ಕ್ಷಣ ಕ್ಷಣ
ಗಾಢ ನಿದ್ರೆಯಲ್ಲಿದ್ದ ಶಾರದಮ್ಮನವರಿಗೆ ಯಾರದ್ದೋ ಹೆಜ್ಜೆಗಳ ಸಪ್ಪಳ ಇವರ ಸಮೀಪಕ್ಕೆ ಬಂದು ನಿಂತಂತಾಯಿತು. ಜೊತೆಗೆ ಬಿರುಸಾದ ಉಸಿರಾಟದ ಸದ್ದು ಕೂಡ ಕೇಳಿದಂತಾಯಿತು. ಕನಸಿರಬೇಕೆಂದು, ಯಾವುದೋ ಭ್ರಮೆಯೆಂದು ಮಗ್ಗುಲು ಬದಲಾಯಿಸಿ ಮಲಗಲು ಪ್ರಯತ್ನಿಸಿದರು. ಇಲ್ಲ ಮತ್ತೆಮತ್ತೆ ಬಿರುಸಾದ ಉಸಿರಾಟದ ಸದ್ದು ! ಗಾಭರಿಯಾಗಿ ಥಟ್ಟನೆ ಎಚ್ಚರವಾಯಿತು. ಹಾಗೇ ನಿಧಾನವಾಗಿ ಕಣ್ಣುಬಿಟ್ಟು ದೃಷ್ಟಿ ಹರಿಸಿದರು. ಅವರಿಗೆ ತಮ್ಮ ಎದುರುಗಡೆ ಇದರು ದೀವಾನದ ಮೇಲೆ ಅವರನ್ನು ನೋಡಿಕೊಳ್ಳುತ್ತಿದ್ದ ಸಹಾಯಕಿ ಸೀತಮ್ಮ ಕುಳಿತಿದ್ದಳು.
ಆಶ್ಚರ್ಯದಿಂದ ಅರೇ ! ಇಷ್ಟು ಹೊತ್ತಿನಲ್ಲಿ ಇವಳೇಕೆ ಇಲ್ಲಿ ಬಂದು ಹೀಗೆ ಕುಳಿತಿದ್ದಾಳೆ? ತಮ್ಮ ಪಕ್ಕದಲ್ಲಿಟ್ಟಕೊಂಡಿದ್ದ ಮೊಬೈಲಿನಲ್ಲಿ ಸಮಯ ನೋಡಿಕೊಂಡರು. ಬೆಳಗಿನ ನಾಲ್ಕು ಗಂಟೆಯಾಗಿತ್ತು. ಸೀತಮ್ಮನ ಕೈಯಲ್ಲೂ ಒಂದು ಮೊಬೈಲ್ ಹಿಡಿದುಕೊಂಡಿದ್ದಳು ಅದರಿಂದ ಅಸ್ಪಷ್ಟವಾದ ದನಿಗಳು ಕೇಳಿಸುತ್ತಿದ್ದವು. ಇದೇಕೆ ಏನೋ ಮಾತನಾಡುತ್ತಿದ್ದವಳು ಕಾಲ್ ಕಟ್ ಮಾಡದೆ ಹಾಗೇ ಗರಬಡಿದವರಂತೆ ಕುಳಿತಿದ್ದಾಳೆ?
“ಸೀತಮ್ಮಾ..ಸೀತಮ್ಮಾ..ಏನಾಯ್ತು? ಏನಾದರೂ ಕೆಟ್ಟ ಕನಸು ಬಿತ್ತೇ? ತೊಗೊಳ್ಳಿ ಈ ಹನುಮಾನ್ ಚಾಳೀಸ. ಓದಿಕೊಂಡು ಮಲಗಿ ನೆಮ್ಮದಿಯಾಗುತ್ತದೆ” ಎಂದು ತಮ್ಮ ತಲೆದಿಂಬಿನಡಿ ಇಟ್ಟುಕೊಂಡಿದ್ದ ಪುಸ್ತಕವನ್ನು ಕೊಡಲು ಕೈಚಾಚಿದರು. “ಛೇ.. ಅವಳಿಗೆ ಓದಲು ಬರುವುದಿಲ್ಲವೆಂಬುದು ಮರೆತೇ ಹೋಯಿತು” ಎಂದು ಗೊಣಗಿಕೊಂಡು ಮತ್ತೊಮ್ಮೆ ಏರುದನಿಯಲ್ಲಿ ‘ಸೀತಮ್ಮಾ’
ಎಂದು ಕರೆದರು.
ಊಹುಂ.. ಜಪ್ಪಯ್ಯಾ ಅನ್ನಲಿಲ್ಲ. ಕುಳಿತಲ್ಲಿಂದ ಅಲುಗಾಡಲೂ ಇಲ್ಲ. ಬಾಯಿಂದ ಒಂದು ಸೊಲ್ಲು ಕೂಡ ಬರಲಿಲ್ಲ. ಮತ್ತೆ ಮತ್ತೆ ಪ್ರಯತ್ನ ಮಾಡಿದಮೇಲೆ ಸೀತಮ್ಮ “ಅಮ್ಮಾ
ನಾನು ಮುಳುಗಿಹೋದೆ. ಭಗವಂತ ನನ್ನನ್ನು ಎಷ್ಟು ಬಗೆಯಲ್ಲಿ ಪರೀಕ್ಷೆ ಮಾಡುತ್ತಿದ್ದಾನೋ ಗೊತ್ತಾಗುತ್ತಿಲ್ಲ.”ಎಂದು ಹೇಳಿದರು.
“ಅಂಥದ್ದೇನಾಯ್ತು ಸೀತಮ್ಮಾ?” ಎಂದು ಪ್ರಶ್ನಿಸಿದರು.
“ಅದೇ ಕಣವ್ವಾ ನನ್ನ ಮಗ ಹೋಗಿಬಿಟ್ಟನಂತೆ. ನನ್ನ ಸೊಸೆಯಿಂದ ಫೋನ್ ಬಂದಿತ್ತು.” ಎಂದಳು.
“ಎಲ್ಲಿಗೆ ಹೋದನಂತೇ? ಸರಿಯಾಗಿ ಪೂರ್ತಿಯಾಗಿ ಹೇಳಿ?” ಎಂದು ಕೇಳಿದರು ಶಾರದಮ್ಮ.
“ಅಯ್ಯೋ ನಾನು ನಿಮಗೆ ಹೇಗೆ ಹೇಳಲಿ, ಈ ಲೋಕದಿಂದಾನೇ ಕಡೆದು ಹೋಗಿಬಿಟ್ಟನಂತೆ” ಎಂದರು ಸೀತಮ್ಮ.
ಶಾರದಮ್ಮನವರು ಅವಳೆಡೆಗೆ ಹಾಗೇ ನೋಡಿದರು. ತುಂಬ ಗಾಭರಿಯಾಗಿದ್ದಾರೆ..ಉಸಿರಾಟದ ಏರಿಳಿತವೂ ಹೆಚ್ಚಾಗಿದೆ…ಮುಖವೂ ಮ್ಲಾನವಾಗಿದೆ. ..ಹಣೆಯ ಮೇಲೆ ಬೆವರಿನ ಹನಿಗಳು ಪೋಣಿಸಿವೆ. ಆದರೆ ಅವಳು ಅಳುತ್ತಿಲ್ಲ. ಕಣ್ಣೀರಿನ ಸುಳಿವಿಲ್ಲ. ತಕ್ಷಣ ಶಾರದಮ್ಮನವರಿಗೆ ಹಿಂದಿನ ಯಾವುದೋ ಒಂದು ನೆನಪು ಹೊಳೆಯಿತು. ಅವರ ಆಪ್ತವಲಯದಲ್ಲಿನ ಕುಟುಂಬವೊಂದರಲ್ಲಿ ಮಹಿಳೆಯೊಬ್ಬರು ಅತ್ಯಲ್ಪ ಅಂತರದಲ್ಲಿ ತಮ್ಮ ಪತಿ ಮತ್ತು ಇದ್ದೊಬ್ಬ ಮಗನನ್ನು ವಿಚಿತ್ರ ರೀತಿಯಲ್ಲಿ ಕಳೆದುಕೊಂಡರು. ಅಗ ಆ ಮಹಿಳೆ ಅತೀವ ದುಃಖದಲ್ಲಿದ್ದರೂ ಕಣ್ಣೀರು ಸುರಿಸುತ್ತಿರಲಿಲ್ಲ. ದನಿತೆಗೆದು ಅಳುತ್ತಿರಲಿಲ್ಲ. ಮೌನಗೌರಿಯಂತೆ ಸ್ತಬ್ಧರಾಗಿ ಕುಳಿತುಬಿಟ್ಟಿದ್ದರು. ಅವರ ಸ್ಥಿತಿ ಕಂಡು ಪರಿಚಿತ ವೈದ್ಯರು “ನೋಡಿ ಆ ಮಹಿಳೆ ಮೌನವಾಗಿ ದುಃಖವನ್ನು ಒಳಗೇ ತುಂಬಿಟ್ಟುಕೊಂಡು ಕುಳಿತಿದ್ದಾರೆ. ಅವರು ಅತ್ತು ಹಗುರಾಗಬೇಕು. ಹೇಗಾದರೂ ನಿವ್ಯಾರಾದರೂ ಅವರನ್ನು ಅಳುವಂತೆ ಮಾಡಿ. ಇಲ್ಲದಿದ್ದರೆ ತಡೆದು ಇಟ್ಟುಕೊಂಡ ದುಃಖದ ಉದ್ವೇಗ ಅವರನ್ನು ಕೋಮಾಕ್ಕೆ ತೆಗೆದುಕೊಂಡು ಹೋಗಬಹುದು. ಇದು ಅಪಾಯಕಾರಿ ಬೆಳವಣಿಗೆ. ಉದಾಸೀನ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಎಚ್ಚರಿಸಿದ್ದರು. ಆಗ ಮಹಿಳೆಯ ಮಗಳು ಹತ್ತಿರ ಬಂದು ಅಮ್ಮನಿಗೆ ಯಾವುದೋ ಹಿಂದಿನ ಮಗನ ಒಡನಾಟದ ಪ್ರಸಂಗವನ್ನು ನೆನಪಿಗೆ ಬರುವಂತೆ ಹೇಳುತ್ತಾ ಅವಳೂ ಅಳತೊಡಗಿದಳು. ಅದರ ಪರಿಣಾಮವಾಗಿ ಅವರು ಜೋರಾಗಿ ದನಿತೆಗೆದು ರೋಧಿಸಿದರು. ಇದರಿಂದ ಅಪಾಯದ ಸಂಭವ ತಪ್ಪಿತ್ತು. ಹೌದು ನಾನೀಗ ಅದೇ ಪ್ರಯೋಗ ಮಾಡಬೇಕು, ಇಲ್ಲವಾದರೆ ಡಾಕ್ಟರ್ ಹೇಳಿದಂತೆ ಸೀತಮ್ಮನಿಗೇನಾದರೂ ಆದರೆ ನನಗೇ ಆಪತ್ತು ಎಂದು ಆಲೋಚಿಸಿದರು ಶಾರದಮ್ಮನವರು.
ಸೀತಮ್ಮ ಪಾಪದ ಹೆಂಗಸು. ಚಿಕ್ಕಂದಿನಿಂದಲೂ ಕಷ್ಟದ ಕುಲುಮೆಯಲ್ಲಿ ಬೆಂದವಳು. ಕಿರಿಯ ವಯಸ್ಸಿನಲ್ಲಿಯೇ ಮದುವೆ, ಬೇಗನೆ ಎರಡು ಮಕ್ಕಳು ಮಡಿಲಿಗೆ ಬಂದವು. ಹೇಗೋ ಬದುಕು ಸಾಗಿಸುತ್ತಿದ್ದವಳಿಗೆ ಗಂಡನ ಅಕಾಲಿಕ ಮರಣದಿಂದ ದಿಕ್ಕುತಪ್ಪಿತು. ಅವರಿವರ ಕೈಕಾಲು ಹಿಡಿದು ಮಕ್ಕಳ ಪಾಲನೆ ಪೊಷಣೆ ಮಾಡಿಕೊಂಡಿದ್ದರು. ಸಾಲದ್ದಕ್ಕೆ ಒಬ್ಬ ಮಗನನ್ನು ಅಪಘಾತವೊಂದರಲ್ಲಿ ಕಳೆದುಕೊಂಡರು. ಅದರೂ ಧೃತಿಗೆಡದೆ ಇದ್ದೊಬ್ಬ ಮಗನನ್ನು ಸಾಕಿ ನಾಲ್ಕಕ್ಷರ ಕಲಿಸಿದರು. ಅವನೂ ಬದುಕು ಕಟ್ಟಿಕೊಳ್ಳಲು ನೌಕರಿಯೊಂದನ್ನು ಹಿಡಿದ. ಮಗನಿಗೊಂದು ಹೆಣ್ಣುತಂದು ಮದುವೆಯನ್ನೂ ಮಾಡಿದರು. ಮೊಮ್ಮಗಳನ್ನೂ ಕಂಡರು.
ತಾನು ಮಾಡುತ್ತಿದ್ದ ಶುಶ್ರೂಷಕಿಯ ಕೆಲಸವನ್ನು ಮುಂದುವರಿಸಿಕೊಂಡು ಶಾರದಮ್ಮನವರನ್ನು ನೋಡಿಕೊಳ್ಳುತ್ತಾ ದಿನಗಳೆಯುತ್ತಿದ್ದರು. ಇದರಿಂದ ಹೊಟ್ಟೆ ಬಟ್ಟೆಗೆ ನೆರವಾಗಿ ಕೈಯಲ್ಲಿ ನಾಲ್ಕು ಕಾಸೂ ಉಳಿಯುತ್ತಿತ್ತು. ಈಗ ನೋಡಿದರೆ ಮತ್ತೆ ಆಘಾತದ ಸುದ್ಧಿ ! ಅವಳನ್ನು ಹೇಗಾದರೂ ಅಳುವಂತೆ ಮಾಡಲೇಬೇಕು. ಅದಕ್ಕೆ ಮೊದಲು ಅವಳು ಹೇಳಿದ ಸುದ್ಧಿ ಸತ್ಯವಾದದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎಂದು ಆಲೋಚಿಸಿದರು ಶಾರದಮ್ಮನವರು.
“ಸೀತಮ್ಮಾ ಎಲ್ಲಿ ನಿಮ್ಮ ಮೊಬೈಲ್ ಕೊಡಿ.” ಎಂದವರೇ ತಾವೇ ಅವರ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಂಡರು. ಕೊನೆಯ ಕಾಲ್ ಯಾರಿಂದ ಬಂದಿದೆ ಎಂದು ನೋಡಿದರೆ ಅದು ಅವಳ
ಸೊಸೆಯಿಂದ. ಈ ಕಡೆಯಿಂದ ಅದೇ ನಂಬರಿಗೆ ಕಾಲ್ ಮಾಡಿದರು.
ಅಲ್ಲಿಂದ ಯಾರೂ ಪಿಕ್ ಮಾಡಲಿಲ್ಲ. ಶಾರದಮ್ಮನವರ ತಲೆಗೆ ಏನೋ ಹೊಳೆದಂತಾಗಿ “ಸೀತಮ್ಮಾ ನಿಮ್ಮ ಮಗನ ಮನೆ ಇರುವುದು ಪಾಲಳ್ಳಿಯಲ್ಲಿ ತಾನೇ?” ಎಂದು ಕೇಳಿದರು.
“ಹೌದು ಅಮ್ಮಾ” ಎಂದಳು ಸೀತಮ್ಮ.
“ತೊಗೊಳ್ಳಿ ಅವರ ಮನೆಯ ಅಕ್ಕಪಕ್ಕದ ಯಾರದ್ದಾದರೂ ನಂಬರ್ ಇದ್ದರೆ ಅವರಿಗೆ ಕಾಲ್ ಮಾಡಿ” ಎಂದು ಮೊಬೈಲನ್ನು ಅವರಿಗೆ ಕೊಟ್ಟರು ಸ್ಪೀಕರ್ ಆನ್ ಮಾಡಿ ಎಂದರು.
ಹಲವು ಸಾರಿ ಪ್ರಯತ್ನಿಸಿದ ಮೇಲೆ ಅಲ್ಲಿಂದ ಯಾರೋ ಪಿಕ್ ಮಾಡಿದರು. “ಸೀತಮ್ಮಾ ಅವರನ್ನು ಕೇಳಿ ಅವರಿಗೆ ವಿಷಯ ಗೊತ್ತಿದೆಯೇನೋ ಅಂತ”
ಆ ಕಡೆಯಿಂದ ಮಾತನಾಡಿದವರು “ಸೀತಕ್ಕಾ ನಿಮ್ಮ ಮಗನ ಮನೆ ಬೀಗಹಾಕಿದೆ. ಅವರ ಮನೆಯ ನಾಯಿ ಮಾತ್ರ ಹೊರಗೆ ಬಿಟ್ಟಿದ್ದಾರೆ. ಗೇಟಿಗೂ ಬೀಗ ಹಾಕಿದೆ” ಎಂದು ಹೇಳಿ
ಮಾರುತ್ತರಕ್ಕೂ ಕಾಯದೆ ಕಾಲ್ ಕಟ್ ಮಾಡಿದರು.
ಅವರ ಉತ್ತರವನ್ನು ಕೇಳಿಸಿಕೊಂಡ ಸೀತಮ್ಮ “ಅಮ್ಮಾ ಅವರ ನಾಯಿಯನ್ನು ಹೊರಗಡೆ ಬಿಟ್ಟಿದ್ದಾರೆ ಎಂದರೆ ಅವರು ಮನೆಯಲ್ಲಿಲ್ಲ ಎಂದರ್ಥ. ನನ್ನ ಕುಲಪುತ್ರ ಎಲ್ಲಿ ಕುಡಿದು
ಬಿದ್ದಿದ್ದಾನೋ? ಸೊಸೆ ಹೋಗಿಬಿಟ್ಟಿದ್ದಾರೆ ಎಂದಳು. ಅವನು ಮಾಡುತ್ತಿದ್ದದ್ದು ಕಟ್ಟಡಗಳ ಪೇಂಟಿಗ್ ಮಾಡುವ ಕೆಲಸ. ಕೈತುಂಬ ಹಣ ಬರುತ್ತದೆ. ಶ್ರಮದ ಕೆಲಸ ಅಂತ ಅಷ್ಟೊಂದು
ಕುಡಿಯುವುದೇನಮ್ಮಾ. ಈಗ ದೇವರೇ ನಮ್ಮ ಮನೆಗೆ ಒಂದು ಗಂಡು ದಿಕ್ಕು ಇಲ್ಲದಂತೆ ಮಾಡಿಬಿಟ್ಟ. ಮುಂದೆ ಸೊಸೆ ಮೊಮ್ಮಗಳಿಗೆ ಯಾರು ಗತಿ.” ಎಂದು ಹಲುಬಿದಳು. ಆದರೆ
ಆಗಲೂ ಅವಳು ಅಳಲಿಲ್ಲ.
ಶಾರದಮ್ಮನವರಿಗಂತೂ ಕ್ಷಣಕ್ಷಣಕ್ಕೂ ವಿಷಯ ಜಟಿಲವಾಗುತ್ತಿದ್ದಂತೆ ಆತಂಕ ಹೆಚ್ಚಾಯಿತು. ಇದ್ದಕ್ಕಿದ್ದಂತೆ ಅವರಿಗೆ ಏನೋ ಹೊಳೆಯಿತು “ಸೀತಮ್ಮಾ ನಿಮ್ಮ ಬೀಗರು ಇರುವುದು
ಕುಂಬಾರಕೊಪ್ಪಲಿನಲ್ಲಿ ಅಲ್ಲವೇ?” ಎಂದು ಕೇಳಿದರು.
“ಹೌದಮ್ಮಾ..ಅವರಿಗೆ ಮಾಡಲಾ? ಏನೆಂದು ಕೇಳುವುದು?” ಎಂದಳು ಸೀತಮ್ಮ.
“ಕೊಡಿಲ್ಲಿ ನಂಬರ್ ಹೇಳು, ನಾನೇ ಮಾತನಾಡುತ್ತೇನೆ.” ಎಂದು ತಾವೇ ಕಾಲ್ ಮಾಡಿದರು, ಆ ಕಡೆಯಿಂದ ಸೀತಮ್ಮನ ಸೊಸೆಯೇ ಹಲೋ ಎಂದಳು. ಶಾರದಮ್ಮನವರಿಗೆ ಹೋದಜೀವ
ಬಂದಂತಾಯಿತು.
“ಹಾ….ಗೌರಿ ನೀನೇನಿಲ್ಲಿ?” ಎಂದು ಕೇಳಿದರು.
“ಹೂಂ..ಮೇಡಂ, ನಾನು ಅತ್ತೆಗೆ ಆಗಲೇ ಪೋನ್ ಮಾಡಿದ್ದೆ. ಯಾಕೆ ಕೇಳುತ್ತಿದ್ದೀರಿ?” ಎಂದು ಅವಳೇ ಪ್ರಶ್ನಿಸಿದರು.
“ನಿಮ್ಮ ಅತ್ತೆಗೆ ಏನಾಗಿಲ್ಲ. ನೀನು ಇಲ್ಲಿಗೆ ಬರಲು ಕಾರಣ ಕೇಳಿದೆ ಅಷ್ಟೇ” ಎಂದರು ಶಾರದಮ್ಮ.
“ಮೇಡಂ ನಮ್ಮ ತಾಯಿಗೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟರು. ಅದಕ್ಕೇ ನಾವಿಲ್ಲಿಗೆ ಬಂದಿದ್ದೇವೆ. ನಮ್ಮವರನ್ನು ಅತ್ತೆಯವರನ್ನು ಕರೆತರಲು ಕಳಿಸಿಕೊಡುತ್ತೇನೆ. ಅತ್ತೇನ ಇಲ್ಲಿಗೆ ಕಳುಹಿಸಿಕೊಡಿ. ಅದಕ್ಕೇ ಫೋನ್ ಮಾಡಿದ್ದೆ. ಏಕೆ ಈ ಸಂಗತಿ ನಮ್ಮತ್ತೆ ಹೇಳಲಿಲ್ಲವೇ? ಗಾಭರಿಯಿಂದ ನಿಮ್ಮ ಕೈಯಿಂದ ಫೋನ್ ಮಾಡಿಸಿದರೇ?” ಎಂದು ಕೇಳಿದಳು ಗೌರಿ.
ಅದನ್ನು ಕೇಳಿಸಿಕೊಂಡ ಶಾರದಮ್ಮನವರು ”ನಿದ್ರೆಗಣ್ಣಲ್ಲಿ ಅವರು ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ನೀನೇನು ಗಂಡನನ್ನು ಕಳಿಸಬೇಡ. ನಾನೇ ಪಕ್ಕದ ಮನೆಯ ಕೆಲಸದ ಹುಡುಗಿಯನ್ನು ಜೊತೆಮಾಡಿ ಅಲ್ಲಿಗೆ ಕಳುಹಿಸಿಕೊಡುತ್ತೇನೆ.” ಎಂದು ಕಾಲ್ ಕಟ್ ಮಾಡಿದರು.
ಸ್ಪಿಕರ್ ಆನ್ ಮಾಡಿದ್ದರಿಂದ ಎಲ್ಲ ಮಾತುಗಳನ್ನು ಸೀತಮ್ಮನೂ ಕೇಳಿಸಿಕೊಂಡಿದ್ದಳು. ಮೌನವಾಗಿ ತಲೆ ತಗ್ಗಿಸಿಕೊಂಡು ಕುಳಿತಿದ್ದಳು. ಅದನ್ನು ಕಂಡು ಶಾರದಮ್ಮನವರಿಗೆ ಅಯ್ಯೋ ಪಾಪದ ಹೆಂಗಸು ಎನ್ನಿಸಿತು. “ಅಲ್ಲಾ ಸೀತಮ್ಮಾ ಹೀಗೇಕೆ ಗಡಿಬಿಡಿ ಮಾಡಿಕೊಂಡಿರಿ. ದೊಡ್ಡದೊಂದು ಆತಂಕವನ್ನೇ ಹುಟ್ಟಿಸಿಬಿಟ್ಟರಲ್ಲಾ” ಎಂದರು ಶಾರದಮ್ಮನವರು.
“ಏನೆಂದು ಹೇಳಲಮ್ಮಾ, ಮೂರುದಿನಗಳಿಂದ ಮಗನ ಕೂಡೆ ಮಾತನಾಡಿರಲಿಲ್ಲ. ಅವನ ಕುಡಿತದ ವಿಷಯಕ್ಕೆ ಕೋಪ ಮಾಡಿಕೊಂಡು ಕೂಗಾಡಿದ್ದೆ. ಜೊತೆಗೆ ನನ್ನ ಸೊಸೆಯೂ ಅದೇ ವಿಷಯ ಹೇಳಿಕೊಂಡು ಪೇಚಾಡಿಕೊಂಡಿದ್ದಳು. ತಲೆತುಂಬ ಅದನ್ನೇ ತುಂಬಿಕೊಂಡು ಮಲಗಿದ್ದವಳಿಗೆ ‘ಹೋಗಿಬಿಟ್ಟರು’ ಎಂಬುದಷ್ಟೇ ತಿಳಿಯಿತು. ನನ್ನ ಮಗನೇ ಹೋಗಿಬಿಟ್ಟ ಎಂದುಕೊಂಡಾಗ ಹೊಟ್ಟೆಗೆ ಬೆಂಕಿಬಿತ್ತು. ಹಿಂದಿನ ಜನ್ಮದಲ್ಲಿ ಯಾರನ್ನು ತುಂಬ ಗೋಳಾಡಿಸಿದ್ದೆನೋ ಅದರ ಫಲ ನನ್ನನ್ನು ಹೆಜ್ಜೆಹೆಜ್ಜೆಗೂ ನನ್ನನ್ನು ಕಾಡಿಸುತ್ತಿದೆ . ಪಾಪ ನಿಮ್ಮನ್ನು ಗಾಭರಿಪಡಿಸಿದೆ. ಇನ್ನೇನು ಮಲಗುವುದು ಬೆಳಕರಿಯತೊಡಗಿದೆ. ನಾನು ಅಲ್ಲಿಗೆ ಹೊಗಿ ಬರುತ್ತೇನೆ. ಜೊತೆಗೆ ಯಾರೂ ಬರುವುದು ಬೇಡ. ನೀವು ಮುಂದಿನ ಬಾಗಿಲು ಲಾಕ್ ಮಾಡಿ ಸ್ವಲ್ಪ ಹೊತ್ತು ಮಲಗಿ. ಪಕ್ಕದ ಮನೆಯ ಹುಡುಗಿಗೆ ಹೇಳಿ ಹೋಗುತ್ತೇನೆ. ಅವಳಿಂದ ಕೆಲಸ ಮಾಡಿಸಿಕೊಳ್ಳಿ” ಎಂದು ಕುಳಿತಲ್ಲಿಂದ ಎದ್ದು ಬಾತ್ ರೂಮಿನ ಕಡೆ ಹೊರಟಳು ಸೀತಮ್ಮ.
ಅವಳತ್ತ ಹೋಗುತ್ತಿದ್ದಂತೆ ಶಾರದಮ್ಮನವರು ತಾವೂ ಎದ್ದು ಪ್ರಾತಃವಿಧಿಗಳನ್ನು ಪೂರೈಸಿ ಮುಖ ತೊಳೆದು ಬಂದರು. “ಸೀತಮ್ಮಾ ಸ್ವಲ್ಪ ನಿಲ್ಲು, ಕಾಫಿ ಬೆರೆಸುತ್ತಿದ್ದೇನೆ. ಕುಡಿದು ಸಾವಧಾನವಾಗಿ ಹೋಗಿಬಾ” ಎಂದು ತಾವು ಅಡುಗೆ ಮನೆಯತ್ತ ನಡೆದರು.
ಅಷ್ಟರಲ್ಲಿ ಸೀತಮ್ಮ ತಮ್ಮ ಕೆಲಸ ಮುಗಿಸಿ ಮುಖ ತೊಳೆದು ಒಂದೆರಡು ಬಟ್ಟೆಗಳನ್ನು ಬ್ಯಾಗಿಗೆ ಹಾಕಿಕೊಂಡು ಸಿದ್ದರಾದರು. ಶಾರದಮ್ಮನವರು ಬೆರೆಸಿಕೊಟ್ಟ ಕಾಫಿ ಕುಡಿದು ಹೊರನಡೆದಳು.
ಅವಳನ್ನು ಕಳುಹಿಸಿ ಬಾಗಿಲು ಹಾಕಿ ಒಳಬಂದ ಶಾರದಮ್ಮನವರು ತಾವೂ ಒಂದು ಲೋಟ ಕಾಫಿ ಬೆರೆಸಿಕೊಂಡು ಸೋಪಾದ ಮೇಲೆ ಕುಳಿತರು. ಬೆಳಗಿನ ನಾಲ್ಕುಗಂಟೆಯಿಂದ ಅಲ್ಲಿಯವರೆಗೆ ಕ್ಷಣಕ್ಷಣಕ್ಕೂ ಅನುಭವಿಸಿದ ಆತಂಕ ದೂರವಾಗಿತ್ತು. ಅಷ್ಟರಲ್ಲಿ ಕಿಟಕಿಯೊಳಗಿಂದ ತೂರಿಬಂದ ತಂಗಾಳಿ ಪ್ರಶಾಂತ ವಾತಾವರಣವನ್ನು ತಂದುಕೊಟ್ಟಿತು.
-ಬಿ.ಆರ್ .ನಾಗರತ್ನ, ಮೈಸೂರು
ಚೆನ್ನಾಗಿದೆ ಕಥೆ
ಧನ್ಯವಾದಗಳು ಮೇಡಂ
ವಾಸ್ತವಿಕಕ್ಕೆ ತೀರಾ ಹತ್ತಿರವಾದ ಸರಳ, ಸುಂದರ ಕಥೆಗಾಗಿ ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಸೀತಮ್ಮ ಅವರ ಮಗನ ಮನಃಪರಿವರ್ತನೆಯಾಗಿ ಕುಡಿತ ಬಿಟ್ಟ ಅನ್ನುವಂತಾಗಿದ್ದರೆ ಆ ಹಿರಿಯ ಜೀವಕ್ಕೆ ಎಷ್ಟೋ ಸಮಾಧಾನವಾಗುತ್ತಿತ್ತು ಅನಿಸುತ್ತದೆ. ಈ ರೀತಿ ಕುಡಿತದ ಚಟದಿಂದ ತಮ್ಮ ಬದುಕಿಗೆ ತಮ್ಮ ನಂಬಿದವರ ಬದುಕಿಗೆ ಬೆಂಕಿ ಇಟ್ಟ ಬಹಳ ಜನರನ್ನು ಸಮಾಜದಲ್ಲಿ ನೋಡುತ್ತಿದ್ದೇವೆ ಕನಿಷ್ಠ ಕಥೆಯಲ್ಲಾದರೂ ಅವರು ಕುಡಿತ ಬಿಟ್ಟರು ಅಂತಾ ಓದುವುದಕ್ಕೆ ಸಮಾಧಾನವಾಗುತ್ತಿತ್ತು……ತುಂಬಾ ಚೆನ್ನಾಗಿ ಮೂಡಿಬಂದಿದೆ ಕಥೆ…….ಮೇಡಂ
ಧನ್ಯವಾದಗಳು ಸಾರ್
ಓದುಗರಿಗೂ ಕ್ಷಣ ಕ್ಷಣಕ್ಕೂ ಉಂಟಾಗಿದ್ದ ಆತಂಕಭರಿತ ಕುತೂಹಲ ಅಂತೂ ಪರಿಹಾರವಾದದದ್ದು, ನಮಗೂ ಎದ್ದು ಹೋಗಿ ಒಂದು ಲೋಟ ಕಾಫಿ ಬಿಸಿ ಮಾಡಿ ಕುಡಿಯೋಣವೆನ್ನಿಸಿತು.
ಧನ್ಯವಾದಗಳು ಪದ್ಮಾ ಮೇಡಂ
Very nice
ಧನ್ಯವಾದಗಳು…ಮಗಳೇ
ಮೇಡಂ, ನಿಜಕ್ಕೂ ಕ್ಷಣ ಕ್ಷಣಕ್ಕೂ ನಮ್ಮ ಎದೆ ಬಡಿತ ಹೆಚ್ಚಾಯಿತು ನಂತರ ಇಳಿಯಿತು,ಕೂತೂಹಲ ಭರಿತವಾದ ಈ ಕಥೆ ಕಡೆಗೆ ಒಂದು ಸಮಾಧಾನದ ಗಾಳಿ ಬೀಸಿತು… ಚಿಕ್ಕದಾದ ಕಥೆ ಸೊಗಸಾಗಿದೆ.
ಅದ್ಭುತವಾಗಿ ಕಥೆಯ ಹಂದರವನ್ನು ಹೆಣೆದಿರುವಿರಿ. ಎಂದಿ
ನಂತೆ ಈ ಕಥೆಯೂ ಓದುಗರ ಕುತೂಹಲವನ್ನು ಹೆಚ್ಚಿಸುತ್ತಾ ಹೋಗುತ್ತದೆ.
ಧನ್ಯವಾದಗಳು..ಗೆಳತಿ ಭಾರತಿ
ಧನ್ಯವಾದಗಳು ಪದ್ಮಾ ಶ್ರೀಧರ್ ಮೇಡಂ