ಗುಣವತಿಯ ಗುಣವಿಶೇಷ
ನಮ್ಮ ಪುರಾಣದ ಮಹಾ ಪುನೀತೆಯರಲ್ಲಿ ದೇವಾಂಗನೆಯರು, ರಾಜರಾಣಿಯರು, ಋಷಿಪತ್ನಿಯರು ಶರಣೆಯರು ಮೊದಲಾದ ಮಹಾಮಾತೆಯರು ಬೆಳಗಿ ಹೋಗಿದ್ದಾರೆ.ಅಂತಹವರ ಬದುಕಿನಿಂದ ನಮಗೆ ತತ್ವಾದರ್ಶಗಳು,ನೀತಿಪಾಠಗಳಾಗಿ ದೊರಕುತ್ತವೆ. ಅಂತಹ ಆದರ್ಶ ನಾರಿಯರ ಜೀವನವನ್ನು ಅಧ್ಯಯನ ಮಾಡಿದಾಗ ಬ್ರಾಹ್ಮಣ ಸ್ತ್ರೀಯರೂ ಪೂಜನೀಯ ಸ್ಥಾನದಲ್ಲಿ ಬರುತ್ತಾರೆ.ಅಂತಹವರಲ್ಲಿ ಗುಣವತಿ ಯು ಶ್ರೇಷ್ಠಳಾಗಿ ಶೋಭಿಸುತ್ತಾಳೆ.
‘ಹೆಣ್ಣಿಗೆ ಗುಣವೇ ಭೂಷಣ.ಹೆಂಗಳೆಯರ ಬಲ ಗುಣದಲ್ಲಿದೆ’ ಎಂಬುದಾಗಿ ಸಮಾಜ ಹೇಳುತ್ತದೆ. ಗುಣವಂತರಿಗೆ ತಾಳ್ಮೆಯೇ ಬಲ, ಅಲ್ಲದೆ ಸಚ್ಚಾರಿತ್ರ್ಯವೂ ಅದನ್ನು ನಿರೂಪಿಸುತ್ತದೆ. ಹಾಗೆಯೇ ವ್ರತೋಪಾಸನೆಗಳನ್ನು ಮಾಡಿ ಇಹ-ಪರಗಳೆರಡರಲ್ಲೂ ಶೋಭಿಸುವುದಲ್ಲದೆ ಮುಂದಿನ ಜನ್ಮದಲ್ಲಿ ದೈವಾಂಶ ಸಂಭೂತೆಯಾಗಿ ಹೇಗೆ ಜನಿಸಿದಳು ಎಂಬುದನ್ನು ಗುಣವತಿ ಯ ಜೀವನ ಚರಿತ್ರೆಯಿಂದ ತಿಳಿಯೋಣ.
ದೇವಶರ್ಮನೆಂಬ ಒಬ್ಬ ಬ್ರಾಹ್ಮಣನ ಪುತ್ರಿ ಗುಣವತಿ. ಗುಣವತಿ ಪ್ರಾಯಕ್ಕೆ ಬಂದಾಗ ದೇವಶರ್ಮನು ತನ್ನ ಆಪ್ತ ಶಿಷ್ಯ ಚಂದ್ರಶರ್ಮನೆಂಬ ಬ್ರಾಹ್ಮಣನಿಗೆ ವಿವಾಹ ಮಾಡಿಕೊಡುತ್ತಾನೆ. ಮದುವೆಯಾದ ಮೇಲೂ ಪತಿಯೊಂದಿಗೆ ತಂದೆಯ ಮನೆಯಲ್ಲೇ ಇದ್ದು ತಂದೆಯ ಸೇವೆ ಮಾಡುತ್ತಿದ್ದಳು ಗುಣವತಿ. ಒಮ್ಮೆ ದೇವಶರ್ಮ ಹಾಗೂ ಚಂದ್ರಶರ್ಮ ಇಬ್ಬರೂ ಅಡವಿಗೆ ಹೋಗಿದ್ದಾಗ ಅವರಿಬ್ಬರನ್ನೂ ಒಬ್ಬ ರಾಕ್ಷಸ ತಿಂದುಬಿಟ್ಟನು. ತಂದೆಯನ್ನೂ ಪತಿಯನ್ನೂ ಕಳೆದುಕೊಂಡ ಗುಣವತಿ, ಸತ್ತವರಿಗೆ ಕರ್ಮಾಂಗಗಳನ್ನು ಮಾಡಿ ಅವರಿಗೆ ಸದ್ಗತಿ ದೊರೆಯುವಂತೆ ಮಾಡಿದಳು. ನಿರ್ಗತಿಕಳಾದ ಗುಣವತಿ ಮತ್ತೆ ಭಿಕ್ಷಾಟನೆ ಮಾಡಿ ಜೀವನ ಮಾಡತೊಡಗಿದಳು. ಆದರೂ ಆಕೆ ಕಾರ್ತಿಕ ವ್ರತ, ಏಕಾದಶೀ ವ್ರತ, ಚೈತ್ರಮಾಸದಲ್ಲಿ ತೀರ್ಥಸ್ನಾನ, ವಿಷ್ಣು ಪೂಜೆ ಮೊದಲಾದ ವ್ರತಗಳನ್ನು ಕೈಗೊಂಡಳು.
ಶ್ರೀರಾಮನ ಅನನ್ಯ ಭಕ್ತೆಯಾದ ಗುಣವತಿ, ಶ್ರೀರಾಮನು ಸೀತಾಲಕ್ಷ್ಮಣರೊಡನೆ ಕಾನನಕ್ಕೆ ಬಂದಿದ್ದಾಗ; ಶ್ರೀರಾಮನನ್ನು ಕಂಡು ಪರಮಾನಂದದಿಂದ ಸ್ತುತಿಸಿದಳು. ಶ್ರೀರಾಮನು ಆಕೆಯ ಭಕ್ತಿಗೆ ಮೆಚ್ಚಿ “ನಿನ್ನ ಕೋರಿಕೆ ಏನು?” ಎಂದು ಕೇಳಿದನು. ಅದಕ್ಕೆ ಗುಣವತಿಯು “ಮಹಾಪ್ರಭೂ ನಿನ್ನ ಹಲವಾರು ದಾಸಿಯರೊಡನೆ ಅನಾಥಳಾದ ನನ್ನನ್ನೂ ಸೇರಿಸಿಕೋ” ಎನ್ನಲು ಶ್ರೀರಾಮನು “ಗುಣವತಿಯೇ ನೀನು ಬ್ರಾಹ್ಮಣ ಪುತ್ರಿಯಾದ ಕಾರಣ ಮುಂದಿನ ಜನ್ಮದಲ್ಲಿ ನಿನ್ನ ತಂದೆ ದೇವಶರ್ಮನು ಸತ್ರಾಜಿತನಾಗಿಯೂ ನೀನು ಸತ್ಯಭಾಮೆಯಾಗಿಯೂ ಜನಿಸಿ ನನ್ನ ಪತ್ನಿಯಾಗುವ ಸಂದರ್ಭ ಬರುವುದು” ಎನ್ನುತ್ತಾನೆ.
ಮುಂದೆ ಗುಣವತಿಯು ಹರಿದ್ವಾರದಲ್ಲಿ ಜ್ವರ ಪೀಡಿತಳಾಗಿ ದೇಹತ್ಯಾಗ ಮಾಡಿದಳು. ಅನಂತರ ಗುಣವತಿಯು ಸತ್ರಾಜಿತನ ಮಗಳು ಸತ್ಯಭಾಮೆಯಾಗಿ ಹುಟ್ಟಿ ಶ್ರೀಕೃಷ್ಣನ ಪತ್ನಿಯಾಗುವ ಯೋಗ ಪಡೆಯುವಳು. ಗುಣವತಿಯ ಸಚ್ಚಾರಿತ್ರ್ಯದ ಫಲ ಹಾಗೂ ವ್ರತೋಪಾಸನೆಯ ಪುಣ್ಯದಿಂದ ಆಕೆ ದೇವತಾಪುರುಷನ ಪತ್ನಿಯಾಗುವ ಸೌಭಾಗ್ಯ ಪಡೆದಳು.ಇಂತಹ ಮಹಿಮಾಶಾಲಿಯ ಜೀವನ ಚರಿತ್ರೆಯನ್ನು ಎಲ್ಲರೂ ಎಲ್ಲಾ ಕಾಲದಲ್ಲಿಯೂ ತಿಳಿಯುವುದು ಅವಶ್ಯ.
-ವಿಜಯಾಸುಬ್ರಹ್ಮಣ್ಯ ಕುಂಬಳೆ.
ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.
ಪುರಾಣ ಮಹಿಳಾ ಮಣಿ ಗುಣವತಿಯ ಕಥೆ ಚೆನ್ನಾಗಿದೆ ವಿಜಯಾ ಮೇಡಂ
ಸತ್ಯಭಾಮೆಯ ಪೂರ್ವಾಪರಗಳನ್ನು ತಿಳಿಸಿಕೊಟ್ಟ ಚಂದದ ಲೇಖನಕ್ಕಾಗಿ ಅಭಿನಂದನೆಗಳು.
ಚೆನ್ನಾಗಿದೆ
ಮೊದಲ ಬಾರಿಗೆ ಕೇಳಿದ ಗುಣವತಿಯ ಕಥೆಯು ಕುತೂಹಲಕಾರಿಯಾಗಿದೆ.
ಅಡ್ಮಿನ್ ಹೇಮಮಾಲಾ ಹಾಗೂ ಓದಿ ಮೆಚ್ಚಿದ ಸೋದರಿಯರಿಗೆ ವಂದನೆಗಳು.