀಗಲೇ ಹೋಗಿ ದುರ್ಯೋಧನನನ್ನು ಬಿಡಿಸಿಕೊಂಡು ಬಾ ಎಂದನು ( ಇಲ್ಲಿ ಧರ್ಮರಾಜ ಬಹಳ ಇಷ್ಟವಾಗುತ್ತಾನೆ. ಎಲ್ಲಾ ಕಾಲದಲ್ಲಿಯೂ ಸಂಸಾರದ, ಈ ಜಗತ್ತಿನ ಪ್ರತಿಯೊಬ್ಬರೂ ಅನುಸರಿಸಬೇಕಾದ ಮಾತನ್ನು ಧರ್ಮರಾಯ ಆಡಿದ್ದಾನೆ. ಸಹೋದರ ಪ್ರೇಮವನ್ನು ಮೆರೆದಿದ್ದಾನೆ. ಎಲ್ಲರೂ ಈ ಧರ್ಮವನ್ನು ಪಾಲಿಸಿದಲ್ಲಿ ಸಂಸಾರದ ಒಳಗೆ ಜಗಳ, ದ್ವೇಷ, ಕೊಲೆಪಾತಕಗಳು ಇಲ್ಲವಾಗಿ ಸುಂದರವಾದ ಬದುಕು ಎಲ್ಲರಿಗೂ ಸಿಗುತ್ತದೆ). ಅಳುತ್ತಾ ನಿಂತಿದ್ದ ಭಾನುಮತಿಯನ್ನು ಸಮಯೋಚಿತವಾಗಿ ಸಮಾಧಾನ ಪಡಿಸುತ್ತಾನೆ. ದ್ರೌಪದಿಯೂ ಅವಳೊಡನೆ ಅಕ್ಕರೆಯಿಂದ ಮಾತನಾಡಿ ಒಳಗೆ ಕರೆದೊಯ್ಯುತ್ತಾಳೆ.
ಅಣ್ಣನ ಆಜ್ಞೆಯಂತೆ ಅರ್ಜುನನು ಗಾಂಢೀವ ಧನುಸ್ಸನ್ನು ಧರಿಸಿ ದ್ವೈತ ಸರೋವರದ ಬಳಿಗೆ ಬರುತ್ತಾನೆ. ಆದರೆ ಅಲ್ಲಿ ಗಂಧರ್ವರಾರು ಕಾಣುವುದಿಲ್ಲ. ಆಗ ಅರ್ಜುನ ಹಿಂದೆ ಚಿತ್ರರಥನೆಂಬ ಗಂಧರ್ವನು ತನಗೆ ಕಲಿಸಿದ್ದ ‘ಚಾಕ್ಷುಷೀ’ ಮಂತ್ರವನ್ನು ಜಪಿಸುತ್ತಾನೆ. ಕೂಡಲೇ ಅದೃಶ್ಯ ರೂಪದಲ್ಲಿದ್ದ ಗಂಧರ್ವರು ಅರ್ಜುನನ ಕಣ್ಣಿಗೆ ಬೀಳುತ್ತಾರೆ. ಅವನ ತನ್ನ ಗಾಂಢೀವ ಧನುಸ್ಸಿಗೆ ತೀಕ್ಷ್ಣವಾದ ಬಾಣಗಳನ್ನು ಜೋಡಿಸಿ ನಾಲ್ಕೂ ದಿಕ್ಕುಗಳಲ್ಲಿ ಪ್ರಯೋಗಿಸಲಾರಂಭಿಸುತ್ತಾನೆ. ಗಂಧರ್ವರು ಅವನ ಬಾಣಗಳ ಆಘಾತವನ್ನು ತಡೆಯಲಾರದೆ ಚೀರುತ್ತಾ ಚೆಲ್ಲಾಪಿಲ್ಲಿಯಾಗುತ್ತಾರೆ. ಗಂಧರ್ವರಾಜನು ಪ್ರತ್ಯಕ್ಷನಾಗಿ ” ಅಯ್ಯಾ ಅರ್ಜುನ, ನಾನು ನಿನ್ನ ಗೆಳೆಯ ಚಿತ್ರಸೇನ” ಎಂದನು. ಅರ್ಜುನನು ಚಿತ್ರಸೇನನನ್ನು ಗುರುತಿಸಿ ಅವನನ್ನು ಆಲಿಂಗಿಸುತ್ತಾನೆ. ಆನಂತರ ” ಮಿತ್ರ, ನನ್ನ ಸಹೋದರನಾದ ದುರ್ಯೋಧನನನ್ನು ಬಿಟ್ಟುಬಿಡು” ಎಂದು ಪ್ರಾರ್ಥಿಸುತ್ತಾನೆ. ಚಿತ್ರಸೇನನು ” ಅರ್ಜುನ, ಈ ದುಷ್ಟನು ಇಲ್ಲಿಗೆ ಬಂದು ನಿಮಗೆ ತೊಂದರೆ ಕೊಡಬೇಕೆಂದೂ ನಿಮ್ಮನ್ನು ಅಪಮಾನಿಸಬೇಕೆಂದೂ ಯೋಚಿಸಿದ್ದನು. ಅದಕ್ಕೆಂದೇ ನಾನು ಅವನ ಸೈನ್ಯವನ್ನು ಸೋಲಿಸಿ ಅವನನ್ನು ಬಂಧಿಸಿದೆ. ಆದರೆ ಈಗ ನೀನೇ ಹೇಳುತ್ತಿರುವುದರಿಂದ ಅವನನ್ನು ಬಿಡುಗಡೆಗೊಳಿಸುತ್ತಿದ್ದೇನೆ” ಎಂದು ಹೇಳಿ ದುರ್ಯೋಧನನ ಬಂಧನದ ಕಟ್ಟುಗಳನ್ನು ಕಳಚುತ್ತಾನೆ.
ಪಾಂಡವರಿಗೆ ಅಪಮಾನ ಮಾಡಬೇಕೆಂದು ಬಂದಿದ್ದ ದುರ್ಯೋಧನ ತಾನೇ ಚಿತ್ರಸೇನನಿಂದ ಘೋರ ಅಪಮಾನಕ್ಕೀಡಾಗಿ ಬಿಟ್ಟ. ತಗ್ಗಿಸಿದ ತಲೆಯನ್ನು ಮೇಲೆತ್ತದೆ ಹಸ್ತಿನಾವತಿಗೆ ಹಿಂದಿರುಗಿದ.
ಚಿತ್ರಸೇನ ಅರ್ಜುನನಿಗೆ ಗಂಧರ್ವ ವೇದವನ್ನು ಕಲಿಸಿದ್ದ ಅನ್ನುವ ಮಾಹಿತಿಯೂ ಇದೆ.
ಮಹಾಭಾರತದಲ್ಲಿ ಬರುವ ಇತರ ಚಿತ್ರಸೇನರಲ್ಲಿ ಒಬ್ಬ ಅಭಿಸಾರ ದೇಶದ ದೊರೆ. ಈತ ರಾಜಸೂಯ ಯಾಗ ಸಮಯದಲ್ಲಿ ಅರ್ಜುನನಿಂದ ಪರಾಜಿತನಾದ. ಇನ್ನಿಬ್ಬರು ಪಾಂಡವರ ಪರವಾಗಿ ಮಹಾಭಾರತ ಯುದ್ಧದಲ್ಲಿ ಹೋರಾಡಿ ಮಡಿದವರು. ಒಬ್ಬ ಚಿತ್ರಸೇನ ಕರ್ಣನ ಮಕ್ಕಳಲ್ಲಿ ಒಬ್ಬ. ಇವರೆಲ್ಲ ಮಹಾಭಾರತ ಯುದ್ಧದಲ್ಲಿ ಹತರಾದರು.
ಮಾಹಿತಿ ಸಂಗ್ರಹ :
1) ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ಪ್ರಕಟ ಗೊಂಡ “ಕಿಶೋರ ಭಾರತ” ದಿಂದ ಹಾಗೂ
2) ವಿಕಿಪೀಡಿಯ – ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಿಂದ.
– ನಯನ ಬಜಕೂಡ್ಲು
ಚೆನ್ನಾಗಿದೆ. ಬಹಳಷ್ಟು ಮಾಹಿತಿಗಳನ್ನೊಳಗೊಂಡಿದೆ.
ಧನ್ಯವಾದಗಳು
ಸುಂದರವಾದ ಬರಹ
ಧನ್ಯವಾದಗಳು
ಮಹಾಭಾರತದ ಪ್ರಸಂಗದ ಅನಾವರಣ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಮೇಡಂ
Nice.
ಗಂಧರ್ವ ಚಿತ್ರಸೇನನ ಕಥೆ ಅಪರೂಪದ್ದಾಗಿದೆ. ಈ ಕಥೆಯನ್ನು ತಾಳಮದ್ದಳೆ ರೂಪದಲ್ಲಿ ಕೇಳಿದ್ದೆ… ಕಥೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಪೌರಾಣಿಕ ಕಥೆಗಳಲ್ಲಿ ಅದು ಸಹಜ ಕೂಡಾ ಹೌದು. ನಿರೂಪಣೆ ಚೆನ್ನಾಗಿದೆ ಮೇಡಂ.